ಮಿಸ್ಸಿಸಿಪ್ಪಿ ಹುಟ್ಟಿನ ಹಿಂದಿದೆ ರೋಚಕ ಕಹಾನಿ..!

ಟೀಮ್​​ ವೈ.ಎಸ್​​.

0

ಇಂದು ಅನೇಕ ಶಕ್ತಿಶಾಲಿ ಸಂಸ್ಥೆಗಳು ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ವೃಧ್ಧಿಗೆ ಸಂಬಂಧಿಸಿದ ಗ್ರಾಹಕ ವಸ್ತುಗಳ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಟ್ಟಿವೆ. ಸೂಪರ್ ಮಾರ್ಕೆಟ್​​​ಗಳಲ್ಲಿ ಸಾವಯವ ಉತ್ಪನ್ನಗಳಿಂದ ಹಿಡಿದು ಕೊಬ್ಬು ಮತ್ತು ಸಕ್ಕರೆ ರಹಿತ ಹಲವು ವಸ್ತುಗಳು ಒಪ್ಪವಾಗಿ ಜೋಡಿಸಲ್ಪಟ್ಟಿರುತ್ತವೆ. ಕೆಲೋಗ್ಸ್ ನಂತಹ ವಿದೇಶಿ ಬ್ರಾಂಡ್​​ಗಳ ಮಧ್ಯೆ ಸಫೋಲಾಓಟ್ಸ್ ನಂತಹ ಅಪ್ಪಟ ದೇಸೀ ಉತ್ಪನ್ನಗಳೂ ಕಾಣಸಿಗುತ್ತವೆ.

ತೀವ್ರ ಸ್ಪರ್ಧೆಯಿರುವ ಕ್ಷೇತ್ರದಲ್ಲಿ ಹೊಸದೊಂದು ಬ್ರಾಂಡ್ ಆರಂಭಿಸುವದು ಸಾಮಾನ್ಯ ಮಾತೇನಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ಆರೋಗ್ಯಕಾರಿ ಎಂದು ಪರಿಗಣಿಸಲ್ಪಟ್ಟಿರುವ ಅಂದಾಜು ೫೫,೦೦೦ ಕೋಟಿ ಬೆಲೆಯ ಕುರುಕಲು ತಿಂಡಿಗಳ ಮತ್ತು ಅಂದಾಜು ೧೫,೦೦೦ ಕೋಟಿ ಬೆಲೆಯ ಬಿಸ್ಕತ್ತಿನ ಉದ್ಯಮದಲ್ಲಿ ವಿಫುಲ ಅವಕಾಶವನ್ನು ನಾವು ಕಂಡಿದ್ದೇವೆ ಎಂದು ಅನುಮಾನವಿಲ್ಲದೇ ಹೇಳುತ್ತಾರೆ ಸ್ಟೈಲ್​​​ ಕಿಚನ್ ಎಂಟರ್​ಪ್ರೈಸಸ್​​ನ ಸಂಸ್ಥಾಪಕ ಮತ್ತು ಸಿಇಓ ಆಗಿರುವ ಜೈದೀಪ್ ಸಿಪ್ಪಿ.

ಜೈದೀಪ್​​ ಮಿಸ್ಸಿಸಿಪಿ ಎಂಬ ಬ್ರಾಂಡ್​ ನಡಿ ಹೆಚ್ಚಿನ ನಾರಿನಂಶ ಮತ್ತು ಪೋಷಕಾಂಶಗಳುಳ್ಳ ಬಿಸ್ಕತ್ತು, ಕುರುಕಲು ತಿಂಡಿಗಳು ಮತ್ತು ಮ್ಯೂಸ್ಲಿ (ಆಹಾರ ಧಾನ್ಯಗಳು ಮತ್ತು ಹಣ್ಣುಗಳ ಮಿಶ್ರಣ) ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಎಲ್ಲ ಉತ್ಪನ್ನಗಳಿಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ ಉತ್ಪಾದಿತ ಪದಾರ್ಥಗಳ ದಾಸ್ತಾನು ಖಾಲಿಯಾಗಿದೆ ಎನ್ನುತ್ತಾರೆ ಜೈದೀಪ್.

ಮಿಸ್ಸಿಸಿಪ್ಪಿ ಹುಟ್ಟಿದ್ದು ಹೀಗೆ..!

