ಹಿರಿಯ ಐಎಎಸ್​​ ಅಧಿಕಾರಿಯಿಂದ ಜೀವ ಜಲಕ್ಕಾಗಿ ಜಾಗೃತಿ

ಟೀಮ್​ ವೈ.ಎಸ್​. ಕನ್ನಡ

0

ಕರ್ನಾಟದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಅಂದುಕೊಂಡ ಹಾಗೆ ಮಳೆ ಕೂಡ ಕಾಣಿಸಿಕೊಂಡಿಲ್ಲ. ಭೂಮಿ ಸೂರ್ಯನ ಶಾಖಕ್ಕೆ ಬೆಂದು ಬರಡಾಗಿದೆ. ಆದರೆ ಕೆಲವೆಡೆ ಸಾಕಷ್ಟು ನೀರು ಪೋಲಾಗುತ್ತಿದೆ. ಆ ನಿಟ್ಟಿನಲ್ಲಿ ನೀರಿನ ಸಮಸ್ಯೆ ಕುರಿತು ನಾಗರೀಕರಲ್ಲಿ ಜಾಗೃತಿ ಮೂಡದಿದ್ದರೆ ಎಷ್ಟೇ ತಂತ್ರಜ್ಞಾನ ಅಭಿವೃದ್ಧಿಯಾದರೂ ಕೋಟಿ ಕೋಟಿ ಜನರ ದಾಹ ನೀಗಿಸಲು ಸಾಧ್ಯವಿಲ್ಲ. ಇದನ್ನರಿತ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಡಾ. ಶಾಲಿನಿ ರಜನೀಶ್ ತಮ್ಮಫೇಸ್​ಬು​ಕ್ ವಾಲ್​ನಲ್ಲಿ ಸಾಕಷ್ಟು ದಿನಗಳಿಂದ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇದನ್ನು ಓದಿ: ವಿ"ಶ್ವಾಸ"ವೇ "ವಿಶ್ವಾಸ್"

ಚಳುವಳಿಯಾಗದಿದ್ದರೆ ನೀರಿಗೆ ಉಳಿಗಾಲವಿಲ್ಲ..!

ಕೆರೆ, ಜಲ ಸಂಗ್ರಹ, ಅಂತರ್ಜಲವನ್ನು ರಕ್ಷಿಸುವಲ್ಲಿ ತಾವೇ ಮುಂದಾಳತ್ವ ವಹಿಸದೇ ಇದ್ದರೆ, ಇದು ಚಳುವಳಿಯಾಗಿ ಬದಲಾಗದಿದ್ದರೆ ಎಷ್ಟೇ ಕಾನೂನು ತಂದರೂ ನೀರಿನ ಬವಣೆ ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಡಾ. ಶಾಲಿನಿ ರಜನೀಶ್ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದಾರೆ.

