ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

ಸ್ವಾತಿ, ಉಜಿರೆ

1

ಬೆಂಗಳೂರು.. ಇದು ಕನಸುಗಳನ್ನ ಹೊತ್ತು ಬರುವವರನ್ನ ಸಲಹುವ ಕೇಂದ್ರ.. ಬದುಕು ಕಟ್ಟಿಕೊಡುವ ಒಂದು ಸುಂದರ ನಗರ. ಇನ್ನು ಉದರ ನಿಮಿತ್ತ ರಾಜಧಾನಿಗೆ ಎಂಟ್ರಿ ಕೊಡುವವರಿಗೇನೂ ಕಡಿಮೆ ಇಲ್ಲ. ರಾಜ್ಯದ ವಿವಿಧೆಡೆಯಿಂದ ಜೀವನವನ್ನ ಅರಸುತ್ತಾ ನಿತ್ಯವೂ ಸಾವಿರಾರು ಮಂದಿ ಬೆಂಗಳೂರಿಗೆ ಎಂಟ್ರಿಕೊಡುತ್ತಾರೆ. ಅದೆಷ್ಟೋ ಮಂದಿ ನಗರದಲ್ಲೇ ನೆಲೆ ನಿಲ್ಲುತ್ತಾರೆ. ಇನ್ನು ಕಷ್ಟ ಪಟ್ಟು ರಟ್ಟೆ ಮುರಿದು ದುಡಿಯುವ ಮಂದಿಗೆ ಬೆಂಗಳೂರಿನ ಊಟ ಒಗ್ಗುವುದು ಸ್ಪಲ್ಪ ಕಷ್ಟ. ಅದ್ರಲ್ಲೂ ಉತ್ತರ ಕರ್ನಾಟಕದಿಂದ ನಗರಕ್ಕೆ ಬಂದು ಇಲ್ಲಿನ ಆಹಾರಕ್ಕೆ ಒಗ್ಗಿಕೊಳ್ಳುವುದು ಸ್ಪಲ್ಪ ಕಷ್ಟನೆ. ಇಲ್ಲಿ ಸಿಗುವ ಚಿತ್ರಾನ್ನ ರೈಸ್ ಬಾತ್ ಗಳು ಜೋಳದ ರೊಟ್ಟಿ, ಖಡಕ್ ರೊಟ್ಟಿಯ ರುಚಿ ಕಂಡ ನಾಲಗೆಗೆ ಒಗ್ಗುವುದಿಲ್ಲ. ಹೀಗಾಗಿ ತಮ್ಮ ನೆಚ್ಚಿನ ಜೋಳದ ರೊಟ್ಟಿಯೂಟದ ಸವಿಯನ್ನ ಸವಿಯಲು ಉತ್ತರ ಕರ್ನಾಟಕದ ಮಂದಿ ಸದಾ ಹುಡುಕಾಡುತ್ತಲೇ ಇರುತ್ತಾರೆ. ಆದ್ರೆ ಇಂತಹ ಹುಡುಕಾಟದಲ್ಲಿರುವವರಿಗೆ ತಕ್ಷಣ ನೆನಪಾಗೋದು ಮತ್ತು ಇಡೀ ಬೆಂಗಳೂರಿನಲ್ಲೇ ಉತ್ತರ ಕರ್ನಾಟಕದ ಊಟಕ್ಕೆ ಹೆಸರಾಗಿರೋ ಹೊಟೇಲ್ ನಳಪಾಕ..

ನಳಪಾಕ.. ಹೆಸ್ರು ಕೇಳಿದ ಕೂಡ್ಲೆ ಉತ್ತರ ಕರ್ನಾಟಕ ಮಂದಿಯ ಮುಖ ಅರಳುತ್ತದೆ. ಯಾಕಂದ್ರೆ ಇಲ್ಲಿ ಉತ್ತರ ಕರ್ನಾಟದ ಮಂದಿ ಬಯಸುವ ಶುಚಿ ರುಚಿಯಾದ ಊಟವನ್ನ ಮನದಣಿಯೆ ಸವಿಯಬಹುದು. ಈ ಹೊಟೇಲ್ ಕೇವಲ ಉತ್ತರ ಕರ್ನಾಟದ ಊಟ ಅನ್ನೋ ಕಾರಣದಿಂದಷ್ಟೇ ಗಮನ ಸೆಳೆಯೋದಿಲ್ಲ. ಬದಲಾಗಿ ಇದು ಮಹಿಳೆ ಕೂಡಾ ಹೋಟೆಲ್ ಉದ್ಯಮದಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿ ಸಾಧಿಸಿ ತೋರಿಸಬಹುದೆಂಬುದಕ್ಕೆ ಒಂದು ಉತ್ತಮ ನಿದರ್ಶನ. ಈ ಶುದ್ಧ ಸಸ್ಯಾಹಾರಿ ಹೋಟೆಲ್ ಉದ್ಯಮಿ ಮೂಲತಃ ದಾವಣಗೆರೆಯ ಕವಿತಾ ಎಸ್. ಸಾಲೀಮಠ್. 14 ವರ್ಷದ ಹಿಂದೆ ಕವಿತಾ ಅವರು ತನ್ನ ಗಂಡ ಬಾಗಲಕೋಟೆ ನಿವಾಸಿ ಸಂಜೀವ ಎಂ. ಸಾಲೀಮಠ ಅವರ ಜೊತೆಗೆ ಸೇರಿಕೊಂಡು ಬೆಂಗಳೂರಿನ ಬಸವೇಶ್ವರ ನಗರದ ಮನೆಯಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭಿಸಿದ್ರು.

