ಕ್ರೀಡಾಪಟುಗಳ ಫಿಟ್ನೆಸ್ ಗುರು ರಾಜಮಣಿ

ಎನ್​.ಎಸ್​. ರವಿ

0

ಫಿಟ್ ಆಗಿ ಇರಲು ಯಾರು ಬಯಸುವುದಿಲ್ಲ ಹೇಳಿ, ಎಲ್ಲರಿಗೂ ಫಿಟ್ ಎಂಡ್ ಫೈನ್ ಆಗಿರಬೇಕು ಎಂದು ಬಯಸುವವರೇ. ಆದರೆ ಕ್ರೀಡಾಪಟುಗಳಿಗೆ ಹೆಚ್ಚು ಫಿಟ್ ಆಗಿರಬೇಕಾದ ಅಗತ್ಯತೆ ಸ್ವಲ್ಪ ಹೆಚ್ಚಿರುತ್ತೆ. ಆದರೆ ಹೀಗೆ ಫಿಟ್ ಆಗಬೇಕೆಂದು ಬಯಸಿದವರನ್ನು ಫಿಟ್ ಆಗಿಡುವ ಒಬ್ಬ ಅದ್ಭುತ ಕೋಚ್ ನಮ್ಮ ರಾಜ್ಯದವರೆ ಆಗಿದ್ದಾರೆ. ಒಂದು ಸಮಯದಲ್ಲಿ ಒಂದು ತುತ್ತಿಗೂ ಗತಿಯಿಲ್ಲದ ಈ ವ್ಯಕ್ತಿ ಇಂದು ದೇಶದ ನಂಬರ್ವನ್ ಫಿಟ್ನೆಸ್ ಗುರು ಆಗಿ ಮಿಂಚುತ್ತಿದ್ದಾರೆ.

ಸದ್ಯ ಭಾರತದಲ್ಲಿರುವ ಶ್ರೇಷ್ಠ ಫಿಟ್ನೆಸ್ ಗುರು ಎಂಬ ಕೀರ್ತಿ ಎ.ಟಿ .ರಾಜಮಣಿ ಪ್ರಭುಗೆ ಸಲ್ಲುತ್ತದೆ. ಇದುವರೆಗೆ ದೇಶದ 150 ಕ್ಕಿಂತ ಹೆಚ್ಚು ಜನಪ್ರಿಯ ಕ್ರೀಡಾಪಟುಗಳನ್ನು ಫಿಟ್ ಎಂಡ್ ಫೈನ್ ಆಗಿ ಕಾಣುವಂತೆ ಮಾಡಿದ, ಮಾಡುತ್ತಿರುವ ಫಿಟ್ನೆಸ್ ಗುರು.. ಆರ್.ಅಶ್ವಿನ್, ರಾಬಿನ್ ಉತ್ತಪ್ಪ, ಕರುಣ್ ನಾಯರ್, ಜೋಶ್ನ ಚಿನ್ನಪ್ಪ ಮತ್ತು ಸುಬ್ರಮಣಿ ಬದ್ರಿನಾಥ್ ಸೇರಿದಂತೆ ಹಲವರ ಫಿಟ್ನೆಸ್ ಗುರು. ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಿ ಬಂದ ರಾಜಮಣಿ ಇಂದು ಭಾರತದ ಸರ್ವಶ್ರೇಷ್ಟ ಫಿಟ್ನೆಸ್ ಗುರು ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಬೆಂಕಿಯಲ್ಲಿ ಅರಳಿದ ಹೂವು ರಾಜಮಣಿ ಪ್ರಭು.

