ವಯೋವೃದ್ಧರ ಪಾಲಿಗೆ ಪುನರ್ಜನ್ಮದ ಸ್ಥಾನ: ಎಲ್ಲಾ ಕಳೆದುಕೊಂಡವರಿಗೆ ಮನೆಯ ಫೀಲ್ ಕೊಡೋ ಓಮಾಶ್ರಮ

ಜೀವನ್

ವಯೋವೃದ್ಧರ ಪಾಲಿಗೆ ಪುನರ್ಜನ್ಮದ ಸ್ಥಾನ: ಎಲ್ಲಾ ಕಳೆದುಕೊಂಡವರಿಗೆ ಮನೆಯ ಫೀಲ್ ಕೊಡೋ ಓಮಾಶ್ರಮ

Monday October 05, 2015,

4 min Read

ಘಟನೆ 01: ವಿಮಲ (ಹೆಸರು ಬದಲಿಸಿದೆ) 86 ವರ್ಷದ ವಯೋವೃದ್ಧೆ. 4 ಮಕ್ಕಳ ತಾಯಿ. ಅದ್ರಲ್ಲಿ ಇಬ್ಬರು ಗಂಡು ಮಕ್ಕಳು. ಅವ್ರಿಬ್ಬರು ಹೆಂಡತಿ ಜೊತೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಕೈತುಂಬಾ ಸಂಬಳ ಬರುತ್ತೆ. ವೀಕೆಂಡ್ನಲ್ಲಿ ಸಾಕಷ್ಟು ಖರ್ಚು ಮಾಡುತ್ತಾರೆ. ಆದ್ರೆ ಹೆತ್ತಮ್ಮ ಮಾತ್ರ ಅವರಿಗೆ ಬೇಡವಾಗಿದ್ದಾರೆ. ಹೆತ್ತು ಹೊತ್ತು ಸಾಕಿದ ಅಮ್ಮನಿಗೆ ಈಗ ಯಾರೂ ಇಲ್ಲ. ಇನ್ನು ಹೆಣ್ಣು ಮಕ್ಕಳು ಕೂಡ ಅಮ್ಮನ ನೆರವಿಗೆ ನಿಂತಿಲ್ಲ. ಅಮ್ಮ ಈಗ ಬೇರೆಯವರ ಆಶ್ರಯ ಪಡೆದಿದ್ದಾರೆ. ಆದ್ರೆ ಇಲ್ಲಿ ಮನೆಗಿಂತ ಹೆಚ್ಚು ನೆಮ್ಮದಿ ಇದೆ.

***

ಘಟನೆ 02: ಗಂಗಮ್ಮ(ಹೆಸರು ಬದಲಿಸಿದೆ). ಆಕ್ಸಿಡೆಂಟ್ ಆಗಿ ರಸ್ತೆಯಲ್ಲಿ ಬಿದ್ದಿದ್ದರು. ಯಾರೋ ಪುಣ್ಯಾತ್ಮರು ಆಸ್ಪತ್ರೆ ಸೇರಿಸಿದ್ದರು. ಗಂಗಮ್ಮ ಬದುಕಿದ್ದಾರೆ. ಆದ್ರೆ ಅವ್ರ ಪಾಲಿಗೆ ಯಾರೂ ಇಲ್ಲ. ಇದ್ದ ಒಬ್ಬ ಮಗ ಕಳೆದ ವರ್ಷ ಬಸ್ ಆ್ಯಕ್ಸಿಡೆಂಟ್ ನಲ್ಲಿ ಪ್ರಾಣ ಕಳೆದುಕೊಂಡಿದ್ದ. ಗಂಗಮ್ಮ ಈಗ ಒಬ್ಬಂಟಿ. ಹಿಂದೆ ಯಾರೂ ಇಲ್ಲ. ಮುಂದೆ ಗೊತ್ತಿಲ್ಲ. ಜೊತೆಗೆ ಕ್ಷೀಣಿಸುತ್ತಿರುವ ಆರೋಗ್ಯ ಮತ್ತು ವಯಸ್ಸು. ಆದ್ರೆ ಈ ಗಂಗಮ್ಮ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

