ಬಸ್ ಹತ್ತಿ ಲಾಸ್ಟ್​​ ಸ್ಟಾಪ್ ಎಂದು ಹೇಳ್ಬೇಡಿ..!

ಆಗಸ್ತ್ಯ

0

ಬೆಂಗಳೂರಿನ ಟ್ರಾಫಿಕ್‍ನಲ್ಲಿ ಒಂದು ಕಿಲೋಮೀಟರ್​​ ವಾಹನ ಚಲಾಯಿಸಬೇಕೆಂದರೆ ಯಾರೇ ಆದರೂ ಸುಸ್ತಾಗಿ ಹೋಗುತ್ತಾರೆ. ಆದರೆ, ಇಲ್ಲೊಂದು ಬಸ್ ಪ್ರತೀ ಟ್ರಿಪ್ಪಿಗೆ ಬರೋಬ್ಬರು 117 ಕಿಲೀಮೀಟರ್​ ಸಂಚರಿಸುತ್ತದೆ. ಅದು ಬೆಂಗಳೂರಿನ ಟ್ರಾಫಿಕ್ ರಸ್ತೆಯಾದ ರಿಂಗ್ ರೋಡ್‍ನಲ್ಲಿ.

ದೇಶದ ನಂಬರ್​1 ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿರುವ ಬಿಎಂಟಿಸಿ ಮೇಲೆ ಅದೇನೆ ಆರೋಪಗಳಿದ್ದರೂ ಪ್ರಯಾಣಿಕರಿಗೆ ಏನಾದರೊಂದು ವಿಭಿನ್ನ ಸೇವೆ ನೀಡುತ್ತಲೇ ಬಂದಿದೆ. ವಿನೂತನ ಬಸ್‍ಗಳನ್ನು ರಸ್ತೆಗಿಳಿಸುವುದು ಸೇರಿ ಹತ್ತು ಹಲವು ಸೇವೆ ನೀಡುತ್ತಿದೆ. ಅದರಲ್ಲೊಂದೆಂದರೆ ದೇಶದ ಅತಿ ಉದ್ದದ ಮಾರ್ಗದ ಕಾರ್ಯಾಚರಣೆ. ಮಾರ್ಗ ಸಂಖ್ಯೆ 600 ಮತ್ತು 601ರಲ್ಲಿ ಸಂಚರಿಸುವ ಬಸ್‍ಗಳನ್ನು ಒಂದೇ ಸಲಕ್ಕೆ ಒಟ್ಟು 117 ಕಿಲೋಮೀಟರ್​ ಮಾರ್ಗ ಕ್ರಮಿಸುವಂತೆ ರೂಪಿಸಿ ಕಾರ್ಯಾಚರಣೆಗಿಳಿಸಿದೆ. ಈ ಮಾರ್ಗ ಕಳೆದ 15 ವರ್ಷಗಳಿಂದ ಆಚರಣೆಯಲ್ಲಿದೆ.

ಮೆಗಾ ರಿಂಗ್ ರಸ್ತೆ ಮಾರ್ಗ

ಈ ಮಾರ್ಗಕ್ಕೆ ಮೆಗಾ ರಿಂಗ್ ರಸ್ತೆ ಎಂದು ಬಿಎಂಟಿಸಿ ಹೆಸರಿಟ್ಟಿದೆ. 2005ರ ಜನವರಿ 23ರಿಂದ ಈ ಮಾರ್ಗದಲ್ಲಿ ನಿರಂತರವಾಗಿ ಬಸ್ ಸಂಚರಿಸುತ್ತಿದೆ. ಅದರಂತೆ ಬನಶಂಕರಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ರಿಂಗ್ ರಸ್ತೆಯುದ್ದಕ್ಕೂ ಸಂಚರಿಸಿ ವಾಪಾಸ್ ಬನಶಂಕರಿ ಬಸ್ ನಿಲ್ದಾಣಕ್ಕೆ ಬರುತ್ತದೆ. ಈ ವೇಳೆ ಒಟ್ಟು 162 ಕಡೆ ಬಸ್ ನಿಲುಗಡೆ ಹೊಂದುತ್ತದೆ. ಬನಶಂಕರಿಯಿಂದ ಬನಶಂಕರಿಗೆ ಒಂದು ಸುತ್ತು ಬರಲು 43 ರೂಪಾಯಿ ಪ್ರಯಾಣ ದರ ನಿಗದಿ ಮಾಡಲಾಗಿದೆ.

ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೆ

ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಈ ಬಸ್ 117 ಕಿಲೋಮೀಟರ್​ ಕ್ರಮಿಸಲು ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿದಿನ ಮಧ್ಯಾಹ್ನ 2.30ಕ್ಕೆ ಬನಶಂಕರಿ ನಿಲ್ದಾಣದಿಂದ ಹೊರಡುವ ಬಸ್ ಮಧ್ಯರಾತ್ರಿ 12.30 ರವರೆಗೆ ಸೇವೆ ನೀಡುತ್ತದೆ. ಅಲ್ಲಿಯವರೆಗೆ ಕ್ರಮಿಸಿದ ಮಾರ್ಗದಲ್ಲಿ ಸಿಗುವ ಬಸ್ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ಅಲ್ಲೇ ಉಳಿದುಕೊಳ್ಳುತ್ತಾರೆ. ಮರುದಿನ ಬೆಳಗ್ಗೆ 6.30ಕ್ಕೆ ಮತ್ತೆ ಅಲ್ಲಿಂದ ಪ್ರಯಾಣ ಆರಂಭಿಸಿ ಮಧ್ಯಾಹ್ನ 12.30ಕ್ಕೆ ವಾಪಾಸ್ ಬನಶಂಕರಿ ನಿಲ್ದಾಣಕ್ಕೆ ಬಸ್ ಬರುತ್ತದೆ. ಅದಾದ ನಂತರ ಪಾಳಿ ಬದಲಾಗಿ ಇನ್ನೊಬ್ಬ ಚಾಲಕ ಮತ್ತು ನಿರ್ವಾಹಕರು ಕರ್ತವ್ಯ ಮುಂದುವರಿಸುತ್ತಾರೆ.

ಸರಾಸರಿ 10 ಸಾವಿರ ರೂಪಾಯಿ ಆದಾಯ

10 ವರ್ಷಗಳ ಹಿಂದೆ ಆರಂಭಿಸಲಾದ ಈ ಮಾರ್ಗ ಈಗಲೂ ಲಾಭದಾಯಕವಾಗಿದೆ. ಪ್ರತಿ ಟ್ರಿಪ್ಪಿಗೆ ವಾರದ ದಿನಗಳಲ್ಲಿ ಸರಾಸರಿ 13ರಿಂದ 15 ಸಾವಿರ ಸಂಗ್ರಹವಾಗುತ್ತದೆ. ವಾರಾಂತ್ಯ, ರಜಾದಿನಗಳಲ್ಲಿ 9 ಸಾವಿರ ರೂಪಾಯಿ ಆದಾಯ ಬರುತ್ತದೆ. ಹೀಗಾಗಿ ಸರಾಸರಿ 10 ಸಾವಿರ ರೂಪಾಯಿ ಆದಾಯ ಈ ಬಸ್ಸಿಂದ ಬಿಎಂಟಿಸಿಗೆ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಮಾರ್ಗಗಳು

