ತರಕಾರಿ, ಸೊಪ್ಪು ಬೆಳಿತಾರೆ- ಡಿಸ್ಕೌಂಟ್​ನಲ್ಲಿ ವ್ಯಾಪಾರಾ ಮಾಡುತ್ತಾರೆ- ಇದು 'ಸಾಸ್ಕೆನ್ ಟೆಕ್ನಾಲಜಿಸ್'​ ಗೋ ಗ್ರೀನ್ ಮಂತ್ರ

ಟೀಮ್​ ವೈ.ಎಸ್​. ಕನ್ನಡ

2

ಹತ್ತೇ ಹತ್ತು ವರ್ಷಗಳ ಹಿಂದಿನ ಕಥೆ. ಬೆಂಗಳೂರಿನ ವಾತಾವರಣ ಎಲ್ಲದಕ್ಕೂ ಸೂಟ್ ಆಗ್ತಿತ್ತು. ಪ್ರವಾಸಿಗರು ಮಾಡರೇಟ್ ಕ್ಲೈಮೇಟ್​ನ ಸುಂದರ ಅನುಭವ ಅನುಭವಿಸುತ್ತಿದ್ದರು. ಬೆಳಗ್ಗೆ ಚಳಿ, ಮಧ್ಯಾಹ್ನ ಚಳಿಯನ್ನು ಓಡಿಸುವ ಬಿಸಿಲು, ಸಂಜೆ ಮನಸ್ಸಿಗೆ ಮುದ ನೀಡುತ್ತಿದ್ದ ವಾತಾವರಣ. ಆದ್ರೆ ಇವತ್ತು ಬೆಂಗಳೂರಿನಲ್ಲಿ ಅದ್ಯಾವುದು ಕೂಡ ಕಾಣಸಿಗುವುದಿಲ್ಲ. ಅನುಭವಿಸಲು ಸಾಧ್ಯವಿಲ್ಲ. ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಗಾರ್ಡನ್ ಸಿಟಿ ಅಂತ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಈಗ ಗಾರ್ಡನ್ ಸಿಟಿಯಾಗಿ ಉಳಿದಿಲ್ಲ.  ಇಲ್ಲಿ ಏನೆಲ್ಲಾ ಮ್ಯಾಜಿಕ್ ಗಳು ನಡೆಯುತ್ತೆ ಅನ್ನುವುದು ಗೊತ್ತೆ ಆಗುವುದಿಲ್ಲ. ಐಟಿ, ಬಿಟಿ ಕಂಪನಿಗಳು ಹೆಚ್ಚಾಗಿವೆ. ವಾಹನ ದಟ್ಟಣೆ ಹೆಚ್ಚಾಗಿದೆ. ಟ್ರಾಫಿಕ್ ಇಲ್ದೇ ಇರುವ ದಿನವನವನ್ನು ನೋಡಲು ಸಾಧ್ಯವೇ ಇಲ್ಲ. ವಾಹನ ದಟ್ಟಣೆ ಹೆಚ್ಚಾಗಿ, ವಾಯು ಮಾಲಿನ್ಯ ಹೆಚ್ಚಾಗಿದೆ. ವಾತಾವರಣ ಹದಗೆಟ್ಟು ಹೋಗಿದೆ. ನಮ್ಮ ಮುಂದೆ ಮುಂದಿನ ಪೀಳಿಗೆಗೆ ಶುದ್ದ ವಾತಾವರಣ ವನ್ನ ಉಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನ "ಸಾಸ್ಕೆನ್ ಟೆಕ್ನಾಲಜೀಸ್" ತಮ್ಮ ಕಾರ್ಮಿಕರ ಆರೋಗ್ಯ ಮತ್ತು ಸಂಸ್ಥೆಯ ಸುತ್ತ-ಮುತ್ತಲಿನ ವಾತಾವರಣವನ್ನ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿನಲ್ಲಿ ಕಂಪನಿ ಕಟ್ಟಿಕೊಂಡು, ಕೋಟ್ಯಾಂತರ ರೂಪಾಯಿ ಲಾಭ ಪಡೆಯುವ ಹಲವು ಕಂಪನಿಗಳಿಗೆ ಕಡಿಮೆ ಇಲ್ಲ. ಆದ್ರೆ ಅವುಗಳ ಮಧ್ಯೆ ಈ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಸಾವಿರಾರು ಐಟಿ,ಬಿಟಿ ಕಂಪನಿಗಳ ಮಧ್ಯೆ "ಸಾಸ್ಕೆನ್ ಟೆಕ್ನಾಲಜೀಸ್" ತಲೆ ಎತ್ತಿ ನಿಂತಿದೆ.