ರಾಜಮಣಿ ಪ್ರಭು ಜೀವನವೇ ಹಲವು ಕ್ರೀಡಾಪಟುಗಳಿಗೆ ಪ್ರೇರಣೆಯಾಗುವಂತಹದು. ಮೂಲತಃ ಶಿವಮೊಗ್ಗದವರಾದ ಇವರು, ಇರುವುದು ಚೆನ್ನೈನಲ್ಲಿ. 22 ವರ್ಷದಲ್ಲೇ ಅನಾಥರಾದ ರಾಜಮಣಿಗೆ ಮಾಡಲು ಕೆಲಸವಿರಲಿಲ್ಲ. ಕೋಚ್​ಗಳಿಗೆ ಸಹಾಯ ಮಾಡುತ್ತ ಸಹಾಯಕ ಕೋಚ್ ಆಗಿ ಕೆಲಸ ಮಾಡುತ್ತಿದ್ದ ಇವರು, ಆಟಗಾರರ ಸಾಮಗ್ರಿಗಳನ್ನು ಹೊತ್ತುಕೊಂಡು ತಿರುಗಾಡುವುದು, ಅವರಿಗೆ ವ್ಯಾಯಾಮ ಮಾಡಲು ಬೇಕಾದ ವಸ್ತುಗಳನ್ನು ಕೊಡುವುದು ಇವರ ಕಾಯಕವಾಗಿತ್ತು. ಇಷ್ಟೇಲಾ ಮಾಡಿದ್ರು ಅವರ ಕೈಗೆ ಸೇರುತ್ತಿದ್ದು ಕೇವಲ 1.500 ರೂಪಾಯಿ. ಇಷ್ಟರಲ್ಲೇ ಗಂಡ, ಹೆಂಡತಿ ಜೀವನ ಸಾಗಿಸಬೇಕಾದಂತಹ ಕಡುಬಡತನದಲ್ಲಿದ್ರು ರಾಜಮಣಿ..

ಉತ್ತಪ್ಪರಿಂದ ಬದಲಾಯ್ತು ರಾಜಮಣಿ ಲಕ್..

2004ರಲ್ಲಿ ಅಂಡರ್-19 ತಂಡ ವಿಶ್ವಕಪ್​ಗೆ ತಯಾರಿ ನಡೆಸುತ್ತಿತ್ತು. ಆದಾಗ್ಲೇ ಚೆನ್ನೈನಲ್ಲಿ ಫಿಟ್​ನೆಸ್​ ಕೋಚ್ ಟ್ರೈನಿಂಗ್ ಪಡೆದು ಬಂದಿದ್ದ ಪ್ರಭು ಪಕ್ಕದಲ್ಲೇ ಮತ್ತೊಂದು ತಂಡಕ್ಕೆ ಕೋಚಿಂಗ್ ಮಾಡಿ ಬಂದು ಕುಳಿತಿದ್ರು. ಆದೇ ವೇಳೆ ಅವರನ್ನು ನೋಡಿದ್ದ ರಾಬಿನ್ ಉತ್ತಪ್ಪ, ಆಗಿನ ಕೋಚ್ ವೆಂಕಟೇಶ್ ಪ್ರಸಾದ್ ಬಳಿ ಹೋಗಿ ಪ್ರಭು ಬಗ್ಗೆ ಹೇಳಿದ್ರು. ಪ್ರಸಾದ್ ಮತ್ತು ಜಾವಗಲ್ ಶ್ರೀನಾಥ್, ಅವರ ಬಳಿ ಹೋಗಿ ಹುಡುಗರನ್ನು ವಾರ್ಮ್ ಅಪ್ ಮಾಡಿಸುವಂತೆ ಬೇಡಿಕೊಂಡ್ರು. "ಆಗ ಹುಡುಗರಿಗೆ ಉತ್ತಮ ಟ್ರೈನಿಂಗ್ ನೀಡಿದ್ದೆ ಬಂತು ನನ್ನ ಲಕ್ ಬದಲಾಗಿ ಹೋಯ್ತು. ಆಟಗಾರರು ಸೇರಿದಂತೆ ಸಹ ಸಿಬ್ಬಂದಿ ಕೂಡ ನನ್ನ ಶ್ರಮಕ್ಕೆ ಥ್ಯಾಂಕ್ಸ್ ಹೇಳಿದ್ರು".