“ ಹೊಟೇಲ್ ಆರಂಭಿಸಿದ ಆರಂಭಿಕ ದಿನಗಳಲ್ಲಿ ಉತ್ತರ ಕರ್ನಾಟಕದ ಶೈಲಿಯ ಊಟ ತಯಾರಿಸಿ ಒಂದು ಕಂಪನಿಯ ಸಿಬ್ಬಂದಿಗಳಿಗೆ ಪಾರ್ಸೆಲ್ ಕೊಡುತ್ತಿದ್ದೆವು. ಕ್ರಮೇಣ ಅದನ್ನ ಲಾಭದಾಯಕವಾಗಿ ಬೆಳೆಸಿಕೊಂಡು ರಾಜಾಜಿನಗರದಲ್ಲಿ ನಳಪಾಕ ಎಂಬ ಹೆಸರಿನ ದರ್ಶಿನಿ ಮಾದರಿಯ ಹೊಟೇಲ್ ಆರಂಭಿಸಿದೆವು. ದಿನಗಳು ಉರುಳಿದಂತೆ ತನ್ನ ಉತ್ಪನ್ನಗಳ ಶುಚಿ ರುಚಿಯಿಂದ ನಳಪಾಕ ಖ್ಯಾತಿ ಪಡೆಯಿತು ”
             – ಕವಿತಾ ಸಾಲಿಮಠ್, ನಳಪಾಕ ಹೊಟೇಲ್ ನ ಮಾಲಿಕೆ

ಹೀಗೆ ಆರಂಭವಾದ ದರ್ಶಿನಿ ಕೂಡ ಭರ್ಜರಿಯಾದ ಲಾಭದೊಂದಿಗೆ ಮುನ್ನಗ್ಗ ತೊಡಗಿತು. ಇದೀಗ ನಳಪಾಕ ಎಂಬ ಹೆಸರಿನಲ್ಲೇ ಮತ್ತೊಂದು ದೊಡ್ಡ ಹೊಟೇಲ್ ಆರಂಭವಾಗಿ ಅದ್ಭುತ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಸದಾ ಜನರಿಂದ ತುಂಬಿ ತುಳುಕುವ ಈ ಹೊಟೇಲ್ ನಲ್ಲಿ ಜೋಳದರೊಟ್ಟಿ ಊಟ ತುಂಬಾ ಫೇಮಸ್. ಹಸಿದ ಹೊಟ್ಟೆಯಲ್ಲಿ ನೀವೇನಾದ್ರೂ ಈ ಹೊಟೇಲ್ ಗೆ ಹೋದ್ರೆ ಇಲ್ಲಿನ ಸಿಬ್ಬಂದಿಗಳು ಭರ್ಜರಿಯಾಗಿ ಉಪಚರಿಸುತ್ತಾರೆ. ಬಾಳೆಎಲೆಯಲ್ಲಿ ಬಾಯಿಯಲ್ಲಿ ನೀರೂರಿಸುವಂತ ಬಿಸಿಬಿಸಿ ತೆಳುವಾದ ಜೋಳದ ರೊಟ್ಟಿ. ಖಾರ ಚಟ್ನಿಗಳು, ಸಲಾಡ್, ಚಿತ್ರಾನ್ನ, ಅನ್ನ, ಸಾರು, ಸಾಂಬಾರು, ಪಲ್ಯ, ಹಪ್ಪಳ, ಮೆಣಸು, ಮೊಸರು, ಮಜ್ಜಿಗೆ… ಹೀಗೆ ಇಲ್ಲಿ ಬಡಿಸುವ ಆಹಾರದ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ವಿಶೇಷ ಅಂದ್ರೆ ಇದು ಅನ್ ಲಿಮಿಟೆಡ್ ಮತ್ತು ವೆರಿ ಟೇಸ್ಟಿ. ಇನ್ನು ಗುರುವಾರ ವಿಶೇಷ ಬಿರಂಜಿ ಊಟ, ಪ್ರತಿ ಸೋಮವಾರ ವಿಶೇಷ ಹೋಳಿಗೆ ಊಟಕ್ಕೆ ಜನ ಮುಗಿಬೀಳುತ್ತಾರೆ.