***

ಘಟನೆ 03: ಮೀನ (ಹೆಸರು ಬದಲಿಸಿದೆ). ವಯಸ್ಸು ಸುಮಾರು 62. ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ತನ್ನ 22ನೇ ವಯಸ್ಸಿಗೆ ಮದುವೆಯಾಗಿತ್ತು. ಆದ್ರೆ ಅದ್ಯಾರ ದೃಷ್ಟಿ ಆಗಿತ್ತೋ ಗೊತ್ತಿಲ್ಲ. ಮದುವೆಯಾದ 2ನೇ ವರ್ಷದಲ್ಲೇ ಗಂಡ ಮಲೇರಿಯಾದಿಂದ ಪ್ರಾಣ ಬಿಟ್ಟಿದ್ದ. ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಮೀನ ಕಾಲ ಕಳೆದಿದ್ದರು. ಆದ್ರೆ ವಯಸ್ಸು ಮಾಗಿದಂತೆ ಕೆಲಸವೂ ಇಲ್ಲದಾಯಿತು. ಹೊಟ್ಟೆ ತುಂಬಿಸಿಕೊಳ್ಳೋದಿಕ್ಕೂ ಕಷ್ಟವಾಯಿತು. ಇಂತಹ ಸಂದರ್ಭದಲ್ಲಿ ಮೀನ ಕೈ ಹಿಡಿದಿದ್ದು ಮತ್ತು ನೆಮ್ಮದಿಯ ಜೀವನಕ್ಕೆ ಆಧಾರವಾಗಿದ್ದು ವೃದ್ಧಾಶ್ರಮ

***

ಮೇಲಿನವು ಜಸ್ಟ್ ಎಕ್ಸಾಂಪಲ್ಗಳು ಅಷ್ಟೇ. ಇಂದಿನ ಫಾಸ್ಟ್ ಯುಗದಲ್ಲೂ ವೃದ್ಧರಿಗೆ ಬೆನ್ನೆಲುಬಾಗಿ ನಿಂತಿರೋದು ಬೆಂಗಳೂರಿನಲ್ಲಿರುವ ಓಮಾಶ್ರಮ. ವಯಸ್ಸಾದವರಿಗೆ ಮತ್ತು ಯಾರೂ ಇಲ್ಲದವರಿಗಾಗಿ ಓಮಾಶ್ರಮ ಕೆಲಸ ಮಾಡುತ್ತಿದೆ.

ಓಮಾಶ್ರಮದ ಹುಟ್ಟಿನ ದಾರಿ:

