ದುರ್ಗಮ ಪರ್ವತ ಶ್ರೇಣಿಯಲ್ಲಿ ಅಕ್ಷರ ದಾನ

ಟೀಮ್​ ವೈ.ಎಸ್​. ಕನ್ನಡ

0


ಮಕ್ಕಳ ಭವಿಷ್ಯಕ್ಕೆ ಪಣತೊಟ್ಟ ಸಬಾಹ್ ಹಾಜಿ

ಸುಖದ ಸುಪ್ಪತ್ತಿಗೆ ಬಿಟ್ಟು ತವರಿಗೆ ಮರಳಿದ ಸೇವಕಿ

ಜಮ್ಮುಕಾಶ್ಮೀರದ ಸಣ್ಣ ಊರಿನಲ್ಲಿ ಶಿಕ್ಷಣದ ಕ್ರಾಂತಿ


ಜಮ್ಮುಕಾಶ್ಮೀರ ಸುಂದರ ಕಣಿವೆ ನಾಡು. ಅಲ್ಲಿನ ಪರಿಸರ ಎಷ್ಟು ಮುದನೀಡುತ್ತದೆಯೋ ಅಲ್ಲಿನ ಗುಂಡಿನ ಮೊರೆತ ಅಷ್ಟೇ ಭಯ ಹುಟ್ಟಿಸುತ್ತದೆ. ಹಿಂದೂ-ಮುಸ್ಲಿಂ ನಡುವಿನ ಧರ್ಮ ಯುದ್ಧಕ್ಕೆ ಹೆಸರಾಗಿರುವ ನಾಡಿನ ಉದ್ಧಾರಕ್ಕೆ ಮುಂದೆ ಬರುವವರ ಸಂಖ್ಯೆ ಬೆರಳೆಣಿಕೆಯಷ್ಟು. ಶಿಕ್ಷಣದಿಂದ ವಂಚಿತರಾಗಿ ಬಡತನದಲ್ಲಿ ಜೀವನ ಸಾಗಿಸುತ್ತಿರುವ ತಮ್ಮೂರಿನ ಜನರ ಸ್ಥಿತಿಗೆ ಮಮ್ಮಲ ಮರುಗಿದ ಜೀವ ಸಬಾಹ್ ಹಾಜಿ.

ದುಬೈನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಸಬಾಹ್ ಹಾಜಿ ತವರು ಜಮ್ಮುವಿನ ದೋಡಾ ಜಿಲ್ಲೆಯ ಬ್ರೆಸ್ವಾನ್. ದೊಡ್ಡ ಉದ್ಯೋಗ ಹಿಡಿದು ಕೈತುಂಬಾ ಸಂಬಳ ಎಣಿಸುತ್ತ ತನಗ್ಯಾಕೆ ಎಂದು ಹಾಯಾಗಿ ಇರಬಹುದಿತ್ತು ಅವರು. ಆದರೆ ಸಬಾಹ್ ಹಾಗೆ ಮಾಡಲಿಲ್ಲ. 2008ರಲ್ಲಿ ನಡೆದ ಅಮರನಾಥ ಧಂಗೆ ಅವರನ್ನು ತವರಿಗೆ ಬರುವಂತೆ ಮಾಡ್ತು.

ತನ್ನ ನೆಲಕ್ಕೆ ಏನಾದರೂ ಮಾಡಬೇಕೆಂದು ಪಣತೊಟ್ಟ ಮಹಿಳೆ ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಿ ತಮ್ಮ ತವರಿಗೆ ಬಂದಿಳಿದರು. 2009ರಲ್ಲಿಯೇ ಅವರ ಕನಸು ಹಾಜಿ ಪಬ್ಲಿಕ್ ಸ್ಕೂಲ್ ಆರಂಭವಾಯ್ತು.

ಬಂಡುಕೋರರ ದಾಳಿಯಿಂದ ಮುಚ್ಚಿದ್ದ ಶಾಲೆಗಳು ಮತ್ತೆ ಆರಂಭವಾಗಿರಲಿಲ್ಲ. ಕಳೆದ 30 ವರ್ಷಗಳಿಂದ ಅಲ್ಲಿ ಅಕ್ಷರಭ್ಯಾಸ ಇರಲಿಲ್ಲ. ಬಡತನದ ಜೊತೆಗೆ ಅಶಿಕ್ಷಿತರಾಗಿದ್ದ ಅಲ್ಲಿನ ಮಕ್ಕಳಿಗೆ ಉತ್ತಮ ಭವಿಷ್ಯದ ಅಡಿಪಾಯ ಹಾಕ್ತಾ ಇದೆ ಹಾಜಿ ಪಬ್ಲಿಕ್ ಸ್ಕೂಲ್.

