ಆಹಾರ ಪೋಲಾಗುವುದನ್ನು ತಡೆಯುವ ಪ್ಲಾನ್​- ಹಸಿದವರ ಹೊಟ್ಟೆ ತುಂಬಿಸ್ತಾರೆ ಶಿವಕುಮಾರ್​​

ಟೀಮ್​ ವೈ.ಎಸ್​. ಕನ್ನಡ

1

ಮದುವೆ, ಹುಟ್ಟಿದ ಹಬ್ಬ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಊಟ, ತಿಂಡಿ ತಿನಿಸುಗಳು ವಿವಿಧ ಕಾರಣಗಳಿಂದಾಗಿ ಉಳಿದು ಬಿಡುತ್ತವೆ. ಅವುಗಳ ಪೈಕಿ ಹಲವು ಬಾರಿ ಉಳಿದ ಆಹಾರ ಕಸದ ಡಬ್ಬಾ ಸೇರುವುದೇ ಹೆಚ್ಚು. ಆದ್ರೆ ಮದುವೆ, ಸೇರಿದಂತೆ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಉಳಿದಿರುವ ಆಹಾರವನ್ನು ಹಸಿದ ಹೊಟ್ಟೆ ಸೇರಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಸಮಾರಂಭಗಳಲ್ಲಿ ಉಳಿದಿರುವ ಆಹಾರವನ್ನು ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸವನ್ನು ರಾಜಾಜಿನಗರದ ಶಿವಕುಮಾರ್ ಎಂಬುವವರು ಸದ್ದಿಲ್ಲದೆ ಮಾಡುತ್ತಿದ್ದಾರೆ. ಈ ಮೂಲಕ ಹಸಿದ ಹೊಟ್ಟೆಯನ್ನು ತುಂಬಿಸುವ ಕೆಲಸ ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದಾರೆ.

ಯಾವುದೇ ಕಾರ್ಯಕ್ರಮವಿರಲಿ, ಮದುವೆ ಬೇಕಾದರೂ ಇರಲಿ  ಊಟದ ವ್ಯವಸ್ಥೆಯು ಭರ್ಜರಿಯಾಗಿ ತಯಾರಾಗಿರುತ್ತದೆ. ಮಾಡಿದ ಅಡುಗೆಯಲ್ಲಿ ಖರ್ಚಾಗುವುದು ಕೇವಲ ಅರ್ಧಕರ್ಧ ಮಾತ್ರ. ಉಳಿದದ್ದು ವ್ಯರ್ಥ ಮಾಡುವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಿವಕುಮಾರ್ ಮತ್ತವರ ಗೆಳೆಯರು "ದೇಶಕ್ಕಾಗಿ ಉಳಿತಾಯ" ಎಂಬ ಸಂಘವನ್ನು ಕಟ್ಟಿಕೊಂಡು, ವ್ಯರ್ಥವಾಗುವ ಆಹಾರವನ್ನು ಆ ದಿನವೇ ಹಸಿದವರಿಗೆ ನೀಡುವ  ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಹಸಿವನ್ನು ನೀಗಿಸುವ ಕಾರ್ಯದಲ್ಲಿ ತೊಡಗಿದೆ ಶಿವಕುಮಾರ್ ಮತ್ತವರ ಗೆಳೆಯರ ಬಳಗ.

ಇದನ್ನು ಓದಿ: ಟೇಸ್ಟ್​ನಲ್ಲಿ ಸೂಪರ್, ಆರೋಗ್ಯಕ್ಕೆ ಕೊಡುತ್ತೆ ಎಕ್ಸಟ್ರಾ ಪವರ್- ಇದು ಸಿರಿಧಾನ್ಯಗಳ ಖದರ್

