ಲೂಧೀಯಾನಾದ ಸಿಂಗ್- ಇಂಧೋರ್​​ನಲ್ಲಿ ಟೆಲಿ ರಿಕ್ಷಾ ಕಿಂಗ್

ಟೀಮ್​​ ವೈ.ಎಸ್​​. ಕನ್ನಡ

ಲೂಧೀಯಾನಾದ ಸಿಂಗ್- ಇಂಧೋರ್​​ನಲ್ಲಿ ಟೆಲಿ ರಿಕ್ಷಾ ಕಿಂಗ್

Monday December 07, 2015,

3 min Read

ನಿಮ್ಮ ಕೈಯಲ್ಲೊಂದು ಸ್ಮಾರ್ಟ್​ಫೋನ್ ಇದ್ರೆ ಸಾಕು. ಬೆಂಗಳೂರು, ದೆಹಲಿ, ಕೊಲ್ಕತ್ತಾದಲ್ಲಿ ನೀವು ಇದ್ದಲ್ಲಿಗೆ ಬಂದು ಕ್ಯಾಬ್​​ಗಳು ಪಿಕ್ ಅಪ್ ಮಾಡಿಕೊಂಡು ನಿಮಗೆ ಬೇಕಾದ ಜಾಗಕ್ಕೆ ತಂದು ಡ್ರಾಪ್ ಮಾಡಿ ಬಿಡುತ್ತವೆ. ಒಲಾ, ಉಬರ್, ಟ್ಯಾಕ್ಸಿ ಫಾರ್ ಶ್ಯುರ್, ರೆಂಟ್ ಮೈ ಕಾರ್ ಎಲ್ಲವೂ ಇಂತಹ ಹೈ-ಫೈ ನಗರಗಳಲ್ಲಿ ಸುಲಭವಾಗಿ ಸಿಗುತ್ತವೆ. ಆದ್ರೆ 2ನೇ ಹಂತದ ನಗರಗಳ ಬಗ್ಗೆ ಚೂರು ಯೋಚನೆ ಮಾಡಿ. ಅಲ್ಲಿ ಆಟೊ ರಿಕ್ಷಾಗಳಿಗೆ ಪರದಾಟ ನಡೆಸಬೆಕಿದೆ. ಆದ್ರೆ ಇಂತಹ ಸಮಸ್ಯೆಯನ್ನು ಬಗೆಹರಿಸಲು ಪಣತೊಟ್ಟು ಯಶಸ್ವಿಯಾಗಿದ್ದಾರೆ ಲೂಧೀಯಾನಾದ ಕರಣ್​​ವೀರ್ ಸಿಂಗ್.

image


ಕರಣ್ ಇಂಜಿನಿಯರಿಂಗ್ ಮಾಡಲೆಂದು ಇಂಧೋರ್​​​ಗೆ ಬಂದ್ರು. ಅಲ್ಲಿ ಅವರು ಗಮನಿಸಿದ್ದು ಆಟೋ ರಿಕ್ಷಾ ಡ್ರೈವರ್​​ಗಳ ಏಕಸ್ವಾಮ್ಯತ್ಯ. ಜೊತೆಗೆ ಕ್ಯಾಬ್ ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ಪ್ರಯಾಣಿಕರ ಸುರಕ್ಷತೆಯ ಕೊರತೆ. ಈ ಸಮಸ್ಯೆ ಕುರಿತು ಮಾತನಾಡೋ ಕರಣ್ 