ಸಿಪ್ಪಿ ಕುಟುಂಬದ ಮಹಿಳೆಯರೆಲ್ಲರಿಂದ ಪ್ರಭಾವಿತರಾಗಿ ತಮ್ಮ ಉತ್ಪನ್ನಗಳಿಗೆ ಮಿಸ್ಸಿಸಿಪ್ಪಿ ಎಂದು ಜೈದೀಪ್ ಹೆಸರಿಟ್ಟರಂತೆ. ವಿಭಿನ್ನ ಅಹಾರಗಳೆಂದರೆ ನನಗೆ ಮೊದಲಿನಿಂದಲೂ ಪ್ರೀತಿ. ನನ್ನಿಬ್ಬರು ಅಜ್ಜಿಯಂದಿರ ಜೊತೆ ಅಡುಗೆ ಮನೆಯಲ್ಲೇ ನನ್ನ ಬಾಲ್ಯವನ್ನು ಕಳೆದೆ. ನಂತರ ಹೊಟೆಲ್ ಮ್ಯಾನೇಜ್​​ಮೆಂಟ್​​​ ಸ್ಕೂಲಿಗೆ ಸೇರಿಕೊಂಡೆ. ಐಶಾರಾಮಿ ಜೀವನ ಶೈಲಿಗೆ ಸಂಬಂಧಿಸಿದ ಬ್ರಾಂಡ್​​ಗಳನ್ನು ಹುಟ್ಟುಹಾಕುವುದರಲ್ಲಿ ಕಳೆದ ೮ ವರ್ಷಗಳನ್ನು ಕಳೆದೆ. ಅತೀವೇಗದ ಜೀವನಶೈಲಿ, ಫಾಸ್ಟ್ ಫುಡ್ ಮತ್ತು ಆರೋಗ್ಯಕಾರಿಯಲ್ಲದ ಸಿದ್ಧ ಆಹಾರಗಳ ಸೇವನೆಯಿಂದ ಆರೋಗ್ಯ ಹದಗೆಟ್ಟು ನಾನು ಶಸ್ತ್ರಚಿಕಿತ್ಸೆಗೂ ಒಳಪಡಬೇಕಾಯ್ತು. ಇದು ಆಹಾರ ವಸ್ತುಗಳ ಬಗ್ಗೆ ನಾನು ಜಾಗೃತನಾಗಲು ನೆರವಾಯಿತು. ನನ್ನ ಸುತ್ತಲಿನ ಬಹುತೇಕ ಜನ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವುದು ಗಮನಕ್ಕೆ ಬಂತು. ಅವರ ಮತ್ತು ನನ್ನ ಅಗತ್ಯಗಳು ಒಂದೇ ಎಂದು ಅರಿವಾಗುತ್ತಲೇ ಹೊಸ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಅದಕ್ಕಾಗಿ ಕಂಪನಿಯೊಂದರ ಸ್ಥಾಪನೆಯ ಕಲ್ಪನೆ ಚಿಗುರೊಡೆಯಿತು ಎನ್ನುತ್ತಾರೆ ಜೈದೀಪ್.

ಒಮ್ಮೆ ಈ ಯೋಚನೆ ಬಂದಿದ್ದೇ ದಿ ಸ್ಟೈಲ್​​ ಕಿಚನ್​​ (ಟಿಎಸ್​​ಕೆ) ಎಂಬ ಸ್ವಾಸ್ತ್ಯ ಸಂಬಂಧಿ ಉತ್ಪನ್ನಗಳ ಸಂಸ್ಥೆಯೊಂದನ್ನು ಜೈದೀಪ್ ಹುಟ್ಟು ಹಾಕಿದರು. ಉತ್ಪನ್ನಗಳ ಅಭಿವೃದ್ದಿಗೆ ಹೆಚ್ಚಿನ ಸಮಯ ವ್ಯಯವಾದರೂ ಉತ್ಪನ್ನವೊಂದು ಕೈ ಸೇರುತ್ತಲೇ ಅದನ್ನು ಪುಣೆಯಲ್ಲಿನ ಕೆಲವು ಕಂಪನಿಗಳ ಉದ್ಯೋಗಿಗಳಿಗೆ ಉಚಿತವಾಗಿ ಹಂಚಲಾಯಿತು. ಕಂಪನಿ ಮತ್ತು ಉದ್ಯೊಗಿಗಳಿಂದ ಈ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಆದರೆ ವ್ಯವಹಾರಿಕ ಯಶಸ್ಸುಇನ್ನೂ ದೂರದ ಮಾತಾಗಿತ್ತು. ತಮ್ಮ ವಿತರಣಾ ವ್ಯವಸ್ಥೆಯನ್ನೂ ಸಹ ಜೈದೀಪ್ ಸ್ವಲ್ಪ ಬದಲಾಯಿಸಿಕೊಳ್ಳಬೇಕಾಯ್ತು. ಜೈದೀಪ್ ಹೇಳುವ ಪ್ರಕಾರ ಇಂದು ದೆಹಲಿ, ಗುರ್​ಗಾಂವ್, ಮುಂಬಯಿ ಮತ್ತು ಪುಣೆಯ ನೂರಕ್ಕೂಅಧಿಕ ಮಳಿಗೆಗಳಲ್ಲಿ ಮಿಸ್ಸಿಸಿಪ್ಪಿ ಲಭ್ಯವಿದೆ.

ಜೈದೀಪ್​​ ಸಿಪ್ಪಿ
ಜೈದೀಪ್​​ ಸಿಪ್ಪಿ

ಮಿಸ್ಸಿಸಿಪ್ಪಿ ಉಳಿದ ಉತ್ಪನ್ನಗಳಿಗಿಂತ ಹೇಗೆ ಭಿನ್ನ?

