ಭಾರತ - ಪಾಕಿಸ್ತಾನವನ್ನು ಒಗ್ಗೂಡಿಸಿದ ಮೊಬೈಲ್ ಅಪ್ಲಿಕೇಶನ್..!

ಟೀಮ್​​ ವೈ.ಎಸ್​​.

ಭಾರತ - ಪಾಕಿಸ್ತಾನವನ್ನು ಒಗ್ಗೂಡಿಸಿದ ಮೊಬೈಲ್ ಅಪ್ಲಿಕೇಶನ್..!

Wednesday October 28, 2015,

5 min Read

ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಹಾಗೂ ರಾಜಕೀಯ ಕಾರಣಗಳಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ನಡುವೆ ಶತ್ರುತ್ವ ಬೆಳೆದಿದೆ. ಹೀಗಾಗಿಯೇ ಕ್ರೀಡಾ ವಲಯದಲ್ಲೂ ನಾವು ಒಬ್ಬರಿಗೊಬ್ಬರು ತೀವ್ರ ಪ್ರತಿಸ್ಪರ್ಧಿಗಳು. ಇದು ಸಾಮಾನ್ಯ ಜನರ ಅಭಿಪ್ರಾಯಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮತ್ತೊಂದು ದೇಶದ ಬಗ್ಗೆ ಅಪನಂಬಿಕೆ ಹಾಗೂ ದ್ವೇಷದ ಬೀಜ ಬಿತ್ತುವುದೂ ಉಂಟು. ಅದೇನೇ ಇರಲಿ, ಆದ್ರೆ ‘ಈ ಎರಡೂ ರಾಷ್ಟ್ರಗಳ ಜನ ಒಬ್ಬರಿಗಿಂತ ಒಬ್ಬರು ನಿಜವಾಗಲೂ ಇಷ್ಟೊಂದು ಭಿನ್ನವಾಗಿದ್ದಾರಾ? ಇವರ ನಡುವೆ ಯಾವುದೇ ರೀತಿಯ ಸಂಬಂಧಗಳಿಲ್ವಾ? ಎಂಬ ಪ್ರಶ್ನೆಗಳು ನಮ್ಮನ್ನು ಚರ್ಚೆಗೀಡು ಮಾಡುತ್ತವೆ.

2012ರಲ್ಲಿ ಅಮೃತ್ ಶರ್ಮಾ ಕಂಪ್ಯೂಟರ್ ಮುಂದೆ ಕುಳಿತು ಇಂಟರ್‍ನೆಟ್‍ನಲ್ಲಿ ಏನನ್ನೋ ಹುಡುಕುತ್ತಿರುವಾಗ, ಗೆಳೆಯ ಮೈಕಲ್ ಇಲಿಯಟ್‍ನಿಂದ ಒಂದು ಸಂದೇಶ ಬಂತು. ಅದು ಟೆಡ್ ಅಥವಾ ಟಿಇಡಿ ಟಾಕ್‍ನಿಂದ ರಾನಿ ಎಡ್ರಿ ಎಂಬ ಇಸ್ರೇಲ್ ಮೂಲದ ಗ್ರಾಫಿಕ್ ಡಿಸೈನರ್‍ನ ಲಿಂಕ್ ಆಗಿತ್ತು. ಅದರಲ್ಲಿ ಕೇವಲ ಒಂದು ಭಿತ್ತಿಪತ್ರ ಇಸ್ರೇಲ್ ಮತ್ತು ಇರಾನ್ ನಡುವೆ ಚಳುವಳಿಯನ್ನೇ ಸೃಷ್ಟಿಸಿದ್ದ ಕಥೆಯಿತ್ತು. ಎರಡೂ ದೇಶಗಳ ಜನ ಒಬ್ಬರು, ಮತ್ತೊಬ್ಬರ ಬಗ್ಗೆ ಸಕಾರಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಹಾಗೂ ಸಂದೇಶಗಳನ್ನು ಕಳಿಸಿದ್ದರು.