‘‘ಫೋನ್ ಮಾಡಿದ ತಕ್ಷಣ ಕ್ಯಾಬ್​​ಗಳು ಮನೆ ಬಳಿ ಬರುವಂತೆ ಆಟೋ ರಿಕ್ಷಾ ಯಾಕೆ ಬರಬಾರದು . ಅಸಂಘಟಿತ ಆಟೋ ಇಂಡಸ್ಟ್ರಿಯನ್ನ ಭಾರತದಲ್ಲಿ ಏಕೆ ಒಂದುಗೂಡಿಸಬಾರದೆಂಬ ಯೋಚನೆ ನನ್ನ ತಲೆಯಲ್ಲಿ ಓಡಾಡಿತು. ಹೀಗಾಗಿಯೇ ನಾನು ನನ್ನ ಯೋಜನೆಯನ್ನ ಕಾರ್ಯರೂಪಕ್ಕೆ ತರಲು ಎನ್ಎಂಐಎಂಎಸ್ ತೊರೆದೆ. ಯಾಕಂದ್ರೆ ಉದ್ಯಮಶೀಲತಾ ಪ್ರಯಾಣ ಆರಂಭಿಸಿದ ಬಳಿಕ ನನಗೆ ಪ್ರಪಂಚದ್ದೆಲ್ಲವೂ ದ್ವಿತೀಯವಾಗಿ ಕಾಣುತ್ತಿತ್ತು.’’

ಟೆಲಿರಿಕ್ಷಾ ಉದ್ಯಮವನ್ನ ಪ್ರಾರಂಭಿಸಿದಾಗ 50 ರಿಕ್ಷಾಗಳಿದ್ದವು. ಇದೀಗ 5000 ರಿಕ್ಷಾದವರೆಗೆ ವಿಸ್ತಾರಗೊಂಡಿದೆ. ಅಲ್ಲದೆ ಬೋಪಾಲ್ ಮತ್ತು ಉಜ್ಜೈನ್​​ನಲ್ಲಿ ಸೇವೆ ಒದಗಿಸಲು ಎಲ್ಲಾ ಸಿದ್ಧತೆಯಾಗಿದೆ.

ವೆಬ್​​ಸೈಟ್​​ಗೆ ಲಾಗ್ ಆನ್ ಆಗುವ ಮೂಲಕ ಅಥವಾ ಗೊತ್ತುಪಡಿಸಿರುವ ದೂರವಾಣಿ ಸಂಖ್ಯೆ, 9098098098ಗೆ ಕರೆ ಮಾಡುವ ಮೂಲಕ ಗ್ರಾಹಕರು ಆಟೋರಿಕ್ಷಾವನ್ನ ಬುಕ್ ಮಾಡಬಹುದು. ಒಂದು ಬಾರಿ ಗ್ರಾಹಕರು ವೆಬ್​​ಸೈಟ್​​ನಲ್ಲಿ ಪ್ರಯಾಣದ ಸಮಯ, ಪಿಕ್ ಅಂಡ್ ಡ್ರಾಪ್ ಸ್ಥಳವನ್ನ ತುಂಬಿದ ಬಳಿಕ, ಮೊದಲು ಯಾವ ಡ್ರೈವರ್ ಈ ಮನವಿಯನ್ನ ಸ್ವೀಕರಿಸುತ್ತಾರೊ ಅವರೇ ಗ್ರಾಹಕರಿಗೆ ಪ್ರಯಾಣದ ಅಂದಾಜು ಸಮಯ ಹಾಗೂ ಶುಲ್ಕದ ಕುರಿತು ಪೂರ್ವ ಮಾಹಿತಿ ನೀಡುತ್ತಾರೆ. ಗ್ರಾಹಕರ ಒಪ್ಪಿಗೆಯ ಮೇರೆಗೆ ಪ್ರಯಾಣದ ಖಚಿತತೆಯ ಕುರಿತಾದ ಸಂದೇಶ ಕಳುಹಿಸಲಾಗುತ್ತೆ. ಪ್ರಯಾಣದ ಬಳಿಕವಷ್ಟೇ ಗ್ರಾಹಕರು ಡ್ರೈವರ್​​​ಗೆ ಹಣ ಪಾವತಿಸಿ ರಶೀದಿ ಪಡೆಯಬಹುದು.

image


ಆದ್ರೂ, ಇದನ್ನೆಲ್ಲಾ ನೋಡಿದ್ರೆ ತುಂಬಾ ಸರಳವಾಗಿ ಕಾಣಬಹುದು, ಆದ್ರೆ ಈ ಮಾದರಿ ಅನುಷ್ಠಾನದಲ್ಲಿ ಕರಣ್​​ಗೆ ಹಲವಾರು ಸವಾಲುಗಳು ಎದುರಾದವು.

