ವಿಕಲಚೇತನರ ‘ಕಲ್ಯಾಣ’ಕ್ಕಾಗಿ ಶ್ರಮಿಸುತ್ತಿರುವ ಕಲ್ಯಾಣಿ : ನೊಂದ ಮನಸ್ಸುಗಳ ನೆರವಿಗಾಗಿ ವಾಂಟೆಡ್ ಅಂಬ್ರೆಲ್ಲಾ..!

ಟೀಮ್​​ ವೈ.ಎಸ್​. ಕನ್ನಡ

0

ಅನಿರೀಕ್ಷಿತ ಆಘಾತಗಳು ನಮ್ಮನ್ನು ಬದಲಾಯಿಸುತ್ತವೆ, ಬಹಳಷ್ಟು ಸಲ ನಮ್ಮನ್ನ ನಾವು ಅಂತಹ ಸಂದರ್ಭಗಳಲ್ಲೇ ಅರ್ಥಮಾಡಿಕೊಳ್ಳುತ್ತೇವೆ.. ನಾವು ನಿರೀಕ್ಷಿಸದ ಕೆಲವೊಂದು ಘಟನೆಗಳು ನಮ್ಮ ಮನಸ್ಥಿತಿಯನ್ನ ಗಟ್ಟಿಗೊಳಿಸಿ ವಿಶೇಷವಾದುದ್ದನ್ನ ಸಾಧಿಸಲು ಪ್ರೇರೇಪಿಸುತ್ತವೆ. ಈ ಸತ್ಯವನ್ನ ಅರಿತು ಅದಕ್ಕೆ ತಕ್ಕಂತೆ ದಾರಿ ರೂಪಿಸಿಕೊಂಡವರು ಬಹಳಷ್ಟು ಜನರಿದ್ದಾರೆ. ಇದಕ್ಕೊಂದು ಉದಾಹರಣೆ ಕಲ್ಯಾಣಿ ಖೋನಾ.. ಇವರು ನಿಜ ಜೀವನದಲ್ಲಿ ಕೆಲವು ಆಘಾತಕಾರಿ ಘಟನೆಗಳು ಎದುರಿಸಿದ್ರೂ, ಎಲ್ಲವನ್ನೂ ಮೀರಿ ಇವತ್ತು ವಿಕಲಚೇತನರ ಪಾಲಿಗೆ ಆಶಾಕಿರಣವಾಗಿದ್ದಾರೆ.

ಬ್ರೆಜಿಲ್​​ನಲ್ಲಿ ದಿಗ್ಘ್ರಮೆ..!