ಸಾಸ್ಕೆನ್ ಟೆಕ್ನಾಲಜಿಸ್ ಏನು ಮಾಡ್ತಿದೆ..?

ಬೆಂಗಳೂರಿನ ದೊಮ್ಮಲೂರುನಲ್ಲಿರುವ ಈ ಕಂಪನಿ ಬೆಂಗಳೂರಿನ ವಾತಾವರಣ, ತಮ್ಮ ಕಛೇರಿಯ ವಾತಾವರಣದ ಜೊತೆಯಲ್ಲಿ ಉದ್ಯೋಗಿಗಳ ಆರೋಗ್ಯವನ್ನ ಕಾಪಾಡಲು ಮುಂದಾಗಿದೆ. ತಮ್ಮ ಕಂಪನಿಯ ಜಾಗದಲ್ಲಿ ಸಾವಯವ ತರಕಾರಿ, ಸೊಪ್ಪನ್ನ ಬೆಳೆದು ಅಲ್ಲಿನ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದೆ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾರುಕಟ್ಟೆಯ ರೀತಿಯಲ್ಲಿ, ಇಲ್ಲಿ ಬೆಳೆದ ತರಕಾರಿ ಮತ್ತು ಸೊಪ್ಪಗಳನ್ನು ಮಾರಾಟ ಮಾಡುತ್ತಿದೆ. ಹಾಪಾಕಾಮ್ಸ್​ನಲ್ಲಿ ಮಾರಾಟ ಮಾಡುವ ಬೆಲೆಗಿಂತಲೂ ಶೇಕಡಾ 20 ರಷ್ಟು ಕಡಿಮೆ ಬೆಲೆಯಲ್ಲಿ ಇಲ್ಲಿನ ಉದ್ಯೋಗಿಗಳು ತರಕಾರಿಯನ್ನ ಕೊಂಡುಕೊಳ್ಳಬಹುದು.

ಮರುಬಳಕೆ ತಂತ್ರದಿಂದ ಎಲ್ಲವೂ ಉಪಯೋಗ

ಇನ್ನು ತರಕಾರಿ ಮತ್ತು ಸೊಪ್ಪನ್ನ ಮಾರಾಟ ಮಾಡಿ ಬಂದ ಹಣವನ್ನು ಮತ್ತೆ ತರಕಾರಿ ಬೀಜಗಳು ಹಾಗೂ ಅಗತ್ಯ ವಸ್ತುಗಳನ್ನ ಖರೀದಿ ಮಾಡಲು ಬಳಸಲಾಗುತ್ತದೆ. ಇನ್ನು ನೀರಿನ ಅಭಾವ ಬೆಂಗಳೂರಿನಲ್ಲಿ ಹೆಚ್ಚಾಗಿರುವುದರಿಂದ ಮಳೆ ನೀರಿನ ಸಂಗ್ರಹಣೆ ಮಾಡಿ ತರಕಾರಿ ಬೆಳೆಯಲು ಉಪಯೋಗ ಮಾಡಲಾಗುತ್ತಿದೆ. ಅಂದಹಾಗೇ ತರಕಾರಿ ಬೆಳೆಯಲು, ಅದನ್ನು ಮೈಂಟೇನ್ ಮಾಡಲು ಕಾರ್ಮಿಕರು ಕೂಡ ಬೇಕು. ಈ ಕಂಪನಿ ಅದಕ್ಕೂ ಒಂದು ವ್ಯವಸ್ಥೆ ಮಾಡಿದೆ. ತನ್ನ ಪರಿಸರದಲ್ಲಿ ಬೆಳೆಯುವ ತರಕಾರಿ, ಸೊಪ್ಪುಗಳ ಬೆಳವಣಿಗೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಲು ಏಳು ಜನ ಕಾರ್ಮಿಕರನ್ನು ನೇಮಕ ಮಾಡಿದೆ.

