"ಸ್ವಚ್ಛಗೃಹ"ದಲ್ಲಿದೆ ಕಸದಿಂದ ರಸ ಮಾಡಿಕೊಳ್ಳುವ ಪಾಠ..!

ಟೀಮ್​ ವೈ.ಎಸ್​. ಕನ್ನಡ

"ಸ್ವಚ್ಛಗೃಹ"ದಲ್ಲಿದೆ ಕಸದಿಂದ ರಸ ಮಾಡಿಕೊಳ್ಳುವ ಪಾಠ..!

Thursday May 18, 2017,

3 min Read

ಮನಸ್ಸಿದ್ದರೆ ಮಾರ್ಗ, ಉಪಾಯವಿದ್ದರೆ ಎಲ್ಲವೂ ಉಪಯೋಗಕ್ಕೆ ಬರುತ್ತದೆ. ನಮ್ಮ ಜನರು ಕಸದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಆದ್ರೆ ಕಸದಿಂದಲೇ ಸಾಕಷ್ಟು ಉಪಯೋಗವಿದೆ ಅನ್ನುವುದನ್ನು ಮರೆತು ಬಿಟ್ಟಿದ್ದಾರೆ. ಕಸವನ್ನು ಸಮಸ್ಯೆಯಾಗಿ ಕಾಣುತ್ತಿದ್ದಾರೆ. ಅದರಿಂದ ಉಪಯೋಗವಾಗುವ ಅಂಶಗಳನ್ನು ಮರೆತು ಬಿಟ್ಟಿದ್ದಾರೆ. ಹೀಗಾಗಿ ಕಸ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತದಲ್ಲಿ ಪ್ರತಿದಿನ ಸರಿಸುಮಾರು 3 ಮಿಲಿಯನ್​​ಗಿಂತಲೂ ಹೆಚ್ಚು ಕಸದ ಉತ್ಪತ್ತಿಯಾಗುತ್ತದೆ. ಆದ್ರೆ ಅವುಗಳ ಮರುಬಳಕೆ ಹಾಗೂ ತ್ಯಾಜ್ಯ ವಿಲೇವಾರಿ ಮಾತ್ರ ಸರಿಯಾಗಿ ನಡೆಯುತ್ತಿಲ್ಲ.

image


ಬೆಂಗಳೂರಿನಲ್ಲಂತೂ ಕಸದ್ದೇ ದೊಡ್ಡ ಸಮಸ್ಯೆ. ಗಾರ್ಡನ್ ಸಿಟಿ ಗಾರ್ಬೆಜ್ ಸಿಟಿಯಾಗಿದೆ.. ಎಲ್ಲಿ ನೋಡಿದ್ರು ಬರೀ ಕಸ, ಕಸ ! .. ಈ ಕಸಕ್ಕೆ ಮುಕ್ತಿ ನೀಡಬೇಕು ಎಂದು ಬಿಬಿಎಂಪಿ ಹಸಿಕಸ, ಒಣಕಸ ವಿಂಗಡಣೆ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡ್ತಾನೆ ಇದೆ.. ಆದ್ರೆ ಜನರು ಮಾತ್ರ ಆ ಬಗ್ಗೆ ತಲೆ ಕೇಡಿಸಿ ಕೊಂಡಿಲ್ಲ… ಆದ್ರೆ ಇಲ್ಲೊಂದು ಎನ್ ಜಿ ಒ ಇದೆ, ಅದ್ರ ಹೆಸರು ಸ್ವಚ್ಛ ಗೃಹ.ಕಾಮ್, ಇಲ್ಲಿ ಕಸವನ್ನು ರಸವಾಗಿಸೋದು ಹೇಗೆ ಅಂತ ಹೇಳಿಕೊಡ್ತಾರೆ.

