ಅಡ್ಡೊಡಾಕ್‍ನಲ್ಲಿ ಸಿಗ್ತಾರೆ ಮಕ್ಕಳ ಡಾಕ್ಟರ್ಸ್

ಟೀಮ್​​ ವೈ.ಎಸ್​​.

0

ನಿಮ್ಮ ಮಕ್ಕಳಿಗೆ ಖಾಯಿಲೆ ಬಂದಿದೆಯಾ? ಮಕ್ಕಳ ತಜ್ಞರನ್ನು ಸಂಪರ್ಕಿಸುವುದು ಕಷ್ಟವಾಗ್ತಿದೆಯಾ? ಡೋಂಟ್ ವರಿ. ಅಡ್ಡೋಡಾಕ್ ಇದ್ಯಲ್ಲಾ. ಬಹುತೇಕ ಪೋಷಕರಿಗೆ ಸದಾ ಬ್ಯುಸಿಯಾಗಿರುವ ವೈದ್ಯರನ್ನು ಸಂಪರ್ಕಿಸುವುದು, ಅಪಾಯಿಂಟ್‍ಮೆಂಟ್ ಪಡೆಯುವುದು ಮಕ್ಕಳಿಗೆ ಟ್ರೀಟ್‍ಮೆಂಟ್ ಕೊಡಿಸುವುದು ದೊಡ್ಡ ಸವಾಲು. ವೈದ್ಯರು ಕೂಡಾ ಅಷ್ಟೇ.. ಎಲ್ಲಾ ಗ್ರಾಹಕರಿಗೆ ತಮ್ಮ ಖಾಸಗಿ ಮೊಬೈಲ್ ಸಂಖ್ಯೆಯನ್ನೂ ಕೊಟ್ಟಿರೋದಿಲ್ಲ. ಇವೆಲ್ಲಾ ಸಮಸ್ಯೆಗಳಿಗೆ ಮುಕ್ತಿ ಹಾಡುತ್ತಿದೆ ಅಡ್ಡೋಡಾಕ್. ವೈದ್ಯರು ಮತ್ತು ಪೋಷಕರ ನಡುವಿನ ಸಂವಹನಕ್ಕೆ ವೇದಿಕೆ ಕಲ್ಪಿಸಿದೆ ಈ ನವ್ಯೋದ್ಯಮ.

ಮಕ್ಕಳಿಗೆ ಸಣ್ಣಪುಟ್ಟ ಖಾಯಿಲೆಗಳು ಬರುತ್ತಲೇ ಇರುತ್ತವೆ. ಚಿಕ್ಕಚಿಕ್ಕ ವಿಷಯಗಳಿಗೂ ಆಸ್ಪತ್ರೆಗೆ ಓಡಾಡುವುದು ಸಾಧ್ಯವಿಲ್ಲ. ಉದಾಹರಣೆಗೆ, ಮಗುವಿಗೆ ಚುಚ್ಚುಮದ್ದು ಕೊಟ್ಟಿರಲಾಗುತ್ತದೆ. ಅದಾದ ಬಳಿಕ ಮಗುವಿಗೆ ಜ್ವರ ಬಂದಿರುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರಿಗೆ ವೈದ್ಯರ ಸಲಹೆಯ ಅವಶ್ಯಕತೆ ಇರುತ್ತದೆ. ಆದರೆ, ವೈದ್ಯರು ದೂರವಾಣಿ ಸಂಪರ್ಕಕ್ಕೆ ಲಭ್ಯರಿರುವುದಿಲ್ಲ.

ಅಡ್ಡೋಡಾಕ್ ಮೂಲಕ ವೈದ್ಯರು ತಮ್ಮ ಗ್ರಾಹಕರ ಜೊತೆ ದೂರವಾಣಿ ಮತ್ತು ಸಂದೇಶ ಆಧರಿದ ಕನ್ಸಲ್ಟೇಷನ್ ನಡೆಸಬಹುದಾಗಿದೆ. ಇನ್ನು ಪೋಷಕರ ವಿಚಾರಕ್ಕೆ ಬರುವುದಾದರೆ, ಅವರಿಗೆ ಇದರಿಂದ ಲಾಭ ಅಧಿಕ. ಒಂದೇ ಕಡೆಯಲ್ಲಿ ಪೋಷಕರು ಖುದ್ದಾಗಿ ತಮ್ಮ ಮಗುವಿನ ಆರೋಗ್ಯ ಮಾಹಿತಿ ಕುರಿತ ದಾಖಲೆಗಳು ಮತ್ತು ವೈದ್ಯರನ್ನು ಏಕಕಾಲಕ್ಕೆ, ಬೇಕಾದಾಗಲೆಲ್ಲಾ ಪಡೆಯಬಹುದಾಗಿದೆ. ಸಧ್ಯಕ್ಕೆ ರಾಷ್ಟ್ರ ರಾಜಧಾನಿ ವಲಯದಲ್ಲಿ ಅಡ್ಡೋಡಾಕ್ ಸುಮಾರು 50 ವೈದ್ಯರಿಗೆ ಮತ್ತು 80,000ಕ್ಕೂ ಹೆಚ್ಚು ರೋಗಿಗಳಿಗೆ ನೆರವಾಗುತ್ತಿದೆ.

