ತುಮಕೂರು ಜಿಲ್ಲೆಯಲ್ಲಿದೆ ಹೂಡಿಕೆಗೆ ಚಿನ್ನದಂಥಾ ಅವಕಾಶ

ಟೀಮ್ ವೈ.ಎಸ್.ಕನ್ನಡ

0

ರಾಜಧಾನಿ ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿರುವ ಜಿಲ್ಲೆಗಳಲ್ಲಿ ತುಮಕೂರಿಗೆ ಮೊದಲ ಸ್ಥಾನ. ಬೆಂಗಳೂರಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ತುಮಕೂರು ಬೆಳವಣಿಗೆಯಾಗುತ್ತಿದೆ. ಕೈಗಾರಿಕಾ ಪಾರ್ಕ್ ಗಳ ಸ್ಥಾಪನೆ, ವಿಶೇಷ ಯೋಜನೆಗಳು ಜಿಲ್ಲೆಯ ಕೈಗಾರೀಕರಣದ ಚಿತ್ರಣವನ್ನೇ ಬದಲಾಯಿಸಿದೆ. ರಾಜ್ಯ ಸರ್ಕಾರ, ತುಮಕೂರಿನಲ್ಲಿ ಕೈಗಾರಿಕೆಗಳ ವ್ಯವಸ್ಥಿತ ಬದ್ಧ ಬೆಳವಣಿಗೆಗೆ ನೀಲ ನಕ್ಷೆ ರೂಪಿಸಿದ್ದು, ಬೃಹತ್ ಉದ್ಯಮಿಗಳು ತುಮಕೂರಿನತ್ತ ದೃಷ್ಟಿ ಹರಿಸುತ್ತಿದ್ದಾರೆ.

ಕೈಗಾರೀಕರಣದಲ್ಲಿ ಅಭೂತಪೂರ್ವ ಬೆಳವಣಿಗೆ

ಈ ಹಿಂದೆ ತುಮಕೂರು ಎಂದರೆ ಒಂದು ಕ್ಷಣ ಯೋಚಿಸಿ, ನಿರಂತರ ಸಮಾಲೋಚನೆ ನಡೆಸಿ ಬಳಿಕ ಜಿಲ್ಲೆಯತ್ತ ಮುಖ ಮಾಡದೆ ಇರುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದು ಕೆಲವು ವರ್ಷಗಳ ಹಿಂದಿನ ಬೆಳವಣಿಗೆ. ಆದರೆ ಇದೀಗ ಪರಿಸ್ಥಿತಿ ಪೂರ್ಣ ಬದಲಾಗಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲ್ಯಾಂಡ್ ಬ್ಯಾಂಕ್ ಯಾವುದೇ ಪರಿಸ್ಥಿತಿಯಲ್ಲಿ ಉದ್ಯಮಿಗಳ ಜಮೀನು ಕೊರತೆಯನ್ನು ನೀಗಿಸುವ ಸಾಮರ್ಥ್ಯ ಹೊಂದಿದೆ. 9800 ಎಕರೆ ಭೂಮಿ, ಈ ಪಟ್ಟಿಯಲ್ಲಿದೆ. ಆಹಾರ ಪಾರ್ಕ್ ಸೇರಿದಂತೆ ಅತ್ಯಾಧುನಿಕ ಕೈಗಾರಿಕೆಗಳು ತುಮಕೂರಿನತ್ತ ಮುಖ ಮಾಡಿವೆ ಎಂದರೆ ತುಮಕೂರಿನ ಮಹತ್ವ ಅರಿವಾಗುತ್ತಿದೆ.

