'ಮಹಾ' ನದಿಗಳೇಕೆ ಬರಿದಾಗುತ್ತಿವೆ..?

ಟೀಮ್ ವೈ.ಎಸ್.ಕನ್ನಡ 

'ಮಹಾ' ನದಿಗಳೇಕೆ ಬರಿದಾಗುತ್ತಿವೆ..?

Wednesday July 27, 2016,

3 min Read

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ರು. ನಿಜಕ್ಕೂ ಅದು ರಾಜ್ಯಕ್ಕೆ ಎಚ್ಚರಿಕೆಯ ಕರೆಗಂಟೆ. ವರುಣನ ಚೆಲ್ಲಾಟದಿಂದಾಗಿ ರೈತರಿಗೆ ಬೆಳೆ ಕೈಕೊಟ್ಟಿದೆ. ಉತ್ಪಾದನಾ ಘಟಕಗಳನ್ನು ಮತ್ತು ಸಾಕಣೆ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ವರ್ಷ ಮಳೆ ಚೆನ್ನಾಗಾದರೂ ನಿಧಾನ ಮತ್ತು ಪರಿಣಾಮಕಾರಿಯಲ್ಲದ ಆಡಳಿತದಿಂದಾಗಿ ಪರಿಸ್ಥಿತಿ ಸುಧಾರಿಸಿಲ್ಲ.

image


ಸ್ಟ್ರಾಬೆರ್ರಿ ಬೆಳೆಯುತ್ತಿರುವ 70 ವರ್ಷದ ರೈತ ಯುನುಸ್ ಇಸ್ಮಾಯಿಲ್ ನಲ್ಬಂದ್ ``ಪೀಪಲ್ಸ್ ಆರ್ಖೈವ್ ಆಫ್ ರೂರಲ್ ಇಂಡಿಯಾದ'' ಪತ್ರಕರ್ತರ ಜೊತೆ ಮಾತನಾಡುತ್ತ, ಮಹಾಬಲೇಶ್ವರದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ರು. ಪತ್ನಿ ಹಾಗೂ ಪುತ್ರ ರೋಶನ್ ಜೊತೆಗೂಡಿ ಯುನುಸ್ ಸ್ಟ್ರಾಬೆರ್ರಿ ಮಾರಾಟ ಮಾಡ್ತಾರೆ. ``ಈ ವರ್ಷ ಬೆಲೆಯೇನೋ ಹೆಚ್ಚಳವಾಗಿದೆ. ಆದ್ರೆ ಫಸಲು ಕಡಿಮೆ, ಗುಣಮಟ್ಟ ಕೂಡ ಸರಿಯಾಗಿಲ್ಲ'' ಎನ್ನುತ್ತಾರೆ ಅವರು. ಯುನುಸ್ ಅವರ 3 ಎಕರೆ ಭೂಮಿಗೆ ನೀರುಣಿಸಲು ಇರುವ ಏಕೈಕ ಆಧಾರ ಬೋರ್ವೆಲ್. ವಿಶೇಷ ಅಂದ್ರೆ ತಮ್ಮ ಬಾವಿಯಲ್ಲಿರುವ ನೀರನ್ನು ಯುನುಸ್ ಪಕ್ಕದಲ್ಲೇ ಇರುವ ಕೃಷ್ಣಮಾಯಿ ದೇವಸ್ಥಾನದವರಿಗೂ ನೀಡ್ತಾರೆ. ನೀರು ನಮ್ಮ ಸ್ವತ್ತಲ್ಲ, ಭಗವಂತನದ್ದು ಎನ್ನುತ್ತಾರೆ ಅವರು.

