ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸ್ತಿದೆ `ಮಿಷನ್ –ಎ-ಸಫಾಯಿ’

ಟೀಮ್​ ವೈ.ಎಸ್​. ಕನ್ನಡ

ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸ್ತಿದೆ `ಮಿಷನ್ –ಎ-ಸಫಾಯಿ’

Sunday December 20, 2015,

3 min Read


ಸ್ವಚ್ಛ ಭಾರತ ಕಲ್ಪನೆಯನ್ನು ಸಾಕರಗೊಳಿಸಲು ನಿಟ್ಟಿನಲ್ಲಿ ಆರಂಭವಾದ ಬೃಹತ್ ಚಳುವಳಿ ಸ್ವಚ್ಛ ಭಾರತ ಅಭಿಯಾನ. ಪ್ರಧಾನಿ ನರೇಂದ್ರ ಮೋದಿ ಗಾಂಧಿ ಜಯಂತಿಯಂದು ಅಕ್ಟೋಬರ್ 2, 2014ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ರು. ನೈರ್ಮಲ್ಯ ವಿಷಯದಲ್ಲಿ ದೇಶದ ದೊಡ್ಡ ಅಭಿಯಾನವಾಗಿ ಮಾರ್ಪಟ್ಟ ಈ ಆಂದೋಲನದಲ್ಲಿ ದೇಶದ ಜನತೆ ಒಂದಲ್ಲ ಒಂದು ರೀತಿಯಲ್ಲಿ ಕೈಜೋಡಿಸುತ್ತಿದ್ದಾರೆ.

ಹನಿ,ಹನಿ ಗೂಡಿದ್ರೆ ಹಳ್ಳ. ವಿದ್ಯಾರ್ಥಿಗಳು ಒಂದಾದ್ರೆ ಯಾವುದೂ ಕಷ್ಟವಲ್ಲ. ಕಠಿಣ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಬಲ್ಲರು. ಇದಕ್ಕೆ `ಮಿಷನ್ –ಎ –ಸಫಾಯಿ’ ಉತ್ತಮ ಉದಾಹರಣೆ.

ದೆಹಲಿ ವಿಶ್ವವಿದ್ಯಾನಿಲಯದ ಭಗತ್ ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳೇ ಈ ಅಭಿಯಾನದ ರುವಾರಿಗಳು. ಪೊಲಿಟಿಕಲ್ ಸೈನ್ಸ್ ನಲ್ಲಿ ಸೆಕೆಂಡ್ ಇಯರ್ ಓದುತ್ತಿರುವ ಸುವಾನ್ ಹಿಮಾದ್ರಿಶ್ ಹಾಗೂ ಬಿಕಾಂ ಸೆಕೆಂಡ್ ಇಯರ್​ನ ಹರ್ಷ್ ಪ್ರತಾಪ್, ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದಲ್ಲಿ ಒಂದಾಗಲು ಅನನ್ಯ ಪ್ರಯತ್ನ ಮಾಡಿದ್ರು. ಮೊದಲು ಅವರು ತಮ್ಮ ಕಾಲೇಜಿನಲ್ಲಿ `ಸಫಾಯಿ-ಎ-ಕ್ಯಾಂಪಸ್’ ಶುರುಮಾಡಿದ್ರು.

image


ಸಫಾಯಿ-ಎ-ಕ್ಯಾಂಪಸ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕನಸು ಸ್ವಚ್ಛ ಭಾರತ ಅಭಿಯಾನದ ಆರಂಭದಲ್ಲಿಯೇ ಸುವಾನ್ ಮತ್ತು ಹರ್ಷ್ ಪ್ರತಾಪ್ `ಸಫಾಯಿ-ಎ-ಕ್ಯಾಂಪಸ್’ ಶುರು ಮಾಡಿದರು. ನೋಡ್ತಾ ನೋಡ್ತಾ ಇದ್ದಂತೆ ಭಗತ್ ಸಿಂಗ್ ಕಾಲೇಜಿನ ಇಡೀ ಕ್ಯಾಂಪಸ್ ಅವರ ಜೊತೆ ಕೈ ಜೋಡಿಸಿತು. ಕಾಲೇಜಿನ ಕ್ಯಾಂಪಸ್ ನಲ್ಲಿ ಇದರ ಪರಿಣಾಮ ಕಂಡುಬಂತು. ಮೊದಲೆಲ್ಲ ಕ್ಯಾಂಪಸ್ ಕಸಗಳಿಂದ ತುಂಬಿ ಹೋಗ್ತಾ ಇತ್ತು. ವಿದ್ಯಾರ್ಥಿಗಳು ಕಸವನ್ನು ಕಂಡ ಕಂಡಲ್ಲಿ ಬಿಸಾಡುತ್ತಿದ್ದರು. ಆದ್ರೆ ಅಭಿಯಾನ ಆರಂಭವಾದ ಕ್ಷಣದಿಂದ ಕ್ಯಾಂಪಸ್ ಸ್ವಚ್ಛವಾಗ್ತಾ ಬಂತು. ಕಸವನ್ನು ಕಸದ ಬುಟ್ಟಿಗೆ ಹಾಕುವ ಅಭ್ಯಾಸ ಮಾಡಿಕೊಂಡರು ವಿದ್ಯಾರ್ಥಿಗಳು.

