ಕಡಲ ತಡಿಯ ಹೃದಯವಂತರು.. ರೋಗಿಗಳಿಗೆ ಸಂಜೀವಿನಿಯಾದ ಕಲ್ಲೋಸ್

ಟೀಮ್​​ ವೈ.ಎಸ್​​.

0

ಇಬ್ಬರು ಹೃದಯವಂತರ ಕಹಾನಿ ಇದು. ಬಡವರ ಪ್ರಾಣ ಉಳಿಸಲೆಂದೇ ಜೊತೆಯಾದ ಸಾಹಸಿ ಉದ್ಯಮಿಗಳ ಯಶೋಗಾಥೆ. ಕೆವಿನ್ ಸ್ಕಾಟ್ ಕೈಗರ್ ಹಾಗೂ ಗಜಾನನ ಸತೀಶ್ ನಾಗಶೇಖರ್ ವೈದ್ಯಕೀಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಗೋವಾದಲ್ಲಿ ಹೆಲ್ತ್​​ಕೇರ್ ವೆಂಚರ್ ಒಂದನ್ನು ನಡೆಸುತ್ತಿದ್ದಾರೆ. ಕಲ್ಲೋಸ್ ಎಂಜಿನಿಯರಿಂಗ್ ಎಂಬ ಈ ಸಂಸ್ಥೆ ಕಾರ್ಡಿಯಾಕ್ ಮೊನಿಟರ್‍ಗಳನ್ನು ತಯಾರಿಸುತ್ತಿದೆ. ಜೊತೆಗೆ ಅಲ್ಟ್ರಾ ಪೋರ್ಟೆಬಲ್ ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ.

`ಕಲ್ಲೋಸ್ ಎಂಜಿನಿಯರಿಂಗ್'ಗೆ ಬುನಾದಿ..

ಗಜಾನನ ಹಾಗೂ ಕೆವಿನ್​​​ 6 ವರ್ಷಗಳ ಹಿಂದೆ ಗೋವಾದಲ್ಲಿ ಕಲ್ಲೋಸ್ ಕಂಪನಿಯನ್ನು ಆರಂಭಿಸಿದ್ದರು. ಇವರಿಬ್ಬರೂ ಜಿಇ ಸಿಸ್ಟಮ್ಸ್​​ನ ಎಂಆರ್‍ಐ ಕೆಲಸ ಮಾಡಿದ್ರು. 2006ರಲ್ಲಿ ಪರಸ್ಪರ ಪರಿಚಿತರಾಗಿದ್ದ ಗಜಾನನ ಹಾಗೂ ಕೆವಿನ್ ಮಧ್ಯೆ ಗೆಳೆತನವೂ ಬೆಳೆದಿತ್ತು. ಭಾರತದಲ್ಲಿ ಇನ್ನಷ್ಟು ತಂತ್ರಜ್ಞಾನದ ಸಂಪನ್ಮೂಲಗಳ ಅವಶ್ಯಕತೆ ಅನ್ನೋದನ್ನು ಕೆವಿನ್ ಅರಿತಿದ್ರು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ರು. ಗಜಾನನ ಅವರದ್ದೂ ಇದೇ ಮನಸ್ಥಿತಿ. ಈ ಬಗ್ಗೆ ಚರ್ಚೆ ನಡೆಸಿದ ಬೆನ್ನಲ್ಲೇ ಕೆವಿನ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ಗಜಾನನ ಕೂಡ ಕೆಲಸಕ್ಕೆ ಗುಡ್ ಬೈ ಹೇಳಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ರು. ಕೆವಿನ್ ಅವರ ಮನೆಯೇ ಪಾಠಶಾಲೆಯಾಗಿತ್ತು. ಈ ಸಂದರ್ಭದಲ್ಲೇ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಓಶನೋಗ್ರಫಿಯಿಂದ ಮೊದಲ ಗುತ್ತಿಗೆ ಕೂಡ ಸಿಕ್ಕಿತ್ತು. ಮೊಬೈಲ್ ಹಾಗೂ ಇಸಿಜಿಯಂತಹ ಉಪಕರಣ ತಯಾರಿಕೆ ಬಗ್ಗೆ ಕೆವಿನ್ ಹಾಗೂ ಗಜಾನನ ತಜ್ಞರ ಜೊತೆ ಮಾತುಕತೆ ನಡೆಸಿದ್ರು. ಆ ಸಂದರ್ಭದಲ್ಲಿ ಇಸಿಜಿ ತಯಾರಿಕಾ ಕಂಪನಿಗಳ ಮಧ್ಯೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಇತ್ತು. ಮೊಬೈಲ್ ತಯಾರಿಕೆಗಂತೂ ಬಂಡವಾಳದ ಅಗತ್ಯವಿತ್ತು. ಹಾಗಾಗಿ ಕೆವಿನ್ ಮೋಟೊರೋಲಾ ಜೊತೆ ಒಡಂಬಡಿಕೆ ಮಾಡಿಕೊಂಡು ಕೆಲಸ ಆರಂಭಿಸಿದ್ರು. ಮೊಬೈಲ್‍ಗೆ ಬೇಕಾದ ಪ್ಲೆಥಿಸ್ಮೋಗ್ರಾಫ್ ಎಂಬ ಸಾಧನವನ್ನು ತಯಾರಿಸಿದರು.

