ಕುಂಚದಲ್ಲಿ ಅರಳಿತು ಚಿತ್ತಾರದ ನಗರಿ

ಪೂರ್ವಿಕಾ

0

ವರ್ಷದಲ್ಲಿ ಒಂದು ದಿನ ಮಾತ್ರ ಆ ರಸ್ತೆಯಲ್ಲಿ ಒಂದು ಹೆಜ್ಜೆ ಇಡೋದಿಕ್ಕೂ ಜಾಗ ಇರುವುದಿಲ್ಲ. ಆದ್ರೆ ಜನ ಅದೆಷ್ಟೇ ಕಿಕ್ಕಿರಿದ್ರು ಕೂಡ ಅಲ್ಲಿರೋ ಚಿತ್ತಾರಗಳನ್ನ ಕಂಣ್ತುಂಬಿಕೊಳ್ಳಲು ಹಾತೊರಿಯುತ್ತಾರೆ. ಲಕ್ಷಾಂತರ ಜನರು ರಸ್ತೆ ಜನರಿಂದ ತುಂಬಿ ತುಳಿಕಿದ್ರು ಕೂಡ ಹೇಗಾದ್ರು ಮಾಡಿ ರಸ್ತೆಯಲ್ಲೆಲ್ಲ ಅಲೆದು ತಿರುಗಾಡಲೇ ಬೇಕು ಅಂತಾರೆ. ಇಷ್ಟೇಲ್ಲ ಹಾತೊರೆದು ರಸ್ತೆಗಿಳಿಯೋದು ದೇಶದ ಹಲವಾರು ರಾಜ್ಯಗಳ ಕಲಾವಿದರು ಕುಂಚದಲ್ಲಿ ಅರಳಿಸಿದ ಕಲೆಯನ್ನ ನೋಡಲು.

ಹೌದು ನಾವೀಗ ಹೇಳುತ್ತಿರುವುದು ವಿಶ್ವದೆಲ್ಲೆಡೆ ಖ್ಯಾತಿ ಪಡೆದಿರುವ ಚಿತ್ರಸಂತೆಯ ಬಗ್ಗೆ. ಇಡೀ ದೇಶದಲ್ಲೇ ದೊಡ್ಡ ಪ್ರಮಾಣದಲ್ಲಿ ನಡೆಯೋ ಚಿತ್ರಸಂತೆ ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುತ್ತೆ. ಕುಮಾರಕೃಪ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯೋ ಚಿತ್ರಸಂತೆ ದೇಶದಲ್ಲೆಲ್ಲ ಪ್ರಸಿದ್ದಿ. 15ಕ್ಕೂ ಹೆಚ್ಚು ರಾಜ್ಯಗಳ ಕಲಾವಿದರು ಒಂದೇ ಕಡೇ ಸೇರಿ ತಮ್ಮ ಕೈನಲ್ಲಿ ಅರಳಿಸಿದ ಚಿತ್ತಾರವನ್ನ ಜನರ ಕಣ್ತುಂಬಿಕೊಳ್ಳಲು ಪ್ರದರ್ಶನ ಮಾಡ್ತಾರೆ.

