ವಯೋವೃದ್ಧರ ಗೃಹಸೇವೆಗೆ ಹೊಸ ಟಚ್: ಟ್ರಿಬೇಕಾ ಕೇರ್​​ನಿಂದ ಸೂಪರ್ ಸೇವೆ..!

ಟೀಮ್​​ ವೈ.ಎಸ್​​


ವಯೋವೃದ್ಧರ ಗೃಹಸೇವೆಗೆ ಹೊಸ ಟಚ್: ಟ್ರಿಬೇಕಾ               ಕೇರ್​​ನಿಂದ ಸೂಪರ್ ಸೇವೆ..!

Saturday September 26, 2015,

3 min Read

ಭಾರತ ವಯಸ್ಸಾದವರ ಸಂಖ್ಯೆಯಲ್ಲಿ ಪ್ರಪಂಚದಲ್ಲಿಯೇ 2ನೇ ಸ್ಥಾನ ಹೊಂದಿದೆ. ಇದು ಹಿರಿಯ ನಾಗರೀಕರ ಆರೋಗ್ಯದ ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಭಾರತದಲ್ಲಿ ವೃದ್ಧಾಶ್ರಮಗಳು ಸಣ್ಣ ಮತ್ತು ಅಸಾಂಸ್ಥಿಕ ಸ್ಥಿತಿಯಲ್ಲಿದ್ದರೂ ಅವುಗಳು ವೃದ್ಧರಿಗೆ ನರ್ಸಿಂಗ್ ಮತ್ತು ಇತರ ಸೇವೆಗಳನ್ನು ಮಾಡುತ್ತಾ ಬಂದಿದೆ.

ಭಾರತದಲ್ಲಿ ವೃದ್ಧಾಶ್ರಮಗಳ ಸ್ಥಿತಿಯನ್ನು ಸುಧಾರಿಸಲು ತಮೋಜಿತ್ ದತ್ತಾ, ಪ್ರತೀಪ್ ಸೇನ್, ಎಲಿನಾ ದತ್ತಾ, ಶಿವಾಜಿ ಸಹಾ ಮತ್ತು ರಿತೇಂದ್ರ ರಾಯ್ ಸೇರಿ 2013ರಲ್ಲಿ ಕೋಲ್ಕತ್ತಾದಲ್ಲಿ ಆರಂಭಿಸಿದ ಸಂಸ್ಥೆಯೇ ಟ್ರಿಬೇಕಾ ಕೇರ್.

image


ವೃದ್ಧರಿಗೆ ವೈದ್ಯಕೀಯವಲ್ಲದ ಆಧಾರ, ಗೃಹದಾದಿಯರ ಸೇವೆ, ಪುನರ್ವಸತಿ, ಮನೆಗಳಿಗೆ ವೈದ್ಯರ ಭೇಟಿ, 24/7 ತುರ್ತುಚಿಕಿತ್ಸೆಯ ಜವಾಬ್ದಾರಿ ಮತ್ತು ಮನೆಯಲ್ಲಿಯೇ ಬಳಸಲು ವೈದ್ಯಕೀಯ ಉಪಕರಣಗಳನ್ನು ನೀಡುವ ಚಿಂತನೆಯಲ್ಲಿದೆ ಟ್ರಿಬೇಕಾ ಕೇರ್.

ಟ್ರಿಬೇಕಾ ಕೇರ್‌ನ ಸಿಇಓ ತಮೋಜಿತ್ ದತ್ತಾ ಹೇಳುವಂತೆ, ಈ ಉದ್ಯಮವು ಭಾರೀ ಬಂಡವಾಳ ಹೂಡಿಕೆಯನ್ನು ಬಯಸುತ್ತದೆ. ತೀರಾ ಕಡಿಮೆ ಪೆನ್ಶನ್ ಹಾಗೂ ಪೆನ್ಶನ್ ಬಾರದೇ ಪರದಾಡುತ್ತಿರುವ ಮತ್ತು ಆರೋಗ್ಯ ವಿಮೆ ಇಲ್ಲದಿರುವ ಸುಮಾರು 100 ಮಿಲಿಯನ್ ಹಿರಿಯ ನಾಗರೀಕರಿದ್ದಾರೆ. ಇವರೆಲ್ಲರಿಗೂ ಭೌತಿಕ ಮೂಲ ಸೌಕರ್ಯ, ತರಬೇತಿ, ತಂತ್ರಜ್ಞಾನ, ತಜ್ಞರ ಅವಶ್ಯಕತೆ ಇದೆ. ಅಂಥವರಿಗೆ ಟ್ರಿಬೇಕಾ ಕೇರ್ ಸಹಕಾರಿಯಾಗಿದೆ.

