ಆರ್ಥಿಕ ಸುಧಾರಣೆಗೆ ಮೋದಿ ಬಳಿಯಿದ್ಯಾ ಮದ್ದು..?

ಟೀಮ್​ ವೈ.ಎಸ್​.ಕನ್ನಡ

0

ಹೊಸ ಆರ್ಥಿಕತೆ ಹೊರಹೊಮ್ಮುತ್ತಿದೆ ಅಂತಾ 2010ರಲ್ಲೇ ಖ್ಯಾತ ಅರ್ಥಶಾಸ್ತ್ರಜ್ಞ Anatole Kaletsky ಭವಿಷ್ಯ ನುಡಿದಿದ್ರು. ಆದ್ರೆ ಅದನ್ನು ಮಾರುಕಟ್ಟೆಯ ಮೂಲಭೂತವಾದ ಎಂದಾಗ್ಲಿ ಅಥವಾ ಸರ್ಕಾರಿ ಎಂದು ಕರೆಯಲು ಸಾಧ್ಯವಿರಲಿಲ್ಲ. ಆಗಿನ್ನೂ 2008ರ ರಿಸೆಶನ್ ಹೊಡೆತದಿಂದ ಇಡೀ ಜಗತ್ತು ಚೇತರಿಸಿಕೊಳ್ಳುತ್ತಿತ್ತು. ಅವರು ಅಂದಾಜಿಸಿದಂತೆ ಈಗಾಗ್ಲೇ ಮೂರು ಹಂತದ ಆರ್ಥಿಕ ಬೆಳವಣಿಗೆ ಸಾಕಾರವಾಗಿದ್ದು, ನಾಲ್ಕನೆಯದು ಈಗಷ್ಟೇ ಆರಂಭವಾಗಿದೆ. ''19ನೇ ಶತಮಾನದಿಂದ 1930ರವರೆಗಿನ ಸಮಯ ಮುಕ್ತ ಆರ್ಥಿಕತೆಯ ಯುಗವಾಗಿತ್ತು. ಸರ್ಕಾರಗಳಿಗೆ ಉದ್ಯಮಕ್ಕೆ ಅಡ್ಡಿಪಡಿಸುವ ಅವಕಾಶವೇ ಇರಲಿಲ್ಲ. ಬಳಿಕ ಸೋವಿಯತ್ ಯೂನಿಯನ್​ನ ಗ್ರೇಟ್ ಡಿಪ್ರೆಷನ್ ಹಾಗೂ ಕಮ್ಯುನಿಸ್ಟ್ ಪ್ರಯೋಗ ಪಾಶ್ಚಿಮಾತ್ಯ ಜಗತ್ತಿನ ಮನಸ್ಥಿತಿಯನ್ನೇ ಬದಲಾಯಿಸಿತ್ತು. ಆದ್ರೆ ಮಾರುಕಟ್ಟೆಯನ್ನು ಅದರಷ್ಟಕ್ಕೆ ಬಿಡುವಂತಿಲ್ಲ ಎಂಬ ಕಲ್ಪನೆ ಹುಟ್ಟಿಕೊಂಡಿತ್ತು ಮತ್ತು ರಾಜ್ಯಗಳು ಹೆಚ್ಚು ಹೊಣೆಗಾರಿಕೆ ಹೊತ್ತುಕೊಂಡಾಗ ಮಾತ್ರ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ'' ಎಂದು Anatole Kaletsky ಬರೆದಿದ್ದಾರೆ.