ಸಂಸ್ಥೆಗೆ ನಾಮಕರಣ...

ಕಲ್ಲೋಸ್ ಎಂಬ ಹೆಸರು ಗಜಾನನ ಅವರ ಕಾಲ್ಪನಿಕ ಆವಿಷ್ಕಾರ. ಯಾವುದೇ ಗೊಂದಲಿವಿಲ್ಲದಂತಹ ಸರಳ ಹೆಸರನ್ನು ಶೀಘ್ರವಾಗಿ ಹುಡುಕಬೇಕೆಂಬುದು ಅವರ ಬಯಕೆಯಾಗಿತ್ತು. ಕೆವಿನ್ ಅವರ ಹೆಸರಿನ ಕೆ ಅಕ್ಷರವನ್ನು ಬಳಸಿಕೊಂಡು ಗಜಾನನ ಸಂಸ್ಥೆಗೆ ಕಲ್ಲೋಸ್ ಎಂಜಿನಿಯರಿಂಗ್ ಎಂದು ನಾಮಕರಣ ಮಾಡಿದ್ದಾರೆ.

ಸಂಸ್ಥೆಯ ಸಾಧಕ ಭಾದಕ...

ಹೃದಯವನ್ನು ಮೊನಿಟರ್ ಮಾಡುವ ಇಸಿಜಿ, ರಕ್ತ ಮತ್ತು ಆಮ್ಲನಜಕ ಪ್ರಮಾಣವನ್ನು ಅಳೆಯುವ ಉಪಕರಣವನ್ನು ಕಲ್ಲೋಸ್‍ನಲ್ಲಿ ತಯಾರಿಸಲಾಗುತ್ತದೆ. ಈ ವಿಭಾಗದಲ್ಲಿ ಕೆವಿನ್ ಅವರಿಗೆ 10 ವರ್ಷಗಳ ಅನುಭವವಿದೆ. ಸಾಮಾನ್ಯವಾಗಿ ಇಸಿಜಿ ಉಪಕರಣಗಳು ಅತ್ಯಂತ ದುಬಾರಿ. ಹಾಗಾಗಿ ಅತಿ ಕಡಿಮೆ ವೆಚ್ಚದ ಇಸಿಜಿ ಉಪಕರಣವನ್ನು ಕಲ್ಲೋಸ್‍ನಲ್ಲಿ ತಯಾರಿಸಲಾಗುತ್ತಿದೆ. ವಿಶ್ವದಲ್ಲೇ ಅತಿ ಚಿಕ್ಕದಾದ ಅಂಗೈಯಲ್ಲಿ ಹಿಡಿಯಬಹುದಾದಂತಹ ಇಸಿಜಿಯನ್ನು ತಯಾರಿಸುತ್ತಿದ್ದಾರೆ. ಅಲ್ಟ್ರಾಪೋರ್ಟಿಬಿಲಿಟಿ ಜೊತೆಗೆ ಬೆಲೆಯೂ ಕಡಿಮೆಯಾಗಿರೋದ್ರಿಂದ ಬಡವರು ಕೂಡ ಇಸಿಜಿಯ ಉಪಯೋಗ ಪಡೆದುಕೊಳ್ಳಬಹುದು. ಗಾತ್ರದಲ್ಲೂ ಅತ್ಯಂತ ಚಿಕ್ಕದಾಗಿರೋದ್ರಿಂದ ಸಾಗಣೆಯೂ ಸುಲಭ. ಅತಿ ಹೆಚ್ಚು ರೋಗಿಗಳನ್ನು ತಲುಪಬೇಕೆನ್ನುವುದೇ ಕಲ್ಲೋಸ್‍ನ ಉದ್ದೇಶ. ಕೆಲವೊಮ್ಮೆ ಇಸಿಜಿಯಿಂದ ರೋಗಿಗಳ ಸ್ಥಿತಿಯನ್ನು ಅರಿಯಲು ತಕ್ಷಣಕ್ಕೆ ತಜ್ಞ ವೈದ್ಯರು ಲಭ್ಯವಿರುವುದಿಲ್ಲ. ಅಂತಹ ಸಮಸ್ಯೆಗೆ ಪರಿಹಾರವಾಗಿ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಮೂಲಕ ಕಾರ್ಯನಿರ್ವಹಿಸಬಲ್ಲ ಇಸಿಜಿಯನ್ನು ಕಲ್ಲೋಸ್ ತಯಾರಿಸುತ್ತಿದೆ. ಈ ಸೌಲಭ್ಯವಿರೋದ್ರಿಂದ ಜಗತ್ತಿನ ಯಾವ ಮೂಲೆಯಿಂದಾದ್ರೂ ರೋಗಿಗಳ ಸ್ಥಿತಿಯನ್ನು ಅರಿಯಬಹುದು. ಇ-ಮೇಲ್, ವಾಟ್ಸ್ ಆ್ಯಪ್ ಮೂಲಕವೂ ಇಸಿಜಿಯನ್ನು ಶೇರ್ ಮಾಡ್ಬಹುದು.