ಅದು 2013.. ಹಿಂದುಳಿದ ಮಕ್ಕಳ ಮೂಲಭೂತ ಶಿಕ್ಷಣದ ಬಗ್ಗೆ ಉನ್ಯಾಸ ನೀಡಲು ಬ್ರೆಜಿಲ್ ಗೆ ತೆರಳಿದ್ರು. ಆ ಕಾರ್ಯಕ್ರಮ ಆಯೋಜನೆಯಾಗಿದ್ದಿದ್ದು ಕಡುಬಡತನ ಹಾಗೂ ಕ್ರೈಂನಿಂದಲೇ ಕುಖ್ಯಾತಿ ಪಡೆದಿದ್ದ ಬ್ರೆಜಿಲ್ ನ ಬೆಲೆಮ್ ನಗರದಲ್ಲಿ.. ಅಲ್ಲದೆ ಕಲ್ಯಾಣಿ ಖೋನಾ ಅಲ್ಲಿಗೆ ತೆರಳುವ ವೇಳೆ ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿತ್ತು. ಸ್ಥಳೀಯರ ಪ್ರತಿಭಟನೆ ವಿಕೋಪಕ್ಕೂ ತಿರುಗಿತ್ತು. ದುರಾದೃಷ್ಟಕ್ಕೆ ಆ ಸಂಜೆ ಕಲ್ಯಾಣಿ ಖೋನಾರ ಬ್ಯಾಗನ್ನ ಕಳ್ಳನೊಬ್ಬ ಕಿತ್ತುಕೊಂಡು ಪರಾರಿಯಾದ. ಅದ್ರಲ್ಲಿ ಕಲ್ಯಾಣಿಯವರ ಪಾಸ್ ಪೋರ್ಟ್, ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳಿದ್ದವು. ಹೀಗಾಗಿ ಆ ಕಳ್ಳನನ್ನ ಕಲ್ಯಾಣಿ ಬೆನ್ನತ್ತಿದ್ರೂ ಪ್ರಯೋಜನವಾಗಲಿಲ್ಲ. ಆ ಘಟನೆ ಅವರಿಗೆ ಶಾಕ್ ನೀಡಿತ್ತು. ಗೊತ್ತಿಲ್ಲದ ಪರಿಸರ, ಅರ್ಥವಾಗದ ಭಾಷೆ, ಪರಿಚಯವಿಲ್ಲದ ಜನರ ಮುಂದೆ ಒಂದುಕ್ಷಣ ಕಂಗಾಲಾಗಿ ಹೋಗಿದ್ರು. ಆದ್ರೆ ಮುಂದಿನ ಕ್ಷಣದಲ್ಲೇ ಅವರು ಆತ್ಮಸ್ಥೈರ್ಯ ತುಂಬಿಕೊಂಡು ಜಾಣತನ ತೋರಿದ್ರು. ಹೀಗಾಗಿ ಕ್ಲಿಷ್ಟಕರ ಸನ್ನಿವೇಶದಿಂದ ಸುಲಭವಾಗಿ ಹೊರಬರಲು ಅವರಿಗೆ ಸಾಧ್ಯವಾಯ್ತು..

“ ಏನೂ ಗೊತ್ತಿಲ್ಲ ಅಂದಕೊಂಡರೆ ಯಾವುದೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಹೀಗಾಗಿ ಎಲ್ಲವೂ ಸರಿಯಾಗುತ್ತೆ ಅಂತ ಅಂದುಕೊಂಡಿದ್ದೆ ” ಅಂತ ಕಲ್ಯಾಣಿ ಖೋನಾ ಅಂದು ತಾವು ಎದುರಿಸಿದ ಪರಿಸ್ಥಿತಿಯನ್ನ ವಿವರಿಸುತ್ತಾರೆ. ಅಂದಿನ ಘಟನೆಯಿಂದ ಪಾಠಕಲಿತ ಕಲ್ಯಾಣಿ ಆಯ್ದುಕೊಂಡಿದ್ದು ಮಾರ್ಕೆಟಿಂಗ್ ಪಿ ಆರ್ ಕ್ಷೇತ್ರ. ಇಲ್ಲಿ ಸುಮಾರು 20 ವಿವಿಧ ಪ್ರಾಜೆಕ್ಟ್ ಗಳನ್ನ ಕೈಗೆತ್ತಿಕೊಂಡು ಯಶಸ್ವಿಯಾಗಿ ಮುಗಿಸಿದ್ದಾರೆ.

ಜೀವಕ್ಕೆ ಕುತ್ತು ತಂದಿದ್ದ ಹಿಮಾಲಯ ಟ್ರೆಕ್ಕಿಂಗ್...!

