ಮಕ್ಕಳಿಗೆ ಇಲ್ಲಿ ಆಟದೊಂದಿಗೆ ಜ್ಞಾನವೂ ಸಿಗುತ್ತದೆ

ಆಗಸ್ತ್ಯ

0

ರಜೆ ಬಂದರೆ ಸಾಕು ಪೋಷಕರೊಂದಿಗೆ ಮಾಲ್, ಪಾರ್ಕ್‍ಗಳಲ್ಲಿ ಸುತ್ತಿ, ಮನೆಯಲ್ಲಿ ಕುಳಿತು ಟಿವಿ ನೋಡುವುದು ಈಗಿನ ಮಕ್ಕಳ ಪರಿಪಾಠವಾಗಿ ಮಾರ್ಪಟ್ಟಿದೆ. ಆದರೆ ಮಕ್ಕಳ ಈ ಅಭ್ಯಾಸ ಬದಲಿಸುವುದಕ್ಕಾಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ ಸಂಸ್ಥೆ ಗಿರಿಯಾಸ್ ಹೊಸತೊಂದು ಪ್ರಯೋಗಕ್ಕೆ ಮುಂದಾಗಿದೆ. ಅದೇನೆಂದರೆ ಮಕ್ಕಳು ರಜೆಯನ್ನು ಮಜವಾಗಿ ಕಳೆಯಲು ದೇಶದ ಮೊದಲ `ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್​ಫ್ಲೋರಿಯಂ' ಎಂಬ ಮ್ಯೂಸಿಯಂ ಆರಂಭಿಸಿದೆ.

ಪುಸ್ತಕದ ಹುಳುವಾಗುತ್ತಿರುವ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಎನ್ನುವುದು ತೀರಾ ಕಡಿಮೆಯಾಗುತ್ತಿದೆ. ಅದನ್ನು ಹೆಚ್ಚುವ ಉದ್ದೇಶದಿಂದಲೇ ಇತ್ತೀಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಆಟದೊಂದಿಗೆ ಪಾಠ ಎಂಬ ಉದ್ದೇಶದೊಂದಿಗೆ ಗಿರಿಯಾಸ್ ಸಂಸ್ಥೆ ಹುಟ್ಟು ಹಾಕಿರುವುದೇ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್​ಫ್ಲೋರಿಯಂ. ಈ ಗಿರಿಯಾಸ್ ಮ್ಯೂಸಿಯಂ ಇರುವುದು ದೊಮ್ಮಲೂರಿನಲ್ಲಿ. ಮನರಂಜನೆಯೊಂದಿಗೆ ಕಲಿಕೆ ಪರಿಕಲ್ಪನೆಯಲ್ಲಿ ಮ್ಯೂಸಿಯಂ ಪ್ರಾರಂಭಿಸಲಾಗಿದೆ. ಮಕ್ಕಳು ಇಲ್ಲಿ ಕೇವಲ ಆಟವಾಡದೆ ಅನ್ವೇಷಣೆ, ಜ್ಞಾನ ಮತ್ತು ಕಲಿಕೆಯನ್ನು ಮ್ಯೂಸಿಯಂನಿಂದ ಪಡೆದುಕೊಳ್ಳಬಹುದು.

ಮ್ಯೂಸಿಯಂನಲ್ಲಿ ಏನೆಲ್ಲಾ ಇದೆ..?

25 ಸಾವಿರ ಚದರ ಅಡಿ ವಿಶಾಲವಾದ ಕಟ್ಟಡದಲ್ಲಿರುವ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್​​ಫೋರಿಯಂನಲ್ಲಿ ಮಕ್ಕಳು ಮನದಣಿಯೆ ಆಡಿ, ನಲಿಯಲು ಸಾಕಷ್ಟು ವಿಷಯಗಳಿವೆ. ಸ್ಪ್ಲಾಶ್, ಬಿಲ್ಡ್, ಇನ್ವೆಂಟ್, ಲೈವ್ ಮತ್ತು ಕ್ರಿಯೇಟ್ ಎಂಬ ಹೆಸರಿನ ಆರು ಗ್ಯಾಲರಿಗಳಿದ್ದು, ಒಟ್ಟಾರೆ 80 ಬಗೆಯ ಆಟಗಳು ಮಕ್ಕಳಿಗಾಗಿ ಕಾದಿವೆ. ಪ್ರಮುಖವಾಗಿ ಕಟ್ಟಡ ನಿರ್ಮಾಣ ಮಾಡುವ ಯಂತ್ರಗಳ ಮಾದರಿಯಿದ್ದು, ಅವುಗಳನ್ನು ಜೋಡಿಸಿ, ಅವುಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಪರೀಕ್ಷೆ ಮಾಡಿಕೊಳ್ಳಬಹುದು. ನೀರಿನ ಸಾಮರ್ಥ್ಯ ಮತ್ತು ಅದು ಸೃಷ್ಟಿಸಬಲ್ಲ ಶಕ್ತಿಯನ್ನು ಅನ್ವೇಷಿಸುವ ಕುರಿತ ನೀರಿನಾಟದ ಸ್ಪ್ಲಾಶ್ ಗ್ಯಾಲರಿ, ಮಕ್ಕಳಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸುವ ಐದು ಮಹಡಿಗಳನ್ನು ಏರುವ ಸುರಕ್ಷಿತ ಹಾಗೂ ಉತ್ಸಾಹದಾಯಕ ಆಟದ ಎಕ್ಸ್​ಪ್ಲೋರರ್​ ಗ್ಯಾಲರಿ, ನಾನಾ ಪಾತ್ರಗಳನ್ನು ಅಭಿನಯಿಸುವ ಮತ್ತು ಅವರ ಸ್ವಯಂ ಅಭಿವ್ಯಕ್ತಿಯನ್ನು ಹೆಚ್ಚಿಸುವ ಲೈವ್ ಗ್ಯಾಲರಿಯಿದೆ.