ಕಲ್ಲೋಸ್ ಆರಂಭಿಸಿದ ಬಳಿಕ ಅಮೆರಿಕಕ್ಕೆ ತೆರಳಿದ ಕೆವಿನ್ ಅರ್ಧಕ್ಕೆ ನಿಂತಿದ್ದ ಓದನ್ನು ಮುಂದುವರಿಸಿ ವೈದ್ಯಕೀಯ ಪದವಿ ಪಡೆದ್ರು. ಅದೇ ಸಮಯಕ್ಕೆ ಕ್ಯಾಲಿಫೋರ್ನಿಯಾ ಸ್ಯಾನ್‍ಡಿಯಾಗೋ ವಿವಿಯಿಂದ ಆಹ್ವಾನ ಬಂದಿದ್ದರಿಂದ ಗಜಾನನ ಕೂಡ ಅಮೆರಿಕ್ಕೆ ಆಗಮಿಸಿದರು. ಕೆವಿನ್ ಹಾಗೂ ಗಜಾನನ ಇಬ್ಬರೂ ಅಮೆರಿಕದಲ್ಲಿದ್ದುಕೊಂಡೇ ಗೋವಾದಲ್ಲಿರುವ ಕಲ್ಲೋಸ್ ಕಚೇರಿಯನ್ನು ನಿರ್ವಹಿಸುತ್ತಿದ್ರು. ಯುಎಸ್‍ಸಿಡಿಯಲ್ಲಿ ಅಸೈನ್‍ಮೆಂಟ್ ಮುಗಿಸಿದ ಗಜಾನನ ಬ್ಯುಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ವಿಜೇತರಾದ್ರು. ಬಳಿಕ ಅಮೆರಿಕದಿಂದ ಗೋವಾಕ್ಕೆ ಮರಳಿದ ಗಜಾನನ ಹಾಗೂ ಕೆವಿನ್ ವೈದ್ಯಕೀಯ ಉಪಕರಣ ತಯಾರಿಕಾ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.

ಮಾರುಕಟ್ಟೆ ರೆಸ್ಪಾನ್ಸ್...