ಪ್ರತಿವರ್ಷ ಕೃಷ್ಣಮಾಯಿ ದೇವಾಲಯದ ನೀರಿನ ಟ್ಯಾಂಕ್ ಬೇಸಿಗೆಯಲ್ಲಿ ಬರಿದಾಗಿ ಹೋಗುತ್ತದೆ. ಈ ದೇವಾಲಯದ ಸಮೀಪದಲ್ಲೇ ಪಂಚಗಂಗಾ ದೇವಸ್ಥಾನವಿದೆ. ಅಲ್ಲಿಗೆ ಕೊಯ್ನಾ, ವೆನ್ನಾ, ಸಾವಿತ್ರಿ ಮತ್ತು ಗಾಯತ್ರಿ ನದಿಗಳಿಂದ ನೀರು ಪೂರೈಕೆಯಾಗುತ್ತದೆ. ಆದ್ರೆ ಕೃಷ್ಣಮಾಯಿ ದೇವಾಲಯಕ್ಕೆ ನೀರಿನ ಕೊರತೆ ಕಾಡುತ್ತಿದೆ. ಯುನುಸ್ ಅವರ ವಿಶಾಲ ಮನೋಭಾವದಿಂದಾಗಿ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ.

ವಿವಿಧ ಪತ್ರಕರ್ತರು ಹಾಗೂ ವಾಹಿನಿಗಳು ಸಮೀಕ್ಷೆಯೊಂದನ್ನು ನಡೆಸಿವೆ. ನೀರಿನ ಮೂಲಗಳ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಹಳ್ಳಿ ಹಳ್ಳಿಗೂ ಭೇಟಿ ನೀಡಿ ನೀರಿನ ಕೊರತೆಯಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಪ್ರವಾಸಿ ಗೈಡ್ ನಾರಾಯಣ ಝಾದೆ, ಕಳೆದ 6 ದಶಕಗಳಲ್ಲಿ ಕೃಷ್ಣಮಾಯಿಯ ಕುಂದಾ ಬರಿದಾಗಿರಲಿಲ್ಲ ಎಂದ್ರು. ನೀರಿನ ಬಿಕ್ಕಟ್ಟಿಗೆ ಕಾರಣವಾಗಿದ್ದು ಮಳೆಯ ಕೊರತೆಯಲ್ಲ, ಅಧಿಕಾರಿಗಳ ಬೇಜವಾಬ್ಧಾರಿತನ ಎನ್ನುತ್ತಾರೆ ಅವರು. ಮಳೆಯ ಕೊರತೆಗೆ ಪ್ರಮುಖ ಕಾರಣ ಅರಣ್ಯ ನಾಶ ಎಂಬುದನ್ನು ಒಪ್ಪಿಕೊಳ್ಳುವ ಅವರು, ಅದನ್ನು ನಿಯಂತ್ರಿಸುವುದು ಸ್ಥಳೀಯರಿಂದ ಅಸಾಧ್ಯ ಎಂದ್ರು. ಸ್ಥಳೀಯರು ಮರದ ಒಂದು ಕೊಂಬೆಯನ್ನು ಕಡಿಯಲು ಹೋಗುವುದಿಲ್ಲ, ಆದ್ರೆ ಹೊರಗಿನಿಂದ ಬರುವವರು ಲೋಡ್ಗಟ್ಟಲೆ ಮರ ಕಡಿದುಕೊಂಡು ಹೋಗುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿರುವುದೇ ನೀರಿನ ಬವಣೆಗೆ ಕಾರಣ ಅನ್ನೋದು ಅವರ ಆರೋಪ. ಅನಿಯಂತ್ರಿತ ಪ್ರವಾಸೋದ್ಯಮ ಕೂಡ ಮತ್ತೊಂದು ಕಾರಣ ಅನ್ನೋದು ಝಾದೆ ಅವರ ಅಭಿಪ್ರಾಯ.

