ಬಡತನದ ಬೇಲಿ ಮುರಿದ "ಮ್ಯಾಜಿಕ್​​ ಬಸ್"​​ಗೊಂದು ಸಲಾಂ..!

ಟೀಮ್​​ ವೈ.ಎಸ್​​.

ಬಡತನದ ಬೇಲಿ ಮುರಿದ "ಮ್ಯಾಜಿಕ್​​ ಬಸ್"​​ಗೊಂದು ಸಲಾಂ..!

Friday September 18, 2015,

3 min Read

ಮನುಷ್ಯನ ಕೈಯಲ್ಲಿ ಅಸಾಧ್ಯ ಅನ್ನೋದೇ ಇಲ್ಲ. ಆದ್ರೆ ಅದಕ್ಕೊಂದು ವೇದಿಕೆ ಸಿಗಬೇಕು. ತನ್ನನ್ನು ತಾನು ಸಾಭೀತು ಮಾಡಿಕೊಳ್ಳಲು ಅವಕಾಶವೂ ಸಿಗಬೇಕು. ಜೊತೆಗೆ ಒಂದಿಷ್ಟು ಅದೃಷ್ಟ ಕೂಡ ಕೈ ಹಿಡಿಯಬೇಕು. ಜಗತ್ತಿನ ಎಲ್ಲಾ ಜೀವಿಗಳ ಪೈಕಿ ಬುದ್ದಿಯನ್ನು ಹೇಗೆ ಬೇಕೋ ಹಾಗೇ ಮತ್ತು ಯಾವಗ ಬೇಕೋ ಅವಾಗ ಉಪಯೋಗಿಸಿಕೊಳ್ಳುವ ತಾಕತ್ತು ಇರೋದೇ ನಮಗೆ ಮಾತ್ರ. ಅಮೆರಿಕಾದ ಬರಾಕ್ ಒಬಮಾ “ ನೀವು ನಿಮ್ಮ ಸಾಮರ್ಥ್ಯಕ್ಕಿಂತ ದೊಡ್ಡ ಕನಸನ್ನು ಕಟ್ಟಿಕೊಂಡ್ರೆ ಕನಿಷ್ಠ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಸಾಧನೆಯನ್ನಾದ್ರೂ ಮಾಡಬಹುದು.” ಈ ಮಾತು ನಿಜಕ್ಕೂ ಸತ್ಯವೇ. ದೊಡ್ಡ ಕನಸು ಕಟ್ಟಿಕೊಳ್ಳದೇ ಇದ್ರೆ ಸಣ್ಣ ಸಾಧನೆಯೂ ಆಗೋದಿಲ್ಲ. ಈ ಮಾತನ್ನು ಮಾಡಿ ತೋರಿಸಿದ್ದು “ಮ್ಯಾಜಿಕ್ ಬಸ್”. ಮ್ಯಾಜಿಕ್ ಬಸ್ ಅತ್ಯಂತ ಸಿಂಪಲ್ ಕಾನ್ಸೆಪ್ಟ್. ಬಡತನ ಅನ್ನೋ ಬೇಲಿಯನ್ನು ಮುರಿದು ಒಂದು ಬಾರಿಗೆ ಒಂದು ಮಗುವಿಗೆ ಹೊಸ ಕನಸು ಕಟ್ಟಿಕೊಡುವುದು. ಮ್ಯಾಜಿಕ್ ಅನ್ನೋ ಹೆಸರೇ ಹೇಳುವಂತೆ ಇದು ತನ್ನ ಕಾರ್ಯವನ್ನು ಮಾಡಿ ತೋರಿಸಿದೆ.

ಆರಂಭವಾಗಿದ್ದು ಹೀಗೆ..!