ಸಿದ್ದಾರ್ಥ್, ಸತ್ಯದೀಪ್ ಮತ್ತು ಸೌರಭ್, ಅಡ್ಡೋಡಾಕ್ ಸಂಸ್ಥಾಪಕರು. ಇವರು ಈ ಮುನ್ನ ಆಮ್‍ಡಾಕ್ಸ್, ಒರಾಕಲ್ ಮತ್ತು ಮೈಕ್ರೋಸಾಫ್ಟ್​​ಗಳಲ್ಲಿ ಕೆಲಸ ಮಾಡುತ್ತಿದ್ದರು. ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಇವರು ಒಬ್ಬರನ್ನೊಬ್ಬರು ಸಂಧಿಸಿದ್ದು ಕೂಡಾ ರೋಚಕ ಕತೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸ್ಟಾರ್ಟ್‍ಅಪ್ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಸತ್ಯದೀಪ್ ಬೆಂಗಳೂರಿಗೆ ತೆರಳಿದ್ದರು. ಕಾರ್ಯಕ್ರಮಕ್ಕೆ ಹೋಗುವ ವೇಳೆ ಅವರ ಬೈಕ್ ಕೈಕೊಟ್ಟಿತು. ಆಗ ತಮ್ಮ ಗೆಳೆಯ ಸೌರಭ್ ಅವರನ್ನು ಸಹಾಯಕ್ಕಾಗಿ ಕರೆದರು. ಇಬ್ಬರೂ ಕಾರ್ಯಕ್ರಮಕ್ಕೆ ತಲುಪುವ ಸಂದರ್ಭದಲ್ಲಿ ಸಿದ್ಧಾರ್ಥ್ ಎನ್ನುವ ವರು ತಮ್ಮ ನವ್ಯೋದ್ಯಮದ ಐಡಿಯಾ ಹಂಚಿಕೊಳ್ಳುತ್ತಿದ್ದರು. ಪ್ರಸೆಂಟೇಷನ್ ಬಳಿಕ ಇಬ್ಬರೂ ಸಿದ್ದಾರ್ಥ್ ಅವರನ್ನು ಭೇಟಿ ಮಾಡಿದರು. ಕೊನೆಗೆ ಮೂವರೂ ಜೊತೆಗೂಡಿ ಉದ್ಯಮ ಸ್ಥಾಪಿಸಲು ನಿರ್ಧರಿಸಿದರು.

ಸತ್ಯದೀಪ್ ಮತ್ತು ಸೌರಭ್ ಅವರು ಗುವಾಹಟಿಯ ಐಐಟಿಯಲ್ಲಿ ಪದವಿ ಪಡೆಯುತ್ತಿರುವಾಗಲೇ ಫೋಲ್ಡರ್‍ಗಳನ್ನು ಸಿಂಕ್ ಮಾಡಲು ಡ್ರಾಪ್‍ಬಾಕ್ಸ್ ಪ್ಲಗಿನ್ ತಯಾರಿಸಿದ್ದರು. ಅವರ ಈ ಉತ್ಪನ್ನದಿಂದಾಗಿ ಡ್ರಾಪ್‍ಬಾಕ್ಸ್​​ನಲ್ಲಿದ್ದ ಬಹುತೇಕ ಸಮಸ್ಯೆ ನಿವಾರಣೆಯಾಗಿತ್ತು. ಈ ಪ್ಲಗಿನ್ ಭಾರೀ ಯಶಸ್ಸು ಪಡೆಯಿತು. ಸುಮಾರು 5 ಲಕ್ಷ ಮಂದಿ ಇದನ್ನು ಡೌನ್‍ಲೋಡ್ ಮಾಡಿಕೊಂಡಿದ್ದರು. ದಿ ಹಿಂದು, ಲೈಫ್ ಹ್ಯಾಕರ್, ಮೇಕ್‍ಯೂಸ್‍ಆಫ್, ಪಿಸಿವರ್ಲ್ಡ್​​ ಮತ್ತು ಫಾಸ್ಟ್ ಕಂಪನಿಗಳಲ್ಲಿ ಪ್ರಚಾರ ಪಡೆಯಿತು. ಈ ಖ್ಯಾತಿ ಜೊತೆಗೆ ನವ್ಯೋದ್ಯಮ ಸ್ಥಾಪಿಸುವ ಹುಳವೂ ಇವರ ಮನಸ್ಸನ್ನು ಹೊಕ್ಕಿತು. ಅಡ್ಡೋಡಾಕ್ ಅವಕಾಶ ಸಿಕ್ಕಾಗ ಹಿಂದೆ ಮುಂದೆ ನೋಡದೆ ಸಹಭಾಗಿತ್ವಕ್ಕೆ ಒಪ್ಪಿಕೊಂಡರು.

