ತಾಯಿ ಮನೆಯಲ್ಲಿ ಎಲ್ಲರೂ ಕ್ಷೇಮ..!

ಪೂರ್ವಿಕಾ

1

ಕೆಲಸದಲ್ಲಿ ಒಂದಿಷ್ಟು ಭಡ್ತಿ ಸಿಕ್ಕಿ ಅಗತ್ಯಕ್ಕಿಂತ ಹೆಚ್ಚು ಹಣ ಕೈಗೆ ಸಿಕ್ತು ಅಂದ್ರೆ ಸಾಕು ಸ್ವಂತ ಮನೆ,ಕಾರು , ಸೈಟು, ಚಿನ್ನ ಹೀಗೆ ಇನ್ನೂ ಹತ್ತಾರು ಯೋಚನೆಗಳು ತಲೆಯಲ್ಲಿ ಓಡಾಡೋಕೆ ಶುರುವಾಗುತ್ತೆ. ಕೆಲವೊಮ್ಮೆ ಸಣ್ಣ ಪುಟ್ಟವರು ಏನೂ ಅನುಭವವಿಲ್ಲದೆ ಇರೋವವರು ಎಲ್ಲರಿಗೂ ಸ್ಪೂರ್ತಿ ಆಗಿ ಬಿಡುತ್ತಾರೆ. ಅದೇ ರೀತಿ ಇಂದು ರಾಜ್ಯದ ಜನತೆಗೆ ತಾಯಿ ಮನೆಯಿಂದ ಈ ಯುವಕ ಯುವತಿಯರು ಅದೆಷ್ಟೋ ಜನರಿಗೆ ಸ್ಫೂರ್ತಿ ಆಗಿದ್ದಾರೆ. ತಾಯಿ ಮನೆ ಇಲ್ಲಿರೋ ಮಕ್ಕಳು ಒಡಹುಟ್ಟಿದವರಲ್ಲ. ಆದ್ರೂ ಕೂಡ ಸಹೋದರರು. ಅಷ್ಟೇ ಅಲ್ಲದೆ ತಾಯಿ ಮನೆಗೆ ಇವರು ಸ್ವಂತ ಮಕ್ಕಳಲ್ಲ ಆದ್ರೆ ಅವರಿಗಿಂತಲೂ ಹೆಚ್ಚು. ಇವರೆಲ್ಲರಿಗೂ ಆಶ್ರಯ ನೀಡಿರೋದು ಸ್ವಂತವಾಗಿ ದುಡಿದು ತಮ್ಮ ಕಾಲಮೇಲೆ ನಿಂತಿರೋ ಯುವಕ ಯುವತಿಯರು. 

