ಕತ್ತಲಿನಿಂದ ಬೆಳಕಿನೆಡೆಗೆ- ವೇಶ್ಯಾವೃತ್ತಿಯಲ್ಲಿದ್ದವರಿಗೆ ಹೊಸ, ಗೌರವಯುತ ಜೀವನ

ಟೀಮ್​ ವೈ.ಎಸ್​​.ಕನ್ನಡ

0

32 ವರ್ಷದ ಜಯೀತಾ (ಹೆಸರು ಬದಲಿಸಲಾಗಿದೆ) ಕಳೆದ 7 ವರ್ಷಗಳಿಂದ ಕೊಲ್ಕತ್ತಾದ ಮುನೀಶ್‍ಗಂಜ್‍ನ ವೇಶ್ಯಾಗೃಹ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಹೇಗಾದ್ರೂ ಮಾಡಿ ತನ್ನ ಈ ವೃತ್ತಿಯನ್ನು ಬಿಡಲೇಬೇಕೆಂದು ನಿರ್ಧರಿಸಿ 2012ರಲ್ಲಿ ಡಿವೈನ್ ಸ್ಕ್ರಿಪ್ಟ್​​​ಅನ್ನು ಸೇರಿಕೊಂಡರು. ತನ್ನ ಈ ಹೊಸ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು, ಅತಿ ಕಡಿಮೆ ಸಮಯದಲ್ಲೇ ವೃತ್ತಿಯ ತಂತ್ರಗಳನ್ನು ಕಲಿತುಕೊಂಡರು. ಸುಮಾರು ಒಂದೂವರೆ ವರ್ಷ ಅಲ್ಲಿ ಕೆಲಸ ಮಾಡಿದ ಬಳಿಕ, ಅವರು ಲೆದರ್ ಕಾರ್ಖಾನೆಯಲ್ಲಿ ಪೂರ್ಣಾವಧಿ ಉದ್ಯೋಗಿಯಾಗಿ, ಹೆಚ್ಚು ಸಂಬಳದ ಕೆಲಸಕ್ಕೆ ಸೇರಿಕೊಂಡರು. ಈಗ ಅವರು ವೇಶ್ಯಾವೃತ್ತಿಯಲ್ಲಿಲ್ಲ, ಬದಲಿಗೆ ಎಲ್ಲರಂತೆ ಸಮಾಜದಲ್ಲಿ ಗೌರವಯುತ ಜೀವನ ಸಾಗಿಸುತ್ತಿದ್ದಾರೆ.

ಜಯೀತಾ ಅವರಂತೆಯೇ 28 ವರ್ಷದ ಫರ್ಜಾನಾ (ಹೆಸರು ಬದಲಿಸಲಾಗಿದೆ) ಕೂಡ ಸುಮಾರು 12 ವರ್ಷಗಳ ಕಾಲ ಮುನೀಶ್‍ಗಂಜ್‍ನಲ್ಲೇ ವೇಶ್ಯಾವೃತ್ತಿಯಲ್ಲಿ ತೊಡಗಿದ್ದರು. ಆದ್ರೆ ಅವರ ಹಿತೈಷಿಯೊಬ್ಬರು 2013ರ ಜನವರಿಯಲ್ಲಿ ಅವರನ್ನು ಡಿವೈನ್ ಸ್ಕ್ರಿಪ್ಟ್​​ಗೆ ಕಳುಹಿಸಿಕೊಟ್ಟರು. ಕಳೆದ ಮಾರ್ಚ್‍ನಲ್ಲಿ ಅವರಿಗೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಸಿಕ್ತು. ಕ್ರಮೇಣ ಅದನ್ನೇ ಪೂರ್ಣಾವಧಿ ವೃತ್ತಿ ಮಾಡಿಕೊಂಡ್ರು. ಈಗ ಫರ್ಜಾನಾ ಮೊದಲಿಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಕಳೆದುಹೋದ ಜೀವನದ ಚಿಂತೆ ಬಿಟ್ಟು ಈಗ ಅವರು ಹೊಸ ನಗುವಿನೊಂದಿಗೆ ಹೊಸ ಜೀವನ ಸಾಗಿಸುತ್ತಿದ್ದಾರೆ.

