ಶಾಲೆ ಬಿಟ್ಟ ಮಕ್ಕಳ ಪಾಲಿಗೆ ಹೆಡ್​​ಮಾಸ್ಟರ್​​- ಹೆಚ್​​ಐವಿ ಪೀಡಿತರಿಗೂ ಮೊದಲ ಡಾಕ್ಟರ್​​..!

ಟೀಮ್​​ ವೈ.ಎಸ್​​.

0

ಬಾಲ್ಯ ಹಾಗೂ ಹರೆಯದಲ್ಲಿ ಸಂತೋಷ ಕಂಡವರಲ್ಲ Jenpu Rongmei. ಮದ್ಯ ವ್ಯಸನಿಯಾಗಿದ್ದ ತಂದೆ, ತಾಯಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ಹಣಕಾಸಿನ ಸಮಸ್ಯೆ ಹಾಗೂ ಸಹೋದರ ಡೇವಿಡ್ ಮಾದಕ ದ್ರವ್ಯ ಸೇವನೆಯಿಂದ ಸಾವನ್ನಪ್ಪಿದ ಕಾರಣ, Jenpu ಕಾಲೇಜು ಓದನ್ನು ಮಧ್ಯದಲ್ಲಿಯೇ ಬಿಡಬೇಕಾಯಿತು.

Jenpu ಅವರಿಗೆ ಸಾಧನೆ ಸುಲಭವಾಗಿರಲಿಲ್ಲ. ಆದರೆ ಸರಿಯಾದ ದಾರಿ ಆಯ್ಕೆ ಮಾಡಿಕೊಂಡಿದ್ದರಿಂದ ಇಂದು ನಾಯಕರಾಗಿ ಹೊರಹೊಮ್ಮಿದ್ದಾರೆ.

Jenpu ವಯಸ್ಸು ಈಗ 30 ವರ್ಷ. ಅವರು ಕಮ್ಯೂನಿಟಿ ಅವೆನ್ಯೂ ನೆಟ್ವರ್ಕ್ (CAN)ನ ಸ್ಥಾಪಕರಾಗಿದ್ದಾರೆ. CAN ಹುಟ್ಟಿಕೊಂಡಿದ್ದು ಭಾರತದ ಈಶಾನ್ಯ ಪ್ರದೇಶ ನಾಗಾಲ್ಯಾಂಡ್ ನ ದಿಮಾಪುರದಲ್ಲಿ. ಲಾಭೋದ್ದೇಶವಿಲ್ಲದೇ, ಯುವಕರ ನೇತೃತ್ವದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಎಚ್ಐವಿ / ಏಡ್ಸ್ ಪೀಡಿತ ಮಕ್ಕಳಿಗೆ ನೈತಿಕ ಬೆಂಬಲ ನೀಡುವುದರ ಜೊತೆಗೆ ಅವಶ್ಯವಿರುವ ವಸ್ತುಗಳನ್ನು ಒದಗಿಸುತ್ತದೆ. ಸದ್ಯ Jenpu ನಾಗಾಲೆಂಡ್ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

"ನನ್ನ ಹಿಂದಿನ ದಿನಗಳು ನನಗೆ ಪ್ರೇರಣೆಯಾಗಿವೆ. ನಾನು ಪಟ್ಟ ಕಷ್ಟ ಎಷ್ಟು ಎಂಬುದು ನನಗೆ ತಿಳಿದಿದೆ. ನನ್ನ ಸಹೋದರನನ್ನು ಕಳೆದುಕೊಂಡ ನಷ್ಟ ನನಗೆ ಗೊತ್ತು. ನನ್ನ ಹಾಗೇ ನೋವುಣ್ಣುತ್ತ, ಹೋರಾಡುತ್ತಿರುವ ಯುವಕರು ಬಹಳಷ್ಟು ಮಂದಿ. ನಾನು ಮುಂದುವರೆಯಲು ನನ್ನ ಭೂತ ಕಾಲವೇ ಪ್ರೇರಣೆ." ಎನ್ನುತ್ತಾರೆ Jenpu

ಕಮ್ಯೂನಿಟಿ ಅವೆನ್ಯೂ ನೆಟ್ವರ್ಕ್ (CAN)