ಅದು ಆರ್ಥಿಕ ಸಂಕಷ್ಟದ ವಿರುದ್ಧ ಹೋರಾಡಲು ರೂಸ್ವೆಲ್ಟ್ ನಿರ್ಮಿಸಿದ 'ನ್ಯೂ ಡೀಲ್' ಸಿದ್ಧಾಂತ. ರಾಜ್ಯಗಳು ಇದ್ದಕ್ಕಿದ್ದಂತೆ ಬಿಗ್ ಬ್ರದರ್ ಆಗಿ ಬದಲಾದವು. ಆದ್ರೆ 70ರ ದಶಕದಲ್ಲಿ ತೈಲ ಬಿಕ್ಕಟ್ಟಿನಿಂದಾಗಿ ಚಿಂತಕರು ಮತ್ತು ಕಾರ್ಯನೀತಿ ರೂಪಿಸುವವರು ಅನಿವಾರ್ಯವಾಗಿ ಮೂಲ ಮಾರುಕಟ್ಟೆ ತರ್ಕದ ಮೇಲೆ ಪ್ರಯೋಗ ಮಾಡುವಂತಾಯ್ತು. ರೊನಾಲ್ಡ್ ರೀಗನ್ ಹಾಗೂ ಮಾರ್ಗರೆಟ್ ಥ್ಯಾಕರ್ ಹೊಸ ಆರ್ಥಿಕ ನುಡಿಗಟ್ಟಿನ ಉದ್ಧಾರಕರಾದ್ರು. ರಾಜ್ಯ ಒಮ್ಮೆ ಮಾರುಕಟ್ಟೆ ಬಗ್ಗೆ ಪ್ರಾಮುಖ್ಯತೆ ಕೊಟ್ಟಿರಲಿಲ್ಲ . ಶಾಸ್ತ್ರೀಯ ತಟಸ್ಥ್ಯ ನೀತಿಗಳನ್ನು ಹೊಸ ರೂಪದಲ್ಲಿ ಪುನಃ ತರಲಾಯ್ತು. ಆರ್ಥಿಕ ಅಭಿವೃದ್ಧಿಯ ಎರಡನೇ ಹಂತ ಭಿನ್ನವಾಗಿತ್ತು. ನಿಯಂತ್ರಣಗಳನ್ನು ಕಡಿತಗೊಳಿಸಿ, ಮಾರುಕಟ್ಟೆಯನ್ನು ಸಡಿಲಗೊಳಿಸಲಾಯ್ತು. ಇದನ್ನು ರಾಜ್ಯ ಮತ್ತು ಚರ್ಚ್​ನ ಪ್ರತ್ಯೇಕೀಕರಣ ಎಂದೇ ಪ್ರತಿಪಾದಿಸಲಾಗಿತ್ತು, ಸುರಕ್ಷಿತ ಆರ್ಥಿಕ ಬೆಳವಣಿಗಾಗಿ ರಾಜ್ಯ ಮತ್ತು ಆರ್ಥಿಕತೆಯನ್ನು ಬೇರ್ಪಡಿಸುವ ಸಮಗ್ರ ಅಗತ್ಯವಿತ್ತು. ಆದ್ರೆ 2008ರಲ್ಲಿ ಮತ್ತೆ ರಿಸೆಶನ್ ಈ ವಾದದ ಚಂಚಲತೆಗೆ ಅಡಿಗೆರೆ ಹಾಕಿತ್ತು. ಚಿಂತಕರು ಮತ್ತು ಪಾಲಿಸಿ ಮೇಕರ್​ಗಳು ಬಲವಂತವಾಗಿ ಹೊಸ ಮಾರ್ಗ ಹುಡುಕುವಂತಾಯ್ತು.