ಮಿಷನ್-ಎ-ಸಫಾಯಿ

ಭಗತ್ ಸಿಂಗ್ ಕಾಲೇಜಿನಲ್ಲಿ ಅಭಿಯಾನ ಯಶಸ್ವಿಯಾಗ್ತಾ ಇದ್ದಂತೆ ದೆಹಲಿಯ ಇತರ ಕಾಲೇಜಿನ ವಿದ್ಯಾರ್ಥಿಗಳನ್ನೂ ಏಕೆ ಸೇರಿಸಬಾರದೆಂದು ಸವಾನ್ ಹಾಗೂ ಹರ್ಷ್ ಯೋಚಿಸಿದ್ರು. ಹಾಗೆಯೇ `ಮಿಷನ್ –ಎ-ಸಫಾಯಿ’ ಅಭಿಯಾನಕ್ಕೆ ನಾಂದಿ ಹಾಡಿದ್ರು. ಮೊದಲು ಅವರು ಕಾಲೇಜುಗಳ ಪ್ರಿನ್ಸಿಪಾಲರ ಜೊತೆ ಮಾತನಾಡಿದ್ರು. ಅಭಿಯಾನದ ಬಗ್ಗೆ ಅವರಿಗೆ ವಿವರ ನೀಡಿದ್ರು. ಇದರಿಂದ ಖುಷಿಯಾದ ಪ್ರಿನ್ಸಿಪಾಲ್ ತಮ್ಮ ಕಾಲೇಜಿನಲ್ಲೂ ಅಭಿಯಾನ ಆರಂಭಿಸಲು ಹಸಿರು ನಿಶಾನೆ ತೋರಿದ್ರು. ನಂತರ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ ಸವಾನ್, ಇತರ ಕಾಲೇಜಿನಲ್ಲೂ ಅಭಿಯಾನ ಆರಂಭಿಸಿದ್ರು. ಅವರು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ಅಭಿಯಾನ ಯಶಸ್ವಿಯಾಯ್ತು. ಒಂದು ತಂಡ ಕಾಲೇಜಿಗೆ ಹೋಗಿ, ಸ್ವಚ್ಛತೆ ಅಭಿಯಾನದ ರೂಪರೇಷೆ ಸಿದ್ಧಪಡಿಸ್ತಾರೆ. ನಂತರ ವಿದ್ಯಾರ್ಥಿಗಳಿಗೆ ಅಭಿಯಾನದ ಮಹತ್ವ ತಿಳಿಸುತ್ತಾರೆ ಹಾಗೂ ಅಭಿಯಾನ ಯಶಸ್ವಿಗೊಳಿಸಲು ಸಾಕಷ್ಟು ವಿದ್ಯಾರ್ಥಿಗಳನ್ನು ಅಭಿಯಾನದಲ್ಲಿ ಸೇರ್ಪಡೆಗೊಳಿಸುತ್ತಾರೆ.

image


ದೆಹಲಿಯ ಇತರ ವಿಶ್ವವಿದ್ಯಾಲಯ ಸೇರ್ಪಡೆ

ದೆಹಲಿ ವಿಶ್ವವಿದ್ಯಾಲಯದ ಎಲ್ಲ ಕಾಲೇಜುಗಳು ಅಭಿಯಾನದಲ್ಲಿ ಸೇರ್ಪಡೆಯಾದ ನಂತರ ಇತರ ವಿಶ್ವವಿದ್ಯಾನಿಲಯಗಳಿಂದಲೂ ಪ್ರಸ್ತಾವನೆ ಬರಲಾರಂಭಿಸ್ತು. ಅನೇಕ ಕಾಲೇಜುಗಳ ಪ್ರಾಂಶುಪಾಲರು ಸವಾನ್ ಗೆ ಪತ್ರ ಬರೆದಿದ್ದರಂತೆ. ಆ ಕಾಲೇಜು ಪ್ರಾಂಶುಪಾಲರ ಜೊತೆ ಮಾತುಕತೆ ನಡೆಸಿ, ಉಳಿದ ವಿಶ್ವವಿದ್ಯಾನಿಲಯಗಳಿಗೂ ಅಭಿಯಾನ ಹರಡುವಂತೆ ಮಾಡಲಾಯ್ತು. ಈಗ ಗುರುಗೋವಿಂದ ಇಂದ್ರಪ್ರಸ್ತ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ಅಂಬೇಡ್ಕರ್ ವಿಶ್ವವಿದ್ಯಾನಿಲಯ ಅಭಿಯಾನದಲ್ಲಿ ಕೈ ಜೋಡಿಸಿದೆ. ಈ ಎಲ್ಲ ವಿಶ್ವವಿದ್ಯಾನಿಲಯಗಳು ಸೇರ್ಪಡೆಯಾದ ಕಾರಣ ವಿದ್ಯಾರ್ಥಿಗಳಿಂದ ಶುರುವಾದ ಸ್ವಚ್ಛತಾ ಅಭಿಯಾನ ಮತ್ತಷ್ಟು ಯಶಸ್ವಿಯಾಗಿದೆ.

