ಐಐಎಸ್‍ಸಿ ವಿಜ್ಞಾನಿಗಳು ಆವಿಷ್ಕರಿಸಿದ ಸೌರ ಕುಕ್ಕರ್ ಭವಿಷ್ಯದಲ್ಲಿ ಮಧ್ಯಮವರ್ಗದ ಗೃಹಿಣಿಯರ ಕೈಗುಟುಕುವ ಬೆಲೆಯಲ್ಲಿ ದೊರೆಯಬಹುದೇ?

ವಿಶ್ವಾಸ್​ ಭಾರಧ್ವಾಜ್​​

0

ಐಐಎಸ್‍ಸಿಯ ಇತ್ತೀಚೆಗಿನ ಮಹತ್ವದ ಸಂಶೋಧನೆಗಳಲ್ಲಿ ಹೆಚ್ಚು ಸುದ್ದಿಯಾಗಿರುವುದು ಸೋಲಾರ್ ಕುಕರ್ ಅಥವಾ ಸೌರ ಕುಕ್ಕರ್ ಸಂಶೋಧನೆ. ಸೌರಶಕ್ತಿ ಬಳಕೆಯ ಮಹತ್ತರ ಪ್ರಯೋಜನಗಳ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಜಾಗೃತಿ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ಈ ಸೌರ ಕುಕ್ಕರ್ ಸಂಶೋಧನೆ ಮಹತ್ವ ಪಡೆದುಕೊಂಡಿದೆ. ವಿಶ್ವ ಸೌರ ಒಕ್ಕೂಟ ಒಡಂಬಡಿಕೆಗೆ ಭಾರತ ಸಹಿ ಹಾಕಿರುವುದಷ್ಟೇ ಅಲ್ಲದೇ, ಭವಿಷ್ಯದಲ್ಲಿ ಸೌರ ಉತ್ಪನ್ನಗಳ ಬಳಕೆಯ ಅಗಾಧ ಪರಿಣಾಮದ ಕುರಿತು ಸಮರ್ಥಿಸುವ ಮುಖ್ಯ ಪ್ರತಿಪಾದಕ ರಾಷ್ಟ್ರವೂ ಆಗಿದೆ. ಇದಲ್ಲದೆ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿಯೂ ಸೌರ ಉತ್ಪನ್ನಗಳ ಸಂಶೋಧನೆಗೆ ಆಧ್ಯತೆ ಸಿಗತೊಡಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಐಐಎಸ್‍ಸಿ ವಿಜ್ಞಾನಿಗಳು ಆವಿಷ್ಕರಿಸಿರುವ ಸೋಲಾರ್ ಕುಕ್ಕರ್‍ಗೆ ಮನ್ನಣೆ ದೊರೆಯುತ್ತಿದೆ. ಆದರೆ ಇದರ ಪ್ರಾಥಮಿಕ ಹಂತ ಮುಗಿಸಿರುವ ವಿಜ್ಞಾನಿಗಳು ಮತ್ತೆ ಸಂಶೋಧನೆಗಳನ್ನು ಗೈಯುವ ಮೂಲಕ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸೌರ ಕುಕ್ಕರ್ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.

ಶಕ್ತಿಯ ಪರ್ಯಾಯ ಮೂಲವೆಂದೇ ಗುರುತಿಸಿಕೊಂಡಿರುವ ಸೋಲಾರ್ ಪವರ್ ಭವಿಷ್ಯದಲ್ಲಿ ಅತ್ಯಂತ ದೊಡ್ಡ ಮರು ನವೀಕರಿಸಬಹುದಾದ ಶಕ್ತಿ ಮೂಲವಾಗಲಿದೆ. ಈಗಾಗಲೇ ಜಾಗತಿಕವಾಗಿ ಸೌರಶಕ್ತಿಯ ಸದ್ಭಳಕೆಯ ಪ್ರಯೋಗಗಳು ವಿಫುಲವಾಗಿ ನಡೆಯುತ್ತಲೇ ಇವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಉದ್ಯಾನ ನಗರಿ ಬೆಂಗಳೂರಿನ ವೈಜ್ಞಾನಿಕ ಸಂಶೋಧನಾ ತಾಣ ಇಂಡಿಯನ್ ಇನ್ಸ್​ಟಿಟ್ಯೂಟ್​ ಆಫ್ ಸೈನ್ಸ್​ನ ವಿಜ್ಞಾನಿಗಳು ಆವಿಷ್ಕರಿಸಿರುವ ಸೌರ ಕುಕ್ಕರ್‍ನತ್ತ ಗಮನ ಹರಿಸಲಾಗುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಎಲೆಕ್ಟ್ರಾನಿಕ್ ವಿನ್ಯಾಸ ಹಾಗೂ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳಾದ ಡಾ. ಯು.ಆರ್ ಪ್ರಸನ್ನ ಹಾಗೂ ಡಾ. ಎಲ್ ಉಮಾನಂದ ಜಂಟಿಯಾಗಿ ನಡೆಸಿದ ಸಂಶೋಧನೆಯಿದು. ವಿಜ್ಞಾನಿ ಡಾ.ಯು.ಆರ್ ಪ್ರಸನ್ನ ಖುದ್ದಾಗಿ ಇದರ ಯಶಸ್ಸಿನ ಥಿಯರಿಯನ್ನು ಈ ಹಿಂದೆಯೇ ಮಾಧ್ಯಮಗಳ ಬಳಿ ವಿವರಿಸಿದ್ದರು.