ಇದು ಬರೋಬ್ಬರಿ 15 ವರ್ಷಗಳ ಹಿಂದಿನ ಕಥೆ. ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದ ವೃದ್ಧರನ್ನು ನೋಡಿದಾಗ ಮೋಹನ್ ಪೈ ಮತ್ತು ಗೀತಾಶಂಕರ್ ಮನ ಮಿಡಿಯುತ್ತಿತ್ತು. ಆದ್ರೆ ಆಗ ಹೆಚ್ಚಿನದ್ದೇನು ಮಾಡೋದಿಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಕನಿಷ್ಠ ಹಗಲು ಹೊತ್ತಿನಲ್ಲಾದ್ರೂ ವೃದ್ಧರು ಖುಷಿಖುಷಿಯಾಗಿ ಇರಬೇಕೆಂದು ನಿರ್ಧಾರ ಮಾಡಿದ್ರು. ಅದಕ್ಕಾಗಿ ಒಂದು ಡೇ-ಕೇರ್ ಆರಂಭಿಸಿದ್ರು. ಆರಂಭದಲ್ಲಿ ಕೇವಲ ಬೆರಳಿಣಿಕೆಯಷ್ಟು ವಯೋವೃದ್ಧರು ಇಲ್ಲಿ ಇರ್ತಾ ಇದ್ರು. ಹಗಲು ಹೊತ್ತಿನಲ್ಲಿ ವಯೋವೃದ್ಧರು ಈ ಡೇ –ಡೇ-ಕೇರ್ನಲ್ಲಿ ಕಾಲ ಕಳೆದು ದು:ಖ ಕಳೆಯುತ್ತಿದ್ರು. ಆದ್ರೆ ರಾತ್ರಿ ಆದಮೇಲೆ ಮತ್ತೆ ಅದೇ ರಾಗ ಅದೇ ಹಾಡು. ಇದನ್ನೆಲ್ಲಾ ನೋಡ್ತಾ ಇದ್ದ ಮೋಹನ್ ಪೈ ಮತ್ತು ಗೀತಾ ಶಂಕರ್ ಓಮಾಶ್ರಮ ಅನ್ನೋ ಓಲ್ಡೇಜ್ ಹೌಸ್ ನ್ನು ಸ್ಥಾಪಿಸಿದ್ರು. ಇದಕ್ಕೆ ಕೆಲವು ಗೆಳೆಯರ ನೆರವೂ ಸಿಕ್ತು. ಯಾರು ಇಲ್ಲದೆ ಓಡಾಡಿಕೊಂಡಿದ್ದ ವೃದ್ಧ ಜೀವಗಳು ಇಲ್ಲಿ ಆಶ್ರಯ ಪಡೆದವು. ಅಲ್ಲಿಂದ ಆರಂಭವಾದ ಈ ಸೇವೆಗೆ ಈಗ 15 ವರ್ಷಗಳು ಕಳೆದು ಹೋಗಿವೆ. ದಿನದಿಂದ ದಿನಕ್ಕೆ ವೃದ್ಧರ ಸಂಖ್ಯೆ ಹೆಚ್ಚಾಗಿದ್ದರಿಂದ ಓಮಾಶ್ರಮ ಈಗ ಎರಡು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆ ಸ್ಥಾಪಿಸಿದ ಮೋಹನ್ ಪೈ ಕೆಲವು ವರ್ಷಗಳ ಹಿಂದೆ ವಿಧಿವಶರಾಗಿದ್ರೂ ದಿನದಿಂದ ದಿನಕ್ಕೆ ಓಮಾಶ್ರಮದ ಸೇವಾವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ.

image


ವೃದ್ಧರ ಜೊತೆ ಗೀತಾಶಂಕರ್ ಅವರ 15 ವರ್ಷದ ಪಯಣ:

ವಯಸ್ಸು ಅನ್ನೋದು ಜೀವನದ ಒಂದು ಭಾಗ. ಸಮಾಜದ ಪ್ರತಿಯೊಂದು ವಿಭಾಗದಲ್ಲೂ ವಯಸ್ಸು ಮಹತ್ವದ ಸ್ಥಾನ ಪಡೆದುಕೊಂಡಿದೆ. ಆದ್ರೆ ವಯಸ್ಸು ಹೆಚ್ಚಾದಂತೆ ಕಷ್ಟಗಳು ಕೂಡ ಇತ್ತೀಚೆಗೆ ಹೆಚ್ಚುತ್ತಿದೆ, ವಯಸ್ಸು ಅನ್ನೋದು ಲಕ್ಷಾಂತರ ಹಿರಿಯ ಜೀವಗಳನ್ನು ಏಕಾಂಗಿಯನ್ನಾಗಿಸುತ್ತಿದೆ. ಜೀವನದ ಅಂತಿಮ ಘಟ್ಟದಲ್ಲಿ ಯಾರು ಇಲ್ಲ ಅನ್ನೋ ಮನೋವೇದನೆಯನ್ನು ಹುಟ್ಟು ಹಾಕುತ್ತಿದೆ. ಇದೆಲ್ಲದರ ಮಧ್ಯೆ ವೃದ್ಧರು, ಹಿರಿಯ ಜೀವಗಳು ಯಾಕೆ ಏಕಾಂಗಿಯಾಗಿ ಇರಬೇಕು ಅನ್ನೋ ಪ್ರಶ್ನೆ ಮೂಡುತ್ತಿದೆ. ಇದು ಕರ್ಮದ ಫಲವೋ ಅಥವಾ ಹಣೆಬರಹವೋ ಅನ್ನೋದು ಕೂಡ ಪ್ರಶ್ನೆಯೇ. ಇದ್ರ ಜೊತೆಗೆ ಹಣಕ್ಕಾಗಿ ದುಡಿದ ದಿನಗಳು ಕೂಡ ನೆನಪಾದ್ರೂ ಈಗ ಏಕಾಂಗಿ ಅನ್ನೋ ಭಾವನೆ ಮೂಡಿ ಜೀವನವೇ ಭಾರವಗಬಹುದು. ಇದೆಲ್ಲದರ ಮಧ್ಯೆ ಇಲ್ಲೊಬ್ಬರು ಹಿರಿಯ ಜೀವದ ನೆರವಿಗೆ ನಿಂತಿದ್ದಾರೆ. ಗೀತಾಶಂಕರ್, ಓಮಾಶ್ರಮದ ಟ್ರಸ್ಟಿ ಮತ್ತು ಸಂಸ್ಥಾಪಪಕಿ ಹಿರಿಯ ಜೀವಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.

