ಸೆಕೆಂಡ್ ಹ್ಯಾಂಡ್ ಬಟ್ಟೆಗಳಿಗೂ ಬಂತು ಆನ್‍ಲೈನ್ ಶಾಪಿಂಗ್..!

ವಿಶಾಂತ್​​

0

ಸೆಕೆಂಡ್ ಹ್ಯಾಂಡ್ ಬೈಕ್ ಮತ್ತು ಕಾರ್‍ಗಳಿಗಾಗಿಯೇ ನಮ್ಮಲ್ಲಿ ಹಲವು ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್‍ಗಳಿವೆ. ಅದೇ ರೀತಿ ಮರುಬಳಕೆಯ ಮೊಬೈಲ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ಗಳಿಗೂ ಸಾಮಾಜಿಕ ಅಂತರ್ಜಾಲ ತಾಣಗಳಿವೆ. ಆದ್ರೆ ಬಟ್ಟೆಗಳಿಗೆ? ಹೊಸ ಬಟ್ಟೆಗಳಿಗೇನೋ ಹತ್ತಾರು ಶಾಪಿಂಗ್ ವೆಬ್‍ಸೈಟ್‍ಗಳಿವೆ. ಆದ್ರೆ ಅದಾಗಲೇ ಬಳಸಿರುವ, ಯಾರೋ ಧರಿಸಿರುವ, ಮರುಬಳಕೆಯ ಬಟ್ಟೆಗಳನ್ನೂ ಮಾರಾಟ ಮಾಡೋಕೆ ವೆಬ್‍ಸೈಟ್ ಶುರುವಾಗಿದ್ಯಾ ಅಂತ ಆಶ್ಚರ್ಯವಾಗ್ತಿದ್ಯಾ? ಹೌದು, ಅಂತಹ ಸೆಕೆಂಡ್ ಹ್ಯಾಂಡ್ ಬಟ್ಟೆಗಳ ಮಾರಾಟಕ್ಕೆಂದೇ ವೆಬ್‍ಸೈಟ್ ಒಂದು ಪ್ರಾರಂಭವಾಗಿದೆ. ಅಂದ್ಹಾಗೆ, ಅದನ್ನು ನಮ್ಮ ಬೆಂಗಳೂರಿನವರೇ ಸ್ಟಾರ್ಟ್ ಮಾಡಿರೋದು ಮತ್ತೊಂದು ವಿಶೇಷ.

ಒನ್ಸ್ ಅಗೇನ್..!