ನೈಸರ್ಗಿಕ, ಅತೀ ಹೆಚ್ಚಿನ ನಾರಿನಂಶ ಉಳ್ಳ ಮಿಸ್ಸಿಸಿಪ್ಪಿ ಕುರುಕಲು ತಿಂಡಿಗಳು ದೇಹ ಆಹಾರದ ಮೂಲಕ ಪಡೆಯುವ ಐದನೇ ಒಂದಂಶ ನಾರನ್ನು ಪೂರೈಸಬಲ್ಲವು. ಮ್ಯೂಸ್ಲಿ, ಹರಿವೆ ಸೊಪ್ಪಿನ ಧಾನ್ಯಗಳಿಂದ ತಯಾರಿಸಲ್ಪಟ್ಟಿದ್ದು ಬಿಸ್ಕತ್ತು ಮತ್ತು ಇತರ ಕುರುಕಲು ಖಾದ್ಯಗಳು ಓಟ್ಸ್, ಕುಚ್ಚಲಕ್ಕಿ (ಕೆಂಪಕ್ಕಿ) ಮತ್ತು ಮಸೂರ ಧಾನ್ಯಗಳಿಂದ ತಯಾರಿಸಲ್ಪಡುತ್ತವೆ. ನೈಸರ್ಗಿಕವಲ್ಲದ ಪದಾರ್ಥಗಳನ್ನು ಬಳಸಬಾರದೆಂಬ ನಿರ್ಧಾರದಿಂದಾಗಿ ಸಾಧಾರಣ ಮಟ್ಟದ ಸೆಲ್ಫ್ ಲೈಫ್ ಕಾಯ್ದುಕೊಳ್ಳಬಲ್ಲ ಆಹಾರ ವಸ್ತುವಿನ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೆಚ್ಚಿನ ಸಮಯ ಮೀಸಲಿಡಬೇಕಾಯ್ತು ಎಂದು ತಮ್ಮ ಉತ್ಪನ್ನಗಳ ಬಗ್ಗೆ ಜೈದೀಪ್ ಹೇಳುತ್ತಾರೆ.

ಮುಂದಿರುವ ಗುರಿಗಳು

ಸ್ವಂತ ೧.೫ ಕೋಟಿ ಹೂಡಿಕೆಯಿಂದ ಪ್ರಾರಂಭಿಸಿದ ಟಿಎಸ್​​ಕೆ ಕಂಪನಿ ಆರಂಭಿಕ ದಿನಗಳಲ್ಲಿ ಬ್ಲೂಮ್ ವೆಂಚರ್ಸ್ ಸಂಸ್ಥೆಯ ಮುಖಾಂತರ ಹೆಚ್ಚಿನ ೨.೫ ಕೋಟಿ ಹೂಡಿಕೆಯನ್ನು ಕ್ರೋಢಿಕರಿಸಿತ್ತು. ಯಶಸ್ಸಿಗಾಗಿ ಕ್ರಮಿಸಬೇಕಾದ ದಾರಿ ತುಂಬಾ ದೂರವಿದೆ ಎಂದು ಅರಿತಿರುವ ಜೈದೀಪ್ ಆದಷ್ಟು ಬೇಗ ದೂರದ ಹೊಸ ನಗರಗಳಲ್ಲಿ ಹಾಗೂ ಈಗಾಗಲೇ ಮಾರುಕಟ್ಟೆ ಲಭ್ಯವಿರುವ ನಗರಗಳಲ್ಲಿಯೇ ಇನ್ನಷ್ಟು ಹೆಚ್ಚಿನ ಮಳಿಗೆಗಳಲ್ಲಿ ಮಿಸ್ಸಿಸಿಪ್ಪಿ ಉತ್ಪನ್ನಗಳು ದೊರಕುವಂತೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

ಗ್ರಾಹಕರ ಅಭಿಪ್ರಾಯ ಅರಿಯುವ ಉದ್ದೇಶದಿಂದ ಮೊದಲ ೧೦೦೦ ದಿಂದ ೧೦,೦೦೦ ಗ್ರಾಹಕರನ್ನು ಸಂಪರ್ಕಿಸುವ ಮೂಲಕ ಈ ಉದ್ದಿಮೆಯನ್ನು ಇನ್ನೂ ಆಳವಾಗಿ ಅರಿಯಲು ನಮಗೆ ಸಹಾಯವಾಗಲಿದೆ ಎಂಬುದು ಜೈದೀಪ್ ಅಭಿಪ್ರಾಯ. ಸಾಮಾಜಿಕ ಮಾಧ್ಯಮಗಳು, ಉಚಿತ ಸ್ಯಾಂಪಲ್ ವಿತರಣೆ ಮತ್ತು ಅಂತರ್ಜಾಲದ ಮುಖಾಂತರ ಮಿಸ್ಸಿಸಿಪ್ಪಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಟಿಎಸ್​ಕೆ ಶ್ರಮಿಸುತ್ತಿದೆ.

Related Stories