ಕಂಪನಿಯಯೇ ಇಷ್ಟೆಲ್ಲಾ ಕೆಲಸ ಮಾಡುತ್ತಿದೆ ಅಂದರೆ ಇಲ್ಲಿ ಉದ್ಯೋಗಿಗಳಿಗೆ ಒಂಚೂರು ಹೆಚ್ಚೇ ಸ್ಫೂರ್ತಿ ಸಿಕ್ಕಿದಂತಾಗಿದೆ. ಇಲ್ಲಿ ತರಕಾರಿ ಬೆಳೆಯುವ ವಿಧಾನವನ್ನು ನೋಡಿ ಕೆಲಸಗಾರರು ತಮ್ಮ ಮನೆಯಲ್ಲೂ ಒಂದಿಷ್ಟು ಸೊಪ್ಪು ತರಕಾರಿಯನ್ನ ಬೆಳಸಿಕೊಳ್ಳಲು ಆರಂಭ ಮಾಡಿದ್ದಾರೆ. ಹೊರಗಡೆ ಏನೇ ಕೊಂಡುಕೊಂಡ್ರೂ ನಂಬಿಕೆ ಮತ್ತು ವಿಶ್ವಾಸದಿಂದ ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಮಾರ್ಕೆಟ್, ಸೂಪರ್ ಮಾರ್ಕೆಟ್ ಅಂತ ಹೋಗಿ ಗಂಟೆ ಘಟ್ಟಲೆ ಕಾಲಹರಣ ಮಾಡುವ ಹಾಗಿಲ್ಲದೆ ಕೆಲಸ ಮುಗಿಸಿಕೊಂಡ ನಂತ್ರ ಅಲ್ಲೆ ಮನೆಗೆ ಬೇಕಾದ ಫ್ರೆಶ್ ಆಗಿರುವ ತರಕಾರಿಯನ್ನ ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ: ನಿಮ್ಮ ಸ್ಟಾರ್ಟ್​ಅಪ್​ ಗೆಲುವಿಗೆ ಇವಿಷ್ಟೇ ಮೂಲ ಕಾರಣ..!

ವಿಭಿನ್ನ ಪ್ರಯತ್ನಕ್ಕೆ ಕಾರಣವೇನು..?

"ಸಾಸ್ಕೆನ್ ಟೆಕ್ನಾಲಜಿಸ್" ತಮ್ಮ ಸಂಸ್ಥೆಯ ಕಛೇರಿಯನ್ನ ಮತ್ತಷ್ಟು ದೊಡ್ಡದಾಗಿ ಮಾಡಬೇಕು ಅನ್ನುವ ನಿಟ್ಟಿನಲ್ಲಿ 4 ಎಕರೆ ಜಾಗವನ್ನ ಕೊಂಡುಕೊಂಡಿತ್ತು. ಆದ್ರೆ ಕೆಲ ಕಾರಣದಿಂದ ಅಲ್ಲಿ ಹೊಸ ಕಛೇರಿ ಕಟ್ಟಡವನ್ನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಆ ಜಾಗ ಖಾಲಿ ಬಿಡಲಾಗಿತ್ತು. ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮಾಡಲು ಮತ್ತು ಕ್ರೀಡೆಗಾಗಿ ಆ ಜಾಗವನ್ನ ಬಳಸಲಾಗ್ತಿತ್ತು. ನಂತರ ಕಂಪನಿಯ ಅಧಿಕಾರಿಗಳು ಇಲ್ಲಿ ಮತ್ತೇನಾದ್ರು ಮಾಡಬೇಕು ಅಂತ ಯೋಚನೆ ಮಾಡಿದರು. ಬೆಂಗಳೂರಿನಂತಹ ನಗರಗಳಲ್ಲಿ ಒಂದಿಂಚೂ ಜಾಗ ಸಿಕ್ಕಿದ್ರು ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅನ್ನುವ ಯೋಚನೆ ಮಾಡಿದ್ರು. ಇಷ್ಟೆಲ್ಲಾ ಜಾಗ ಖಾಲಿಯಾಗಿ ಸುಮ್ಮನೆ ಹಾಳಾಗೋದು ಬೇಡ ಅನ್ನುವ ನಿರ್ಧಾರಕ್ಕೆ ಬಂದ್ರು. ಅಲ್ಲಿನ ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ಅಲ್ಲಿ ಕೃಷಿ ಮಾಡಬಹುದಾ..? ಅನ್ನುವ ವಿಚಾರವನ್ನ ತಿಳಿದುಕೊಂಡರು.

