ಶಿಶುಗಳಿಗೆ ಜೀವದಾನ ಮಾಡ್ತಿದೆ ತಾಯಿ ಹಾಲಿನ ಬ್ಯಾಂಕ್

ಟೀಮ್​ ವೈ.ಎಸ್​. ಕನ್ನಡ

0


ಅಮ್ಮನ ಹಾಲು ಅಮೃತ. ವರದಿಯೊಂದರ ಪ್ರಕಾರ ಸಾವನ್ನಪ್ಪುವ 100 ನವಜಾತ ಶಿಶುಗಳಲ್ಲಿ 16ರಷ್ಟು ಶಿಶು, ತಾಯಿ ಹಾಲು ಸಿಕ್ಕರೆ ಬದುಕುಳಿಯುವ ಸಾಧ್ಯತೆ ಇದೆ. ಕೆಲ ಕಾರಣಗಳಿಂದ ಅಂತ ಮಕ್ಕಳಿಗೆ ತಾಯಿ ಹಾಲು ಸಿಗುವುದಿಲ್ಲ.ಇದನ್ನು ಗಮನದಲ್ಲಿಟ್ಟುಕೊಂಡು ರಾಜಸ್ತಾನದ ಉದಯ್ಪುರದಲ್ಲಿರುವ `ಮಾ ಭಗವತಿ ವಿಕಾಸ್ ಸಂಸ್ಥಾನ’ದ ಯೋಗಗುರು ದೇವೇಂದ್ರ ಅಗರ್ವಾಲ್ `ದಿವ್ಯ ಮದರ್ ಮಿಲ್ಕ್ ಬ್ಯಾಂಕ್’ ಶುರು ಮಾಡಿದ್ದಾರೆ. ಅಲ್ಲಿ ಕೇವಲ ತಾಯಿ ಹಾಲು ಸಂಗ್ರಹವಾಗುವುದೊಂದೇ ಅಲ್ಲ, ಅವಶ್ಯವಿರುವ ಶಿಶುವಿಗೆ ಹಾಲನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತದೆ. ಉದಯ್ಪುರ ಹಾಗೂ ಸುತ್ತಮುತ್ತ `ದಿವ್ಯ ಮದರ್ ಮಿಲ್ಕ್ ಬ್ಯಾಂಕ್’ ಯೋಜನೆ ಯಶಸ್ವಿಯಾಗುತ್ತಿರುವುದನ್ನು ಗಮನಿಸಿದ ರಾಜಸ್ತಾನ ಸರ್ಕಾರ, ಬಜೆಟ್ ನಲ್ಲಿ ಈ ಯೋಜನೆಯನ್ನು ಘೋಷಿಸಿದೆ. ರಾಜ್ಯದ ಇತರ ಪ್ರದೇಶಗಳಲ್ಲೂ 10 ಮದರ್ ಮಿಲ್ಕ್ ಬ್ಯಾಂಕ್ ತೆರೆಯುವ ಘೋಷಣೆ ಮಾಡಿದೆ. ಇದಕ್ಕಾಗಿ ಸರ್ಕಾರ ಬಜೆಟ್ ನಲ್ಲಿ 10 ಕೋಟಿ ರೂಪಾಯಿ ಮೀಸಲಿಟ್ಟಿದೆ.