" ಬೆಂಗಳೂರಿನಲ್ಲಿ ಈಗಾಗಲೇ ಕಸ ವಿಂಗಡಣಾ ಕಾರ್ಯ ನಡೆಯುತ್ತಿದೆ. ಆದ್ರೆ ಬಿಬಿಎಂಪಿ ಜನರಿಂದ ಕಸವನ್ನು ವಿಂಗಡಿಸಿ ಪಡೆದುಕೊಂಡರೂ, ಕೊನೆಯಲ್ಲಿ ಎಲ್ಲವೂ ಜೊತೆಯಾಗಿರುತ್ತದೆ. ಸ್ವಚ್ಛಗೃಹ ಮನೆಯಲ್ಲೇ ಕಾಂಪೋಸ್ಟ್​ ತಯಾರಿಸಿ, ಅದರ ಉಪಯೋಗವನ್ನು ಪಡೆದುಕೊಳ್ಳುವಂತೆ ಜನರಿಗೆ ತಿಳಿಸಿಕೊಡುತ್ತದೆ. "
- ಲತಾ ಮುನರೇಟಿ, ಸ್ವಚ್ಛಗೃಹ ಸ್ವಯಂಸೇವಕಿ

ಪ್ರತಿನಿತ್ಯ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನ ಉಪಯೋಗಿಸಿ ಟೆರೇಸ್ ನಲ್ಲಿ ಹೇಗೆ ತರಕಾರಿಗಳನ್ನ ಬೆಳೆಯಬಹುದು ಎಂಬುದರ ಬಗ್ಗೆ ಸ್ವಚ್ಛ ಗೃಹ.ಕಾಮ್ ಮಾಹಿತಿ ನೀಡುತ್ತದೆ. ಹೌದು, ಆಕಾಶದಲ್ಲಿ ಮನೆಮಾಡಿಕೊಂಡಿರುವ ಬೆಂಗಳೂರಿಗರಿಗೆ ಗಾರ್ಡನಿಂಗ್ ಅಂದ್ರೆ ಟೆರೇಸ್ ಗಾರ್ಡನಿಂಗ್ ಮಾತ್ರ ಗೊತ್ತು. ಆ ಚಿಕ್ಕ ಜಾಗದಲ್ಲಿ ಮನೆಗೆ ಬೇಕಾದ ತರಕಾರಿ, ಪೂಜೆಗೆ ಹೂವು, ಕಡಿಮೆ ಮಣ್ಣಲ್ಲಿ ಬೆಳೆಯುವ ಹಣ್ಣುಗಳನ್ನು ಬೆಳೆಯುವುದು ಹೆಚ್ಚಾಗ್ತಿದೆ. ತರಕಾರಿ ಬೀಜ, ಹೂವಿನ ಗಿಡ ತಂದು ನೆಡುವುದು ಒಂದು ಹಂತ ಆದ್ರೆ, ಅದಕ್ಕೆ ಬೇಕಾದ ಗೊಬ್ಬರ ಹಾಕಿ ಆರೈಕೆ ಮಾಡೋದು ಇನ್ನೊಂದು ಹಂತ. ಗೊಬ್ಬರಕ್ಕೆ ಹೊರಗೆಲ್ಲೂ ಹೋಗಬೇಕಾಗಿಲ್ಲ. ಮನೆಯಲ್ಲಿಯ ತರಕಾರಿ ಸಿಪ್ಪೆ, ಹಾಳಾದ ತರಕಾರಿ, ಉಳಿದ ಹಾಳಾದ ಆಹಾರ ಪದಾರ್ಥಗಳು, ಹೀಗೆ ಮಣ್ಣಲ್ಲಿ ಕರಗುವ ಎಲ್ಲವನ್ನೂ ಗೊಬ್ಬರವಾಗಿ ಪರಿವರ್ತಿಸಿದ್ರೆ ಆಯ್ತು, ಗಿಡಕ್ಕೆ ಗೊಬ್ಬರ, ಮನೆಯ ಕಸದಿಂದ ಮುಕ್ತಿ ಸಿಗುವುದು ಗ್ಯಾರೆಂಟಿ.

ವಿವಿಧ ಕಾನ್ಸೆಪ್ಟ್​ ಇಲ್ಲಿದೆ..!