ಭಾರತವನ್ನು ಬಳಸಿಕೊಂಡು ಜಾಗತಿಕ ಮಾರುಕಟ್ಟೆಯ ಮೇಲೆ ಕೆವಿನ್ ಕಣ್ಣಿಟ್ಟಿದ್ದಾರೆ. ಬಾಂಗ್ಲಾದೇಶ ಮತ್ತು ಆಫ್ರಿಕಾ ಮಾರುಕಟ್ಟೆಗೂ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ. ಎಫ್‍ಡಿಎ ಅನುಮತಿ ಸಿಕ್ಕರೆ ಕಲ್ಲೋಸ್‍ನ ಇಸಿಜಿ ಅಮೆರಿಕಕ್ಕೂ ಲಗ್ಗೆ ಇಡಲಿದೆ. ಹಾರ್ಡ್‍ವೇರ್ ಉತ್ಪನ್ನಗಳನ್ನೇ ತಯಾರಿಸುತ್ತಿರುವುದರಿಂದ ಸಂಸ್ಥೆಗೆ ಒಳ್ಳೆ ಆದಾಯ ಬರುತ್ತಿದೆ. ಇಸಿಜಿಗಳನ್ನು ಬಾಡಿಗೆಗೆ ಕೊಡುವ ಯೋಚನೆ ಕೂಡ ಕೆವಿನ್ ಅವರಿಗಿದೆ. ರೋಗಿಯ ಪ್ರಾಣ ಉಳಿಸಬಲ್ಲ ಉಪರಕಣ ತಯಾರಿಸುತ್ತಿರುವುದು ಕೆವಿನ್‍ಗೆ ಖುಷಿ ತಂದಿದೆ.

ಈ ಮಟ್ಟಕ್ಕೆ ಬೆಳೆಯಲು ಕೆವಿನ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಪಾರ್ಟ್ ಟೈಮ್ ಕೆಲಸ ಮಾಡಿಕೊಂಡೇ ಅವರು ಕಾಲೇಜು ಶುಲ್ಕವನ್ನು ಕಟ್ಟುತ್ತಿದ್ರು. ಹಣದ ಅಭಾವಿದ್ದಿದ್ರಿಂದ ಡಿಜೆಯಾಗಿ ಕೂಡ ಕೆಲಸ ಮಾಡಿದ್ದಾರೆ. ಏರಿಳಿತಗಳಿಂದ ಕೂಡಿದ ಬದುಕು ತಮ್ಮದು ಎನ್ನುತ್ತಾರವರು.

ಮುಖ್ಯ ಕಚೇರಿ ಗೋವಾ..

ಕೆವಿನ್ ಅವರ ಪಾಲಿಗೆ ಗೋವಾ ಒಂದು ಕುತೂಹಲಕರ ತಾಣ. ಗಜಾನನ ಅವರಿಗೆ ತವರು ಮನೆ. ಕಡಲ ಕಿನಾರೆ ಗೋವಾಕ್ಕೆ ತಂದೆಯೊಡನೆ ಪ್ರವಾಸಕ್ಕೆ ಬಂದಿದ್ದ ಕೆವಿನ್ ಬೀಚ್‍ನಲ್ಲಿ ಕುಳಿತೇ ಕೆಲಸ ಮಾಡುವ ಕನಸು ಕಂಡಿದ್ರು. ಆದ್ರೆ ಆ ಕನಸು ಈಡೇರಿಲ್ಲ. 2007ರಲ್ಲಿ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕೆವಿನ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಇಸಿಜಿ ಹಾಗೂ ತಜ್ಞ ವೈದ್ಯರು ಸಿಕ್ಕಿದ್ದರಿಂದ ತಮ್ಮ ಪ್ರಾಣ ಉಳಿಯಿತು ಅನ್ನೋದು ಕೆವಿನ್ ಅವರ ಮನದಾಳದ ಮಾತು. ಈ ಅನುಭವವೇ ಅವರಿಗೆ ಇಸಿಜಿ ತಯಾರಿಕಾ ಕಂಪನಿ ಸ್ಥಾಪನೆಗೆ ಪ್ರೇರಣೆಯಾಯ್ತು.

ಒಟ್ಟಿನಲ್ಲಿ ವಿಭಿನ್ನ ಸಂಸ್ಕøತಿ, ಆಚಾರ-ವಿಚಾರಗಳು ಬೇರೆಬೇರೆಯಾಗಿದ್ದರೂ ಜೊತೆಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಕೆವಿನ್ ಹಾಗೂ ಗಜಾನನ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.

Related Stories