ಸಿಎಎನ್ ಕಟ್ಟಲು ಮಾದಕ ಸೇವನೆ ಮಾಡುತ್ತಿದ್ದ ಸಹೋದರನ ನೋವು ಹಾಗೂ ಸಾವು ಕಾರಣವಾಯ್ತು. ಆಗ ತಾನೆ ಶಾಲೆ ಮುಗಿಸಿದ ಹುಡುಗರು ಡ್ರಗ್ಸ್​​ಗೆ ದಾಸರಾಗುತ್ತಿರುವುದನ್ನು ಅವರು ಗಮನಿಸಿದರು. ಸರ್ಕಾರವನ್ನು ತೆಗಳುವ ಬದಲು ತಾವೇನಾದರೂ ಮಾಡಬೇಕೆಂದು ಚಿಂತಿಸಿದರು. ಆಗ ಹುಟ್ಟಿಕೊಂಡಿದ್ದು ಸಿಎಎನ್.

ಸಂಸ್ಥೆ ಕಟ್ಟುವಾಗ ಇವರ ಬಳಿ ಹಣ ಇರಲಿಲ್ಲ.ಸಮಸ್ಯೆ ಉಲ್ಬಣಿಸುತ್ತಿರುವುದನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾದರು. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳು ಹತಾಶರಾಗುತ್ತಾರೆ. ಇದು ಮದ್ಯವ್ಯಸನ ಸೇರಿದಂತೆ ದುಷ್ಚಟಕ್ಕೆ ಅವರು ದಾಸರಾಗುವಂತೆ ಮಾಡುತ್ತದೆ. ಸ್ವಂತ Jenpu ಅವರೇ ಈ ಹತಾಶೆಯನ್ನು ಅನುಭವಿಸಿದ್ದರಿಂದ ಅವರು ಪ್ರಾರಂಭದಲ್ಲೇ ಎಳೆಯ ಮಕ್ಕಳು ಅದರಲ್ಲೂ ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶುರುಮಾಡಿದರು.

ಇನ್ನೊಂದು ಘಟನೆ ಅವರ ಕಣ್ಣು ತೆರೆಸಿತಂತೆ. "2011 ರಲ್ಲಿ ವಿಶ್ವ ಏಡ್ಸ್ ದಿನದಂದು ಕಾರ್ಯಕ್ರಮ ನಡೆಯುತ್ತಿತ್ತು. ಅನೇಕ ಜನರು,ಮಂತ್ರಿಗಳು, ವಿವಿಧ ಎನ್ ಜಿಓಗಳು ಅಲ್ಲಿಗೆ ಬಂದಿದ್ದವು. ಅವರಲ್ಲಿ ದಂಪತಿ, ಮಗುವನ್ನು ಕರೆದುಕೊಂಡು ಬಂದಿದ್ದರು. ಅವರು ಅಲ್ಲಿಗೆ ಬರಲು ಕಾರಣ ಏನು..? ಅವರು ಯಾಕೆ ತಳಮಳಗೊಂಡಿದ್ದಾರೆಂದು Jenpu ಕೇಳಿದರು. ಆಗ ದಂಪತಿಗೆ ಹೆಚ್ ಐವಿ ಇರುವುದು ತಿಳಿದುಬಂತು. ಶಿಕ್ಷಣ ನೀಡುವುದಿರಲಿ, ಅವರ ಬಳಿ ಔಷಧಿ ಪಡೆಯಲು ಹಣವಿರಲಿಲ್ಲ. ಹೀಗಾಗಿ ಸರ್ಕಾರ ನೀಡುವ ಎಆರ್ ಟಿ (Anti Reroviral Therapy) ಪಡೆಯಲು ಅವರು ಅಲ್ಲಿಗೆ ಬಂದಿರುವುದಾಗಿ ತಿಳಿದುಕೊಂಡರು. ಇದರಿಂದ ಮತ್ತಷ್ಟು ಎಚ್ಚೆತ್ತ Jenpu ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಪ್ರತಿಯೊಂದು ಮಗು ಗುಣಮಟ್ಟದ ಶಿಕ್ಷಣ ಪಡೆಯುವುದು ಅವಶ್ಯಕ ಎನ್ನುತ್ತಾರೆ Jenpu.