ಹೇಗೆ ಸಾಧ್ಯವಾಯ್ತು ಈ ಬದಲಾವಣೆ?

ಜಯೀತಾ ಮತ್ತು ಫರ್ಜಾನಾ ಅವರಂತೆಯೇ ಕೊಲ್ಕತ್ತಾದ ಖಿದ್ದಿರ್‍ಪುರದ ಮಾಂಸದ ಅಡ್ಡೆಗಳಲ್ಲಿ ಜೀವನ ಸವೆಸುತ್ತಿದ್ದ ಹಲವಾರು ಮಹಿಳೆಯರು ಇದೇ ಡಿವೈನ್ ಸ್ಕ್ರಿಪ್ಟ್ ಸೇರಿಕೊಂಡು ಬದುಕು ಬದಲಿಸಿಕೊಂಡಿದ್ದಾರೆ. ಈ ಡಿವೈನ್ ಸ್ಕ್ರಿಪ್ಟ್ ಸೊಸೈಟಿಯನ್ನು ಪ್ರಾರಂಭಿಸಿದ್ದು ಮಹುವಾ ಸುರ್ ರೇ. ಅನಾಥ ಅಥವಾ ಹಕ್ಕುಗಳಿಂದ ವಂಚಿತರಾದ, ತುಡಿತಕ್ಕೊಳಗಾದ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಹಾಗೂ ವೇಶ್ಯಾ ವೃತ್ತಿಯಲ್ಲಿ ಸಿಲುಕಿಕೊಂಡು ನಲುಗುತ್ತಿರುವ ಹೆಣ್ಣುಮಕ್ಕಳ ಅಭಿವೃದ್ಧಿಗಾಗಿ ಈ ಸಂಸ್ಥೆ ಶ್ರಮಿಸುತ್ತಿದೆ.

ಮಹುವಾ ತಮ್ಮ ವೃತ್ತಿ ಜೀವನದಲ್ಲಿರುವಾಗಲೂ, ವೇಶ್ಯಾವಾಟಿಕೆ ಸಂತ್ರಸ್ತ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ, ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಹಲವು ಕೆಲಸಗಳನ್ನು ಮಾಡಿದ್ದರು. ‘ಡಿವೈನ್ ಸ್ಕ್ರಿಪ್ಟ್ ಸೊಸೈಟಿ ಪ್ರಾರಂಭಿಸುವುದಕ್ಕಿಂತಲೂ ಮೊದಲೇ, ನಾನು ನನ್ನ ವೃತ್ತಿಜೀವನದಲ್ಲಿ ತೊಡಗಿರುವಾಗ, ಯಾವುದೇ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಎರಡು ಮೂಲಭೂತ ಪದಾರ್ಥಗಳು ಇರಲೇಬೇಕು ಅಂತ ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಅದೇನೆಂದ್ರೆ ಪರಿಣಾಮಶಾಲಿ ಹಾಗೂ ಸಂರಕ್ಷಣೆ. ನಾನು ಎನ್‍ಜಿಒ ಒಂದರ ಉಪ ನಿರ್ದೇಶಕಿಯಾಗಿದ್ದಾಗಲೂ, ವೇಶ್ಯಾವಾಟಿಕೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅನುಸರಿಸುತ್ತಿದ್ದ ವಿಧಾನಗಳು ಸರಿಯಿರಲಿಲ್ಲ ಅನ್ನಿಸುತ್ತಿತ್ತು. ಇದೇ ಕಾರಣಕ್ಕೆ ನಾನು ಅವರ ನೋವನ್ನೂ ಕಡಿಮೆ ಮಾಡುವ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಅವರಿಗೆ ಸಹಾಯವಾಗಬಲ್ಲ ಹೊಸ ರೀತಿಯ ವಿಧಾನಗಳನ್ನು ಯೋಚಿಸಿದೆ. ಅದೇ ರೀತಿ ಖಿದಿರ್‍ಪುರದ ವೇಶ್ಯಾಗೃಹಗಳಿಂದ ರಕ್ಷಿಸಲ್ಪಟ್ಟ ಹೆಣ್ಣಮಕ್ಕಳು ಹಾಗೂ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಲು ಮುಂದಾದೆ’ ಅಂತಾರೆ ಮಹುವಾ.

