ಬದುಕಲು ಕಲಿಸಿದ ನೇಹಾ ಬಗಾರಿಯಾ..!

ಟೀಮ್​​ ವೈ.ಎಸ್​​.

ಬದುಕಲು ಕಲಿಸಿದ ನೇಹಾ ಬಗಾರಿಯಾ..!

Thursday October 01, 2015,

2 min Read

ಮಹಿಳೆ ಸ್ವಾವಲಂಬಿ ಆಗಬೇಕು ಅನ್ನೋ ಕೂಗು ಆಗಾಗ ಕೇಳಿ ಬರ್ತಾನೇ ಇರುತ್ತೆ. ಆದ್ರೆ ಸಂಸಾರ ಸಾಗರದಲ್ಲಿ ಬಿದ್ದ ಅದೆಷ್ಟೋ ಸ್ತ್ರೀಯರು ಮನೆ, ಗಂಡ, ಮಕ್ಕಳು ಅಂತಾ ತಮ್ಮ ವೃತ್ತಿ ಜೀವನವನ್ನೇ ಮರೆತು ಹೋಗ್ತಾರೆ. ಮಕ್ಕಳನ್ನ ಒಳ್ಳೆಯ ಪ್ರಜೆಯನ್ನಾಗಿ ಮಾಡಬೇಕೆಂಬ ಹಂಬಲದಲ್ಲಿ ವೃತ್ತಿಯನ್ನು ಬದಿಗೊತ್ತಿ ಇಡೀ ಜೀವನವನ್ನೇ ಕರುಳ ಕುಡಿಗಳಿಗಾಗಿ ಮುಡಿಪಾಗಿಡುವವರಿಗಂತೂ ಲೆಕ್ಕವಿಲ್ಲ. ಇಂಥ ಮಹಿಳೆಯರಿಗೆಲ್ಲ ರೋಲ್ ಮಾಡೆಲ್ ಅಂದ್ರೆ ನೇಹಾ ಬಗಾರಿಯಾ. ನೇಹಾ ಕೂಡ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ವೃತ್ತಿಯನ್ನೇ ಬದಿಗೊತ್ತಿದ್ದರು. ಒಮ್ಮೆ ಬಾಲಿಯಲ್ಲಿ ನಡೆದ ಬೀಚ್ ಮದುವೆಗೆ ಪತಿ ಹಾಗೂ ಮಕ್ಕಳೊಂದಿಗೆ ತೆರಳಿದ್ದ ನೇಹಾಗೆ ಮತ್ತೆ ಕೆಲಸಕ್ಕೆ ಸೇರುವ ಇಚ್ಛೆ ಉತ್ಕಟವಾಯ್ತು. ಮೂರೂವರೆ ವರ್ಷದ ಹಿರಿಯ ಮಗ ಹಾಗೂ 6 ತಿಂಗಳ ಕಿರಿಯ ಪುತ್ರನ ಆಟ ತುಂಟಾಟ ನೋಡುತ್ತಲೇ ನೇಹಾ ಮತ್ತೆ ವೃತ್ತಿ ಜೀವನವನ್ನ ಮುಂದುವರಿಸುವ ನಿರ್ಧಾರ ಮಾಡಿದ್ರು.

