ಸ್ಮಾಲ್ ಸ್ಕ್ರೀನ್​ ಸೂಪರ್ ಸ್ಟಾರ್ - ಮಾತಿನಲ್ಲೇ ಪಟಾಕಿ ಸಿಡಿಸೋ ಆ್ಯಂಕರ್..!​  

ಟೀಮ್​ ವೈ.ಎಸ್​. ಕನ್ನಡ

2

ಮಂಗಳೂರಿನ ಮೀನು, ಪಟಪಟ ಅಂತ ಮಾತನಾಡೋ ಪಟಾಕಿ,ಕನ್ನಡದ ಕಿರುತೆರೆಯ ನಿರೂಪಕಿಯರ ಸಾಲಿನಲ್ಲಿ ಮೊದಲು ನಿಲ್ಲೋ ಸ್ಟಾರ್ ಆ್ಯಂಕರ್, ಅನುಶ್ರೀ ಅಂದ ತಕ್ಷಣ ಪ್ರೇಕ್ಷಕರ ಮುಖದಲ್ಲಿ ಸಣ್ಣನೆ ನಗೆಯ ಮೂಲಕ ಕಣ್ಣುಗಳು ಅರಳುತ್ತವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಯಶಸ್ಸು ಕಂಡಿರೋ ಅನುಶ್ರೀ ಇಂದಿಗೂ ಬಹು ಬೇಡಿಕೆಯ ಆ್ಯಂಕರ್. ಮಂಗಳೂರಿನ ನಮ್ಮ ಟಿವಿಯಲ್ಲಿ ನಿರೂಪಕಿಯಾಗಿದ್ದ ಅನುಶ್ರಿ ಮೊದಲ ಕಾಲಿಟ್ಟಿದ್ದು ಕನ್ನಡದ ಈ ಟಿವಿಗೆ. ಅಲ್ಲಿಂದ ಇಲ್ಲಿಯವರೆಗೂ ಅನುಶ್ರೀ ತಿರುಗಿ ನೋಡಿದ್ದೆ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ, ಮಾಡಿದ ಕಾರ್ಯಕ್ರಮವೆಲ್ಲ ಸಕ್ಸಸ್..!

ನಗುವಿನ ಹಿಂದಿದೆ ನೋವಿನ ಕಥೆ..!

ನಗುವವರ ಹಿಂದೆ ಸಾಕಷ್ಟು ನೋವಿರುತ್ತದೆ  ಅನ್ನುವ  ಮಾತು ನೂರಕ್ಕೆ ನೂರರಷ್ಟು ಸತ್ಯ. ಅನುಶ್ರೀ ಕೂಡ ಅಷ್ಟು ಸುಲಭವಾಗಿ ಈ ಯಶಸ್ಸಿನ ಮೆಟ್ಟಿಲು ಏರಿಲ್ಲ. ಚಿಕ್ಕ ವಯಸ್ಸಿನಿಂದಲೇ ಅಮ್ಮನಿಗೆ ಆಸರೆಯಾಗಿ ದುಡಿಯುತ್ತಾ ಬಂದು ನಂತರ, ಈಗ ಮನೆಯನ್ನ ತಾನೇ ತೂಗಿಸಿಕೊಂಡು ಹೋಗುತ್ತಿದ್ದಾರೆ. ಆರಂಭದಲ್ಲಿ ಕನ್ನಡದ ಸ್ಪಷ್ಟತೆ ಇಲ್ಲದೆ ಪರದಾಡಿದ್ದ ಅನುಶ್ರೀ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಈಗ ಪಟಪಟಾ ಅಂತ ಮುತ್ತುಗಳ ರೀತಿಯಲ್ಲಿ ಕನ್ನಡವನ್ನ ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ಸ್ಟೇಜ್ ಹತ್ತಿ ಮೈಕ್ ಹಿಡಿದ್ರೆ ಸಾಕು ಅನುಶ್ರೀಗೆ, ಅನುಶ್ರೀ ಮಾತ್ರವೇ ಸಾಟಿ. ಎದುರಿಗೆ ಅದೆಂತಹ ಮಹಾನ್​ ನಟ-ನಟಿಯರೇ ಇರಲಿ ಅವರನ್ನ ಮೆಚ್ಚುಸಿವಂತೆ ಆ್ಯಂಕರಿಂಗ್ ಮಾಡುವ ಕಲೆಯನ್ನ ಅನುಶ್ರೀ ಹೊಂದಿರುವುದು ವಿಶೇಷ.

