Flipkart ಅಲ್ಲ, ಇದು Copkart..! ಪೊಲೀಸರಿಗೆ ಶಾಪಿಂಗ್​​ ಆ್ಯಪ್​​..!

ಕೃತಿಕಾ

0

ಆನ್​​ಲೈನ್ ಶಾಪಿಂಗ್ ಟ್ರೆಂಡ್ ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಅಂದ್ರೆ ತರಕಾರಿಯಿಂದ ಬೇಳೆಯವರೆಗೆ, ಚಾಕೊಲೇಟ್ ನಿಂದ ಊಟದವರೆಗೆ, ಮೊಟ್ಟೆಯಿಂದ ಹಿಡಿದು ಮಾಂಸದವರೆಗೆ ಪೆನ್ ನಿಂದ ಹಿಡಿದು ಬೈಕ್ ಗಳವರೆಗೆ, ಹಾಲಿನಿಂದ ಹಿಡಿದು ಆಲ್ಕೋಹಾಲ್ ವರೆಗೆ..! ಎಲ್ಲವೂ ಈಗ ಆನ್ ಲೈನ್.. ಆನ್ ಲೈನ್. ಅಂಗಡಿಗೆ ಹೋಗಿ ಸಾಮಾನು ಸರಂಜಾಮುಗಳನ್ನು ತರುವ ಕಾಲ ಈಗಿಲ್ಲ. ಈಗೇನಿದ್ದರೂ ಬೆರಳ ತುದಿಯಲ್ಲೇ ತಮಗೆ ಬೇಕಾಗುವ ವಸ್ತುಗಳನ್ನು ಆರ್ಡರ್ ಮಾಡಿ ಮನೆ ಬಾಗಿಲಿಗೇ ವಸ್ತುಗಳನ್ನ ಪಡೆಯುವ ಸ್ಮಾರ್ಟ್ ಶಾಪಿಂಗ್ ಕಾಲ ಇದು. ಇಂತಾ ಸ್ಮಾರ್ಟ್ ಶಾಪಿಂಗ್ ಮಾಡೋದ್ರಲ್ಲಿ ನಮ್ಮ ಪೊಲೀಸರೇನು ಕಡಿಮೆ ಇಲ್ಲ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಯಾವುದಾದ್ರೂ ಪೊಲೀಸ್ ಇಲಾಖೆ ಈ ದೇಶದಲ್ಲಿದ್ರೆ ಅದು ಬೆಂಗಳೂರು ಪೊಲೀಸರು ಮಾತ್ರ. ಇಂತಹ ಖ್ಯಾತಿ ಗಳಿಸಿರೋ ಪೊಲೀಸರು ತಮ್ಮ ಶಾಪಿಂಗ್​​ಗಾಗಿಯೇ ಒಂದು ಎಕ್ಸ್​​​ಕ್ಲೂಸೀವ್ ಆನ್​​​ಲೈನ್ ಶಾಪಿಂಗ್ ಆ್ಯಪ್ ಅಭಿವೃದ್ದಿಪಡಿಸಿದ್ದಾರೆ. ಇಂತದ್ದೊಂದು ಆ್ಯಪ್ ಅಭಿವೃದ್ದಿಯ ಕನಸು ಮೊಳೆದಿದ್ದು ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ.

Flipkcart ಅಲ್ಲ copkart..!

ಆನ್​​​ಲೈನ್ ಶಾಪಿಂಗ್ ಆ್ಯಪ್​​ಗಳ ರೀತಿಯಲ್ಲೇ ಬೆಂಗಳೂರು ಪೊಲೀಸರಿಗಾಗಿಯೇ ಒಂದು ಆ್ಯಪ್ ಅನ್ನು ಅಬಿವೃದ್ದಿಪಡಿಸಲಾಗಿದೆ. ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಗಳು ಸಾಪ್ಟ್ ವೇರ್ ಸಂಸ್ಥೆ ಟೆಕ್ ಚೆಫ್​​ನ ​​ ಸಹಯೋಗದಲ್ಲಿ ಈ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಿದೆ. ಬೆಂಗಳೂರಿನಲ್ಲಿರುವ ಸುಮಾರು ಇಪ್ಪತ್ತು ಸಾವಿರ ಪೊಲೀಸರು ಈ ಆ್ಯಪ್ ಅನ್ನು ಬಳಸಿ ತಮಗೆ ಬೇಕಾದ ವಸ್ತುಗಳನ್ನು ಶಾಪ್ ಮಾಡಬಹುದು. ಪೊಲೀಸರಿಗಾಗಿಯೇ ಇರುವ ವಿಶೇಷ ಕ್ಯಾಂಟೀನ್ ಗಳಿಂದ ಆ್ಯಪ್ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಪೊಲೀಸ್ ಕ್ಯಾಂಟೀನ್ ಗಳಲ್ಲಿ ಪೊಲೀಸ್ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಸಿಗುವ ವಸ್ತುಗಳನ್ನು ಖರೀದಿಸಬಹುದಾಗಿದೆ. ಆರಂಭಿಕ ಹಂತದಲ್ಲಿ ದಿನಬಳಕೆಯ ವಸ್ತುಗಳು, ಬಟ್ಟೆಗಳು, ಕಾಸ್ಮೆಟಿಕ್ ವಸ್ತುಗಳು ಮತ್ತಿತರ ದಿನಬಳಕೆ ವಸ್ತುಗಳನ್ನು ಆನ್ ಲೈನ್ ಮೂಲಕ ಬುಕ್ ಮಾಡಿದರೆ ಪೋಲೀಸರ ಮನೆ ಬಾಗಿಲಿಗೆ ತಮಗೆ ಬೇಕಾದ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ.