ಮ್ಯಾಥ್ಯೂ ಸ್ಪೇಸಿ, ಭಾರತೀಯ ರಗ್ಬಿ ತಂಡದ ಯುವ ಸದಸ್ಯ. ಸ್ಪೇಸಿ ಪ್ರತಿದಿನ ತನ್ನ ರಗ್ಬಿ ಆಟದಲ್ಲಿನ ಸಾಧನೆಗಾಗಿ ಅಭ್ಯಾಸ ಮಾಡುತ್ತಿದ್ದ. ಆದ್ರೆ ಸ್ಪೇಸಿ ಅಭ್ಯಾಸ ಮಾಡುತ್ತಿದ್ದ ಸ್ಥಳ ಮಾತ್ರ ಅವರ ಮನಸ್ಸನ್ನೇ ಬದಲಿಸಿತ್ತು. ಮುಂಬೈನ ಫ್ಯಾಷನ್ ಸ್ಟ್ರೀಟ್ ಬಳಿಯಿದ್ದ ಮೈದಾನದಲ್ಲಿ ಸ್ಪೇಸಿ ಅಭ್ಯಾಸ ಮಾಡುತ್ತಿದ್ದ. ಆದ್ರೆ ಅಭ್ಯಾಸ ಮುಗಿಸಿಕೊಂಡು ಸುಮ್ಮನೆ ಕೂತ್ರೆ ಸಾಕು, ಅದೆಷ್ಟೊ ಬೀದಿ ಮಕ್ಕಳು ಕಣ್ಣಿಗೆ ಬೀಳುತ್ತಿದ್ದರು. ಬಡತನದ ಬೇಗೆಯಲ್ಲಿ ಬೆಂದಿದ್ದ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸಾಕೋದಿಕ್ಕೆ ಆಗುತ್ತಿರಲಿಲ್ಲ. ಆದ್ರೆ ಆ ಮಕ್ಕಳನನ್ನು ನೋಡಿದ ಸ್ಪೇಸಿ ಅವರನ್ನು ಆಟದ ಅಭ್ಯಾಸಕ್ಕೆ ಕರೆಸಿಕೊಂಡು ಬಿಟ್ಟ. ಸಮಯ ಕಳೆದಂತೆ ಫ್ಯಾಶನ್ ಸ್ಟ್ರೀಟ್​​ನ ಮಕ್ಕಳಲ್ಲಿ ಬದಲಾವಣೆಗಳು ಕಾಣಲಾರಂಭಿಸಿತ್ತು. ಅದ್ಯಾವುದೋ ಕಷ್ಟದ ಕಾರಣದಿಂದಾಗಿ ಬೀದಿ ಬದಿಯಲ್ಲಿ ಈ ಮಕ್ಕಳು ಬೆಳೆದ್ರೂ ಗುರಿ ಮತ್ತು ಸಾಧನೆಯಲ್ಲಿ ಹಿಂದೆ ಬಿದ್ದಿರಲಿಲ್ಲ. ಅಷ್ಟೇ ಅಲ್ಲ ಈ ಮಕ್ಕಳಿಗೆ ಇತರರೆಡೆಗಿದ್ದ ದೃಷ್ಟಿಯೂ ಬದಲಾಗ ತೊಡಗಿತ್ತು.

ಮ್ಯಾಥ್ಯೂ ಸ್ಪೇಸಿಯ ಪ್ರಯೋಗ ದಿನಕಳೆದಂತೆ ಹೊಸ ಫಲಿತಾಂಶ ನೀಡುತ್ತಿತ್ತು. ಅಭ್ಯಾಸಕ್ಕೆಂದು ಬರುತ್ತಿದ್ದ ಬೀದಿಬದಿಯ ಮಕ್ಕಳಲ್ಲಿ ಸಾಕಷ್ಟು ಪಾಸಿಟಿವ್ ಬದಲಾವಣೆ ಆಗಿತ್ತು. ಬಡ ಕುಟುಂಬದಲ್ಲಿ ಹುಟ್ಟಿದ್ದ ಹಿನ್ನೆಲೆ ದಿನ ಕಳೆದಂತೆ ಮಾಯವಾಗ ತೊಡಗಿತ್ತು. ಇದ್ರ ಜೊತೆಗೆ ಬದುಕಿನ ಪಾಠಗಳನ್ನು ಈ ಮಕ್ಕಳು ದಿನ ಕಳೆದಂತೆ ಹೆಚ್ಚು ಹೆಚ್ಚು ಕಲಿಯುತ್ತಿದ್ದರು. ತಮ್ಮ ಬೆಳವಣಿಗೆ ತಡೆಯಾಗಿದ್ದ ಬಡತನವನ್ನು ಮೆಟ್ಟಿನಿಲ್ಲುವ ಬಗ್ಗೆ ಯೋಚನೆಗಳನ್ನು ಮಾಡತೊಡಗಿದ್ರು. 10 ವರ್ಷಗಳ ಅಂತರದಲ್ಲಿ ಈ ಅಮೂಲ್ಯ ರತ್ನಗಳು ಮ್ಯಾಜಿಕ್ ಬಸ್ ಸ್ಪೋರ್ಟ್ಸ್ ಡೆವಲಪ್​​ಮೆಂಟ್​​ ಅನ್ನೋ ಸಂಸ್ಥೆಯನ್ನೇ ಹುಟ್ಟುಹಾಕಿದ್ರು. ಇದು ಅನೇಕರ ಜೀವನದ ದೃಷ್ಟಿಯನ್ನೇ ಬದಲಿಸಿತ್ತು.