ಸ್ವಚ್ಛ ಗೃಹ.ಕಾಮ್, ಮನೆಯಲ್ಲಿ ಕಾಂಪೋಸ್ಟ್ ತಯಾರಿಸೋದು ಹೇಗೆ ಅನ್ನುವುದನ್ನ ತಿಳಿಸಿಕೊಡತ್ತದೆ. ಕಂಪೋಸ್ಟ್, ಬೆಳೆ ಮತ್ತು ಊಟ ಅನ್ನೋ ಕಾಂಸೆಪ್ಟ್​ನಲ್ಲಿ ಇದನ್ನು ರೂಪಿಸಲಾಗಿದೆ. ಇದರಲ್ಲಿ ಮುಖ್ಯ ಒತ್ತು ಕಾಂಪೋಸ್ಟಿಂಗ್​ಗೆ. ಸ್ವಚ್ಛ ಗೃಹ.ಕಾಮ್ ಕಾಂಪೊಸ್ಟಿಂಗ್​ಗೆ ಬೇಕಾದ ಸಾಮಗ್ರಿಗಳ ವಿವರಗಳನ್ನ ನೀಡತ್ತದೆ. ನೀವದನ್ನ ಆನ್​ಲೈನ್​ನಲ್ಲಿ ತರಿಸಿಕೊಂಡು ಬಳಸಿಕೊಳ್ಳಬಹುದು. ಈಗಷ್ಟೇ ಕಾಂಪೋಸ್ಟ್ ಮಾಡೋದನ್ನ ಶುರು ಮಾಡುವವರಿಗೆ ಸ್ಟಾರ್ಟರ್ ಕಿಟ್ ಇರತ್ತೆ. ಇದರಲ್ಲಿ ಕಾಂಪೋಸ್ಟ್ ಮಾಡೋದರ ಬಗಿಗಿನ ಮಾಹಿತಿ ಜತೆಗೆ ಅದಕ್ಕೆ ಬೇಕಾದ ಸಲಕರಣೆಗಳು ಸಿಗುತ್ತದೆ.

image


" ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 2500 ಟನ್​ನಿಂದ 3000 ಟನ್​ ತನಕ ಜೈವಿಕ ಕಸ ಸಿಗುತ್ತದೆ. ಉತ್ಪತ್ತಿಯಾಗುವ ಕಸವನ್ನು ಸರಿಯಾಗಿ ಬಳಕೆ ಮಾಡಲು ಆಗುತ್ತಿಲ್ಲ. ಅದಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಯೂ ಇಲ್ಲ. ಬೆಂಗಳೂರಿನಲ್ಲಿ ಪ್ರತೀ ಮನೆಯೂ ವಾರಕ್ಕೆ 4 ಕಿಲೋಗ್ರಾಂನಷ್ಟು ಕಸವನ್ನು ಉತ್ಪತ್ತಿ ಮಾಡುತ್ತದೆ. ಇದೇ ಕಸವನ್ನು ಕಾಂಪೋಸ್ಟ್​ ಗೊಬ್ಬರವನ್ನಾಗಿ ಮಾಡಿಕೊಳ್ಳುವುದು ತುಂಬಾ ಸುಲಭ"
- ಲತಾ ಮುನರೇಟಿ, ಸ್ವಚ್ಛಗೃಹ ಸ್ವಯಂಸೇವಕಿ

ಕೇವಲ ಒಂದೂವರೆ ವರ್ಷಗಳ ಹಿಂದೆ ಆರಂಭವಾದ ಈ ಎನ್ ಜಿ ಒ ಬೆಂಗಳೂರಿನಲ್ಲಿ ಅನೇಕ ತಂಡಗಳನ್ನ ರೂಪಿಸಿಕೊಂಡು ಈ ವರೆಗೂ ಸಾಕಷ್ಟು ಜನರಿಗೆ ಕಾಂಪೋಸ್ಟ್ ಬಗ್ಗೆ ಟ್ರೈನ್ ಮಾಡಿದೆ, ಇನ್ನು ಒಂದು ಮಿಲಿಯನ್ ಜನಕ್ಕೆ ಈ ಬಗ್ಗೆ ಮಾಹಿತಿ ನೀಡಬೇಕು ಎಂಬುದು ಈ ಎನ್ ಜಿ ಒದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಅನೇಕ ಶಾಲೆಗಳಿಗೆ ಹಾಗೂ ಕಾರ್ಪೋರೇಟ್ ಕಚೇರಿಗಳಿಗೆ ತೆರಳಿ ಅಲ್ಲಿ ಕಾಂಪೋಸ್ಟ್ ನ ಮಹತ್ವವನ್ನ ತಿಳಿಸ್ತಾ ಇದ್ದಾರೆ. ಬೆಂಗಳೂರನ್ನು ಕಸ ಮುಕ್ತ ಮಾಡಬೇಕು ಎಂದು ಪಣ ತೊಟ್ಟಿರುವ ಈ ಸಂಸ್ಥೆ ಕಸದಿಂದಲೂ ಸಾಕಷ್ಟು ಉಪಯೋಗಗಳಿವೆ ಅನ್ನುವುದನ್ನು ತಿಳಿ ಹೇಳುತ್ತಿದೆ. 