ಪ್ರಸ್ತುತ ಬಿಕ್ಕಟ್ಟು ಹೆಚ್ಚು ಕಠಿಣವಾಗಿರುವಂತೆ ತೋರುತ್ತದೆ ಮತ್ತು ಹೊಸ ಕಲ್ಪನೆ ಒಂದು ಆಕಾರಕ್ಕೆ ಬರದೇ ಇರುವುದರಿಂದ ಮತ್ತಷ್ಟು ಅಪಾಯಕಾರಿಯಾಗಿದೆ. ಇದು ನಮಗೆ, ಅಂದ್ರೆ ಭಾರತೀಯರಿಗೆ ಅತ್ಯಂತ ಬೆದರಿಕೆ ಹುಟ್ಟಿಸುವಂತಹ ವಿಷಯ, ಯಾಕಂದ್ರೆ ಜಾಗತಿಕ ಇತಿಹಾಸದಲ್ಲೇ ಭಾರತ ಮೊದಲ ಬಾರಿಗೆ ಗಂಭೀರ ಹೂಡಿಕೆದಾರ ಎನಿಸಿಕೊಂಡಿದೆ ಮತ್ತು ಆರ್ಥಿಕ ಪುನರುಜ್ಜೀವನ ಕೂಡ ನಮ್ಮನ್ನು ಅವಲಂಬಿಸಿದೆ. ಆದ್ರೆ ಸರ್ಕಾರದ ಮುಖಾಮುಖಿ ವರ್ತನೆಯ ಕಾರಣ ಆರ್ಥಿಕ ಪುನರುಜ್ಜೀವನ ಸಾಧ್ಯವಾಗುತ್ತಿಲ್ಲ ಎಂಬುದೇ ಬೇಸರದ ಸಂಗತಿ. ನರೇಂದ್ರ ಮೋದಿ ಅತ್ಯಂತ ವೈಭವದಿಂದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ರು. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕುಸಿತ ಕಂಡಿರುವ ಆರ್ಥಿಕತೆಗೆ ಮೋದಿ ಚೇತರಿಕೆ ಕೊಡ್ತಾರೆ, ಹೊಸ ಬದಲಾವಣೆ ತರ್ತಾರೆ ಅನ್ನೋ ನಿರೀಕ್ಷೆಯಿತ್ತು. ದುರದೃಷ್ಟವಶಾತ್ ಅದ್ಯಾವುದೂ ಈಡೇರುವ ಲಕ್ಷಣಗಳಿಲ್ಲ.