ಬೆಂಗಳೂರಿನಲ್ಲಿರುವ ಈ ವೃದ್ಧಾಶ್ರಮ ಹಿರಿಯ ಜೀವಗಳ ಪಾಲಿಗೆ ಪುನರ್ಜನ್ಮ ನೀಡುವ ಸ್ಥಳ. ಬದುಕಿನ ಅತೀ ಕಷ್ಟದ ದಿನಗಳಲ್ಲೂ ಸಂತೋಷವನ್ನು ನೀಡುವ ಜಾಗ ಇದಾಗಿದೆ. ಕಳೆದ 15 ವರ್ಷದಗಳಿಂದ ಗೀತಾಶಂಕರ್ ಅದೆಷ್ಟೋ ಹಿರಿಯ ಜೀವಗಳಿಗೆ ಆಶ್ರಯವಾಗಿದ್ದಾರೆ. ಇದ್ರ ಬಗ್ಗೆ ಗೀತಾಶಂಕರ್ "ಇವತ್ತು ಪೋಷಕರು ತಮ್ಮ ಮಕ್ಕಳ ಅಭಿವೃದ್ಧಿಗಾಗಿ ಎಲ್ಲವನ್ನೂ ತ್ಯಾಗ ಮಾಡ್ತಾರೆ. ಆದ್ರೆ ಅವ್ರು, ಎಲ್ಲಾ ಮುಗಿದ ಮೇಲೆ ವಿದೇಶ ಅನ್ನೋ ಕಾರಣ ನೀಡಿ ಈ ಹಿರಿಯ ಜೀವಗಳನ್ನು ವೃದ್ಧಶ್ರಮದಲ್ಲಿ ಬಿಟ್ಟು ಹೋಗ್ತಾರೆ. ಇವತ್ತು ನಾವು ನಮ್ಮ ಪೋಷಕರನ್ನೇ ನೋಡಿಕೊಳ್ಳಲು ಸಮಯವಿಲ್ಲ ಅಂತ ಹೇಳುವಷ್ಟು ಕ್ರೂರಿಗಳಾಗಿದ್ದೇವೆ. ನೀವು ಬೆಳೆಸಿದ್ದು ಫಲ ಕೊಡುತ್ತೆ ಅನ್ನೋ ಮಾತಿದೆ. ಆದ್ರೆ ಕಿರಿಯರ ಕ್ರೂರ ಮನಸ್ಥಿತಿಯ ಮುಂದೆ ಇದೇ ಸುಳ್ಳು ಅನ್ನುವಷ್ಟು ಕ್ರೂರತ್ವ ಬೆಳೆದು ನಿಂತಿದೆ. ತಮ್ಮ ಮಕ್ಕಳಿಂದಲೇ ಈ ರೀತಿಯ ನಿರ್ಲಕ್ಷತನ ಇವ್ರಿಗೆ ಬೇಕಾ" ಎಂದು ಕೇಳ್ತಾರೆ.