ಜೋಳದ ರೊಟ್ಟಿಯನ್ನ ಹೊಟೇಲ್ ನಲ್ಲೇ ಪರಿಣಿತ ಸಿಬ್ಬಂದಿಗಳ ಮೂಲಕ ತಯಾರಿಸಲಾಗುತ್ತದೆ. ಇದಕ್ಕೆ ಕಾಂಬಿನೇಷನ್ ಆಗಿ ಕೊಡುವ ಬದನೆಕಾಯಿ ಎಣ್ಣೆಗಾಯಿ ಸೂಪರ್. ಊಟವಲ್ಲದೆ ಟಿಫಿನ್ ಕೂಡಾ ಇಲ್ಲಿನ ಸ್ಪೆಶಲ್. ಇಲ್ಲಿನ ಘೀ ರೋಸ್ಟ್ ದೋಸೆ, ದಾವಣಗೆರೆ ಬೆಣ್ಣೆ ದೋಸೆ ಭಾರೀ ಫೇಮಸ್. ಸಂಜೆ ಕಾಫಿಯ ಜೊತೆ ಮೆಲ್ಲೋದಿಕ್ಕೆ ಇಲ್ಲಿ ಮಂಡಕ್ಕಿ, ಬಜ್ಜಿ ಸೇರಿದಂತೆ ಇತರೆ ವೆರೈಟಿ ತಿಂಡಿಗಳೂ ಸಿಗುತ್ತದೆ. .

“ ಉತ್ತರ ಕರ್ನಾಟಕದ ಊಟ ತಿಂಡಿಗಳನ್ನ ಮಿಸ್ ಮಾಡಿಕೊಳ್ಳುವವರು ನಳಪಾಕಕ್ಕೆ ಭೇಟಿ ನೀಡಬಹುದು. ಇಲ್ಲಿನ ವೆರೈಟಿ ಹಾಗೂ ಟೇಸ್ಟಿ ಊಟ ಎಲ್ಲರಿಗೂ ಇಷ್ಟವಾಗುತ್ತದೆ. ವೀಕೆಂಡ್ ಗಳಲ್ಲಿ ಫ್ರೆಂಡ್ಸ್ ಜೊತೆ ಬಂದು ಪಾರ್ಟಿ ಮಾಡೋದಿಕ್ಕೆ ಬೆಸ್ಟ್ ಪ್ಲೇಸ್. ಇಲ್ಲಿನ ಊಟ ಬಡಿಸುವ ರೀತಿ ನೀತಿಗಳು ತುಂಬಾ ಇಷ್ಟವಾಗುತ್ತದೆ ” 
                                  - ಸುರೇಶ್ ಮಂಡಿ, ಗ್ರಾಹಕರು

ಹೊಟೇಲ್ ಉದ್ಯಮ ಅಂದ್ರೆ ಅಲ್ಲಿ ಸರ್ವೀಸ್ ಗಿಂತ ಮೊದಲು ಲಾಭದ ಲೆಕ್ಕಾಚಾಗಳನ್ನೇ ಮೊದಲು ಗಮನಿಸಲಾಗುತ್ತದೆ. ಆದ್ರೆ ನಳಪಾಕದಲ್ಲಿ ಗ್ರಾಹಕರು ಸೃಂತೃಪ್ತಿಯಿಂದ ಉಂಡು ತೇಗುವುದನ್ನ ನಿರೀಕ್ಷಿಸಲಾಗುತ್ತದೆ. ಹೀಗಾಗೇ ಇದು ಭೋಜನ ಪ್ರಿಯರಿಗೆ ಹಾಟ್ ಸ್ಪಾಟ್.

ಇದನ್ನು ಓದಿ:

1. ಬೆಂಗಾಡಿಗೆ ಭಾಗೀರತಿಯಾದ ಅಮಲಾ ರೂಯಿಯಾ...

2. ಚಾಯ್ವಾಲಾ ಆಗಿದ್ದವ ''ಮಿಸ್ಟರ್ ದೆಹಲಿ''ಯಾದ ಯಶೋಗಾಥೆ

3. ಪೆಟ್ರೋಲ್ ಡೀಸೆಲ್ ಬೇಡ್ವೇ ಬೇಡ..! ನೀರಿನಿಂದಲೇ ಓಡುತ್ತೆ ಈ ಅದ್ಭುತ ಕಾರು