ದಿವ್ಯ ಮದರ್ ಮಿಲ್ಕ್ ಬ್ಯಾಂಕನ್ನು ಯೋಗಗರು ದೇವೇಂದ್ರ ಅಗರ್ವಾಲ್ ಏಪ್ರಿಲ್ 2013ರಂದು ಸ್ಥಾಪನೆ ಮಾಡಿದ್ರು. ಅವರ ಸಂಸ್ಥೆಯಿಂದ ನಡೆಸಲಾಗುತ್ತಿರುವ ಇನ್ನೊಂದು ಸಂಸ್ಥೆ `ಮಹೇಶಾಶ್ರಮ’ದ ಅಭಿಯಾನ ದಿವ್ಯ ಮದರ್ ಮಿಲ್ಕ್ ಬ್ಯಾಂಕ್ ಸ್ಥಾಪನೆಗೆ ಮೂಲ ಕಾರಣವಾಯಿತು. ಮಗು ಹುಟ್ಟಿದ ತಕ್ಷಣ ಕೆಲವರು ಎಸೆದು ಬಿಡ್ತಾರೆ. ಮತ್ತೆ ಕೆಲವರು ಎಲ್ಲಾದರೂ ಬಿಟ್ಟು ಹೋಗ್ತಾರೆ. ಅಂತ ಹೆಣ್ಣು ಮಕ್ಕಳ ಪಾಲನೆಯನ್ನು ಮಾ ಭಗವತಿ ವಿಕಾಸ್ ಸಂಸ್ಥಾನ ಮಾಡ್ತಾ ಇದೆ. ಉದಯ್ಪುರ ಸೇರಿದಂತೆ ಅನೇಕ ಕಡೆ ಇಂತ ಮಕ್ಕಳನ್ನು ಸಾಕುತ್ತಿದೆ. ಅವರಿಗೆ ಶಿಕ್ಷಣ ನೀಡ್ತಾ ಇದೆ. ಹೆಣ್ಣು ಮಕ್ಕಳು ಬೇಡ ಎನಿಸಿದ ಪಾಲಕರು ತಮ್ಮ ಮಕ್ಕಳನ್ನು ಆಶ್ರಮದಲ್ಲಿ ಬಿಟ್ಟು ಹೋಗಬಹುದು. ಈಗಾಗಲೇ ಸುಮಾರು 17 ಮಕ್ಕಳ ಪಾಲನೆ ಮಾಡಲಾಗ್ತಾ ಇದೆ. ದೇವೇಂದ್ರ ಅಗರ್ವಾಲ್ ಪ್ರಕಾರ ಮಹೇಶಾಶ್ರಮ ಒಂದು ಎನ್ ಐಸಿಯು. ಅಲ್ಲಿ ಜಾಗತೀಕ ಮಟ್ಟದ ಸೌಲಭ್ಯಗಳಿವೆ. ಹೀಗಿದ್ದು ಮಕ್ಕಳಿಗೆ ನೆಗಡಿ, ಇತರ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಅಮ್ಮನ ಹಾಲು ಸಿಗದಿರುವುದು ಇದಕ್ಕೆ ಕಾರಣವಾಗಿತ್ತು. ಅಮ್ಮನ ಹಾಲಿನಲ್ಲಿರುವ ರೋಗನಿರೋಧಕ ಶಕ್ತಿ ಈ ಅನಾಥ ಮಕ್ಕಳಿಗೆ ಸಿಗ್ತಾ ಇರಲಿಲ್ಲ.

ತಾಯಿಯ ಹಾಲು ಸಿಕ್ಕರೆ ಎನ್ ಐಸಿಯುನಲ್ಲಿರುವ ಕೆಲವು ಮಕ್ಕಳಾದ್ರೂ ಬದುಕಬಹುದೆಂದು ಯೋಗಗುರು ದೇವೇಂದ್ರ ಅಗರ್ವಾಲ್ ಯೋಚಿಸಿದ್ರು. ನಂತರ ಅವರು ಎಲ್ಲಿ ಈ ವ್ಯವಸ್ಥೆ ಇದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿದ್ರು. ಬ್ರೆಜಿಲ್​ ನಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕಿಂಗ್ ಹೆಸರಿನಲ್ಲಿ ದೊಡ್ಡ ನೆಟ್ ವರ್ಕ್ ಕೆಲಸ ಮಾಡುತ್ತಿದೆ ಎಂಬುದು ತಿಳಿಯಿತು. ಉದಯ್ಪುರದಲ್ಲಿಯೂ ಇಂತ ನೆಟ್ ವರ್ಕ್ ಶುರುಮಾಡಬೇಕೆಂದು ನಿರ್ಧರಿಸಿದ ಯೋಗಗುರು ಹಾಗೂ ಸಹದ್ಯೋಗಿಗಳು ಹ್ಯೂಮನ್ ಮಿಲ್ಕ್ ಬ್ಯಾಂಕಿಂಗ್ ಅಸೋಸಿಯೇಶನ್ ಆಫ್ ಉತ್ತರ ಅಮೆರಿಕ ಅಡಿಯಲ್ಲಿ ಕೆಲಸ ಮಾಡಲು ಶುರುಮಾಡಿದರು. ನಂತರ ಮದರ್ ಮಿಲ್ಕ್ ಬ್ಯಾಂಕ್ ತೆರೆಯಲು ರಾಜ್ಯ ಸರ್ಕಾರದ ಸಹಾಯ ಕೇಳಿದರು.