ದೇಶದಲ್ಲೇ ಮೊದಲು

ಈ ರೀತಿಯ ಮಕ್ಕಳ ಆಟದ ಮ್ಯೂಸಿಯಂ ಅಮೆರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಸಾಮಾನ್ಯ. ಅಲ್ಲಿ ಮಕ್ಕಳು ಆಟದೊಂದಿಗೆ ತಮ್ಮ ಸಾಮಥ್ರ್ಯ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿವಂತಹ ಎಲ್ಲಾ ಅಂಶಗಳು ಈ ರೀತಿಯ ಮ್ಯೂಸಿಯಂಗಳಲ್ಲಿನಲ್ಲಿ ಇರುತ್ತವೆ. ಅದೇ ಮಾದರಿಯಲ್ಲೇ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್​ಫ್ಲೋರಿಯಂ ನಿರ್ಮಿಸಲಾಗಿದ್ದು, ದೇಶದಲ್ಲೇ ಮೊದಲ ಪ್ರಯೋಗ ಇದಾಗಿದೆ. ಮನೆ ಮತ್ತು ಮಾಲ್‍ಗಳಲ್ಲಿ ಆಡಿ ಬೇಸರಗೊಂಡಿರುವ ಮಕ್ಕಳಿಗೆ ಹೊಸ ಅನುಭವ ನೀಡುವ ದೃಷ್ಟಿಯಿಂದ ಎಕ್ಸ್​ಫ್ಲೋರಿಯಂ ಆರಂಭಿಸಲಾಗಿದೆ ಎನ್ನುತ್ತಾರೆ ಗಿರಿಯಾಸ್ ಗ್ರೂಪ್ ನಿರ್ದೇಶಕ ಮನೀಷ್ ಗಿರಿಯಾ.

ಅಮೆರಿಕಾ ಎಕ್ಸ್​​ಪರ್ಟ್‍ಗಳಿಂದ ಮ್ಯೂಸಿಯಂ ಸಿದ್ಧ

ಅಮೆರಿಕದ ರೆಡ್‍ಬಾಕ್ಸ್ ವರ್ಕ್‍ಶಾಪ್‍ನ ಡೈರೆಕ್ಟರ್ ಡಿಸೈನರ್ ಸಿಮೊನ್ ಲಾಷ್​ಪೋರ್ಡ್​ರ ನೆರವಿನೋಂದಿಗೆ ಈ ಎಕ್ಸ್​ಫ್ಲೋರಿಯಂ ವಿನ್ಯಾಸಗೊಳಿಸಲಾಗಿದೆ. 2 ವರ್ಷಗಳ ಹಿಂದೆ ಹುಟ್ಟಿಕೊಂಡ ಈ ಪರಿಕಲ್ಪನೆ, ಸತತ ಆರು ತಿಂಗಳ ಪರಿಶ್ರಮದಿಂದ ಎಕ್ಸ್​ಫ್ಲೋರಿಯಂ ತಲೆ ಎತ್ತಿದೆ. ಪ್ರತಿ ದಿನ 40 ಮಂದಿ ಮ್ಯೂಸಿಯಂನಲ್ಲಿ ಕೆಲಸ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ಇತರ ಬಡಾವಣೆಗಳಲ್ಲೂ ಎಕ್ಸ್​ಫ್ಲೋರಿಯಂ ಆರಂಭಿಸಲಾಗುವುದು.

ಶುಲ್ಕವೆಷ್ಟು..?

ವಾರದ ಎಲ್ಲಾ ದಿನಗಳಲ್ಲಿ ಮ್ಯೂಸಿಯಂ ತೆರೆದಿರುತ್ತದೆ. ಸಾಮಾನ್ಯ ದಿನಗಳಲ್ಲಿ ದೊಡ್ಡವರಿಗೆ 200 ಮತ್ತು ಮಕ್ಕಳಿಗೆ 600 ರೂ. ಶುಲ್ಕ ತೆಗೆದುಕೊಳ್ಳಲಾಗುತ್ತದೆ. ವಾರಂತ್ಯದಲ್ಲಿ ಮಕ್ಕಳಿಗೆ 750 ಹಾಗೂ ದೊಡ್ಡವರಿಗೆ 250 ರೂ. ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ಒಟ್ಟು 300 ಮಕ್ಕಳು ಮತ್ತು ಪಾಲಕರು ಎಕ್ಸ್​ಫ್ಲೋರಿಯಂನ ಒಳಗೆ ಹೋಗಬಹುದಾಗಿದೆ. ನೀವು ನಿಮ್ಮ ಮಕ್ಕಳಿಗೆ ಹೊಸ ಅನುಭವ ಕೊಡಿಸಬೇಕು ಎಂದೆನಿಸಿದರೆ ದೊಮ್ಮಲೂರು ಒಳ ವರ್ತುಲ ರಸ್ತೆಯ ಅಮರ ಜ್ಯೋತಿ ಲೇಔಟ್‍ನಲ್ಲಿರುವ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್​ಫ್ಲೋರಿಯಂಗೆ ಭೇಟಿ ಕೊಡಬಹುದು.

Related Stories