ಸರ್ಕಾರದ ಬಹುತೇಕ ನೀರಾವರಿ ಯೋಜನೆಗಳೆಲ್ಲ ಹಗರಣಗಳಾಗಿ ಹಳ್ಳ ಹಿಡಿದಿವೆ. ಗ್ರಾಮಸ್ಥರಿಗೆ ಈ ಯೋಜನೆಗಳಿಂದ ಪ್ರಯೋಜನ ಶೂನ್ಯವಾಗಿದೆ. ಕುಡಿಯುವ ನೀರಿಗಾಗಿ ಎಲ್ಲರೂ ನೇರ್ ಆಣೆಕಟ್ಟನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿರುವ ಸರೋವರ ಹತ್ತಿರದ ಕಬ್ಬು ಬೆಳೆಗಾರರಿಗೆ ಆಧಾರವಾಗಿದೆ. ಮಾನ್ ಮತ್ತು ಖತವ್ ಹೊರತಾಗಿ ಉಳಿದ 11 ನೀರನ ಮೂಲಗಳನ್ನು ಬರಗಾಲ ಸಮಿತಿ ಪ್ರತಿವರ್ಷ ಪರಿಶೀಲಿಸುತ್ತದೆ. ಅಲ್ಲಿ ಪ್ರತ್ಯೇಕ ಬರ ಜಿಲ್ಲೆಗಾಗಿ ಬೇಡಿಕೆ ಇಡಲಾಗಿದೆ. ಆದ್ರೆ ಇದು ಸಿನಿಕತನವನ್ನು ತೋರಿಸುತ್ತೆ ಅನ್ನೋದು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ.ಮಾರುತಿ ರಾಮಕೃಷ್ಣ ಕಾತ್ಕರ್ ಅವರ ಅಭಿಪ್ರಾಯ. ಅವರ ಪ್ರಕಾರ ಹೊಸ ಜಿಲ್ಲೆ ರೂಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.

ನೀರಿನ ಕೊರತೆ ಬಗ್ಗೆ ನಿವೃತ್ತ ನೀರಾವರಿ ಎಂಜಿನಿಯರ್ ಶರದ್ ಮಂಡೆ, ಉತ್ತಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಣೆಕಟ್ಟುಗಳು, ಪೈಪ್ಲೈನ್, ನೀರು ಶುದ್ಧೀಕರಣ ಘಟಕ ಮತ್ತು ಪಂಪಿಂಗ್ ಯಂತ್ರಗಳು ದಶಕಗಳಷ್ಟು ಹಳೆಯವು. ಆದ್ರೆ ಒಬ್ಬ ಮುಖ್ಯಮಂತ್ರಿಯ ಅವಧಿ ಕೇವಲ 5 ವರ್ಷ. ಹಾಗಾಗಿ ಅವರು ತಕ್ಷಣಕ್ಕೆ ಆಗುವಂತಹುದನ್ನು ಮಾಡುತ್ತಾರೆಯೇ ಹೊರತು ದೀರ್ಘಾವಧಿ ಪ್ರಯೋಜನದ ಬಗ್ಗೆ ಆಲೋಚಿಸುವುದಿಲ್ಲ ಎನ್ನುತ್ತಾರೆ ಶರದ್. ಮಹಾರಾಷ್ಟ್ರದಲ್ಲಿ ರಾಜ್ಯದ ನೀರಾವರಿ ಸಾಮಥ್ರ್ಯ 10 ವರ್ಷಗಳಲ್ಲಿ ಕೇವಲ 0.1ರಷ್ಟು ಹೆಚ್ಚಾಗಿದೆ. ಕಳೆದ 30 ವರ್ಷಗಳಲ್ಲಿ 77ಕ್ಕೂ ಹೆಚ್ಚು ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಅಂತರ್ಜಲ ಕುಸಿದಿದೆ, ಕುಡಿಯುವ ನೀರು ಪೂರೈಕೆ ನಿರ್ಮಾಣ ಚಟುವಟಿಕೆಯಾಗಿ ಬದಲಾಗಿದೆ, ಲಭ್ಯವಿರುವ ನೀರನ್ನೆಲ್ಲ ಶಾಸಕರ ಕಬ್ಬು ಕಾರ್ಖಾನೆಗಳಿಗೆ ಪೂರೈಸಲಾಗುತ್ತಿದೆ.

