ಪೋಲಿಯೋಗೆ ಸೆಡ್ಡು ಹೊಡೆದ ಛಲಗಾತಿ- ಅಂಗವಿಕಲತೆಗೆ ಮದ್ದಾಯ್ತು ಆಟೋಟ..

ಟೀಮ್​ ವೈ.ಎಸ್​​.

ಪೋಲಿಯೋಗೆ ಸೆಡ್ಡು ಹೊಡೆದ ಛಲಗಾತಿ- ಅಂಗವಿಕಲತೆಗೆ ಮದ್ದಾಯ್ತು ಆಟೋಟ..

Friday October 30, 2015,

3 min Read

ಆಕೆ ಪೋಲಿಯೋ ಎಂಬ ಮಹಾಮಾರಿಗೆ ಸೆಡ್ಡು ಹೊಡೆದ ಛಲಗಾತಿ. ವಿಕಲಚೇತನಳೆಂದು ಕೊರಗದೆ ಧೈರ್ಯವಾಗಿ ಬದುಕನ್ನು ಎದುರಿಸಿ, ಅದೆಷ್ಟೋ ಜನರಿಗೆ ಆಸರೆಯಾದ ದಿಟ್ಟ ಯುವತಿ. ಹೌದು ಡಾ. ಮಾಲತಿ ಕೆ ಹೊಳ್ಳ ಅವರ ಜೀವನ ಇಡೀ ವಿಶ್ವಕ್ಕೇ ಮಾದರಿಯಾಗುವಂಥದ್ದು.

ಮಾಲತಿ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಪೋಲಿಯೋ ಅಟ್ಯಾಕ್ ಆಗಿತ್ತು. ಜೊತೆಗೆ ಬಂದ ಜ್ವರದಿಂದ ಅವರು ಪಾರ್ಶ್ವ ವಾಯುವಿಗೆ ತುತ್ತಾದ್ರು. ಸತತ ಎರಡು ವರ್ಷ ಪಡೆದ ಶಾಕ್ ಟ್ರೀಟ್‍ಮೆಂಟ್‍ನಿಂದ ಕೊಂಚ ಶಕ್ತಿ ಬಂದಿತ್ತು. ಆದ್ರೆ ಕುತ್ತಿಗೆಗಿಂತ ಮೇಲಿನ ಭಾಗಕ್ಕೆ ಮಾತ್ರ. ಕತ್ತಿನಿಂದ ಕೆಳಗಿನ ಭಾಗ ಸಂಪೂರ್ಣ ಶಕ್ತಿ ಕಳೆದುಕೊಂಡಿತ್ತು. ಬಳಿಕ 15 ವರ್ಷಗಳ ಕಾಲ ಮಾಲತಿ ಹತ್ತಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ್ರು.

image


ವ್ಹೀಲ್‍ಚೇರನ್ನೇ ಅವಲಂಬಿಸಿರುವ ಮಾಲತಿ ಈಗ ಪದ್ಮಶ್ರೀ ಪ್ರಶಸ್ತಿ ವಿಜೇತೆ, ಡಾಕ್ಟರ್ ಮಾಲತಿ ಕೆ ಹೊಳ್ಳ. ಅರ್ಜುನ ಪ್ರಶಸ್ತಿಯೂ ಸೇರಿದಂತೆ ಸುಮಾರು 400 ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಗ್ರಾಮೀಣ ಪ್ರದೇಶದ ಅಂಗವಿಕಲ ಮಕ್ಕಳಿಗಾಗಿ ಮಾಲತಿ, ಬೆಂಗಳೂರಿನಲ್ಲಿ ಮಾತೃ ಫೌಂಡೇಶನ್ ಎಂಬ ಸಂಸ್ಥೆಯೊಂದನ್ನ ನಡೆಸುತ್ತಿದ್ದಾರೆ. ತಾವು ವಿಕಲಚೇತನೆ ಎಂಬ ಕೀಳರಿಮೆ ಅವರಲ್ಲಿಲ್ಲ. ದೈಹಿಕವಾಗಿ ನಾನು ಅಂಗವಿಕಲೆ, ಆದ್ರೆ ಅದು ಕೇವನ ನನ್ನ ದೇಹದ ಭಾಗವಷ್ಟೆ. ನನ್ನ ಮನಸ್ಸಿಗೆ ಪಾಶ್ರ್ವವಾಯು ಬಡಿದಿಲ್ಲ ಎನ್ನುತ್ತಾರೆ ಅವರು.

