ಲಾಜಿಸ್ಟಿಕ್ಸ್ ಕಂಪನಿಗಳಿಗೆ ಯಶಸ್ಸಿನ ಸೂತ್ರ..!

ಟೀಮ್​ ವೈ.ಎಸ್​. ಕನ್ನಡ

ಲಾಜಿಸ್ಟಿಕ್ಸ್ ಕಂಪನಿಗಳಿಗೆ ಯಶಸ್ಸಿನ ಸೂತ್ರ..!

Thursday January 28, 2016,

5 min Read

ಜಗತ್ತು ದಿನೇ ದಿನೇ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಬೇಕಾಗಿದ್ದನ್ನೆಲ್ಲ ಆದಷ್ಟು ಬೇಗ ಪಡೆದುಕೊಳ್ಳುವುದೇ ನಮ್ಮ ಸಮಯದ ಮಂತ್ರ. ಇದು ನಮ್ಮ ಖರೀದಿ ಮತ್ತು ವ್ಯಾಪಾರದ ಅತ್ಯಂತ ಸ್ಪಷ್ಟ ನೀತಿ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದೆರಡು ವರ್ಷಗಳಲ್ಲಿ ಟಿನಿಔಲ್, ಗ್ರೊಫರ್ಸ್‍ನಂತಹ ಕಂಪನಿಗಳ ಉದಯದಿಂದ ಹೈಪರ್ ಲೋಕಲ್ ಸೇವೆಗಳಲ್ಲಿ ಅಪಾರ ಹೆಚ್ಚಳವಾಗಿದೆ. ಸಾಂಪ್ರದಾಯಿಕ ಇ-ಕಾಮರ್ಸ್ ಕಂಪನಿಗಳು ಕೂಡ ಲಾಜಿಸ್ಟಿಕ್ಸ್ ಪಾಲುದಾರರಾಗಿವೆ. ಮನಸ್ಸಿನಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಪಾಲುದಾರಿಕೆಗಾಗಿ ಸಮರ್ಥ ಡೆಲಿವರಿ ಕಂಪನಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಸ್ವತಃ ಅವರೇ ವಿತರಣೆ ಮಾಡಲು ಹೊರಟರೆ 60-90 ನಿಮಿಷಗಳಲ್ಲಿ ಡೆಲಿವರಿ ಅಸಾಧ್ಯ ಎನ್ನುತ್ತಾರೆ `ಲಾಜಿನೆಕ್ಸ್ಟ್ ಸೊಲ್ಯೂಷನ್'ನ ಬ್ಯುಸಿನೆಸ್ ಡೆವಲಪ್‍ಮೆಂಟ್ ಮ್ಯಾನೇಜರ್ ಮನೀಶ್ ಪೋರ್ವಲ್. ಕನ್ಸಲ್ಟಿಂಗ್ ಸಂಸ್ಥೆ ಟೆಕ್ನೋಪಾರ್ಕ್ ಪ್ರಕಾರ, ಭಾರತದ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಆದಾಯದಲ್ಲಿ ಶೇ.30ರಷ್ಟನ್ನು ಲಾಜಿಸ್ಟಿಕ್ಸ್‍ಗಾಗಿ ವ್ಯಯಿಸುತ್ತವೆ.

