`ದಿ ಫೋರ್ಸ್'ನಿಂದ ಉಳಿಯಿತು ಉದ್ಯಮ

ಟೀಮ್​​ ವೈ.ಎಸ್​​. ಕನ್ನಡ

0

ಜೇಮ್ಸ್ ಆಲ್ಚರ್ ಒಬ್ಬ ಸಾಹಸಿ ಉದ್ಯಮಿ. ಖ್ಯಾತ ಲೇಖಕ. 20 ಸಂಸ್ಥೆಗಳನ್ನು ಜೇಮ್ಸ್ ಹುಟ್ಟುಹಾಕಿದ್ದಾರೆ. ಆದ್ರೆ ಆ ಪೈಕಿ 17 ಕಂಪನಿಗಳು ವಿಫಲವಾಗಿವೆ. ಆದ್ರೂ ಛಲ ಬಿಡದ ಸಾಹಸಿ ಅವರು. ಉದ್ಯಮ ಪಯಣದಲ್ಲಿ ತಮಗಾದ ರೋಚಕ ಅನುಭವಗಳನ್ನು ಹೇಳ್ಕೊಂಡಿದ್ದಾರೆ. ಅದನ್ನ ಅವರದ್ದೇ ಮಾತುಗಳಲ್ಲಿ ಕೇಳೋಣ.

ನನಗೆ ಅರ್ಜೆಂಟಾಗಿ 20 ಮಿಲಿಯನ್ ಡಾಲರ್ ಬೇಕಿತ್ತು. ಹಣ ಸಿಗದೇ ಇದ್ರೆ ನಾನು ಸತ್ತೇ ಹೋಗ್ತೀನಿ ಎನಿಸಿತ್ತು. ನನ್ನ ಉದ್ಯಮದಲ್ಲಿ 20 ಮಿಲಿಯನ್ ಡಾಲರ್ ಹಣ ತೊಡಗಿಸಿದ್ದ ಹೂಡಿಕೆದಾರನೊಬ್ಬ ಮಧ್ಯದಲ್ಲೇ ಕೈಕೊಟ್ಟಿದ್ದ. ಸಂಸ್ಥೆಯಿಂದ ಹೊರನಡೆದಿದ್ದಲ್ಲದೆ ಹಣ ವಾಪಸ್ ಕೇಳ್ತಾ ಇದ್ದ. ಹಣ ವಾಪಸ್ ಕೊಡಲು ನಾನು ನನ್ನ ಉದ್ಯಮವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಉದ್ಯಮ ಕಳೆದುಕೊಳ್ಳೋದಂದ್ರೆ ನನ್ನ ಪಾಲಿಗೆ ಪ್ರಾಣವನ್ನೇ ಕಳೆದುಕೊಂಡಂತೆ. ಆತ ನನ್ನನ್ನು ಬೆದರಿಸಿದ, ಕುರ್ಚಿಯನ್ನೆತ್ತಿ ನನ್ನೆಡೆಗೆ ಬಿಸಾಡಿದ. ಕೊನೆಗೆ ಕಚೇರಿಯಲ್ಲಿದ್ದ ಕಂಪ್ಯೂಟರನ್ನೇ ಪುಡಿ ಪುಡಿ ಮಾಡ್ಬಿಟ್ಟ. ಕೊನೆಗೆ ಗಳಗಳನೆ ಅತ್ತೂ ಬಿಟ್ಟ.