ಬ್ಯಾಂಕಿಂಗ್ ಇನ್ವೆಸ್ಟ್ ಮೆಂಟ್, ರಿಟೇಲ್ ಫೈನಾನ್ಸ್, ಹೆಲ್ತ್ ಕೇರ್ ಮತ್ತು ಎಫ್‌ಎಂಸಿಜಿಯಲ್ಲಿ 16ವರ್ಷಗಳ ಅನುಭವ ಪಡೆದಿರುವ ತಮೋಜಿತ್‌ರಿಗೆ ಸದ್ಯ 42 ವರ್ಷ. ಟ್ರಿಬೇಕಾ ಕೇರ್ ಆರಂಭಿಸುವುದಕ್ಕೂ ಮೊದಲು ತಮೋಜಿತ್ ಡಚ್ ಬ್ಯಾಂಕ್​​ನ ಹಿರಿಯ ಗ್ರಾಹಕರೂ, ಸಿಟಿಬ್ಯಾಂಕ್ ಮತ್ತು ಗ್ಲ್ಯಾಕ್ಸೋಸ್ಮಿತ್‌ಕ್ಲೈನ್‌ಗೆ ಕೆಲಸ ಮಾಡಿದ್ದರು. ತಮೋಜಿತ್, ಸಂತ ಸ್ಟೀಫನ್ ಕಾಲೇಜು, ಅಹಮದಾಬಾದ್‌ನ ಐಐಎಂ, ಲಂಡನ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದವರು.

ಹೇಗೆ ಸಾಧ್ಯವಾಯಿತು ಹೂಡಿಕೆ..?

ಟ್ರಿಬೇಕಾ ಕೇರ್‌ನ ಮೂಲ ಬಂಡವಾಳ ಸಂಪೂರ್ಣ ಆಂತರಿಕ ಮೂಲಗಳಿಂದಲೇ ಬಂದಿದ್ದು. ಈಗ ರಾಷ್ಟ್ರಮಟ್ಟದಲ್ಲಿ ಇದನ್ನು ವಿಸ್ತರಿಸುವ ಉದ್ದೇಶವಿರುವುದರಿಂದ ವೃತ್ತಿಪರ ಹೂಡಿಕೆದಾರರೊಂದಿಗೆ ಮಾತುಕತೆ ನಡೆಯುತ್ತಿದ್ದು ಅವರನ್ನೂ ಸಹ ಕಾರ್ಯತಂತ್ರದ ಪಾಲುದಾರರನ್ನಾಗಿ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ.

ತಮೋಜಿತ್ ಹೇಳುವಂತೆ, ಸೇವೆಗಳ ವಿತರಣೆ ಮತ್ತು ಹಿರಿಯರ ವಸತಿಗಾಗಿ ಪ್ರಗತಿಪರ ಬಂಡವಾಳ ಹೂಡಿಕೆ ಮಾಡಲಾಗುತ್ತದೆ. ಆ ಮೂಲಕ ಪ್ರತಿಭಾನ್ವಿತರನ್ನು ಆಯ್ಕೆ ಮಾಡಿ ಹೊಸ ಮಾರುಕಟ್ಟೆಗೆ ಬಿಡಲಾಗುತ್ತದೆ. ಅಲ್ಲದೇ ಶುಶ್ರೂಷಕರಿಗೆ ತರಬೇತಿ ನೀಡಿ ಉತ್ತಮ ಇನ್‌ಫ್ರಾಸ್ಟ್ರಕ್ಚರ್ ನಿರ್ಮಿಸುವ ಗುರಿಹೊಂದಿದೆ ಸಂಸ್ಥೆ.

ಉದ್ಯಮದ ಸಂಕ್ಷಿಪ್ತ ಪರಿಚಯ...

