ನಾಟ್ಯಕ್ಕಾಗಿ ಸಾಫ್ಟ್​​ವೇರ್​​ ಕೆಲಸ ಬಿಟ್ಟ ದಿಟ್ಟ ಮಹಿಳೆ..!

ವಿಶ್ವಾಸ್​​ ಭಾರಾಧ್ವಾಜ್​​

ನಾಟ್ಯಕ್ಕಾಗಿ ಸಾಫ್ಟ್​​ವೇರ್​​ ಕೆಲಸ ಬಿಟ್ಟ ದಿಟ್ಟ ಮಹಿಳೆ..!

Wednesday October 28, 2015,

4 min Read

ವಿಶ್ವವಿಖ್ಯಾತ ಜೋಗ ಜಲಪಾತವನ್ನು ಹೊಂದಿರುವ ಮಲೆನಾಡಿನ ಪುಟ್ಟನಗರಿ ಸಾಗರ ತನ್ನೊಡಲಲ್ಲಿ ಅಪಾರ ಪ್ರತಿಭಾವಂತರನ್ನೇ ಹೊಂದಿದೆ. ತಮ್ಮಲ್ಲಿರುವ ಪ್ರತಿಭೆಯ ಅಭಿವ್ಯಕ್ತತೆಗಾಗಿ ಅವಿರತ ಶ್ರಮಪಟ್ಟು ಯಾವುದೇ ತ್ಯಾಗಕ್ಕೂ ಮುಂದಾಗಬಲ್ಲ ಸಾಧಕರಿಗೇನು ಇಲ್ಲಿ ಕಡಿಮೆಯಿಲ್ಲ. ಅಂತಹದ್ದೇ ಅಪ್ರತಿಮ ಸಾಧಕಿ ಸಾಗರದ ನಾಟ್ಯತರಂಗ ಕಲಾಶಾಲೆಯ ನೃತ್ಯ ಕಲಾವಿದೆ ಸಮುದ್ಯತಾ. ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸುತ್ತಿರುವ ಸಮುದ್ಯತಾರಿಗೆ ನಾಟ್ಯವೇ ಸರ್ವಸ್ವ.

image


ಬಹುತೇಕ ಜಾಗತೀಕರಣ ಪ್ರಭಾವದಿಂದ ಎಂಜಿನಿಯರ್​​​ಗಳ ಹೇರಳ ಹಣ ಸಂಪಾದಿಸಬೇಕೆಂಬ ಗುರಿಯೇ ಎಂಜಿನಿಯರ್ ಕಲಿಕೆಯ ಹಿಂದಿನ ಉದ್ದೇಶವಾಗಿರುತ್ತದೆ. ಸಾಫ್ಟ್​​ವೇರ್ ಜಗತ್ತು ವಿಸ್ಕೃತವಾಗಿ ಬೆಳೆದು ಭಾರತದ ಐಟಿ ಕ್ಷೇತ್ರದಲ್ಲಿ ಹಣದ ಬೃಹತ್ ಹರಿವನ್ನೇ ಹುಟ್ಟುಹಾಕಿದೆ. ಆದರೆ ಹಣ ಗಳಿಕೆಯ ಸಹಜ ಆಸೆ ತೊರೆದು ನೃತ್ಯಾಭ್ಯಾಸವೇ ತಮ್ಮ ಜೀವನದ ಪರಮ ಗುರಿ ಅಂದುಕೊಂಡ ಅದ್ವಿತೀಯ ಕಲಾವಿದೆ ಸಮುದ್ಯತಾ.