ಅವನಿಗೆ ಅವನ ಹಣ ವಾಪಸ್ ಬೇಕಿತ್ತು. ಆತ ಏನು ಮಾಡಿದ್ದಾನೆ ಅನ್ನೋದು ನನಗೆ ಗೊತ್ತಿತ್ತು. ನನಗೆ ಆ ವಿಚಾರ ತಿಳಿದಿದೆ ಅನ್ನೋದು ಅವನಿಗೆ ಗೊತ್ತಿರಲಿಲ್ಲ. ಅಕ್ರಮ ಕೆಲಸವೊಂದಕ್ಕೆ ಕೈಹಾಕಿದ್ದ ಆತ ತನ್ನ ಬಂಡವಾಳಗಾರನಿಗೆ ತರಾತುರಿಯಲ್ಲಿ ಹಣ ವಾಪಸ್ ಕೊಡಬೇಕಿತ್ತು. ಇದು ವಾಲ್ ಸ್ಟ್ರೀಟ್‍ನ ಕಥೆ. ಅದರ ಸಾಮ್ರಾಜ್ಯವೇ ಕುಸಿದ ಸಂದರ್ಭ. ವಕೀಲರೊಬ್ಬರು ನಮ್ಮಿಬ್ಬರ ಮಧ್ಯೆ ಸಂಧಾನ ಯತ್ನ ನಡೆಸಿದ್ರು. ಆದ್ರೆ ಆತ ಕಣ್ಣೀರು ಹಾಕುತ್ತ ಅಲ್ಲಿಂದ ಕಾಲ್ಕಿತ್ತ. 10 ವರ್ಷಗಳ ನಂತರ ಅಂದ್ರೆ ಈಗ ನನ್ನ ವಕೀಲನೇ ಕಾನೂನು ಕುಣಿಕೆಯಲ್ಲಿ ಸಿಲುಕಿದ್ದಾನೆ. ಸ್ವಂತ ಮನೆಯನ್ನೇ ಆತ ಕಳೆದುಕೊಂಡಿದ್ದಾನೆ. ಆತನ ಮಾಜಿ ಪಾಲುದಾರರು ಹೇಳೋ ಪ್ರಕಾರ ಇದಕ್ಕೆಲ್ಲ ಕಾರಣ ಆತನ ಪತ್ನಿ. ಕಾನೂನು ಸಂಸ್ಥೆಯನ್ನು ಆಕೆ ತನ್ನ ವೈಯಕ್ತಿಕ ಬ್ಯಾಂಕ್ ಅಕೌಂಟ್‍ನಂತೆ ಬಳಸಿಕೊಂಡಿದ್ದಾಳಂತೆ.

ಡೊಮಿನೋಸ್...

ಆದ್ರೆ ನಾನು ನನ್ನ ಹೂಡಿಕೆದಾರನಿಗೆ 20 ಮಿಲಿಯನ್ ಡಾಲರ್ ಹಣವನ್ನು ವಾಪಸ್ ಕೊಡಲು ಬಯಸಿದ್ದೆ. ಮೊಕದ್ದಮೆಯಲ್ಲಿ ಸಿಲುಕದೇ ಉದ್ಯಮವನ್ನು ಮುನ್ನಡೆಸುವ ಹಂಬಲ ನನಗಿತ್ತು. ತಪ್ಪು ನನ್ನದಲ್ಲದಿದ್ರೂ, ನಾನೇ ಕಾನೂನು ಕುಣಿಕೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೆಂಬ ಭಯ ನನ್ನನ್ನು ಕಾಡುತ್ತಿತ್ತು. ಅದಕ್ಕಾಗಿ ನಾನೊಂದು ಯೋಜನೆ ಹಾಕಿಕೊಂಡೆ, ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನೂ ಖರೀದಿಸಿದೆ. `ದಿ ಫೋರ್ಸ್' ಎದುರು ಶರಣಾಗಲು ಮುಂದಾದೆ. ಇದೇ ಕಾರಣಕ್ಕೆ ನಾನು ವಾಲ್ ಸ್ಟ್ರೀಟ್‍ನಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ.

1995ರಿಂದ್ಲೂ ನನಗೆ ಹೊಟ್ಟೆ ನೋವಿನ ಸಮಸ್ಯೆಯಿತ್ತು. 1995ರಲ್ಲಿ `ಅಮೆರಿಕನ್ ಎಕ್‍ಪ್ರೆಸ್'ಗಾಗಿ ನಾನೇ ವೆಬ್‍ಸೈಟ್ ಅಭಿವೃದ್ಧಿಪಡಿಸುತ್ತಿದ್ದೆ. ಆದ್ರೆ ನಮಗೆ ನೀಡಿದ್ದ ಗಡುವಿನೊಳಗೆ ಕೆಲಸ ಮುಗಿಸಲು ಸಾಧ್ಯವಾಗಲಿಲ್ಲ. ಹಗಲಿರುಳು ನಾನು ಮತ್ತು ನನ್ನಿಬ್ಬರು ಪಾಲುದಾರರು ಪ್ರತಿ ಬಣ್ಣವನ್ನು ಬದಲಾಯಿಸಲು ಯತ್ನಿಸುತ್ತಿದ್ವಿ, ಚಿತ್ರಗಳ ಸ್ಥಳ ಬದಲಾವಣೆ ಮಾಡುತ್ತಿದ್ವಿ. ಅಮೆರಿಕನ್ ಎಕ್ಸ್​​​ಪ್ರೆಸ್ ಸಂಸ್ಥೆ ನನಗೆ 225,000 ಡಾಲರ್ ಹಣ ನೀಡಿತ್ತು. ಆಗ ನನಗಿನ್ನೂ 27 ವರ್ಷ. ನಾನು ಫುಲ್ ಟೈಮ್ ಕೆಲಸ ಮಾಡ್ತಿದ್ದಾಗ ನನಗೆ ಬರ್ತಾ ಇದ್ದ ಸಂಬಳ ಕೇವಲ 40,000 ಡಾಲರ್. ನನಗೆ ಆಗ ಹಣದ ಅವಶ್ಯಕತೆಯಿತ್ತು. ಆದ್ರೆ ಗಡುವಿನೊಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ನನಗೆಂದೂ ಎದುರಾಗಿರಲಿಲ್ಲ. ಇನ್ನು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಕೆಲವರು ನಮ್ಮ ಬಳಿ ಬಂದು ನೋವು ತೋಡಿಕೊಳ್ತಿದ್ರು. ಮತ್ತೊಂದುಕಡೆ ಹೊಟ್ಟೆ ನೋವು ಬಿಡದೇ ಬಾಧಿಸ್ತಾ ಇತ್ತು.

