ಪಾರ್ಟಿ ಮಾಡುವವರಿಗೆ ಸುಲಭ ದಾರಿ ಹುಡುಕಿಕೊಟ್ರು

ಟೀಮ್ ವೈ.ಎಸ್.

0

ಭಾರತದ ಜನಸಂಖ್ಯಾಶಾಸ್ತ್ರ ಬದಲಾಗುತ್ತಿದೆ. ಮನುಷ್ಯನ ಜೀವನಶೈಲಿ ಉನ್ನತಮಟ್ಟಕ್ಕೇರುತ್ತಿರುವಂತೆಯೇ ಐಷರಾಮಿ ಪಾರ್ಟಿಗಳಲ್ಲಿ ತೊಡಗುತ್ತಿರುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಪಾರ್ಟಿ ಸಂಸ್ಕೃತಿ ಶ್ರೀಮಂತ ಯುವಜನರ ಬದುಕಿನ ಭಾಗವಾಗಿದೆ. ಪ್ರತಿಯೊಂದು ಸಂತೋಷಕೂಟಕ್ಕೂ ಉತ್ತಮ ವಸ್ತುಗಳು, ವಿನ್ಯಾಸಗಳು, ವಸ್ತ್ರಗಳು, ಆಹ್ವಾನಪತ್ರಿಕೆಗಳು ಇತ್ಯಾದಿ ಅತ್ಯಂತ ಅವಶ್ಯಕವಾಗಿದೆ. ಇದರಿಂದಾಗಿ ಪಾರ್ಟಿಗಳಲ್ಲಿ ಬಳಸುವ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದು ಹೊಸ ಉದ್ಯಮವೊಂದು ಹುಟ್ಟಿಕೊಂಡಿತು.

ಪಾರ್ಟಿ ಉದ್ಯಮ ಅಥವಾ ಸಂತೋಷಕೂಟಗಳ ಉದ್ಯಮ ಹೊಸ ಶಬ್ದ. ಜನ್ಮದಿನದ ಪಾರ್ಟಿಗಳು, ಆಫೀಸ್ ಪಾರ್ಟಿಗಳು, ಮದುವೆ ಪಾರ್ಟಿಗಳು ಇತ್ಯಾದಿ ಪಾರ್ಟಿಗಳ ನಿರ್ವಹಣೆಯನ್ನು ಈ ಪಾರ್ಟಿ ಉದ್ಯಮಿಗಳು ವಹಿಸಿಕೊಳ್ಳುತ್ತಾರೆ. ಉದಾಹರಣೆಗೆ, ಪಾಂಶು ಮಹೇಶ್ವರಿಯವರ ಇನ್ ರಿವರ್ ಸಂಸ್ಥೆ ಆಹ್ವಾನ ಪತ್ರಿಕೆಗಳನ್ನು ವಿನ್ಯಾಸಗೊಳಿಸಿ ಕೊಡುತ್ತದೆ.

2009ರಲ್ಲಿ ಸ್ನೇಹಿತರೊಬ್ಬರ ಕಾಕ್‌ಟೈಲ್ ಪಾರ್ಟಿಗಾಗಿ ಜಾಹೀರಾತು ಸಂಸ್ಥೆಯೊಂದರ ಮಾಲಿಕರಾಗಿದ್ದ ಪ್ರಾಂಶು ಮಹೇಶ್ವರಿ, ಆಹ್ವಾನಪತ್ರಿಕೆಗಳನ್ನು ವಿನ್ಯಾಸಗೊಳಿಸಿದರು. ಆ ಪತ್ರಿಕೆಯ ವಿನ್ಯಾಸ ಮತ್ತು ಥೀಮ್‌ ಅನ್ನು ಪಾರ್ಟಿಗೆ ಆಗಮಿಸಿದ್ದ ಅತಿಥಿಗಳು ಬಹುವಾಗಿ ಮೆಚ್ಚಿಕೊಂಡಿದ್ದರು. ಇದು ಪ್ರಾಂಶುರವರ ಪಾಲಿನ ಗೆಲುವಿನ ಕ್ಷಣವಾಗಿತ್ತು. ಈ ಮೂಲಕ ಹೊಸ ಉದ್ಯಮವೊಂದರ ಉಗಮವಾಯಿತು. 2010ರಲ್ಲಿ ಪ್ರಾಂಶು ಇನ್-ರಿವರ್ ಸಂಸ್ಥೆಯನ್ನು ಸ್ಥಾಪಿಸಿದರು. ಹೊಸ ವಿನ್ಯಾಸ ಮತ್ತು ಸೃಜನಶೀಲತೆಯೊಂದಿಗೆ ಶ್ರೀಮಂತರು ಬಯಸುವ ಹೊಸ ಮಾದರಿಯ ಆಹ್ವಾನಪತ್ರಿಕೆಗಳನ್ನ ಮಾಡಿಕೊಡುವ ಸಂಸ್ಥೆ ಇದಾಗಿತ್ತು.