‘‘ನಾವು ಸಮೀಕ್ಷೆ ನಡೆಸಿದ 600 ಡ್ರೈವರ್​​ಗಳಲ್ಲಿ, ಕೇವಲ 100 ಮಂದಿ ಮಾತ್ರ ನಮ್ಮೊಂದಿಗೆ ಕೈ ಜೋಡಿಸಲು ಒಪ್ಪಿದ್ರು. ಹೀಗಾಗಿ ಈ 100 ಡ್ರೈವರ್​​ಗಳನ್ನ ಸಂಘಟಿಸಿಲು ಮೀಟಿಂಗ್ ನಡೆಸಿದ್ವು. ಬಂಡವಾಳದ ಕೊರತೆ ನಡುವೆ ಸಾಕಷ್ಟು ತೊಂದ್ರೆ ಅನುಭವಿಸಬೇಕಾಯ್ತು. ಮೀಟಿಂಗ್​​ನಲ್ಲಿ ಯಾವುದೇ ಡ್ರೈವರ್ ನಮ್ಮ ಯೋಜನೆಯನ್ನ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಇದ್ರಿಂದಾಗಿ ನಮಗೆ ಮೊದಲ ಹಂತದಲ್ಲೇ ಹಿನ್ನಡೆಯಾಯ್ತು. ಆ ಒಂದು ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನವಾಗಿತ್ತು . ಇಷ್ಟಾದ್ರೂ ನನ್ನ ಆತ್ಮವಿಶ್ವಾಸ ತಗ್ಗಲಿಲ್ಲ. ಮತ್ತೆ ಆ ಡ್ರೈವರ್​​ಗಳ ಮನವೊಲಿಸಲು ಪ್ರಯತ್ನ ನಡೆಸಿದೆ. ಕೆಲವರು ನಮ್ಮನ್ನ ಗುರುತಿಸಲು ನಿರಾಕರಿಸಿದ್ರೆ, ಮತ್ತೆ ಕೆಲವರಲ್ಲಿ ಮೊದಲಿದ್ದ ಆಸಕ್ತಿ ತೋರಲಿಲ್ಲ. ಆದಾಗ್ಯೂ 50 ಚಾಲಕರು ಉತ್ಸುಕರಾಗಿದ್ದರು. ಅವರನ್ನ ಜೊತೆಗೂಡಿಸಿ ನಾವು ಟೆಲಿರಿಕ್ಷಾ ಸರ್ವಿಸ್ ಪ್ರಾರಂಭಿಸಿದೆವು. ಆದ್ರೆ ಆರಂಭದಿಂದಲೂ ಹಣಕಾಸಿನ ಕೊರತೆ ನಮಗೆ ತಡೆಯೊಡ್ಡುತ್ತಿತ್ತು.

