50 ಶಾಲೆಗಳ 20 ಸಾವಿರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಝಾಯಾ ಲರ್ನಿಂಗ್ ಲ್ಯಾಬ್

ಟೀಮ್​ ವೈ.ಎಸ್​​.

50 ಶಾಲೆಗಳ 20 ಸಾವಿರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ  ಝಾಯಾ ಲರ್ನಿಂಗ್ ಲ್ಯಾಬ್

Thursday October 01, 2015,

4 min Read

ಶೈಕ್ಷಣಿಕ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಸುಮಾರು 1.5 ಮಿಲಿಯನ್ ಶಾಲೆಗಳು ಮುಂದಿನ 5 ವರ್ಷಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಶೈಕ್ಷಣಿಕ ಸಂಸ್ಥೆಗಳನ್ನಾರಂಭಿಸುವ ಉದ್ಯಮಿಗಳಿಗೆ ಇದು ಲಾಭದಾಯಕವಾಗಲಿದೆ. ಆದರೂ ಈ ಉದ್ಯಮದಲ್ಲಿ ಅವಕಾಶದಷ್ಟೇ ಮಹತ್ತರವಾದ ಸವಾಲುಗಳೂ ಇವೆ. ಭಾರತದಲ್ಲಿ ವಿದ್ಯಾವಂತರು, ಹೂಡಿಕೆದಾರರು ಹಾಗೂ ಉದ್ಯಮಿಗಳು ಗಮನಿಸಿದಂತೆ ಕೇವಲ ತಂತ್ರಜ್ಞಾನ ಮಾತ್ರ ಉತ್ತಮ ಫಲಿತಾಂಶ ತಂದುಕೊಡಲಾರದು. ಸ್ಥಿರ ಹಾಗೂ ಉತ್ತಮ ಫಲಿತಾಂಶ ಸಾಧಿಸಲು ಹೆಚ್ಚಿನ ಗಮನ ನೀಡಿ ಮಾರುಕಟ್ಟೆಗೆ ಪ್ರವೇಶ ಪಡೆದಿದೆ ಝಾಯಾ ಲರ್ನಿಂಗ್ ಲ್ಯಾಬ್.

ಝಾಯಾ ಲರ್ನಿಂಗ್ ಲ್ಯಾಬ್ ತಂಡ

ಮುಂಬೈ ಮೂಲದ ಝಾಯಾ ಲರ್ನಿಂಗ್ ಲ್ಯಾಬ್ 2013ರಿಂದ ಹಿಂದುಳಿದ ಸಮುದಾಯಗಳಿಗೆ ಅತ್ಯುತ್ತಮ ದರ್ಜೆಯ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಅಸಮತೋಲನ ನಿವಾರಣೆಗೆ ಪ್ರಯತ್ನಿಸುತ್ತಿದೆ. ಐಐಎಂನಲ್ಲಿ ಕಲಿತ ಸೋಮವಾಜಪೇಯಿ ಹಾಗೂ ಸಿಸ್ಕೋದ ಮಾಜಿ ಇಂಜಿನಿಯರ್ ನೈಲ್ ಡಿಸೋಜ ಈ ಸಂಸ್ಥೆಯ ಸಂಸ್ಥಾಪಕರು. ಝಾಯಾ ಸುಮಾರು 50ಕ್ಕೂ ಹೆಚ್ಚು ಶಾಲೆಗಳಲ್ಲಿ ಅಂದಾಜು 20,000ದಷ್ಟು ಮಕ್ಕಳಿಗೆ ತನ್ನ ಸೇವೆಯನ್ನೊದಗಿಸಿದೆ.

image


ಸಿಸ್ಕೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲೇ ನೈಲ್ ಹಿಂದುಳಿದ ವರ್ಗಗಳ ಶೈಕ್ಷಣಿಕ ಸೇವೆ ಒದಗಿಸುವ ನಿಟ್ಟಿನಲ್ಲಿ ಆಲೋಚಿಸಿದ್ದರು. ಹಾಗೂ ವಿಶ್ವದ ಮೂಲೆ ಮೂಲೆಗಳಲ್ಲಿರುವ ಕನಿಷ್ಠ ಸೌಕರ್ಯದ ಮಕ್ಕಳಿಗೆ ವಿದ್ಯೆಯ ಹಕ್ಕು ದೊರಕಿಸಿಕೊಡುವ ಯೋಜನೆ ನಿರೂಪಿಸಿದ್ದರು. ಮೂಲತಃ ಝಾಯಾ ಎನ್ನುವುದು ಅವರ ನಿಷ್ಠೆಯ ಮಂಗೋಲಿಯನ್ ವಿದ್ಯಾರ್ಥಿ ಐರುನ್ ಝಾಯಾ ಹೆಸರು. ಮಂಗೋಲಿಯಾದ ದೂರದ ಪ್ರದೇಶಗಳ ಅನಾಥಾಶ್ರಮಗಳಿಗೆ ಡಿಜಿಟಲ್ ಪುಸ್ತಕಗಳನ್ನು ಒದಗಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಹಾಗಾಗಿ ಈ ಹೆಸರೇ ಅಂತಿಮವಾಯಿತು.

