ಸೇನೆಯಲ್ಲಿ ದೇಶಭಕ್ತ ಯೋಧ-ಬಾಕ್ಸಿಂಗ್ ರಿಂಗ್​​ನಲ್ಲಿ ಗೋಲ್ಡ್​​ಗೆ ಪಂಚ್

ಉಷಾ ಹರೀಶ್​​

0

ಕೆಲವರು ಅನಿವಾರ್ಯವಾಗಿ ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡುತ್ತಾ ಮಾಡುತ್ತಾ ಅದನ್ನೇ ಪ್ರೀತಿಸುತ್ತಾರೆ. ಇನ್ನು ಕೆಲವರಿಗೆ ಪ್ರೀತಿಯ ಕೆಲಸವೇ ಸಿಗುತ್ತದೆ. ನೆಮ್ಮದಿಯೂ ಇರುತ್ತದೆ. ಆದ್ರೆ ದಿನ ಕಳೆದಂತೆ ಆಸಕ್ತಿಯ ಕೇಂದ್ರವಾಗಿದ್ದ ಕೆಲವೊಂದನ್ನು ಮರೆತೇ ಬಿಡುತ್ತಾರೆ. ಆದ್ರೆ ಶಿವಶಂಕರಪ್ಪ ಅವರ ಕಥೆಯೇ ಬೇರೆ. ಪ್ರೀತಿಸಿದ ಕೆಲಸವೂ ಸಿಕ್ಕಿತ್ತು.. ಜೊತೆಗೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ ನೆಮ್ಮದಿಯೂ ಇದೆ.

ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಪೊಲೀಸ್ ಬಾಕ್ಸಿಂಗ್ ಸರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕನ್ನಡಿಗ ಶಿವಶಂಕರಪ್ಪ ರಜತ ಪದಕ ಗೆದ್ದು ಸಾಕಷ್ಟು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.ಗಡಿ ಭದ್ರತಾ ಪಡೆಯ ಯೋಧನಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 35 ವರ್ಷದ ಶಿವಶಂಕರಪ್ಪ ಅವರ ಈ ಅಮೋಘ ಸಾಧನೆ ಕನ್ನಡಿಗರು ಹೆಮ್ಮೆ ಪಡುವಂತಥದ್ದಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹಳ್ಳಿ ಗ್ರಾಮದ ರೈತ ಕುಟುಂಬದಿಂದ ಬಂದ ಶಿವಶಂಕರಪ್ಪ, ಅಮೆರಿಕದ ವರ್ಜೀನಿಯಾದ ಫೈರ್ಫಾಕ್ಸ್ ಕೌಂಟಿಯಲ್ಲಿ ನಡೆದ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್​​ನ ಹೆವಿವೇಟ್ ಬಾಕ್ಸಿಂಗ್ಸ್​​ನ ಲ್ಲಿ ಸ್ಪರ್ಧಿಸಿ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. ಸೇನೆಯ ಗೌರವಕ್ಕೆ ಮತ್ತೊಂದು ಗರಿ ನೀಡಿದ್ದಾರೆ.

ದೇಶ ಸೇವೆಯ ಜತೆಗೆ ಬಾಕ್ಸಿಂಗ್

2003ರಲ್ಲಿ ಜಿ.ಡಿ ಪೇದೆಯಾಗಿ ಬಿಎಸ್ಎಫ್ ಸೇರಿದ ಶಿವಶಂಕರಪ್ಪ ಅವರ ಆಳತ್ತರದ ಅಜಾನುಬಾಹು ದೇಹವನ್ನು ನೋಡಿದ ಇವರ ಮೇಲಾಧಿಕಾರಿಗಳು, ಇವರಿಗೆ ಬಾಕ್ಸಿಂಗ್ ತರಬೇತಿ ತೆಗೆದುಕೊಳ್ಳಲು ಸೂಚಿಸಿದರು. ಮೊದಲಿಂದಲೂ ಬಾಕ್ಸಿಂಗ್ ಬಗ್ಗೆ ಮೋಹ ಇದ್ದ ಶಿವಶಂಕರಪ್ಪ 2004ರಿಂದ ಬಾಕ್ಸಿಂಗ್ ತರಬೇತಿ ಆರಂಭಿಸಿದರು. ಆದ್ರೆ ಆರಂಭದಲ್ಲಿ ಯಶಸ್ಸು ಶಿವಶಂಕರಪ್ಪಗೆ ಸುಲಭವಾಗಿ ಒಲಿದಿರಲಿಲ್ಲ. ಆದ್ರೆ ಯಶಸ್ಸು ಸಿಗೋ ತನಕ ಹಿಡಿದ ಕೆಲಸ ಬಿಡೊ ಜಾಯಮಾನ ಇವರದ್ದಾಗಿರಲಿಲ್ಲ. "ದೇಶ ಸೇವೆ ಮಾಡಲು ಸೇನೆ ಸೇರಿದೆ. ಆದರೆ ನನ್ನ ಎತ್ತರ ದೇಹದ ಆಕಾರ ನೋಡಿ ಮೇಲಾಧಿಕಾರಿಗಳು ನನ್ನ ಮೇಲೆ ನಂಬಿಕೆ ಇಟ್ಟು ಬಾಕ್ಸಿಂಗ್ ತರಬೇತಿ ಕೊಡಿಸಿದರು. ಪ್ರತಿ ವರ್ಷ ಒಂದೊಂದು ಪದಕ ಗೆದ್ದು ಅವರ ನಂಬಿಕೆ ಉಳಿಸಿದ್ದೇನೆ. ನನ್ನ ತಂದೆ ತಾಯಿ ಮತ್ತು ನನ್ನ ಮಡದಿಯ ಪ್ರೋತ್ಸಾಹವೇ ಇದಕ್ಕೆಲ್ಲಾ ಕಾರಣ". ಅಂತಾ ಹೆಮ್ಮೆಯಿಂದ ಶಿವಶಂಕರಪ್ಪ ಹೇಳಿಕೊಳ್ಳುತ್ತಾರೆ.