ಎಚ್ಐವಿ / ಏಡ್ಸ್ ಪೀಡಿತ ಮತ್ತು ಅನಾಥ ಮಕ್ಕಳಿಗೆ ಗೃಹಾಧಾರಿತ ರಕ್ಷಣೆ

Jenpu ಅನಾಥಾಶ್ರಮ ನಡೆಸುತ್ತಿಲ್ಲ. ಸಾಮಾನ್ಯವಾಗಿ ಕುಟುಂಬದಲ್ಲಿ ತಂದೆ ಅಥವಾ ತಾಯಿ ಸಾವನ್ನಪ್ಪಿರುತ್ತಾರೆ. ಕೆಲವೊಮ್ಮೆ ಇಬ್ಬರೂ ಸಾವನ್ನಪ್ಪಿರುತ್ತಾರೆ. ಕುಟುಂಬದ ಜನರಿಗೆ ಅವರದೇ ಸಮಸ್ಯೆ ಬೇಕಾದಷ್ಟಿರುತ್ತದೆ. ಹಾಗಾಗಿ ತಂದೆ, ತಾಯಿ ಇಲ್ಲದ ಮಕ್ಕಳನ್ನು ಅನಾಥಾಶ್ರಮಕ್ಕೆ ಬಿಡುತ್ತಾರೆ. ಮತ್ತೆ ಅವರನ್ನು ಎಂದೂ ಮನೆಗೆ ಕರೆಯಿಸಿಕೊಳ್ಳುವುದಿಲ್ಲ. ಅಂತವರಿಗೆ ನೆರವಾಗುವುದು Jenpu ಕೆಲಸ. ಮಕ್ಕಳನ್ನು ಅನಾಥಾಶ್ರಮದಲ್ಲಿ ಬಿಡದಂತೆ ಪಾಲಕರಿಗೆ ವಿನಂತಿ ಮಾಡಿಕೊಂಡು, ಆ ಮಕ್ಕಳಿಗೆ ಶಿಕ್ಷಣ, ಪೌಷ್ಟಿಕ ಆಹಾರ, ತಿಂಗಳಿಗೆ ಅವಶ್ಯವಿರುವ ಹಣ ನೀಡಿ, ಆ ಮಕ್ಕಳನ್ನು ನೋಡಿಕೊಳ್ಳುತ್ತಾರೆ Jenpu. 2012 ರಲ್ಲಿ 9 ಮಕ್ಕಳನ್ನು ನೋಡಿಕೊಳ್ಳಲು ಆರಂಭಿಸಿದ ಅವರು ಈಗ 25 ಮಕ್ಕಳು ನೋಡಿಕೊಳ್ಳುತ್ತಿದ್ದಾರೆ.

ಶಾಲೆ ಬಿಟ್ಟವರಿಗೆ ವೃತ್ತಿಪರ ತರಬೇತಿ

ದಿಮಾಪುರದ ಕೆಲವು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ, ಶಾಲೆಯನ್ನು ಅರ್ಧಕ್ಕೆ ಬಿಟ್ಟವರಿಗೆ ತರಬೇತಿ ನೀಡುವಂತೆ Jenpu ವಿನಂತಿಸಿಕೊಂಡರಂತೆ. ಸಂಸ್ಥೆಗಳಿಗೆ ಮಕ್ಕಳ ಸ್ಥಿತಿ ಬಗ್ಗೆಯೂ ವಿವರಿಸಿದರಂತೆ. ಆದರೆ ಮೊದಲು ತರಬೇತಿ ನೀಡಲು ಸಂಸ್ಥೆಗಳು ಒಪ್ಪಲಿಲ್ಲ. ಸತತ ಪ್ರಯತ್ನದ ನಂತರ ಫಲ ಸಿಕ್ಕಿತು.

ಸವಾಲುಗಳು

ಈ ಕಾರ್ಯ ಮಾಡುವ ವೇಳೆ ಸಾಕಷ್ಟು ಸವಾಲುಗಳು ಎದುರಾದವು. ಸುಮಾರು 40ಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿ ಮಕ್ಕಳಿಗೆ ಸಹಾಯ ಮಾಡುವಂತೆ ಅವರು ಮನವಿ ಮಾಡಿಕೊಂಡರು. ಅದರಲ್ಲಿ ಕೇವಲ 3-4 ಮಂದಿ ಮಾತ್ರ ಸಹಾಯ ಹಸ್ತ ಚಾಚಿದ್ದರು. ಇವರ ಕಾರ್ಯಕ್ಕೆ ಸಮಾಜದಿಂದ ಹೃದಯಪೂರ್ವಕ ಬೆಂಬಲ ಸಿಕ್ಕಿರಲಿಲ್ಲ. ಇವರು ಎದೆಗುಂದಲಿಲ್ಲ. ಸವಾಲಾಗಿ ಸ್ವೀಕರಿಸಿದರು. ಯಾವುದನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೆ, ಕಾರ್ಯಸಾಧನೆಗಿಳಿದರು.