ಆರು ತಿಂಗಳು ಕಾಲ ಚೆನ್ನೈನಲ್ಲಿ ಕೋಚ್ ತರಬೇತಿ ಪಡೆದು ಬಂದಿದ್ದ ರಾಜಮಣಿ, ಶಿವಮೊಗ್ಗ ಅಂಡರ್-25 ತಂಡಕ್ಕೆ ಫಿಟ್ನೆಸ್ ಕೋಚಿಂಗ್ ನೀಡುತ್ತಿದ್ರು. 17 ವಯಸ್ಸಿನಲ್ಲಿ ತಾಯಿ ಮತ್ತು 22ನೇ ವಯಸ್ಸಿನಲ್ಲಿ ತಂದೆ ಕಳೆದುಕೊಂಡು ಅನಾಥರಾಗಿದ್ದ ರಾಜಮಣಿಗೆ ಉತ್ತಪ್ಪ ಸಹಾಯ ಮಾಡಿದ್ರು. ತಮ್ಮಗೆ ಫಿಟ್ನೆಸ್ ಕಾಯ್ದಕೊಳ್ಳಲು ಮಾಡುವಂತೆ ಅವರನ್ನು ಕೇಳಿ ಕೊಂಡ್ರು. ಉತ್ತಪ್ಪಗೆ ಫಿಟ್ನೆಸ್ ಮಂತ್ರ ಹೇಳುವ ಮೂಲಕ ಕೆಎಎಸ್​ಸಿಎ ಮತ್ತು ಕ್ರಿಕೆಟರ್ಸ್​ಗಳಿಗೆ ಪ್ರಭು ಮತ್ತಷ್ಟು ಹತ್ತಿರವಾದ್ರು. ಆರಂಭದಲ್ಲಿ ಕರ್ನಾಟಕ ಅಂಡರ್-25 ತಂಡದ ಫಿಟ್ನೆಸ್ ಕೋಚ್ ಆಗಿ ಪ್ರಭು ಅವರನ್ನು ನೇಮಕ ಮಾಡಲಾಯ್ತು. ಅದೇ ವರ್ಷವೇ ಕರ್ನಾಟಕ ಅಂಡರ್-25 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಂಡದ ಆಟಗಾರರು ರಾಜಮಣಿ ಸೇವೆಯನ್ನು ಸ್ಮರಿಸಿದ್ರು.

ಆದಾಗ್ಲೇ ಉತ್ತಪ್ಪಗೆ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಕಾರಣರಾಗಿದ್ದ ರಾಜಮಣಿ, ಎನ್​ಸಿಎಯಲ್ಲಿ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಹಲವರಿಗೆ ಫಿಟ್ನೆಸ್ ಸಲಹೆ ನೀಡಿದ್ರು. ಆಗ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯಲು ಹಾತೊರೆಯುತ್ತಿದ್ದ ರಾಜಮಣಿಗೆ ಓಡಿಶಾ ಕ್ರಿಕೆಟ್ ಬೋರ್ಡ್ ಸಹಾಯ ಮಾಡ್ತು. ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯಲು 80 ಪ್ರತಿಶತ ಆರ್ಥಿಕ ಸಹಾಯ ನೀಡಿತು. ಅದಕ್ಕೆ ಪ್ರತಿಯಾಗಿ ಓಡಿಶಾ ತಂಡವನ್ನು ಟ್ರೈನ್ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಮೈಕಲ್ ಬೆವನ್ ಜೊತೆ ಕೆಲಸ ಮಾಡಿದ ಪ್ರಭು ಅನಂತರ ಓಡಿಶಾ ತಂಡದ ಫಿಟ್ನೆಸ್ ಕೋಚ್ ಆಗಿದ್ರು..

ಮನಸ್ಸು ಮಾಡಿದ್ರೆ ರಾಜಮಣಿ ಪ್ರಭು ಯಾವುದೋ ಒಂದು ರಣಜಿ ತಂಡಕ್ಕೋ ಅಥವಾ ಐಪಿಎಲ್ ತಂಡದ ಫಿಟ್ನೆಸ್ ಕೋಚ್ ಆಗಬಹುದಿತ್ತು. ಆದರೆ ಅವರು ಹಾಗೇ ಮಾಡದೇ ತಮ್ಮದೆಯಾದ ಸ್ವಂತ ಆರ್.ಎಕ್ಸಲ್ರೇಟ್ ಸ್ಟ್ರೆಂಥ್ ಎಂಡ್ ಕಂಡೀಷನಿಂಗ್​​ ಕೇಂದ್ರವನ್ನು ತೆರೆದರು. ಕೇವಲ ಒಂದು ತಂಡಕ್ಕೆ ಸೀಮಿತವಾಗಿರದೆ, ಯಾರು ಫಿಟ್ ಆಗಬೇಕೆಂದು ಬಯಸುತ್ತಾರೋ ಎಲ್ಲರಿಗೂ ತರಬೇತಿ ಕೊಡುವುದು ಅವರ ಉದ್ದೇಶವಾಗಿತ್ತು. ಅದರಂತೆ ಅವರು ಸಾಧಿಸಿ ತೋರಿಸಿದ್ರು. ಸದ್ಯ ಭಾರತದಲ್ಲಿರುವ ಸರ್ವಶ್ರೇಷ್ಠ ಫಿಟ್ನೆಸ್ ಕೋಚ್ ಎಂಬ ಹೆಗ್ಗಳಿಕೆ ಇವರ ಪಾಲಾಗಿದೆ. ಆರ್.ಎಕ್ಸಲ್ರೇಟ್ ಎಂಬ ಸ್ಟ್ರೆಂಥ್ ಎಂಡ್ ಕಂಡೀಷನಿಂಗ್​​ ಕಂಪನಿ ಶುರು ಮಾಡಿರುವ ಇವರು, ದೇಶದ ಅತ್ಯತ್ತಮ ಕ್ರೀಡಾಟುಗಳನ್ನು ತಯಾರು ಮಾಡುವ ಕೆಲಸದಲ್ಲಿ ತೊಡಗಿದ್ದು, ಇದರಲ್ಲಿ ಸಂಪೂರ್ಣ ಯಶಸ್ವಿ ಕಂಡಿದ್ದಾರೆ.