ಕೈಗಾರಿಕಾ ಕ್ರಾಂತಿಯ ಹೊಸ ಮನ್ವಂತರ

ವರ್ಷಗಳ ಹಿಂದೆಯಷ್ಟೇ ನೀರಿಗಾಗಿ ಪರದಾಡುತ್ತಿದ್ದ ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಇದರಿಂದಾಗಿ ಸಹಜವಾಗಿಯೇ ಬೃಹತ್ ಕೈಗಾರಿಕೆಗಳು ತುಮಕೂರಿನತ್ತ ಪಾದ ಬೆಳೆಸಿವೆ. ಕೈಗಾರಿಕಾ ಪಾರ್ಕ್, ಇಲೆಕ್ಟ್ರಾನಿಕ್ಸ್ ನಿರ್ಮಾಣ ಹಬ್ ಹೀಗೆ ತುಮಕೂರಿನ ಸಾಧನೆಯ ಪಟ್ಟಿ ಬೆಳೆಯುತ್ತಿದೆ. ಇದಕ್ಕೆ ಹಲವು ಅಂಶಗಳು ಪೂರಕವಾಗಿವೆ. ತುಮಕೂರಿನ ಎಲ್ಲ ತಾಲೂಕುಗಳು ಕೈಗಾರಿಕೆಯ ಸರ್ವತೋಮುಖ ಅಭಿವೃದ್ಧಿಗೆ ಅತ್ಯುತ್ತಮವಾದ ಹಲವು ಅಂಶಗಳನ್ನು ಹೊಂದಿದೆ.

ಏಳು ಕೈಗಾರಿಕಾ ಪಾರ್ಕ್, ಏಳು ಕೈಗಾರಿಕಾ ಎಸ್ಟೇಟ್ ಗಳನ್ನು ತುಮಕೂರು ಹೊಂದಿದೆ. ಇದು ಕೈಗಾರಿಕೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ವ ಪೂರ್ಣವಾದ ಪಾತ್ರ ನಿರ್ವಹಿಸುತ್ತಿದೆ. 37 ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಂದಿರುವ ತುಮಕೂರು, ರಾಜ್ಯದ ಇತರ ಜಿಲ್ಲೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಆಹಾರ ಸಂಸ್ಕರಣೆಯಲ್ಲಿ ಇಡೀ ದೇಶದಲ್ಲಿಯೇ ಮನೆ ಮಾತಾಗಿರುವ ತುಮಕೂರು, ಪ್ರಸಕ್ತ ಈ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ.

ಕೃಷಿ ಸಂಬಂಧಿ ಕೈಗಾರಿಕೆಗಳಿಗೆ ಆದ್ಯತೆ

ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ತುಮಕೂರಿನ ಕೊಡುಗೆ ಗಮನಾರ್ಹ. ಅದರಲ್ಲೂ ತುಮಕೂರು ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ಕೈಗಾರಿಕೆಗಳಿಗೆ ಉತ್ತಮ ಭವಿಷ್ಯವಿದೆ. ಅಗತ್ಯ ಇರುವ ಉತ್ಪನ್ನಗಳು ಗಣನೀಯ ಪ್ರಮಾಣದಲ್ಲಿ ಅದರಲ್ಲೂ ಗುಣಮಟ್ಟದ ವಸ್ತುಗಳು ತುಮಕೂರಿನಲ್ಲಿ ಹೇರಳವಾಗಿ ದೊರೆಯುತ್ತಿವೆ.