ಆಗ ನಾನು ಚೆಲ್ಸಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದೆ. ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಹೊಟ್ಟೆ ನೋವು ಹೆಚ್ಚಾಗಿದ್ರಿಂದ ಯಾರಿಂದಲಾದ್ರೂ ನೆರವು ಪಡೆಯಲು ಕೆಳಕ್ಕೆ ಬಂದೆ. ಆ ಸಮಯದಲ್ಲಿ ಸಂಜೆ ವೇಳೆಗೆಲ್ಲಾ ವೇಶ್ಯೆಯರು ಹೋಟೆಲ್‍ಗೆ ಬರ್ತಾ ಇದ್ರು. ಅವರೆಡೆಗೆ ನನಗೆ ಸೆಳೆತವಿತ್ತು. ಆದ್ರೆ ಅವರು ಯಾರೂ ನನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆ ದಿನವಂತೂ ಹೊಟ್ಟೆ ನೋವು ಹೆಚ್ಚಾಗಿದ್ರಿಂದ ಅದರ ಬಗ್ಗೆ ಯೋಚನೆ ಮಾಡಲೂ ಸಾಧ್ಯವಾಗಲಿಲ್ಲ. ಕಾವಲುಗಾರನ ನೆರವು ಪಡೆದು ನಾನು ಔಷಧವನನ್ನೇನೋ ತಂದು ಸೇವಿಸಿದೆ. ಆದ್ರೆ ಹೊಟ್ಟೆ ನೋವು ಮಾತ್ರ ಕಡಿಮೆಯಾಗಲಿಲ್ಲ. ಸುಮಾರು 15 ವರ್ಷ ಹೊಟ್ಟೆ ನೋವು ನನ್ನ ಜೀವ ಹಿಂಡಿದೆ. ಈಗ್ಲೂ ಒಮ್ಮೊಮ್ಮೆ ಆ ಸಮಸ್ಯೆ ಕಾಣಿಸಿಕೊಳ್ಳುವುದುಂಟು. ಈಗ ಆ ಕಾವಲುಗಾರ ಜೆರ್ರಿ ಬದುಕಿಲ್ಲ. ಚೆಲ್ಸಿ ಹೋಟೆಲ್ ಮನೆಯಾಗಿ ಪರಿವರ್ತನೆಯಾಗಿದೆ. ಇನ್ನು 15 ವರ್ಷಗಳ ನಂತರ ಆ ವೇಶ್ಯೆಯರ ಸ್ಥಿತಿ ಏನಾಗಿದ್ಯೋ ಗೊತ್ತಿಲ್ಲ. ಆಸ್ಪತ್ರೆಯ ವೇಯ್ಟಿಂಗ್ ರೂಮ್‍ನಲ್ಲಿ ನಾವೆಲ್ಲ ಬದುಕುತ್ತಿದ್ದೇವೆ ಎಂಬ ಭಾವನೆ ನನ್ನದು.