ರಾಜಾಜಿನಗರದ ಶಿವಕುಮಾರ್ ನಿಸ್ವಾರ್ಥ ಸೇವೆಯಿಂದ " ದೇಶಕ್ಕಾಗಿ ಉಳಿತಾಯ " ಎಂಬ ಉದ್ದೇಶವನ್ನಿಟ್ಟುಕೊಂಡು ಅವರ ವೈಯಕ್ತಿಕ ಆಸಕ್ತಿಯಿಂದ ವ್ಯರ್ಥ ಆಹಾರ ಪೋಲಾಗದಂತೆ ತಡೆಗಟ್ಟಿ ಹಸಿದವರಿಗೆ ಅನ್ನ ನೀಡಲು ಮುಂದಾಗಿದ್ದಾರೆ. ನಗರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಸಮಾರಂಭಗಳು, ಕಾರ್ಯಕ್ರಮಗಳು ನಡೆಯುವುದರಿಂದ ಕಲ್ಯಾಣ ಮಂಟಪಗಳು, ಅತಿಥಿಗೃಹಗಳು, ಹೋಟೆಲ್‍ಗಳಿಂದ ಆಹಾರವನ್ನು ಪಡೆದು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಆಸ್ಪತ್ರೆಗಳು ಸೇರಿದಂತೆ, ಹಲವು ಕಡೆಗಳಲ್ಲಿ ಹಸಿವಿನಿಂದ ಬಳಲುತ್ತಿರುವವರಿಗೆ ಉಚಿತವಾಗಿ ಆಹಾರ ನೀಡುತ್ತಾರೆ. ಈ ಕಾರ್ಯವನ್ನು ಶಿವಕುಮಾರ್​ ಮತ್ತು ತಂಡ  ಸುಮಾರು 16 ವರ್ಷಗಳಿಂದ ನಿರ್ವಹಿಸುತ್ತಾ ಬಂದಿದೆ.

" ಅನ್ನಂ ಪರಬ್ರಹಂ ಸ್ವರೂಪ ಎನ್ನುತ್ತಾರೆ. ಅಂತಹ ಅನ್ನವನ್ನು ವ್ಯರ್ಥ ಮಾಡದೆ ಅವಶ್ಯಕತೆ ಇರುವವರಿಗೆ ನೀಡಿದರೆ ಅವರ ಹಸಿವೂ ನೀಗುತ್ತದೆ. ಹಾಗಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ."
- ಶಿವಕುಮಾರ್, ದೇಶಕ್ಕಾಗಿ ಉಳಿತಾಯದ ಮುಖ್ಯಸ್ಥ

50 ಸಾವಿರ ರೂಪಾಯಿ ವ್ಯಯ

ಶಿವಕುಮಾರ್ ಈ ರೀತಿ ಆಹಾರ ಪಡೆದು ಅದನ್ನು ಹಸಿದವರಿಗೆ ನೀಡಲು ಸುಮಾರು 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ತಟ್ಟೆ, ಲೋಟಗಳಿಗಾಗಿ ಕನಿಷ್ಟವೆಂದರೂ ತಿಂಗಳಿಗೆ 50000 ಸ್ವಂತ ದುಡ್ಡು ಖರ್ಚು ಮಾಡುತ್ತಾರೆ. ಇದಕ್ಕಾಗಿ ತಮ್ಮ ಮಗನೂ ಸೇರಿದಂತೆ ಕೆಲಸದವರನ್ನು ಇಟ್ಟುಕೊಂಡಿದ್ದಾರೆ. ಇದರಿಂದ ಅವರಿಗೆ ಸಂತೃಪ್ತಿ ಸಿಗುತ್ತದೆಂದು ಶಿವಕುಮಾರ್ ಹೇಳುತ್ತಾರೆ.

ಪ್ರತಿನಿತ್ಯ ದಿನಕ್ಕೆ ಹಲವಾರು ಜನರು ಹಸಿವಿನಿಂದ ನರಳುತ್ತಾರೆ. ಸಾವಿನ ಪ್ರಕರಣ ಕೂಡ ಆಗಾಗ ವರದಿ ಆಗುತ್ತದೆ. ಈ ನಿಟ್ಟಿನಲ್ಲಿ ವ್ಯರ್ಥವಾಗುವ ಆಹಾರವನ್ನು ಹಸಿದವರಿಗೆ ನೀಡುವ ಕಾರ್ಯ ಬೆಂಗಳೂರಿನಲ್ಲಿ ಹಲವು ವರ್ಷಗಳ ಹಿಂದೆ ಶುರುವಾಗಿದ್ದು, ಇದೀಗ ಈ ಬಗ್ಗೆ ಸಾರ್ವಜನಿಕರಲ್ಲಿ ಕೂಡ ಅರಿವು ಮೂಡುತ್ತಿದ್ದು, ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಅಗತ್ಯವಿರುವರಿಗೆ ನೀಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಶಿವಕುಮಾರ್ ಅವರ ಜತೆ ಸಾಕಷ್ಟು ಸಂಘ,ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ನಗರದಲ್ಲಿರುವ ಮಾನವ್ ಚಾರಿಟೇಬಲ್ ಟ್ರಸ್ಟ್, ಶಿಶು ಮಂದಿರ್, ಮಾರ್ಕ್ ಕೇಟರಿಯನ್ ಮುಂತಾದವುಗಳಿಗೆ ಆಹಾರವನ್ನು ಪಡೆಯುತ್ತವೆ. ಸಮಾರಂಭಗಳನ್ನು ಆಯೋಜಿಸುವವರು ಎನ್‍ಜಿಓಗಳು, ಹೋಟೆಲ್, ಕಲ್ಯಾಣಮಂಟಪದ ಜೊತೆ ಸದಾ ಸಂಪರ್ಕದಲ್ಲಿದ್ದರೆ ವ್ಯರ್ಥ ಆಹಾರದ ವಿಷಯ ತಿಳಿಯುತ್ತದೆ.

