ವಿವಾದದಿಂದ ಲಾಭವಾಗಿದ್ದು ಪ್ರವಾಸಿ ತಾಣಗಳಿಗೆ..!

ವಿಸ್ಮಯ

ವಿವಾದದಿಂದ ಲಾಭವಾಗಿದ್ದು ಪ್ರವಾಸಿ ತಾಣಗಳಿಗೆ..!

Wednesday December 09, 2015,

2 min Read

ಅರಮನೆ ಅಂದ್ರೆ ಮೊದಲಿಗೆ ನೆನಪಾಗೋದೇ ಮೈಸೂರು ಅರಮನೆ. ಆದ್ರೆ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಒಂದು ಅರಮನೆ ಇದೆ. ಕೆ. ಆರ್ ಮಾರ್ಕೆಟ್ ಅಂದರೆ ಕೇವಲ ಕಸದ ರಾಶಿ, ಗಬ್ಬು ವಾಸನೆ, ವಾಹನ ದಟ್ಟಣೆ ಇಂಥವೇ ಚಿತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಆದರೆ ಇದೇ ಕೆ.ಆರ್.ಮಾರುಕಟ್ಟೆ ಸಮೀಪ ಇರೋ ಒಂದು ಜಾಗ ದಣಿದ ಮನಸ್ಸಿಗೆ ಮುದ ನೀಡುತ್ತಾ, ಬೇಸತ್ತ ಕಣ್ಣಿಗೆ ತಂಪನೆರೆಯುವ ತಾಣವೊಂದಿದೆ. ಅದುವೇ ಟಿಪ್ಪುವಿನ ಬೇಸಿಗೆ ಅರಮನೆ. ಇದೀಗ ಇತಿಹಾಸದ ಗತವೈಭವ ಸಾರ್ತಿದೆ.

image


ಅರಮನೆ ಒಳ ಪ್ರವೇಶಸುತ್ತಿದ್ದಂತೆ ಹಚ್ಚ ಹಸಿರು ಹುಲ್ಲುಹಾಸು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಚಿತ್ತಾಕರ್ಷಕ ಅಂತಸ್ತಿನ ಸ್ತಂಭಗಳು, ಅರಮನೆ ಒಳಗೆ ಬೀಸೋ ತಣ್ಣನೆ ಗಾಳಿ, ಹೊರಗಿನ ಗಿಜಿಗುಡುವ ಪರಿಸರವನ್ನು ತಾತ್ಕಾಲಿಕವಾಗಿ ಮರೆಸುತ್ತದೆ. ಅಂದಹಾಗೆ ಇದು ಕೃಷ್ಣರಾಜ ಮಾರುಕಟ್ಟೆ ಕೂಗಳತೆ ದೂರದಲ್ಲಿರೋ ಟಿಪ್ಪುವಿನ ಬೇಸಿಗೆ ಅರಮನೆ. ಸರಳತೆಯಲ್ಲಿಯೇ ಸೌಂದರ್ಯವನ್ನು ಮೈಗೂಡಿಸಿಕೊಂಡಿದೆ. ಹೆಚ್ಚು ಆಡಂಬರವಿಲ್ಲದೇ ಸೂಕ್ಷ್ಮ ಕರಕುಶಲ ಕೆತ್ತನೆಗಳಿಂದ ಕೂಡಿರುವ ಟಿಪ್ಪುವಿನ ಮತ್ತೊಂದು ಜೀವನ ಶೈಲಿಯನ್ನು ಪರಿಚಯಿಸುತ್ತಿದೆ. ಟಿಪ್ಪುವಿನ ಬೇಸಿಗೆ ಅರಮನೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ 1781 ರಿಂದ 1791ರ ನಡುವೆ ಈ ಅರಮನೆ ಕಟ್ಟಿಸಿದರೆನ್ನಲಾಗಿದೆ. ಮರ ಮತ್ತು ಮಣ್ಣನ್ನು ಬಳಸಿ ಕಟ್ಟಲಾದ ಈ ಅರಮನೆಯನ್ನು ಬೇಸಿಗೆ ಸಮಯದಲ್ಲಿ ವಿಶ್ರಾಂತಿಗಾಗಿ ಬಳಸಲಾಗ್ತಿತ್ತು ಎಂದು ಐತಿಹಾಸಿಕ ಉಲ್ಲೇಖಗಳಿವೆ. ಸುಂದರ ಮರದ ಕೆತ್ತನೆಯಿಂದ ಕೂಡಿದ ಕಂದು ಬಣ್ಣದ ಕಂಬಗಳಿರುವ ಅರಮನೆಯನ್ನು ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕಾಲ ಕಾಲಕ್ಕೆ ನವೀಕರಣ ಮಾಡಲಾಗ್ತಿರೋ ಕಾರಣ ಅರಮನೆಯ ಸೌಂದರ್ಯ ಇಮ್ಮಡಿಗೊಂಡಿದೆ..

