ರಾಷ್ಟ್ರಪತಿಗಳ ವಾಹನ ತಡೆದು ಆಂಬ್ಯುಲೆನ್ಸ್​ಗೆ ಕೊಟ್ರು ದಾರಿ : ಬೆಂಗಳೂರು ಟ್ರಾಫಿಕ್ ಪೊಲೀಸ್​ಗೆ ನೀವೂ ಒಂದು ಸಲಾಂ ಹೇಳಿ

ಟೀಮ್ ವೈ.ಎಸ್.ಕನ್ನಡ 

1

ಎಂ.ಎಲ್.ನಿಜಲಿಂಗಪ್ಪ ಬೆಂಗಳೂರು ಟ್ರಾಫಿಕ್ ಪೊಲೀಸ್ ಸಬ್ ಇನ್ಸ್​ಪೆಕ್ಟರ್. ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿ ಎಲ್ಲರಿಂದ್ಲೂ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ರಶಸ್ತಿ ಕೂಡ ಇವರನ್ನು ಅರಸಿ ಬರುತ್ತಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಬೆಂಗಾವಲು ಪಡೆಯನ್ನು ತಡೆದು, ಆಂಬ್ಯುಲೆನ್ಸ್​ಗೆ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟಿರುವ ನಿಜಲಿಂಗಪ್ಪ ಅವರ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.

ನಿಜಲಿಂಗಪ್ಪ ಅವರ ಸಮಯಪ್ರಜ್ನೆ ಮತ್ತು ಕರ್ತವ್ಯ ನಿಷ್ಠೆಯನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆ ಕೂಡ ಶ್ಲಾಘಿಸಿದೆ. ಬೆಂಗಳೂರಿನ ಗ್ರೀನ್ ಮೆಟ್ರೋ ಉದ್ಘಾಟನೆಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಗರಕ್ಕೆ ಆಗಮಿಸಿದ್ರು. ಅಲಸೂರು ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್ ನಿಜಲಿಂಗಪ್ಪ ಅವರನ್ನು ಅಂದು ಟ್ರಿನಿಟಿ ಸರ್ಕಲ್​ನಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು.

ರಾಷ್ಟ್ರಪತಿಗಳು ಕೂಡ ಆಗಮಿಸಿದ್ರಿಂದ ಟ್ರಾಫಿಕ್ ನಿಯಂತ್ರಿಸುವ ದೊಡ್ಡ ಜವಾಬ್ಧಾರಿ ಅವರ ಮೇಲಿತ್ತು. ಒಂದೇ ಸಮಯದಲ್ಲಿ ರಾಷ್ಟ್ರಪತಿಗಳ ಬೆಂಗಾವಲು ಪಡೆ ಹಾಗೂ ಆಂಬ್ಯುಲೆನ್ಸ್ ಟ್ರಿನಿಟಿ ಸರ್ಕಲ್​ಗೆ ಬಂದಿವೆ. ರಾಷ್ಟ್ರಪತಿಗಳ ಬೆಂಗಾವಲು ವಾಹನ ರಾಜಭವನಕ್ಕೆ ತೆರಳುತ್ತಿತ್ತು. ಆಂಬ್ಯುಲೆನ್ಸ್ ಎಚ್ಎಎಲ್​ನ ಖಾಸಗಿ ಆಸ್ಪತ್ರೆಯತ್ತ ಹೊರಟಿತ್ತು.

ಆಂಬ್ಯುಲೆನ್ಸ್​ನಲ್ಲಿದ್ದ ರೋಗಿಯ ತುರ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಸಬ್ ಇನ್ಸ್​ಪೆಕ್ಟರ್ ನಿಜಲಿಂಗಪ್ಪ, ಪ್ರಣಬ್ ಮುಖರ್ಜಿ ಅವರ ಬೆಂಗಾವಲು ವಾಹನವನ್ನು ತಡೆದಿದ್ದಾರೆ. ಆಂಬ್ಯುಲೆನ್ಸ್​ಗೆ ಮುಂದಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹೋದ್ಯೋಗಿಗಳಿಗೆ ಕರೆ ಮಾಡಿ ಆಂಬ್ಯುಲೆನ್ಸ್​ಗೆ ಸರಾಗವಾಗಿ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದಾರೆ.

''ಅದೊಂದು ತುರ್ತು ಸಂದರ್ಭ, ಹಾಗಾಗಿ ನಾನು ಆಂಬ್ಯುಲೆನ್ಸ್​ಗೆ ಮುಂದಕ್ಕೆ ಹೋಗಲು ಅನುವು ಮಾಡಿಕೊಟ್ಟೆ. ಹಿರಿಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದೆ. ಬೆಂಗಾವಲು ವಾಹನಕ್ಕಿಂತ ಮೊದಲೇ ಆಂಬ್ಯುಲೆನ್ಸ್ ಅನ್ನು ಕಳಿಸಿಕೊಟ್ಟೆ'' ಅಂತಾ ನಿಜಲಿಂಗಪ್ಪ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳನ್ನು ಕೇಳಿಯೇ ನಿಜಲಿಂಗಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ನಿಜಲಿಂಗಪ್ಪ ಅವರ ಕಾರ್ಯವನ್ನು ಟ್ವಿಟ್ಟರ್ನಲ್ಲಿ ಶ್ಲಾಘಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವುದಾಗಿ ತಿಳಿಸಿದ್ದಾರೆ. ನಿಜಲಿಂಗಪ್ಪ ಅವರ ಕರ್ತವ್ಯಪರತೆ ಸಾಮಾಜಿಕ ತಾಣಗಳಲ್ಲೂ ವೈರಲ್ ಆಗಿದೆ.

ಭಾರತದಲ್ಲಿ ಪೊಲೀಸ್ ಕೆಲಸ ನಾವಂದುಕೊಂಡಷ್ಟು ಸುಲಭವಿಲ್ಲ. ಜನರ ರಕ್ಷಣೆಯೇ ಅವರ ಜವಾಬ್ಧಾರಿಯಾದ್ರೂ ವಿಐಪಿಗಳ ಜೊತೆಗೆ ಹೆಣಗಾಡೋದು ಖಾಕಿಗಳಿಗೆ ಧರ್ಮಸಂಕಟ ತಂದೊಡ್ಡುತ್ತದೆ. ಎಷ್ಟೋ ಬಾರಿ ವಿಐಪಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪೊಲೀಸರು ಜನರ ಕೆಂಗಣ್ಣಿಗೆ ಗುರಿಯಾಗ್ತಾರೆ. ಆದ್ರೆ ನಿಜಲಿಂಗಪ್ಪ ಮಾತ್ರ ವಿಐಪಿಗಿಂತ್ಲೂ ಜನರ ಕ್ಷೇಮವೇ ಮುಖ್ಯ ಅನ್ನೋದನ್ನು ಸಾಬೀತು ಮಾಡಿದ್ದಾರೆ. 

ಅನಾಥ ಮಕ್ಕಳಿಗೆ ಆಸರೆಯಾದ್ರು ಪ್ರಧಾನಿ : ಪತ್ರಕ್ಕೆ ಸ್ಪಂದಿಸಿ 50 ಸಾವಿರ ರೂ. ನೆರವು ನೀಡಿದ ಮೋದಿ  

ಪ್ರಾಚೀನ ಅಡುಗೆ ಪದ್ಧತಿಗೆ ಮರುಜೀವ ಕೊಟ್ಟಿದ್ದಾಳೆ ಈ ಮಣ್ಣಿನ ಮಗಳು