ಇನ್ ರಿವರ್ ಸಂಸ್ಥೆ ವಿನ್ಯಾಸಗೊಳಿಸಿದ ಆಹ್ವಾನ ಪತ್ರಿಕೆಯ ಐಡಿಯಾಗಳು ವಿನೂತನವಾಗಿದ್ದವು. ಬೇರೆ ಕಂಪನಿಗಳಲ್ಲಿ ಬಣ್ಣಗಳಲ್ಲಿ ಹೆಸರನ್ನು ಬರೆದು ಪೇಪರ್‌ಗಳನ್ನು ವಿನ್ಯಾಸಗೊಳಿಸಿದರೆ ಆಹ್ವಾನ ಪತ್ರಿಕೆ ಮುಗಿದುಬಿಡುತ್ತಿತ್ತು. ಅದರಲ್ಲಿ ಯಾವುದೇ ಜಾಣ್ಮೆ ಇರಲಿಲ್ಲ. ಆದರೆ ಆಹ್ವಾನಪತ್ರಿಕೆ ಕೇವಲ ಮಾಹಿತಿ ನೀಡುವ ಕಾಗದವಷ್ಟೇ ಆಗಿರಬಾರದು ಅದು ಸಂವಹನದ ಮಾಧ್ಯಮವೂ ಆಗಿರಬೇಕೆಂದು ಇನ್ ರಿವರ್ ಸಂಸ್ಥೆ ನಂಬುತ್ತದೆ ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಪ್ರಾಂಶು.

2014-15ರಲ್ಲಿ ಇನ್ ರಿವರ್ ಸಂಸ್ಥೆ 3 ಕೋಟಿ ಆದಾಯಗಳಿಸಿದೆ. ಸಂಸ್ಥೆ ಈಗ ಉನ್ನತ ಮಟ್ಟದ ಅತ್ಯಾಧುನಿಕ ವಿನ್ಯಾಸದತ್ತ ಹೆಚ್ಚಿನ ಗಮನಹರಿಸುತ್ತಿದೆ. ಚಿಲ್ಲರೆ ವ್ಯಾಪಾರ ಕ್ಷೇತ್ರದತ್ತಲೂ ಗಮನ ಹರಿಸುತ್ತಿದೆ. ನಮ್ಮ ಸದ್ಯದ ಮಾರುಕಟ್ಟೆಯ ಯೋಜನೆ ಹಾಗೂ ಸಿದ್ಧತೆಗಳಿಂದ ನಾವು 2015-2016ರ ಮದುವೆ ಸೀಸನ್‌ನಲ್ಲಿ 10 ಕೋಟಿ ಆದಾಯವನ್ನು ಗಳಿಸುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಪ್ರಾಂಶು.

ಇದೇ ಉದ್ಯಮಕ್ಕೆ ಈಗ ಫನ್‌ಕಾರ್ಟ್‌.ಇನ್ ಎಂಬ ಆನ್‌ಲೈನ್ ಸ್ಟೋರ್ ಕೂಡ ಕಾಲಿಟ್ಟಿದೆ. ಇದರ ಸಂಸ್ಥಾಪಕರು ರಿತಿಕಾ ನಂಗಿಯಾ. ಮಕ್ಕಳ ಪಾರ್ಟಿ, ಬ್ಯಾಚುಲರ್ ಪಾರ್ಟಿ, ಮಗುವಿನ ಜನ್ಮದಿನದ ಪಾರ್ಟಿ ಇತ್ಯಾದಿಗಳಿಗೆ ಪಾರ್ಟಿಯ ವಸ್ತುಗಳ ಸರಬರಾಜು ಮಾಡುತ್ತಿದೆ. ಇದು 2000 ಬಗೆಯ ಪಾರ್ಟಿ ಉತ್ಪನ್ನಗಳನ್ನು ಹೊಂದಿದೆ. ತಮ್ಮ ಮೈದುನನಿಗೆ ಪಾರ್ಟಿ ಆಯೋಜಿಸಿದ್ದ ವೇಳೆಯಲ್ಲಿ ರಿತಿಕಾಗೆ ಈ ಐಡಿಯಾ ಬಂತು.