ಆರೋಗ್ಯರಕ್ಷಣಾ ಕ್ಷೇತ್ರದಲ್ಲಿಅಡ್ಡೋಡಾಕ್ ಪ್ರಭಾವ ತುಂಬಾ ಇದೆ. "ಭಾರತದಲ್ಲಿ ಕೇವಲ 80 ಸಾವಿರ ಮಕ್ಕಳ ತಜ್ಞರಿದ್ದಾರೆ. ಆರೋಗ್ಯಸೇವೆ ನೀಡುವುದು ದೊಡ್ಡ ಸವಾಲಾಗಿದೆ. ಇದರಿಂದಾಗಿ ಮಕ್ಕಳ ಬೆಳವಣಿಗೆ ಮೇಲೆ ನಿಗಾ ಇಡಲು ಕಷ್ಟವಾಗುತ್ತಿದೆ. ಇದರಿಂದಾಗಿ ಥೈರಾಯ್ಡ್, ಹಾರ್ಮೋನ್ ಮತ್ತು ಅಪೌಷ್ಠಿಕತೆಯ ತೊಂದರೆಗಳು ಮಕ್ಕಳಲ್ಲಿ ಕಂಡುಬರುತ್ತಿವೆ. ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಪೈಕಿ 44% ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ವೈದ್ಯರ ತ್ವರಿತ ಸಂಪರ್ಕ, ಸಂಪೂರ್ಣ ಆರೋಗ್ಯ ಮಾಹಿತಿ ಲಭ್ಯವಾದರೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬಹುತೇಕ ತೊಂದರೆಗಳನ್ನು ನಿವಾರಿಸಬಹುದು. ಅಡ್ಡೋಡಾಕ್ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ," ಎನ್ನುತ್ತಾರೆ ಸಿದ್ದಾರ್ಥ್.

ಮಕ್ಕಳ ವೈದ್ಯರ ಕ್ಲಿನಿಕ್‍ಗಳಲ್ಲಿ ಅಡ್ಡೋಡಾಕ್ ವ್ಯವಸ್ಥೆಯನ್ನು ಅಳವಡಿಸಿದರೆ, ವೈದ್ಯರಿಗೆ ಮಕ್ಕಳ ಕಾಯಿಲೆಗೆ ಚಿಕಿತ್ಸೆ ನೀಡಲು ಹೆಚ್ಚಿನ ನೆರವು ದೊರಕುತ್ತದೆ. ದುಡಿಯುವ ಪೋಷಕರಿಗೆ ಪದೇ ಪದೇ ಕ್ಲಿನಿಕ್‍ಗಳಿಗೆ ಹೋಗುವುದು ಕಷ್ಟದ ಕೆಲಸವೇ. ಅಂತಹ ಪೋಷಕರಿಗೆ ಅಡ್ಡೊಡಾಕ್ ವೈದ್ಯರು, ದೂರವಾಣಿ ಮೂಲಕವೇ ಆರೋಗ್ಯ ಸಲಹೆಗಳನ್ನು ನೀಡುತ್ತಾರೆ.