ಭಾರತದಿಂದ ಬೆಳವಣಿಗೆ ಹೊಂದಿರುವ ಝಾಯಾ ಈಗ ತನ್ನ ಹೆಜ್ಜೆಯನ್ನು ಝಾಂಬಿಯಾ ಸೇರಿದಂತೆ ಇನ್ನಿತರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ವಿಸ್ತರಿಸಿದೆ. ಝಾಯಾ, ಅನಿವಾರ್ಯ ಕಾರಣಗಳಿಂದ ತಮ್ಮ ಕಲಿಕೆ ಮೊಟಕುಗೊಳಿಸಿದ ಬಿಲಿಯನ್‌ಗಟ್ಟಲೆ ವಿದ್ಯಾರ್ಥಿಗಳನ್ನು ಸಾಕ್ಷರರನ್ನಾಗಿಸಲು ಗಮನಹರಿಸಿದೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಶಾಲಾ ತರಗತಿಗಳ ಬದಲಿಗೆ ಝಾಯಾ ಬ್ಲೆಂಡೆಂಡ್ ಲರ್ನಿಂಗ್ ಅನ್ನುವ ಹೆಸರಿನ ಪುನರಾವರ್ತಿತ ಮಾದರಿಯನ್ನು ಅನುಸರಿಸುತ್ತಿದೆ. ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮಾನವಾಗಿ ಭಾಗಿಯಾಗುವ ಸುಂದರ ಮಾದರಿ ಇದಾಗಿದೆ. ಸಾಂಪ್ರದಾಯಿಕ ಶಿಕ್ಷಣದಲ್ಲಿ ಜ್ಞಾನ ಏಕಮುಖವಾಗಿ ಹರಿಯುತ್ತಿತ್ತು. ಆದರೆ ಇಲ್ಲಿ ವಿದ್ಯಾರ್ಥಿಗಳು ತಮ್ಮ ಅನುಕೂಲದ ಸಮಯದಲ್ಲಿ ಟ್ಯಾಬ್ಲೆಟ್ಸ್ ಅಥವಾ ಇನ್ನಿತರ ಯಾವುದಾದರೂ ಉಪಕರಣಗಳ ಸಹಾಯದಿಂದ ನೇರವಾಗಿ ಶಿಕ್ಷಕರನ್ನು ಸಂಪರ್ಕಿಸಿ ಜ್ಞಾನವೃದ್ಧಿ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ವಂತ ಆಸಕ್ತಿಯಿಂದ ಹಾಗೂ ಅನುಕೂಲದ ಸಮಯದಲ್ಲಿ ಶಿಕ್ಷಕರನ್ನು ಸಂಪರ್ಕಿಸುವ ವ್ಯವಸ್ಥೆಯಿಂದಾಗಿ ಅತ್ಯುತ್ತಮ ಫಲಿತಾಂಶ ಹೊರಹೊಮ್ಮುತ್ತಿದೆ.

image


ಝಾಯಾದ ತಾಂತ್ರಿಕತೆ

ನೈಲ್ ಅವಲೋಕಿಸಿರುವಂತೆ ಈಗಾಗಲೇ ವೆಬ್‌ಸೈಟ್‌ನಲ್ಲಿ ಗುಣಾತ್ಮಕ ಡಿಜಿಟಲ್ ವಿಚಾರಗಳನ್ನು ಹೇಳಿಕೊಡುವ ಸಾಕಷ್ಟು ಅವಕಾಶಗಳಿವೆ. ಆದರೆ ಕೆಳಹಂತದ ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ರೀತಿಯ ಉಪಯೋಗಗಳಿಲ್ಲ. ಇದಕ್ಕೆ ಕಾರಣ ಸಂಪರ್ಕದ ಕೊರತೆ, ಶಿಕ್ಷಕರಿಂದ ಸಮರ್ಪಕ ಮಾರ್ಗದರ್ಶನದ ಕೊರತೆ, ಅಂತರ್ಜಾಲ ಸಂಪರ್ಕದ ಅಭಾವ, ವಿದ್ಯುತ್‌ ಶಕ್ತಿಯ ಅಭಾವ, ಅತಿ ದುಬಾರಿಯಾದ ಇಂಟರ್‌ನೆಟ್‌ ಬ್ರೌಸಿಂಗ್, ಉಪಕರಣಗಳ ಕೊರತೆ.