ಮನೆಯಲ್ಲಿ ನೃತ್ಯ ಕಲಿಕೆಗೆ ಪೂರಕ ವಾತಾವರಣ- ಸಮುದ್ಯತಾರ ಹಿನ್ನೆಲೆ

ಸಾಗರದ ನಾಟ್ಯತರಂಗ ನೃತ್ಯಕಲಿಕಾ ಶಾಲೆಯ ಸಂಸ್ಥಾಪಕ ಜಿ.ಬಿ ಜನಾರ್ದನ್ ಹಾಗೂ ವರದಾ ದಂಪತಿಗಳ ಪುತ್ರಿಯಾದ ಸಮುದ್ಯತಾರಿಗೆ ಮನೆಯಲ್ಲಿಯೇ ನೃತ್ಯಾಭ್ಯಾಸದ ಪೂರಕ ವಾತಾವರಣವಿತ್ತು. ಬಾಲ್ಯದಲ್ಲಿಯೇ ನೃತ್ಯಾಭ್ಯಾಸಕ್ಕೆ ಆಸಕ್ತಿ ತೋರಿದ ಸಮುದ್ಯತಾರಿಗೆ ತಂದೇ ಜನಾರ್ಧನ್ ಮೊದಲ ಆದ್ಯ ಗುರು. ನಾಲ್ಕು ವರ್ಷದವಳಿದ್ದಾಗಿನಿಂದ ನೃತ್ಯಾಭ್ಯಾಸ ಮುಂದುವರಿಸಿದ ಅವರು, ಸತತ 9 ವರ್ಷಗಳ ವಿದ್ವತ್ ಒಂದು ವರ್ಷದ ಪೋಸ್ಟ್ ವಿದ್ವತ್ ಮುಗಿಸಿದ್ದಾರೆ. ಸಾಗರದ ಸೈಂಟ್ ಜೋಸೆಫ್, ನಿರ್ಮಲಾ ಪ್ರೌಢ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ ಸಮುದ್ಯುತಾ ಲಾಲ್ ಬಹೂದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಹಾಗೂ ಚಿಕ್ಕಮಂಗಳೂರಿನ ಆದಿಚುಂಚನಗಿರಿ ಎಂಜಿನಿಯರ್ ಕಾಲೇಜಿನಲ್ಲಿ ಎಂಜಿನಿಯರ್ ಶಿಕ್ಷಣ ಪಡೆದುಕೊಂಡಿದ್ದಾರೆ. ಕೆಲಕಾಲ ಬೆಂಗಳೂರಿನ ಪ್ರತಿಷ್ಠಿತ ‘ಜಿಯೋಮೆಟ್ರಿಕ್’ ಎನ್ನುವ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿದರಾದರೂ ನೃತ್ಯಾಭ್ಯಾಸ ಹಾಗೂ ಕಲೆಯ ತುಡಿತದಿಂದ ಪುನಃ ಸ್ವಕ್ಷೇತ್ರಕ್ಕೆ ವಾಪಸಾಗಿ ಹವ್ಯಾಸವನ್ನು ಪ್ರವೃತ್ತಿ ಹಾಗೂ ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಮನೆಯಲ್ಲಿ ಕಲೆಯ ವಾತಾವರಣವಿದ್ದುದರಿಂದ ಸಂಗೀತ ಹಾಗೂ ನೃತ್ಯದತ್ತ ಒಲವು ಮೂಡಿತು ಎನ್ನುವ ಅವರು, ತಂದೆ ಜನಾರ್ದನ್ ಮೊದಲ ಗುರು. ಅವರಿಂದ ನೃತ್ಯಭ್ಯಾಸದ ವಿವಿಧ ಮಜಲುಗಳನ್ನು ಕಲಿತುಕೊಂಡರು. ಆನಂತರ ಬೆಂಗಳೂರಿನ ವಿಶೃತ ನೃತ್ಯ ಶಾಲೆಯ ಬಿ.ಕೆ ವಸಂತಲಕ್ಷ್ಮಿ ಬಳಿ 3 ವರ್ಷ ಅಭ್ಯಾಸ ನಡೆಸಿದರು. ಮದುವೆಯಾದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ಇನ್ನೂ ಹೆಚ್ಚಿನ ಅಭ್ಯಾಸ ನಡೆಸಬೇಕು ಎನ್ನುವ ಅತೀವ ಆಸಕ್ತಿ ಅವರಿಗಿದೆ. ಅತ್ತೆ ಪುಷ್ಪಾ ಹಾಗೂ ಮಾವ ಟಿ.ಎಸ್ ರಾಘವೇಂದ್ರ ಕಿರುತೆರೆಯ ಕಲಾವಿದರಾಗಿದ್ದಾರೆ. ಗಂಡನ ಮನೆಯಲ್ಲಿಯೂ ಕಲೆಗೆ ಪ್ರೋತ್ಸಾಹದ ವಾತಾವರಣವಿದೆ. ಪತಿ ಶಶಾಂಕ್ ಸಾಫ್ಟ್​ವೇರ್​​ ಎಂಜಿನಿಯರ್ ಆಗಿದ್ದರೂ, ಅವರ ನೃತ್ಯಾಭ್ಯಾಸಕ್ಕೆ ಅಗತ್ಯ ಬೆಂಬಲ ನೀಡುತ್ತಿದ್ದಾರೆ. ಕೆಲವು ವರ್ಷಗಳಿಂದೀಚೆಗೆ ಪತಿಯೊಡಗೂಡಿ ಮೃದಂಗ ಅಭ್ಯಾಸ ಸಹ ಕಲಿಯುತ್ತಿದ್ದಾರೆ ಸಮುದ್ಯತಾ.