ವೈದ್ಯರಿಗೆ ಮಾಡುವ ಎಲ್ಲಾ ಕರೆಗಳು ನಿರ್ದಿಷ್ಟ ದೂರವಾಣಿ ಸಂಖ್ಯೆ ಮೂಲಕವೇ ವೈದ್ಯರನ್ನು ತಲುಪುತ್ತವೆ. ಹೀಗಾಗಿ, ವೈದ್ಯರು ತಮ್ಮ ಖಾಸಗಿ ದೂರವಾಣಿ ಸಂಖ್ಯೆಯನ್ನು ರೋಗಿಗಳಿಗೆ ನೀಡುವ ಅಗತ್ಯ ಇರುವುದಿಲ್ಲ. ಅನಗತ್ಯವಾಗಿ ಬರುವಂತಹ ಕರೆಗಳಿಗೆ ಅಡ್ಡೋಡಾಕ್ ಅಂತ್ಯ ಹಾಡುವುದರಿಂದ ವೈದ್ಯರೂ ನಿಶ್ಚಿಂತೆಯಿಂದ ಇರಬಹುದು. ಇದೇ ವೇಳೆ ಪೋಷಕರಿಗೂ ಅಗತ್ಯ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ.

ಅಡ್ಡೋಡಾಕ್ ಸಂಪೂರ್ಣವಾಗಿ ಮೊಬೈಲ್ ಆಧರಿತ ತಂತ್ರಜ್ಞಾನವಾಗಿದೆ. ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿನ ಸಹಾಯಕರು/ ಸ್ವಾಗತಕಾರರೇ ಹೆಚ್ಚಾಗಿ ಕರೆಗಳನ್ನು ಸ್ವೀಕರಿಸುವುದರಿಂದ ಗ್ರಾಹಕ ಸ್ನೇಹಿಯಾಗಿ ಇದನ್ನು ರೂಪಿಸಲಾಗಿದೆ. ಬಹುತೇಕ ಸಹಾಯಕರು ಕಂಪ್ಯೂಟರ್ ಬಳಕೆ ಮಾಡುವುದಿಲ್ಲ. ಆದರೆ ಅವರೆಲ್ಲರೂ ಸ್ಮಾರ್ಟ್‍ಫೋನ್ ಮತ್ತು ವಾಟ್ಸ್​​ಅಪ್ ಬಳಸುತ್ತಾರೆ. ಈ ಕಾರಣದಿಂದಾಗಿ ನಾವು ಮೊಬೈಲ್ ಆಧರಿತ ತಂತ್ರಜ್ಞಾನವನ್ನು ರೂಪಿಸಿದ್ದೇವೆ ಎನ್ನುತ್ತಾರೆ ಸಿದ್ಧಾರ್ಥ್.

ಅಡ್ಡೋಡಾಕ್, ಬಿಡಬ್ಲ್ಯು ಆಕ್ಸಿಲೇಟರ್ ನ ಅಂಗವಾಗಿದೆ. ಇದು ಮಾರುಕಟ್ಟೆ ತಂತ್ರ ಮತ್ತು ವಹಿವಾಟು ವೃದ್ಧಿಸಲು ನೆರವಾಗುತ್ತಿದೆ. ಸಧ್ಯಕ್ಕೆ ಅಡ್ಡೋಡಾಕ್‍ನಲ್ಲಿ 6 ಜನರ ತಂಡವಿದೆ. ಈ ಪೈಕಿ ಮೂವರು ಸಂಸ್ಥಾಪಕರು ಎನ್ನುವುದು ವಿಶೇಷ.

# ನಿಮ್ಮ ಉದ್ಯಮಕ್ಕಾಗಿ ಶಕ್ತಿಶಾಲಿಯಾದ ತಂಡವೊಂದನ್ನು ರಚಿಸಿ, ನೀವು ಮಾಡುತ್ತಿರುವ ಉದ್ದಿಮೆಯಲ್ಲಿ ಅವರಿಗೂ ಬಲವಾದ ನಂಬಿಕೆ ಇರಬೇಕು.

# ನಿಮ್ಮ ಆರಂಭದ ಗ್ರಾಹಕರು, ಸಂಬಂಧ ಬೆಳೆಸುವುದಕ್ಕಾಗಿ ಬಂದಿರುತ್ತಾರೆ. ಅವರು ಮಾರುಕಟ್ಟೆ ಪ್ರತಿನಿಧಿಗಳಾಗಿರುವುದಿಲ್ಲ. ಆದರೆ ಈ ಗ್ರಾಹಕರೇ ನಿಮಗೆ ಎಲ್ಲವನ್ನೂ ತಂದುಕೊಡುತ್ತಾರೆ.

ಈ ಎರಡು ಅಂಶಗಳನ್ನು ನೆನಪಿಟ್ಟುಕೊಳ್ಳುವಂತೆ ಸಿದ್ಧಾರ್ಥ್ ಅವರು ನವ್ಯೋದ್ಯಮಿಗಳಿಗೆ ಸಲಹೆ ನೀಡುತ್ತಾರೆ.

Related Stories