ಕೊಹ್ಲಿ, ಧೋನಿಗಿಂತ ಇವರು ಕಡಿಮೆಯಲ್ಲ- ವಿಶ್ವಚಾಂಪಿಯನ್ನರಾದರೂ ಜೀವನದಲ್ಲಿ ನೆಮ್ಮದಿ ಕಂಡಿಲ್ಲ..!

ಟೀಮ್​ ವೈ.ಎಸ್​.ಕನ್ನಡ

1

ಇವರು ವಿಶ್ವಚಾಂಪಿಯನ್ನರು. ಕ್ರಿಕೆಟ್​​ನಲ್ಲಿ ಕಡುವೈರಿ ಪಾಕ್ ತಂಡವನ್ನು ಬಡಿದಟ್ಟಿ ಚಾಂಪಿಯನ್​ಗಳಾಗಿದ್ದಾರೆ. ಆದ್ರೆ ದೃಷ್ಟಿ ವಿಕಲಚೇತನರು ಅನ್ನುವ ಕಾರಣಕ್ಕೆ ಇವರು ಯಾರ ಪಾಲಿಗೂ ಹೀರೋಗಳಾಗಲಿಲ್ಲ. ದೇಶಕ್ಕೆ ದೇಶವೇ ಸಂಭ್ರಮ ಪಡುವಂತಹ ಸಾಧನೆ ಇದಾಗಿದ್ದರೂ, ಚಾಂಪಿಯನ್ನರ ಬಗ್ಗೆ ಯಾರೂ ಮಾತೆತ್ತುತ್ತಿಲ್ಲ. ಆಡಿದ್ದು ಕ್ರಿಕೆಟ್ ಆಗಿದ್ದರೂ, ಅಲ್ಲಿ ವಿರಾಟ್ ಕೊಹ್ಲಿ ಇರಲಿಲ್ಲ. ಹೆಲಿಕಾಪ್ಟರ್ ಶಾಟ್ ಹೊಡೆದು ರಂಜಿಸಬಲ್ಲ ಮಹೇಂದ್ರ ಸಿಂಗ್ ಧೋನಿ ಇರಲಿಲ್ಲ. ಭಾರತೀಯ ಅಭಿಮಾನಿಗಳ ಪಾಲಿಗೆ ಸೂಪರ್ ಮಾಡೆಲ್​ಗಳಾಗಿರುವ ಸೂಪರ್ ಸ್ಟಾರ್ ಕ್ರಿಕೆಟರ್​​ಗಳಿರಲಿಲ್ಲ. ಆದ್ರೆ ಒಂದಂತೂ ಸತ್ಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ 15000ಕ್ಕೂ ಹೆಚ್ಚು ಅಭಿಮಾನಿಗಳು ಪ್ರತಿಯೊಬ್ಬ ದೃಷ್ಟಿ ವಿಕಲಚೇತನ ಕ್ರೀಡಾಪಟುಗಳಲ್ಲೂ ಕೊಹ್ಲಿಯನ್ನು ಕಂಡ್ರು, ಧೋನಿಯನ್ನು ಗುರುತಿಸಿದ್ರು. ಆದ್ರೆ ಅದು ಅವರವರ ಭಾವಕ್ಕೆ ಮತ್ತು ಅವರವರ ಯೋಚನೆಗೆ ಮಾತ್ರ ಸೀಮಿತವಾಗಿತ್ತು.