ಒಂದೊಳ್ಳೆ ಕೆಲಸ ಮಾಡಲು ಸರ್ಕಾರ ಖುಷಿ ಖುಷಿಯಿಂದ ಒಪ್ಪಿಗೆ ನೀಡಿತು. "ಉತ್ತರ ಅಮೆರಿಕದ ಮಾನವ ಹಾಲು ಬ್ಯಾಂಕಿಂಗ್ ಅಸೋಸಿಯೇಶನ್" ಮಾರ್ಗಸೂಚಿಗಳನ್ನು ಬ್ಯಾಂಕ್ ಆಧರಿಸಿದೆ. "ಮಾ ಭಗವತಿ ವಿಕಾಸ್ ಸಂಸ್ಥೆ" ಮದರ್ ಮಿಲ್ಕ್ ಬ್ಯಾಂಕ್ ನ ಸಿಬ್ಬಂದಿಗೆ ವೇತನ ಹಾಗೂ ನಿರ್ವಹಣಾ ವೆಚ್ಚವನ್ನು ಬರಿಸುತ್ತದೆ. ಈ ಬ್ಯಾಂಕ್ ನಲ್ಲಿ ಸಂಗ್ರಹವಾಗುವ ಹಾಲನ್ನು ಆಸ್ಪತ್ರೆಯ ಎನ್ ಐಸಿಯುವಿನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವ ಶಿಶುವಿಗೆ ಮೊದಲು ನೀಡಲಾಗುತ್ತದೆ. ಇದರ ನಂತರ ಉಳಿರುವ ಹಾಲನ್ನು ಮಹೇಶಾಶ್ರಮದ ಅನಾಥ ಮಕ್ಕಳಿಗೆ ನೀಡಲಾಗುತ್ತದೆ. 32 ಸಾವಿರಕ್ಕೂ ಹೆಚ್ಚು ಮಹಿಳೆಯರು 7 ಸಾವಿರಕ್ಕೂ ಹೆಚ್ಚು ಬಾರಿ ಹಾಲು ನೀಡಿದ್ದಾರೆ. ದಿವ್ಯ ಮದರ್ ಮಿಲ್ಕ್ ಬ್ಯಾಂಕ್ ಈವರೆಗೆ 1900 ನವಜಾತ ಶಿಶುಗಳ ಪ್ರಾಣ ಉಳಿಸಿದೆ.

ಯೋಗಗರು ದೇವೇಂದ್ರ ಅಗರ್ವಾಲ್ ಅವರ ಪ್ರಕಾರ, ತಮ್ಮ ಮಕ್ಕಳಿಗೆ ಜಾಸ್ತಿಯಾಗುವಷ್ಟು ಎದೆಹಾಲು ಹೊಂದಿರುವ ತಾಯಂದಿರು ಇಲ್ಲಿಗೆ ಬರ್ತಾರೆ. ಎರಡನೇಯದಾಗಿ ಮಕ್ಕಳು ಐವಿನಲ್ಲಿದ್ದು, ಅವರಿಗೆ ತಾಯಂದಿರು ಹಾಲು ಕುಡಿಸುವಂತಿರುವುದಿಲ್ಲ. ಅಂತ ತಾಯಂದಿರು ಬ್ಯಾಂಕ್ ಗೆ ಬಂದು ಹಾಲನ್ನು ದಾನ ಮಾಡ್ತಾರೆ. ಹುಟ್ಟಿದ ತಕ್ಷಣ ಶಿಶುವನ್ನು ಕಳೆದುಕೊಂಡ ತಾಯಂದಿರು ಅಲ್ಲಿಗೆ ಬಂದು ತಮ್ಮ ಎದೆ ಹಾಲನ್ನು ದಾನ ಮಾಡ್ತಾರಂತೆ.