image


ನೃತ್ಯ ಕ್ಷೇತ್ರದಲ್ಲಿ ಅಚ್ಚರಿಯ ಸಾಧನೆ ಮಾಡಿದ ಸಮುದ್ಯತಾ:

ಇನ್ನು ಅವರ ನೃತ್ಯ ಸಾಧನೆಯನ್ನು ಕೇಳುತ್ತಾ ಹೋದರೆ ನಿಜಕ್ಕೂ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ತಮ್ಮ ಶಾಲಾ ದಿನಗಳಿಂದಲೇ ಅನೇಕ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದರು. 1997ರಲ್ಲಿ ದೆಹಲಿಯಲ್ಲಿ ಬಾಲಶ್ರೀ ಕ್ಯಾಂಪಿನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ತೆರಳಿದ್ದರು. 2001ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನವನ್ನೂ ಪಡೆದುಕೊಂಡಿದ್ದರು. ಚಂದನ ವಾಹಿನಿಯ ‘ನೂಪುರ ನಾದ’ ಕಾರ್ಯಕ್ರಮದಲ್ಲಿ ಬಿ ಕಲಾವಿದೆಯಾಗಿ ಭಾಗವಹಿಸಿದ್ದರು. ಸಹ್ಯಾದ್ರಿ ಉತ್ಸವ, ಅನನ್ಯ ಇಕ್ಕೇರಿ ಉತ್ಸವಗಳಂತಹ ಉತ್ಸವಗಳಲ್ಲದೆ, ವಿಶ್ರುತ ನೃತ್ಯ ಶಾಲೆಯ ಹಲವು ಕಾರ್ಯಕ್ರಮಗಳು, ಸಾಧನ ಸಂಗಮ ಟ್ರಸ್ಟ್ ಬೆಂಗಳೂರು ಆಯೋಜನೆಯ ಶಾಸ್ತ್ರೀಯ ನೃತ್ಯೋತ್ಸವದಲ್ಲಿ ‘ಯುಗಲ ಕಾರ್ಯಕ್ರಮ’, 2010ರ ಹಂಪಿ ಉತ್ಸವಗಳಲ್ಲಿ ಮನೋಜ್ಞ ನೃತ್ಯ ಪ್ರದರ್ಶನ ನೀಡಿದ್ದಾರೆ.

ಭಾರತೀಯ ರಕ್ಷಣಾ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಹಾಗೂ ಅನೇಕ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. 2008ರಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ತಂಜಾವೂರಿನ ಬೃಹದೀಶ್ವರ ದೇವಾಲಯಕ್ಕೆ ಸಾವಿರ ವರ್ಷ ತುಂಬಿದ ನಿಮಿತ್ತ ಹಮ್ಮಿಕೊಂಡಿದ್ದ, ಪದ್ಮಾಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ‘ನೃತ್ಯ ಮಹಾಯಜ್ಞ’ ಎನ್ನುವ 1000 ಜನ ನೃತ್ಯ ಕಲಾವಿದೆಯರ ಕಾರ್ಯಕ್ರಮದಲ್ಲಿ ಸಹೋದರಿ ಸಮನ್ವಿತಾರೊಂದಿಗೆ ಪಾಲ್ಗೊಂಡಿದ್ದಾರೆ. ಆ ಕಾರ್ಯಕ್ರಮದ ಇನ್ನೊಂದು ವಿಶೇಷವೆಂದರೆ ಸಮುದ್ಯತಾರ ನೇತೃತ್ವದಲ್ಲಿ ಭಾಗವಹಿಸಿದ ನೃತ್ಯ ಕಲಾವಿದೆಯರು ಸಾಗರದ ನಾಟ್ಯ ತರಂಗದ ವಿದ್ಯಾರ್ಥಿನಿಯರು ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿದ ಏಕೈಕ ನಾಟ್ಯ ಶಾಲೆ ನಾಟ್ಯತರಂಗ. ಇದಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ರಿಸರ್ಚ್ ಫೆಲೋಶಿಪ್ ಪಡೆದುಕೊಂಡಿದ್ದಾರೆ. ಗಮಕ, ಜಾನಪದ, ಸಂಗೀತ ಹಾಗೂ ನೃತ್ಯ ಸೇರಿದಂತೆ ಕೇವಲ 5 ಜನರಿಗೆ ನೀಡುವ ಈ ಫೆಲೋಶಿಪ್ ಸಮುಧ್ಯಾತಾರಿಗೆ ಲಭಿಸಿರುವುದು ಹೆಮ್ಮೆಯ ಸಾಧನೆಯೇ ಸರಿ.