" ನಮ್ಮಲ್ಲಿ ಮಿಕ್ಕಂತಹ ಆಹಾರವನ್ನು ಹಾಸ್ಟೆಲ್, ಅನಾಥಶ್ರಮ, ವೃದ್ದಾಶ್ರಮಗಳಿಗೆ ಕೊಡುತ್ತೇವೆ. ನಮ್ಮ ಹೋಟೆಲ್‍ನಲ್ಲಿ ಕೆಲಸ ಮಾಡುವ ಹುಡುಗರೇ ಹೋಗಿ ವಿತರಿಸಿ ಬರುವ ವ್ಯವಸ್ಥೆ ಮಾಡಿದ್ದೇವೆ. ಆಹಾರ ಹಸಿದವರಿಗೆ ಸಿಕ್ಕರೆ ಒಳ್ಳೆಯದು."
- ರಮೇಶ್, ಹೋಟೆಲ್ ಮಾಲೀಕ

ಅರಿವು ಅಗತ್ಯ

ಆಹಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎನ್ನುವ ಶಿವಕುಮಾರ್, ಪ್ರತಿಷ್ಠೆಗೋಸ್ಕರ ತಟ್ಟೆ ತುಂಬಾ ಬಡಿಸಿಕೊಂಡು ಕೇವಲ ಎರಡು, ಮೂರು ತುತ್ತು ತಿಂದು ಹಾಗೆಯೇ ವ್ಯರ್ಥ ಬಿಟ್ಟು ಹೋಗುತ್ತಾರೆ. ಇದರಿಂದ ಬಹಳಷ್ಟು ಆಹಾರ ಪೋಲಾಗುತ್ತದೆ. ಅನ್ನದ ಬಗ್ಗೆ ಅಸಡ್ಡೆ ಬೇಡ. ಆಹಾರದ ಬಗ್ಗೆ ಅಹಂಕಾರ ಬೇಡ, ಆಹಾರವನ್ನು ಗೌರವಿಸಬೇಕು. ನಮಗೆಷ್ಟು ಬೇಕೋ ಅಷ್ಟು ಮಾತ್ರ ಆಹಾರ ಬಡಿಸಿಕೊಂಡು ತಿನ್ನಬೇಕು. ಯಾಕೆಂದರೆ ಎಷ್ಟೋ ಜನ ಊಟ ಸಿಗದೆ ಹಸಿವಿನಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ಅದಲ್ಲದೇ ಬೇಸಿಗೆಯ ಸಮಯದಲ್ಲಿ ಬಹು ಬೇಗ ಆಹಾರ ಕೆಡುವುದರಿಂದ ಉಳಿದ ತಕ್ಷಣ ಹಸಿದವರಿಗೆ ನೀಡದರೆ ಮಾತ್ರ ಸಾರ್ಥಕ ಹಾಗಾಗಿ ಎಲ್ಲರೂ ಉಳಿದ ಊಟವನ್ನು ನಮಗೆ ನೀಡಿ ನಾವು ಅದನ್ನು ಹಸಿದವರಿಗೆ ತಲುಪಿಸುತ್ತೇವೆ.

ಇದನ್ನು ಓದಿ:

1. 'ಗೂಗ್ಲಿ' ಸೂರ್ತಿಯಿಂದ 11 ಚಿನ್ನದ ಪದಕ ಗೆದ್ದ ಯುವಕ

2. ಮೆಕ್ ಡೊನಾಲ್ಡ್ಸ್​​, ಕೆಎಫ್​ಸಿಗೂ ಭಯ ಹುಟ್ಟಿಸಿದೆ 'ಪತಂಜಲಿ'..!

3. ಟೇಸ್ಟ್​ನಲ್ಲಿ ಸೂಪರ್, ಆರೋಗ್ಯಕ್ಕೆ ಕೊಡುತ್ತೆ ಎಕ್ಸಟ್ರಾ ಪವರ್- ಇದು ಸಿರಿಧಾನ್ಯಗಳ ಖದರ್

 

 


 


Related Stories

Stories by YourStory Kannada