ಈ ಕುಕ್ಕರ್‍ನಲ್ಲಿ ಸೌರ ಕಿರಣಗಳನ್ನು ಹಿಡಿದಿಟ್ಟುಕೊಳ್ಳಬಲ್ಲ ಪ್ರತ್ಯೇಕ ಸೋಲಾರ್ ಪ್ಲೇಟ್‍ಗಳಿವೆ. ಇದರ ಥರ್ಮಲ್ ಟ್ಯಾಂಕ್‍ನಲ್ಲಿ ಸೌರಶಕ್ತಿಯನ್ನು ಹೀರಿಕೊಂಡು ಸುಮಾರು 300 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣತೆಯನ್ನು ಹೊರಹಾಕುವ ಸಾಮರ್ಥ್ಯವಿದೆ. ಹಗಲು ಮಾತ್ರವಲ್ಲ ರಾತ್ರಿ ವೇಳೆಯೂ ಈ ಕುಕ್ಕರ್‍ನಲ್ಲಿ ಬಿಸಿ ಬಿಸಿ ಅಡುಗೆ ಮಾಡಿ ಸೇವಿಸಬಹುದು ಅನ್ನುವುದು ಸೋಲಾರ್ ಕುಕ್ಕರ್ ಕಂಡುಹಿಡಿದ ಇನ್ನೊಬ್ಬ ಐಐಎಸ್‍ಸಿ ವಿಜ್ಞಾನಿ ಡಾ.ಎಲ್ ಉಮಾನಂದ ಅವರ ಅಭಿಪ್ರಾಯ. ಈಗಾಗಲೆ ಮಾರುಕಟ್ಟೆಯಲ್ಲಿ ಸೌರ ಕುಕ್ಕರ್ ಲಭ್ಯವಿದೆಯಾದ್ರೂ, ಅದರಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆ ಸೌರ ಕುಕ್ಕರ್‍ಗಳು ಸರಿಯಾದ ಪ್ರಮಾಣದಲ್ಲಿ ಉಷ್ಣವನ್ನು ಹೊರಹಾಕುತ್ತಿಲ್ಲ ಹಾಗೂ ಅವು ಸಾಕಷ್ಟು ದುಬಾರಿ ಕೂಡ ಆಗಿದೆ. ಹೀಗಾಗಿ ಗ್ರಾಹಕರ ಕೈಗೆಟುಕುವ ದರದಲ್ಲಿ, ಸಮರ್ಥವಾಗಿ ಕಾರ್ಯನಿರ್ವಹಿಸುವ ಸೌರ ಕುಕ್ಕರ್ ನೀಡುವುದು ತಮ್ಮ ಯೋಜನೆ ಅಂತಾರೆ ವಿಜ್ಞಾನಿ ಉಮಾನಂದ್.

ಸದಾ ಒಂದಿಲ್ಲೊಂದು ಆವಿಷ್ಕಾರಗಳನ್ನು ಮಾಡುತ್ತಲೇ ಇರುವ ನಮ್ಮ ಬೆಂಗಳೂರಿನ ಐಐಎಸ್‍ಸಿಯ ಈ ಆವಿಷ್ಕಾರ, ಭವಿಷ್ಯದಲ್ಲಿ ಗೃಹಿಣಿಯರಿಗೆ ಅಡುಗೆ ಮನೆಯಲ್ಲಿ ಪರ್ಯಾಯ ವ್ಯವಸ್ಥೆಯಾಗಬಹುದು ಅನ್ನುವ ನಿರೀಕ್ಷೆಯಿದೆ. ಈ ಕುರಿತಾಗಿ ಇನ್ನಷ್ಟು ಮರು ಸಂಶೋಧನೆಯಲ್ಲಿ ನಿರತರಾಗಿರುವ ಉಮಾನಂದ್ ಹಾಗೂ ಪ್ರಸನ್ನ ಮುಂಭರುವ ದಿನಗಳಲ್ಲಿ ಗ್ರಾಹಕರಿಗೆ ಕೈಗೆಟಿಗುವ ದರದಲ್ಲಿ ಸುಲಭವಾಗಿ ಸೌರ ಕುಕ್ಕರ್ ಲಭ್ಯವಾಗಿಸುವುದು ಹೇಗೆ ಅನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.


Related Stories

Stories by YourStory Kannada