ಹಿರಿಯ ನಾಗರೀಕರ ಆರೈಕೆಯ ಭೌತಿಕ ಮೂಲಸೌಕರ್ಯದ ಬಂಡವಾಳ ಹೂಡಿಕೆಯಿಂದ ಹೆಲ್ತ್ ಕೇರ್ ನ ಮುಖ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಅವಕಾಶಗಳು ಮತ್ತು ಸವಾಲುಗಳು ಅಪಾರ. ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಮತ್ತು ಹಿರಿಯ ನಾಗರೀಕರೊಂದಿಗೆ ವರ್ತಿಸುವ ರೀತಿ ತಿಳಿದಿರುವ ಕಾರ್ಯಕರ್ತರ ಸಂಖ್ಯೆ. ತುಂಬಾ ಕಡಿಮೆ ಇದೆ. ಇದು ಹೆಲ್ತ್ ಕೇರ್ ಎದುರಿಸುತ್ತಿರುವ ಮುಖ್ಯ ಸವಾಲು.

ಉದ್ಯಮದ ಮಾರುಕಟ್ಟೆ ಸಂಶೋಧನೆಯೊಂದರ ಪ್ರಕಾರ ಅಮೇರಿಕಾದಲ್ಲಿ ಹಿರಿಯರ ಆರೈಕೆಯ ಉದ್ಯಮ ಹಲವು ವರ್ಷದಿಂದ ಚೆನ್ನಾಗಿ ನಡೆದು ಬರುತ್ತಿದ್ದು ಅಲ್ಲಿ ಹೂಡಿಕೆ 400 ಬಿಲಿಯನ್ ಅಮೇರಿಕನ್ ಡಾಲರ್ ಇದೆ. ಭಾರತದಲ್ಲಿ ಉದ್ಯಮವು ತೀರಾ ಕೆಳಮಟ್ಟದಲ್ಲಿದ್ದು ಕೇವಲ 3 ಬಿಲಿಯನ್ ಹೂಡಿಕೆ ಮಾತ್ರ ಇದೆ. ಇದು ಪ್ರತಿ ವರ್ಷವೂ ಶೇ. 20ರಷ್ಟು ಮಾತ್ರ ಏರಿಕೆ ಕಾಣುತ್ತಿದೆ. ಖಾಸಗಿ ವಲಯದ ಉದ್ಯಮಿಗಳು ಶೀಘ್ರದಲ್ಲಿಯೇ ಇದಕ್ಕೊಂದು ಉತ್ತಮ ರೂಪ ನೀಡುವ ಸಾಧ್ಯತೆ ಇದೆ. ಬೆಳೆಯುತ್ತಿರುವ ಅಗಾಧ ಜನಸಂಖ್ಯೆ ಮತ್ತು ಸಾರ್ವಜನಿಕ ಹಣಕಾಸು ವಲಯದಲ್ಲಿ ಉಂಟಾಗುತ್ತಿರುವ ಒತ್ತಡವನ್ನು ಗಮನಿಸಿದರೆ, ಈ ಉದ್ಯಮದಲ್ಲಿ ಖಾಸಗಿವಲಯವು ಪ್ರಮುಖ ಪಾತ್ರ ವಹಿಸುತ್ತದೆ. ಖಾಸಗಿ ವಲಯದಿಂದ ಮಾರುಕಟ್ಟೆಯಲ್ಲಿ ಕೈಗೆಟುಕುವ ವೃತ್ತಿಪರ ಹಿರಿಯ ಆರೈಕೆ ಸೇವೆ ನೀಡುವುದು ಸಾಧ್ಯವಿದೆ.

ತಮೋಜಿತ್ ಹೇಳುವಂತೆ, ಅತೀಶೀಘ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಹಿರಿಯರ ಸಂಖ್ಯೆಯನ್ನು ನೋಡಿದರೆ ( ಪ್ರಸ್ತುತ 11 ಮಿಲಿಯನ್ ಇರುವ ಜನಸಂಖ್ಯೆ 2050ರ ವೇಳೆಗೆ 300 ಮಿಲಿಯನ್ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.) ನಾವು ಬರಲಿರುವ ದೊಡ್ಡ ಸವಾಲನ್ನು ಎದುರಿಸಲು ಸಿದ್ಧರಾಗಿಲ್ಲ.