ಇದ್ರ ಜೊತೆಗೆ ನಮಗೆ ಸವಾಲೆನಿಸಿದ್ದು ಟೆಲಿರಿಕ್ಷಾ ಕುರಿತು ಗ್ರಾಹಕರ ಮನವೊಲಿಸುವುದು. ಗ್ರಾಹಕರ ಅನುಕೂಲಕ್ಕೆಂದು ಸೇವೆ ಆರಂಭಿಸಿದ್ದೇವೆ ಅನ್ನೋದರ ಕುರಿತು ಪ್ರಯಾಣಿಕರಿಗೆ ಮನದಟ್ಟು ಮಾಡೋದು ಡ್ರೈವರ್​​ಗಳಿಗೆ ಕಷ್ಟವಾಗುತ್ತಿತ್ತು. ಟೆಲಿರಿಕ್ಷಾ ಕುರಿತು ಗ್ರಾಹಕರಿಗೆ ಹೇಳಿದ್ರೆ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ ಇದ್ರಿಂದ ನಿಮಗೆ ಏನು ಸಿಗುತ್ತೆ..? ಅಥವಾ ನಾವು ನಿಮಗೆ ಏನು ಕೊಡಬೇಕು ಎಂಬುದು. ಅನುಮಾನದಿಂದ ನೋಡುತ್ತಿದ್ದ ಗ್ರಾಹಕರು ಬರುಬರುತ್ತಾ ನಮ್ಮ ಸೇವೆಯನ್ನ ಕಂಡು ಟೆಲಿರಿಕ್ಷಾ ಮೇಲೆ ನಂಬಿಕೆ ಇಟ್ಟರು. ನಾವೀಗ ದೊಡ್ಡ ಕುಟುಂಬ .’’

ಇನ್ನು ನಿಶ್ಚಿತ ದರವನ್ನ ನಿಗದಿ ಪಡಿಸುವುದು ಹಾಗೂ ಮೀಟರ್ ಮೂಲಕ ಆಟೋರಿಕ್ಷಾ ಚಲಾಯಿಸುವಂತೆ ಡ್ರೈವರ್​​ಗಳಿಗೆ ಹೇಳುವುದು ಕಷ್ಟವಾಗಿತ್ತು. ಯಾಕಂದ್ರೆ ಸರ್ಕಾರಿ ದರಗಳು ಬಹಳ ಕಡಿಮೆ ಇತ್ತು. ಹೀಗಾಗಿ ಡ್ರೈವರ್​​ಗಳು ಅನ್ಯಾಯದ ದರಗಳ ಹಿಂದೆ ಬಿದ್ದಿದ್ರು. ಹೀಗಾಗಿ ಡ್ರೈವರ್​​ಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಅನೇಕ ಮೀಟಿಂಗ್ ನಡೆಸಲಾಯ್ತು. ಅಂತಿಮವಾಗಿ ಒಂದು ದರಕ್ಕೆ ಒಮ್ಮತ ಅಭಿಪ್ರಾಯ ಮೂಡಿ ಬಂತು. ಆದ್ರೆ ಗ್ರಾಹಕರ ಚೌಕಾಸಿ ಪದ್ದತಿಯನ್ನ ಬದಲಾಯಿಸಲು ಕಷ್ಟವಾಯಿತು. ಅಗಾಗಲೇ ನಾವು ಕಡಿಮೆ ದರದಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ವು, ಅದೂ ಕೂಡ ಮೀಟರ್ ಮೂಲಕ. ಹೀಗಿದ್ರೂ ಮೀಟರ್​ನ ದುಡ್ಡು ಕೊಡದೇ ಗ್ರಾಹಕರು ಚೌಕಾಸಿ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ನಮ್ಮ ಸೇವೆಯನ್ನ ಗಮನಿಸಿದ ಗ್ರಾಹಕರು ಚೌಕಾಸಿ ಮಾಡುವುದನ್ನ ಕಡಿಮೆ ಮಾಡಿದ್ದು ನಮಗೆ ತೃಪ್ತಿ ತಂದಿತು ಅಂತಾರೆ ಕರಣ್​​​​

image


ಪ್ರಯಾಣಿಕರ ಸುರಕ್ಷತೆಗೆ ಇಲ್ಲಿ ಪ್ರಮುಖ ಆದ್ಯತೆ ನೀಡಲಾಗಿದೆ. ಪ್ರತಿ ಟೆಲಿ ರಿಕ್ಷಾದಲ್ಲೂ ಜಿಪಿಎಸ್ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಈ ಮೂಲಕ ಯಾವುದೇ ತುರ್ತು ಸಂದರ್ಭದಲ್ಲಿ ರಿಕ್ಷಾವಿರುವ ಸ್ಥಳ ಪತ್ತೆಹಚ್ಚಬಹುದು. ಇಷ್ಟಲ್ಲದೆ ಜಿಪಿಎಸ್ ಕುರಿತಾದ ಮಾಹಿತಿಯನ್ನ ಡ್ರೈವರ್​​ಗಳಿಗೆ ತರಬೇತಿ ನೀಡುವ ಮೂಲಕ ಹೇಳಿಕೊಡಲಾಗುತ್ತೆ. ಈ ಮೂಲಕ ಪ್ರತಿನಿತ್ಯವೂ 500 ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ.