ಓಮಾಶ್ರಮದ ಮುಂದಿದೆ ಸವಾಲು

ಓಮಾ ಆಶ್ರಮ 60ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಜೀವಗಳಿಗೆ ಊಟ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ. ಅಷ್ಟೇ ಅಲ್ಲ ಮನೆಯ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಪರ್ಸನಲ್ ಲಾಂಡ್ರಿ, ಲೈಬ್ರರಿ, ಇನ್‍ಡೋರ್ ಗೇಮ್ಸ್, ಯೋಗ ಕ್ಲಾಸ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಓಮಾ ಆಶ್ರಮ ಸುಮಾರು 65ಕ್ಕೂ ಹೆಚ್ಚು ಹಿರಿಯ ಜೀವಗಳ ಸ್ವರ್ಗವಾಗಿದೆ. ಇವ್ರೆಲ್ಲರೂ ತಮ್ಮ ಮಕ್ಕಳಿಂದಲೇ ವಿವಿಧ ಕಾರಣಕ್ಕಾಗಿ ನೋವು ಅನುಭವಿಸಿದವ್ರೇ. ಆದ್ರೆ ಇಲ್ಲಿರುವ ಹಿರಿಯ ಜೀವಗಳು ತಮ್ಮವರ ಬಗ್ಗೆ ಯಾವುದೇ ದೂರು ಕೂಡ ನೀಡೋದಿಲ್ಲ. " ಈ ವೃದ್ಧಾಶ್ರಮ ಬದುಕಿನ ಮಸ್ಸಂಜೆಯಲ್ಲಿರುವ ಜೀವಗಳಿಗೆ ಗೌರವಯುತವಾದ ಬದುಕನ್ನು ನೀಡುವ ಪ್ರಯತ್ನ ಮಾಡ್ತಿದೆ. ಅಷ್ಟೇ ಅಲ್ಲ ಕೌನ್ಸೆಲಿಂಗ್ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಈ ಹಿರಿ ಜೀವಗಳ ಬದುಕಿನ ಪಾಠದ ಮುಂದೆ ಯಾವುದೇ ಕೌನ್ಸೆಲಿಂಗ್ ಕೂಡ ವ್ಯರ್ಥ." ಅಂತ ಹೇಳ್ತಾರೆ ಗೀತಾ ಶಂಕರ್.

ಅಂದಹಾಗೇ ಓಮಾಶ್ರಮದ ಮುಂದಿನ ಹಾದಿ ಅಂದು ಕೊಂಡಷ್ಟು ಸುಲಭವಿಲ್ಲ. ಈಗಾಗಲೇ 65 ವಯೋವೃದ್ಧರನ್ನು ಸಾಕೋದಿಕ್ಕೆ ಖರ್ಚುಗಳು ಹೆಚ್ಚುತ್ತಿವೆ. 15 ಕೆಲಸಗಾರರು ಇಲ್ಲಿದ್ದಾರೆ. ತಿಂಗಳಿಗೆ ಏನಿಲ್ಲವೆಂದರೂ 10 ಲಕ್ಷಕ್ಕಿಂತ ಹೆಚ್ಚಿನ ಖರ್ಚು ಭರಿಸಬೇಕಾಗುತ್ತದೆ. ದಾನಿಗಳು ಮತ್ತು ಇತರರ ನೆರವಿನಿಂದ ಸ್ವಲ್ಪ ನೆರವು ಸಿಗುತ್ತದೆ. ಆದ್ರೆ ಅದು ಯಾವುದಕ್ಕೂ ಸಾಕಾಗೋದಿಲ್ಲ. ಬಾಡಿಗೆ ಕಟ್ಟಡದಲ್ಲಿ ಆಶ್ರಮ ಇರೋದ್ರಿಂದ ಇದು ದೊಡ್ಡ ಹೊರೆಯಾಗಿದೆ.