image


ಅಮೃತ್ ಆ ವೀಡಿಯೋ ನೋಡಿ ವಿಸ್ಮಯದಿಂದ ನೋಡಿದರು. ಹಾಗೂ ಅದನ್ನು ನೋಡುವಾಗ ಆದ ರೋಮಾಂಚನದ ಕುರಿತು ಈಗಲೂ ನೆನಪಿಸಿಕೊಳ್ಳುತ್ತಾರೆ. ಎಡ್ರಿಯ ಈ ಕೆಲಸ ‘ಇಸ್ರೇಲ್ ಲವ್ಸ್ ಇರಾನ್’ ಎಂಬ ಸಾವಿರಾರು ಫೇಸ್‍ಬುಕ್ ಗ್ರೂಪ್‍ಗಳ ಜನ್ಮಕ್ಕೆ ಕಾರಣವಾಗಿತ್ತು. ಹಾಗೇ ಬೇರೆ ಬೇರೆ ದೇಶಗಳ ಜನರೂ ಇದೇ ರೀತಿ ಹಲವು ಗ್ರೂಪ್‍ಗಳನ್ನು ಸೃಷ್ಟಿಸಿದ್ದರು. ಫೇಸ್‍ಬುಕ್‍ನಲ್ಲಿ ಹುಡುಕಾಟ ನಡೆಸಿದ ಅಮೃತ್‍ಗೆ ಅಲ್ಲಿ ‘ಇಂಡಿಯಾ ಲವ್ಸ್ ಪಾಕಿಸ್ತಾನ್’ ಮತ್ತು ‘ಪಾಕಿಸ್ತಾನ್ ಲವ್ಸ್ ಇಂಡಿಯಾ’ ಎಂಬ ಹಲವು ಗ್ರೂಪ್‍ಗಳ ಪರಿಚಯವಾಯ್ತು. ಆದ್ರೆ ಹಲವು ದಿನಗಳ ಕಾಲ ಎಡ್ರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಸಾಧ್ಯವಾಗಿರಲಿಲ್ಲ. ಆದ್ರೆ ಅಮೃತ್ ತಮ್ಮ ಆಲೋಚನೆಗಳನ್ನು ಹಾಗೆಯೇ ಬಿಟ್ಟುಬಿಡಲು ತಯಾರಿರಲಿಲ್ಲ. ಬದಲಿಗೆ ಅದನ್ನೇ ಸವಾಲಾಗಿ ಸ್ವೀಕರಿಸಿ, ‘ಇಂಡಿಯಾ ಲವ್ಸ್ ಪಾಕಿಸ್ತಾನ್.ಕಾಮ್’ ( www.indialovespakistan.com) ಎಂಬ ಡೊಮೈನ್ ನೋಂದಾಯಿಸಿದರು. ಈ ಮೂಲಕ ಎರಡೂ ದೇಶಗಳ ನಡುವಿನ ಬೆಸುಗೆಯನ್ನು ಗಟ್ಟಿಗೊಳಿಸಲು ಮೊದಲ ಹೆಜ್ಜೆಯಿಟ್ಟರು.