image


ದೇಶದ ಲಾಜಿಸ್ಟಿಕ್ಸ್ ವಲಯ, ಅದರಲ್ಲೂ ನಗರದೊಳಗಿನ ಮಾದರಿ, ಅವ್ಯವಸ್ಥೆಯಿಂದ ಕೂಡಿದೆ. ಆದ್ರೆ ಸ್ಟಾರ್ಟ್‍ಅಪ್‍ಗಳು ವಲಯವನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿವೆ. ದಿ ಪೋರ್ಟರ್, ಬ್ಲೋ ಹಾರ್ನ್ ಮತ್ತು ಮೂವೊನಂತಹ 15ಕ್ಕೂ ಹೆಚ್ಚು ಕಂಪನಿಗಳ ಆಗಮನದೊಂದಿಗೆ ಕಳೆದ 18 ತಿಂಗಳುಗಳಲ್ಲಿ ಮಧ್ಯವರ್ತಿಗಳ ಉಪಗುತ್ತಿಗೆಯನ್ನು ತೊಡೆದುಹಾಕಲು ಸಾಧ್ಯವಾಗಿದೆ. ಮಾರುಕಟ್ಟೆ ಮಾದರಿಗೆ ಅನುಗುಣವಾಗಿ ಅವರು, ಚಾಲಕರು, ಮಾಲೀಕರು, ಟ್ರಕ್‍ಗಳು, ಮಿನಿ ಟ್ರಕ್‍ಗಳನ್ನು ಹೊಂದುತ್ತಾರೆ. ಕೈಗಾರಿಕಾ ಪೂರೈಕೆಗೆ ಕಸ್ಟಮೈಸ್ಡ್ ಸೇವೆಗಳನ್ನು ಒದಗಿಸುತ್ತಾರೆ, ಇ-ಕಾಮರ್ಸ್ ಪೂರೈಕೆದಾರರಿಗೂ ನೆರವಾಗುತ್ತಾರೆ. 2015ರಲ್ಲಿ ಈ ವಲಯ ಸುಮಾರು 37 ಮಿಲಿಯನ್ ಡಾಲರ್ ಬಂಡವಾಳ ಗಿಟ್ಟಿಸಿಕೊಂಡಿದೆ. ಮಾರುಕಟ್ಟೆ ಕಂಪನಿಗಳಿಗೆ ಬೃಹತ್ ಅವಕಾಶವನ್ನೇನೋ ಕಲ್ಪಿಸಿದೆ, ಆದ್ರೆ ಬೆಳವಣಿಗೆ ಬಗ್ಗೆ ಮಾತ್ರ ಖಾತ್ರಿಯಿಲ್ಲ.

ಇಂಟರ್‍ಸಿಟಿ ಕಾರ್ಯಾಚರಣೆಯ ಅವಶ್ಯಕತೆ...

ಕೇವಲ ನಗರದೊಳಗಿನ ಕಾರ್ಯಾಚರಣೆ ಬಗ್ಗೆ ಗಮನ ಕೇಂದ್ರೀಕರಿಸಿದರೆ ಸೀಮಿತಗೊಳಿಸಿದಂತಾಗುತ್ತದೆ ಅನ್ನೋದು ತಜ್ಞರ ಅಭಿಪ್ರಾಯ. ಅಲ್ವಾರೆಝ್ ಮತ್ತು ಮರ್ಸಲ್ ಮ್ಯಾನೇಜ್‍ಮೆಂಟ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮನೀಶ್ ಸೈಗಲ್ ಅವರ ಪ್ರಕಾರ, ಹೂಡಿಕೆದಾರರು ನಗರದೊಳಗಿನ ಆನ್ ಡಿಮಾಂಡ್ ಲಾಜಿಸ್ಟಿಕ್ಸ್ ವಲಯದ ಪ್ರಮಾಣೀಕರಣದ ಬಗ್ಗೆ ಸಂಶಯ ಹೊಂದಿದ್ದಾರೆ. ನಗರದೊಳಗಿನ ಸೇವೆಗಳು ಸೀಮಿತ ಅವಕಾಶಗಳನ್ನು ಹೊಂದಿವೆ, ಆದ್ರೆ ಇದೊಂದು ಭರವಸೆದಾಯಕ ಕ್ಷೇತ್ರ. ಆದ್ರೆ ಈ ವಲಯಕ್ಕೆ ಗಮನಾರ್ಹ ಹೂಡಿಕೆ, ಅದ್ಭುತ ಕಾರ್ಯಾಚರಣೆಯ ಸಾಮಥ್ರ್ಯದ ಅಗತ್ಯವಿದೆ.