ಹತ್ತು ವರ್ಷದ ಹಿಂದೆ ತಿಂಗಳಿಗೆ 1,500 ರೂಪಾಯಿ ದುಡಿಯುತ್ತಿದ್ದ ರಾಜಮಣಿ ಇಂದು ತಿಂಗಳಿಗೆ ಒಂದುವರೆ ಲಕ್ಷಕ್ಕಿಂತ ಹೆಚ್ಚು ದುಡಿಯುತ್ತಿದ್ದಾರೆ. ಭಾರತದ ಅನೇಕ ಕ್ರೀಡಾಪಟುಗಳು ಫಿಟ್ನೆಸ್​ಗಾಗಿ ಇವರನ್ನೇ ಅವಲಂಬಿಸಿದ್ದು, ಪ್ರಭು ಮಾರ್ಗದರ್ಶನದಲ್ಲಿ ಬೆವರಿಳಿಸುತ್ತಿದ್ದಾರೆ. ಒಂದಲ್ಲ ಎರಡಲ್ಲ ಅನೇಕ ಕ್ರಿಕೆಟರ್ಸ್ ಮತ್ತು ಇನ್ನಿತರ ಕ್ರೀಡೆಯ ಆಟಗಾರರು ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಭಾಗವಹಿಸುವ ಎಲ್ಲ ಪ್ರಮುಖ ಕ್ರೀಡಾಪಟುಗಳು ಇವರ ಬಳಿ ತರಬೇತಿ ಪಡೆದಿದ್ದಾರೆ, ಪಡೆಯುತ್ತಿದ್ದಾರೆ. ಕರ್ನಾಟಕದ ಹಲವು ಆಟಗಾರರು ಸಹ ಇಲ್ಲಿಂದಲೇ ಫಿಟ್ನೆಸ್​​ ಕಾಯ್ದು ಕೊಂಡಿದ್ದುಂಟು. ಸದ್ಯ ರಣಜಿ ತಂಡದಲ್ಲಿ ಆಡಿದ ರಾಜ್ಯ ತಂಡದ ನಾಲ್ವರು ಆಟಗಾರರು ರಾಜಮಣಿ ಬಳಿ ಫಿಟ್ನೆಸ್ ತರಬೇತಿ ಪಡೆದವರು. ಕರುಣ್ ನಾಯರ್, ಅಭಿಮನ್ಯು ಮಿಥುನ್, ಸ್ಟುವರ್ಟ್ ಬಿನ್ನಿ ಮತ್ತು ರಾಬಿನ್ ಉತ್ತಪ್ಪ ಫಿಟ್ನೆಸ್​ನ ಗುಟ್ಟು ಇವರು. ಹೆಚ್ಚು ತೂಕದಿಂದ ಸೋಮಾರಿಗಳಾಗಿದ್ದ, ಸ್ಟುವರ್ಟ್ ಬಿನ್ನಿ, ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಫಿಟ್ ಆಗಲು ಇವರೇ ಕಾರಣ.