ಅಕ್ಕಪಕ್ಕದ ದೇಶಗಳಾದರೂ, ಭಾರತೀಯರಿಗೆ ಪಾಕಿಸ್ತಾನ ಹಾಗೂ ಅದರ ಜನರ ಕುರಿತು ಮತ್ತು ಪಾಕಿಸ್ತಾನೀಯರಿಗೆ ಭಾರತ ಹಾಗೂ ಭಾರತೀಯರ ಕುರಿತು ಅಷ್ಟಾಗಿ ಮಾಹಿತಿ ಇಲ್ಲದಿರುವುದು ಅಮೃತ್‍ಗೆ ತಿಳಿಯಿತು. ನೇಪಾಳದ ಕಠ್ಮಂಡುವಿನಲ್ಲಿ ವಿಶ್ವಪ್ರಜೆಯಾಗಿ, ಸರ್ವರಾಷ್ಟ್ರಪ್ರೇಮಿ ಎನಿಸುವಂತಹ ಪರಿಸರದಲ್ಲಿ, ನಾನಾ ದೇಶಗಳ ಜನರ ನಡುವೆ ಬೆಳೆದಿದ್ದ ಅಮೃತ್‍ಗೆ ಹಲವು ಪಾಕಿಸ್ತಾನೀ ಗೆಳೆಯರೂ ಇದ್ದರು. ಶಿಶುವಿಹಾರದಿಂದ ಹಿಡಿದು ವಿಶ್ವವಿದ್ಯಾಲಯದ ಶಿಕ್ಷಣದವರೆಗೂ ಅವರಿಗೆ ಬೇರೆ ಬೇರೆ ದೇಶಗಳ ಜನರೊಂದಿಗೆ ಬೆರೆಯುವ ಅವಕಾಶ ಸಿಕ್ಕಿತ್ತು. ಹೀಗಾಗಿಯೇ ಅಮೃತ್‍ಗೆ ಮೊದಲಿಂದಲೂ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕೆಲಸ ಮಾಡುವ ಆಸೆ ಇತ್ತು. ತಂತ್ರಜ್ಞಾನ ಹಾಗೂ ಸಾಮಾಜಿಕ ಅಂತರ್ಜಾಲ ತಾಣಗಳ ಮೂಲಕ ಕಟ್ಟುಪಾಡುಗಳನ್ನು ಮುರಿದು, ಎರಡೂ ರಾಷ್ಟ್ರಗಳ ನಡುವೆ ಗೆಳೆತನದ ಸೇತುವೆ ನಿರ್ಮಿಸಲು ಮುಂದಾದರು. ‘ಜನ, ಮತ್ತೊಬ್ಬರ ಪಾಸ್‍ಪೋರ್ಟ್‍ನ ಬಣ್ಣಕ್ಕಿಂತ ಹೆಚ್ಚಾಗಿ ಅವರ ಆಳವಾದ ಜ್ಞಾನ ಹಾಗೂ ಗುಣಗಳ ಮೂಲಕ ಮತ್ತೊಬ್ಬರ ಕುರಿತು ತೀರ್ಮಾನಕ್ಕೆ ಬರುವ ದಿನವನ್ನು ನೋಡುವ ದೊಡ್ಡ ಆಸೆ ನನ್ನದು.’ ಅಂತಾರೆ ಅಮೃತ್.

ಈ ಆಲೋಚನೆಯೊಂದಿಗೆ ಮೊದಲ ಹೆಜ್ಜೆಯಿಟ್ಟ ಅಮೃತ್, ‘ಇಂಡಿಯಾ ಅಥವಾ ಪಾಕಿಸ್ತಾನ್’ ಎಂಬ ಉಚಿತ ಆಂಡ್ರಾಯ್ಡ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಒಬ್ಬ ಫ್ರೀಲಾನ್ಸ್ (ಸ್ವತಂತ್ರ) ಡೆವೆಲಪರ್ ಹಾಗೂ ಗ್ರಾಫಿಕ್ ಡಿಸೈನರ್‍ಅನ್ನು ಕೆಲಸಕ್ಕೆ ಸೇರಿಸಿಕೊಂಡರು. ಅದನ್ನು ಇದೇ 2015ರ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು ಯಶಸ್ವಿಯಾಗಿ ಬಿಡುಗಡೆ ಮಾಡಲಾಯ್ತು. ಈ ಅಪ್ಲಿಕೇಶನ್‍ನ ಉದ್ಧೇಶ ಸರಳವಾಗಿತ್ತು. ಅದೇನಂದ್ರೆ ಕೆಲ ಫೋಟೋಗಳನ್ನು ಇಲ್ಲಿ ಜನರಿಗೆ ತೋರಿಸಲಾಗುತ್ತಿತ್ತು. ಆ ಸ್ಥಳ ಭಾರತದಲ್ಲಿದ್ಯಾ ಅಥವಾ ಪಾಕಿಸ್ತಾನದಲ್ಲಿದ್ಯಾ ಅಂತ ಕೇಳಲಾಗುತ್ತಿತ್ತು. ಜನ, ಜನಜೀವನ, ರಸ್ತೆಗಳು, ಬೀದಿಗಳು, ಕಟ್ಟಡಗಳು, ಸ್ಮಾರಕಗಳು ಮಾತ್ರವಲ್ಲ ಎರಡೂ ದೇಶಗಳ ಊಟ- ತಿಂಡಿ- ಖಾದ್ಯಗಳ ನಡುವೆಯೂ ಸ್ವಲ್ಪ ಹೋಲಿಕೆಗಳಿವೆ. ಹೀಗಾಗಿಯೇ ಜನರು ಈ ಚಿತ್ರಗಳನ್ನು ನೋಡಿ ಸರಿಯಾದ ಉತ್ತರ ಕೊಡುವುದು ಕೊಂಚ ಕಷ್ಟಸಾಧ್ಯವಾಗುತ್ತಿತ್ತು.