ಆಟವೇ ಮದ್ದು...

1959ರಲ್ಲಿ ಒಂದು ವರ್ಷದ ತಮ್ಮ ಮುದ್ದು ಮಗು ಪೋಲಿಯೋಗೆ ತುತ್ತಾಗಿದ್ದನ್ನು ನೋಡಿ ಕೃಷ್ಣಮೂರ್ತಿ ಹಾಗೂ ಪದ್ಮಾವತಿ ಹೊಳ್ಳ ದಂಪತಿಗೆ ದಿಕ್ಕೇ ತೋಚದಂತಾಗಿತ್ತು. ಬೆಂಗಳೂರಲ್ಲಿ ಪುಟ್ಟ ಹೋಟೆಲ್ ನಡೆಸ್ತಿದ್ದ ಕೃಷ್ಣಮೂರ್ತಿ ಅವರ ನಾಲ್ಕು ಮಕ್ಕಳ ಪೈಕಿ ಮಾಲತಿ ಕಿರಿಯವಳು. 2 ವರ್ಷ ಇಲ್ಲೇ ಶಾಕ್ ಟ್ರೀಟ್ಮೆಂಟ್ ಕೊಡಿಸಿದ ಪೋಷಕರು, ನಂತರ ಭಾರವಾದ ಹೃದಯದಿಂದ್ಲೇ ಮಾಲತಿ ಅವ್ರನ್ನ ಚೆನ್ನೈನ ಈಶ್ವರಿ ಪ್ರಸಾದ್ ದತ್ತಾತ್ರೇಯ ಆರ್ಥೋಪೆಡಿಕ್ ಸೆಂಟರ್‍ಗೆ ದಾಖಲಿಸಿದ್ರು. ಮಾಲತಿ 15 ವರ್ಷ ಅಲ್ಲೇ ಚಿಕಿತ್ಸೆಯ ಜೊತೆಗೆ ಓದನ್ನೂ ಮುಂದುವರಿಸಿದ್ರು. ಮಾನಸಿಕವಾಗಿ ತಮಗೆ ತಾವೇ ಧೈರ್ಯ ಹೇಳಿದ್ರು. ಆಗ ಆಟದ ಬಗ್ಗೆ ಮಾಲತಿ ಅವರಿಗೆ ಆಸಕ್ತಿ ಹುಟ್ಟಿತ್ತು. ಆಟಗಳೇ ತಮ್ಮ ನೋವನ್ನು ಮರೆಯಲು ಥೆರಪಿಯಾಗಿತ್ತು ಎನ್ನುತ್ತಾರೆ ಮಾಲತಿ.

ಅಲ್ಲಿದ್ದವರೆಲ್ಲ ವಿಕಲಾಂಗ ಮಕ್ಕಳು. ಬಹುತೇಕ ಎಲ್ಲರೂ ಬಡ ಕುಟುಂಬದಿಂದ ಬಂದವರು. ಪೋಷಕರು ಕೂಡ ಅವರನ್ನು ನೋಡಲು ಬರ್ತಿರ್ಲಿಲ್ಲ. ಅವರಿಗೆಲ್ಲ ಆಹಾರ, ಶಿಕ್ಷಣ, ಚಿಕಿತ್ಸೆ ಎಲ್ಲವನ್ನೂ ಒದಗಿಸಲಾಗ್ತಿತ್ತು. ಪದೇ ಪದೇ ಶಸ್ತ್ರಚಿಕಿತ್ಸೆಗೆ ಒಳಗಾಗ್ತಿದ್ದ ಮಾಲತಿ ಅಪಾರ ನೋವು ಅನುಭವಿಸಿದ್ದಾರೆ. 15 ವರ್ಷಗಳ ನಂತರ ಮನೆಗೆ ಬಂದ ಮಾಲತಿ ಅವರನ್ನು ದೊಡ್ಡ ಹೋರಾಟವೇ ಕಾದಿತ್ತು. ನೀರಿನಿಂದ ಬಿಟ್ಟ ಮೀನಿನಂತಾಗಿತ್ತು ಅವರ ಸ್ಥಿತಿ. ಕನಿಕರದಿಂದ ನೋಡುವ ಸಮಾಜವನ್ನು ಎದುರಿಸುವುದೇ ದೊಡ್ಡ ಸವಾಲಾಗಿತ್ತು. ಸದಾ ಕಾಡುವ ಕೀಳರಿಮೆಯಿಂದ ಹೊರಬರಲು ಮಾಲತಿ ಆಟದ ಮೊರೆ ಹೋಗಿದ್ರು.