image


ಇಂಟ್ರಾ ಸಿಟಿ ಸೇವೆಗಳಲ್ಲಿ ಕಮಿಷನ್ ಪ್ರಮಾಣ ಅತ್ಯಂತ ಕಡಿಮೆ ಅನ್ನೋದನ್ನು ದೆಹಲಿ ಮೂಲದ ಮೂವೊ ಕಂಪನಿಯ ಸಹ ಸಂಸ್ಥಾಪಕ ಅಂಜನಿ ಕುಮಾರ್ ಒಪ್ಪಿಕೊಳ್ತಾರೆ. ಆದ್ರೆ ಈ ಮಾರುಕಟ್ಟೆ ಅತ್ಯಂತ ವಿಸ್ತಾರವಾಗಿದೆ. ಇಂಟರ್ ಸಿಟಿ ಕ್ಷೇತ್ರದಲ್ಲಿ ಸಮಗ್ರ ವಾಣಿಜ್ಯ ಪರಿಮಾಣ ಇಂಟ್ರಾಸಿಟಿಯಲ್ಲಿ ದೊರೆಯುವುದಕ್ಕಿಂತ ದುಪ್ಪಟ್ಟಾಗಿರುತ್ತದೆ ಎನ್ನುತ್ತಾರೆ ಅವರು. ಚಾಲಕರು ಮತ್ತು ಗ್ರಾಹಕರ ಸ್ವಾಧೀನ ಒಂದೇ ತೆರನಾಗಿರುತ್ತದೆ, ಕೇವಲ ಆಫ್‍ಲೈನ್ ಕಾರ್ಯಾಚರಣೆ ಮಾತ್ರ ವಿಭಿನ್ನ. ಕಾನ್ಪುರ ಮತ್ತು ಬೆಂಗಳೂರಿನ ಇಂಟರ್‍ಸಿಟಿ ಮಾರುಕಟ್ಟೆಗಳಿಗೆ, ಇಂಟ್ರಾ ಸಿಟಿ ಸೇವೆಗಾಗಿ ಮೂವೊ ಸದ್ಯದಲ್ಲೇ ದೊಡ್ಡ ಟ್ರಕ್‍ಗಳನ್ನು ಲಾಂಚ್ ಮಾಡಲಿದೆ. ಬೆಂಗಳೂರು ಮೂಲದ ಲೆಟ್ಸ್ ಟ್ರಾನ್ಸ್‍ಪೋರ್ಟ್ ಕೂಡ ತನ್ನ ಸೇವೆಯನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ.

ಮೆಟ್ರೋವನ್ನೂ ಮೀರಿ ಏನಡಗಿದೆ?

ಆನ್‍ಲೈನ್ ಲಾಜಿಸ್ಟಿಕ್ಸ್ ವೇದಿಕೆಗಿರುವ ಪ್ರಮುಖ ಅಡಚಣೆ ಅಂದ್ರೆ ಮೆಟ್ರೊ ಹೊರಗೆ ಸಾಂಪ್ರದಾಯಿಕ ವ್ಯವಹಾರಗಳಲ್ಲಿಯೂ ತಂತ್ರಜ್ಞಾನ ಬಳಸಲು ಒಲವು ತೋರುತ್ತಿರುವ ವ್ಯಾಪಾರಿಗಳನ್ನು ಅದರಿಂದ ಹೊರತರುವುದು. ಟೈರ್ 2 ಮತ್ತು ಟೈರ್ 3 ಸಿಟಿಗಳಲ್ಲಿ ಗುರುತಿಸಿಕೊಳ್ಳಲು ಅವರಿಗೆ ವರ್ಷಗಳೇ ಬೇಕಾಗಬಹುದು. ಈ ಪ್ರದೇಶಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕೊಂಚ ನಿಧಾನವಾಗುತ್ತಿದೆ. ``ಸ್ಥಳೀಯ ವ್ಯಾಪಾರಿಗಳ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವಾಹನಗಳು ಮತ್ತು ಸೇವೆಯನ್ನು ಒದಗಿಸುವ ಅವಶ್ಯಕತೆ ಇದೆ. ಇನ್ನು 2 ವರ್ಷಗಳ ಕಾಲ ಟೈರ್2, ಟೈರ್ 3 ಸಿಟಿಗಳು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಳ್ಳುವುದಿಲ್ಲ. ಆದ್ರೆ ಟೈರ್1 ನಗರಗಳಲ್ಲಿ ಲಾಜಿಸ್ಟಿಕ್ಸ್ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಹೈಪರ್ ಲೋಕಲ್ ಅನ್ನೋದು ತ್ವರಿತ ಪ್ರತಿಫಲದ ಬಗೆಗಿದೆ. ಮೆಟ್ರೋ ಸಿಟಿಗಳಲ್ಲಿ ಡೆಲಿವರಿ ಕೊನೆಯ ಹಂತ, ಆದ್ರೆ ಟೈರ್2, ಟೈರ್3 ಸಿಟಿಗಳಲ್ಲಿ ಜೀವನದ ವೇಗವೇ ಕಡಿಮೆ'' ಅನ್ನೋದು ಕ್ವಿಕ್ಲಿ ಸಹ ಸಂಸ್ಥಾಪಕ ರೋಹನ್ ದಿವಾನಿ ಅವರ ಅಭಿಪ್ರಾಯ.