ಇದು ಪೋಲೀಸರಿಗೆ ಮಾತ್ರ..!

ಕಾಪ್ ಕಾರ್ಟ್ ಅಪ್ಲಿಕೇಶನ್ ಕೇವಲ ಪೊಲೀಸರಿಗೆ ಮಾತ್ರ. ಕಾನ್ಸ್​​ಟೇಬಲ್ ಮಟ್ಟದ ಅಧಿಕಾರಿಗಳಿಂದ ಹಿಡಿದು ಪೊಲೀಸ್ ಮುಖ್ಯಸ್ಥರವರೆಗೆ ಎಲ್ಲರೂ ಈ ಆ್ಯಪ್ ಅನ್ನು ಬಳಸಿ ಶಾಪಿಂಗ್ ಮಾಡಬಹುದಾಗಿದೆ. ಈ ಆ್ಯಪ್ ಅನ್ನು ಆಂಡ್ರಾಯ್ಡ್ ಮೊಬೈಲ್ ನಲ್ಲಿ ಇನ್ಸ್ ಸ್ಟಾಲ್ ಮಾಡಿಕೊಂಡರೆ ಪ್ರತೀ ಸಿಬ್ಬಂದಿಗೆ ಲಾಗ್ ಇನ್ ಐಡಿ ಮತ್ತು ಪಾಸ್ ವರ್ಡ್ ನೀಡಲಾಗುತ್ತದೆ. ತಾವು ಕೆಲಸ ಮಾಡುವ ಹುದ್ದೆ, ಠಾಣೆ ಬಗ್ಗೆ ನಮೂದಿಸಿ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಬಹುದು. ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಬಹುದಾದ ಈ ಆ್ಯಪ್ ಅನ್ನು ಪೊಲೀಸರು ಬಿಟ್ಟರೆ ಬೇರೆಯವರು ಬಳಸಲು ಸಾಧ್ಯವಿಲ್ಲ. ಪ್ರಾಯೋಗಿಕವಾಗಿ ಬೆಂಗಳೂರಿನ ಪೊಲೀಸರಿಗೆ ಮಾತ್ರ ಈ ಯೋಜನೆ ಲಭ್ಯವಿದ್ದು ಇಲ್ಲಿ ಯಶಸ್ಸು ಪಡೆದರೆ ರಾಜ್ಯಾಧ್ಯಂತ ವಿಸ್ತರಿಸವ ಯೋಜನೆ ಪೊಲೀಸರಿಗಿದೆ.

ಇದು ಸಾಧ್ಯವಾಗಿದ್ದು ಹೇಗೆ..?