ಈ ವರ್ಷದ ಪ್ರಾರಂಭದಲ್ಲಿ 20 ವರ್ಷದ ನಿಕಿತಾ ಅಗರ್ವಾಲ್ ಹೆಚ್ಚುತ್ತಿರುವ ತಮ್ಮ ಬಟ್ಟೆಗಳನ್ನು ಜೋಡಿಸಿಡಲು ಹೊಸ ವಾರ್ಡ್‍ರೋಬ್ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರು. ಆಗ ಅವರಿಗೆ ಥಟ್ ಅಂತ ಒಂದು ಐಡಿಯಾ ಹೊಳೆಯಿತು. ‘ನಾನಂತೂ ಯಾವಾಗಲೂ ಬಟ್ಟೆ ಖರೀದಿಸುತ್ತಿರುತ್ತೇನೆ. ಹೀಗಾಗಿ ನನ್ನ ಬಟ್ಟೆಗಳ ಸಂಖ್ಯೆ ಜಾಸ್ತಿಯಾಗ್ತನೇ ಇರುತ್ತೆ. ಹೀಗಿರುವಾಗ ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ದೊಡ್ಡ ಸೈಜ್‍ನ ಹೊಸ ವಾರ್ಡ್‍ರೋಬ್ ಖರೀದಿಸಬೇಕಾಗುತ್ತೆ. ಅದಲ್ಲದೇ ಸಾವಿರಾರು ರೂಪಾಯಿ ತೆತ್ತು ಖರೀದಿಸಿದ ಬಟ್ಟೆಯನ್ನು ಎಸೆಯಲು ಮನಸ್ಸು ಬರೋದಿಲ್ಲ. ಯಾರಿಗಾದ್ರೂ ಕೊಡೋಣ ಅಂದ್ರೆ, ನನ್ನ ಗೆಳತಿಯರು ಹಾಗೂ ಸಂಬಂಧಿಕರು ಇವಳು ಹಾಕಿದ್ದ ಬಟ್ಟೆಯನ್ನು ನಾವ್ಯಾಕೆ ಧರಿಸಬೇಕು ಅಂತ ಇಷ್ಟಪಡೋದಿಲ್ಲ. ಹೀಗಾಗಿ ಹೀಗೆ ಧರಿಸಿರುವ ಬಟ್ಟೆಗಳನ್ನೇ ಯಾಕೆ ಮಾರಬಾರದು? ಈಗಾಗಲೇ ಸೆಕೆಂಡ್ ಹ್ಯಾಂಡ್ ಕಾರ್, ಬೈಕ್, ಲ್ಯಾಪ್‍ಟಾಪ್‍ಗಳಿಗೆಲ್ಲಾ ವೆಬ್‍ಸೈಟ್‍ಗಳಿವೆ, ಅದೇ ರೀತಿ, ಸೆಕೆಂಡ್ ಹ್ಯಾಂಡ್ ಬಟ್ಟೆಗಳಿಗೂ ಯಾಕೆ ಒಂದು ವೆಬ್‍ಸೈಟ್ ಮಾಡಬಾರದು?’ ಅಂತ ಯೋಚಿಸಿದ್ರು. ತಕ್ಷಣ ತಡ ಮಾಡದೇ ಗೆಳೆಯ ಉಮಂಗ್ ಚೋರ್ಡಿಯಾಗೂ ಈ ಐಡಿಯಾ ತಿಳಿಸಿದ್ರು. ತಕ್ಷಣ ಇಬ್ಬರೂ ತಮ್ಮ ಪೋಷಕರನ್ನು ಒತ್ತಾಯ ಮಾಡಿ, 10 ಲಕ್ಷ ರೂಪಾಯಿ ಹಣ ಪಡೆದು, ಒನ್ಸ್ ಅಗೇನ್ ಎಂಬ ಸೆಕೆಂಡ್ ಹ್ಯಾಂಡ್ ಬಟ್ಟೆಗಳ ವೆಬ್‍ಸೈಟ್‍ನ್ನು ಪ್ರಾರಂಭಿಸಿಯೇಬಿಟ್ಟರು. ಹೀಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್‍ನ ಅಚಿತಿಮ ವರ್ಷದ ವಿದ್ಯಾರ್ಥಿಗಳು, ಓದಿನ ಜೊತೆಗೆ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.

ಮಹಿಳೆಯರಿಗೆ ಹೊಸ ಹೊಸ ಬಟ್ಟೆ ಖರೀದಿಸುವ ಗೀಳು ಹೆಚ್ಚಾಗಿರುತ್ತೆ. ಅದರಲ್ಲಂತೂ ಕೆಲವರು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೊಮ್ಮೆ ಹಾಕೋದಿಲ್ಲ. ಅಂತಹವರಿಗೆ ನಮ್ಮ ವೆಬ್‍ಸೈಟ್ ಒಂದೊಳ್ಳೆ ವೇದಿಕೆ ನೀಡುತ್ತೆ ಅಂತಾರೆ ನಿಕಿತಾ.

ಶಿಕ್ಷಣ ಜೊತೆಗೆ ಉದ್ಯಮ

ಬೇರೆ ವಿದ್ಯಾರ್ಥಿಗಳಂತೆ ನಿಕಿತಾ ಮತ್ತು ಉಮಂಗ್, ಕಾಲೇಜ್ ಮುಗಿಯುತ್ತಲೇ ಸಿನಿಮಾ, ಶಾಪಿಂಗ್ ಅಥವಾ ಹ್ಯಾಂಗ್‍ಔಟ್ ಅಂತ ಅಲ್ಲಿ ಇಲ್ಲಿ ಸುತ್ತೋದಿಲ್ಲ. ಬದಲಿಗೆ ಬೆಳಗ್ಗೆ 11.30ಕ್ಕೆ ಕಾಲೇಜು ಮುಗಿಯುತ್ತಿದ್ದಂತೆಯೇ ಇಬ್ಬರೂ ಇಂದಿರಾನಗರದ ತಮ್ಮ ಕಚೇರಿಗೆ ಹೋಗ್ತಾರೆ. ಮತ್ತೆ ರಾತ್ರಿಯವರೆಗೂ ಒನ್ಸ್ ಅಗೇನ್‍ನಲ್ಲಿ ಬ್ಯುಸಿಯಾಗಿರ್ತಾರೆ.