image


ಟೈರ್2, ಟೈರ್3 ನಗರಗಳು ದೊಡ್ಡ ಮಾರುಕಟ್ಟೆಗಳನ್ನು ಹೊಂದಿವೆ. ಟೈರ್2 ಸಿಟಿಗಳ ಪ್ರವೇಶಕ್ಕೂ ಮುನ್ನ 3-4 ಪ್ರಮುಖ ನಗರಗಳಲ್ಲಿ ಪ್ರಾಬಲ್ಯ ಸಾಧಿಸುವುದು ನಮ್ಮ ಗುರಿ ಎನ್ನುತ್ತಾರೆ ದಿ ಪೋರ್ಟರ್‍ನ ಸಹ ಸಂಸ್ಥಾಪಕ ಪ್ರಣವ್ ಗೋಯಲ್. ಅಮೇಝಾನ್, ಐಟಿಸಿ ಡೆಲ್ಲಿವರಿ, ರೋಡ್‍ರನ್ನರ್ ಮತ್ತು ಫರ್ಲೆನ್ಸೋ ಜೊತೆಗೆ ದಿ ಪೋರ್ಟರ್ ಕಾರ್ಯನಿರ್ವಹಿಸ್ತಾ ಇದೆ. ಬಿಗ್‍ಬಾಸ್ಕೆಟ್, ಬಿಸ್ಲೆರಿ ಮತ್ತು ಗ್ರೊಫರ್ಸ್, ಲೆಟ್ಸ್ ಟ್ರಾನ್ಸ್‍ಪೋರ್ಟ್‍ನ ಗ್ರಾಹಕರಾಗಿವೆ. ಟೈರ್2, ಟೈರ್3 ಸಿಟಿಗಳಲ್ಲಿ ಮಾರುಕಟ್ಟೆ ಅಸ್ಥಿತ್ವದಲ್ಲಿದೆ, ಅಲ್ಲಿ ಯಾವ ಬಗೆಯ ಕೈಗಾರಿಕೆಗಳನ್ನು ಆರಂಭಿಸಬಹುದು ಎಂಬ ಬಗ್ಗೆ ಸಮೀಕ್ಷೆ ನಡೆಸುತ್ತಿರುವುದಾಗಿ ಲೆಟ್ಸ್ ಟ್ರಾನ್ಸ್‍ಪೋರ್ಟ್‍ನ ಸಹ ಸಂಸ್ಥಾಪಕ ಪುಷ್ಕರ್ ಸಿಂಗ್ ತಿಳಿಸಿದ್ದಾರೆ.

ಉತ್ತಮಗೊಳಿಸಲು ಕಸರತ್ತು...