ನೃತ್ಯದ ಜೊತೆಗೆ ಉಳಿದ ಕಲೆಗಳಿಗೂ ಆದ್ಯತೆ:

ನೃತ್ಯವಲ್ಲದೆ ಶಿವಮೊಗ್ಗದ ಹೆಚ್.ಎಸ್ ನಾಗರಾಜ್​​ರ ಬಳಿ ಕೆಲಕಾಲ ಕರ್ನಾಟಕ ಸಂಗೀತಾಭ್ಯಾಸವನ್ನು ಮಾಡಿದ್ದಾರೆ. ಸಧ್ಯ ರವಿಶಂಕರ್ ಶರ್ಮರ ಬಳಿ ಮೃದಂಗ ಕಲಿಯುತ್ತಿದ್ದಾರೆ. ಸಾಗರದ ಖ್ಯಾತ ರಂಗಕರ್ಮಿ ಎಸ್ ಮಾಲತಿಯವರ ‘ಬುದ್ದ ಹೇಳಿದ ಕತೆ’ ಹಾಗೂ ಇನ್ನೊಂದು ಮಕ್ಕಳ ನಾಟಕಕ್ಕೆ ನೃತ್ಯ ತರಭೇತಿ ನೀಡಿದ್ದಾರೆ. ಬೆಂಗಳೂರಿನಲ್ಲಿಯೂ ಬೆನಕ ನಾಟಕ ತಂಡ ಹಾಗೂ ಅಮೆಚ್ಯೂರ್ ಆರ್ಟಿಸ್ಟ್ ನಾಟಕ ತಂಡಗಳಲ್ಲಿ ನೃತ್ಯ ತರಭೇತಿ ನೀಡುವುದರ ಮೂಲಕ ತಾವು ಬಹುಮುಖ ಪ್ರತಿಭೆ ಎನ್ನುವುದನ್ನು ಸಾಬೀತುಗೊಳಿಸಿದ್ದಾರೆ.

ಖಾಸಗಿ ಕಂಪೆನಿಯ ವೃತ್ತಿಯನ್ನು ಬಿಟ್ಟ ನಂತರ ಬೆಂಗಳೂರಿನ ಗಿರಿನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಪ್ರತಿಷ್ಠಾನದ ‘ವಿಜಯ ಭಾರತಿ’ ನೃತ್ಯಶಾಲೆಯಲ್ಲಿ ಅಧ್ಯಾಪಕಿಯಾಗಿ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುತ್ತಿದ್ದಾರೆ. ನೃತ್ಯದ ಡಿಪ್ಲೋಮೋ ಹಾಗೂ ಪದವಿ ಕಾಲೇಜನ್ನು ಆರಂಭಿಸುವ ಯೋಜನೆ ಹೊಂದಿರುವ ಸಮುದ್ಯತಾ, ಈ ನಿಟ್ಟಿನಲ್ಲಿ ಬೆಂಗಳೂರು ವಿವಿಯ ಅನುಮತಿ ಹಾಗೂ ಪರವಾನಗಿಯನ್ನು ಪಡೆದುಕೊಂಡಿದ್ದಾರೆ. ಆಸಕ್ತಿಯಿಂದ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಡುವುದರಲ್ಲಿ ಸಕ್ರಿಯವಾಗಿದ್ದಾರೆ.

ಪಾರಂಪರಿಕ ಕಲೆಗಳನ್ನು ಉಳಿಸಬೇಕು:

ಸಮುದ್ಯತಾ, ಪಾಶ್ಚಿಮಾತ್ಯ ಅನುಕರಣೆಯಿಂದಾಗಿ ನಮ್ಮ ಯುವ ಜನಾಂಗ ಹಿಪ್ಹಾತಪ್, ಬ್ರೇಕ್​​ಡ್ಯಾನ್ಸ್ ಮುಂತಾದ ಪಾಶ್ಚಾತ್ಯ ಕುಣಿತಕ್ಕೆ ಜೋತು ಬೀಳುತ್ತಿದ್ದಾರೆ. ಇದರಿಂದ ನಮ್ಮ ಭಾರತೀಯ ಸಂಸ್ಕ್ರತಿ ಆತ್ಮ ಭರತನಾಟ್ಯದಂತಹ ಕಲೆಯ ಆಸಕ್ತಿಯನ್ನು ಕಳೆದುಕೊಳ್ಳತೊಡಗಿದೆ. ತಾವು ಕಾಲೇಜು ಆರಂಭಿಸುತ್ತಿರುವುದು ಸಂಸ್ಕ್ರತಿ ಮತ್ತು ನಾಟ್ಯದ ಪುನಶ್ಚೇತನಕ್ಕಾಗಿ ಎಂದರು.