ಈ ಅಪ್ಲಿಕೇಶನ್ ಬಿಡುಗಡೆಯಾದ ಬಳಿಕ ಅಮೃತ್‍ಗೆ ಇದರ ಕುರಿತು ಎರಡೂ ರಾಷ್ಟ್ರಗಳಿಂದ ಮಾತ್ರವಲ್ಲ ವಿಶ್ವದಾದ್ಯಂತ ಬೇರೆ ಬೇರೆ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿತು. ಇದನ್ನು ಬಳಸಿದ ಜನ ಈ ಅಪ್ಲಿಕೇಶನ್‍ನ ಸರಳತೆ ಹಾಗೂ ಇದರ ಹಿಂದಿದ್ದ ಉದ್ದೇಶದ ಕುರಿತು ಅಮೃತ್ ಬೆನ್ನು ತಟ್ಟಿದರು. ‘ನನ್ನ ಮೊಬೈಲ್‍ಅನ್ನು ಗೆಳೆಯರಿಗೆ ಕೊಟ್ಟು, ಈ ಅಪ್ಲಿಕೇಶನ್ ಬಳಸುವಂತೆ ತಿಳಿಸುತ್ತೇನೆ. ಅವರ ಪ್ರತಿಕ್ರಿಯೆ ನಿಜಕ್ಕೂ ನನಗೆ ಆನಂದ ನೀಡುತ್ತದೆ. ಸರಿಯಾದ ಉತ್ತರ ಕೊಟ್ಟಾಗ ಅವರು ನಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ಅವರು ಅತ್ಯಂತ ಆತ್ಮವಿಶ್ವಾಸದಿಂದ ನೀಡುವ ಉತ್ತರ ತಪ್ಪಾಗಿದ್ದಲ್ಲಿ, ಅವರನ್ನು ನೋಡೋದು ಇನ್ನೂ ಖುಷಿ ನೀಡುತ್ತದೆ. ಅದಕ್ಕೆ ಬೆಲೆಕಟ್ಟಲಾಗೋದಿಲ್ಲ ಬಿಡಿ. ಇದು ಸ್ಪರ್ಧೆಯ ಅಂತ್ಯದಲ್ಲಿ ನೀನೆಷ್ಟು ಅಂಕ ಪಡೆದೆ ಅನ್ನೋದು ಇಲ್ಲಿ ಪ್ರಮುಖವಲ್ಲ. ಬದಲಾಗಿ ಕೊನೆಗೆ ನಿನಗೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಅಂತಹ ಹೇಳಿಕೊಳ್ಳುವಷ್ಟು ಭಿನ್ನತೆಗಳಿಲ್ಲ ಅನ್ನೋದನ್ನು ಅರಿಯುವುದು ಬಹುಮುಖ್ಯ’ ಅಂತ ನಗುತ್ತಾರೆ ಅಮೃತ್. 2015ರ ಆಗಸ್ಟ್ ಹೊತ್ತಿಗೆ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಈ ಅಪ್ಲಿಕೇಶನ್‍ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ 500ಕ್ಕೂ ಹೆಚ್ಚು ಮಂದಿ ಇದಕ್ಕೆ 5 ಸ್ಟಾರ್‍ಗಳನ್ನು ನೀಡಿದ್ದು, ಅಪ್ಲಿಕೇಶನ್‍ನ ಒಟ್ಟು 5 ಅಂಕಕ್ಕೆ 4.3ರಷ್ಟಿದೆ. ಅಪ್ಲಿಕೇಶನ್‍ನ ಬಹುತೇಕ ಬೆಳವಣಿಗೆಗೆ ಜನರೇ ಕಾರಣ. ಒಬ್ಬರು ಇನ್ನೊಬ್ಬರಿಗೆ ಹೇಳಿ, ಹೀಗೆ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಹರಡುವ ಮೂಲಕ ಸಾವಿರಾರು ಮಂದಿ ಇದನ್ನು ಬಳಸುತ್ತಿದ್ದಾರೆ. ಹಾಗೂ ಮಾಧ್ಯಮಗಳ ಮೂಲಕವೇ ಕೊಂಚ ಮಟ್ಟಿಗೆ ಅರಿವು ಮೂಡಿಸಲಾಗಿದೆ. ಇಂಡಿಯಾ ಲವ್ಸ್ ಪಾಕಿಸ್ತಾನ ಪಟ್ಟಿಗಳ ಮೂಲಕ ಈಮೇಲ್ ಮಾರ್ಕೆಟಿಂಗ್, ಹಾಗೂ ಶೇರ್ ಮಾಡುವ ಮೂಲಕವೂ ಜನರನ್ನು ಮುಟ್ಟುವಲ್ಲಿ ಈ ಅಪ್ಲಿಕೇಶನ್ ಯಶಸ್ವಿಯಾಗಿದೆ.