ತುಮಕೂರು ಶಿಕ್ಷಣ ಸಂಸ್ಥೆಗಳ ತವರೂರು

ಹೆಚ್ಚುತ್ತಿರುವ ವಾಣಿಜ್ಯ ಕ್ಷೇತ್ರದ ಬೇಡಿಕೆ ಅದರಲ್ಲೂ ಉದ್ಯಮದ ಬೇಡಿಕೆ ಈಡೇರಿಸಲು ಗುಣಮಟ್ಟದ ಶಿಕ್ಷಣ ನೀಡುವ ಹಲವು ಸಂಸ್ಥೆಗಳು ತುಮಕೂರಿನಲ್ಲಿದೆ. ಇದು ಕೈಗಾರಿಕಾ ಕ್ಷೇತ್ರದ ಮಾನವ ಸಂಪನ್ಮೂಲ ಬೇಡಿಕೆಯನ್ನು ಈಡೇರಿಸುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕೂಡ ತುಮಕೂರಿನ ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜುಗಳು, 12 ಕ್ಕೂ ಹೆಚ್ಚಿರುವ ಇಂಜಿನಿಯರಿಂಗ್ ಕಾಲೇಜುಗಳು, ಮಾನವ ಸಂಪನ್ಮೂಲವನ್ನು ನಿರಂತರವಾಗಿ ಪೂರೈಸುತ್ತಿವೆ. ಜಿಲ್ಲೆಯ ಕೈಗಾರಿಕಾ ಕ್ರಾಂತಿಗೆ ನೆರವು ನೀಡುತ್ತಿದೆ.

ಮೂಲ ಸೌಲಭ್ಯ ಅಭಿವೃದ್ಧಿ

ಸಾರಿಗೆ ವಿಷಯದಲ್ಲಿ ತುಮಕೂರು ಇಡೀ ರಾಜ್ಯಕ್ಕೆ ಮಾದರಿ ಎಂದು ಹೇಳಿದರೆ ತಪ್ಪಾಗದು. ಅಷ್ಟರ ಮಟ್ಟಿಗೆ ಸಾರಿಗೆ ಸಂಪರ್ಕ ಅಭಿವೃದ್ಧಿ ಹೊಂದಿದೆ. ಮೂರು ರಾಷ್ಟ್ರೀಯ ಹೆದ್ದಾರಿಗಳು, ಜಿಲ್ಲೆಯನ್ನು ದೇಶದ ಸಾರಿಗೆ ಸಂಪರ್ಕ ಜಾಲದೊಂದಿಗೆ ಬೆಸೆದಿದೆ. ಉತ್ಪನ್ನಗಳ ವಿಲೇವಾರಿಗೆ ಸಾರಿಗೆ ಸಂಪರ್ಕ ಅತ್ಯಂತ ಪ್ರಮುಖವಾಗಿದ್ದು, ನೆಲ, ಜಲ ಮತ್ತು ವಾಯು ಸಾರಿಗೆ ತುಮಕೂರನ್ನು ಉದ್ಯಮಿಗಳ ಅಚ್ಚು ಮೆಚ್ಚಿನ ತಾಣವಾಗಿ ಪರಿವರ್ತಿಸಿದೆ.

ಕೊನೆಯ ಮಾತು

ತುಮಕೂರು ಹಲವು ಅಪರೂಪದ ಖನಿಜಗಳನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಕಾಲಮಿತಿಯೊಳಗೆ ಹೆಚ್ಚಿನ ಸಂಶೋಧನೆಯ ಅಗತ್ಯ ಕೂಡ ಇದೆ. ರಾಜಧಾನಿ ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿರುವುದರಿಂದ ಸಹಜವಾಗಿಯೇ ತುಮಕೂರು, ಉದ್ಯಮಪತಿಗಳ ನೆಚ್ಚಿನ ತಾಣ. ಇದರಲ್ಲಿ ಎರಡು ಮಾತಿಲ್ಲ. ರಾಜ್ಯ ಸರ್ಕಾರದ ಇಚ್ಛಾ ಶಕ್ತಿ ಮತ್ತು ಸಂಕಲ್ಪ ದೀಕ್ಷೆ, ತುಮಕೂರಿನಲ್ಲಿ ಪರಿವರ್ತನೆಗೆ ನಾಂದಿ ಹಾಡಿದ್ದು, ತುಮಕೂರು, ಕೈಗಾರಿಕಾ ಕ್ರಾಂತಿಯ ದಿವ್ಯ ಜ್ಯೋತಿಯಾಗಿ ಬೆಳಗಲಿದೆ.