600 ಮತ್ತು 601 ಎಂಬ ಎರಡು ಮಾರ್ಗಗಳು ಕೂಡ 117 ಕಿಲೋಮೀಟರ್​ ಉದ್ದದ ಮಾರ್ಗದಲ್ಲಿ ಸಂಚರಿಸುತ್ತವೆ. ಅದರಲ್ಲಿ 600 ಸಂಖ್ಯೆಯ ಬಸ್ ಸೀದಾ ಮಾರ್ಗದಲ್ಲಿ ಸಂಚರಿಸಿದರೆ, 601 ಸಂಖ್ಯೆ ಬಸ್ ಉಲ್ಟಾ ಮಾರ್ಗದಲ್ಲಿ ಓಡಾಡುತ್ತದೆ. ಅಂದರೆ 600 ಸಂಖ್ಯೆ ಬಸ್ ಯಾವ ನಿಲುಗಡೆಯನ್ನು ಮೊದಲು ತಲುಪುತ್ತದೆಯೋ ಆ ನಿಲುಗಡೆಯನ್ನು 601 ಸಂಖ್ಯೆಯ ಬಸ್ ಕೊನೆಯದಾಗಿ ತಲುಪುತ್ತದೆ.

ಸಂಪೂರ್ಣ ಮಾರ್ಗ ಸಂಚರಿಸಲ್ಲ

ಈವರೆಗೆ ಒಟ್ಟು 117 ಕಿಲೋಮೀಟರ್​​ ಮಾರ್ಗವನ್ನು ಒಮ್ಮೆಲೇ ಪ್ರಯಾಣಿಸಿದ ಪ್ರಯಾಣಿಕರು ಈವರೆಗೆ ಇಲ್ಲ ಎನ್ನುತ್ತಾರೆ ಈ ಬಸ್ ಚಾಲಕರು ಮತ್ತು ಅಧಿಕಾರಿಗಳು. ಬಸ್ ಸಂಚಾರ ಮಧ್ಯರಾತ್ರಿಯಲ್ಲಿ ಸ್ಥಗಿತಗೊಳ್ಳುವುದರಿಂದ ಪ್ರಯಾಣಿಕರು ಮಧ್ಯ ದಾರಿಯಲ್ಲಿಯೇ ಹತ್ತಿ, ಮಧ್ಯ ದಾರಿಯಲ್ಲಿಯೇ ಇಳಿಯುತ್ತಾರೆ. ಹೀಗಾಗಿ ಅಷ್ಟು ಉದ್ದದ ಮಾರ್ಗವನ್ನು ಈವರೆಗೆ ಯಾವ ಪ್ರಯಾಣಿಕರು ಕ್ರಮಿಸಿಲ್ಲ.

ಬಸ್ ಸಾಗುವ ಮಾರ್ಗ

ಬನಶಂಕರಿ, ರಾಗಿಗುಡ್ಡ ಬಿಟಿಎಂ ಲೇಔಟ್ 16ನೆ ಮುಖ್ಯರಸ್ತೆ, ಬೊಮ್ಮನಹಳ್ಳಿ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ ವೃತ್ತ, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಗುಂಜೂರು, ಹೋಪ್‍ಫಾರ್ಮ್, ಹೂಡಿ, ಮಹದೇವಪುರ, ಕೆ.ಆರ್.ಪುರ, ಟಿನ್‍ಫ್ಯಾಕ್ಟರಿ, ಬಾಬುಸಾಬ್‍ಪಾಳ್ಯ, ಕಲ್ಯಾಣನಗರ, ವೀರಣ್ಣನಪಾಳ್ಯ, ಬಿಇಎಲ್ ವೃತ್ತ, ಜಾಲಹಳ್ಳಿ, ಗೊರಗುಂಟೆ ಪಾಳ್ಯ, ಕೊಟ್ಟಿಗೆಪಾಳ್ಯ, ಮಾಗಡಿ ರೋಡ್, ಮಲ್ಲತ್‍ಹಳ್ಳಿ, ಕೊಮ್ಮಘಟ್ಟ, ಕೆಂಗೇರಿ ಬಸ್ ನಿಲ್ದಾಣ, ಆರ್.ವಿ ಕಾಲೇಜು, ನಾಯಂಡಹಳ್ಳಿ, ಪಿಇಎಸ್ ಕಾಲೇಜು, ಕತ್ತರಿಗುಪ್ಪೆ ಕ್ರಾಸ್, ಕದಿರೇನಹಳ್ಳಿ ಉದ್ಯಾನ, ಬನಶಂಕರಿ.