2008ರಲ್ಲಿ ಮೊದಲ ಪದಕ

2007ರಲ್ಲಿ ತರಬೇತಿ ಮುಗಿಸಿದ ಶಿವಶಂಕರ್ 2008ರಲ್ಲಿ ಆಲ್ ಇಂಡಿಯಾ ಪೊಲೀಸ್ ಗೇಮ್ಸ್​​ನಲ್ಲಿ ಮೊಟ್ಟ ಮೊದಲ ಬಾರಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಬೆಳ್ಳಿ ಪದಕ ಗೆದ್ದು ಬೀಗಿದ್ದರು. ಅಂದಿನಿಂದ ಪ್ರತಿ ವರ್ಷ ಎಲ್ಲಾ ಪೊಲೀಸ್ ಕ್ರೀಡಾ ಕೂಟಗಳಲ್ಲಿಯೂ ಭಾಗವಹಿಸಿ ಪದಕ ಗೆಲ್ಲುತ್ತಾ ಬಂದಿದ್ದಾರೆ.

ಮೊದಲ ಅಂತಾರಾಷ್ಟ್ರೀಯ ಪದಕ

ಅಮೆರಿಕದ ವರ್ಜೀನಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಪೊಲೀಸ್ ಮತ್ತು ಫೈರ್ ಗೇಮ್ಸ್​​ನ ಹೆವಿವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಪ್ರತಿನಿಧಿಸಿದ್ದ ಶಿವಶಂಕರಪ್ಪ, ಕೆನಡಾ, ಅಮೆರಿಕ, ಕಜಕಿಸ್ತಾನ, ರಷ್ಯಾ ಸ್ಪರ್ಧಿಗಳ ವಿರುದ್ಧ ಸೆಣಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿವಶಂಕರಪ್ಪ ಹೆವಿವೇ ಟ್​​ನ ಮುಕ್ತ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಷ್ಯನ್ ಫೆಡರ್ ಪೊಲೀಸ್ ತಂಡದ ಅಲೆಕ್ಸಿ ಫಿಲಿಯಾಕೊವ್ ಎದುರು ಸೋಲನುಭವಿಸಿ ರಜತಕ್ಕೆ ತೃಪ್ತಿಪಟ್ಟರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅವರ ಮೊದಲ ಪದಕವಾಗಿದೆ.

ಚಿಕ್ಕಂದಿನಿಂದಲೂ ಬಾಕ್ಸಿಂಗ್ ಬಗ್ಗೆ ಟಿವಿ, ಪತ್ರಿಕೆಯಲ್ಲಿ ನೋಡುತ್ತಿದ್ದ ಶಿವಶಂಕರಪ್ಪ ಭಾರತೀಯ ಯೋಧನಾಗಿ ದೇಶ ಸೇವೆ ಸಲ್ಲಿಸುತ್ತಿರುವುದಲ್ಲದೇ ಬಾಕ್ಸಿಂಗ್ನಲ್ಲಿ ದೇಶವನ್ನು ಮತ್ತು ಬಿಎಸ್ಎಫ್ ತಂಡವನ್ನು ಪ್ರತಿನಿಧಿಸಿದ್ದಾರೆ. ಗ್ರಾಮೀಣ ಪ್ರದೇಶದದಿಂದ ಬಂದು ಮಾಡಿರುವ ಇವರ ಸಾಧನೆ ಯುವಕರಿಗೆ ಆದರ್ಶವಾಗಿದ್ದಾರೆ. ಒಂದು ಹೆಣ್ಣು ಮಗುವಿನ ತಂದೆಯಾಗಿರುವ ಶಿವಶಂಕರಪ್ಪ ಭವಿಷ್ಯದಲ್ಲಿ ಸಾಧನೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ವಿಶ್ವಾಸದಲ್ಲಿದ್ದಾರೆ.


Related Stories

Stories by usha harish