ಪ್ರಸ್ತುತ ಟೆಲಿರಿಕ್ಷಾ ಆದಾಯದ ಪ್ರಮುಖ ಮೂಲ ಆಯೋಗಗಳು ಹಾಗೂ ಪ್ರಿಪೇಯ್ಡ್​​​ ಬೂತ್​​ಗಳು. ಅಷ್ಟಲ್ಲದೆ ರಿಯಲ್ ಎಸ್ಟೇಟ್ ಮೂಲಕವೂ ಆದಾಯ ಕಲೆಹಾಕಲಾಗುತ್ತೆ. ನೈಟ್ ಕ್ಲಬ್ ಸೇರಿದಂತೆ , ಟ್ರಾವೆಲ್ ಪಾರ್ಟ್​ನರ್ಸ್ ಸಂಘಟನೆಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಆದಾಯದ ಮೂಲ ಹೆಚ್ಚಿಸಿಕೊಂಡಿದೆ.

ಟೆಲಿರಿಕ್ಷಾದ ಭವಿಷ್ಯದ ಕಾರ್ಯಯೋಜನೆಗಳ ಕುರಿತು ಮಾತನಾಡುವ ಕರಣ್ ‘‘ಮುಂದಿನ 5 ವರ್ಷಗಳಲ್ಲಿ ಇನಷ್ಟು ನಗರಗಳಲ್ಲಿ ಟೆಲಿರಿಕ್ಷಾವನ್ನ ವಿಸ್ತರಿಸುವುದು ಮತ್ತು ಸೇವೆಯನ್ನ ಮತ್ತಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ. ಇಂಧೋರ್​​ನಲ್ಲಿ ನಾವು ಏನನ್ನ ಮಾಡಿದೆವೋ ಅದನ್ನ ಇತರೇ ನಗರಗಳಲ್ಲೂ ಮಾಡುವ ಇಚ್ಚೆ ಹೊಂದಿದ್ದೇವೆ. ಅಂತೆಯೇ ನಗರದ ಕ್ರಿಯಾಶೀಲತೆಗೆ ಅನುಗುಣವಾಗಿ ಸೇವೆ ನೀಡಬೇಕೆಂಬ ಆಕಾಂಕ್ಷೆ ಹೊಂದಿದ್ದೇವೆ’’

ಶತಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದ ಸಣ್ಣ ಸಣ್ಣ ನಗರಗಳಲ್ಲಿ ಈ ರೀತಿಯಾದ ಸೇವೆಗಳು ಹೊರಬರುತ್ತಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಕರಣ್​​ವೀರ್ ಸಿಂಗ್ ತಮ್ಮ ಹೊಸ ನಾವಿನ್ಯತೆಯ ಮೂಲಕ ಯಶಸ್ಸು ಸಾಧಿಸಿದ್ದಾರೆ. ಬಲಿಷ್ಠ ಭಾರತ ನಿರ್ಮಾಣವಾಗಲು ಇಂತಹ ದೊಡ್ಡ ಆಲೋಚನೆಗಳು ಹಾಗೂ ಆವಿಷ್ಕಾರ ಅವಶ್ಯಕವಾಗಿದೆ.

ಲೇಖಕರು: ಆದಿತ್ಯ ಭೂಷಣ್​​ ದ್ವಿವೇದಿ

ಅನುವಾದಕರು: ಎಪಿಎಸ್