ದೇಶದ ಆರ್ಥಿಕ ಆರೋಗ್ಯದ ಮಾಪಕ ಎಂದೇ ಕರೆಯಲ್ಪಡುವ ಸೆನ್ಸೆಕ್ಸ್ ದಿನೇ ದಿನೇ ಕುಸಿತ ಕಾಣುತ್ತಿದೆ. ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಸೆನ್ಸೆಕ್ಸ್ 27,000ದ ಆಸುಪಾಸಿನಲ್ಲಿತ್ತು. ಈಗ 24,000ಕ್ಕಿಂತಲೂ ಕೆಳಕ್ಕಿಳಿದಿದೆ, ಇದು ಹಣಕಾಸು ಸಚಿವರ ದುಃಖತಪ್ತ ಸಹಿಯಂತಿದೆ. ರೂಪಾಯಿ ಮೌಲ್ಯ ಕೂಡ 70 ಡಾಲರ್ ಸನಿಹದಲ್ಲಿದೆ. ''ನವೆಂಬರ್​ನಲ್ಲಿ 8 ವಲಯಗಳ ಕಾರ್ಯವೈಖರಿ ನಿಜಕ್ಕೂ ಚಿಂತೆಗೀಡುಮಾಡಿದೆ. ಅವುಗಳ ಉತ್ಪಾದನೆ ದಶಕಗಳಲ್ಲೇ ಅತ್ಯಂತ ಕಡಿಮೆ ಅಂದ್ರೆ ಶೇ.1.3ಕ್ಕೆ ಕುಸಿದಿದೆ'' ಅಂತಾ 'ದಿ ಹಿಂದು' ವರದಿ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದ ಉತ್ಪಾದನಾ ಕ್ಷೇತ್ರ ಕೂಡ ಈಗ ಕುಸಿತ ಕಂಡಿದ್ದು, ನವೆಂಬರ್​ನಲ್ಲಿ ಶೇ.4.4ಕ್ಕೆ ಇಳಿದಿದೆ. ''ಕಳೆದ ವರ್ಷ ಅಕ್ಟೋಬರ್​ನಲ್ಲಿ ಶೇ.9.8ರಷ್ಟಿದ್ದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ನವೆಂಬರ್​ನಲ್ಲಿ ಶೇ.3.2ರಷ್ಟಾಗಿದೆ, 2011ರಿಂದೀಚೆಗೆ ಇದು ಅತ್ಯಂತ ಕಳಪೆ ಪ್ರದರ್ಶನ'' ಅಂತಾನೂ 'ದಿ ಹಿಂದು' ವರದಿ ಮಾಡಿದೆ. ''ಈ ವರ್ಷ ಭಾರತ ಶೇ.7-7.5ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿತ್ತು, ಆದ್ರೆ ಕಾರ್ಪೊರೇಟ್ ಇಂಡಿಯಾದ ಪ್ರಗತಿಗೆ ಸಾಲದ ಹೊಡೆತ ಬಿದ್ದಿದೆ, ಬ್ಯಾಂಕಿಂಗ್ ವಲಯದ ಮೇಲೆ ಒತ್ತಡ ಹೆಚ್ಚಾಗಿದೆ, ಸತತ ಎರಡು ಮುಂಗಾರು ವೈಫಲ್ಯದಿಂದ ಗ್ರಾಮೀಣ ಬೇಡಿಕೆ ಕುಸಿದಿದೆ'' ಅಂತಾ ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯಲ್ಲಾದ ಇಳಿಕೆ ಭಾರತಕ್ಕೆ ಅದೃಷ್ಟಶಾಲಿ ಎನಿಸಿದೆ. ಮೋದಿ ಅಧಿಕಾರ ವಹಿಸಿಕೊಂಡಾಗ ಒಂದು ಬ್ಯಾರೆಲ್ ತೈಲ ಬೆಲೆ 133 ಡಾಲರ್ ಇತ್ತು, ಈಗ 30 ಡಾಲರ್​ಗೆ ಇಳಿಕೆಯಾಗಿದೆ. ಹಣದುಬ್ಬರದ ವಿರುದ್ಧ ಹೋರಾಡಲು ಇದು ಸಹಕಾರಿಯಾಗಿದೆ. ಆದ್ರೆ ಕಳೆದ 25 ವರ್ಷಗಳ ಕೆಟ್ಟ ಆರ್ಥಿಕ ನಿರ್ವಹಣಾ ದಾಖಲೆಯಿಂದಾಗಿ ಚೀನಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಚಂಚಲತೆ ಸೃಷ್ಟಿಯಾಗಿದೆ, ಇದು ಹೊಸ ಭಯಕ್ಕೂ ಕಾರಣವಾಗಿದೆ. ಚೀನಾ ಬಿಕ್ಕಟ್ಟು ಈ ವರ್ಷ ಸಂಚಲನವನ್ನೇ ಸೃಷ್ಟಿಸಿದೆ, ಜನವರಿ ತಿಂಗಳು ದಶಕದಲ್ಲೇ ಕೆಟ್ಟ ಅವಧಿ ಎನ್ನಲಾಗ್ತಿದೆ. ಬ್ಯಾಂಕ್ ಆಫ್ ಅಮೆರಿಕಾ ಮೆರಿಲ್ ಲಿಂಚ್ ಪ್ರಕಾರ, ಜನವರಿಯ 3 ವಾರಗಳಲ್ಲಿ ಸುಮಾರು 7.8 ಟ್ರಿಲಿಯನ್ ಡಾಲರ್ ಜಾಗತಿಕ ಷೇರುಗಳ ಮೌಲ್ಯ ತೊಳೆದು ಹೋಗಿದೆ. ಮುಂದಿನ ವರ್ಷ ವಿಶ್ವದ ಅತಿ ದೊಡ್ಡ ಆರ್ಥಿಕ ಕುಸಿತದ ಸಾಧ್ಯತೆ ಶೇ.20-15ರಷ್ಟಿದೆ ಅಂತಾ ಅಮೆರಿಕದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಾರುಕಟ್ಟೆಗೆ ಇದು ಅಪಾಯಕಾರಿ ಸಂಕೇತ.