ಹೇಗಿದೆ ಸೇವಾಕ್ಷೇತ್ರ...?

ಟ್ರಿಬೇಕಾ ಕೇರ್ ಮುಖಾಂತರ ಹಿರಿಯ ನಾಗರೀಕರಿಗೆ ಅತ್ಯುತ್ತಮ ಸೇವೆಗಳು ಲಭಿಸುತ್ತದೆ. ವೈದ್ಯಕೀಯ ನೆರವು, ಮನೆಬಾಗಿಲಿಗೆ ವೈದ್ಯರು, ಫಿಸಿಯೋಥೆರಪಿ, ಸ್ಪೀಚ್ ಥೆರಪಿ, ಗೃಹದಾದಿಯರ ಸೇವೆ, ಬಾಡಿಗೆಗೆ ವೈದ್ಯಕೀಯ ಉಪಕರಣಗಳು ಮತ್ತು ಮಾರಾಟ, ವೈದ್ಯಕೀಯವಲ್ಲದ ಇತರ ಸೇವೆಗಳು, ವೈಯಕ್ತಿಕ ಕಾಳಜಿಗಾಗಿ ಮ್ಯಾನೇಜರ್‌ಗಳು, ಬುದ್ಧಿಮಾಂದ್ಯರಿಗೆ ಸಂಬಂಧಿಸಿದ ವೈದ್ಯಕೀಯ ನೆರವು, ಮನೆಬಾಗಿಲಿಗೆ ಔಷಧಗಳ ವಿತರಣೆ ಮಾಡುತ್ತಿದೆ. ಶೇಖರಣಾ ಘಟಕ ಮತ್ತು ಗೃಹಸೇವೆಗಳು, ವೈಯಕ್ತಿಕ ನಿರ್ವಹಣೆ, ವಯೋವೃದ್ಧರಿರುವ ಮನೆಗಳಲ್ಲಿ ವೈದ್ಯಕೀಯ ಸಹಾಯ, ಹಣಕಾಸು ಮತ್ತು ಆಸ್ತಿ ಸಂಬಂಧಿ ನಿರ್ವಹಣಾ ಸೇವೆಗಳು, ತುರ್ತು ಪ್ರತಿಕ್ರಿಯೆ, ಸದಸ್ಯರಿಗೆ 24/7 ತುರ್ತುಚಿಕಿತ್ಸಾ ಸಹಾಯವಾಣಿ, ಯಾವುದೇ ಸಂದರ್ಭದಲ್ಲಿ ವೃದ್ಧರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮತ್ತು ಆಸ್ಪತ್ರೆಗೆ ಸೇರಿಸುವ ಸೌಕರ್ಯವನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ.

ತಮೋಜಿತ್‌ರ ಪ್ರಕಾರ, ಬಹುತೇಕ ಸೇವೆಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಆದರೆ ಟ್ರಿಬೇಕಾ ಕೇರ್‌ನ ವೈದ್ಯಕೀಯವಲ್ಲದ ಸೇವೆಗಳಿಗೂ ಅಷ್ಟೇ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಟ್ರಿಬೇಕಾ ಕೇರ್ ಈ ಎರಡೂ ಉತ್ಪನ್ನ ಹಾಗೂ ಸೇವೆಗಳ ಮಧ್ಯದ ಅಗಾಧ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಿ ವ್ಯಾಖ್ಯಾನಿಸಿದೆ. ಈ ಸಂಬಂಧ ಮಹತ್ತರ ಹೂಡಿಕೆಗಳು ರಿಯಲ್ ಎಸ್ಟೇಟ್, ಲಾಜಿಸ್ಟಿಕ್ಸ್ ಹಾಗೂ ತರಬೇತಿ ಮತ್ತು ತಂತ್ರಜ್ಞಾನಗಳಿಗೆ ವಿನಿಯೋಗಿಸಲ್ಪಡುತ್ತಿದೆ.

ಟ್ರಿಬೇಕಾ ಮಾದರಿ...