ಕಲ್ಯಾಣಿ ಖೋನಾ ಎಷ್ಟೇ ಬ್ಯುಸಿಯಾಗಿದ್ರೂ, ನಿರ್ದಿಷ್ಟ ಕೆಲಸಕ್ಕೆ ತೊಡಗಿಸಿಕೊಂಡಿರಲಿಲ್ಲ. ಆದ್ರೆ ಅವರ ಗೆಳೆಯ ಗೆಳತಿಯರು ನಿರ್ದಿಷ್ಟ ಕೆಲಸಕ್ಕೆ ಒಗ್ಗಿರುವುದನ್ನ ನೋಡಿ ತಾವು ಅದೇ ಹಾದಿ ತುಳಿಯಲು ಬಯಸಿದ್ರು. ಅದಕ್ಕೆ ತಕ್ಕಂತೆ ಒಂದು ಕಂಪೆನಿಯಿಂದ ಉತ್ತಮ ಆಫರ್ ಕೂಡ ಬಂತು. ಆದ್ರೆ ಆ ಹೊಸ ಕೆಲಸಕ್ಕೆ ಸೇರುವ ಮುನ್ನ ಹಿಮಾಲಯಕ್ಕೆ ಟ್ರೆಕ್ಕಿಂಗ್ ಹೋಗಲು ಬಯಸಿದ್ರು. ಅದಕ್ಕಾಗಿ 14,000 ಅಡಿ ಎತ್ತರದ ಹಿಮಾಲಯದಲ್ಲಿ 20 ದಿನಗಳನ್ನ ಕಳೆಯಬೇಕಾಗಿತ್ತು. ಆದ್ರೆ ಅವರ ಬದುಕಿನಲ್ಲಿ ಎರಡನೇ ಆಘಾತ ಕಾದಿದ್ದೂ ಹಿಮಾಲಯದಲ್ಲೇ.. ದೈಹಿಕ ಅಸಮರ್ಥತೆಯಿಂದ ಬಳಲುತ್ತಿದ್ದ ಕಲ್ಯಾಣಿ ಕೊದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ್ರು. ಆದ್ರೆ ಮರುಕ್ಷಣವೇ ಅವರಿಗೆ ಅಂಗವೈಕಲ್ಯತೆ ಹಾಗೂ ಅವರ ಸಮಸ್ಯೆಗಳು ಕಣ್ಣಮುಂದೆ ಬಂದಿದ್ದವು. ಹೀಗಾಗಿ ಅವರು ವಿಕಲಚೇತನರಿಗೆ ಅಗತ್ಯವಾಗುವ ವಸ್ತುಗಳನ್ನ ಒದಗಿಸುವ ಏಜೆನ್ಸಿ ಶುರುಮಾಡಿದ್ರು.