ಲಾಭ, ಸಂಪನ್ಮೂಲಗಳನ್ನು ಉತ್ತಮಗೊಳಿಸುವಿಕೆಯ ಮೇಲೆ ನಿಂತಿದೆ. ಡೆಲಿವರಿ ಲಾರಿಗಳನ್ನು ಉತ್ತಮಗೊಳಿಸುವಿಕೆಯಲ್ಲೇ ಲಾಜಿಸ್ಟಿಕ್ಸ್ ಭವಿಷ್ಯ ಅಡಗಿದೆ ಅನ್ನೋದು ರೋಹನ್ ಅವರ ನಂಬಿಕೆ. ಬೆಲೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಉತ್ಪನ್ನಗಳನ್ನು ಒಟ್ಟುಗೂಡಿಸಲು ಕ್ವಿಕ್ಲಿ ಅವಕಾಶ ನೀಡಿದೆ. ಸಬ್‍ವೇ, ಕೆಎಫ್‍ಸಿ ಸೇರಿದಂತೆ ರೆಸ್ಟೋರೆಂಟ್‍ಗಳಿಗೆ ಕ್ವಿಕ್ಲಿ ದಿನಸಿ ಸೇರಿ ವಿವಿಧ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದು, ಆದಾಯದಲ್ಲಿ ಶೇ.20ರಷ್ಟು ಹೆಚ್ಚಳ ಮಾಡಿಕೊಂಡಿದೆ.

ಪೂಲಿಂಗ್ ಪರಿಕಲ್ಪನೆಯನ್ನು ಸದಾ ಕಾಲ ಒಪ್ಪಿಕೊಳ್ಳಲು ಗ್ರಾಹಕರು ಸಿದ್ಧರಿಲ್ಲದೇ ಇರುವುದರಿಂದ, ಸಮಯದ ನಿಷ್ಕ್ರಿಯತೆ ಕಡಿಮೆ ಮಾಡಲು ಸಮಯ ಆಧಾರಿತ ಆಪ್ಟಿಮೈಸೇಶನ್ ಬಗ್ಗೆ ಲೆಟ್ಸ್ ಟ್ರಾನ್ಸ್‍ಪೋರ್ಟ್ ಗಮನಹರಿಸಿದೆ. ಆಪ್ಟಿಮೈಸೇಶನ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ರೂ ಗ್ರಾಹಕರು ಫುಲ್ ಟ್ರಕ್ ಲೋಡ್ ಬಗ್ಗೆ ಕೇರ್ ಮಾಡುವುದಿಲ್ಲ. ವಿಶ್ವಾಸಾರ್ಹತೆ ಅತಿ ಮುಖ್ಯ ಅನ್ನೋದು ಬ್ಲೋ ಹಾರ್ನ್ ಸಹ ಸಂಸ್ಥಾಪಕ ಮಿಥುನ್ ಶ್ರೀವತ್ಸ ಅವರ ನಂಬಿಕೆ. ಲಾರಿಗಳು ಸಂಪೂರ್ಣ ಭರ್ತಿಯಾಗಿರಬೇಕೆಂದು ಅಮೇಝಾನ್ ಅಥವಾ ಫ್ಲಿಪ್‍ಕಾರ್ಟ್ ಷರತ್ತು ವಿಧಿಸುವುದಿಲ್ಲ, ಆದ್ರೆ ಉತ್ಪನ್ನಗಳು ಸಮಯಕ್ಕೆ ಸರಿಯಾಗಿ ತಲುಪಲೇಬೇಕು ಎನ್ನುತ್ತಾರೆ ಅವರು.

ಇಂಟ್ರಾ ಸಿಟಿ ಮಾರುಕಟ್ಟೆಯಲ್ಲಿ ಪ್ರತಿ ರವಾನೆಗೂ ಒಂದೊಂದು ವಾಹನವನ್ನು ಪಡೆಯಲು ಸಾಧ್ಯವಿಲ್ಲದೇ ಇರುವುದರಿಂದ ಮೂವೊ ಲೋಡ್ ಪೂಲಿಂಗ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಹಲವು ಲಾಜಿಸ್ಟಿಕ್ಸ್ ಕಂಪನಿಗಳು ಅರ್ದಂಬರ್ಧ ಲಾರಿಗಳ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿವೆ, ಆದ್ರೆ ಅವರಿಗೆ ಗೋದಾಮಿನ ಅವಶ್ಯಕತೆಯಿದೆ. ಮುಂದಿನ 18-24 ತಿಂಗಳುಗಳ ಕಾಲ ನಾವು ಕೇವಲ ಫುಲ್ ಟ್ರಕ್ ಲೋಡಿಂಗ್ ಮೂಲಕವೇ ಕಾರ್ಯಾಚರಣೆ ನಡೆಸುವುದಾಗಿ ಅಂಜನಿ ಹೇಳಿದ್ದಾರೆ. ಸದ್ಯ ಮೂವೊಗೆ ಪ್ರತಿ ತಿಂಗಳು ಸುಮಾರು 12,000 ಆರ್ಡರ್‍ಗಳು ಸಿಗುತ್ತಿವೆ.