ಟ್ರಿಬೇಕಾ ಕೇರ್ ಸೇವೆಗಳು ಸದಸ್ಯತ್ವ ಪ್ಲಾನ್‌ಗಳಲ್ಲಿ ಹಾಗೂ ಪಾವತಿ ಪ್ಲಾನ್‌ಗಳಲ್ಲಿ ದೊರೆಯುತ್ತಿದೆ. ಬೇರೆ ಬೇರೆ ಗ್ರಾಹಕರ ಅಗತ್ಯಗಳಿಗೆ ಸಂಬಂಧಪಟ್ಟಂತೆ ದರ ನಿಗದಿಪಡಿಸಲಾಗಿದೆ.

ತಮೋಜಿತ್ ಹೇಳುವಂತೆ, ಅವರ ಅತ್ಯಂತ ಕಡಿಮೆ ದರ್ಜೆಯ ಸೇವೆ ತಿಂಗಳಿಗೆ ಕೇವಲ 250 ರೂ.ಗಳಿಗೆ ಲಭ್ಯವಿದೆ. ಮನೆಯಲ್ಲಿ ವೈದ್ಯಕೀಯ ನೆರವು ಬಯಸುವ ಗ್ರಾಹಕರಿಗೆ ಮಾತ್ರ ದುಬಾರಿ ಅನ್ನಿಸುವ ದರ ನಿಗದಿಪಡಿಸಲಾಗಿದೆ.

ಟ್ರಿಬೇಕಾ ಕೇರ್ 300ಕ್ಕೂ ಹೆಚ್ಚು ವೃತ್ತಿಪರ ವೈದ್ಯಕೀಯ ನೆರವು ನೀಡುವ ಉದ್ಯೋಗಿಗಳಿಗೆ ಉದ್ಯೋಗಾವಕಾಶ ಸೃಷ್ಟಿಸಿದೆ. ಈ ಪ್ಲಾಟ್‌ಫಾರಂ ಅನ್ನು ವೃತ್ತಿಪರ ವೈದ್ಯರು ಮನಃಶಾಸ್ತ್ರಜ್ಞರು, ದೈಹಿಕ ವೈದ್ಯಕೀಯ ತಜ್ಞರು, ದಾದಿಯರು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ.

ವಿಸ್ತರಣಾ ಯೋಜನೆ

ಲಾಂಚ್ ಆಗಿ ಕೇವಲ 18 ತಿಂಗಳಲ್ಲೇ ಟ್ರಿಬೇಕಾ ಕೇರ್ ಪೂರ್ವಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. 2018ರ ಅಂತ್ಯದೊಳಗೆ ಇನ್ನೂ 10 ಮುಖ್ಯ ಪಟ್ಟಣಗಳಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ. 2020ರ ಸುಮಾರಿಗೆ ಸಂಸ್ಥೆ ಸುಮಾರು 500 ಕೋಟಿ ರೂ.ಗಳ ಟರ್ನ್ ಓವರ್ ಸಾಧಿಸುವ ಗುರಿ ಹೊಂದಿದೆ.

ಗೃಹ ಸೇವೆಯ ವ್ಯವಸ್ಥೆ ಸುಮಾರು ಶೇ.98ರಷ್ಟು ಅಸಂಘಟಿತ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವತ್ತ ಸಾಗಿರುವುದು ಟ್ರಿಬೇಕಾ ಕೇರ್‌ನ ಸಾಧನೆ. ಸದ್ಯ ಭಾರತದಲ್ಲಿ ಮುಖ್ಯವಾದ 4 ಸಾಂಸ್ಥಿಕ ವೈದ್ಯಕೀಯ ಸಂಬಂಧಿ ಉದ್ಯಮಗಳಲ್ಲಿ ಟ್ರಿಬೇಕಾ ಕೇರ್ ಸಹ ಸ್ಥಾನ ಪಡೆದುಕೊಂಡಿದೆ. ಉಳಿದ 3 ಸಂಸ್ಥೆಗಳಾದ ಪೋರ್ಟಿಯಾ ಮೆಡಿಕಲ್, ಮೆಡ್‌ವೆಲ್, ಇಂಡಿಯಾ ಹೋಮ್ ಹೆಲ್ತ್ ಕೇರ್ ಸಂಸ್ಥೆಗಳ ಜೊತೆ ಟ್ರಿಬೇಕಾ ಕೇರ್ ಆರೋಗ್ಯಯುತ ಸ್ಪರ್ಧೆ ನಡೆಸುತ್ತಿದೆ.