ಕಳೆದೆರಡು ವರ್ಷಗಳ ಹಿಂದೆ ರಾಬಿನ್ ಉತ್ತಪ್ಪ ಹೆಚ್ಚು ತೂಕದಿಂದ ಸಮಸ್ಯೆ ಅನುಭವಿಸುತ್ತಿದ್ರು. ಫೀಲ್ಡಿಂಗ್, ಫುಟ್ವರ್ಕ್ ಎಲ್ಲವೂ ಕಳಪೆಯಾಗಿತ್ತು. 10 ದಿನಗಳ ಕಾಲ ಚಿನ್ನಸ್ವಾಮಿ ಮೈದಾನದಲ್ಲೇ ರಾಜಮಣಿ ಸಲಹೆ ಮೆರೆಗೆ ವರ್ಕೌಟ್ ಮಾಡಿದ ರಾಬಿ, ಫುಲ್ ಪಿಟ್ ಎಂಡ್ ಫೈನ್ ಆದ್ರು. ತೂಕ ಕೂಡ ಇಳಿಸಿದ್ರು. ಉತ್ತಪ್ಪ ಫಿಟ್ನೆಸ್ ನೋಡಿ ಅವರ ಸಹಾಯ ಕೇಳಿದ ಸ್ಟುವರ್ಟ್ ಬಿನ್ನಿ ಕೂಡ ಈಗ ಅತ್ಯಂತ ಫಿಟ್ ಆಗಿದ್ದಾರೆ.

ಇನ್ನೂ ಟೀಮ್ ಇಂಡಿಯಾದ ಅತ್ಯಂತ ಸೋಮಾರಿ ಆಟಗಾರನೆಂದೆ ಖ್ಯಾತಿಗಳಿಸಿದವರು ಆರ್.ಅಶ್ವಿನ್. ಆದರೆ ಅಶ್ವಿನ್ ಕಳೆದೆರಡು ವರ್ಷದಿಂದ ತುಂಬಾ ಫಿಟ್ ಆಗಿದ್ದಾರೆ. ಜೊತೆಗೆ ಅವರು ಪಾದರಸದಂತೆ ಮೈದಾನದಲ್ಲಿ ಓಡಾಡುತ್ತಾರೆ. ಇದಕ್ಕೆಲ್ಲ ಕಾರಣವಾಗಿದ್ದು, ಫಿಟ್ನೆಸ್ ಗುರು ಪ್ರಭು. ವಿವಿಧ ರೀತಿಯ ವ್ಯಾಯಾಮ ಮಾಡಿಸುವ ಮೂಲಕ ಅಶ್ವಿನ್, ದಪ್ಪವಾಗಲು ಕಾರಣವಾಗಿದ್ದ, ಕೆಟ್ಟ ಕೊಲೆಸ್ಟ್ರಾಲ್ ಕರಗಿಸಿ, ಅವರು ಮೊದಲಿಗಿಂತ ಹೆಚ್ಚು ಸಕ್ರೀರಾಗಿರಲು ಸಹಾಯಕಾರಿಯಾದ್ರು. ಮುರಳಿ ವಿಜಯ್ ದಿನವೆಲ್ಲ ಟೆಸ್ಟ್ ಆಡಿದ್ರೂ ಫಿಟ್ ಆಗಿರಲು ಕಾರಣ ರಾಜಮಣಿ ಅವರ ಗರಡಿಯಲ್ಲಿ ವಿಜಯ್ ಪಡೆದಿರುವ ತರಬೇತಿ. ಆಟಗಾರರ ಸ್ಟ್ಯಾಮಿನ ಹೆಚ್ಚಿಸುವಂತಹ ವರ್ಕೌಟ್ ಮಾಡಿಸುತ್ತಾರೆ. ಅವರಾಟಕ್ಕೆ ಬೇಕಾದಂತೆ ಅವರ ದೇಹವನ್ನು ಬದಲಾಯಿಸಬಲ್ಲ ಚತುರ ರಾಜಮಣಿ. ಸದ್ಯ ಹೆಚ್ಚು ಸದೃಡವಾಗಿರುವ, ಮುರಳಿ ವಿಜಯ್ ಮೊದಲಿಗಿಂತ ಹೆಚ್ಚು ಸಕ್ರೀಯರಾಗಿದ್ದು, ಹೆಚ್ಚು ಗಮನವಿಟ್ಟು ಆಡುವಲ್ಲೂ ಯಶ ಕಂಡಿದ್ದಾರೆ..

ಸಬ್ರಮಣಿಯನ್ ಬದ್ರಿನಾಥ್ ಕಳೆದ 3-4 ವರ್ಷದಿಂದ ರಾಜಮಣಿಯವರ ಪಕ್ಕ ಶಿಷ್ಯರಾಗಿದ್ದಾರೆ. ಹಾಗಾಗಿ ಅವರು ಫಿಟ್ ಆಗಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾ ಆಟಗಾರ ಲಕ್ಮೀಪತಿ ಬಾಲಾಜಿ ಈಗಲೂ ಅಷ್ಟೊಂದು ಚೆಂದದ ಮೈಕಟ್ಟು ಹೊಂದಿರುವುದರ ಹಿಂದಿನ ಗುಟ್ಟು ರಾಜಮಣಿಯವರ ಶ್ರಮ.