ಜಾರಾ, ಮೌಂಟ್ ಬ್ಲ್ಯಾಂಕ್, ಲೂಯಿಸ್ ವೆಟ್ಟಾನ್, ಕೆಮಿಸ್ಟ್ರಿ ಸೇರಿದಂತೆ ಇನ್ನೂ ಹಲವಾರು ಬಗೆಯ ಅಂತಾರಾಷ್ಟ್ರೀಯ ಬ್ರ್ಯಾಂಡ್‍ನ ಬಟ್ಟೆಗಳನ್ನು ಈ ವೆಬ್‍ಸೈಟ್‍ನಲ್ಲಿ ಮಾರಾಟ ಮಾಡಲಾಗುತ್ತಿದೆ. ಮೊದಲು ಬಟ್ಟೆಯ ಫೋಟೋ ಜೊತೆಗೆ ಗ್ರಾಹಕರು ಇವರನ್ನು ಸಂಪರ್ಕಿಸ್ತಾರೆ. ಕೆಲವೊಮ್ಮೆ ಕೇವಲ ಒಂದು ಬಾರಿ ಧರಿಸಿರುವ ಬಟ್ಟೆಗಳೂ ಇವರ ಬಳಿ ಬರುತ್ತವೆ. ಅದನ್ನೊ ನೋಡಿ, ಅದರ ನಿಜವಾದ ಬೆಲೆಯ ಮೇಲೆ ಶೇಕಡಾ 30% – 40%ರಷ್ಟು ಡಿಸ್ಕೌಂಡ್ ನೀಡಲಾಗುತ್ತದೆ. ನಂತರ ಆ ಬಟ್ಟೆ ಮಾರಾಟವಾದ ಬಳಿಕ ಮಾರಾಟಗಾರರಿಂದ ಶೇಕಡಾ 15ರಷ್ಟು ಇವರು ಕಮಿಷನ್ ಪಡೆಯುತ್ತಾರೆ. ಆದ್ರೆ ಇವರಿನ್ನೂ ಚಿಕ್ಕ ಹುಡುಗರೆಂದು ಕೆಲವೊಮ್ಮೆ ಮಾರಾಟಗಾರರು ಹಾಗೂ ಬಟ್ಟೆಗಳನ್ನು ಡೆಲಿವರಿ ಮಾಡುವ ಲಾಜಿಸ್ಟಿಕ್ಸ್​​ನವರು ಇವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಅನ್ನೋದೇ ನಿಕಿತಾ ಮತ್ತು ಉಮಂಗ್‍ರ ಬೇಜಾರು.

ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿಗಳೇ ಒನ್ಸ್ ಅಗೇನ್ ಟಾರ್ಗೆಟ್ ಆಗಿದ್ದು, ಕಳೆದ ಮೂರು ತಿಂಗಳಲ್ಲಿ ಕಂಪನಿ ಸುಮಾರು 300ಕ್ಕೂ ಹೆಚ್ಚು ಆರ್ಡರ್‍ಗಳನ್ನು ಪೂರೈಸಿದೆ. ‘ನಾವು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಾಗಿರುವ ಕಾರಣ, ಕಾಲೇಜಿನಲ್ಲಿ ಏನು ಕಲಿಯುತ್ತಿದ್ದೀವೋ, ಅದನ್ನೇ ಇಲ್ಲಿ ಕಾರ್ಯರೂಪಕ್ಕೆ ತರುತ್ತಿದ್ದೇವೆ’ ಅಂತ ತಮ್ಮ ಮಾತು ಮುಗಿಸುತ್ತಾರೆ ನಿಕಿತಾ.

ಅದೇನೇ ಇರಲಿ ಬೆಂಗಳೂರಿನ ಉದಯೋನ್ಮುಖ ಉದ್ಯಮಿಗಳಿಗೆ ಆಲ್ ದಿ ಬೆಸ್ಟ್ ಹೇಳೋಣ.

Related Stories