ಇದರ ಹಿನ್ನೆಲೆಯೇನು?

ಸಮಾಜದಲ್ಲಿ ಬದಲಾವಣೆ ತರಲೆಂದು ಅಮಿತ್ ಈ ಪ್ರಯತ್ನಕ್ಕೆ ಕೈ ಹಾಕಿದ್ದರು. ಲಾಭ ಮಾಡುವುದು ಅವರ ಉದ್ದೇಶವಾಗಿರಲಿಲ್ಲ. ಬದಲಿಗೆ ಹಲವು ಕಾರಣಗಳಿಂದಾಗಿ ಇದು ಅವರ ಹೃದಯಕ್ಕೆ ಹತ್ತಿರವಾಗಿತ್ತು. 2002ರಲ್ಲಿ ತನ್ನ ಹದಿನಾರನೇ ವಯಸ್ಸಿನಲ್ಲಿ ನೇಪಾಳದಲ್ಲಿದ್ದಾಗ ಅಮಿತ್, ಕೇಂಬ್ರಿಡ್ಜ್​​ನ ಓ- ಮಟ್ಟದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆಗ ಅವರ ನಾಲ್ಕೂ ಮಂದಿ ಅಜ್ಜಿ – ತಾತಂದಿರು ಪಾಕಿಸ್ತಾನದ ಮೂಲದವರು ಎಂಬ ಅಚ್ಚರಿಯ ವಿಷಯ ತಿಳಿದುಬಂತು.

ಸತತ 200 ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರಕಿತು. ಅದೇ ಸಮಯದಲ್ಲಿ ಪಾಕಿಸ್ತಾನವೂ ಜನ್ಮ ತಾಳಿತು. 1947ರ ಆಗಸ್ಟ್ 14ರಂದು ಅಮಿತ್‍ನ ಅಜ್ಜ- ಅಜ್ಜಿಯರು (ಆಗ ಪಾಕಿಸ್ತಾನದಲ್ಲಿದ್ದರು) ತಮ್ಮ ಮನೆ ಮಠ ಆಸ್ತಿ-ಪಾಸ್ತಿಯನ್ನೆಲ್ಲಾ ಅಲ್ಲೇ ಬಿಟ್ಟು, ಭಾರತಕ್ಕೆ ಬಂದಿದ್ದರು. ಸಾವಿರಾರು ನಿರಾಶ್ರಿತರೊಂದಿಗೆ ರೈಲೊಂದನ್ನು ಹತ್ತಿ ದೆಹಲಿಗೆ ಬಂದು ಸೇರಿದ್ದರು.