ಕೇವಲ ಈ ಕ್ರಮಗಳಿಂದ ಮಹಿಳೆಯರನ್ನು ವೇಶ್ಯಾ ಅಡ್ಡೆಗಳಿಂದ ರಕ್ಷಿಸಿ, ಅವರ ಜೀವನ ರೂಪಿಸಲು ಸಾಧ್ಯವಿಲ್ಲ ಅಂತ ಮಹುವಾ ನಿರ್ಧರಿಸಿದ್ರು. ಅವರು ಆರ್ಥಿಕವಾಗಿ ಸ್ವತಂತ್ರರಾಗಬೇಕು ಅಂದ್ರೆ ಪರ್ಯಾಯ ಜೀವನೋಪಾಯದ ಮೂಲಗಳನ್ನು ಹುಡುಕಬೇಕಿತ್ತು. ‘ನಾವು 2011ರಲ್ಲೇ ಈ ಸಂಸ್ಥೆಯನ್ನು ಪ್ರಾರಂಭಿಸಿದೆವು. ಆಗ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರಿಗೆ ಜನಿಸಿದ್ದ ಹೆಣ್ಣು ಮಕ್ಕಳ ಹಾಸ್ಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದೆವು. ಈ ಮಕ್ಕಳು ತಮ್ಮ ತಾಯಿಯರೊಂದಿಗೆ, ಅದೇ ಮನೆಯಲ್ಲಿ ವಾಸವಿದ್ದ ಕಾರಣ, ಅವರೂ ಮಾಂಸದ ದಂಧೆಗೆ ತಳ್ಳಲ್ಪಡುವ ಆತಂಕ ಹೆಚ್ಚು. ಹೀಗಾಗಿಯೇ ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೆವು. ಕ್ರಮೇಣ ಸೈಕಲ್ ಟೈರ್ ಮತ್ತು ಟ್ಯೂಬ್‍ಗಳಿಂದ ವಿವಿಧ ರೀತಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ತಯ್ಯಾರಿಸುವ ಒಂದು ಸಣ್ಣ ಉತ್ಪಾದನಾ ಘಟಕ ಚಾಲನೆ ಶುರು ಮಾಡಿದೆವು. ಇವುಗಳನ್ನು ಬೇರೆ ಕಡೆಗಳಿಗೆ ರಫ್ತು ಮಾಡಿ, ಅದರಿಂದ ಬರುವ ಹಣದ ಮೂಲಕ ಹಾಸ್ಟೆಲ್‍ಅನ್ನು ನಡೆಸುತ್ತಿದ್ದೆವು’ ಅಂತ ಡಿವೈನ್ ಸ್ಕ್ರಿಪ್ಟ್ ಕುರಿತು ಹೇಳಿಕೊಳ್ಳುತ್ತಾರೆ ಮಹುವಾ.

