ಟೇಸ್ಟಿ..ಟೇಸ್ಟಿ.. ರುಚಿ ರುಚಿ... ನಾಗಪುರದ ಆರೇಂಜ್​​ಗೆ ಸಿಲಿಕಾನ್​ ಸಿಟಿಯಲ್ಲಿ ಡಿಮ್ಯಾಂಡ್​​​..!

ವಿಸ್ಮಯ

0

ಮಾವಿನ ಸೀಸನ್ ಆಯ್ತು, ಹಲಸಿನ ಸೀಸನ್, ದ್ರಾಕ್ಷಿ ಸೀಸನ್‍ಗಳೂ ಮುಗಿದ್ವು. ಈಗ ಕಿತ್ತಳೆ ಹಣ್ಣಿನ ಸರದಿ. ಹೌದು, ಈಗ ಚಳಿಗಾಲ ಕಿತ್ತಳೆ ಹಣ್ಣಿನ ಸೀಸನ್. ಮಾರ್ಕೆಟ್‍ನಲ್ಲಿ ಎತ್ತ ನೋಡಿದರೂ ಕಿತ್ತಳೆ ಹಣ್ಣಿನ ರಾಶಿಗಳೇ ಕಾಣುತ್ತಿವೆ. ಆದ್ರಲ್ಲೂ ನಾಗ್ಪುರದ ರುಚಿ ರುಚಿಯಾದ ಕಿತ್ತಳೆ ಹಣ್ಣುಗಳು ಮಹಾನಗರಿ ಬೆಂಗಳೂರಿಗೆ ಬಂದಿದೆ. ಬೆಂಗಳೂರಿನ ಯಾವುದೇ ಮಾರುಕಟ್ಟೆಗಳಿಗೂ ಹೋದ್ರೂ ಕಿತ್ತಳೆ ಹಣ್ಣುಗಳ ವ್ಯಾಪಾರಿಗಳದ್ದೇ ಕಾರುಬಾರು. ಈಗೇನಾದ್ರೂ ನೀವು ಆ ಕಡೆ ಹೋದ್ರೆ ಹೊಂಬಣ್ಣದ ಕಿತ್ತಳೆ ಹಣ್ಣುಗಳು ನಿಮ್ಮನ್ನು ಸ್ವಾಗತಿಸುತ್ತವೆ. ಸಿಲಿಕಾನ್ ಸಿಟಿಯಲ್ಲಿ ರಸವತ್ತಾದ ನಾಗ್ಪುರದ ಕಿತ್ತಳೆ ಹಣ್ಣುಗಳ ಭರಾಟೆ ಜೋರಾಗಿದೆ.

ಮಹಾರಾಷ್ಟ್ರದ ನಾಗ್ಪುರದ ಕಿತ್ತಳೆ ಹಣ್ಣುಗಳು ಬೆಂಗಳೂರಿನಲ್ಲಿ ಕಮಾಲ್ ಮಾಡುತ್ತಿವೆ. ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ಸ್ಟೇಟ್ ಆಗ್ರಿಕಲ್ಚರ್ ಮಾರ್ಕೆಟಿಂಗ್‍ಗೆ ಬೋರ್ಡ್ ರೈತರಿಗೆ ಪ್ರೋತ್ಸಾಹಿಸುವ ಸಲುವಾಗಿ ಬೆಂಗಳೂರಿನ ಮಾರುಕಟ್ಟೆಗೆ ಹಣ್ಣುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದಕ್ಕೆ ನಮ್ಮ ಎಪಿಎಂಸಿಗಳು ಸಹಕಾರ ನೀಡುತ್ತಿವೆ.