ಹಾಜಿ ಪಬ್ಲಿಕ್ ಸ್ಕೂಲ್ ಆರಂಭದಲ್ಲಿ ಅಲ್ಲಿನವರಿಗೆ ಹರ್ಷದ ಹಾಗೂ ಕುತೂಹಲದ ಕೇಂದ್ರವಾಗಿತ್ತು. ಮಕ್ಕಳು ಕೊಠಡಿಯೊಳಗೆ ಪಾಠ ಕಲಿಯುತ್ತಿದ್ದರೆ, ಪಾಲಕರು ಕಿಟಕಿಗಳಿಂದ ಇಣುಕಿ ನೋಡಿ ಸಂತೋಷ ಪಡುತ್ತಿದ್ದರಂತೆ.

ರಾಜ್ಯದ ಪಠ್ಯಕ್ರಮವನ್ನು ಈ ಶಾಲೆಯಲ್ಲಿ ಕಲಿಸಲಾಗುತ್ತದೆ. ಇದರ ಜೊತೆಗೆ ಅನೇಕ ಪ್ರಯೋಗಗಳನ್ನೂ ಮಾಡುತ್ತಾರೆ. ವಿಭಿನ್ನ ಸಂಸ್ಕೃತಿ ಹಾಗೂ ಬೇರೆ ದೇಶಗಳ ಶಿಕ್ಷಕರಿದ್ದಾರೆ. ವಿದೇಶದಿಂದ ಹರಿದು ಬರುವ ನೆರವಿನಿಂದ ಹಾಜಿ ಪಬ್ಲಿಕ್ ಸ್ಕೂಲ್ ವೈವಿಧ್ಯಮಯ ಗ್ರಂಥಾಲಯವನ್ನು ಹೊಂದಿದೆ. ತಮ್ಮ ತಂತ್ರಜ್ಞಾನ, ಸಂಸ್ಕೃತಿ ಮತ್ತು ಸಾಹಿತ್ಯದೊಂದಿಗೆ ಅಲ್ಲಿಗೆ ಬರುವ ಸ್ವಯಂಸೇವಕರು ಮಕ್ಕಳಿಗೆ ತಿಳಿ ಹೇಳ್ತಾರೆ. ಕೆಲ ವರ್ಷಗಳ ಹಿಂದೆ ಇಲ್ಲಿನ ಮಕ್ಕಳಿಗೆ ಅವರ ಮಾತೃ ಭಾಷೆಯನ್ನೇ ಓದಲು ಬರ್ತಾ ಇರಲಿಲ್ಲ ಎಂಬುದು ಆಶ್ಚರ್ಯ ಹುಟ್ಟಿಸುವ ವಿಷಯ.

ಜಮ್ಮು-ಕಾಶ್ಮೀರದಲ್ಲಿ ಮೊದಲಿನಂತೆ ಹಿಂದೂ ಮುಸ್ಲಿಂ ಗಲಾಟೆ ಇಲ್ಲ. ಆದರೆ ತಾರತಮ್ಯ ಭಾವ ಸ್ಪಷ್ಟವಾಗಿ ಕಾಣುತ್ತದೆ. ಬೇರೆ ಧರ್ಮದ ಸ್ವಯಂ ಸೇವಕರು ಶಾಲೆಗೆ ಬರುತ್ತಿದ್ದ ಆರಂಭದಲ್ಲಿ ಮಕ್ಕಳು ಏನೋ ತಪ್ಪು ನಡೆಯುತ್ತಿದೆ ಎಂದು ಭಾವಿಸುತ್ತಿದ್ದರಂತೆ. ನಂತರ ಅವರೊಂದಿಗೆ ಬೆರೆತು, ಅವರ ಸಂಸ್ಕೃತಿಗಳ ಬಗ್ಗೆ ತಿಳಿದ ನಂತರ ಪಕ್ಷಾತೀತರಾಗಿದ್ದಾರೆ. ಮನೆಯಲ್ಲಿ ಧರ್ಮದ ಬಗ್ಗೆ ಚರ್ಚೆಯಾದ್ರೆ ಅದು ತಪ್ಪೆಂದು ತಿಳಿ ಹೇಳುವಷ್ಟು ಬುದ್ದಿವಂತರಾಗಿದ್ದಾರೆ. ಇದು ಸಬಾಹ್ ಅವರಿಗೆ ಹೆಮ್ಮೆಯ ವಿಷಯ.