image


ಕಸದಲ್ಲಿ ಎಲ್ಲವೂ ಇದೆ...!

ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನ ಹೊರಗಡೆ ಹಾಕದೆ, ಅದನ್ನ ಕಾಂಪೋಸ್ಟ್ ಮಾಡಿ ಯಾವುದಾದರೂ ಗಿಡವನ್ನ ಬೆಳೆಸಿದ್ರೆ ಅವರಿಗೆ ಈ ಬಗ್ಗೆ ಇನ್ನು ಉತ್ತಮ ರೀತಿಯಲ್ಲಿ ಟ್ರೈನ್ ಮಾಡಿ, ಕಾಂಪೋಸ್ಟಿಂಗ್​ನ ಸರಳ ತತ್ವಗಳ ಬಗ್ಗೆ ಮಾಹಿತಿ ನೀಡಿ ಅವರಿಗೆ ವಿವಿಧ ರೀತಿಯಲ್ಲಿ ಜ್ಞಾನ ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಒಟ್ನಲ್ಲಿ ಮನೆಯ ಹಸಿ ಕಸವನ್ನ ಉಪಯೋಗಿಸಿ ಎರಡು ಮೂರು ವಾರದಲ್ಲಿ ಹೇಗೆ ಕಾಂಪೋಸ್ಟ್ ಮಾಡಬಹುದು ಹಾಗೂ ಅದನ್ನ ಹೇಗೆ ಗೊಬ್ಬರವನ್ನಾಗಿ ಉಪಯೋಗಿಸಿ ತಾಜಾ ತರಕಾರಿಗಳನ್ನ ನಮ್ಮ ಮನೆಯ ಮುಂದೆ ಅಥವಾ ಟೇರೆಸ್ ನಲ್ಲಿ ಬೆಳೆಯಬಹುದು, ಅನ್ನುವುದನ್ನ ಈ ಎನ್ ಜಿ ಒ ತಿಳಿಸುತ್ತೆ. ಸ್ವಚ್ಛಗೃಹದ ಉದ್ದೇಶಗಳಿಗೆ ಸಿಲಿಕಾನ್ ಸಿಟಿ ಜನರು ಸ್ಪಂಧಿಸಿದರೆ, ಗಾರ್ಡನ್ ಸಿಟಿಯಲ್ಲಿ ಕಸ ಕಡಿಮೆಯಾಗೋದ್ರ ಜೊತೆಗೆ ತಾವೇ ನಮಗೆ ಬೇಕಾದ ತರಕಾರಿಗಳನ್ನ ಬೆಳಯಬಹುದು. 

"ಮನೆಯಲ್ಲೇ ಕಾಂಪೋಸ್ಟ್​ ತಯಾರಿ ಮಾಡಿಕೊಳ್ಳುವುದು ತುಂಬಾ ಸುಲಭ. ಜೈವಿಕ ಕಸವನ್ನು ಒಂದು ಬಕೆಟ್​ಗೆ ಹಾಕಿಕೊಂಡು, ಅದಕ್ಕೆ ಕೆಲವು ಎಲೆಗಳನ್ನು ಸೇರಿಸಿ, ಒಂದು ತಿಂಗಳ ಕಾಲ ಬಿಟ್ರೆ ಕಾಂಪೋಸ್ಟ್​ ಸುಲಭವಾಗಿ ತಯಾರಾಗಿ ಬಿಡುತ್ತದೆ. ಆದ್ರೆ ಇದನ್ನು ತಯಾರಿಸಲು ಮನಸ್ಸು ಮಾತ್ರ ಬೇಕಾಗಿದೆ. "
- ಲತಾ ಮುನರೇಟಿ, ಸ್ವಚ್ಛಗೃಹ ಸ್ವಯಂಸೇವಕಿ

50,000 ಜನರಿಂದ ಚಾಲೆಂಜ್​ ಸ್ವೀಕರ..!