ಕಥೆಯ ಮಧ್ಯಭಾಗ ನೋಡೋದಾದ್ರೆ, ಗಾಯ ಮಾಗಿದೆ, ಅವನು ಅಥವಾ ಅವಳು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ತಿದ್ದಾಗ್ಲೇ ಪೊಲೀಸ್ ಸೈರನ್ ಮೊಳಗಿದ್ರೆ, ಅವರನ್ನು ಅಟ್ಟಿಸಿಕೊಂಡು ಬಂದ್ರೆ ಅವರ ಸ್ಥಿತಿ ಏನಾಗ್ಬೇಡ ಹೇಳಿ? ಆದ್ರೆ ನಮಗದು ತಿಳಿಯಲೇ ಇಲ್ಲ, ಸ್ವಲ್ಪ ದಿನ ಕಾದ ನಾವು ಅದನ್ನಲ್ಲಿಗೇ ಕೈಬಿಟ್ವಿ. `ದಿ ಫೋರ್ಸ್' ನನಗೆ ಮಾಡಲು ಹೇಳಿದ್ದಿಷ್ಟು. ಏನಾದ್ರೂ ಸರಿ 20 ಮಿಲಿಯನ್ ಡಾಲರ್ ಗಳಿಸಬೇಕು ಅನ್ನೋದೇ ನನ್ನ ಉದ್ದೇಶವಾಗಿತ್ತು. ನಾನು `ದಿ ಫೋರ್ಸ್' ಮೇಲೆ ನಂಬಿಕೆ ಇಟ್ಟಿದ್ದೆ. ಬೆಳಗ್ಗೆ 5ಕ್ಕೆ ಎದ್ದು ಬಾಸ್ಕೆಟ್ ಬಾಲ್ ಆಡೋದು ನನ್ನ ದಿನಚರಿ. ನದಿ ಪಕ್ಕದಲ್ಲೇ ಮೈದಾನವಿತ್ತು. ಅಲ್ಲಿಂದ ನ್ಯೂಯಾರ್ಕ್‍ನತ್ತ ಸರಿದು ಹೋಗುವ ರೈಲುಗಳನ್ನು ನೋಡುತ್ತ ನಿಲ್ಲುವುದು ವಾಡಿಕೆ. ಕಿಟಕಿಯಿಂದ ಹೊರಗಿಣುಕುವ ಪ್ರಯಾಣಿಕರು ಕಣ್ಣಿನಿಂದ ಮರೆಯಾಗುವವರೆಗೂ ನೋಡುತ್ತ ನಿಲ್ಲುತ್ತಿದ್ದೆ.

5.30ಕ್ಕೆ ಮಕ್ಕಳ ಆಟದ ಮೈದಾನಲ್ಲಿ ಕೊಂಚ ಕಸರತ್ತು ಮಾಡ್ತಾ ಇದ್ದೆ. 6 ಗಂಟೆಗೆಲ್ಲಾ ಕೆಫೆಗಳು ತೆರೆದಿರುತ್ತಿದ್ವು. ಅಲ್ಲಿ ಗಂಟೆಗಟ್ಟಲೆ ಮೀಟಿಂಗ್ ನಡೆಯುತ್ತಿತ್ತು. ನಾನು ಮನೆಗೆ ಬರುವಷ್ಟರಲ್ಲಿ, ಮಕ್ಕಳು ಶಾಲೆಗೆ, ಪತ್ನಿ ಕಚೇರಿಗೆ. ಮನೆಯೆಲ್ಲ ಖಾಲಿ ಖಾಲಿ. 9 ಗಂಟೆಗೆ ನಾನು ಫೋನ್ ಕಾಲ್ ಮಾಡಲು ಶುರು ಮಾಡ್ತಿದ್ದೆ. ಹೂಡಿಕೆದಾರರ ಜೊತೆಗೆ ಮಾತನಾಡ್ತಿದ್ದೆ. ನಿನ್ನ ಉದ್ಯಮವನ್ನು ನಮಗೊಪ್ಪಿಸು, 20 ಮಿಲಿಯನ್ ಡಾಲರ್ ಹಣವನ್ನು ನಾವು ಕೊಡ್ತೇವೆ. ಹೂಡಿಕೆದಾರನ ಹಣವನ್ನು ಅವನಿಗೆ ಮರಳಿಸು ಎನ್ನುತ್ತಿದ್ರು ಅವರು. ಆದ್ರೆ ನನ್ನ ಸಂಧಾನ ಯತ್ನ ಎಷ್ಟು ಕೆಟ್ಟದಾಗಿತ್ತೆಂದ್ರೆ ನಾನು ಉದ್ಯಮವನ್ನು ಬಿಟ್ಟು ಕೊಡಲಿಲ್ಲ. ಹೀಗೆ ನನ್ನ ಉದ್ಯಮವನ್ನು ನಾನು ಉಳಿಸಿಕೊಂಡಿದ್ದೇನೆ, `ದಿ ಫೋರ್ಸ್'ನ ಕರಾಳ ಮುಖದರ್ಶನ ನನಗಾಗಿದೆ.