ಸುರಕ್ಷತೆ ಮೊದಲು

ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದು, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಲೈಂಗಿಕ ಆರೋಗ್ಯ, ಮಕ್ಕಳ ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಕೆಲಸ ಮಾಡಿ, ಅನುಭವ ಪಡೆದಿದ್ದ ಮಹುವಾ, 18 ವರ್ಷ ಮೇಲ್ಪಟ್ಟ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಸ್ತ್ರೀಯರ ಹೆಣ್ಣುಮಕ್ಕಳಿಗೆ ಸುರಕ್ಷಿತ ಆಶ್ರಯ ನೀಡಲು ದೃಢ ನಿರ್ಧಾರ ಮಾಡಿದ್ದರು. ‘ಸಾಮಾನ್ಯವಾಗಿ ಇಂತಹ ಹೆಣ್ಣು ಮಕ್ಕಳು ತಮ್ಮ ತಾಯಿಯೊಂದಿಗೆ ರಾತ್ರಿ ಹೊತ್ತು ಮನೆಯಲ್ಲೇ ಇರ್ತಾರೆ. ಹೀಗಾಗಿಯೇ ಇವರ ಮೇಲೂ ದುಷ್ಟರ ಕಣ್ಣು ಬಿದ್ದಿರುತ್ತೆ. ಅದರಿಂದ ಈ ಬಾಲಕಿಯರನ್ನು ರಕ್ಷಿಸುವುದೇ ನಮ್ಮ ಪ್ರಮುಖ ಉದ್ದೇಶ. ಹೀಗಾಗಿಯೇ ನಮ್ಮ ಡಿವೈನ್ ಸ್ಕ್ರಿಪ್ಟ್​​ನ ಕೆಲ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ಈ ಹೆಣ್ಣುಮಕ್ಕಳನ್ನು ವಸತಿ ಸಹಿತ ಶಾಲೆಗಳಿಗೆ ಸೇರಿಸಿ ಅಲ್ಲಿಯೇ ಉತ್ತಮ ಶಿಕ್ಷಣ ಹಾಗೂ ಆರೋಗ್ಯಯುತ ಆಹಾರವನ್ನು ಒದಗಿಸೋದರ ಜೊತೆಗೆ ಅವರು 18 ವರ್ಷ ಪೂರೈಸುವವರೆಗೂ ಇಂತಹ ಒಳ್ಳೆಯ ಪರಿಸರದಲ್ಲೇ ನೋಡಿಕೊಳ್ಳಲಾಗುತ್ತದೆ. ಒಮ್ಮೆ ಅವರು ಆ ಶಾಲೆಯಿಂದ ಶಿಕ್ಷಣ ಪಡೆದು ಹೊರಬರುತ್ತಿದ್ದಂತೆಯೇ ಮುಖ್ಯವಾಹಿನಿಯಲ್ಲಿ ಕೆಲಸ ಕೊಡಿಸಲಾಗುತ್ತದೆ. ಆ ಮೂಲಕ ಆ ಯುವಕ/ ಯುವತಿ ತನ್ನ ತಾಯಿಯನ್ನು ವೇಶ್ಯಾಗೃಹವನ್ನು ಬಿಡಿಸಿ, ತಮ್ಮೊಂದಿಗೆ ಕರೆದುಕೊಂಡು ಹೋಗಿ ಸಮಾಜದಲ್ಲಿ ಗೌರವಯುತವಾಗಿ ಜೀವನ ಸಾಗಿಸಬಹುದು. ಜೊತೆಗೆ ವೇಶ್ಯಾವಾಟಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಅಭಿವೃದ್ಧಿಗಾಗಿ, ನಮ್ಮ ಸಂಸ್ಥೆಯ ಅಡಿಯಲ್ಲೇ ಒಂದು ಉತ್ಪಾದನಾ ಘಟಕವನ್ನೂ ನಡೆಸುತ್ತಿದ್ದೇವೆ.’ ಅಂತ ಡಿವೈನ್ ಸ್ಕ್ರಿಪ್ಟ್ ಕೆಲಸಗಳ ಕುರಿತು ಮಾಹಿತಿ ನೀಡ್ತಾರೆ ಮಹುವಾ.