ಕಿತ್ತಾಟದಲ್ಲಿ ಕಾರ್ ಅಗ್ರಿಗೇಟರ್‍ಗಳ ಎಂಟ್ರಿ?

ಕಳೆದ ವರ್ಷ ಓಲಾ ದಿನಸಿ ವಿತರಣೆ ಸೇವೆಯನ್ನು ಆರಂಭಿಸಿದಾಗಿನಿಂದ ಟ್ಯಾಕ್ಸಿ ಅಗ್ರಿಗೇಟರ್‍ಗಳು ಕೂಡ ಲಾಜಿಸ್ಟಿಕ್ಸ್‍ಗೆ ಎಂಟ್ರಿ ಕೊಟ್ರೆ ಅಚ್ಚರಿಯೇನಿಲ್ಲ. ಓಲಾ ಕೂಡ ಆನ್ ಡಿಮಾಂಡ್ ವಲಯ ಪ್ರವೇಶಿಸಲಿದೆ ಎನ್ನಲಾಗ್ತಿದೆ. ಶ್ರೀಘ್ರದಲ್ಲೇ ಓಲಾ ಮತ್ತು ಊಬರ್ ಈ ಮಾರುಕಟ್ಟೆಗೆ ಬರಲಿವೆ ಎನ್ನುತ್ತಾರೆ ಲಾಜಿ ನೆಕ್ಸ್ಟ್‍ನ ಸಹ ಸಂಸ್ಥಾಪಕ ಧ್ರುವಿಲ್ ಸಂಘ್ವಿ. ಈ ಸಂಸ್ಥೆಗಳ ಆಗಮನದಿಂದ ಆನ್ ಡಿಮಾಂಡ್ ಡೆಲಿವರಿ ಸೇವೆ ಇನ್ನಷ್ಟು ಉತ್ತಮಗೊಳ್ಳಲಿದ್ದು, ಹೊಸ ಹೊಸ ಆವಿಷ್ಕಾರಗಳು ನಡೆಯಲಿವೆ ಅನ್ನೋದು ಸಾರಿಗೆ ತಜ್ಞ ಜಸ್ಪಾಲ್ ಸಿಂಗ್ ಅವರ ವಿಶ್ವಾಸ. ಅತಿ ದೊಡ್ಡ ಗ್ರಾಹಕ ಜಾಲ, ಅತ್ಯುತ್ತಮ ಸೇವೆ ಮೂಲಕ ಈ ಕಂಪನಿಗಳು ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ವೇದಿಕೆ ಒದಗಿಸಬಲ್ಲವು ಅನ್ನೋದು ಅವರ ಅಭಿಪ್ರಾಯ. ಡೆಲಿವರಿ ವೆಚ್ಚ ಹಾಗೂ ವೇಗ ನಿಜಕ್ಕೂ ಚಾಲೆಂಜಿಂಗ್ ಎನ್ನುತ್ತಾರೆ ಅವರು.

ವೈಯಕ್ತಿಕ ಸಾರಿಗೆಯಂತೆ ಲಾಜಿಸ್ಟಿಕ್ಸ್‍ನಲ್ಲಿ ಕ್ಯಾಬ್‍ಗೆ ಗ್ಯಾರಂಟಿಯಿರುವುದಿಲ್ಲ, ಬ್ಯುಸಿನೆಸ್ ನಿಮ್ಮನ್ನು ಅವಲಂಬಿಸಿದೆ ಎನ್ನುತ್ತಾರೆ ಕ್ವಿಕ್ಲಿಯ ರೋಹನ್. ಓಲಾ ಮತ್ತು ಊಬರ್ ಬಳಿ ಅಗತ್ಯ ಮೂಲಸೌಕರ್ಯಗಳಿದ್ದು, ಲಾಜಿಸ್ಟಿಕ್‍ಗೆ ಬೇಕಾದ ತಾಂತ್ರಿಕ ಅಗತ್ಯಗಳನ್ನು ಪೂರೈಸಬಲ್ಲವು ಎಂಬ ವಿಶ್ವಾಸ ಬ್ಲೋ ಹಾರ್ನ್‍ನ ಮಿಥುನ್ ಅವರದ್ದು.