ಇನ್ನು ಬೇರೆ ಕಿತ್ತಳೆಹಣ್ಣಿಗಿಂತ ಈ ನಾಗ್ಪುರದ ಕಿತ್ತಳೆ ಹಣ್ಣು ಸ್ವಲ್ಪ ವಿಶೇಷತೆಗಳನ್ನು ಒಳಗೊಂಡಿದೆ. ಈ ನಾಗ್ಪುರದ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್- ಸಿ ಸಿಗಲಿದೆ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಹೀಗಾಗಿಯೇ ಈ ಹಣ್ಣುಗಳು ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ನಾಗ್ಪುರದ ಕಿತ್ತಳೆ ಹಣ್ಣಿನ ಜ್ಯೂಸ್ ಮಾಡಿ ಕೂಡಿಯೋದ್ರಿಂದ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತೆ. ಮಹಾರಾಷ್ಟ್ರದ ನಾಗ್ಪುರ ಹಣ್ಣುಗಳ ಬೆಲೆ ಕೂಡ ಸಾಮಾನ್ಯ ಜನರ ಕೈಗೆಟುಕುವಂತಿದೆ. ಕೆಜಿಗೆ 20 ರೂಪಾಯಿ ಇರೋದ್ರಿಂದ ಜನರಲ್ಲೂ ಸಂತಸ ಮೂಡಿಸಿದೆ. ರುಚಿ ರುಚಿಯಾದ ಅಗ್ಗದ ದರದಲ್ಲಿ ಸಿಗುವ ಹಣ್ಣುಗಳನ್ನು ಖರೀದಿಸಲು ಜನ ನಾಮುಂದು ತಾಮುಂದು ಅಂತ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ.

ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಈ ಹಣ್ಣುನ್ನು ಸೇವಿಸುವುದು ಆರೋಗ್ಯಕ್ಕೂ ಉತ್ತಮ. ಚಳಿಗಾಲಕ್ಕೂ, ಆರೋಗ್ಯಕ್ಕೂ ಮತ್ತು ಕಿತ್ತಳೆ ಹಣ್ಣಿನ ನಡುವೆ ಒಂದು ಸಂಬಂಧವಿದೆ. ಚಳಿಗಾಲದಲ್ಲಿ ಅನೇಕ ವೈರಲ್ ಸೋಂಕು ತಗುವುದು. ಹೀಗಾಗಿ ಈ ಸಮಯದಲ್ಲಿ ಹೆಚ್ಚು ಕಿತ್ತಳೆ ಹಣ್ಣಿನ ಸೇವನೆ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತೆ.

ಬಾಯಲ್ಲಿ ನೀರೂರಿಸುವ ಈ ನಾಗ್ಪುರ ಆರೆಂಜ್‍ಗಳು ಸಾಕಷ್ಟು ಸಿಹಿಯನ್ನು ಒಳಗೊಂಡಿರುತ್ತೆ. ಇದರ ಸಿಪ್ಪೆಗಳು ಕೂಡ ಹಗುರವಾಗಿರೋದ್ರಿಂದ ಬಹುಬೇಗನೇ ಸುಲಿದು ತಿನ್ನಬಹುದು. ಬೆಳೆ ತರಕಾರಿ ಬೆಲೆ ಗಗನಕ್ಕೇರಿರೋದ್ರಿಂದ, ಆರೋಗ್ಯದ ದೃಷ್ಟಿಯಿಂದ ಜನ ಕಡಿಮೆ ಬೆಲೆಯಲ್ಲಿ ಸಿಗುತ್ತಿರೋ ಕಿತ್ತಳೆ ಹಣ್ಣುಗಳ ಸೇವನೆ ಮಾಡತಿದ್ದಾರೆ. ಈಗಾಗಲೇ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧೆಡೆ ತನ್ನ ರುಚಿಯ ಭರಾಟೆಯಿಂದಾಗಿ ಜನರನ್ನು ತನ್ನ ಆಕರ್ಷಿಸುತ್ತಿದೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ಬೆಳೆಯುವ ಈ ಹಣ್ಣುಗಳು ಬೆಂಗಳೂರಿನ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. ಬಾಯಲ್ಲಿ ನೀರೂರಿಸುವ, ಜೊತೆಗೆ ಗಮನ ಸೆಳೆಯುವ ಈ ಹಣ್ಣುಗಳ ಸವಿಯನ್ನು ನೀವು ಒಮ್ಮೆ ಸವಿಯಿರಿ. ಚಳಿಗಾಲದ ಈ ವೇಳೆಯಲ್ಲಿ ರಸವತ್ತಾದ ಆರೆಂಜ್‍ನ ಘಮ ಆಸ್ವಾದಿಸಿ.