ಈಗಾಗಲೇ ಸ್ವಚ್ಛಗೃಹ ಬೆಂಗಳೂರಿನ ಜನರಿಗೆ ಕಾಂಪೋಸ್ಟ್​ ತಯಾರಿಸುವ ವಿಧಾನವನ್ನು ಹೇಳಿಕೊಟ್ಟಿದೆ. ಮೊದಲು ನಾವು ಸರಿಯಾಗಬೇಕು, ಆ ನಂತರ ಸಮಾಜ ಸುಧಾರಣೆ ಆಗುತ್ತದೆ ಅನ್ನುವುದನ್ನು ನಾಗರೀಕರಿಗೆ ತಿಳಿಸಿಕೊಡುತ್ತಿದೆ. ಅಷ್ಟೇ ಅಲ್ಲ ಕಾಂಪೊಸ್ಟ್​ ಗೊಬ್ಬರದಿಂದ, ನಾವೇ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯಬಹುದು. ಅದು ನಮ್ಮ ಆರೋಗ್ಯಕ್ಕೂ ಹೆಚ್ಚು ಉಪಕಾರಿ ಅನ್ನುವುದುನ್ನು ಒತ್ತಿ ಹೇಳುತ್ತದೆ.

ಎಲ್ಲರಿಗೂ ಕಾಂಪೋಸ್ಟ್​ ಪಾಠ

ಈಗಾಗಲೇ ಸ್ವಚ್ಛಗೃಹ ಬೆಂಗಳೂರಿನ ಹಲವು ಶಾಲೆಗಳಿಗೆ ಬೇಟಿ ಕೊಟ್ಟಿದೆ. ಕಾಲೇಜುಗಳಲ್ಲಿ ಕಾಂಪೋಸ್ಟ್​ನ ಪಾಠ ಮಾಡಿದೆ. ಐಟಿ, ಬಿಟಿ ಕಂಪನಿಗಳು ಕೂಡ ಸ್ವಚ್ಛಗೃಹದ ಯೋಜನೆಗಳಿಗೆ ಬೆಂಬಲ ನೀಡಿವೆ. ಎಲ್ಲೆಂದರಲ್ಲಿ ಕಸ ಎಸೆದು ಪರಿಸರವನ್ನು ಹಾಳು ಮಾಡುವ ಬದಲು, ನಮಗೆ ನಾವೇ ಬದಲಾದರೆ ಎಲ್ಲವೂ ಸರಿ ಹೋಗುತ್ತದೆ ಅನ್ನುವುದು ಸ್ವಚ್ಛಗೃಹ ಸದಸ್ಯರ ಅಚಲ ನಂಬಿಕೆ.

ಇದನ್ನು ಓದಿ:

1. ಕಸದಿಂದ ಪರಿಸರವನ್ನು ರಕ್ಷಿಸುವ ಕೊಲ್ಕತ್ತಾ ಮೂಲದ ಸ್ಟಾರ್ಟ್ಅಪ್ ಸಂಸ್ಥೆ- ಇದು ವೈಟಲ್ ವೇಸ್ಟ್​ನ ಸ್ಪೂರ್ತಿದಾಯಕ ಕಥೆ

2. ಸಿಲಿಕಾನ್​ ಸಿಟಿಯಲ್ಲಿ ಟ್ರಾಂಪೋಲಿನ್​ ಟ್ರೆಂಡ್​- ಬೆಂಗಳೂರಿನಲ್ಲಿದೆ ಅತಿ ದೊಡ್ಡ ಪ್ಲೇ ಸ್ಟೇಷನ್​..! 

3. ಟೆರೆಸ್​ ಮೇಲೆ ಬೆಳೆಯುತ್ತೆ ತರಕಾರಿ-ತಪ್ಪಿ ಹೋಯಿತು ಕಸದ ಕಿರಿಕಿರಿ..!