ಸ್ಕ್ವಾಶ್​ನ ಅದ್ಭುತ ಆಟಗಾರ್ತಿ, ಕರ್ನಾಟಕ ಜೋಶ್ನಾ ಚಿನ್ನಪ್ಪ. ಜೋಶ್ನ ನೋಡಲು ಚೆನ್ನಾಗಿಯೇ ಇದ್ದರು, ಹೆಚ್ಚು ಕಾಲ ಆಡುವಷ್ಟು ಸ್ಟ್ಯಾಮಿನ ಅವರಿಗಿರಲಿಲ್ಲ. ಆರ್.ಎಕ್ಸೆಲರೇಟ್ ಸಂಸ್ಥೆಗೆ ಬಂದ ಮೇಲೆ ಅವರೂ ಸಂಪೂರ್ಣ ಬದಲಾಗಿದ್ದು, ಈಗ ಹೆಚ್ಚು ಸಮಯ ಆಡಿದ್ರೂ ಸುಸ್ತಾಗುವುದಿಲ್ಲವಂತೆ. ಮೊದಲಿಗಿಂತ ಹೆಚ್ಚು ಜೋಶ್ನಲ್ಲಿದ್ದಾರೆ ಜೋಶ್ನ..

ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ತಿರುಶಾ ಕಾಮಿನಿ ಕೂಡ ಸರಿಯಾಗಿ ಓಡಲಾಗದಷ್ಟು ದಪ್ಪವಾಗಿದ್ರು. ಆಗ ಅವರು ತಕ್ಷಣ ಬೇಟಿಯಾಗಿದ್ದು ರಾಜಮಣಿಯವರನ್ನು. ಎರಡು ವಾರಗಳ ಕಾಲ ಸಖತ್ ವರ್ಕೌಟ್ ಮಾಡಿದ ಕಾಮಿನಿ ಈಗ ಹೆಚ್ಚು ಸದೃಡರಾಗಿದ್ದಾರೆ. ಮೊದಲಿಗಿಂತ ಲವಲವಿಕೆಯಿಂದಿದ್ದಾರೆ..

ಒಟ್ಟು ಏಳು ಜನ ಟ್ರೈನರ್​ಗಳನ್ನು ತೆಗೆದುಕೊಂಡಿರುವ ರಾಜಮಣಿ 150ಕ್ಕೂ ಹೆಚ್ಚು ಪ್ರಮುಖ ಕ್ರೀಡಾಪಟುಗಳಿಗೆ ಫಿಟ್ನೆಸ್ ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡಿದ್ದಾರೆ. ಹಾಗೇ 5 ಸಾವಿರಕ್ಕಿಂತ ಹೆಚ್ಚು ಸಾಮಾನ್ಯ ಜನತೆಯನ್ನೂ ಸಧೃಡಗೊಳಿಸಿದ್ದಾರೆ. ಹಾಗಾಗಿ ವಿದೇಶಿ ಕ್ರೀಡಾಪಟುಗಳು ಇವರತ್ತ ಮುಖಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ಒಬ್ಬ ಕ್ರೀಡಾಪಟುವಿಗಿಂತ ಇಂದು ಫಿಟ್ನೆಸ್ ಕೋಚ್​ಗಳಿಗೆ ಹೆಚ್ಚು ಬೇಡಿಕೆಯಿದೆ. ಭಾರತ ಮತ್ತು ಬೇರೆ ದೇಶದ ಕ್ರೀಡಾಪಟುಗಳಿಗೆ ಹೋಲಿಸಿದ್ರೆ ಭಾರತೀಯರ ವೈಫಲ್ಯಕ್ಕೆ ಕಾರಣ ಅವರ ಫಿಟ್ನೆಸ್ ಮತ್ತು ಸ್ಟ್ರೆಂಥ್, ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಾಗಿ ರಾಜಮಣಿ ಪ್ರಭುರಂತಹ ಫಿಟ್ನೆಸ್ ಕೋಚ್​ಗಳು ಇಂದು ಕ್ರೀಡಾಪಟುಗಳು ಯಶಸ್ಸಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಭಾರತವನ್ನು ಮತ್ತಷ್ಟು ಸದೃಢಗೊಳಿಸಬೇಕೆಂಬುದು ಅವರ ನಿಲುವಾಗಿದೆ.