ಪಾಠದ ಜೊತೆಗೆ ಆಟವನ್ನೂ ಶಾಲೆಯಲ್ಲಿ ಹೇಳಿಕೊಡಲಾಗುತ್ತದೆ. ಪರ್ವತ ಶ್ರೇಣಿಯಲ್ಲಿ ಬೆಳೆದ ಮಕ್ಕಳು ದೈಹಿಕವಾಗಿ ಬಲಾಢ್ಯರು. ಆದರೆ ಅವರ ಸಾಮರ್ಥ್ಯ ಪ್ರದರ್ಶಿಸಲು ಅಲ್ಲಿ ಮೈದಾನದ ಕೊರತೆ ಇದೆ. ಹಾಜಿ ಪಬ್ಲಿಕ್ ಸ್ಕೂಲ್ ನಲ್ಲಿ ಏಳನೆ ತರಗತಿಯವರೆಗೆ ಮಾತ್ರ ಕಲಿಸಲಾಗುತ್ತದೆ. ಸುಮಾರು 200 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಏಳನೇ ತರಗತಿ ನಂತರ ತಮ್ಮ ಆರ್ಥಿಕ ಸ್ಥಿತಿ ನೋಡಿ ಪಾಲಕರು ಮಕ್ಕಳನ್ನು ಬೋರ್ಡಿಂಗ್ ಸ್ಕೂಲ್ ಗೆ ಕಳುಹಿಸುತ್ತಾರೆ.

ದೊಡ್ಡ ಕಟ್ಟಡದಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬುದು ತಪ್ಪು. ಮರದ ಕೆಳಗೆ ಕುಳಿತಾದ್ರೂ ಉತ್ತಮ ವಿದ್ಯೆ ಕಲಿಯಬಹುದು. ಇದಕ್ಕೆ ಹಾಜಿ ಪಬ್ಲಿಕ್ ಸ್ಕೂಲ್ ಉತ್ತಮ ಉದಾಹರಣೆ. ಸಣ್ಣ ಕಟ್ಟಡದಲ್ಲಿ ಆರಂಭವಾದ ಶಾಲೆ ಈಗ ಸ್ವಂತ ಕಟ್ಟಡ ಹೊಂದಿದೆ. ಉತ್ತಮ ಶಿಕ್ಷಕರೂ ಇಲ್ಲಿದ್ದಾರೆ. ಹಾಜಿ ಪಬ್ಲಿಕ್ ಸ್ಕೂಲ್ ಗೆ ಬರುವ ದೇಣಿಗೆಯಲ್ಲಿ ಶೇಕಡಾ 70ರಷ್ಟು ಶಿಕ್ಷಕರಿಗೆ ವೇತನ ನೀಡುವುದಕ್ಕೆ ಖರ್ಚಾಗುತ್ತದೆ. ಉಳಿದದ್ದು ಪುಸ್ತಕ ಖರೀದಿಗೆ ಬಳಕೆಯಾಗುತ್ತಿದೆ.

ಸಬಾಹ್ ಚಿಕ್ಕಪ್ಪ ಹಾಗೂ ಅಮಿನಾ ಚಾರಿಟಿ ಟ್ರಸ್ಟ್ ನ ಸಂಸ್ಥಾಪಕ ನಝೀರ್ ಹಾಜಿ, ಹೆಚ್ಚಿನ ದೇಣಿಗೆಯನ್ನು ನೀಡ್ತಾರೆ. ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೇಣಿಗೆ ನೀಡ್ತಾರೆ. ಅದರಲ್ಲಿಯೇ ಒಂದು ಗ್ರಂಥಾಲಯ ನಿರ್ಮಾಣವಾಗಿದ್ದು, ಅದರ ನಿರ್ವಹಣೆ ಮಾಡಲಾಗ್ತಾ ಇದೆ.