ಫಾರಿನಲ್ಲೂ ಫೇಮಸ್ ಅನುಶ್ರೀ

ಮಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಕಾಲ ಬದಲಾದಂತೆ ಇಡೀ ರಾಜ್ಯವೇ ಮೆಚ್ಚುವಂತಹ ಆ್ಯಂಕರ್ ಕಂ ನಟಿಯಾದ್ರು. ಇಷ್ಟಕ್ಕೆ  ಅನುಶ್ರೀ ಸಾಧನೆ ನಿಂತಿಲ್ಲ. ಅನುಶ್ರೀ ಈಗ ಎಷ್ಟರ ಮಟ್ಟಿಗೆ ಫೇಮಸ್ ಎಂದರೆ ವಿದೇಶದಲ್ಲಿ ನಡೆಯೋ ಅದೆಷ್ಟೋ ಕಾರ್ಯಕ್ರಮಕ್ಕೆ ಅನುಶ್ರೀಯವರೇ ಆ್ಯಂಕರ್. ಸದ್ಯ ಕನ್ನಡ ಕಿರುತೆರೆಯಲ್ಲಿ ನಂಬರ್ 1 ಪಟ್ಟ ಗಿಟ್ಟಿಸಿಕೊಂಡಿರೋ ಅನುಶ್ರೀ ಇತ್ತೀಚಿಗಷ್ಟೆ ಅಕ್ಕ ಸಮ್ಮೇಳನಕ್ಕೂ ಹೋಗಿ ಬಂದಿದ್ದಾರೆ. ಕಿರುತೆರೆಯಲ್ಲಿ ಬರುವ ರಿಯಾಲಿಟಿ ಶೋಗಳನ್ನ ಅನುಶ್ರೀ ಅವರ ಆ್ಯಂಕರಿಂಗ್​ಗಾಗಿಯೇ  ಅದೆಷ್ಟೋ ಜನ ಟಿವಿ ಮುಂದೆ ಕುಳಿತು ಕಾಯೋದು ನಿಜ. ಹೀರೋಯಿನ್​ಗಳಂತೆಯೇ ಫ್ಯಾನ್​ ಫಾಲೋವರ್ಸ್ ಹೊಂದಿರುವ ಅನುಶ್ರೀ ಚಿತ್ರರಂಗದಲ್ಲೂ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ.

ಸಿನಿಮಾದಲ್ಲೂ ಸಕ್ಸಸ್​..!

ಭೂಮಿತಾಯಿ,ಬೆಳ್ಳಿಕಿರಣ,ಟ್ಯೂಟ್​ಲೈಟ್ ಮತ್ತು ರಿಂಗ್ ಮಾಸ್ಟರ್ ಚಿತ್ರದಲ್ಲಿ ಅನುಶ್ರೀ ಅಭಿನಯವನ್ನ ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದಾರೆ. ಇನ್ನು ಇತ್ತೀಚಿಗೆ ಮಾದ ಮಾನಸಿ ಚಿತ್ರದಲ್ಲಿನ ಸ್ಪೆಷಲ್ ಸಾಂಗ್​ನಲ್ಲಿ ಅನುಶ್ರೀ ಹೆಜ್ಜೆ ಹಾಕಿದ್ದು ಇಡೀ ಸ್ಯಾಂಡಲ್​ವುಡ್ ಒಮ್ಮೆ ಅನುಶ್ರೀಯತ್ತ ತಿರುಗಿ ನೋಡುವಂತೆ ಮಾಡಿತ್ತು. ಸದ್ಯ ಆ್ಯಂಕರಿಂಗ್ ಜೊತೆಯಲ್ಲೇ ಪ್ರೇಕ್ಷಕರ ಮುಂದೆ ಉಪ್ಪು,ಹುಳಿ,ಖಾರ ಸಿನಿಮಾ ಮೂಲಕ ಬರಲಿದ್ದಾರೆ.