image


ಮ್ಯಾಜಿಕ್ ಬಸ್ ಕೆಲಸ ಹೇಗಿದೆ..?

ಮ್ಯಾಜಿಕ್ ಬಸ್ ಆರಂಭವಾಗಿದ್ದು 1999ರಲ್ಲಿ. ಆದ್ರೆ ಇದ್ರ ಬೆಳವಣಿಗೆ ಕ್ಷಿಪ್ರವಾಗಿ ನಡೆದಿದೆ. 250000ಕ್ಕೂ ಅಧಿಕ ಮಕ್ಕಳು,8000ಕ್ಕೂ ಅಧಿಕ ಯುವಕರು ಭಾರತದ ಮೂಲೆ ಮೂಲೆಗಳಿಂದ ಮ್ಯಾಜಿಕ್ ಬಸ್ನಲ್ಲಿದ್ದಾರೆ. ಆರಂಭದಲ್ಲೇ ಸ್ಪೇಸಿ ಮ್ಯಾಥ್ಯೂಗೆ ಹೆಚ್ಚು ಸಹಾತ ಬಂದಿರಲಿಲ್ಲ. ಕೇವಲ Cox and Kings ಸಂಸ್ಥೆ ಮಾತ್ರ ಸಹಾಯ ಹಸ್ತ ಚಾಚಿತ್ತು. ಕ್ಲೀಯರ್ ಟ್ರಿಪ್ ಕೂಡ ಮ್ಯಾಜಿಕ್ ಬಸ್​​ಗೆ ಸ್ವಲ್ಪ ನೆರವಿನ ಹಸ್ತ ಚಾಚಿತ್ತು. ಮ್ಯಾಥ್ಯೂ ಮತ್ತು ತಂಡ ಮಕ್ಕಳನ್ನು ಮೊದಲು ವಯಸ್ಸಿನ ಆಧಾರದಲ್ಲಿ ಪ್ರತಿಯೊಂದು ಮಗುವಿನ ಮೇಲೆ ಗಮನವಿಟ್ಟು ಕೆಲಸ ಮಾಡಲು ಆರಂಭಿಸಿತ್ತು.

