ಬೆಂಗಳೂರಿನಲ್ಲಿ ವೀಕೆಂಡ್ ಮಸ್ತಿಗೊಂದು ಪ್ಲೇಸ್: ತಾತಗುಣಿ ಎಸ್ಟೇಟ್​ಗೆ ಹೊಸ ಟಚ್..!

ವಿಶ್ವಾಸ್​ ಭಾರಾಧ್ವಾಜ್​​​

ಬೆಂಗಳೂರಿನಲ್ಲಿ ವೀಕೆಂಡ್ ಮಸ್ತಿಗೊಂದು ಪ್ಲೇಸ್: ತಾತಗುಣಿ ಎಸ್ಟೇಟ್​ಗೆ ಹೊಸ ಟಚ್..!

Sunday November 08, 2015,

3 min Read

ಉದ್ಯಾನಗರಿ ಬೆಂಗಳೂರಿನ ನಿವಾಸಿಗಳಿಗೆ ಸಂತಸದ ಸುದ್ದಿಯೊಂದು ಕಾದಿದೆ. ವೀಕೆಂಡ್​​ನಲ್ಲಿ ಕುಟುಂಬದ ಜೊಗೆ ಒಂದು ಸುಂದರ ದಿನ ಕಳೆಯಲು ಪ್ರವಾಸಿ ತಾಣವೊಂದು ನಿರ್ಮಾಣವಾಗುವ ಸೂಚನೆ ಸಿಕ್ಕಿದೆ. ಬಾಲಿವುಡ್​​ನ ಮೊತ್ತಮೊದಲ ಚಿತ್ರಗಳ ಅಭಿನೇತ್ರಿ ದೇವಿಕಾರಾಣಿ ಹಾಗೂ ರಷ್ಯನ್ ಕಲಾವಿದ ರೋರಿಕ್​​ರ ಬಹುವಿವಾದಿತ ತಾತಗುಣಿ ಎಸ್ಟೇಟ್ ನವೀಕರಿಸಿ, ಆರ್ಟ್ ಗ್ಯಾಲರಿಯನ್ನಾಗಿಸುವ ಯೋಜನೆಗೆ ಕೊನೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕಳೆದೊಂದು ದಶಕದಿಂದಲೂ ಮೂಲೆ ಗುಂಪಾಗಿದ್ದ ಈ ಪ್ರಸ್ಥಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ.

image


ತಾತಗುಣಿ ಎಸ್ಟೇಟ್ ಹಿನ್ನೆಲೆ

ರಷ್ಯನ್ ಕಲಾವಿದ ಸ್ವೆತಾಸ್ಲೇವ್ ರೋರಿಕ್ ಹಾಗೂ ಬಾಲಿವುಡ್ ಬ್ಲಾಕ್ ಎಂಡ್ ವೈಟ್ ಜಮಾನಾದ ಪ್ರಖ್ಯಾತ ನಟಿ ದೇವಿಕಾರಾಣಿಯವರ ಪ್ರೀತಿಯ ಕುರುಹು ಕನಕಪುರ ರಸ್ತೆಯಲ್ಲಿರುವ ತಾತಗುಣಿ ಎಸ್ಟೇಟ್. ಬೆಂಗಳೂರಿನಿಂದ 10 ಕಿಮೀ ದೂರದಲ್ಲಿ ಕನಕಪುರ ರಸ್ತೆಯಲ್ಲಿದೆ ಸುಂದರ ಮನಮೋಹಕ ತಾತಗುಣಿ ಎಸ್ಟೇಟ್. ದೇವಿಕಾರಾಣಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಆಪ್ತರಾಗಿದ್ದವರು ಹಾಗೂ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್​​ರ ಮೊಮ್ಮಗಳು. ಅಷ್ಟೇ ಅಲ್ಲ ಇವರು ಭಾರತೀಯ ಸಿನಿರಂಗದ ಮೊದಲ ನಾಯಕಿಯೂ ಹೌದು. ದೇವಿಕಾರಾಣಿ ಹಾಗೂ ರೋರಿಕ್ ದಂಪತಿಗಳು ತಮ್ಮ ಜೀವನದ ಬಹುಪಾಲು ಅಮೂಲ್ಯ ಬದುಕನ್ನು ಇಲ್ಲಿಯೇ ಕಳೆದಿದ್ದರು. ದೇವಿಕಾರಾಣಿ ಹಾಗೂ ರೋರಿಕ್ ನಿಧನದ ನಂತರ ಈ ಎಸ್ಟೇಟ್ ಅನ್ನು ಸ್ವಾಧಿನಪಡಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಆಗ ಸೃಷ್ಟಿಯಾದ ಈ ಎಸ್ಟೇಟ್ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಸಹ ರಾಜ್ಯ ಸರ್ಕಾರದ ಕ್ರಮವನ್ನು ಸರಿ ಎಂದು ಕಳೆದ ವರ್ಷ ತೀರ್ಪು ನೀಡಿತ್ತು. ಹಾಗಾಗಿ ರಾಜ್ಯ ಸರ್ಕಾರದ ತಾತಗುಣಿ ಎಸ್ಟೇಟ್ ಅನ್ನು ಅಂತರಾಷ್ಟ್ರೀಯ ಮ್ಯೂಸಿಯಂ ಆಗಿ ಪರಿವರ್ತಿಸಲು ಮುಂದಾಗಿದೆ. ಸುಮಾರು 25 ಕೋಟಿ ರೂ ವೆಚ್ಚದಲ್ಲಿ ಎಸ್ಟೇಟ್ ನವೀಕರಣಕ್ಕೆ ಸರ್ಕಾರ ತೀರ್ಮಾನಿಸಿದೆ.