ಪೌಂಡರ್ ಮ್ಯಾನೇಜಿಂಗ್ ಟ್ರಸ್ಟಿ ಗೀತಾ ಶಂಕರ್

ಪೌಂಡರ್ ಮ್ಯಾನೇಜಿಂಗ್ ಟ್ರಸ್ಟಿ ಗೀತಾ ಶಂಕರ್


ಮಕ್ಕಳಿಗೆ ಭಾರವಾದ ಅಪ್ಪ ಅಮ್ಮಂದಿರೂ ಇಲ್ಲಿದ್ದಾರೆ. ಅದ್ರೆ ಇವರನ್ನು ಸಾಕೋದಿಕ್ಕೆ ಹೆಚ್ಚು ಕಷ್ಟವಾಗುತ್ತಿದೆ. “ ಬದುಕು ಒಂದು ಸೈಕಲ್ ಇದ್ದಂತೆ. ಪ್ರತಿಯೊಬ್ಬರು ಕೂಡ ಎಲ್ಲಾ ಘಟ್ಟಗಳನ್ನು ದಾಟಿ ಮುಂದೆ ಬರಬೇಕು. ಇವತ್ತು ಯುವಕರಾಗಿದ್ದವರು ನಾಳೆ ಮುದುಕರಾಗ್ತಾರೆ ಅನ್ನೋದನ್ನ ಅರಿತುಕೊಂಡ್ರೆ ವೃದ್ಧಾಶ್ರಮಗಳ ಅಗತ್ಯವೇ ಇರೋದಿಲ್ಲ. ಆದ್ರೆ ಈಗಿನ ಯುವಕರಿಗೆ ಇದು ಅರ್ಥವೇ ಆಗ್ತಿಲ್ಲ. ಹೀಗಾಗಿ ವೃದ್ಧರ ಸಮಸ್ಯೆಗಳು ಹೆಚ್ಚುತ್ತಿವೆ ಅಂತಾರೆ” ಟ್ರಸ್ಟಿ ಕಿಶೋರ್ ಜೋಸೆಫ್.

ಟ್ರಸ್ಟಿ ಕಿಶೋರ್ ಜೋಸೆಫ್

ಟ್ರಸ್ಟಿ ಕಿಶೋರ್ ಜೋಸೆಫ್


ಸೆಕೆಂಡ್ ಲೈಫ್

ವೃದ್ಧರ ಪಾಲಿನ ಪುನರ್ಜನ್ಮ ಕೇಂದ್ರ ಓಮಾಶ್ರಮ ಹಲವು ಗೌರವಕ್ಕೆ ಪಾತ್ರವಾಗಿದೆ. ಆದ್ರೆ ಖರ್ಚು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಾನಿಗಳು ನೆರವು ನೀಡಿದ್ರೂ ಅದು ಸಾಕಾಗುತ್ತಿಲ್ಲ. ವೃದ್ಧಾಶ್ರಮದಲ್ಲಿ ಗ್ಲಾಮರ್ ಇಲ್ಲ. ಹೀಗಾಗಿ ನೆರವು ನೀಡುವವರ ಸಂಖ್ಯೆ ಕಡಿಮೆ. ಹೀಗಾಗಿ ಬಿಗ್ ಫಂಡಿಂಗ್ನಿಂದ ಇಂತಹ ವೃದ್ಧಾಶ್ರಗಳು ದೂರ ಇವೆ.

ಇನ್ನು ಓಮಾಶ್ರಮ ಸುಸಜ್ಜಿತ ಮನೆಯೇ ಅಗಿದೆ. ವಾರಕ್ಕೆರಡು ಬಾರಿ ಡಾಕ್ಟರ್ಗಳು ಬಂದು ಇಲ್ಲಿರುವವರನ್ನು ವಿಚಾರಿಸಿಕೊಳ್ಳುತ್ತಾರೆ. ಎಮರ್ಜನ್ಸಿ ಸರ್ವೀಸ್ಗಳು ಓಮಾಶ್ರಮದಲ್ಲೇ ಇರೋದ್ರಿಂದಸ ಹೆಚ್ಚಿನ ಸಮಸ್ಯೆ ಆಗೋದಿಲ್ಲ. ಇನ್ನು ಇಲ್ಲಿ ಸೇರಿದ ಹಲವು ಜೀವಗಳು ಇಲ್ಲೇ ಜೀವ ಬಿಟ್ಟಿವೆ. ಕೆಲವು ದೇಹಗಳನ್ನು ಯಾರೂ ತೆಗೆದುಕೊಂಡು ಹೋಗೋದಿಲ್ಲ. ಅಂತಹ ದೇಹವನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ನೀಡಲಾಗುತ್ತಿದೆ.

ಯುವ ಜನರ ಪಾಲಿಗೆ ಹಳೆಯ ಜೀವಗಳು ಬೇಡ. ಆದ್ರೆ ಹಳೆಯ ಜೀವಗಳಿಗೆ ಓಮಾಶ್ರಮದಂತಹ ಸಾವಿರಾರು ವೃದ್ಧಾಶ್ರಮಗಳೇ ಲಾಸ್ಟ್ ರೆಸಾರ್ಟ್ ಅನ್ನೋದನ್ನ ಮರೆಯುವ ಹಾಗಿಲ್ಲ.

    Share on
    close