ಅಂದಹಾಗೇ ಮ್ಯಾಜಿಕ್ ಬಸ್ ಸ್ಥಳೀಯ ಸಮುದಾಯದ, ಬಡತನ ರೇಖೆಗಿಂತ ಕೆಳಗಿರುವ ಮತ್ತು ಬಡತನದಲ್ಲಿರುವಂತಹ ಮಕ್ಕಳನ್ನು ಮೊದಲು ಹುಡುಕುತ್ತಾರೆ. ಅವರೆಲ್ಲರಿಗೆ ಶಿಕ್ಷಣ ನೀಡಿ ಭವಿಷ್ಯದ ಬಗೆಗಿನ ಕನಸುಗಳಿಗೆ ಹೊಸ ಆಯಾಮ ನೀಡುತ್ತಾರೆ. ಬಡತನದಿಂದ ಹೊರಬರಲು ಬೇಕಾಗಿರುವ ಸೌಕರ್ಯಗಳನ್ನು ಕೂಡ ಒದಗಿಸಿಕೊಡುತ್ತಾರೆ. ಮಕ್ಕಳಿಗೆ ಇಷ್ಟವಾಗುವ ವಾತಾವರಣ ನಿರ್ಮಿಸಿ ಆ ಮಕ್ಕಳಲ್ಲಿ ವಿಶ್ವಾಸ ತುಂಬುತ್ತಾರೆ. ಮಕ್ಕಳ ಬೆಳವಣಿಗೆ ಬಗ್ಗೆ, ಅವ್ರ ವರ್ತನೆ ಬಗ್ಗೆ ಕಾಲಕಾಲಕ್ಕೆ ಫೀಡ್​​ಬ್ಯಾಕ್​​ ಪಡೆದು, ಅವರ ಭವಿಷ್ಯವನ್ನು ಹೇಗೆ ಇನ್ನಷ್ಟು ಉಜ್ವಲವಾಗಿಸಬಹುದು ಅನ್ನೋ ಚರ್ಚೆಗಳು ನಡೆಯುತ್ತವೆ. ಬೀದಿ ಬದಿಯ ಮಕ್ಕಳ ಭವಿಷ್ಯವನ್ನು ಸರಿಯಾದ ರೀತಿಯಲ್ಲಿ ರೂಪಿಸುವ ಕೆಲಸಗಳು ನಡೆಯುತ್ತವೆ.

image


ಮ್ಯಾಜಿಕ್​ಬಸ್​ ಸಂಸ್ಥೆಯಡಿ ಬೆಳದ ಮಕ್ಕಳು ಬದುಕಿನುದ್ದಕ್ಕೂ ತನ್ನನ್ನು ಬೆಳೆಸಿದ ಸಂಸ್ಥೆಯನ್ನು ಮರೆಯೋದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಮ್ಯಾಜಿಕ್ ಬಸ್​​ನ ನೆರವು ಪಡೆದವರು ತನ್ನ ಸಂಸ್ಥೆಗೆ ಮತ್ತೆ ನೆರವಾಗುತ್ತಾರೆ. ಅದೆಲ್ಲೊ, ಅದು ಹೇಗ್ಯಾಗೋ ಬೆಳೆಯಬೇಕಿದ್ದ ಮಕ್ಕಳು ಮ್ಯಾಜಿಕ್ ಬಸ್​​ನಿಂದ ಭವಿಷ್ಯ ರೂಪಿಸಿಕೊಂಡ್ರೆ ಮತ್ತೆ ಕೆಲವರಿಗೆ ಶಿಕ್ಷಣವೂ ಸಿಗುತ್ತದೆ. ಹಾಲುಣಿಸಿ ಪೋಷಿಸಿದ ಅಮ್ಮನನ್ನು ಮಕ್ಕಳು ಎಂದಾದ್ರೂ ಮರೆಯುವುದುಂಟೆ..? ಹಾಗೇ ಮ್ಯಾಜಿಕ್ ಬಸ್​ನಿಂದ ವಿವಿಧ ರೀತಿಯಲ್ಲಿ ಸಹಾಯ ಪಡೆದವರ ಸಂಖ್ಯೆ ಈಗ 250000ದ ಗಡಿ ದಾಟಿ ಬಿಟ್ಟಿದೆ.