image


ಸ್ಪರ್ಧೆ : ಏರುತ್ತಿರುವ ಮಾರುಕಟ್ಟೆ ಮತ್ತು ಹೊಸ ತಂತ್ರಜ್ಞಾನ

ಸೂಕ್ತ ತಂತ್ರಜ್ಞಾನ ಅಳವಡಿಕೆ ಆನ್ ಡಿಮಾಂಡ್ ಲಾಜಿಸ್ಟಿಕ್ ಪ್ಲೇಯರ್‍ಗಳ ಪಾಲಿಗೆ ಅತ್ಯಂತ ಮಹತ್ವದ ಘಟ್ಟ. ವಿತರಣೆ ನಿರ್ವಹಣಾ ವೇದಿಕೆಗಳು ದಿನೇ ದಿನೇ ಮಹತ್ವ ಪಡೆದುಕೊಳ್ಳುತ್ತಿವೆ. ಪೂರೈಕೆ ಸರಣಿಯ ಅಗತ್ಯಗಳನ್ನು ಗುರುತಿಸಲು, ಬುಕ್ಕಿಂಗ್ಸ್‍ನ್ನು ಟ್ರ್ಯಾಕ್ ಮಾಡಬೇಕು, ಡೆಲಿವರಿ ಬಗ್ಗೆ ದೃಢೀಕರಣ ಪಡೆಯಬೇಕು, ಪೂರೈಕೆ ಸರಣಿ ಬಗ್ಗೆ ಅಪ್‍ಡೇಟ್ ಕೂಡ ಅತ್ಯಗತ್ಯ ಎನ್ನುತ್ತಾರೆ ಪುಷ್ಕರ್.

ತಂತ್ರಜ್ಞಾನಕ್ಕಾಗಿ ಕೋಟಿಗಟ್ಟಲೆ ಹಣ ಸುರಿಯುವ ಮುನ್ನ ವಲಯದಲ್ಲಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದನ್ನು ಪರಿಹರಿಸಬೇಕು ಅನ್ನೋದು ಲಾಜಿನೆಕ್ಸ್ಟ್‍ನ ಧ್ರುವಿಲ್ ಅವರ ಅಬಿಪ್ರಾಯ. ಅವಕಾಶವನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವಂತೆ ಮಾಡಲು ನಾವು ತಂತ್ರಜ್ಞಾನವನ್ನು ಒಂದು ಸರಕಿನಂತೆ ಪರಿವರ್ತಿಸಿದ್ದೇವೆ ಎನ್ನುತ್ತಾರೆ ಅವರು. ತಂತ್ರಜ್ಞಾನದ ಸೂಕ್ತ ಅಳವಡಿಕೆಗಾಗಿ ಚಾಲಕರಿಗೆ ತರಬೇತಿ ನೀಡುವುದು ಬಹಳ ಮುಖ್ಯ. ಸೂಕ್ತ ಪ್ರತಿಭೆಗಳನ್ನು ಹುಡುಕಲು `ಕಿಕ್‍ಸ್ಟಾಟ್ರ್ಸ್ ವೆಂಚರ್ಸ್' ನೆರವಾಗುತ್ತಿದೆ. ಅವರು ಗ್ರಾಮೀಣ ಪ್ರದೇಶದ ಚಾಲಕರನ್ನು ನೇಮಕ ಮಾಡಿಕೊಂಡು ಅವರು ತರಬೇತಿ ನೀಡಿ ಕಾರ್ಯಾಚರಣೆಗೆ ಸಿದ್ಧಗೊಳಿಸುತ್ತಾರೆ ಅಂತಾ ರೋಹನ್ ಮಾಹಿತಿ ನೀಡ್ತಾರೆ. ಆದ್ರೆ ತಂತ್ರಜ್ಞಾನದ ಪಾತ್ರ ಬುಕ್ಕಿಂಗ್‍ಗಳನ್ನೂ ಮೀರಿದ್ದು. ಲೋಡಿಂಗ್ ಸಾಮಥ್ರ್ಯ ಮತ್ತು ತೂಕ ಸ್ವಯಂಚಾಲಿತವಾಗಿರಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವುದಾಗಿ ಅಂಜಲಿ ಹೇಳಿದ್ದಾರೆ.