ವಿಶ್ವವಿದ್ಯಾನಿಲಯದ ಹೊರಗೆ ಅಭಿಯಾನ

ಕಾಲೇಜು ವಿದ್ಯಾರ್ಥಿಗಳಿಂದ ಆರಂಭವಾದ ಮಿಷನ್ –ಎ –ಸಫಾಯಿ ಅಭಿಯಾನ ವಿಶ್ವವಿದ್ಯಾಲಯಗಳ ಹೊರೆಗೆ ಕಾಲಿಟ್ಟಿದೆ. ಸಾಮಾನ್ಯ ಜನರ ಬಳಿ ಅಭಿಯಾನ ತಲುಪಿದೆ. ದೆಹಲಿ ನಗರ ನಿಗಮ, ರೈಲ್ವೆ ಇಲಾಖೆ ಸೇರಿದಂತೆ ಸರ್ಕಾರಿ ಇಲಾಖೆಗಳ ಮೂಲಕ ಮಿಷನ್ –ಎ –ಸಫಾಯಿ ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡ್ತಾ ಇದೆ. ಸರ್ಕಾರಿ ಕೆಲಸಗಾರರ ಜೊತೆ ಸೇರಿ ರಜಾ ದಿನಗಳಲ್ಲಿ ದೆಹಲಿಯ ಯಾವುದಾದ್ರೂ ಒಂದು ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಈ ಕೆಲಸದಲ್ಲಿ ದಿಲ್ಲಿ ಸರ್ವಿಸ್ ಹೆಸರಿನ ಶಾಲೆಯ ಮಕ್ಕಳ ಗುಂಪೊಂದು ಕೈ ಜೋಡಿಸುತ್ತದೆ. ದಿಲ್ಲಿ ಸರ್ವಿಸ್ ಸದಸ್ಯರು ಬೀದಿ ನಾಟಕಗಳನ್ನು ಮಾಡಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

image


ಮುಂದಿನ ಗುರಿ

ದೆಹಲಿಯಲ್ಲಿ ಮಿಷನ್ –ಎ –ಸಫಾಯಿ ಸಂಪೂರ್ಣ ಯಶಸ್ವಿಯಾದ ಬೆನ್ನಲ್ಲೇ, ದೇಶದ 757 ವಿಶ್ವವಿದ್ಯಾನಿಲಯಗಳಿಗೆ ಅಭಿಯಾನ ತಲುಪುವ ಗುರಿಯನ್ನು ಸುವಾನ್ ಹೊಂದಿದ್ದಾರೆ. ದೆಹಲಿಯಿಂದ ಬೇರೆ ರಾಜ್ಯಗಳಿಗೂ ಅಭಿಯಾನ ಕಾಲಿಟ್ಟಿದೆ. ಆದಷ್ಟು ಬೇಗ ಗುರಿ ತಲುಪುವ ನಿರೀಕ್ಷೆ ಇದೆ ಎನ್ನುತ್ತಾರೆ ಸುವಾನ್. ಅಭಿಯಾನ ಆರಂಭಿಸಿ, ಇಷ್ಟು ದೊಡ್ಡ ಯಶಸ್ಸಿಗೆ ಕಾರಣರಾದ, ನೈರ್ಮಲ್ಯ ಭಾರತದ ಗುರಿ ಹೊಂದಿರುವ ಸುವಾನ್ ಹಿಮಾದ್ರಿಶ್ ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ, ರಾಜ್ಯಪಾಲ,ದೆಹಲಿ ಮುಖ್ಯಮಂತ್ರಿ, ಸಚಿವರು ಹಾಗೂ ವಿವಿ ಕುಲಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಲೇಖಕರು: ಅನ್ಮೋಲ್

ಅನುವಾದಕರು: ರೂಪಾ ಹೆಗಡೆ