ಮ್ಯಾಜಿಕ್ಬಸ್ ಅನ್ನೋ ಎನ್​ಜಿಒ ಉಳಿದ ಎಲ್ಲಾ ಆರ್ಗನೈಶನ್​ಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಮ್ಯಾಜಿಕ್ ಬಸ್ ಕೇವಲ ಒಂದು ಸಮಸ್ಯೆ ಕಡೆ ಗಮನ ಹರಿಸಿಲ್ಲ. ಮ್ಯಾಜಿಕ್ ಬಸ್ ಅಂತ ಹೇಳಿದಾಗ ಒಂದೇ ಮೂಲ ಕಾಣಬಹುದು. ಆದ್ರೆ ಭವಿಷ್ಯವನ್ನು ರೂಪಿಸಿಕೊಂಡ ದಾರಿಗಳು ಮಾತ್ರ ವಿಭಿನ್ನ. ಕೇವಲ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಅವರಿಗೆ ಒಂದು ದಾರಿ ತೋರಿಸಿ ಮ್ಯಾಜಿಕ್ ಬಸ್ ಕೈ ತೊಳೆದುಕೊಳ್ಳುವುದಿಲ್ಲ. ಬದಲಾಗಿ ಕಷ್ಟದಲ್ಲಿ ಬೆಳೆದ ಮಕ್ಕಳ ಪೋಷಕರಿಗೆ ಮತ್ತು ಕುಟುಂಬದವರನ್ನ ಕೂಡ ಬಡತನದ ಸಮಸ್ಯೆಯಿಂದ ಮಾನಸಿಕವಾಗಿ ಹೊರಬರುವಂತೆ ಮಾಡುತ್ತಿದೆ. ಮ್ಯಾಜಿಕ್ ಬಸ್​​ನ ಈ ಎಲ್ಲಾ ಸೇವೆಗಾಗಿ ಪ್ರತಿಷ್ಠಿತ The World Bank Development Marketplace Award ಕೂಡ ಸಿಕ್ಕಿದೆ.

image


ಅಡೆತಡೆಗಳನ್ನು ನಿಭಾಯಿಸಿದ್ದು ಹೇಗೆ..?

ಯಶಸ್ಸು ಸುಲಭವಾಗಿ ಯಾರಿಗೂ ಸಿಗೋದಿಲ್ಲ. ಹಲವು ವೈಫಲ್ಯಗಳನ್ನು ಅನುಭವಿಸಿದ ಮೇಲೂ ಉತ್ಸಾಹ ಕಳೆದುಕೊಳ್ಳದೆ ಗುರಿಯತ್ತ ಮುನ್ನಡೆಯಲು ಮತ್ತೆ ಮತ್ತೆ ಪ್ರಯತ್ನ ಪಡೋದೇ ಯಶಸ್ಸಿನ ದಾರಿಯ ಸುಲಭ ಸೂತ್ರ. ಇನ್ನು ಹೆಣ್ಣುಮಕ್ಕಳನ್ನು ಗುರುತಿಸಿ ಅವ್ರ ಸಮಸ್ಯೆ ನಿಭಾಸುವಾಗಲಂತೂ ಅತ್ಯಂತ ಜಾಗರೂಕರಾಗಿ ಕೆಲಸ ನಿರ್ವಹಣೆ ಮಾಡಬೇಕಿತ್ತು. ಇದನ್ನು ಮ್ಯಾಜಿಕ್ ಬಸ್ ಸರಿಯಾಗಿ ಮಾಡಿ ನಿಭಾಯಿಸಿದೆ. ಮ್ಯಾಜಿಕ್ ಬಸ್ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಡೋರ್ ಟು ಡೋರ್ ಸೇವೆಗಳನ್ನು ಕೂಡ ಮಾಡಿದೆ.

ಒಂದು ಸಣ್ಣ ಕನಸು ತನ್ನ ಬದುಕನ್ನು ಮತ್ತು ಇತರರ ಬದುಕನ್ನು ಬದಲಿಸಬಲ್ಲದು ಅನ್ನೋದಿಕ್ಕೆ ಮ್ಯಾಥ್ಯೂ ಸ್ಪೇಸಿ ಉತ್ತಮ ಉದಾಹಣೆ. ತನ್ನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಬಹುದಿದ್ದ ರಗ್ಬಿ ಆಟವನ್ನು ಬಿಟ್ಟು ಸಾಮಾಜಿಕ ಬದ್ಧತೆಯನ್ನು ಇತರರಿಗೆ ತೋರಿಸಿ ಮಾದರಿ ವ್ಯಕ್ತಿಯಾಗಿದ್ದಾರೆ. ಭಾರತವನ್ನು ಬದಲಿಸಬಲ್ಲ ಕನಸು ಕಟ್ಟಿದ, ಅದನ್ನು ಸಾಧಿಸಿ ತೋರಿಸಿದ ಮ್ಯಾಜಿಕ್ ಬಸ್​​ಗೆ ಎಲ್ಲರ ಸಲಾಂ..!