ಸುದರ್ಶನ್‍ ಆದಿತ್ಯ ,ವಾಣಿ ವಿನಯ್‍ ಅನ್ನೂ ನಾಲ್ವರು ಸೇರಿ ಶಿವಮೊಗ್ಗದ ಆಲ್ಕೋಳದ ಬಳಿ ಇರೋ ನಂದಿನಿ ಬಡಾವಣೆಯಲ್ಲಿ ತಾಯಿ ಮನೆಯನ್ನ ಹುಟ್ಟುಹಾಕಿದ್ದಾರೆ. 2009 ರಲ್ಲಿ ಒಬ್ಬ ಸದಸ್ಯರಿಂದ ಪ್ರಾರಂಭವಾದ ತಾಯಿ ಮನೆ ಇಂದು 5 ಹೆಚ್ಐವಿ ಪೀಡಿತ ಮಕ್ಕಳು ಹಾಗೂ 25 ನಿರಾಶ್ರಿತ ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ. ತಂದೆ ತಾಯಿ ಪ್ರೀತಿ ಅಪೇಕ್ಷೆ ಇಲ್ಲ. ರಜೆ ಅಂದ್ರೆ ಅಜ್ಜಿ ಮನೆ ಇಲ್ಲ ಈ ಎಲ್ಲಾ ಪ್ರೀತಿ ಸೌಲಭ್ಯವನ್ನ ಈ ಮಕ್ಕಳಿಗೆ ಈ ಇಲ್ಲಿನ ಸಿಬ್ಬಂದಿಗಳೇ ನೀಡುತ್ತಿದ್ದಾರೆ. ಒಂದು ಮಗುವಿನಿಂದ ಇಂದು 25 ಮಕ್ಕಳಿಗಿಂತಲೂ ಹೆಚ್ಚು ಮಕ್ಕಳಿಗೆ ತಾಯಿ ಮನೆಯ ಆಶ್ರಯ ನೀಡುತ್ತಾ ಬಂದಿರೋ ಈ ಯುವಕರ ಕೆಲಸವನ್ನ ನೋಡಿ ಅದೆಷ್ಟೋ ಜನರು ಮೆಚ್ಚುಗೆ ವ್ಯಕ್ತ ಪಡಿಸೋದು ಮಾತ್ರವಲ್ಲದೆ ತಾಯಿ ಮನೆಗೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಮಕ್ಕಳ ರಕ್ಷಣೆ ಜೊತೆಯಲ್ಲಿ ಮಹಿಳೆ ಮತ್ತು ವಯೋವೃದ್ದರ ಸಬಲೀಕರಣಕ್ಕೂ ಈ ತಾಯಿ ಮನೆತಂಡ ದುಡಿಯುತ್ತಿದೆ. ಇನ್ನು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಇಲ್ಲಿಯ ಖರ್ಚು ಕೂಡ ಹೆಚ್ಚಾಗಿದೆ. ಮಕ್ಕಳ ಊಟ ,ಓದು ,ಔಷಧಿ ಹೀಗೆ ಇನ್ನೂ ಅನೇಕ ರೀತಿಯ ಖರ್ಚುಗಳನ್ನ ತಾಯಿ ಮನೆ ಸದಸ್ಯರು ಸೇರಿದಂತೆ ಆಸಕ್ತರು ನೀಡೋ ಹಣದಿಂದ ನಡೆದುಕೊಂಡು ಹೋಗುತ್ತಿದೆ. ಇನ್ನೂಚಿಕ್ಕ ಪುಟ್ಟ ಸಹಾಯಗಳು ಕೂಡ ಅಕ್ಕಪಕ್ಕದ ಅಂಗಡಿಯವರು ನೀಡೋದ್ರಿಂದ ತಾಯಿಮನೆ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ.

ಮೊದಲ ಗ್ರಂಥಾಲಯ

ಇನ್ನೂ ತಾಯಿಮನೆಯಲ್ಲಿ ಮಕ್ಕಳಿಗಾಗಿ ಗ್ರಂಥಾಲಯದ ವ್ಯವಸ್ಥೆಯನ್ನ ಮಾಡಲಾಗಿದ್ದು ಶಿವಮೊಗ್ಗದಲ್ಲಿರೋ ಯಾವುದೇ ಅನಾಥಾಲಯದಲ್ಲಿ ಈ ವ್ಯವಸ್ಥೆ ಇಲ್ಲ. ಆದ್ರೆ ತಾಯಿಮನೆ ಗ್ರಂಥಾಲಯದಲ್ಲಿ 2ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇವೆ. ತಾಯಿಮನೆಯ ಮಕ್ಕಳೂ ಮಾತ್ರವಲ್ಲದೆ ಹೊರ ಶಾಲೆಯ ಮಕ್ಕಳು ಈ ಪುಸ್ತಕಗಳನ್ನ ಉಪಯೋಗಿಸಿಕೊಳ್ಳುವಂತಹ ಅವಕಾಶವನ್ನ ತಾಯಿಮನೆ ಸದಸ್ಯರು ನೀಡುತ್ತಿದ್ದಾರೆ. ಇದರ ಮುಖ್ಯಉದ್ದೇಶ ಅಂದ್ರೆ ಈ ರೀತಿಯಲ್ಲಾದ್ರು ತಾಯಿ ಮನೆಗೆ ಬೇರೆ ಮಕ್ಕಳು ಬಂದು ಹೋದರೆ ಇಲ್ಲಿರೋ ಅನಾಥ ಮಕ್ಕಳಿಗೆ ಒಂಟಿತನ ದೂರಾಗುತ್ತದೆ ಅನ್ನೋದು.