“ ಬೌಂಡರಿ ಸಿಕ್ಸರ್​​ಗಳನ್ನು ಸಿಡಿಸಿದಾಗ ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಿದ್ರು. ಪ್ರತಿಯೊಂದು ಚಪ್ಪಾಳೆ ಹೊಡೆದಾಗಲೂ ನನಗೆ ವರ್ಣಿಸಲಾಗದ ಖುಷಿ ಆಗ್ತಾ ಇತ್ತು. ಭಾರತಕ್ಕೆ ಪಂದ್ಯ ಗೆದ್ದುಕೊಡಬೇಕು ಅನ್ನುವ ಛಲ ಹೆಚ್ಚಾಗುತ್ತಿತ್ತು. ನಾವು ದೃಷ್ಟಿ ಮಾತ್ರ ಕಳೆದುಕೊಂಡಿದ್ದೇವೆ. ಆದ್ರೆ ದೂರದೃಷ್ಟಿಯನ್ನಲ್ಲ.”
- ಪ್ರಕಾಶ್ ಜಯರಾಮಯ್ಯ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ದೃಷ್ಟಿ ವಿಕಲಚೇತನ ಕ್ರಿಕೆಟರ್

ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ20 ವಿಶ್ವಕಪ್ನ ಫೈನಲ್ ಅದು. ಅಂಧ ಕ್ರಿಕೆಟಿಗರಿಗೆ ಜಗತ್ತು ಗೆಲ್ಲಲ್ಲು ಇದ್ದ ಅತೀ ದೊಡ್ಡ ಅವಕಾಶ. ತಮ್ಮಲ್ಲಿದ್ದ ಪ್ರತಿಭೆಯನ್ನು ಹೊರಹಾಕಲು ಇದ್ದ ಅತೀ ದೊಡ್ಡ ಅವಕಾಶ. ಎಲ್ಲರಂತೆ ನಾವು ಅನ್ನುವುದನ್ನು ತೋರಿಸಲು ಇದ್ದ ವೇದಿಕೆ. ಆದ್ರೆ ವಿಶೇಷ ದೃಷ್ಟಿ ವಿಕಲಚೇತನರು ಎಲ್ಲವನ್ನೂ ಮೆಟ್ಟಿನಿಂತ್ರು. ಎದುರಾಳಿ ಪಾಕಿಸ್ತಾನ ಕಡುವೈರಿ ಅನ್ನುವುದನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಡಬೇಕು ಮತ್ತು ಅದರಲ್ಲೇ ಗೆಲ್ಲಬೇಕು ಅನ್ನುವುದಷ್ಟೇ ಗುರಿ ಆಗಿತ್ತು. ಪಾಕ್ ತಂಡಕ್ಕೂ ಅದೇ ಗುರಿ. ನಾವೆಲ್ಲರೂ ಒಂದೇ ಅನ್ನುವುದನ್ನು ಪಾಕ್ ಕ್ರಿಕೆಟಿಗರುನ ಮೈದಾನದಲ್ಲಿ ತೋರಿಸಿದ್ರು. ಅಷ್ಟೇ ಅಲ್ಲ ಪಂದ್ಯ ಸೋತ್ರೂ ತಮ್ಮ ಭಾವನೆ ಮತ್ತು ಮಾತುಗಳಿಂದ ಎಲ್ಲರ ಮನಸ್ಸು ಗೆದ್ರು.

“ ನಾವು ವಿಶ್ವಕಪ್​​ನಲ್ಲಿ 2ನೇ ಅತ್ಯುತ್ತಮ ತಂಡವಾಗಿರಬಹುದು. ಆದ್ರೆ ನಾವು ಭಾರತೀಯರ ಮನ ಗೆದ್ದಿದ್ದೇವೆ. ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ. ಮುಂದಿನ ಬಾರಿಯೂ ಆಡಲು ಬರುತ್ತೇವೆ. ಭಾರತ ತಂಡವೂ ಚೆನ್ನಾಗಿ ಅಭ್ಯಾಸ ಮಾಡಲಿದೆ. ಆದ್ರೆ ಒಂದಲ್ಲ ಒಂದು ದಿನ ನಾವು ಕೂಡ ಕಪ್​​ ಗೆಲ್ಲುತ್ತೇವೆ ”
- ಮೊಹಮ್ಮದ್ ಜಮೀಲ್, ಪಾಕ್ ದೃಷ್ಟಿ ವಿಕಲ ಚೇತನರ ತಂಡದ ನಾಯಕ