ಈ ಬಿಕ್ಕಟ್ಟನ್ನು ಎದುರಿಸಲು ಭಾರತ ಸರ್ಕಾರ ಸಿದ್ಧವಿರುವಂತೆ ಗೋಚರಿಸುತ್ತಿಲ್ಲ. 1985ರ ನಂತರ ಅಧಿಕಾರಕ್ಕೆ ಬಂದ ಮೊದಲ ಬಹುಮತದ ಸರ್ಕಾರ ಎನಿಸಿಕೊಂಡಿದ್ರೂ ಮೋದಿ ಸರ್ಕಾರ ಯಾವುದೇ ಸುಧಾರಣಾ ಕ್ರಮಗಳನ್ನು ಕೈಗೊಂಡಿಲ್ಲ. ಬಹುಮತ ಇರುವುದರಿಂದ ಕೆಳಮನೆಯ ಬಹುತೇಕ ಶಾಸಕಾಂಗ ಅಡಚಣೆಗಳಿಂದ ಪಾರಾಗಬಹುದು ಎಂದು ಊಹಿಸಿಕೊಂಡು ಸರ್ಕಾರ ದೊಡ್ಡ ಪ್ರಮಾದ ಎಸಗಿದೆ. ಸರ್ಕಾರ ಹೆಚ್ಚು ಸಮಾಧಾನ ತೋರಿದ್ರೂ ಪ್ರಯತ್ನದಲ್ಲಿ ಸೊಕ್ಕು ಕಡಿಮೆಯಿತ್ತು. ಜಿಎಸ್​ಟಿಯನ್ನೇ ತೆಗೆದುಕೊಳ್ಳಿ, ಅಭಿವೃದ್ಧಿಗೆ ಪೂರಕವಾಗಬೇಕಿದ್ದ ಈ ಮಸೂದೆ ರಾಜಕೀಯ ಹಗ್ಗಜಗ್ಗಾಟದಲ್ಲಿ ಕಳೆದು ಹೋಗಿದೆ. ದೆಹಲಿ ಮತ್ತು ಬಿಹಾರದಲ್ಲಿ ಬಿಜೆಪಿಗಾದ ಹೀನಾಯ ಸೋಲು ಪ್ರಧಾನಮಂತ್ರಿಗಳ ಆತ್ಮವಿಶ್ವಾಸವನ್ನೇ ಕುಗ್ಗಿಸಿದೆ. ಪ್ರತಿಪಕ್ಷಗಳು ರಕ್ತದ ರುಚಿ ನೋಡಿವೆ. ಮೋದಿ ಸರ್ಕಾರಕ್ಕೆ ಆರಾಮಾಗಿ ಕುಳಿತುಕೊಳ್ಳಲು ಅವು ಅವಕಾಶ ನೀಡುತ್ತಿಲ್ಲ.