ಮುಂಬೈ ಮೂಲದ ನೇಹಾ ಭಾರತದಲ್ಲೇ 12ನೇ ತರಗತಿ ಮುಗಿಸಿದ್ದರು. ಆದರೂ ಪೆನ್ಸಿಲ್ವೇನಿಯಾ ವಿವಿಯಲ್ಲಿ ಮತ್ತೊಮ್ಮೆ ಪಿಯುಸಿ ಓದಬೇಕಾಯ್ತು. ಫೈನಾನ್ಸ್ ಹಾಗೂ ಬ್ಯುಸಿನೆಸ್ ಸ್ಟಡೀಸ್‍ನಲ್ಲಿ ಉನ್ನತ ವ್ಯಾಸಂಗ ಮಾಡಿ ಭಾರತಕ್ಕೆ ಮರಳಿದ್ರು. ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಯಾಗಿದ್ದ ನೇಹಾ 5 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟಿದ್ದಾರೆ. ನಂತರ ಬೆಂಗಳೂರು ಮೂಲದ ಉದ್ಯಮಿಯನ್ನು ವರಿಸಿದ ನೇಹಾ ಮುಂಬೈನಿಂದ ಸಿಲಿಕಾನ್ ಸಿಟಿಗೆ ಶಿಫ್ಟ್ ಆದ್ರು. ಇಲ್ಲೇ ತಮ್ಮ ಪತಿಯ ಔಷಧೋಪಕರಣ ಉತ್ಪಾದನೆಯ ಉದ್ಯಮಕ್ಕೆ ಸಾಥ್ ಕೊಟ್ಟರು. ಮೊದಲು ಪ್ಯಾರಗಾನ್ ಕಂಪನಿಯಲ್ಲೂ ಕೆಲಸ ಮಾಡಿದ್ದ ನೇಹಾ ಅವರಿಗೆ ಅಲ್ಲಿನ ಸಹೋದ್ಯೋಗಿಗಳಿಂದ ಹೇಳಿಕೊಳ್ಳುವಂಥ ಬೆಂಬಲವೇನೂ ಸಿಕ್ಕಿರಲಿಲ್ಲ. ಆದ್ರೆ ಪತಿಯ ಸಂಸ್ಥೆಯಲ್ಲಿ ಎಲ್ಲ ಜವಾಬ್ಧಾರಿಯನ್ನೂ ನೇಹಾ ಹೊತ್ತುಕೊಂಡಿದ್ರು. ಕೆಮ್‍ವೆಲ್ ಕಂಪನಿಯ ಮಾರ್ಕೆಟಿಂಗ್ ತಂತ್ರ ಹಾಗೂ ಲಾಭ ನಷ್ಟಗಳ ಲೆಕ್ಕಾಚಾರ ಎಲ್ಲವನ್ನೂ ನೇಹಾ ನಿಭಾಯಿಸುತ್ತಿದ್ದರು. 2009ರಲ್ಲಿ ತಾಯಿಯಾಗಿ ಬಡ್ತಿ ಪಡೆದ ನೇಹಾ ಮಗುವಿಗೆ 6 ತಿಂಗಳಾದ ಮೇಲೆ ಕೆಲಸಕ್ಕೆ ಮರಳುವ ನಿರ್ಧಾರ ಮಾಡಿದ್ದರು. ಆದ್ರೆ ಪುಟ್ಟ ಕಂದನನ್ನ ಬಿಟ್ಟು ಹೋಗಲಾಗದೇ ಕೆಲಸಕ್ಕೇ ಗುಡ್‍ಬೈ ಹೇಳಿದ್ರು. ಮಗನಿಗೆ ಮೂರು ವರ್ಷ ತುಂಬುವಷ್ಟರಲ್ಲಿ ನೇಹಾರ ಎರಡನೇ ಮಗುವೂ ಭುವಿಗೆ ಬಂದಿತ್ತು.

image


ಉದ್ಯಮದ ಉತ್ಸಾಹ ಹೃದಯಲ್ಲಿತ್ತು..

ಎರಡನೇ ಬಾರಿ ಗರ್ಭಿಣಿಯಾಗಿದ್ದಾಗ್ಲೇ ಹಳೆ ಸ್ನೇಹಿತೆಯೊಬ್ಬಳು ನೇಹಾರಿಗೆ ಉತ್ತಮ ಸಲಹೆಯನ್ನೇ ಕೊಟ್ಟಿದ್ದಳು. ಮನೆ ಮಕ್ಕಳ ಜೊತೆ ಜೊತೆಗೆ ಕೆಲಸಕ್ಕೂ ಹೋಗಬಹುದು ಅನ್ನೋದನ್ನ ಮನವರಿಕೆ ಮಾಡಿಕೊಟ್ಟಿದ್ಲು. ಈ ವಿಚಾರದಲ್ಲಿ ಅಮೆರಿಕದಲ್ಲಿದ್ದ ಸಂಬಂಧಿ ಕೂಡ ನೇಹಾಗೆ ಮಾದರಿಯಾಗಿದ್ದು ಸುಳ್ಳಲ್ಲ. ಕೂಡಲೇ ಪತಿಯೊಂದಿಗೆ ಚರ್ಚಿಸಿದ ನೇಹಾ ಬಗಾರಿಯಾ ಮುಂಬೈನಿಂದ ಬೆಂಗಳೂರಿಗೆ ಬಂದರು. ಮತ್ತೆ ಗಂಡನ ಸಂಸ್ಥೆಯಲ್ಲಿ ದುಡಿಯಲು ಆರಂಭಿಸಿದರು. ಅಷ್ಟಕ್ಕೇ ನೇಹಾ ಸುಮ್ಮನಾಗಲಿಲ್ಲ. ಮನೆಯ ಹೊಣೆಗಾರಿಕೆಯಿಂದಾಗಿ ವೃತ್ತಿಗೆ ಗುಡ್ ಬೈ ಹೇಳಿದ ಮಹಿಳೆಯರು ಎಷ್ಟಿದ್ದಾರೆ? ಅವರನ್ನೆಲ್ಲ ಮತ್ತೆ ವೃತ್ತಿ ಜೀವನಕ್ಕೆ ಮರಳುವಂತೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ಸಮೀಕ್ಷೆ ನಡೆಸಿದರು. ವಿವಾಹಿತ ಮಹಿಳೆಯರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಂಪನಿಗಳಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತಿದೆ ಎಂಬುದನ್ನೂ ಅರಿತ ನೇಹಾ, ಅಂಥ ಸ್ತ್ರೀಯರಿಗೆ ಬೆಳಕಾಗಲು ಮುಂದಾದರು. ಮಹಿಳಾ ದಿನಾಚರಣೆಯಂದೇ ಜಾಬ್ಸ್ ಫಾರ್ ಹರ್ ಅನ್ನೋ ವೆಬ್‍ಸೈಟ್ ಒಂದನ್ನ ಆರಂಭಿಸಿದರು. ರೆಡಿ...ಸೆಟ್...ರಿ ಸ್ಟಾರ್ಟ್ ಅನ್ನೋ ಟ್ಯಾಗ್‍ಲೈನ್‍ನೊಂದಿಗೆ ನೇಹಾ ಉದ್ಯೋಗ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ.