ಚಿನ್ನದ ಬೇಟೆ...

ಮಹಾರಾಣಿ ಕಾಲೇಜಿನಲ್ಲಿ ಓದ್ತಾ ಇದ್ದ ಮಾಲತಿ ಆಟಗಳ ಬಗ್ಗೆ ತರಬೇತಿ ಪಡೀತಾ ಇದ್ರು. ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡ್ರು. 1981ರಲ್ಲಿ ಮಾಲತಿ ಸಿಂಡಿಕೇಟ್ ಬ್ಯಾಂಕ್‍ನ ಕ್ಲರ್ಕ್ ಆಗಿ ನೇಮಕಗೊಂಡ್ರು. ಶಾಟ್‍ಪುಟ್, ಡಿಸ್ಕಸ್ ಥ್ರೋ, ಜಾವಲಿನ್, ವ್ಹೀಲ್ ಚೇರ್ ರೇಸ್ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಗೆದ್ದ ಮಾಲತಿ ಚಿನ್ನದ ಬೇಟೆಯನ್ನು ಮುಂದುವರಿಸಿದ್ರು.

1988ರಲ್ಲಿ ಸಿಯೋಲ್‍ನಲ್ಲಿ ನಡೆದ ಪ್ಯಾರಾಒಲಿಂಪಿಕ್ಸ್​​​ನಲ್ಲಿ ಮಾಲತಿ ಸ್ಪರ್ಧಿಸಿದ್ರು. ಅಲ್ಲಿಗೆ ಬಂದಿದ್ದ ವಿದೇಶಿ ಸ್ಪರ್ಧಿಗಳಿಗೆಲ್ಲ ತರಬೇತುದಾರರಿದ್ರು. ಆದ್ರೆ ಮಾಲತಿ ಅವರಿಗೆ ಆ ಸೌಲಭ್ಯವಿರಲಿಲ್ಲ. ಕೋಚಿಂಗ್‍ನ ವಿಡಿಯೋಗಳನ್ನು ನೋಡಿಯೇ ಮಾಲತಿ ಸ್ಪರ್ಧೆಗೆ ಸಜ್ಜಾದ್ರು. ಅಲ್ಲಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ಅವರ ಜೈತ್ರಯಾತ್ರೆ ಆರಂಭವಾಯ್ತು. 1989ರಲ್ಲಿ ಡೆನ್ಮಾರ್ಕ್‍ನಲ್ಲಿ ನಡೆದ ವರ್ಲ್ಡ್​​​ ಮಾಸ್ಟರ್ಸ್ ಗೇಮ್‍ನಲ್ಲಿ ಶಾಟ್‍ಪುಟ್, ಡಿಸ್ಕಸ್ ಹಾಗೂ ಜಾವಲಿನ್ ಥ್ರೋನಲ್ಲಿ ಮಾಲತಿ ಚಿನ್ನದ ಪದಕ ಗೆದ್ದುಕೊಂಡ್ರು.

1996ರಲ್ಲಿ ಮಾಲತಿ ಅರ್ಜುನ ಪ್ರಶಸ್ತಿಗೆ ಭಾಜನರಾದ್ರೆ, 2001ರಲ್ಲಿ ಪದ್ಮಶ್ರೀ ಪುರಸ್ಕಾರ ಅವರನ್ನು ಅರಸಿ ಬಂದಿತ್ತು. ರಾಜ್ಯೋತ್ಸವ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ದಸರಾ ಪ್ರಶಸ್ತಿ , ಪ್ರತಿಭಾ ರತ್ನ ಮೊದಲಾದ ಹತ್ತಾರು ಪುರಸ್ಕಾರಗಳು ಕೂಡ ಮಾಲತಿ ಅವರಿಗೆ ಲಭಿಸಿವೆ. 56 ವರ್ಷದ ಮಾಲತಿ ವ್ಹೀಲ್‍ಚೇರ್ ವಿಭಾಗದಲ್ಲಿ ಭಾರತದ ಅತ್ಯಂತ ವೇಗದ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇದುವರೆಗೆ 389 ಚಿನ್ನದ ಪದಕ, 27 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಮಾಲತಿ ಗೆದ್ದುಕೊಂಡಿದ್ದಾರೆ.