ಪೊಲೀಸರಿಗಾಗಿಯೇ ಇಂತದ್ದೊಂದು ಆನ್ ಲೈನ್ ಶಾಪಿಂಗ್ ಆ್ಯಪ್ ಅಭಿವೃದ್ದಿಪಡಿಸಬೇಕು ಎಂಬ ಐಡಿಯಾ ಹೊಳೆದಿದ್ದು ಬೆಂಗಳೂರು ಸಿಎಆರ್ ಡಿಸಿಪಿ ಆಗಿರುವ ಅಭಿಷೇಕ್ ಗೋಯಲ್ ಅವರಿಗೆ. ದೆಹಲಿ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವೀಧರರಾಗಿರೋ ಅಭಿಷೇಕ್ ಗೋಯಲ್ ಪೊಲೀಸ್ ಕ್ಯಾಂಟೀನ್ ಕೈಯಂಚಲ್ಲೇ ಲಭ್ಯವಾಗಲು ಇಂತದ್ದೊಂದು ಆ್ಯಪ್ ಅಭಿವೃದ್ದಿಪಡಿಸಲು ಮುಂದಾದರು. ಈಗ ಎಲ್ಲ ಪೊಲೀಸರ ಬಳಿಯೋ ಸ್ಮಾರ್ಟ್ ಪೋನ್ ಗಳಿವೆ. ಬಹುತೇಕ ಪೊಲೀಸರು ಇಂಟರ್ ನೆಟ್ ಬಳಸುತ್ತಾರೆ. ಇನ್ನು ಹೊಸದಾಗಿ ಇಲಾಖೆಗೆ ಸೇರುವವರೂ ಕೂಡ ಮೊಬೈಲ್ ಬಳಕೆಯಲ್ಲಿ ಪಳಗಿದವರೇ. ಹಾಗಾಗಿ ಇಂತದ್ದೊಂದು ಆ್ಯಪ್ ಡೆವಲಪ್ ಮಾಡುವ ಬಗ್ಗೆ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಿದೆ. ಅವರ ಒಪ್ಪಿಗೆ ಸಿಕ್ಕ ನಂತರ ಟೆಕ್ ಚೆಫ್ ಸಹಯೋಗದಲ್ಲಿ ಈ ಆ್ಯಪ್ ಅಭಿವೃದ್ದಿಪಡಿಸಲಾಗಿದೆ. ಈಗಾಗಲೇ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ಕ್ಯಾಂಟೀನ್ ಗಳಲ್ಲಿ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಅಂತಾರೆ ಡಿಸಿಪಿ ಅಭಿಷೇಕ್ ಗೋಯಲ್. 

ಈಗಾಗಲೇ ಈ ಆ್ಯಪ್ ಕಾರ್ಯೋನ್ಮುಕವಾಗಿದ್ದು ಹಲವು ಸಿಬ್ಬಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇದಿಷ್ಟೇ ಅಲ್ಲ ಅತ್ಯುನ್ನತ ತಂತ್ರಜ್ಞಾನದ ಜ್ಞಾನ ಹೊಂದಿರುವ ಅಭಿಷೇಕ್ ಗೋಯಲ್ ಇಲಾಖೆಯ ಹಲವು ತಾಂತ್ರಿಕ ಸಮಸ್ಯೆಗಳು, ಕ್ಲಿಷ್ಟ ಕೇಸ್ ಗಳನ್ನು ಪರಿಹರಿಸುವಲ್ಲಿ ಸಿದ್ದಹಸ್ತರು. ತಮ್ಮ ತಂತ್ರಜ್ಞಾನದ ಅರಿವಿನ ಬಗ್ಗೆ ಮಾತನಾಡುವ ಅಭಿಷೇಕ್ ಗೋಯಲ್ ನಾನು ಓದಿರೋದು ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್. ನನಗೆ ಆಧುನಿಕ ತಂತ್ರಜ್ಞಾನ, ಸೈಬರ್ ವಿಚಾರಗಳು ಸುಲಭವಾಗಿ ಅರ್ಥವಾಗುತ್ತವೆ. ಹೀಗಾಗಿ ನಾನೇ ಮುಂದೆ ನಿಂತು ಅಂತಹ ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತೇನೆ ಅಂತಾರೆ. ಸಾಮಾನ್ಯವಾಗಿ ಪೊಲೀಸ್ ಇಲಾಖೆ ತಂತ್ರಜ್ಞಾನದ ವಿಚಾರ ಬಂದಾಗ ಹೊರಗಿನ ತಜ್ಞರ ಮೊರೆ ಹೊಗ್ತಿದ್ರು. ಆದ್ರೆ ಈಗ ಡಿಸಿಪಿ ಅಭಿಷೇಕ್ ಗೋಯಲ್ ಅದಕ್ಕೆ ಅವಕಾಶವನ್ನೇ ಕೊಡೋದಿಲ್ಲ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿ ಇತರೇ ಇಲಾಖೆಗಳಿಗೆ, ಬೇರೆ ರಾಜ್ಯಗಳ ಪೊಲೀಸರಿಗೆ ಮಾದರಿಯಾಗಿರೋ ಬೆಂಗಳೂರು ಪೊಲೀಸರು ಈಗ ಅಭಿಷೇಕ್ ಗೋಯಲ್​ರ ಕನಸಿನ ಕೂಸು ಕಾಪ್ ಕಾರ್ಟ ಆ್ಯಪ್ ಅಭಿವೃದ್ದಿಪಡಿಸಿ ಮತ್ತೊಂದು ತಂತ್ರಜ್ಞಾನದ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Related Stories