ವಿದ್ಯಾರ್ಥಿಗಳನ್ನು ಫೇಲ್ ಮಾಡದೇ ಮುಂದಿನ ಕ್ಲಾಸಿಗೆ ಕಳುಹಿಸುವ ಶಿಕ್ಷಣ ನೀತಿಯನ್ನು ಸಬಾಹ್ ಖಂಡಿಸುತ್ತಾರೆ. ಇದೊಂದು ಹಾಸ್ಯಾಸ್ಪದ ಎನ್ನುತ್ತಾರೆ. ವಿದ್ಯಾರ್ಥಿ ಕಡಿಮೆ ಅಂಕ ಪಡೆದಿದ್ದು, ಆತನನ್ನು ಅದೇ ಕ್ಲಾಸ್ ನಲ್ಲಿ ಮುಂದುವರಿಸಲು ಪಾಲಕರು ಒಪ್ಪಿಗೆ ನೀಡಿದ್ದರೂ ಸರ್ಕಾರ ಒಪ್ಪುವುದಿಲ್ಲ. ಹಿಂದಿನ ಪಾಠವನ್ನೇ ಸರಿಯಾಗಿ ಅರ್ಧ ಮಾಡಿಕೊಳ್ಳದ ವಿದ್ಯಾರ್ಥಿಗೆ ಮುಂದಿನ ಪಾಠ ಕಷ್ಟವಾಗುತ್ತದೆ ಎನ್ನುತ್ತಾರೆ.

ಪದವಿ ಪಡೆದ ಯುವಕರನ್ನು ಹಳ್ಳಿಗಳಿಗೆ ಕರೆತಂದು, ಹಳ್ಳಿಯ ಜನರನ್ನು ಸಾಕ್ಷರರನ್ನಾಗಿ ಮಾಡುವ ಮಹದಾಸೆ ಸಬಾಹ್ ಅವರದ್ದು. ಎಲ್ಲರೂ ಡಾಕ್ಟರ್,ಇಂಜಿನಿಯರ್ ಆಗಲು ಬಯಸುತ್ತಾರೆ. ಡಾಕ್ಟರ್ ಪದವಿ ಪಡೆದು ಹಳ್ಳಿಗಳ ಉದ್ಧಾರಕ್ಕೆ ನಿಂತರೆ ಅದರಂತ ಮಹತ್ವದ ಕಾರ್ಯ ಯಾವುದೂ ಇಲ್ಲ. ಆದರೆ ಈ ಉದಾರ ಭಾವ ಎಲ್ಲರಲ್ಲೂ ಇಲ್ಲ.

ದೇಶದಲ್ಲಿ ಸಾಕಷ್ಟು ಉತ್ತಮ ಕಾಲೇಜುಗಳಿವೆ. ಆದರೂ ಜನರು ಕಲಿಯಲು ವಿದೇಶಕ್ಕೆ ಹೋಗ್ತಾರೆ. ಕಾಶ್ಮೀರದಲ್ಲಿ ಮೂಲಭೂತ ಶಿಕ್ಷಣದ ಕೊರತೆ ಇದೆ. ಈ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಬೇರೆಯವರು ಬಂದು ಇಲ್ಲಿ ಶಿಕ್ಷಣ ನೀಡುವುದಂತೂ ದೂರದ ಮಾತು ಎನ್ನುತ್ತಾರೆ ಸಬಾಹ್.

ಸಬಾಹ್ ಊರಲ್ಲಿ ಅವರ ವಯಸ್ಸಿನ ಅನೇಕ ಮಹಿಳೆಯರಿದ್ದಾರೆ. ಅವರಿಗೆ ಶಿಕ್ಷಣದ ಗಂಧಗಾಳಿ ಗೊತ್ತಿಲ್ಲ. ಮಕ್ಕಳಿಗಾದ್ರೂ ಉತ್ತಮ ವಿದ್ಯಾಭ್ಯಾಸ ಸಿಗಲಿ ಎಂದು ಬಯಸುತ್ತಿದ್ದಾರೆ. ಅವರ ಒಂದು ಮಹದಾಸೆಯೇ ಸಬಾಹ್ ಅವರನ್ನು 8 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಪ್ರೇರಣೆ ನೀಡುತ್ತಿದೆ.


ಲೇಖಕರು: ನಿಶಾಂತ್ ಗೋಯೆಲ್​​

ಅನುವಾದಕರು: ರೂಪಾ ಹೆಗಡೆ

Related Stories

Stories by YourStory Kannada