ವಿಕಲಚೇತನರಿಗೆ ಆಸರೆ...

ಮಾಲತಿ ಹೊಳ್ಳ ಈಗ ಗೌರವಯುತ ಜೀವನ ನಡೆಸುತ್ತಿದ್ದಾರೆ. ಸಮಾಜನದಲ್ಲಿ ಅವರಿಗೆ ಸ್ಥಾನಮಾನ ಸಿಕ್ಕಿದೆ. ಆದ್ರೆ ಅದೆಷ್ಟೋ ಮಂದಿ ಛಲವಿದ್ರೂ ಅವಕಾಶವಿಲ್ಲದೆ ಕೊರಗುವಂತಾಗಿದೆ. ಅಂಥವರಿಗಾಗಿಯೇ ಮಾಲತಿ ಮಾತೃ ಫೌಂಡೇಶನ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಪ್ಯಾರಾ ಅಥ್ಲೀಟ್ ಕೃಷ್ಣ ರೆಡ್ಡಿ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಅಶ್ವಿನಿ ನಾಚಪ್ಪ ಹಾಗೂ ಎಂ.ಕೆ.ಶ್ರೀಧರ್ ಸಾಥ್ ಕೊಟ್ಟಿದ್ದಾರೆ.

ಮೊದಲು ಅಂಗವಿಕಲ ಮಕ್ಕಳಿಗೆ ಶಿಕ್ಷಣ ಕೊಡುವ ಯೋಜನೆ ಮಾಲತಿ ಅವರದ್ದಾಗಿತ್ತು. ಬಳಿಕ ಪೋಲಿಯೋ ಪೀಡಿತ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಚಿಕಿತ್ಸೆಯನ್ನೂ ನೀಡಲು ಚಾರಿಟೇಬಲ್ ಟ್ರಸ್ಟ್ ಅನ್ನೇ ಮಾಲತಿ ಆರಂಭಿಸಿದ್ದಾರೆ. ಈಗ ತಾವು 20 ಮಕ್ಕಳ ತಾಯಿ ಅಂತಾ ಅವರು ಹೆಮ್ಮೆಯಿಂದ ಹೇಳಿಕೊಳ್ತಾರೆ. ಈ ಮಕ್ಕಳಿಗೆ ಉದ್ಯೋಗ ಸಿಗುವವರೆಗೂ ಇಲ್ಲೇ ಇರಿಸಿಕೊಳ್ಳಲಾಗತ್ತೆ. ಸದ್ಯ ಸಿಂಡಿಕೇಟ್ ಬ್ಯಾಂಕ್‍ನ ಮ್ಯಾನೇಜರ್ ಆಗಿರುವ ಮಾಲತಿ ಅವರ ಜೀವನಚರಿತ್ರೆ ಕೂಡ 2009ರಲ್ಲಿ ಪ್ರಕಟವಾಗಿದೆ.

ಮಾರತ್‍ಹಳ್ಳಿಯ ಪುಟ್ಟ ಮನೆಯೊಂದರಲ್ಲಿ ಮಾತೃ ಫೌಂಡೇಶನ್ ಸಂಸ್ಥೆ ಇದೆ. ಮಕ್ಕಳ ಖರ್ಚು ವೆಚ್ಚ, ಚಿಕಿತ್ಸೆ ಎನ್ನಲವನ್ನೂ ನೋಡಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ಮಾಲತಿ. ದಾನಿಯೊಬ್ಬರು ಸರ್ಜಾಪುರದಲ್ಲಿ ಸಂಸ್ಥೆಗಾಗಿ ಭೂಮಿ ನೀಡಿದ್ದಾರೆ. ಅಲ್ಲೇ ವಿಕಲಚೇತನ ಮಕ್ಕಳಿಗಾಗಿ ಕಟ್ಟಡ ನಿರ್ಮಾಣವಾಗ್ತಿದೆ. ನಮಗೆ ಕರುಣೆ, ಅನುಕಂಪ ಬೇಡ. ಗುರಿ ಸಾಧಿಸಲು ಪ್ರೇರಣೆ ಬೇಕು ಅನ್ನೋದು ಮಾಲತಿ ಅವರ ನೇರ ನುಡಿ.