image


ಫ್ರೀ ಸರ್ವೀಸ್​​ ಮಾಡ್ತಿರೋ ನೇಹಾ

ವೃತ್ತಿ ಜೀವನಕ್ಕೆ ಮರಳುವುದರಿಂದ ಮಕ್ಕಳ ಮೇಲೆ ದುಷ್ಪರಿಣಾಮವಾಗುವುದಿಲ್ಲ ಎಂಬುದನ್ನು ತಮ್ಮ ಸ್ವಂತ ಅನುಭವದಿಂದ್ಲೇ ಅರಿತ ನೇಹಾ, ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನೌಕ್ರಿ, ಲಿಂಕನ್‍ಡೆನ್‍ನಂತೆ ನೇಹಾರ ಜಾಬ್ಸ್ ಫಾರ್ ಹರ್‍ನಲ್ಲೂ ನಿಮಗೆ ಬೇಕಾದಂಥಹ ನೌಕ್ರಿಯನ್ನ ಯಾವುದೇ ಖರ್ಚಿಲ್ಲದೆ ಹುಡುಕಿಕೊಳ್ಳಬಹುದು. ನೇಹಾರ ವೆಬ್‍ಸೈಟ್ ಅದೆಷ್ಟು ಜನಪ್ರಿಯ ಅಂದ್ರೆ ದಿನಕ್ಕೆ 2000ಕ್ಕಿಂತ ಅಧಿಕ ಕ್ಲಿಕ್‍ಗಳು ಬರುತ್ತಿವೆ. ವಿಶೇಷ ಅಂದ್ರೆ ಕೆಲಸ ಬಿಟ್ಟು ಕನಸಿಗೂ ಕೊಳ್ಳಿ ಇಟ್ಟುಕೊಂಡಿರುವ ಅದೆಷ್ಟೋ ಮಹಿಳೆಯರಿಗೆ ನೇಹಾರ ಜೀವನವೇ ಮಾದರಿ. ತಮ್ಮ ಬದುಕನ್ನೇ ಲೀನ್ ಇನ್ ಹೆಸರಿನ ಪುಸ್ತಕವನ್ನಾಗಿ ಬರೆದಿರುವ ನೇಹಾ ಯಶಸ್ವಿ ಬದುಕಿಗೆ ಟಿಪ್ಸ್ ಕೊಟ್ಟಿದ್ದಾರೆ. ಕಿರಿಯ ಸಹೋದರ ಕೂಡ ನೇಹಾ ಪಾಲಿಗೆ ಸ್ಪೂರ್ತಿಯ ಚಿಲುಮೆ. ಯಾಕಂದ್ರೆ ಆತನೂ ಫ್ಯಾಂಟಸಿ ಕ್ರಿಕೆಟ್ ಲೀಗ್ ಡ್ರೀಮ್ 11 ಡಾಟ್ ಕಾಮ್ ಅನ್ನ ಆರಂಭಿಸಿ ಹೆಸರು ಮಾಡಿದ್ದಾರೆ. ಒಟ್ಟಿನಲ್ಲಿ ನೇಹಾ ಬಗಾರಿಯಾ ಸ್ತ್ರೀ ಸಮಾಜಕ್ಕೊಂದು ಉತ್ತಮ ಸಂದೇಶ ಕೊಟ್ಟಿದ್ದಾರೆ. ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ.