ಕರಾವಳಿಯ ಮರಳಿನಲ್ಲೂ ಸೇಬು ಬೆಳೆಯಬಹುದು..!

ಕೃತಿಕಾ

ಕರಾವಳಿಯ ಮರಳಿನಲ್ಲೂ ಸೇಬು ಬೆಳೆಯಬಹುದು..!

Friday January 01, 2016,

3 min Read

ಸೇಬು ಅಂದಾಕ್ಷಣ ನಮಗೆ ನೆನಪಾಗೋದು ಕಾಶ್ಮೀರಿ ಸೇಬು, ಹಿಮಾಚಲ ಪ್ರದೇಶದ ಸೇಬು, ಕಾಬೂಲ್ ಸೇಬು. ಇದರ ಜೊತೆಗೆ ಬೇರೆ ಬೇರೆ ದೇಶಗಳಿಂದ ಸೇಬುಗಳು ನಮ್ಮ ದೇಶಕ್ಕೆ ಆಮದಾಗುತ್ತವೆ. ಇನ್ನು ರಾಜ್ಯದ ಕೆಲವೆಡೆ ರೈತರು ಸೇಬು ಬೆಳೆದಿದ್ದಾರೆ. ಆದ್ರೆ ಕರಾವಳಿಯಲ್ಲಿ ಮಾತ್ರ ಇದು ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣ ಅಲ್ಲಿನ ಮಳೆ ಮಳೆ ಮಳೆ. ಆದ್ರೆ ಕರಾವಳಿಯಲ್ಲೂ ಸೇಬು ಬೆಳೆಯಬಹುದು ಎಂಬುದನ್ನು ಇಲ್ಲೊಬ್ಬ ರೈತ ಸಾಧಿಸಿ ತೋರಿಸಿದ್ದಾರೆ.

ಸೇಬು ಗಿಡ ನಮ್ಮಲ್ಲೂ ಚಿಗುರಬಹುದು, ಈ ಹಣ್ಣನ್ನು ನಮ್ಮ ನೆಲದಲ್ಲಿಯೂ ಬೆಳೆಯಬಹುದು ಎಂಬ ಕಲ್ಪನೆ ಕೆಲ ವರ್ಷಗಳ ಹಿಂದೆ ಯಾರಲ್ಲೂ ಇದ್ದಿರಲಿಲ್ಲ. ಇಲ್ಲಿಯ ಹವಾಗುಣಕ್ಕೆ ಅದು ಹೊಂದಿಕೊಳ್ಳುವುದಿಲ್ಲ ಎಂದು ಭಾವಿಸಿದವರೇ ಎಲ್ಲ. ಈ ನಂಬಿಕೆಯನ್ನು ಸುಳ್ಳಾಗಿಸಿ ರೈತನೊಬ್ಬ ಸೇಬು ಬೆಳೆದು ತಾನು ಎಲ್ಲರಿಗಿಂತ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತದ್ದೊಂದು ವಿಶಿಷ್ಟ ಸಾಧನೆ ಮಾಡಿರುವವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕೃಷ್ಣಶೆಟ್ಟಿ.

image


ಸೇಬು ಬೆಳೆಯಬೇಕು ಎಂಬ ಯೋಜನೆ ತಲೆಯಲ್ಲಿ ಇಣುಕಿದ್ದು ಅಮೇರಿಕಾಗೆ ಹೋದಾಗ. ಕೃಷ್ಣ ಶೆಟ್ಟಿ ಒಮ್ಮೆ ಅಮೇರಿಕಾದಲ್ಲಿನ ತಮ್ಮ ಮಗಳ ಮನೆಗೆ ಹೋಗಿದ್ದರು. ಅಲ್ಲಿನ ಸೇಬು ಕೃಷಿಯಿಂದ ಪ್ರೇರೇಪಿತರಾದರು. ನಾವು ಯಾಕೆ ನಮ್ಮ ತೋಟದಲ್ಲಿ ಸೇಬು ಹಣ್ಣನ್ನು ಬೆಳೆಸಬಾರದು ಎಂದು ಯೋಚಿಸಿದರು. ಪತ್ರಿಕೆಯೊಂದರಲ್ಲಿ ಡಾ. ಚಿರಂಜಿತ್ ಪರ್ಮಾರ್ ಅವರು ಬರೆದ ಸೇಬು ಕೃಷಿಯ ಲೇಖನವನ್ನು ಓದಿ ಉತ್ತೇಜಿತರಾಗಿ ಇನ್ನಷ್ಟು ಅದರ ಬಗ್ಗೆ ತಿಳಿದುಕೊಳ್ಳಲು ಹವಣಿಸಿದರು. ಇಂಡೋನೇಷಿಯಾದ ಬಾಟು ಎಂಬ ಪ್ರದೇಶದಲ್ಲಿ ಸೇಬು ಬೆಳೆಯುತ್ತಿರುವ ಲೇಖನ ಅದಾಗಿತ್ತು. ತಡಮಾಡದೇ ಕೃಷ್ಣ ಶೆಟ್ಟಿ ಅವರು ಡಾ.ಚಿರಂಜಿತ್ ಅವರನ್ನು ಸಂಪರ್ಕಿಸಿ ಸೇಬು ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. 10 ಡಿಗ್ರಿಗೆ ಮೇಲ್ಪಟ್ಟು ಮತ್ತು 35 ಡಿಗ್ರಿಯೊಳಗಿನ ತಾಪಮಾನದ ಯಾವ ಪ್ರದೇಶದಲ್ಲಾದರೂ ಸೇಬು ಬೆಳೆಯಬಹುದು ಎಂಬ ಮಾಹಿತಿ ಡಾ.ಚಿರಂಜಿತ್ ಅವರಿಂದ ಸಿಕ್ಕಿತು. ಆಗ ಆರಂಭವಾಯ್ತು ಸೇಬು ಕೃಷಿ..!

ಹಿಮಾಚಲ ಪ್ರದೇಶದಿಂದ ಸೇಬು ಸಸಿಗಳನ್ನು ತರಿಸಿದ ಕೃಷ್ಣ ಶೆಟ್ಟಿ ಐದು ವರ್ಷಗಳ ಹಿಂದೆ ಸೇಬು ಸಸಿಗಳನ್ನು ತಮ್ಮ ತೋಟದಲ್ಲಿ ನೆಟ್ಟರು. ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರಗಳಲ್ಲಿ ಸೇಬು ಮರಗಳು ಎಲೆ ಉದುರಿಸಿ ನಿಷ್ಕ್ರಿಯವಾಗುತ್ತವೆ. ಆದರೆ ಇಲ್ಲಿ ನೆಟ್ಟ ಸಸಿಗಳು ಚಳಿಗಾಲದಲ್ಲಿ ಎಲೆ ಉದುರಿಸಲಿಲ್ಲ. ಸಾಲದು ಎಂಬುದಕ್ಕೆ ತಂದ ಕೆಲವು ಸೇಬು ಗಿಡಗಳು ಸತ್ತು ಹೋದವು. ಮೊದಲ ಪ್ರಯತ್ನದಲ್ಲೇ ಕೃಷ್ಣ ಶೆಟ್ಟಿ ಅವರಿಗೆ ಸೋಲು ಎದುರಾಗಿತ್ತು.

ಆರಂಭದಲ್ಲೇ ಸೋಲು ಕಂಡ ಕೃಷ್ಣಶೆಟ್ಟಿ ಅಧೀರರಾಗಲಿಲ್ಲ. ತಪ್ಪುಗಳನ್ನು ತಿದ್ದುಕೊಂಡು ಮುನ್ನೆಡೆಯಲು ಸಿದ್ದರಾದರು ಸೇಬು ಬೆಳೆ ತಜ್ಞರಾದ ಡಾ. ಚಿರಂಜಿತ್ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು. ಸೇಬು ಬೆಳೆಯಲೇ ಬೇಕು ಎಂಬ ಸಂಕಲ್ಪ ತೊಟ್ಟಿದ್ದ ಕೃಷ್ಣ ಶೆಟ್ಟಿ ಸೇಬು ಕೃಷಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಾ ಹೋದರು. ನಮ್ಮ ವಾತಾವರಣದಲ್ಲಿ ಸೇಬು ಬೆಳೆಯಲು ಇರುವ ಸಮಸ್ಯೆಯ ಒಂದೊಂದೇ ಕಾರಣ ಹುಡುಕುತ್ತಾ ಸಾಗಿದರು. ಐದು ವರ್ಷಗಳ ಹಿಂದೆ ಸೇಬು ಗಿಡಗಳನ್ನು ತುಮಕೂರಿನ ಸ್ನೇಹಿತರೊಬ್ಬರಿಗೆ ಶೆಟ್ಟಿ ಕೊಟ್ಟಿದ್ದರು. ಅಲ್ಲಿ ಸೇಬು ಪಸಲು ಬಿಡಲಾರಂಭಿಸಿತ್ತು..! ನಮ್ಮ ವಾತಾವರಣದಲ್ಲೂ ವರ್ಷಕ್ಕೆ ಎರಡು ಬಾರಿ ಸೇಬು ಬೆಳೆ ಬೆಳೆಯಬಹುದು ಎಂಬ ವಾದ ನಿಜವಾಗಿತ್ತು. ಆದರೆ ಕರಾವಳಿಯಲ್ಲಿ ಬೆಳೆಯದಿರಲು ಕಾರಣಗಳೇನು ಎಂಬ ಪ್ರಶ್ನೆಗೆ ಕೃಷ್ಣ ಶೆಟ್ಟಿ ಉತ್ತರ ಹುಡುಕ ಹೋರಟರು. ಹೀಗೆ ಹೊರಟಾಗ ಮಡಿಕೇರಿ, ಸೋಮವಾರಪೇಟೆ, ಆಲೂರು, ಚಿಕ್ಕಮಗಳೂರು, ವಿಜಯಪುರಗಳಲ್ಲಿ ಸೇಬಿನ ಕೃಷಿಯ ಫಲಿತಾಂಶಗಳು ಸಕಾರಾತ್ಮಕವಾಗಿ ಬರತೊಡಗಿರುವ ವಿಚಾರ ತಿಳಿದುಕೊಂಡರು. ಆದರೆ ಕರಾವಳಿಯ ಭಾಗದಲ್ಲಿ ಈವರೆಗೆ ಯಾವುದೇ ಫಲಿತಾಂಶ ಕಂಡುಬಂದಿರಲಿಲ್ಲ. ಕರಾವಳಿಯಲ್ಲಿ ಮಳೆಯ ಪ್ರಮಾಣ ಅಧಿಕವಾಗಿರೋದ್ರಿಂದ ಸೇಬು ಬೆಳೆಯೋದು ಅಷ್ಟು ಸುಲಭವಲ್ಲ ಅನ್ನೋ ಸತ್ಯ ಕೃಷ್ಣ ಶೆಟ್ಟಿಯವರಿಗೆ ಅರ್ಥವಾಯ್ತು.

image


ಇಷ್ಟಾದರೂ ಸೇಬು ಬೆಳೆಯಲೇಬೇಕು ಎಂಬ ಛಲ ಬಿಡದ ಶೆಟ್ಟಿಯವರು ಮಳೆಯ ನಡುವೆಯೂ ಸೇಬು ಬೆಳೆಯುವ ಸಾಧ್ಯತೆಗಳನ್ನು ಯೋಚಿಸಿದರು. ಆಗ ಮಳೆಯಿಂದ ರಕ್ಷಣೆ ಪಡೆಯುವ ಶೀಟುಗಳನ್ನು ಮಾಡಿ ಸೇಬು ಬೆಳೆಯುವ ಯೋಜನೆ ಆರಂಭವಾಯ್ತು. ಹಾಗೆ ಮಳೆಯಿಂದ ರಕ್ಷಣೆ ಪಡೆದು ಈಗ ಕೃಷ್ಣ ಶೆಟ್ಟಿ ಸೇಬು ಬೆಳೆಯುತ್ತಿದ್ದಾರೆ.

ಸೇಬನ್ನು ಕರ್ನಾಟಕದಲ್ಲಿಯೂ ವ್ಯಾವಹಾರಿಕವಾಗಿ ಬೆಳೆಸಬಹುದು. ಸೇಬು ಕೃಷಿಯ ಬಗ್ಗೆ ತಿಳಿದುಕೊಂಡು ವಿಧಾನಗಳನ್ನು ಸರಿಯಾಗಿ ಅಳವಡಿಸಿಕೊಂಡರೆ ನಮ್ಮ ನೆಲದಲ್ಲಿ ಸೇಬು ಕೃಷಿ ಕಷ್ಟವಲ್ಲ. ನಮ್ಮ ರಾಜ್ಯದಲ್ಲಿ ಸೇಬು ಬೆಳೆಯುವ ಬಗ್ಗೆ ಕೃಷಿ ವಿಶ್ವವಿದ್ಯಾನಿಲಯಗಳು ಸಂಶೋಧನೆ ನಡೆಸಬೇಕು. ಹೀಗೆ ಮಾಡಿದರೆ ಮುಂದೊಂದು ದಿನ ಕರ್ನಾಟಕದ ಎಲ್ಲ ರೈತರೂ ಸೇಬು ಬೆಳೆಯುವ ಕನಸು ನನಸಾಗಬಹುದು ಅಂತಾರೆ ಕೃಷ್ಣಶೆಟ್ಟಿ.