ಕಂಪನಿ ನಡೆಸಿದ ಮಣ್ಣು ಪರೀಕ್ಷೆಯಲ್ಲಿ ಈ ಜಾಗದಲ್ಲಿ ಮನೆಯಲ್ಲಿ ಪ್ರತಿನಿತ್ಯ ಬಳಸುವ ತರಕಾರಿ -ಸೊಪ್ಪನ್ನ ಬೆಳಸಬಹುದು ಅನ್ನುವ ರಿಸಲ್ಟ್ ಬಂತು. ಸಂಸ್ಥೆ ಕಾರ್ಮಿಕರ ಜೊತೆ ಈ ಸುದ್ದಿಯನ್ನ ಹಂಚಿಕೊಳ್ಳುವುದರ ಜೊತೆಗೆ ಚರ್ಚೆಯನ್ನೂ ಮಾಡಿತು. ಕಾರ್ಮಿಕರು ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟು ಗೋ ಗ್ರೀನ್ ಅನ್ನೋ ಘೋಷಣೆ ಕೂಗಿದ್ರು. ಅಲ್ಲಿಂದ ಶುರುವಾಯ್ತು ಸಾಸ್ಕೆನ್ ಟೆಕ್ನಾಲಜೀಸ್ ನಲ್ಲಿ ತರಕಾರಿ ಬೆಳೆಯೋ ಕೆಲಸ.

" ನಮ್ಮ ಕಂಪನಿಯಲ್ಲಿ ಈ ರೀತಿಯ ಪರಿಸರ ಕಾಳಜಿ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿರುವುದು ಖುಷಿಯ ವಿಚಾರ. ಎಲ್ಲಾ ವಿಚಾರಗಳಲ್ಲೂ ಈ ಬೆಳವಣಿಗೆ ತುಂಬಾ ಒಳ್ಳೆಯದು. ಕಾರ್ಮಿಕರು ನಿಧಾನವಾಗಿ ಪರಿಸರದ ಜೊತೆಗೆ ಸಂಬಂಧ ಬೆಳೆಸಿಕೊಳ್ಳುತ್ತಿದ್ದಾರೆ"
- ಎಸ್ ಪಾಟೀಲ್, ಸಾಸ್ಕೆನ್ ಟೆಕ್ನಾಲಜಿಸ್ ಉದ್ಯೋಗಿ

ಕಂಪನಿಯ ಎದುರಿನ ಜಾಗದಲ್ಲಿ ಕೃಷಿ ಮಾಡಲು ಆರಂಭಿಸಿರುವುದು ಇಲ್ಲಿ ಉದ್ಯೋಗಿಗಳಿಗೂ ಖುಷಿ ಕೊಟ್ಟಿದೆ. ಕೆಲವು ಉದ್ಯೋಗಿಗಳು ಬಿಡುವಿದ್ದಾಗ ಬಂದು ಹೇಗೆಲ್ಲಾ ತರಕಾರಿ ಸೊಪ್ಪನ್ನ ಬೆಳೆಯುತ್ತಾರೆ ಅನ್ನೋದನ್ನ ನೋಡುತ್ತಾರೆ. ಅಷ್ಟೇ ಅಲ್ಲ ಕಾರ್ಮಿಕರ ಜೊತೆ ಅದರ ಬಗ್ಗೆ ಮಾಹಿತಿಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲಸ, ಜೀವನದ ಒತ್ತಡ ಹೆಚ್ಚಾಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಇಂತಹ ವಾತಾವರಣವನ್ನ ಕ್ರಿಯೇಟ್ ಮಾಡಿಕೊಡೋದು ಉದ್ಯೋಗದಾತರ ಮತ್ತೊಂದು ಕರ್ತವ್ಯ.

ಇದನ್ನು ಓದಿ:

1. ಸ್ವೈಪಿಂಗ್​ ಮಷಿನ್​ಗಳಿಗೆ ಸಿಗಲಿದೆ ಬಹುಭಾಷೆಯ ಟಚ್​- ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಸ ​ಕಿಕ್​

2. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

3. ಕನ್ನಡಿಗರ ಒಡನಾಡಿ- ಕೃಷಿಕರ ಜೀವನಾಡಿ- ಕೇವಲ ನೆನಪಾಗಿ ಉಳಿಯಲಿದೆ ಮೈಸೂರು ಬ್ಯಾಂಕ್

Related Stories