ಮನಸೋಲುವಂತ ಅಂದಗಾತಿ

ಮಾತುಗಾತಿ ,ಚಲಗಾತಿ,ಅಷ್ಟೇ ಅಂದಗಾತಿ. ಅನುಶ್ರೀ ಮಾತುಗಳನ್ನು ಕೇಳಲು ಅದೆಷ್ಟು ಚೆಂದವೋ ಅದರಂತೆ ನೋಡಲು ಕೂಡ ಅಷ್ಟೇ ಚೆಂದ. ಸಾಕಷ್ಟು ವರ್ಷಗಳ ಹಿಂದೆ ಗೊತ್ತಿಲ್ಲದ ಊರಿಗೆ ಪ್ರಯಾಣ ಬೆಳಸಿದ ಈಕೆ,  ಈಗ ಎಲ್ಲರಿಗೂ ಚಿರಪರಿಚಿತ. ಇಂದಿನ ಟ್ರೇಂಡ್​ಗೆ  ತಕ್ಕಂತೆ ತನ್ನ ಸ್ಟೈಲ್ ಅನ್ನು ಬದಲಾಯಿಸಿಕೊಳ್ಳುವ ಅನುಶ್ರೀ ಸ್ಟೈಲ್ ಅನ್ನ ಫಾಲೋ ಮಾಡೋ ಅಭಿಮಾನಿಗಳು ಕೂಡ ಇದ್ದಾರೆ. ಅನುಶ್ರೀ ಒಂದು ರೀತಿ ಎಲ್ಲಾ ವಿದ್ಯೆಯನ್ನೂ ಬಲ್ಲವರು ಅಂದ್ರೆ ತಪ್ಪಿಲ್ಲ. ನಿರೂಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿರೋ ಅನುಶ್ರೀ ಒಳಗೆ ಒಬ್ಬ ಗಾಯಕಿ ಕೂಡ ಇದ್ದಾಳೆ ಅನ್ನೋದು ಅದೆಷ್ಟೋ ಜನರಿಗೆ ಗೊತ್ತೇ ಇಲ್ಲ. 

ಮುದ್ದು ಮನಸ್ಸಿನ ಹುಡುಗಿಗಿದೆ ಹಲವು ಸ್ಪೆಷಾಲಿಟಿ 

ಅನುಶ್ರೀ ಅದೆಷ್ಟೇ ಫೇಮಸ್ ಆಗಿದ್ರು ಕೂಡ ಅವರಿಗಿರುವುದು ಕೇವಲ ಬೆರಳೆಣಿಕೆಯಷ್ಟು ಸ್ನೇಹಿತರು ಮಾತ್ರ. ಸ್ಕ್ರೀನ್ ಮೇಲೆ ಸಖತ್ ಆಗಿ ಮಾತನಾಡುವ ಅನುಶ್ರೀ ಪರ್ಸನಲಿ ಸಖತ್ ಎಮೋಷನಲ್. ತಮ್ಮ ಹುಟ್ಟುಹಬ್ಬವನ್ನ ಅನಾಥಾಶ್ರಮದಲ್ಲಿ ಆಚರಣೆ ಮಾಡಿಕೊಳ್ಳುವ  ಅನುಶ್ರೀ ಹಿರಿಯರು ಮತ್ತು ವಯಸ್ಸಾದ ತಂದೆ ತಾಯಿಯನ್ನ ಸರಿಯಾಗಿ ನೋಡಿಕೊಳ್ಳದಿದ್ದನ್ನ ಕಂಡು ಮರುಗಿದ್ದಾರೆ. ಅದೆಷ್ಟೇ ಕಷ್ಟವಾದ್ರೂ ಕೂಡ ತಂದೆ- ತಾಯಿಯನ್ನ ಪ್ರೀತಿಯಿಂದ ಕಾಣಬೇಕು ಅನ್ನೋದು ಅವ್ರ ಅಭಿಪ್ರಾಯ. ಹಿರಿಯರ ಜೊತೆ ಹಿರಿಯಳಾಗಿ ,ವಯಸ್ಕರ ಜೊತೆಯಲ್ಲಿ ಪ್ರಬುದ್ದತೆಯಿಂದ,ಮಕ್ಕಳಲ್ಲಿ ಮಗುವಿನಂತೆ ಬೆರೆತುಕೊಳ್ಳುವ ಅನುಶ್ರೀ ಪಯಣ ಹೀಗೆ ಯಶಸ್ಸಿನ ಕಡೆಗೆ ಮುಂದುವರೆಯಲಿ.

ಇದನ್ನು ಓದಿ:

1. ಇದು ಸ್ಟಿಕ್ಕರ್​ ಹಿಂದಿರುವ ಕಥೆ..! ಕರಣ್​ ಶ್ರಮದ ಚರಿತ್ರೆ..!

2. 4 ದಶಕಗಳ ಹಿಂದೆಯೇ ಸ್ವಚ್ಛ ಭಾರತದ ಕನಸು- ಇದು"ಸುಲಭ" ಸಾಧಕನ ಕಥೆ..!

3. ಭಾರತದ ಏಕೈಕ ಮಹಿಳಾ ಕಮಾಂಡೋ ಟ್ರೈನರ್​- ನಿಜ ಜೀವನದಲ್ಲೂ ಸೀಮಾ ಫೈಟರ್​

Related Stories