ಕೆಲ ತಿಂಗಳ ಹಿಂದಷ್ಟೇ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಅಮೃತ್ ದೆಹಲಿಯಲ್ಲಿದ್ದರು. ದುರಂತ ಸಂಭವಿಸಿದ ಮಾರನೇ ದಿನವೇ ಕಾಠ್ಮಂಡುವಿಗೆ ಹಾರಲು ಏರೋಪ್ಲೇನ್ ಟಿಕೆಟ್ ಖರೀದಿಸಿದ್ದರು. ಹುಟ್ಟಿದ್ದು ಬೆಳೆದಿದ್ದು ನೇಪಾಳದಲ್ಲೇ ಆದ್ದರಿಂದ, ಭೂಕಂಪದಿಂದ ತತ್ತರಿಸಿದ್ದ ಅಲ್ಲಿನ ಜನರಿಗೆ ನೆರವು ನೀಡಲು ಬಯಸಿದ್ದರು. ಅಲ್ಲಿ ಹೋಗಿ ನೋಡಿದರೆ, ಬೇರೆ ಬೇರೆ ದೇಶಗಳ, ಧರ್ಮಗಳ ನೂರಾರು ಮಂದಿ ನೇಪಾಳದ ಜನರ ಸಹಾಯ ಮಾಡಲು ಧಾವಿಸಿದ್ದರು. ಅವರಲ್ಲಿ ಡಾ| ಫಾಹಿಮ್ ರಹೀಮ್ ಕೂಡ ಒಬ್ಬರು. ಯಶಸ್ವೀ ವೈದ್ಯ, ಉದ್ಯಮಿ ಹಾಗೂ ಪ್ರಶಸ್ತಿ ವಿಜೇತ ಸಮಾಜ ಸೇವಕರಾದ ಡಾ| ಫಾಹಿಮ್ ರಹೀಮ್ ಜೆಆರ್‍ಎಮ್ ಫೌಂಡೇಷನ್‍ನ ಚೇರ್‍ಮನ್ ಕೂಡ ಆಗಿದ್ದರು. ಅವರು ನೇಪಾಳದಲ್ಲಿ ಎರಡು ದೊಡ್ಡ ತಂಡಗಳೊಂದಿಗೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

