ಒಂದು ಕಂಪೆನಿಯ ಸ್ವಾಧೀನ ಪ್ರಕ್ರಿಯೆಯಲ್ಲಿ ಏನೆಲ್ಲಾ ನಡೆಯುತ್ತದೆ?

ಟೀಮ್​​ ವೈ.ಎಸ್​​.ಕನ್ನಡ

ಒಂದು ಕಂಪೆನಿಯ ಸ್ವಾಧೀನ ಪ್ರಕ್ರಿಯೆಯಲ್ಲಿ ಏನೆಲ್ಲಾ ನಡೆಯುತ್ತದೆ?

Friday November 27, 2015,

3 min Read

ಫೆಬ್ರವರಿಯಿಂದ ಇಲ್ಲಿಯವರೆಗೂ ಸಾಕಷ್ಟು ಸ್ವಾಧೀನ ಪ್ರಕ್ರಿಯೆ ಅರ್ಥಾತ್ ಸಂಸ್ಥೆಗಳ ವಿಲೀನ ಪ್ರಕ್ರಿಯೆಗಳು ನಡೆಯುತ್ತಿವೆ. ಇಂತಹ ಸ್ವಾಧೀನ ಪ್ರಕ್ರಿಯೆಯಲ್ಲಿ ಸಣ್ಣ ಸಂಸ್ಥೆಗಳು ದೊಡ್ಡ ಸಂಸ್ಥೆಗಳೊಂದಿಗೆ ಸದ್ದಿಲ್ಲದೆ ವಿಲೀನಗೊಳ್ಳುತ್ತಿವೆ. ಹಾಗಾದರೆ ಸ್ವಾಧೀನ ಪ್ರಕ್ರಿಯೆಯಿಂದ ಏನೆಲ್ಲಾ ಆಗುತ್ತದೆ ಎಂಬುದನ್ನು ಚರ್ಚಿಸೋಣ.

ಇಂತಹ ಸ್ವಾಧೀನ ಪ್ರಕ್ರಿಯೆಗಳು ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಹೋಗಿವೆ. ಆದರೆ ಇದರಿಂದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಪರಿಣಾಮಗಳೂ ಆಗುವುದಿಲ್ಲ. ತಂತ್ರಜ್ಞಾನದ ಪ್ರತಿಭೆಯಿಂದ ಈ ರೀತಿ ಸ್ಪರ್ಧೆಗಿಳಿದು ಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಯುವುದೂ ಸಹ ಸಾಧ್ಯವಿಲ್ಲ. ಒಂದು ಕಂಪನಿಯಲ್ಲಿರುವ ಪರಿಣಿತ ಹಾಗೂ ಪ್ರತಿಭಾವಂತರ ತಂಡವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯನ್ನು ಕೊಂಡುಕೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ. ಸಂಸ್ಥೆಯ ಹೊರಗಿನವರಿಗೆ ಇದೊಂದು ಉದ್ವೇಗಕಾರಿ ಬೆಳವಣಿಗೆಯಂತೆ ಕಂಡುಬರುತ್ತದೆ. ಆದರೆ ವಾಸ್ತವ ಸಂಗತಿ ಏನೆಂದರೆ ಚಾಲಾಕಿ ತಂತ್ರವಾಗಿದೆ. ಸರಿಯಾದ, ಪ್ರತಿಭಾವಂತ ಜನರನ್ನು ಹುಡುಕುವುದು ನಿಜಕ್ಕೂ ತುಂಬಾ ದುಬಾರಿಯಾದ ವಿಧಾನ. ಸರಿಯಾದ ಕೆಲಸಗಾರರನ್ನು ಹುಡುಕದೇ ಇರುವುದೂ ಸಹ ಅತ್ಯಂತ ಅಪಾಯಕಾರಿ ವಿಚಾರ. ಆದರೆ ಇದೆರಡನ್ನೂ ಮಾಡದೇ ಸಣ್ಣ ಉದ್ಯಮಗಳು ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುವ ಸಲುವಾಗಿ ಇಂತಹ ಸ್ವಾಧೀನ ಪ್ರಕ್ರಿಯೆಗಳಿಗೆ ಒಳಪಡುತ್ತವೆ. ಹೀಗೆ ಸಂಸ್ಥೆಗಳನ್ನು ತನ್ನೊಂದಿಗೆ ಲೀನಗೊಳಿಸುವುದು ದೊಡ್ಡ ಕಂಪನಿಗಳಿಗೆ ಒಂದು ಸ್ಟ್ಯಾಂಡರ್ಡ್ ಪ್ರೊಸಿಜರ್ ಆಗಿ ಪರಿಣಮಿಸಿದೆ. ಸದಾ ಕಾಲ ತಮ್ಮ ಸಂಸ್ಥೆಗೆ ಸ್ಪರ್ಧೆ ನೀಡಲು ಬಯಸುವ ಇಂತಹ ಸಣ್ಣ ಸಂಸ್ಥೆಗಳನ್ನು ತಮ್ಮೊಂದಿಗೆ ಲೀನಗೊಳಿಸಿಕೊಳ್ಳುವುದರ ಮೂಲಕ ಸ್ಪರ್ಧೆಯ ಪ್ರಮಾಣಕ್ಕೆ ಬ್ರೇಕ್ ಹಾಕುವುದೂ ಸಹ ಇನ್ನೊಂದು ಉದ್ದೇಶ. ತಮ್ಮದೇ ಆದ ಉದ್ಯಮವನ್ನು ಆರಂಭಿಸಲು ಯಾವುದೋ ಸಂಸ್ಥೆಯ ನೌಕರರು ತಮ್ಮದೇ ಮನಸ್ಥಿತಿಯನ್ನು ಹೊಂದಿರುವ ಇತರರೊಂದಿಗೆ ಸೇರಿಕೊಂಡು ಹೊಸ ಉದ್ಯಮವನ್ನು ಆರಂಭಿಸಿ ಅದನ್ನು ಬೆಳೆಸುವ ಇಚ್ಛೆ ಹೊಂದಿರುತ್ತಾರೆ. ಇವರಿಗೆ ತಮ್ಮ ಚಿಕ್ಕ ಸಂಸ್ಥೆಗಳನ್ನು ದೊಡ್ಡಸಂಸ್ಥೆಗಳೊಂದಿಗೆ ವಿಲೀನ ಮಾಡಿಕೊಂಡು ಆ ಮೂಲಕ ಬೆಳೆಯುವುದೂ ಸಹ ಸಮ್ಮತವಾಗಿರುತ್ತದೆ.