image


ಸ್ಟ್ಯಾಟ್​​ಫೋರ್ಡ್​ ಶೇಕ್ಸ್​​ಪಿಯರ್ ಮ್ಯೂಸಿಯಂ ಹಾಗೂ ನೆದರ್ಲೆಂಡ್​​ನ ಆರ್ಮ್​ಸ್ಟರ್​​ಡ್ಯಾಂನಲ್ಲಿರುವ ವ್ಯಾನ್​ಗೊರಾ ಮ್ಯೂಸಿಯಂನಂತೆ ತಾತಗುಣಿ ಎಸ್ಟೇಟ್​​ನಲ್ಲೂ ಅಂತರಾಷ್ಟ್ರೀಯ ಗುಣಮಟ್ಟದ ಮ್ಯೂಸಿಯಂ ಆರಂಭಿಸಲು ಚಿಂತನೆ ನಡೆಸಲಾಗಿದೆ. ಒಟ್ಟು 468.38 ಎಕರೆಯಷ್ಟು ಜಾಗದಲ್ಲಿ ಎಸ್ಟೇಟ್ ಅಭಿವೃದ್ಧಿಯಾಗಲಿದೆ.

ತಾತಗುಣಿ ಎಸ್ಟೇಟ್​​ನ ವಿಶೇಷತೆಗಳಿವು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನವೀಕರಿಸಲಾಗುವ ಈ ಎಸ್ಟೇಟ್ ದೇಶವಿದೇಶಗಳ ಪ್ರವಾಸಿಗರ ಹಾಗೂ ಕಲಾಸಕ್ತರ ನೆಚ್ಚಿನ ತಾಣವಾಗಲಿದೆ ಅನ್ನುವ ಮಾತುಗಳು ಕೇಳಿ ಬಂದಿವೆ. ರೋರಿಕ್ ಮತ್ತು ದೇವಿಕಾರಾಣಿ ವಾಸಿಸುತ್ತಿದ್ದ ಮನೆ, ಎಸ್ಟೇಟ್​​ನ ಸಸ್ಯಸಂಪತ್ತು, ಕೊಳ, ಸ್ಟುಡಿಯೋ, ಸಮಾಧಿ ಸೇರಿದಂತೆ ಅವರು ಉಪಯೋಗಿಸುತ್ತಿದ್ದ ವಸ್ತುಗಳು, ವಸತಿ ಗೃಹಗಳು ಶಿಥಿಲಾವಸ್ಥೆ ತಲುಪಿವೆ. ಆದರೆ ಇಲ್ಲಿನ ಯಾವುದೇ ವಸ್ತುಗಳೂ ಹಾಗೂ ರೋರಿಕ್​​ನ ಪೇಂಟಿಂಗ್​​ಗಳಿಗೆ ಧಕ್ಕೆ ಯಾಗದಂತೆ ಕಾಮಗಾರಿ ನಡೆಸಲಾಗುವುದು ಅಂತ ಈಗಾಗಲೆ ಭರವಸೆ ನೀಡಲಾಗಿದೆ.