ತಮ್ಮ ಸಂಸ್ಥೆಯಲ್ಲಿ ಹೆಚ್ಚೆಚ್ಚು ಜನ ತೊಡಗಿಸಿಕೊಳ್ಳಬೇಕೆಂಬ ಆಶಯವನ್ನು ಇವರು ಹೊಂದಿದ್ದರು. ಒಂದೇ ದ್ಯೇಯ ಹೊಂದಿರುವ ಅನೇಕ ಎನ್ ಜಿಓಗಳನ್ನು ಒಟ್ಟುಗೂಡಿಸಿದರು. ಈ ಹಂತದಲ್ಲಿ ಸರ್ಕಾರದಿಂದ ಯಾವುದೇ ಬೆಂಬಲ ಸಿಗಲಿಲ್ಲ.

ಜನರು ನಿರುದ್ಯೋಗಿ ಯುವಕರು, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅರ್ಧಕ್ಕೆ ಶಾಲೆ ಬಿಟ್ಟ ಯುವಕರ ಬಗ್ಗೆ ಮಾತನಾಡುವುದಿಲ್ಲ. ನಾಗಾಲ್ಯಾಂಡ್ ಒಂದು ಬಂಡಾಯಗಾರರ ರಾಜ್ಯವಾಗಿದೆ. ಹತಾಶೆ ಮತ್ತು ಕಡಿಮೆ ಸಾಕ್ಷರತೆ ಇಲ್ಲಿನವರು ಸಮಾಜ ವಿರೋಧಿ ಚಟುವಟಿಕೆಯಲ್ಲಿ ಪಾಲುದಾರರಾಗಲು ಕಾರಣವಾಗಿದೆ.ಯುವಕರು ಅವರ ಇಚ್ಛೆಯಿಂದ ಶಾಲೆ ಬಿಡುತ್ತಿಲ್ಲ.ಅವರ ಪರಿಸ್ಥಿತಿ ಹಾಗೆ ಮಾಡಿಸುತ್ತದೆ ಎನ್ನುತ್ತಾರೆ Jenpu.

ದೊಡ್ಡ ಕನಸು

ಸಮಾಜದಲ್ಲಿ ಎಲ್ಲ ವರ್ಗದ ಜನರಿಗೆ ಶಿಕ್ಷಣ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದು ಪ್ರಾಥಮಿಕ ಗುರಿಯಾಗಿದೆ. ಶಾಲೆ ಬಿಟ್ಟವರು, ಅನಾಥ ಮಕ್ಕಳು ಮತ್ತು ಎಚ್ಐವಿ / ಏಡ್ಸ್ ಪೀಡಿತರಿಗೂ ಸಮಾನ ಅವಕಾಶ ಸಿಗಬೇಕು. ಅವರನ್ನು ಸಮಾಜ ಸ್ವೀಕರಿಸಬೇಕು. ಆಗ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ Jenpu.

ಕನಸು ನನಸಾಗುತ್ತಾ?

ಇದು ಸುಲಭವಲ್ಲ. ಮೊದಲೇ ಋಣಾತ್ಮಕವಾಗಿ ಯೋಚಿಸಿದರೆ,ಮುಂದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾನು ಅತ್ಯತ್ತಮವಾದದ್ದನ್ನು ನೀಡುತ್ತಿದ್ದೇನೆ ಶಿಕ್ಷಣ ನೀಡುವ ವಿಷಯದಲ್ಲಿ ಎಲ್ಲ ವರ್ಗದ ಜನರು ಒಂದಾಗುತ್ತಿರುವುದು ನನಗೆ ಸಂತೋಷ ತಂದಿದೆ ಎನ್ನುತ್ತಾ ಮಾತು ಮುಗಿಸುತ್ತಾರೆ Jenpu.

Related Stories

Stories by YourStory Kannada