ಭಾರತದ ದೃಷ್ಟಿ ವಿಕಲ ಚೇತನ ತಂಡ 2012ರಲ್ಲೂ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. 2014ರಲ್ಲಿ ಏಕದಿನ ಕ್ರಿಕೆಟ್​​ನ ಚಾಂಪಿಯನ್ ಆಗಿತ್ತು. ಏಷ್ಯಾಕಪ್​​ನಲ್ಲೂ ಭಾರತವೇ ಸರ್ವಶ್ರೇಷ್ಟ. ಆದ್ರೆ ಈ ಕ್ರಿಕೆಟಿಗರಿಗೆ ಜೀವನಕ್ಕೊಂದು ಆಸರೆ ಇಲ್ಲ. ಕ್ರಿಕೆಟ್ ಮುಗಿದಿದೆ. ಚಾಂಪಿಯನ್ ಆಗಿ ಆಗಿದೆ. ಆದ್ರೆ ಮುಂದೇನು ಅನ್ನುವ ಚಿಂತೆ ಮಾತ್ರ ಕಡಿಮೆ ಆಗಿಲ್ಲ.

"ನಮಗೆ ಪ್ರೋತ್ಸಾಹ ಸಿಗುತ್ತಿಲ್ಲ. ಯಾವ ಗೌರವ ಕೂಡ ಸಿಗುತ್ತಿಲ್ಲ. ವಿಶ್ವದ ಎಲ್ಲಾ ದೃಷ್ಟಿ ವಿಕಲಚೇತನರ ಕ್ರಿಕೆಟ್ ತಂಡಗಳು ಆಯಾ ದೇಶದ ಕ್ರಿಕೆಟ್ ಬೋರ್ಡ್​ಗಳ ಜೊತೆ ಒಂದಾಗಿವೆ. ಆದ್ರೆ ಬಿಸಿಸಿಐ ನಮ್ಮನ್ನು ದೂರವಿಟ್ಟಿದೆ. ಬಿಸಿಸಿಐ ಮನಸ್ಸು ಬದಲಿಸಿ, ಅವರ ಜೊತೆ ನಮ್ಮ ಕ್ರಿಕೆಟಿಗರನ್ನು ಕೂಡ ಸೇರಿಸಿಕೊಂಡರೆ ಒಳ್ಳೆಯದು"
- ಶೇಖರ್ ನಾಯಕ್, ಪದ್ಮಶ್ರೀ ವಿಜೇತ ದೃಷ್ಟಿ ವಿಕಲ ಚೇತನ ಕ್ರಿಕೆಟಿಗ

ಒಟ್ಟಿನಲ್ಲಿ ಯಾರು ಏನೇ ಅನ್ನಲಿ. ಚಾಂಪಿಯನ್ನರು ಯಾವತ್ತಿದ್ರೂ ಚಾಂಪಿಯನ್ನರು. ಆದ್ರೆ ನಾವು ಎಲ್ಲರನ್ನೂ ಒಂದೇ ರೀತಿಯಲ್ಲಿ ಗೌರವಿಸುವುದನ್ನು ಮಾತ್ರ ಕಲಿಯಬೇಕಿದೆ. 

ಇದನ್ನು ಓದಿ:

1. ನಿಮ್ಮ ಕಾರು ಎಲ್ಲೇ ಹೋಗಲಿ, ಯಾರೇ ಡ್ರೈವ್ ಮಾಡಲಿ ಚಿಂತೆ ಬೇಡ- "ಕಾರ್ನೊಟ್" ಡಿವೈಸ್ ಮೂಲಕ ಎಲ್ಲವೂ ನಿಮಗೆ ತಿಳಿಯುತ್ತೆ..!

2. ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

3. ಸಿಂಪಾಡಿಪುರದಲ್ಲಿ "ಆಕಾರ"..! ಬೆಂಗಳೂರಿನಲ್ಲಿ "ಶ್ರುತಿ ಸಿಂಗಾರ"..!

Related Stories

Stories by YourStory Kannada