image


ಟಿಪ್ಪು ಸುಲ್ತಾನ್‍ನ ಜೀವನ ಚರಿತ್ರೆಯನ್ನು ಬಿಂಬಿಸೋ ಅನೇಕ ರೇಖಾ ಚಿತ್ರಗಳನ್ನು ಇಲ್ಲಿ ಕಾಣ್ಬೋದಾಗಿದೆ. ಪ್ರವಾಸಿಗರಿಗೆ ಅರಮನೆಯ ಸೊಬಗನ್ನು ಸವಿಯೋದ್ರ ಜತೆಗೆ ಇತಿಹಾಸವನ್ನು ತಿಳಿದುಕೊಳ್ಳೋ ಅವಕಾಶವಿದೆ. ಪುಟ್ಟದಾಗಿರೋ ಈ ಅರಮನೆ ಬೇರೆ ಅರಮನೆಯಷ್ಟು ಹೆಸ್ರು ಮಾಡದೇ ಇದ್ರೂ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೇನೂ ಕೊರತೆಯಿಲ್ಲ. ಜೊತೆಗೆ ಆಗಾಗ ಇಲ್ಲಿ ಸಂಗೀತ ಗೋಷ್ಠಿ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹೀಗಾಗಿ ಈ ಅರಮನೆ ಸಿಲಿಕಾನ್ ಸಿಟಿಯ ಪ್ರಮುಖ ಪ್ರವಾಸಿ ಕೇಂದ್ರ ಎನಿಸಿಕೊಂಡಿದೆ.

ಇಲ್ಲಿ ಭೇಟಿ ಕೊಡುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಕೇವಲ 5 ರೂಪಾಯಿ ಮಾತ್ರ.. ಹೀಗಾಗಿ ಇಲ್ಲಿನ ಪ್ರಶಾಂತ ವಾತಾವರಣವನ್ನು ಆಹ್ಲಾಧಿಸಲು ಹಾಗೂ ಮನಸ್ಸಿನ ನೆಮ್ಮದಿಗಾಗಿ ಬರೋವರೇ ಹೆಚ್ಚು. ರಾಜ್ಯದ ಪ್ರವಾಸಿತಾಣಗಳ ಪಟ್ಟಿಯಲ್ಲಿ ಟಿಪ್ಪುವಿನ ಈ ಬೇಸಿಗೆ ಅರಮನೆಯನ್ನೂ ಸೇರಿಸಲಾಗಿದೆÉ. ದೇಶ ವಿದೇಶಗಳಿಂದ ಈ ಟಿಪ್ಪು ಅರಮನೆಯನ್ನು ನೋಡಲು ಪ್ರವಾಸಿಗರು ಬರುತ್ತಾರೆ. ದಿನದಿಂದ ದಿನಕ್ಕೆ ಬರೋ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಜನರನ್ನು ಆಕರ್ಷಿಸುತ್ತಿದೆ.

image


ಟಿಪ್ಪು ಜಯಂತಿ ನಂತರ ಇತ್ತೀಚಿಗೆ ಹೆಚ್ಚು ಪ್ರವಾಸಿಗರು ಟಿಪ್ಪುವಿನ ಬೇಸಿಗೆ ಅರಮನೆಯನ್ನು ನೋಡಲು ಭೇಟಿ ನೀಡುತ್ತಿದಾರೆ. ಈಗ ಚಳಿಗಾಲ ಇರೋದ್ರಿಂದ ಅಲ್ಲಿನ ಪ್ರಶಾಂತ ವಾತಾವರಣದ ಅನುಭೂತಿ ಜೊತೆಗೆ ಹಿತಕರ ಗಾಳಿಯ ಸೇವನೆಗೆ ಹೆಚ್ಚು ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಶಾಂತಿ ನೆಮ್ಮದಿ ನೀಡುವ ಆಕರ್ಷಣೆಯ ಕೇಂದ್ರವಾಗಿದೆ. ಜೊತೆಗೆ ಹೆಚ್ಚು ಲಾಭವನ್ನು ಗಳಿಸುವ ಪ್ರವಾಸಿತಾಣವಾಗಿಯೂ ಗುರುತಿಸಿಕೊಳ್ಳುತ್ತಿದೆ. ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವ್ಯಾಪಾರ-ವಾಹಿವಾಟಿನ ಜೊತೆಗೆ ಸದಾ ಗಿಜುಗುಡುವ ಪ್ರದೇಶದ ಮಧ್ಯಭಾಗದಲ್ಲಿ ಇರೋ, ಮೈಸೂರು ಹುಲಿ ಟಿಪ್ಪು ಸುಲ್ತಾನ್‍ನ ಭವ್ಯ ಅರಮನೆಗೆ ನೀವು ಒಮ್ಮೆ ಹೋಗಿ ಬನ್ನಿ.

    Share on
    close