ರೆಡ್ ಲೈಟ್ ಏರಿಯಾಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸುವತ್ತ ಮಹುವಾ ಹೆಚ್ಚು ಗಮನ ಹರಿಸುತ್ತಾರೆ. ನಮ್ಮೊಂದಿಗೆ ಸೇರಿ ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ಮಹಿಳೆಯರು ರಾತ್ರೋರಾತ್ರಿ ತಮ್ಮ ವೃತ್ತಿಯನ್ನು ತೊರೆದು ಬೇರೆ ಕೆಲಸಕ್ಕೆ ಸೇರ್ತಾರೆ ಅಂತಲ್ಲ. ಆದ್ರೆ ನಮ್ಮ ಉತ್ಪಾದನಾ ಘಟಕದಲ್ಲಿ ಅವರಿಗೆ ಬೇರೆ ಮಹಿಳೆಯರು ಪರಿಚಯವಾಗುತ್ತೆ. ಆ ಮೂಲಕ ಹೊರ ಪ್ರಪಂಚದ ಬಗ್ಗೆ ಅರಿವು ಮೂಡುತ್ತೆ. ಹೀಗೆ ಕ್ರಮೇಣ ಅವರೂ ವೇಶ್ಯಾವೃತ್ತಿಯನ್ನು ತೊರೆದು ಬೇರೆಡೆ ಕೆಲಸಗಳಿಗೆ ಸೇರಿಕೊಳ್ಳುತ್ತಾರೆ. ಅಲ್ಲದೇ ಅವರಲ್ಲಿ ಕೆಲ ತರಬೇತಿಗಳ ಮೂಲಕ ಆತ್ಮವಿಶ್ವಾಸ ತುಂಬಲಾಗುತ್ತದೆ. ಸದ್ಯ ನಾವು ಉತ್ಪಾದಿಸುವ ವಸ್ತುಗಳನ್ನು ರಫ್ತು ಮಾಡಲಾಗುತ್ತಿದೆ. ಜೊತೆಗೆ ಅಮೇಜಾನ್.ಇನ್ ಹಾಗೂ ಪೇಟಿಎಮ್ ಮೂಲಕವೂ ಮಾರಾಟ ಮಾಡಲಾಗುತ್ತಿದೆ. ಆದ್ರೆ ಇನ್ನೂ ಬೇರೆ ಬೇರೆ ದೇಶಗಳಲ್ಲಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ಮಹಿಳೆಯರಿಗೆ ಜೀವನ ಕಲ್ಪಿಸುವ ಆಶಯ ನಮ್ಮದು’ ಅಂತ ಹೇಳ್ತಾರೆ ಮಹುವಾ.

ಮಹಿಳಾ ಸಬಲೀಕರಣ

ಡಿವೈನ್ ಸ್ಕ್ರಿಪ್ಟ್ ಸೇರಿಕೊಂಡ ಬಳಿಕ ಖಿದಿರ್‍ಪುರದ ರೆಡ್‍ಲೈಟ್ ಏರಿಯಾದಲ್ಲಿ ಮಾಂಸದ ದಂಧೆಯಲ್ಲಿ ತೊಡಗಿದ್ದ ಮಹಿಳೆಯರ ಜೀವನ ಸಂಪೂರ್ಣ ಬದಲಾಗಿದೆ. ಮಹುವಾ ಕೂಡ ಆ ಮಹಿಳೆಯರ ಜೀವನದ ದಿಶೆಯನ್ನು ಬದಲಿಸಲು ಹಾಗೂ ಅವರನ್ನು ಕತ್ತಲಿಂದ ಬೆಳಕಿನೆಡೆಗೆ ಕರೆತರಲು ಹಗಲು ಇರುಳೆನ್ನದೆ ಶ್ರಮಿಸುತ್ತಿದ್ದಾರೆ. ‘ಈ ರೀತಿ ನಾವು ಕಳೆದ 4 ವರ್ಷಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ 14 ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದ್ದೇವೆ. ವಿವಿಧ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ 11 ಮಕ್ಕಳಿಗೆ ನೆಲೆ ಒದಗಿಸಿದ್ದೇವೆ. ಸದ್ಯ ನಮ್ಮ ಉತ್ಪಾದನಾ ಘಟಕದಲ್ಲೂ 32ರಿಂದ 35 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.’ ಅಂತ ಡಿವೈನ್ ಸ್ಕ್ರಿಪ್ಟ್ ಕೆಲಸಗಳು ಹೇಳಿಕೊಳ್ಳುತ್ತಾರೆ ಮಹುವಾ.

ಲೇಖಕರು: ಬೈಶಾಲಿ ಮುಖರ್ಜಿ
ಅನುವಾದಕರು: ವಿಶಾಂತ್​​​