ನಮ್ಮ ಉತ್ಪನ್ನ ಅಂತಹ ಸಮಸ್ಯೆಗಳನ್ನು ಪರಿಹರಿಸಿ ಆ ಸಮುದಾಯಗಳಿಗೆ ನೆರವಾಗಬಲ್ಲದು. ನಮ್ಮ ಕ್ಲಾಸ್ ಕ್ಲೌಡ್ ಉತ್ಪನ್ನ ಶಾಲೆಗಳಲ್ಲಿ ಕಲಿಯಲು ಸಾಧ್ಯವಿಲ್ಲದ ಪರಿಸ್ಥಿತಿಯಿದ್ದರೂ ಡಿಜಿಟಲ್ ವಿಷಯಗಳನ್ನು ಹೇಳಿಕೊಡಲು ಸಮರ್ಥವಾಗಿದೆ ಎಂದು ನೈಲ್ ವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

image


ಝಾಯಾದ ಕ್ಲಾಸ್ ಕ್ಲೌಡ್, ಒಂದು ವೈರ್‌ಲೆಸ್ ಉಪಕರಣವಾಗಿದ್ದು, ಇದರಲ್ಲಿ ಕಲಿಕೆಯ ಭಾಗಗಳನ್ನು ವಿಂಗಡಿಸಿ ಶೇಖರಿಸಿಟ್ಟುಕೊಳ್ಳಬಹುದಾಗಿದೆ. ಜೊತೆಗೆ ಯಾವುದೇ ಬಾಹ್ಯ ಸಂಪರ್ಕವಿಲ್ಲದಿದ್ದರೂ ಇದರೊಳಗಿರುವ ವಿಷಯ ಹಾಗೂ ವಿವರಣೆಗಳು ಸರಳವಾಗಿ ತರಗತಿಯಲ್ಲಿ ಬೋಧಿಸುವಷ್ಟೇ ಸುಲಲಿತವಾಗಿ ವಿದ್ಯಾರ್ಥಿಗಳನ್ನು ತಲುಪಬಲ್ಲದು.

ಈ ಕ್ಲಾಸ್ ಕ್ಲೌಡ್‌ನಲ್ಲಿರುವ ಸಾಫ್ಟ್‌ ವೇರ್ ಕೇವಲ ವಿಷಯಗಳನ್ನು ಹೊಂದಿರುವುದಷ್ಟೇ ಅಲ್ಲದೇ, ಆ ವಿಷಯಗಳ ವಿವರಣೆ, ಆಧಾರಸಹಿತ ಮಂಡನೆ ಹಾಗೂ ಅದನ್ನು ಕಲಿಯುವ ವಿದ್ಯಾರ್ಥಿಗಳ ಫಲಿತಾಂಶ ಮಾನದಂಡ ಸಹ ಇರುತ್ತದೆ. ಇದರಿಂದ ಯಾವುದೇ ಸ್ವತಂತ್ರ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಯಾದರೂ ತನ್ನ ಕನಿಷ್ಠ ಶೈಕ್ಷಣಿಕ ಪ್ರಗತಿಯ ಮೈಲಿಗಲ್ಲಿನತ್ತ ಸಾಗಬಹುದು. ಇದರರ್ಥ ಈ ಮಾದರಿಯಲ್ಲಿ ಸವಾಲುಗಳಿಲ್ಲ ಎಂದಲ್ಲ. ಆದರೆ ಇಲ್ಲಿನ ವಿಷಯಗಳನ್ನು ಸೃಷ್ಟಿಸುವಾಗ ವಿಚಾರಗಳನ್ನು ಸಾಧ್ಯವಾದಷ್ಟು ಸರಳೀಕರಿಸಿ ಭಾರತೀಯ ಶೈಕ್ಷಣಿಕ ಮಾದರಿಯಂತೆ ಅಳವಡಿಸಲಾಗಿದೆ. ಹಾಗಾಗಿ ಇಲ್ಲಿ ತಂತ್ರಜ್ಞಾನದ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಹಿಮ್ಮುಖದಲ್ಲಿರುವ ಸಮುದಾಯಗಳಿಗೆ ಶೈಕ್ಷಣಿಕ ಅಸಮತೋಲನ ನಿವಾರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