image


ಹೀಗಾಗಿಯೇ ಅಮೃತ್ ಇಂಡಿಯಾ ಪಾಕಿಸ್ತಾನ್ ಡೇ ಎಂಬ ಚಳವಳಿ ಆರಂಭಿಸಿದಾಗ ಡಾ| ರಹೀಮ್ ಮತ್ತು ಜೆಆರ್‍ಎಮ್ ಫೌಂಡೇಷನ್‍ಅನ್ನು ಸಂಪರ್ಕಿಸಿದರು. ಆಗ ಜೆಆರ್‍ಎಮ್ ಅಮೃತ್‍ಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿತ್ತು. ಫೇಸ್‍ಬುಕ್ ಮತ್ತು ಟ್ವಿಟರ್ ಮೂಲಕ ಈ ವಿಷಯವನ್ನು ಜನರಿಗೆ ತಲುಪಿಸಲಾಯ್ತು. ‘ನಾವು ಮತ್ತೊಬ್ಬರ ಖುಷಿಯೊಂದಿಗೆ ಜೀವಿಸಬೇಕು, ಅವರ ನೋವಿನಿಂದಲ್ಲ’ ಎಂಬುದು ಈ ಚಳವಳಿಯ ಘೋಷವಾಕ್ಯವಾಗಿತ್ತು. ಅಮೃತ್‍ರ ಇಂಡಿಯಾ ಪಾಕಿಸ್ತಾನ್ ಡೇಗೆ ಸಾವಿರಾರು ಜನರಿಂದ ಹಾಗೂ ಹಲವಾರು ಸಂಘ-ಸಂಸ್ಥೆಗಳಿಂದ ಅತ್ಯದ್ಭುತ ಬೆಂಬಲ ದೊರೆತಿತ್ತು. ಜೆಆರ್‍ಎಮ್ ಫೌಂಡೇಷನ್ ಜೊತೆಗೆ ಬಿಯಾಂಡ್ ವಯೊಲೆನ್ಸ್​​​ನವರ ಸರ್‍ಹದ್‍ಪುರ, ಎಲಾಜ್ ಟ್ರಸ್ಟ್, ನೆವರ್ ಫರ್ಗೆಟ್ ಪಾಕಿಸ್ತಾನ್, ಅಮನ್ ಕೀ ಆಶಾ, ಅರುಣ್ ಗಾಂಧಿ, ಗಾಂಧಿ ಸೆಂಟರ್ ಫಾರ್ ಪೀಸ್, ಬಿಇ ಮ್ಯಾಗಝೀನ್ ಹಾಗೂ ರಾನಿ ಎಡ್ರಿಯವರ ಪೀಸ್ ಫ್ಯಾಕ್ಟರಿ ಸಂಸ್ಥೆಗಳು ಅಮೃತ್ ಹೋರಾಟಕ್ಕೆ ಕೈ ಜೋಡಿಸಿದ್ದವು.

ಭವಿಷ್ಯದ ಯೋಜನೆಗಳು

ಭಾರತ - ಪಾಕಿಸ್ತಾನ ನಡುವಿನ ಸಂಬಂಧ ವೃದ್ಧಿಸಲು ಅಮೃತ್ ಮುಂದಿನ ದಿನಗಳಲ್ಲೂ ಇದೇ ರೀತಿ ಕ್ರಿಯಾಶೀಲತೆಯಿಂದ ಕೆಲಸ ಮುಂದುವರಿಸುವ ದೃಢ ಸಂಕಲ್ಪ ಮಾಡಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ಸಮಾಜದಲ್ಲಿ ಒಳ್ಳೆಯ ರೀತಿಯ ಪರಿಣಾಮ ಬೀರುವುದು ಅವರ ಉದ್ಧೇಶ. ‘ಸದ್ಯ ಈ ಆಂಡ್ರಾಯ್ಡ್ ಅಪ್ಲಿಕೇಶನ್ ಎಲ್ಲರಿಗೂ ದೊರೆಯುವಂತೆ ಮಾಡಲು ಸಾಫ್ಟ್​​​ವೇರ್ ಡೆವೆಲಪರ್‍ಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಹಾಗೇ ಈ ಅಪ್ಲಿಕೇಶನ್ ಬೇರೆ ಬೇರೆ ದೇಶಗಳಲ್ಲೂ ಉಪಯೋಗವಾಗಲಿ ಅನ್ನೋ ಆಸೆ ನನ್ನದು. ಮುಂದೆ ಈ ಅಪ್ಲಿಕೇಶನ್ ಯಾವ ರೀತಿ ರೂಪ ಪಡೆಯುತ್ತೆ ಅನ್ನೋದರ ಕುರಿತು ಕುತೂಹಲವಿದೆ’ ಅಂತ ಮಾತು ಮುಗಿಸುತ್ತಾರೆ ಅಮೃತ್.

ಅಂದ್ಹಾಗೆ, ನೀವೂ ಅಮೃತ್ ಅವರ ಹೋರಾಟದಲ್ಲಿ ಕೈಜೋಡಿಸಬಹುದು. ನೀವೂ ಕೂಡ ಫೇಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ಅವರನ್ನು ಫಾಲೋ ಮಾಡಬಹುದು.