ಪಾರ್ಟಿಗಳಿಗೆ ಮಕ್ಕಳಿಗಾಗಿ ಕಡಿಮೆ ದರದ ಹಾಗೂ ಉತ್ತಮ ಅಗತ್ಯ ವಸ್ತುಗಳನ್ನು ಕೊಳ್ಳುವುದೇ ಒಂದು ತಲೆಬಿಸಿಯ ವಿಚಾರ. ತೆಗೆದುಕೊಳ್ಳಬೇಕೆಂದರೂ ಸಮೀಪದ ಅಂಗಡಿಗಳಲ್ಲಿ ಅದರ ಬೆಲೆ ಹೆಚ್ಚಿರುತ್ತದೆ. ಹೀಗಾಗಿ ಕಡಿಮೆ ದರದಲ್ಲಿ ಉತ್ತಮ ವಸ್ತುಗಳನ್ನು ಒದಗಿಸುವ ಆನ್‌ಲೈನ್ ಸ್ಟೋರ್ ತೆರೆಯುವ ಐಡಿಯಾ ಬಂತು ರಿತಿಕಾಗೆ.

2015ರ ಮಾರ್ಚ್‌ನಲ್ಲಿ ರಿತಿಕಾ 30 ಲಕ್ಷಗಳ ಹೂಡಿಕೆಯೊಂದಿಗೆ ತಮ್ಮ ಉದ್ಯಮವನ್ನು ಆರಂಭಿಸಿದರು. ಇದು ತಿಂಗಳಿಗೆ ಶೇ. 50ರಂತೆ ಏರಿಕೆಯಾಗುತ್ತಾ ಹೋಯಿತು.

ಪಾರ್ಟಿಗಳಿಗೆ ಅಗತ್ಯವಿರುವ ವಸ್ತುಗಳ ದರವನ್ನು ತೀರಾ ಏರಿಕೆ ಮಾಡಿದ್ದ ಮಾಮ್ ಅಂಡ್ ಪಾಪ್ ಸ್ಟೋರ್‌ಗಳಿಂದ ಜೇಬಿಗೆ ಕತ್ತರಿ ಬೀಳುತ್ತಿತ್ತು. ಇದೇ ವೇಳೆ ಇಂತಹ ಸ್ಟೋರ್‌ಗಳು ವಿಭಿನ್ನ ವಸ್ತುಗಳನ್ನೂ ಸಹ ಸರಿಯಾಗಿ ಪೂರೈಸುತ್ತಿರಲಿಲ್ಲ. ಹೀಗಾಗಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳದೇ ಪ್ರತಿಯೊಬ್ಬರೂ ಪಾರ್ಟಿ ಮಾಡಬೇಕೆಂಬುದೇ ನಮ್ಮ ಮಂತ್ರವಾಯಿತು. ನಮ್ಮ ಟಾರ್ಗೆಟ್ ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಾಯಂದಿರು, ಮಕ್ಕಳು, ಯುವಜನತೆ, ಅವಿವಾಹಿತ ಮಹಿಳೆಯರು, ವಿವಾಹಿತ ಜೋಡಿಗಳು ಸೇರಿದಂತೆ ಎಲ್ಲಾ ರೀತಿಯ ಜನರೂ ನಮ್ಮ ಗ್ರಾಹಕರಾಗಿದ್ದಾರೆ ಎನ್ನುತ್ತಾರೆ ರಿತಿಕಾ.

ಈ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಿದ್ದರೂ ತಮ್ಮ ಉದ್ಯಮ ಬಹುಬೇಗ ಬೆಳೆಯುವುದೆಂದು ರಿತಿಕಾ ನಿರೀಕ್ಷಿಸಿದ್ದಾರೆ. ಒಂದೇ ವರ್ಷದಲ್ಲಿ ಭಾರತದ ಅತ್ಯುತ್ತಮ 3 ಕಂಪನಿಗಳ ಸಾಲಿಗೆ ಸೇರಬೇಕೆಂಬುದು ರಿತಿಕಾರ ಗುರಿ. ಕೈಗೆಟುಕುವ ದರದಲ್ಲಿ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಪಾರ್ಟಿಯ ಕ್ಷಣಗಳನ್ನು ನೆನಪಿನಲ್ಲುಳಿಯುವಂತೆ ಮಾಡುವುದು ಫನ್ ಕಾರ್ಟ್.ಇನ್‌ನ ಘೋಷವಾಕ್ಯ.

Related Stories

Stories by YourStory Kannada