ಮಾರುಕಟ್ಟೆ ಸುಧಾರಣೆ ಕಾಣದೇ ಇರುವುದರಿಂದ ರಾಜ್ಯಗಳು ಮಧ್ಯಪ್ರವೇಶಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕೈಗಾರಿಕೆಗಳ ನಾಯಕರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗಿದೆ. ಆದ್ರೆ ಇದಕ್ಕೆ ಸಾಂಸ್ಥಿಕ ಬೆಂಬಲ ಮತ್ತು ಶಾಸಕಾಂಗ ಹಿಮ್ಮೇಳದ ಅಗತ್ಯವಿದೆ. ಆದ್ರೆ ಸರ್ಕಾರ ವಾಸ್ತವವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಹೊಸ ಆರ್ಥಿಕ ಮಾದರಿಯ ಉದಯಕ್ಕೆ ರಾಜ್ಯ ಮತ್ತು ಮಾರುಕಟ್ಟೆಗಳ ನಡುವೆ ನಿಕಟ ಸಹಭಾಗಿತ್ವದ ಅಗತ್ಯವಿದೆ. ನಮ್ಮದು ಪರಿಪೂರ್ಣ ಪ್ರಜಾಪ್ರಭುತ್ವವಲ್ಲ, ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹಾಗಾಗಿ ನಮ್ಮ ಮುಂದಿರುವ ಕೆಲಸ ನಿಜಕ್ಕೂ ಕಠಿಣವಾದದ್ದು. ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಲು ಭಾರತದ ರಾಜ್ಯಗಳು ಇನ್ನಷ್ಟು ಸಭ್ಯತೆಯಿಂದಿರಬೇಕು, ಸಮಾಜದ ಎಲ್ಲ ಸ್ಟೇಕ್ ಹೋಲ್ಡರ್​ಗಳು ಜೊತೆಯಲ್ಲಿ ಕೊಂಡೊಯ್ಯಬೇಕು, ಎಲ್ಲ ಪ್ರಜಾಪ್ರಭುತ್ವ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕು, ಆರ್ಥಿಕ ಪುನಶ್ಚೇತನದ ಬಗ್ಗೆ ಎದುರಾಳಿಗಳಿಗೆ ಅರಿವು ಮೂಡಿಸಲು ಗಂಭೀರ ಪ್ರಯತ್ನಗಳಾಗಬೇಕು. ಆದ್ರೆ ಇದರಲ್ಲಿ ಸರ್ಕಾರ ವಿಫಲವಾಗಿದೆ.

''ರಾಜಕಾರಣಿಗಳು ಭ್ರಷ್ಟರಾಗಿರುವುದರಿಂದ ಸರ್ಕಾರಗಳು ಮತ್ತು ಮಾರುಕಟ್ಟೆಗಳು ತಪ್ಪು ಮಾಡುತ್ತಿವೆ ಎಂಬುದನ್ನು ಬಂಡವಾಳಶಾಹಿ 4.0 ಗುರುತಿಸುತ್ತದೆ. ಬ್ಯಾಂಕರ್​ಗಳಲ್ಲಿ ದುರಾಸೆಯಿದೆ, ಉದ್ಯಮಿಗಳು ಅಸಮರ್ಥರಾಗಿದ್ದಾರೆ, ಮತದಾರರು ಮೂರ್ಖರು ಯಾಕಂದ್ರೆ ವಿಶ್ವ ತುಂಬಾ ಸಂಕೀರ್ಣವಾಗಿದೆ ಮತ್ತು ಸತತವಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅಸಾಧ್ಯವಾದಷ್ಟು ಅನನಿರೀಕ್ಷಿತವಾಗಿದೆ. ಹಾಗಾಗಿ ವಾಸ್ತವ ವ್ಯವಹಾರಿಕತೆ ಸಾರ್ವಜನಿಕ ನೀತಿಯಂತಿರಬೇಕು'' ಅನ್ನೋದನ್ನು Anatole Kaletsky ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಪ್ರಾಯೋಗಿಕವಾಗಬೇಕು, ಈ ಹೊಸ ಜಗತ್ತಿನಲ್ಲಿ ಹಳೆಯ ಸಾಧನಗಳಿಂದ ಪ್ರಯೋಜನವಿಲ್ಲ ಅನ್ನೋದನ್ನು ಅರ್ಥಮಾಡಿಕೊಳ್ಳಿ.

ಲೇಖಕರು: ಆಶುತೋಷ್​, ಎಎಪಿ ನಾಯಕ

ಅನುವಾದಕರು: ಭಾರತಿ ಭಟ್​