ಬರಗಾಲ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದೇನೂ ಅಲ್ಲ. 2012ರಿಂದ್ಲೇ ನೀರಿನ ಬವಣೆ ಹಾಗೂ ರೈತರ ಆತ್ಮಹತ್ಯೆಗೆ ಭಾರತದ ಅತ್ಯಂತ ಶ್ರೀಮಂತ ರಾಜ್ಯ ಎನಿಸಿಕೊಂಡಿರುವ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಹಿಂದಿನ ವರ್ಷ ಸರಾಸರಿ ಮಳೆಯಾಗಿದ್ರೂ 2012ರಲ್ಲಿ ಭೀಕರ ಬರಗಾಲ ಆವರಿಸಿತ್ತು. ಅದರರ್ಥ ಮಳೆಯ ಕೊರತೆ ಮಾತ್ರ ಬರಗಾಲ ಕ್ಕೆ ಕಾರಣವಲ್ಲ. ಬೆಳೆಯ ಆಯ್ಕೆಯಲ್ಲಿ ವೈಫಲ್ಯ, ಅದಕ್ಷ ನೀರಾವರಿ ವಿಧಾನಗಳು, ಸಂಗ್ರಹಿಸಿದ ನೀರು ಮತ್ತು ಅಂತರ್ಜಲದ ಅಸಮತೋಲಿತ ಬಳಕೆ ಕೂಡ ಬರಗಾಲಕ್ಕೆ ಕಾರಣ. ಇದನ್ನು ಮಾನವ ನಿರ್ಮಿತ ಬರ ಎಂದು ಕರೆಯಬಹುದು.

ಸತತ ಎರಡು ವರ್ಷಗಳಿಂದ ಪರಿಸ್ಥಿತಿ ಒಂದೇ ರೀತಿ ಇದೆ. ನೀರಾವರಿ ಯೋಜನೆಗಳಲ್ಲಾದ ಭ್ರಷ್ಟಾಚಾರ 2014ರ ವರದಿಯಲ್ಲಿ ದೃಢಪಟ್ಟಿದೆ. ಭ್ರಷ್ಟಾಚಾರ ನಿಗ್ರಹ ದಳದ ಹದ್ದಿನ ಕಣ್ಣಿದ್ದರೂ ರಾಜಕೀಯ ನೇತಾರರು ಹಗರಣಗಳನ್ನ ಸೃಷ್ಟಿಸ್ತಿದ್ರೆ, ಮಾನವ ನಿರ್ಮಿತ ಬರಗಾಲದಿಂದ ಮಹಾರಾಷ್ಟ್ರ ಕಂಗೆಟ್ಟಿದೆ. ಸೀಮಿತ ನೀರು ಪೂರೈಕೆಗೆ ಅಡ್ಡಗಾಲಾಗಿರುವ ಹೊಸ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ 5 ವರ್ಷ ನಿರ್ಬಂಧ ಹೇರಿದೆ ಆದ್ರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಲೆಕ್ಕಕ್ಕೆ ಸಿಗದಷ್ಟು ಸಾವಿರಾರು ಕೋಟಿ ರೂಪಾಯಿ ಭ್ರಷ್ಟರ ಜೇಬು ಸೇರಿದ ಮೇಲೆ, ಐದು ವರ್ಷಗಳ ನಿರಂತರ ಬರಗಾಲದ ಬಳಿಕ, 6000ಕ್ಕೂ ಹೆಚ್ಚು ರೈತರ ಪ್ರಾಣವನ್ನೇ ಕಳೆದುಕೊಂಡ ಮೇಲೆ ವಿಶ್ವಾಸಾರ್ಹತೆ ಉಳಿಯಲು ಸಾಧ್ಯವೇ?

ಬಿಕ್ಕಟ್ಟು ಎಚ್ಚರಿಸುವ ಮಟ್ಟವನ್ನು ತಲುಪಿದೆ. ಬರಪೀಡಿತ ರಾಜ್ಯ ಎಂಬ ಹಣೆಪಟ್ಟಿ ಮಹಾರಾಷ್ಟ್ರಕ್ಕೆ ಅಂಟಿಕೊಳ್ಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಿದೆ.

ಇದನ್ನೂ ಓದಿ...

70 ಕೊಠಡಿ, 11 ಸಿಬ್ಬಂದಿ, ಇರುವವನೊಬ್ಬನೇ ಭಿಕ್ಷುಕ : ಪುನರ್ವಸತಿ ಹೆಸರಲ್ಲಿ ಹಣ ಪೋಲು 

ಪತ್ನಿ ಹಂತಕರನ್ನೂ ದ್ವೇಷಿಸದ ಸಂಕರ್ಷಣ್​ ಜೇನಾ : ಆನೆಗಳ ರಕ್ಷಣೆಗಾಗಿ ನಿರಂತರ ಅಭಿಯಾನ