ಕೃಷ್ಣ ಶೆಟ್ಟಿಯವರ ಪ್ರಯೋಗಾತ್ಮಕ ಕೃಷಿ ಮಾಡುವ ಕಾಯಮಾನದವರು. ಸೇಬಿನ ಜೊತೆಗೆ ಇವರು ಹಲವಾರು ಕೃಷಿಕರ ಜೊತೆಗೂಡಿ ಪಿಯರ್, ಬಾದಾಮಿ, ಆಪ್ರಿಕಾಟ್, ವಾಲ್ನಟ್ ಹಣ್ಣುಗಳ ಕೃಷಿ ಪ್ರಯೋಗವನ್ನು ನಡೆಸುತ್ತಿದ್ದಾರೆ. ಇವರ ಬಳಿ ಸುಮಾರು ಎಂಟು ಎಕರೆ ತೋಟವಿದೆ. ಅದರಲ್ಲಿ ಅಡಿಕೆ, ಬಾಳೆ, ತೆಂಗು ಬೆಳೆಗಳ ಜೊತೆ ಹಲವಾರು ಉಪಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದಲ್ಲದೇ ಇವರ ತೋಟದಲ್ಲಿ ಅಂಜೂರ, ಚಿಕ್ಕು ಸೇರಿದಂತೆ ವಿವಿಧ ಹಣ್ಣುಗಳ ಮರಗಳಿವೆ. ಹಿರೇ ಬಂಡಾಡಿಯಲ್ಲಿರುವ ತಮ್ಮ ಫಾರ್ಮ್ನಲ್ಲಿ ಮೂಸಂಬಿ, ಕಿತ್ತಳೆ, ಬಾದಾಮಿ ಗಿಡ ನೆಟ್ಟು ಬೆಳೆಸಿದ್ದಾರೆ.

image


ಕೃಷಿ ವಿಶ್ವವಿದ್ಯಾ ಲಯಗಳು ಕರ್ನಾಟಕದಲ್ಲಿ ಸೇಬಿನ ಕೃಷಿ ಬಗ್ಗೆ ಸಂಶೋಧನೆ ನಡೆಸಬೇಕು. ರಾಜ್ಯದಲ್ಲಿ ಬೇರೆ ಬೇರೆ ವಾತಾವರಣಗಲಿರುವ ಪ್ರದೇಶಗಳಿವೆ. ಯಾವ ಭಾಗಕ್ಕೆ ಯಾವ ತಳಿ ಸೂಕ್ತ, ಹಾಗೆ ಇಲ್ಲಿ ಬರುವ ಕೀಟ ಬಾಧೆಗಳ ಬಗ್ಗೆ ಅಧ್ಯಯನ ಮಾಡಿ ಕೃಷಿಕರಿಗೆ ಇದರ ಬಗ್ಗೆ ಸಲಹೆ ಇತ್ತರೆ ಸೇಬನ್ನು ಕರ್ನಾಟಕದಲ್ಲಿ ವ್ಯಾವಹಾರಿಕವಾಗಿ ಬೆಳೆಯಬಹುದು. ಆದರೆ ಆ ಕೆಲಸವನ್ನು ಕೃಷಿ ವಿಶ್ವವಿದ್ಯಾಲಯಗಳು ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಕೃಷ್ಣ ಶೆಟ್ಟಿ.

ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂದು ಪಣ ತಿಟ್ಟ ಕೃಷ್ಣಶೆಟ್ಟಿ ಇವತ್ತು ಕರಾವಳಿಯಲ್ಲೂ ಸೇಬು ಬೆಳೆ ಬೆಳೆದು ಪವಾಡ ಸೃಷ್ಟಿಸಿದ್ದಾರೆ. ಈ ಮೂಲಕ ಇನ್ನಷ್ಟು ರೈತರಿಗೆ ಮಾದರಿಯಾಗಿದ್ದಾರೆ. ಆದ್ರೆ ಇದು ದೊಡ್ಡ ಮಟ್ಟದಲ್ಲಿ ಆಗಬೇಕು ಅನ್ನೋದು ಅವರ ಆಸೆ. ಅದಕ್ಕೆ ಕೃಷಿ ವಿವಿಗಳು ರೈತರ ಜೊತೆಗೆ ಕೈಜೋಡಿಸಬೇಕಿದೆ.