15ಕ್ಕೂ ಹೆಚ್ಚು ರಾಜ್ಯ, 3000ಕ್ಕೂ ಹೆಚ್ಚು ಕಲಾವಿದರು

ದೇಶದ ಹಲವಾರು ರಾಜ್ಯದ ಮೂಲೆ ಮೂಲೆಯಿಂದ ಮೂರು ಸಾವಿರಕ್ಕೂ ಹೆಚ್ಚು ಕಲಾವಿದರು ಬಂದು ತಾವು ರಚಿಸಿದ ಕಲೆಯನ್ನ ರಸ್ತೆಯಲ್ಲಿ ಪ್ರದರ್ಶನಕ್ಕಿಡುತ್ತಾರೆ. ಮೈಸೂರು,ತಂಜಾವೂರು,ರಾಜಸ್ತಾನಿ ಬಿಹಾರ,ಹರಿಯಾಣ,ಜಾರ್ಖಂಡ್,ಪಶ್ಚಿಮ ಬಂಗಾಳ,ಕೇರಳ,ಆಂಧ್ರ ಪ್ರದೇಶ,ಮಹಾರಾಷ್ಟ್ರದ ಚಿತ್ರಾಕೃತಿಗಳು ಚಿತ್ರಸಂತೆಯ ಮುಖ್ಯ ಆಕರ್ಷಣೆಯಾಗಿರುತ್ತೆ. ಇನ್ನೂ ಈ ಚಿತ್ರ ಸಂತೆಯಲ್ಲಿ ಪ್ರಾಣಿ, ಪಕ್ಷಿ, ಬೆಟ್ಟ,ಗುಡ್ಡ ಒಳಗೊಂಡಂತೆ ಮೂಡಿ ಬರುವ ಪರಿಸರದ ವೈವಿಧ್ಯತೆ ಸಾರುವ ಚಿತ್ರಾಕೃತಿಗಳು ಮತ್ತೆ ಮತ್ತೆ ನೋಡುವಂತೆ ಮಾಡುತ್ತೆ. ಇನ್ನೂ ಈ ಸಂತೆಯಲ್ಲಿ ಎಲ್ಲರನ್ನೂ ಆಕರ್ಷಿಸಬಲ್ಲ ಅದೆಷ್ಟೇ ಅಮೂರ್ತ ಬಗೆಯ ಚಿತ್ರಾಕೃತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತೆ. ಅದರ ಜೊತೆಗೆ ಜನಪದ ಕಲಾಕೃತಿಗಳು ಹಾಗೂ ಹಳ್ಳಿ ಸೂಬಗನ್ನ ಹೊರಚೆಲ್ಲೋ ಚಿತ್ತಾರಗಳಂತು ನೋಡುಗರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ.

11 ವರ್ಷದ ಹಿಂದಿನ ಸಂತೆ

ಈ ಚಿತ್ರಸಂತೆಗೆ 11 ವರ್ಷದ ಇತಿಹಾಸವಿದೆ. ಪ್ರತಿವರ್ಷವೂ ನಡೆಯೋ ಈ ಚಿತ್ರಸಂತೆಯಲ್ಲಿ ನೂರು ರೂಪಾಯಿಯಿಂದ ಹಿಡಿದು 11 ಲಕ್ಷದ ವರೆಗಿನ ಚಿತ್ತಾರಗಳು ಲಭ್ಯವಾಗುತ್ತೆ. ಹೊಸ ಕಲಾವಿದರು ರಚಿಸಿದ ಕಲಾಚಿತ್ತಾರಗಳಿಂದ ಹಿಡಿದು ಹಿರಿಯ ಕಲಾವಿದರು ರಚಿಸಿದ ಕಲಾಕೃತಿಗಳಿಗೆ ಕಲಾಸಕ್ತರು ಇಲ್ಲಿ ಬೆಲೆ ಕಟ್ಟುತ್ತಾರೆ.

ತೈಲವರ್ಣ,ಜಲವರ್ಣ,ಡಿಜಿಟಲ್ ಪ್ರಿಂಟ್ ,ಶಿಲ್ಪಕಲೆ ತಂಜಾವೂರು ಕಲೆ ಹೀಗೆ ನಾನಾ ನಮೂನೆಯ ಸಾಂಪ್ರದಾಯಿಕ ಮತ್ತು ಆಧುನಿಕ ಕಲೆಗಳು ರಸ್ತೆಯ ತುಂಬೆಲ್ಲಾ ರಾರಾಜಿಸುತ್ತವೆ. ಕೇವಲ ಕಲಾವಿದರು ಮಾತ್ರವಲ್ಲದೆ ಈ ಚಿತ್ರಸಂತೆಯಲ್ಲಿ ಲಕ್ಷಾನುಗಟ್ಟಲೆಯ ಕಲಾಸಕ್ತರು ಇಲ್ಲಿರುವ ಚಿತ್ತಾರವನ್ನ ನೋಡಿ ಕಣ್ತುಂಬಿಕೊಂಡು ತಮಗಿಷ್ಟವಾದ ಕಲಾಕೃತಿಗಳನ್ನ ಕೊಂಡ್ಯೂತ್ತಾರೆ. ಒಂದೇ ಒಂದು ದಿನ ನಡೆಯೋ ಈ ಚಿತ್ರಗಳ ಸಂತೆಯಲ್ಲಿ ದೇಶದ ಜನರು ಮಾತ್ರವಲ್ಲದೆ ವಿದೇಶಿಯರು ಕೂಡ ಬಾಗಿಯಾಗೋದು ವಿಶೇಷ. ದೇಶದಲ್ಲೇ ಇಷ್ಟು ಆಕರ್ಷಣೆಯಿಂದ ಕೂಡಿರೋ ಚಿತ್ರಸಂತೆ ಬೇರೆಲ್ಲೂ ನಡೆಯೋದಿಲ್ಲ ಅನ್ನೋದು ಚಿತ್ರಾಸಕ್ತರ ಮಾತು.