ಐಐಎಂನಲ್ಲಿಯೇ ವಿದ್ಯಾಭ್ಯಾಸ ಮುಗಿಸಿ ಬಾರ್ಕ್ಲೇಸ್ ಸಂಸ್ಥೆಯಲ್ಲಿ ಜಾಗತಿಕ ಸಂಶೋಧನಾ ವಿಭಾಗ(ಗ್ಲೋಬಲ್ ರಿಸರ್ಚ್)ದಲ್ಲಿ ನಿರ್ವಾಹಕ ನಿರ್ದೇಶಕರಾಗಿರುವ ಭವತೋಷ್ ವಾಜಪೇಯಿ ಒಂದಂಶದ ಬಹಿರಂಗಪಡಿಸದ ಮೊತ್ತವನ್ನು ಹೂಡಿಕೆಯನ್ನಾಗಿ ಝಾಯಾದಲ್ಲಿ ವಿನಿಯೋಗಿಸಿದ್ದಾರೆ.

ಝಾಯಾದ ಕಾರ್ಯಶೈಲಿ ಹಾಗೂ ವಿಸ್ತರಣೆ

ಬಹುತೇಕ ಆರಂಭಿಕ ಸಂಸ್ಥೆಗಳಂತೆ ಝಾಯಾ ತಂಡದಲ್ಲೂ ಇರುವ ಸದಸ್ಯರು ಕೂಡ 20ರ ಆಸುಪಾಸಿನ ವಯೋಮಾನದವರು. ಹಾಗಾಗಿ ಇಲ್ಲಿಯವರೆಗಿನ ಸಂಸ್ಥೆಯ ಸಾಧನೆಯ ಪೂರ್ಣ ಶ್ರೇಯವನ್ನು ನೈಲ್ ತಮ್ಮ ಯುವತಂಡಕ್ಕೆ ನೀಡಿದ್ದಾರೆ. ನಮ್ಮತಂಡದಲ್ಲಿ ಪ್ರತಿಭಾವಂತರಿದ್ದಾರೆ. ಅವರ ಬುದ್ಧಿವಂತಿಕೆ ಮಿಲಿಯನ್‌ಗಟ್ಟಲೆ ಜನರ ಬದುಕಿನ ರೀತಿಯನ್ನೇ ಬದಲಾಯಿಸಿದೆ. ಶೈಕ್ಷಣಿಕ ಬದಲಾವಣೆಯ ಯೋಜನೆ ಹೆಣೆದು ಇದರಲ್ಲಿ ಅನವರತ ಶ್ರಮಿಸುತ್ತಿರುವ ಈ ಸಮಾನಮನಸ್ಕರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಪಾಲಿನ ಪುಣ್ಯ ಎಂದು ನೈಲ್ ಶ್ಲಾಘಿಸಿದ್ದಾರೆ.

ಕಳೆದ ವರ್ಷ 5 ಜನರಿದ್ದ ಅವರ ತಂಡದಲ್ಲಿ 30 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನೈಲ್ ತಮ್ಮ ಸಂಸ್ಥೆಯಲ್ಲಿ ಕ್ರಿಯಾತ್ಮಕ ಹಾಗೂ ವಿನೂತನ ಹೆಜ್ಜೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಿ ಹೊಸ ಮಾದರಿಯ ಕಾರ್ಯಶೈಲಿ ಪರಿಚಯಿಸುತ್ತಿದ್ದಾರೆ.

ಝಾಯಾ ಒಂದು ಅಪರೂಪದ ಎಜು-ಟೆಕ್ ಸಂಸ್ಥೆಯಾಗಿದ್ದು ಪ್ರತಿ ಹಂತದಲ್ಲೂ ಹೊಸ ಹೊಸ ಆಲೋಚನೆಗಳೊಂದಿಗೆ ಕಾರ್ಯನಿರ್ವಹಿಸುತ್ತಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ವಿಚಾರದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯುತ್ತಿದೆ. ಈ ಮೂಲಕ ವಿಶ್ವದಲ್ಲಿ ಸುತ್ತುವರೆದಿರುವ ಮೂಲಭೂತ ಶಿಕ್ಷಣದ ಅಸಮತೋಲನೆಯನ್ನು ಗುರುತಿಸಿ ನಿವಾರಿಸುವತ್ತ ಯಶಸ್ವಿ ಹೆಜ್ಜೆ ಇಟ್ಟಿದೆ. ಹಾಗಾಗಿ ಸದ್ಯ ಸುಭದ್ರ ಸ್ಥಿತಿಯಲ್ಲಿರುವ ಝಾಯಾ ಮುಂಬರುವ ವರ್ಷಗಳಲ್ಲಿ ಜಾಗತಿಕವಾಗಿ ಅತೀ ಬಲಾಢ್ಯ ಶೈಕ್ಷಣಿಕ ತಂತ್ರಜ್ಞಾನ ಒದಗಿಸುವ ಸಂಸ್ಥೆಯಾಗುವ ಎಲ್ಲಾ ಸಾಧ್ಯತೆಗಳನ್ನು ಸೃಷ್ಟಿಸಿದೆ.