ನೃತ್ಯದಲ್ಲಿ ಕಲಿತಷ್ಟೂ ಕಲಿಯುವುದಿರುತ್ತದೆ. ಇನ್ನೂ ಹೆಚ್ಚಿನ ಅಭ್ಯಾಸ ಮಾಡಬೇಕು. ತಮ್ಮ ಜೀವನವನ್ನು ನೃತ್ಯಕ್ಕಾಗಿಯೇ ಮೀಸಲಿಡಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿರುವ ಸಮುದ್ಯತಾ ತಾವು ಕಲಿತ ನಾಟ್ಯತರಂಗ ನೃತ್ಯ ಶಾಲೆಯ ಅಭಿವೃದ್ದಿಯ ಕನಸು ಹೊಂದಿದ್ದಾರೆ. ಸಾಗರದ ಧೀಮಂತ ನೆಲದಲ್ಲಿ ಹುಟ್ಟಿ ರಾಷ್ಟ್ರೀಯವಾಗಿ ಗುರುತಿಸಿಕೊಳ್ಳುತ್ತಿರುವ ಸಮುದ್ಯತಾರ ಕನಸುಗಳು ಶೀಘ್ರ ಸಾಕಾರಗೊಳ್ಳಲಿ ಎಂದು ಆಶಿಸೋಣ.

image


ಮಗಳ ಸಾಧನೆಗೆ ಆಪ್ಪ ವಿದ್ವಾನ್ ಜನಾರ್ದನ್​​ ಹೆಮ್ಮೆ:

ಮಗಳು ಸಮುದ್ಯತಾಳ ಸಾಧನೆ ಬಗ್ಗೆ ಅಪ್ಪ ಹಾಗೂ ನಾಟ್ಯತರಂಗ ಶಾಲೆಯ ವಿದ್ವಾನಿ ಜನಾರ್ದನ್​ಗೆ ಹೆಮ್ಮೆಯಿದೆ. ಬಾಲ್ಯದಿಂದಲೇ ನೃತ್ಯದಲ್ಲಿ ತುಂಬ ಆಸಕ್ತಿ ಹೊಂದಿದ್ದ ಮಗಳಿಗೆ ಈ ನಿಟ್ಟಿನಲ್ಲಿ ಮುಂದುವರೆಯಲು ಅಪ್ಪನೇ ಪ್ರೇರಣೆ. ಮಗಳ ಅಭಿರುಚಿಗೆ ಪೂರಕವಾಗಿ ಅಗತ್ಯ ಪ್ರೋತ್ಸಾಹವನ್ನು ಅವರ ಪೋಷಕರು ನೀಡಿದರು. ಭಾರತೀಯ ಸಂಸ್ಕ್ರತಿ ಪ್ರಚಾರವೂ ಈ ಮೂಲಕ ಸಾಧ್ಯವಾಗಿದೆ. ಲಕ್ಷಗಟ್ಟಲೆ ಸಂಪಾದನೆಯ ಸಾಫ್ಟ್​ವೇರ್ ಉದ್ಯೋಗವನ್ನು ಕೈಬಿಟ್ಟು ಭರತನಾಟ್ಯಕ್ಕೇ ತನ್ನನ್ನು ಒಪ್ಪಿಸಿಕೊಂಡಿರುವ ಮಗಳ ಧ್ಯೇಯೋದ್ದೇಶಕ್ಕೆ ಅಪ್ಪನಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಮಗೆ ಕಲೆಗೆ ಸಂಬಂಧಿಸಿ ಯಾವ ಕೌಟುಂಬಿಕ ಹಿನ್ನೆಲೆಯೂ ಇಲ್ಲ. ನನಗೆ ಯಕ್ಷಗಾನದ ಬಗ್ಗೆ ಪ್ರೀತಿಯಿದೆ. ನಾಟ್ಯ ಸಮುದ್ಯತಾಳಿಗೆ ಸಹಜವಾಗಿ ಹುಟ್ಟಿದ ಆಸಕ್ತಿ ಅಂತಾರೆ ಜನಾರ್ದನ್.

    Share on
    close