ಈ ಮಕ್ಕಳು ನಿಜಕ್ಕೂ ಸ್ಪೂರ್ತಿ

ಇಲ್ಲಿರೋ ಮಕ್ಕಳು ನಿಜಕ್ಕೂ ಸ್ಫೂರ್ತಿ ಅಂದ್ರೆ ತಪ್ಪಾಗಲಾರದು. ಪ್ರತಿನಿತ್ಯ ಯೋಗಾಭ್ಯಾಸ, ಧ್ಯಾನ, ವ್ಯಾಯಾಮ, ಪ್ರಾರ್ಥನೆ ಎಲ್ಲವೂ ತಪ್ಪದೆ ಮಾಡುತ್ತಾರೆ. ಯೋಗದಲ್ಲಿ ಪರಿಣಿತಿ ಹೊಂದಿರೋ ಇವರುಗಳು ಈಗಾಗಲೇ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಅಭಿನಯದಲ್ಲೂ ಸೈ ಅನ್ನಿಸಿಕೊಂಡಿರೋ ಈ ಮಕ್ಕಳು ಮೂಕಾಭಿನಯದಲ್ಲೂ ರಾಷ್ಟ್ರಮಟ್ಟದ ಸ್ಪರ್ಧೆಗಳನ್ನ ನೀಡುತ್ತಾರೆ. ಇದಷ್ಟೇ ಅಲ್ಲದೆ ತಾಯಿಮನೆಯ ಬಳಿ ಇರೋ ಜಾಗದಲ್ಲಿಯೇ ಹೂ ಹಣ್ಣು ತರಕಾರಿಗಳನ್ನ ಬೆಳೆಯುತ್ತಾರೆ. ಅವರಿಗಿಷ್ಟವಾದ ಪ್ರಾಣಿಗಳನ್ನೂ ಸಾಕಿದ್ದಾರೆ. ಒಟ್ಟಾರೆ ತಾಯಿಮನೆಯನ್ನ ತಮ್ಮ ಸ್ವಂತ ಮನೆಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಇನ್ನೂತಾಯಿ ಮನೆ ಆರಂಭ ಮಾಡೋ ಮೊದಲು ಇದೆಲ್ಲಾ ಬೇಕ ಅನ್ನೋರೇ ಹೆಚ್ಚಾಗಿದ್ರು. ಅದೆಷ್ಟೋ ಜನರು ಹಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಅಂತ ಅವಮಾನಕೂಡ ಮಾಡಿದ್ದರು. ಆದ್ರೆ ತಾಯಿಮನೆ ಯಾವುದೇ ಲಾಭದ ಉದ್ದೇಶಕ್ಕಾಗಿ ಮಾಡಿದ ಸಂಸ್ಥೆ ಅಲ್ಲ. ಇಲ್ಲಿ ಅನಾಥ ಮಕ್ಕಳಿಗಾಗಿ ಆಶ್ರಯ ನೀಡಬೇಕು ಅನ್ನೋ ಉದ್ದೇಶದಿಂದ ಮಾಡಿರೋದು ಅಷ್ಟೇ. ತಾಯಿ ಮನೆ ಆರಂಭ ಮಾಡಿದಾಗ ನಮ್ಮ ಬಳಿ ಕೇವಲ 250 ರೂಪಾಯಿಗಳಿತ್ತು ಅಷ್ಟೇ. ಅದು ಮಂಡಕ್ಕಿತಿನ್ನೋದಕ್ಕೆ ಅಂತ ಕೂಡಿಟ್ಟ ಹಣ. ಆದ್ರೆ ಇಂದು 25 ಮಕ್ಕಳಿಗೆ ಆಶ್ರಯ ನೀಡಿದ್ದೇವೆ ಅನ್ನೋ ಖುಷಿ ನಮ್ಮಲ್ಲಿದೆ. ಯುವಕರು ಮನಸ್ಸು ಮಾಡಿದ್ರೆ ಏನು ಬೇಕಾದ್ರು ಮಾಡುತ್ತೇವೆ ಅನ್ನೋದನ್ನ ತಿಳಿಸೋ ಉದ್ದೇಶ ನಿಜಕ್ಕೂ ಸತ್ಯವಾಗಿದೆ ಮುಂದಿನ ದಿನಗಳಲ್ಲಿ 250 ಮಕ್ಕಳಿಗೆ ಆಶ್ರಯ ನೀಡೋದು ನಮ್ಮಉದ್ದೇಶ ಅನ್ನೋದು ಇಲ್ಲಿಯ ಸದಸ್ಯರ ಮಾತು. ಏನೇ ಆಗಲಿ ಇಂತಹದೊಂದು ಮನೆ ಅನಾಥ ಮಕ್ಕಳಿಗೆ ನಿಜಕ್ಕೂ ತಾಯಿಮನೆ ಆಗಿರೋದು ಖುಷಿಯ ಸಂಗತಿ.