ಹಾಲನ್ನು ದಾನ ಮಾಡಲು ಬರುವ ಮಹಿಳೆಯರಿಗೆ ಕೆಲವೊಂದು ಪರೀಕ್ಷೆಗಳನ್ನು ಮಾಡಲಾಗುತ್ತದೆ.ತಾಯಿ ಜ್ವರ ಅಥವಾ ಇನ್ನಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದಾಳಾ ಎಂದು ಪರೀಕ್ಷೆ ಮಾಡಲಾಗುತ್ತದೆ. ಆಲ್ಕೋಹಾಲ್ ಅಥವಾ ಮತ್ಯಾವುದಾದ್ರೂ ನಶೆ ಬರುವ ವಸ್ತುವನ್ನು ಸೇವಿಸಿದ್ದಾಳಾ ಎಂಬ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಗುತ್ತದೆ. ನಂತರ 2 ಎಂಎಲ್ ರಕ್ತವನ್ನು ತೆಗೆದು ಹೆಚ್ ಐವಿ ಸೇರಿದಂತೆ ಸಾಂಕ್ರಾಮಿಕ ರೋಗದಿಂದ ಮಹಿಳೆ ಬಳಲುತ್ತಿದ್ದಾಳಾ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ನಂತರ ಮಗುವಿಗೆ ಮೊದಲು ಹಾಲುಣಿಸುವಂತೆ ಹೇಳಲಾಗುತ್ತದೆ. ನಂತರ ಬ್ರೆಸ್ಟ್ ಪಂಪ್ ಬಳಸಿ ಉಳಿದ ಹಾಲನ್ನು ತೆಗೆಯಲಾಗುತ್ತದೆ.

ರಕ್ತ ಪರೀಕ್ಷಾ ವರದಿ ಬರುವವರೆಗೆ ಮಹಿಳೆಯ ಹಾಲನ್ನು ಮೈನಸ್ 5 ಡಿಗ್ರಿಯಲ್ಲಿ ಸಂಗ್ರಹಿಸಿಡಲಾಗುತ್ತದೆ. ನಂತರ ಎಲ್ಲ ತಾಯಂದಿರ ಹಾಲನ್ನು ಒಟ್ಟುಗೂಡಿಸಿ ಪಾಶ್ಚೀಕರಿಸಲಾಗುತ್ತದೆ. ನಂತರ 30 ಎಂಎಲ್ ಒಂದು ಯುನಿಟ್ ಸಿದ್ಧಗೊಳಿಸಿ ಅದನ್ನು ಸೀಲ್ ಪ್ಯಾಕ್ ಮಾಡಲಾಗುತ್ತದೆ. ನಂತರ 12 ಯುನಿಟ್ ನ ಒಂದು ಬ್ಯಾಚ್ ಮಾಡಲಾಗುತ್ತದೆ. ಅದರಲ್ಲಿ ಒಂದು ಯುನಿಟ್ಟನ್ನು ಮೈಕ್ರೋಬಯೋಲಾಜಿ ಲ್ಯಾಬ್ ಗೆ ಟೆಸ್ಟ್ ಗಾಗಿ ಕಳುಹಿಸಲಾಗುತ್ತದೆ. ರಿಪೋರ್ಟ್ ಬರುವವರೆಗೆ ಹಾಲನ್ನು ಮೈನಸ್ 20 ಡಿಗ್ರಿಯಲ್ಲಿ ಕಾಯ್ದಿರಿಸಲಾಗುತ್ತದೆ. ಇದನ್ನು ಮೂರು ತಿಂಗಳವರೆಗೆ ಇಡಬಹುದಾಗಿದೆ.

ದೇಶದಲ್ಲಿ ಇದು ಮೊದಲ ಮದರ್ ಮಿಲ್ಕ್ ಬ್ಯಾಂಕ್ ಆಗಿದೆ. ರಾಜಸ್ತಾನದಲ್ಲಿ ಯಶಸ್ವಿಯಾಗಿರುವ ಈ ಯೋಜನೆಯನ್ನು ಯುಪಿ, ಹರಿಯಾಣಕ್ಕೂ ವಿಸ್ತರಿಸುವ ಗುರಿಯನ್ನು ಯೋಗಗುರು ದೇವೇಂದ್ರ ಅಗರ್ವಾಲ್ ಹೊಂದಿದ್ದಾರೆ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ.


ಲೇಖಕರು : ಹರೀಶ್ ಬಿಶ್ತ್​​

ಅನುವಾದಕರು: ರೂಪಾ ಹೆಗಡೆ