`ಯುವರ್‍ಸ್ಟೋರಿ' ಮಾಹಿತಿ

ಆನ್ ಡಿಮಾಂಡ್ ಲಾಜಿಸ್ಟಿಕ್ಸ್ ಕ್ಷೇತ್ರ ಬೆಳವಣಿಗೆ ಹೊಂದುವುದು ಖಚಿತ. ಆದ್ರೆ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಿದಲ್ಲಿ ಮಾತ್ರ ಅದು ಸಾಧ್ಯ. ಕಳೆದ 2 ದಶಕಗಳಲ್ಲಿ ಭಾರತದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯೇ ಒಂದು ಸೂಚನೆ ಎಂದಾದ್ರೆ ಲಾಜಿಸ್ಟಿಕ್ಸ್ ವಲಯದಲ್ಲಿ ಇನ್ನಷ್ಟು ಪ್ಲೇಯರ್‍ಗಳ ಅವಶ್ಯಕತೆ ಬೀಳಲಿದೆ. ಪ್ರತಿನಿತ್ಯ ಹೈಪರ್ ಲೋಕಲ್ ಸ್ಟಾರ್ಟ್‍ಅಪ್‍ಗಳ ಎಂಟ್ರಿಯಿಂದಾಗಿ ಈ ಕ್ಷೇತ್ರ ಇನ್ನಷ್ಟು ಪ್ರಗತಿ ಹೊಂದುವುದರಲ್ಲಿ ಅನುಮಾನವಿಲ್ಲ. ವಿತರಣಾ ಪ್ರಕ್ರಿಯೆಯ ಹೊರಗುತ್ತಿಗೆ ಕೂಡ ಅನಿವಾರ್ಯವಾಗಿದೆ. ಅಸಂಘಟಿತವಾಗಿದ್ದ ಈ ವಲಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯಿಂದಾಗಿ ಸುಧಾರಣೆ ಹೊಂದುತ್ತಿದೆ. ಆದ್ರೆ ಪೂರೈಕೆದಾರರು ತಂತ್ರಜ್ಞಾನ ಅಳವಡಿಕೆಯಲ್ಲಿ ಇನ್ನೂ ಹಿಂದಿದ್ದಾರೆ. ಗ್ರಾಹಕರ ಮನಸ್ಥಿತಿಗೆ ಅನುಗುಣವಾಗಿ ಪರಿಹಾರಗಳನ್ನು ಸೂಚಿಸಿದಲ್ಲಿ ಅವರೇ ಚಾಂಪಿಯನ್‍ಗಳಾಗಿ ಹೊರಹೊಮ್ಮಲಿದ್ದಾರೆ. ಹೊಸ ಕೈಗಾರಿಕಾ ತಂತ್ರಗಳಿಂದ ಇನ್ನಷ್ಟು ಸಂಸ್ಥೆಗಳು ಸಫಲತೆ ಪಡೆದುಕೊಳ್ಳಲಿವೆ. ಸಂಪೂರ್ಣ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಅಗತ್ಯವಿದೆ. ನಿಧಾನ ಮತ್ತು ಸ್ಥಿರವಾದ ಓಟದ ಮೂಲಕ ಗೆಲುವು ನಿಶ್ಚಿತ ಅನ್ನೋ ಮಾತಿದೆ. ಆದ್ರೆ ಲಾಜಿಸ್ಟಿಕ್ಸ್‍ನಲ್ಲಿ ಸ್ಥಿರತೆಯ ಜೊತೆಗೆ ವೇಗ ಕೂಡ ಬೇಕೇಬೇಕು.

ಲೇಖಕರು: ಅಥಿರಾ ಎ ನಾಯರ್​

ಅನುವಾದಕರು: ಭಾರತಿ ಭಟ್​