image


ಮುಂದೆ ಈ ಆರ್ಟ್ ಗ್ಯಾಲರಿ ಜಾಗತಿಕ ಪ್ರವಾಸಿ ತಾಣವಾಗಿ, ಕಲಾವಿದರು, ಕಲಾಸಕ್ತರು, ಸಂಶೋಧಕರು, ಚರಿತ್ರಾಕಾರರು, ಮಕ್ಕಳು ಮುಂತಾದ ವರ್ಗಗಳನ್ನು ಕೈ ಬೀಸಿ ಕರೆಯುತ್ತದೆ. ಈ ನಿಟ್ಟಿನಲ್ಲಿ ಅಪಾರ ಸಸ್ಯ ಸಂಪತ್ತು ಹಾಗೂ ಅದ್ವಿತೀಯ ಕಲಾಭಂಡಾರವನ್ನೇ ಹೊಂದಿರುವ ತಾತಗುಣಿ ಎಸ್ಟೇಟ್ ಬೆಂಗಳೂರಿಗೆ ಭೇಟಿ ಕೊಡುವ ದೇಶ-ವಿದೇಶದ ಪ್ರವಾಸಿಗರ ಪ್ರಮುಖ ಪ್ರವಾಸಿ ತಾಣವಾಗಲಿದೆ. ಈ ವಸ್ತು ಸಂಗ್ರಹಾಲಯವನ್ನು ಮುಂದಿನ ಯುವಪೀಳಿಗೆಗೆ ಒಂದು ಅಧ್ಯಯನ ಕೇಂದ್ರವನ್ನಾಗಿ ಮಾಡುವ ಯೋಜನೆಯಿದೆ.. ಸಮಾಧಿ, ಮನೆ ಹಾಗೂ ಸ್ಟುಡಿಯೋ ನವೀಕರಣ ಆದ ನಂತರ 2ನೇ ಹಂತದಲ್ಲಿ ವಸತಿ ಗೃಹ, ಕೆರೆ ಸೇರಿದಂತೆ ಸಂಪೂರ್ಣವಾಗಿ ಟೂರಿಸಂ ಹಾಟ್​​​ಸ್ಪಾ ಟ್ ಮಾಡುವ ಯೋಜನೆ ಸರ್ಕಾರದ ಮುಂದಿದೆ. ಈ ಎಸ್ಟೇಟ್ ಅನ್ನು ಅಭಿವೃದ್ಧಿಪಡಿಸುವ ನೀಲನಕ್ಷೆ ಈಗಾಗಲೆ ಸಿದ್ಧವಾಗಿದ್ದು, ಟೆಂಡರ್ ಕರೆಯುವ ತಯಾರಿ ನಡೆಸಲಾಗಿದೆ. 100 ಎಕರೆ ಜಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಟ್ರೀ ಪಾರ್ಕ್ ಮಾಡಲಿದ್ದು, ಅದಕ್ಕೆ ಮೀಸಲಿರುವ ಅನುದಾನ ಈಗಾಗಲೇ ಬಿಡುಗಡೆಯಾಗಿ ಕೆಲಸ ಆರಂಭವಾಗಿದೆ. ರೋರಿಕ್, ದೇವಿಕಾರಾಣಿ ಅವರಿಗೆ ಸಂಬಂಧಿಸಿದ ಚಿತ್ರಕಲೆಗಳನ್ನು ಜೋಪಾನವಾಗಿಡುವ ನಿಟ್ಟಿನಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯದ ಅಧಿಕಾರಿಗಳು ಗಮನಹರಿಸಲಿದ್ದಾರೆ.