image


ಇಂತಹ ವಾತಾವರಣದಲ್ಲಿ ಬಹುತೇಕ ಎಲ್ಲಾ ಸಂಸ್ಥೆಗಳು ಸಣ್ಣ ಸಣ್ಣ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಮನಸ್ಥಿತಿ ಹೊಂದಿವೆ. ಸ್ವಾಧೀನ ಪ್ರಕ್ರಿಯೆಗೊಳಪಡಲು ನಿಗದಿತ ತಂಡಕ್ಕೂ ಇಚ್ಛೆ ಇದ್ದಲ್ಲಿ ಅದಕ್ಕಾಗಿ ದೊಡ್ಡ ಪ್ರಕ್ರಿಯೆಯೊಂದನ್ನು ಅನುಸರಿಸಬೇಕಾಗುತ್ತದೆ. ಹೊರಗಡೆಯಿಂದ ನಿಂತು ನೋಡಿದರೆ ಇವೆಲ್ಲವೂ ಒಂದೇ ರಾತ್ರಿಯಲ್ಲಿ ಆದ ಬದಲಾವಣೆಯಂತೆ ಕಾಣುತ್ತದೆ. ಕೆಲವೊಂದು ಸಂಧಾನಗಳು, ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಶೇಕ್ ಹ್ಯಾಂಡ್ ಮಾಡುವ ಮೂಲಕ ಡೀಲ್ ಮುಗಿದಂತೆ ಅನ್ನಿಸುತ್ತದೆ. ಆದರೆ ವಾಸ್ತವವಾಗಿ ಇಂತಹ ಡೀಲ್‌ಗಳು ನಿಜಕ್ಕೂ ಸಾಕಷ್ಟು ಜಟಿಲವಾಗಿರುತ್ತದೆ. ಪ್ರತಿಯೊಂದು ಸ್ವಾಧೀನ ಪ್ರಕ್ರಿಯೆಯಲ್ಲೂ ಇದು ವಿಭಿನ್ನವಾಗಿರುತ್ತದೆ. ಇಲ್ಲಿ ಆಸಕ್ತಿದಾಯಕ ವಿಚಾರಗಳೆಂದರೆ ಎಲ್ಲಾ ಸ್ವಾಧೀನ ಪ್ರಕ್ರಿಯೆಗಳಲ್ಲೂ ಸಾಮಾನ್ಯವಾಗಿರುವ ಅಂಶಗಳು. ಅಂದರೆ ಎಷ್ಟು ಪರಿಹಾರ ಹಣದೊಂದಿಗೆ ಸಂಸ್ಥೆ ಸ್ವಾಧೀನ ಪ್ರಕ್ರಿಯೆಗೊಳಪಡಲು ಸಮ್ಮತಿಸಿತು?, ತಾವು ಸ್ವಾಧೀನಗೊಂಡ ಸಂಸ್ಥೆಗೆ ಎಷ್ಟು ಸಮಯದವರೆಗೆ ಸ್ವಾಧೀನಕ್ಕೊಳಪಟ್ಟ ಸಂಸ್ಥೆಯ ನೌಕರರು ಕಾರ್ಯನಿರ್ವಹಿಸುವ ಅವಕಾಶವಿದೆ?, ಸ್ವಾಧೀನಕ್ಕೊಳಪಟ್ಟ ಸಂಸ್ಥೆಯ ಉತ್ಪನ್ನ ಮಾರುಕಟ್ಟೆಯಲ್ಲಿ ಮುಂದುವರೆಯುವುದೋ ಅಥವಾ ಅದನ್ನು ಸ್ಥಗಿತಗೊಳಿಸಬೇಕೋ? ಇಂತಹ ಪ್ರಶ್ನೆಗಳೇ ಎಲ್ಲರಲ್ಲೂ ಹೆಚ್ಚಾಗಿ ಆಸಕ್ತಿ ಮೂಡಿಸುತ್ತವೆ. ಕೆಲವೊಂದು ಸ್ವಾಧೀನ ಪ್ರಕ್ರಿಯೆಗಳು ನಾಟಕೀಯತೆಯಿಂದ ತುಂಬಿರುತ್ತವೆ. ಆದರೆ ಬಹುತೇಕ ಸ್ವಾಧೀನ ಪ್ರಕ್ರಿಯೆಗಳಿಗಾಗಿ ಅನೇಕ ಮೀಟಿಂಗ್‌ಗಳನ್ನು, ಕಾನೂನು ಪ್ರಕ್ರಿಯೆಗಳನ್ನು, ಸಂಭ್ರಮಾಚರಣೆಗಾಗಿ ಟೀಂ ಡಿನ್ನರ್‌ ಅನ್ನೂ ಏರ್ಪಡಿಸಬೇಕಾಗುತ್ತದೆ.