ಐಎಎಸ್ ಅಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ನೇಮಕಾತಿಯಾದಗಿನಿಂದಲೂ ಅವರು ನೀರಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಲೇ ಬರುತ್ತಿದ್ದಾರೆ. ಶಾಲಿನಿ ರಜನೀಶ್​​  ಮೊದಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎ.ಸಿ.ಯಾಗಿದ್ದರು. ಆಗ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಎಷ್ಟು ಒಳ್ಳೆ ಕೆಲಸ ಮಾಡಬಹುದೊ ಅಷ್ಟನ್ನು ಮಾಡಿದ್ದರು. ಆದಾದ ನಂತರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿ.ಇ.ಓ. ಆಗಿ ಅಕಾರ ವಹಿಸಿಕೊಂಡಾಗ ಜಿಲ್ಲೆಯಾದ್ಯಂತ ಮಳೆ ನೀರನ್ನು ಶೇಖರಿಸುವ ಯೋಜನೆಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜೀವನದಿಗಳಿದ್ದರೂ ಕುಡಿಯುವ ನೀರಿಗೆ ಅಲ್ಲಿ ಆಹಾಕರವಿತ್ತು. ಇದನ್ನರಿತ ಶಾಲಿನಿರಜನೀಶ್​​ ಅವರು ಆರಂಭಿಸಿದ ಯೋಜನೆ ಅಲ್ಲಿ ಯಶಸ್ವಿಯಾಯಿತು. ಅಲ್ಲಿ ಯಶಸ್ವಿಯಾದ ಮೇಲೆ ಅದನ್ನು ಗುಲ್ಬರ್ಗಾ ಜಿಲ್ಲೆಯಲ್ಲಿ ಜಾರಿಗೆ ತಂದು ಅಲ್ಲೂ  ಜನರಿಗೆ ನೀರಿನ ಮಹತ್ವ ತಿಳಿಸಿ ಸಾಕಷ್ಟು ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿ ಅಧಿಕಾರಿಯಾದರು. ಸದ್ಯ ತುಮಕೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಇವರು ಅಲ್ಲಿನ ಅಮಾನಿ ಕೆರೆಗೆ ಮಳೆ ನೀರು ಸಂಗ್ರಹಣಾ ಯೋಜನೆ ಜಾರಿಗೆ ತಂದಿದ್ದಾರೆ. ಈ ಮಳೆಗಾಲಕ್ಕೆ ಸುಮಾರು 650 ಎಕರೆ ಜಾಗದಲ್ಲಿರುವ ಅಮಾನಿಕೆರೆ ತುಂಬಿಸುವುದಾಗಿ ಹೇಳುತ್ತಾರೆ ಶಾಲಿನಿ ರಜನೀಶ್.

" ಇತ್ತೀಚಿನ ದಿನಗಳಲ್ಲಿ ವಾಟ್ಸ್ಆ್ಯಪ್ ಮತ್ತು ಫೇಸ್​ಬುಕ್​ಗಳು ಸಾಕಷ್ಟು ಕೆಲಸ ಮಾಡುತ್ತಿವೆ. ಈ ಸಾಮಾಜಿಕ ತಾಣಗಳಲ್ಲಿ  ಸಮಯ ವ್ಯರ್ಥ ಮಾಡುವುದಕ್ಕಿಂತ ಇಂತಹ ಒಳ್ಳೆ ವಿಷಯಗಳನ್ನು ಶೇರ್ ಮಾಡಿಕೊಂಡರೆ ಜನರಲ್ಲಿ ಸಣ್ಣ ಮಟ್ಟದ ಬದಲಾವಣೆಗಳು ಆಗಬಹುದು ಎಂಬ ಉದ್ದೇಶದಿಂದ ಜಲ ಜಾಗೃತಿಯನ್ನು ನಾನು ಫೇಸ್​ಬುಕ್​​ ಮತ್ತು ವಾಟ್ಸ್ ಆ್ಯಪ್​ಗಳಲ್ಲಿ ಮಾಡುತ್ತಿದ್ದೇನೆ."
- ಡಾ. ಶಾಲಿನಿ ರಜನೀಶ್, ಐಎಎಸ್ ಅಧಿಕಾರಿ

ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಳ್ಳುವ ಬದಲು ದುರಾಸೆಯಿಂದ ಎಲ್ಲವನ್ನೂ ಬೇಕಾಬಿಟ್ಟಿ ಉಪಯೋಗಿಸಿದರೆ ಅದು ನಶಿಸಿ ಹೋಗುತ್ತವೆ. ಅಷ್ಟೇ ಅಲ್ಲದೇ ಫೇಸ್ ಬುಕ್, ವಾಟ್ಸ್​​ಆ್ಯಪ್ ಮೂಲಕ ಜನರನ್ನು ಹೆಚ್ಚು ತಲುಪಬಹುದು ಎಂಬ ಉದ್ದೇಶವು ಇದರಲ್ಲಿ ಅಡಗಿದೆ. ನೀರು ಮನುಷ್ಯನಿಗೆ ಬಹಳ ಮುಖ್ಯ. ಇದನ್ನು ಪ್ರತಿಯೊಬ್ಬರು ಅರಿಯಬೇಕು ಅದಕ್ಕಾಗಿ ಈ ರೀತಿಯ ಪೋಸ್ಟ್​​ಗಳನ್ನು ಶಾಲಿನಿ ರಜನೀಶ್ ತಮ್ಮ ಫೇಸ್​ಬು​​ಕ್ ವಾಲ್​ನಲ್ಲಿ ಶೇರ್ ಮಾಡುತ್ತಿದ್ದಾರೆ.