image


ದಶಕಗಳ ಹಿಂದೆಯೇ ಹುಟ್ಟಿಕೊಂಡ ತಾತಗುಣಿ ಎಸ್ಟೇಟ್ ವಿವಾದ

ತಾತಗುಣಿ ಎಸ್ಟೇಟ್ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. 1975ರಲ್ಲಿ ಶುರುವಾದ ಈ ಹೋರಾಟ ಹಲವು ರೀತಿಯಲ್ಲಿ ಚಾರಿತ್ರಿಕ ಮಹತ್ವ ಹೊಂದಿದೆ. ಆಗರ್ಭ ಶ್ರೀಮಂತೆ ಹಾಗೇ ಪ್ರಸಿದ್ಧ ಅಭಿನೇತ್ರಿಯಾಗಿದ್ದ ದೇವಿಕಾರಾಣಿಯವರು ರಷ್ಯಾದ ಪ್ರಸಿದ್ಧ ಚಿತ್ರ ಕಲಾವಿದ ರೋರಿಕ್​​ರನ್ನು ಮದುವೆಯಾದ ನಂತರ ಇಲ್ಲಿ ವಾಸವಿದ್ದರು. 1975ರಲ್ಲಿ ಅಲ್ಲಿ 125 ಕುಟುಂಬಗಳಿದ್ದು, ಸುಮಾರು 150 ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದರು. ತಾತಗುಣಿ ಎಸ್ಟೇಟ್​​ನಲ್ಲಿ ಲಿಮೋನಿಯಾ ಎಂಬ ಗಿಡದ ಬೀಜಗಳಿಂದ ಎಣ್ಣೆ ತಯಾರಿಸಿ ವಿವಿಧ ಕಂಪೆನಿಗಳಿಗೆ ಮಾರಲಾಗುತ್ತಿದ್ದು, ತಿಂಗಳಿಗೆ ಇದರಿಂದ ರೋರಿಕ್ ದಂಪತಿಗಳಿಗೆ 40‑50 ಲಕ್ಷ ರೂ. ಬರುತ್ತಿತ್ತು. ದೇವಿಕಾರಾಣಿ ಹಾಗೂ ರೋರಿಕ್ ದಂಪತಿಗಳು ಇಲ್ಲಿನ ಕೆಲಸಗಾರರನ್ನು ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದರು ಎಂದು ದೊಡ್ಡ ಹೋರಾಟ ನಡೆದಿತ್ತು. ಆ ಬಳಿಕ ಇಲ್ಲಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿ ಕೆಲಸಗಾರರನ್ನು ಎಸ್ಟೇಟ್​​ನಿಂದ ಹೊರದಬ್ಬಲಾಗಿತ್ತು. ಅಂತಿಮವಾಗಿ ಈ ದಂಪತಿಗಳ ನಿಧನದ ಬಳಿಕ ಮತ್ತೆ ತಾತಗುಣಿ ಎಸ್ಟೇಟ್ ವಿವಾದ ಮೂಡಿಸಿದ್ದು ಕೆ.ಟಿ. ಪ್ಲಾಂಟೇಷನ್, ಮೇರಿ ಜಾಯ್ಸ್ ಪೂಣಚ್ಚ ಮತ್ತು ಇತರರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದ ಸಂದರ್ಭದಲ್ಲಿ.

image


ಆದರೆ ಇದೇ ವೇಳೆ ರೋರಿಕ್​​ರ ಅತ್ಯಮೂಲ್ಯ ಪೇಂಟಿಂಗ್ ಕಳ್ಳತನವಾಗುತ್ತಿದೆ ಹಾಗೂ ದೇವಿಕಾರಾಣಿಗೆ ಸಂಬಂಧಿಸಿದ ವಸ್ತುಗಳೂ ಕಣ್ಮರೆಯಾಗುತ್ತಿವೆ ಅನ್ನುವ ದೂರುಗಳು ಕೇಳಿಬಂದಿದ್ದವು. ಹಿಂದೆ ಇಲ್ಲಿ ಸುಮಾರು 800 ಎಕರೆಗೂ ಹೆಚ್ಚು ವಿಸ್ತಾರವಾದ ಸುಗಂಧಭರಿತ ಸಸ್ಯಗಳ ಪ್ರದೇಶವಿತ್ತು. ಆದರೆ ಇಲ್ಲಿ ಭೂಮಾಫಿಯಾ ತಲೆ ಎತ್ತಿದ ಬಳಿಕ ಬಹುತೇಕ ಸುತ್ತಲಿನ ಪ್ರದೇಶಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗ ಉಳಿದಿರುವ ಆಸ್ತಿ ಎಂದರೆ ಈಗಿರುವ 468 ಎಕರೆ ಮಾತ್ರ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್​ ಪುರಸ್ಕರಿಸಿತ್ತು. ಅದೇನೆ ಇರಲಿ, ಕಲಾವಿದ ರೋರಿಕ್​​ರ ಅತ್ಯಮೂಲ್ಯ ಸೃಜನಾತ್ಮಕ ಕಲೆಯನ್ನುಳಿಸುವ ಹಾಗೂ ತಾತಗುಣಿ ಎಸ್ಟೇಟ್ ಅನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವೈಭವೀಕರಿಸುವ ಸರ್ಕಾರದ ಯೋಜನೆ ಮಾತ್ರ ಸ್ವಾಗತಾರ್ಹ.