1995ರಿಂದ್ಲೂ ಒಂದಾದ ಮೇಲೊಂದು ಚಮತ್ಕಾರವನ್ನು ಮಾಡುತ್ತಲೇ ಇದ್ದೇನೆ. ಅದರಲ್ಲಿ ಕೊಂಚ ಎಡವಿದ್ರೂ ನನ್ನ ಬದುಕೇ ಛಿದ್ರವಾಗುತ್ತಿತ್ತು. ಸುಮಾರು 20 ಬಗೆಯ ಉದ್ಯಮಗಳು, ಒಂದಾದ ಮೇಲೊಂದರಂತೆ, ಬುಲೆಟ್‍ಗಳಂತೆ ನುಗ್ಗಿ ಬಂದಿವೆ. ನನ್ನ ಸ್ನೇಹಿತನಿಗೆ ಸಹಾಯ ಮಾಡುವ ಸಲುವಾಗಿ ನಾನು ಮೊದಲು ಉದ್ಯಮ ಆರಂಭಿಸಿದ್ದು. ಅವನಿಗೆ ಇಂಟರ್ನೆಟ್ ಬಳಕೆಯನ್ನು ಕಲಿಸಿದೆ, ಗ್ರಾಹಕರನ್ನು ಸಂಪಾದಿಸಿ ಕೊಟ್ಟೆ, ನಂತರ ಉದ್ಯಮವನ್ನೇ ನನ್ನ ತೆಕ್ಕೆಗೆ ತೆಗದುಕೊಂಡೆ. ಅಂದಿನಿಂದ ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿಲ್ಲ, ಬರೆಯುವುದನ್ನೇ ನಿಲ್ಲಿಸಿದೆ. ನನ್ನಲ್ಲಿನ ಸೃಜನಶೀಲತೆ ಕಳೆದುಹೋಯ್ತು. ಬರೀ ಇಂಟರ್ನೆಟ್ ಉದ್ಯಮ, ಹೂಡಿಕೆ, ಮತ್ತಿತರ ವಹಿವಾಟು ಅಷ್ಟೆ. ಅವೆಲ್ಲ ನನ್ನ ಹೊಟ್ಟೆಯೊಳಕ್ಕೆ ಜಾಡಿಸಿ ಒದ್ದಂತೆ ಭಾಸವಾಗ್ತಿದೆ.

ಉದ್ಯಮಕ್ಕೆ ಕೈಹಾಕುವ ಮುನ್ನ 1994ರವರೆಗೆ ನನಗೆ ರಾತ್ರಿ ಪೂರಾ ಚೆಸ್ ಆಡುವ ಹವ್ಯಾಸವಿತ್ತು. ಸ್ಟೇನ್‍ವೇ ಬಿಲಿಯರ್ಡ್ಸ್​​ನಿಂದ ಮನೆಗೆ ಸ್ನೇಹಿತರ ಜೊತೆ ಹೆಜ್ಜೆ ಹಾಕ್ತಿದ್ದೆ. ಮ್ಯೂಸಿಯಂಗಳಲ್ಲಿ, ಥಿಯೇಟರ್‍ಗಳಲ್ಲಿ ವೀಕೆಂಡ್ ಕಳೆಯುತ್ತಿದ್ದೆ. ಆದ್ರೆ ಅದೆಲ್ಲವನ್ನೂ ಕಳೆದುಕೊಂಡ ಅನುಭವವಾಗ್ತಿದೆ. ಆಸ್ಟೋರಿಯಾದಲ್ಲಿ ನನಗಿದ್ದ ಏಕೈಕ ಸ್ನೇಹಿತ ಹೆಪಟೈಟಿಸ್ ಸಿ ಖಾಯಿಲೆಯಿಂದ ಬಳಲುತ್ತಿದ್ದ. ಆತ ಇನ್ನೂ ಯುವಕ, ಅವನ ಬಳಿ ಸ್ವಲ್ಪ ಹಣವೂ ಇತ್ತು. ತಾನು ಸಾವನ್ನೇ ಎದುರುನೋಡುತ್ತಿದ್ದೇನೆ ಎನ್ನುತ್ತಿದ್ದ. ಅವನೊಡನೆ ರಾತ್ರಿ ಮಾತನಾಡುತ್ತ ಹೆಜ್ಜೆ ಹಾಕುತ್ತಿದ್ದೆ. ಬಹುಷಃ ಅವನೀಗ ಸತ್ತೇ ಹೋಗಿರಬಹುದು. ಆದ್ರೆ ನಾನಿನ್ನೂ ಬದುಕಿದ್ದೇನೆ. ನಾನಿನ್ನೂ ಬಿಟ್ಟುಕೊಡುತ್ತಲೇ ಇದ್ದೇನೆ.

ಲೇಖಕರು: ಜೇಮ್ಸ್​​ ಆಲ್ಚರ್​​​
ಅನುವಾದಕರು: ಭಾರತಿ ಭಟ್​​

Related Stories

Stories by YourStory Kannada