ಎಜು-ಟೆಕ್ ಕ್ಷೇತ್ರದ ಉಳಿದ ಪ್ರತಿಸ್ಪರ್ಧಿಗಳು

ಶೈಕ್ಷಣಿಕ ತಂತ್ರಜ್ಞಾನದ ಉಳಿದ ಸಂಸ್ಥೆಗಳ ವಿಚಾರವನ್ನು ಇಲ್ಲಿ ಅವಲೋಕಿಸಲೇಬೇಕು. ಎಜುಕಾರ್ಟ್ ಸಂಸ್ಥೆ ಆನ್‌ಲೈನ್ ಶಿಕ್ಷಣ ನೀಡುತ್ತಿರುವ, ಈ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ವ್ಯಾಪ್ತಿ ಹೊಂದಿರುವ ಸಂಸ್ಥೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಹಲವು ತರಬೇತಿ ಕೇಂದ್ರಗಳನ್ನು ಹೊಂದಿದ್ದು ಅನೇಕ ವಿಷಯಗಳನ್ನು ಕಲಿಸುತ್ತಿದೆ. ಐ ನೇಚರ್ ಎಜುಕೇಶನ್ ಸಲ್ಯೂಶನ್ ಬೆಂಗಳೂರು ಮೂಲದ ಆನ್‌ಲೈನ್ ಹಾಗೂ ಆಫ್‌ಲೈನ್ ಉನ್ನತ ಶಿಕ್ಷಣ ಸಂಸ್ಥೆ. ಮೆರಿಟ್ ನೇಷನ್.ಕಾಮ್ ಸಂಸ್ಥೆ ಸಿಬಿಎಸ್‌ಸಿ, ಐಸಿಎಸ್‌ಸಿನಂತಹ ವಿಶೇಷ ವಿಭಾಗಗಳ ಕಲಿಕೆಯನ್ನು ನೀಡುವ ಮೂಲಕ 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿದೆ. ಮುಂಬೈ ಮೂಲದ ಟಾಪರ್ ಸಂಸ್ಥೆ ತನ್ನ ಆನ್​​ಲೈನ್ ಪ್ಲಾಟ್‌ಫಾರಂ ಮೂಲಕ ಶಾಲೆಗಳಲ್ಲಿ ಆಫ್‌ಲೈನ್ ಕಲಿಕೆಯ ಜೊತೆ ಜೆಇಇಇ ಹಾಗೂ ವೈದ್ಯಕೀಯ ಪರೀಕ್ಷೆಗಳಿಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದೆ. ಆ್ಯಪ್ ಆಧಾರಿತ ಶಿಕ್ಷಣ ನೀಡುವ ಎಜು ಈಸ್‌ ಫನ್‌ ನಂತಹ ಕೆಲವು ಸಂಸ್ಥೆಗಳೂ ಈಗೀಗ ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿಯಲ್ಲಿವೆ.

image


ಭಾರತೀಯ ಮಾರುಕಟ್ಟೆಯಲ್ಲಿ ಸೇವಾಕ್ಷೇತ್ರದ ಅದ್ವಿತೀಯ ಬೆಳವಣಿಗೆಯಲ್ಲಿ ಶಿಕ್ಷಣ ಕ್ಷೇತ್ರವೂ ಗುರುತರ ಸಾಧನೆಗೈಯುತ್ತಿದೆ. ವ್ಯಾಪಕ ಬೆಳವಣಿಗೆ, ಅಂತರ್ಜಾಲ ವ್ಯವಸ್ಥೆ, ಡಿಜಿಟಲೈಸೇಶನ್ ಪ್ರಗತಿ ಇತ್ತೀಚೆಗೆ ಶೈಕ್ಷಣಿಕ ಸೇವಾವಲಯದ ವಿಸ್ತಾರಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಇದೇ ಸಾಲಿನಲ್ಲಿರುವ ಝಾಯಾ ಲರ್ನಿಂಗ್ ಲ್ಯಾಬ್ ಸಂಸ್ಥೆಯೂ ಶೈಕ್ಷಣಿಕ ಸೇವಾ ವಲಯದ ಪ್ರಗತಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುತ್ತಿದೆ.