“ಜನರು ಕೇವಲ ಕರುಣೆಯನ್ನ ತೋರಿಸುವ ಬದಲು ವಿಕಲಚೇತನರಿಗೆ ನೆರವಾಗುವ ಬಗ್ಗೆ ಯೋಚಿಸಬೇಕು. ಯಾರಿಗಾದರೂ ಸಹಾಯ ಮಾಡುವಾಗ ಬೇಸರಿಕೊಳ್ಳದೆ ಅವರಿಗೆ ನೆರವಾದ್ರೆ ಮಾತ್ರ ಅದು ಸಾರ್ಥಕ” ಅಂತ ಕಲ್ಯಾಣಿ ಖೋನಾ ತಮ್ಮ ಸಾಮಾಜಿಕ ಕಳಕಳಿಯನ್ನ ತೆರೆದಿಡುತ್ತಾರೆ. ಆದ್ರೆ ಕಲ್ಯಾಣಿ ಖೋನಾ ವಿಕಲಚೇತನರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಲು ಕಾರಣವಾಗಿದ್ದೂ 2015ರಲ್ಲಿ ನಡೆದ ಒಂದು ಘಟನೆ. ಬೆಂಗಳೂರಿನಲ್ಲಿ ನಡೆದ ಸಮಿತ್ ಒಂದರಲ್ಲಿ ಭಾಗವಹಿಸಲು ಕಲ್ಯಾಣಿ ಖೋನಾ ಆಗಮಿಸಿದ್ರು. ಆಗ ಅಲ್ಲಿ ಲೊಕೋಮೋಟಿವ್ ಡಿಸೆಬಿಲಿಟಿಯಿಂದ ಬಳಲುತ್ತಿದ್ದ 40 ವರ್ಷದ ನಾರಾಯಣ್ ಎಂಬ ವ್ಯಕ್ತಿಯ ಪರಿಚಯವಾಯ್ತು. ಕಲ್ಯಾಣಿಯೊಂದಿಗೆ ಗೆಳೆತನ ಬೆಳೆಸಿಕೊಂಡ ಆ ವ್ಯಕ್ತಿ ತನ್ನ ಮನದಾಳದ ಮಾತನ್ನ ಹಂಚಿಕೊಂಡ್ರು.. ಅದರಿಂದ ವಿಕಲಚೇತನರು ಅನುಭವಿಸುವ ಒಂಟಿತನ, ತಮಗ್ಯಾರೂ ಇಲ್ಲ ಅನ್ನೋ ಭಾವನೆಗಳು ಅರಿವಿಗೆ ಬಂತು. ಇದಕ್ಕೊಂದು ಪರಿಹಾರ ಯೋಚಿಸಿದ ಕಲ್ಯಾಣಿ ಖೋನಾ ತಲೆಗೆ ಹೊಳೆದಿದ್ದೇ ವಾಂಟೆಡ್ ಅಂಬ್ರೆಲ್ಲಾ ಕಾನ್ಸೆಪ್ಟ್.. ಇದೊಂದು ಮೊಬೈಲ್ ಡೇಟಿಂಗ್ ಆಪ್ ಆಗಿದ್ದು ವಿಕಲಚೇತನರು ಪರಸ್ಪರ ಸಂಪರ್ಕ ಸಾಧಿಸಿಸಲು ಅವಕಾಶವಿದೆ. ಕಲ್ಯಾಣಿಯ ಈ ಅನ್ವೇಷಣೆ ವಿಶೇಷ ಚೇತನರಿಗೆ ಹೊಸ ಸ್ಫೂರ್ತಿ ನೀಡಿದೆ..

ಇಷ್ಟೆಲ್ಲಾ ಸಾಧಿಸಿ ಅಪೂರ್ವ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿರುವ ಕಲ್ಯಾಣಿ ಖೋನಾ ವಯಸ್ಸು ಕೇವಲ 22 ಅಂದ್ರೆ ನಂಬಲೇ ಬೇಕು. ಅದ್ರಲ್ಲೂ ವಾಂಟೆಡ್ ಅಂಬ್ರೆಲ್ಲಾ ಕಾನ್ಸೆಪ್ಟ್ ಹುಟ್ಟುಹಾಕಿದಾಗ ಆಕೆ 21ರ ಹರೆಯದ ಯುವತಿ. ಇಷ್ಟು ಚಿಕ್ಕವಯಸ್ಸಿಗೇ ಮತ್ತೊಬ್ಬರಿಗಾಗಿ ಮಿಡಿಯುವ ಮನಸ್ಥಿತಿ ಹೊಂದಿರುವುದು ವಿಶೇಷ. ವಿಕಲ ಚೇತನರ ಈ ಸಮಾಜದ ನಿಜವಾದ ಹೀರೋಗಳು, ಅವರಿಂದ ಕಲಿಯುವುದು ಸಾಕಷ್ಟಿದೆ ಅಂತ ಕಲ್ಯಾಣಿ ಖೋನಾ ನಂಬಿದ್ದಾರೆ. ಇಂತವರಿಗಾಗಿ ನಮ್ಮ ಬದುಕಿನಲ್ಲಿ ಸ್ವಲ್ಪ ಸಮಯವನ್ನ ಮೀಸಲಿಟ್ರೆ, ಬದುಕಿಗೆ ಅರ್ಥ ಬರುತ್ತದೆ ಅನ್ನುವುದು ಇವರ ಕಿವಿಮಾತು.

ಲೇಖಕರು: ಪೂರ್ಣಿಮಾ ಪಾರೆಖ್​​
ಅನುವಾದಕರು: ಬಿಆರ್​​ಪಿ

Related Stories

Stories by YourStory Kannada