ಸಾವಿರಾರು ಜನ ವಿಕ್ಷೀಸಿದ ವಿಡಿಯೋ

ಶಾಲಿನಿ ರಜನೀಶ್ ಅವರು ಇತ್ತೀಚಿಗೆ ತಮ್ಮ ಫೇಸ್​ಬುಕ್​ನಲ್ಲಿ ಒಂದು ವಿಡಿಯೋ ಅಪ್​ಲೋಡ್ ಮಾಡಿದ್ದರು. ಆ ವಿಡಿಯೋದಲ್ಲಿ ಮಳೆ ಜೋರಾಗಿ ಬರುತ್ತಿರುವ ಸಮಯದಲ್ಲಿ ಎಲ್ಲರೂ ಛತ್ರಿ ಹಿಡಿದುಕೊಂಡು ಹೋಗುತ್ತಿರುತ್ತಾರೆ. ಒಬ್ಬರು ವಯಸ್ಸಾದವರು ಮಾತ್ರ ಛತ್ರಿಯನ್ನು ಉಲ್ಟಾ ಹಿಡಿದು ನೀರು ಶೇಖರಣೆ ಮಾಡಿ ನಡೆಯುತ್ತಾ ಹೋಗುತ್ತಾರೆ. ಅದನ್ನು ಕಂಡು ರಸ್ತೆಯಲ್ಲಿದ್ದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿನ ಬಕೆಟ್​​ಗಳಿಂದ ಮಳೆ ನೀರನ್ನು ತುಂಬಿಸಲು ಆರಂಭಿಸುತ್ತಾರೆ. ಮಳೆ ಬಂದಾಗ ಛತ್ರಿ ಹಿಡಿಯುವ ಬದಲು ನೀರನ್ನು ಸಂಗ್ರಹ ಮಾಡುವ ಕೆಲಸ ಮಾಡಿದರೆ, ನೀರಿನ ಕೊರತೆ ನೀಗಿಸಬಹುದು ಎಂಬ ಸಂದೇಶ ಇದರಲ್ಲಿದೆ .ಈ ವಿಡೀಯೋ ಹಾಕಿದ ನಾಲ್ಕೈದು ದಿನಗಳಲ್ಲಿ ಸಾವಿರಾರು ಜನರು ವೀಕ್ಷಿಸಿದ್ದಾರೆ. ಶಾಲಿನಿ ರಜನೀಶ್​ ಹಾಕಿದ ವಿಡೀಯೋಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ರೀತಿ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಸಾಕಷ್ಟು ಪೋಸ್ಟ್​​ಗಳನ್ನು ಹಾಕಿ ಜಾಗೃತಿ ಮೂಡಿಸುತ್ತಿದ್ದಾರೆ.

ಒಟ್ಟಿನಲ್ಲಿ ತಮ್ಮ ಇಲಾಖೆಗೆ ಸಂಬಂಧ ಪಡದಿದ್ದರೂ ಸಾಮಾಜಿಕ ಕಳಕಳಿಗಾಗಿ ನೀರು ಎಲ್ಲರಿಗೂ ಅವಶ್ಯಕವಾದ ವಸ್ತು ಎಂಬುದನ್ನು ಅರಿತು ಶಾಲಿನಿ ರಜನೀಶ್ ಈ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿಗಳು ಈ ಮಹಿಳಾ ಐಎಎಸ್​ ಅಧಿಕಾರಿ ಮಾಡಿರುವ ಕೆಲಸವನ್ನು ನೋಡಿ ತಮ್ಮ ಯೋಚನೆಗಳನ್ನು ಬದಲಿಸಿಕೊಳ್ಳಲಿ.

ಇದನ್ನು  ಓದಿ:

1. ಜೇಬಲ್ಲಿ ದುಡ್ಡಿಲ್ಲ...ಮೊಬೈಲ್​ನಲ್ಲಿ ಕರೆನ್ಸಿ ಇಲ್ಲ.. ಡೋಂಟ್​ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ

2. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

3. ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!


Related Stories

Stories by YourStory Kannada