ಚಿತ್ರಸಂತೆಯಲ್ಲಿ ಕಲಾವಿದರ ಸಮಾಗಮ

ಇನ್ನೂ ಈ ಚಿತ್ರಸಂತೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ರಸ್ತೆಯಲ್ಲಿ ನಡೆಯೋದ್ರಿಂದ ರಾಜ್ಯದ, ದೇಶದ ಮೂಲೆ ಮೂಲೆಯಲ್ಲಿ ನೆಲೆಸಿರೋ ಸಾಕಷ್ಟು ಕಲಾವಿದರು ಒಂದೇ ಕಡೆ ಸೇರುತ್ತಾರೆ. ಇನ್ನೂ ವಿಶೇಷತೆ ಅಂದ್ರೆ ಇದೇ ಚಿತ್ರಕಲಾ ಪರಿಷತ್ತಿನಲ್ಲಿ ಅಭ್ಯಾಸ ಮಾಡಿರೋ ಸಾವಿರಾರು ವಿದ್ಯಾರ್ಥಿಗಳು ಇದೇ ಚಿತ್ರಸಂತೆಯಲ್ಲಿ ವರ್ಷಕ್ಕೊಮ್ಮೆ ಸೇರುತ್ತಾರೆ. ಕುಂಚದಲ್ಲಿ ಅರಳಿರೋ ಚಿತ್ತಾರಗಳು ಮಾತ್ರವಲ್ಲದೆ ಹಳೆಯ ವಸ್ತುಗಳಿಂದ ತಯಾರು ಮಾಡಲ್ಪಟ್ಟ ಅನೇಕ ವಸ್ತುಗಳು ಕೂಡ ಇಲ್ಲಿ ಮಾರಟಕ್ಕಿರುತ್ತವೆ. ಸ್ಥಳದಲ್ಲೇ ನಿಮ್ಮ ಚಿತ್ತಾರವನ್ನ ಬರೆದು ಕೊಡೋ ನೂರಾರು ಕಲಾವಿದರು ಕೂಡ ಚಿತ್ರಸಂತೆಯಲ್ಲಿ ಸಿಗುತ್ತಾರೆ. ಒಂದೇ ಒಂದು ದಿನ ನಡೆಯೋ ಈ ಚಿತ್ರಸಂತೆಯಲ್ಲಿ ಕೋಟಿಗಟ್ಟಲೆಯ ವ್ಯಾಪಾರ ವಹಿವಾಟು ನಡೆಯುತ್ತೆ. ವರ್ಷದ 365 ದಿನವೂ ಜಿಗಿಜಿಗಿ ಅಂತ ಟ್ರಾಫಿಕ್ ನಲ್ಲಿ ಕೂಡಿರೋ ಈ ರಸ್ತೆ ಒಂದು ದಿನಮಾತ್ರ ದೇಶದ ಮೂಲೆ ಮೂಲೆಯಲ್ಲಿರೋ ಕಲಾವಿದರಲ್ಲಿ ಅಡಗಿರೋ ಕಲೆಗೆ ಬೆಲೆ ಕಟ್ಟೋ ಸ್ಥಳವಾಗಿ ಬದಲಾಗುತ್ತೆ.

Related Stories