ಆದರೆ ಪ್ರತಿ ಸ್ವಾಧೀನದಲ್ಲೂ ನ್ಯಾಯಯುತವಾಗಿ ಎರಡೂ ಸಂಸ್ಥೆಗಳು ಪಾಲ್ಗೊಳ್ಳಲು ಇಚ್ಛಿಸುತ್ತವೆ. ಸ್ವಾಧೀನ ಪಡಿಸಿಕೊಂಡ ಹಾಗೂ ಸ್ವಾಧೀನಕ್ಕೊಳಪಟ್ಟ ಸಂಸ್ಥೆಗಳೆರಡೂ ಇದರಲ್ಲಿ ಸಮಪಾಲು ತೆಗೆದುಕೊಳ್ಳಲು ಇಚ್ಛಿಸುತ್ತದೆ. ಸ್ವಾಧೀನಕ್ಕೊಳಪಟ್ಟ ಸಂಸ್ಥೆಯವರಿಗೆ ತಮ್ಮಿಂದ ತಮ್ಮ ಮಗುವನ್ನು ಯಾರೋ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡಿರುತ್ತದೆ. ಏಕೆಂದರೆ ಸಂಸ್ಥೆಯನ್ನು ಬೆಳೆಸಲು ನೀವು ಬಹಳಷ್ಟು ಶ್ರಮಿಸಿರುತ್ತೀರಿ. ಸಂಸ್ಥೆಯ ಬೆಳವಣಿಗೆಯಲ್ಲೇ ನಿಮ್ಮನ್ನು ನೀವು ಕಂಡುಕೊಳ್ಳುತ್ತಿರುತ್ತೀರಿ. ನೀವೇ ಸಂಸ್ಥೆಯಾದಂತೆ ನಿಮಗೆ ಭಾಸವಾಗಿರುತ್ತದೆ. ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ನಿಮ್ಮದೇ ಆದ ಬಾಂಧವ್ಯ ವೃದ್ಧಿಯಾಗಿರುತ್ತದೆ. ಅಂತಹ ಸಂಸ್ಥೆಯನ್ನು ವಿಲೀನಗೊಳಿಸಬೇಕೆಂದರೆ ಯಾರಿಗಾದರೂ ಸಂಕಟವಾಗುತ್ತದೆ. ಆದರೆ ನಿಮ್ಮ ಸಂಸ್ಥೆಯ, ನಿಮ್ಮ ಉತ್ಪನ್ನದ, ನಿಮ್ಮ ತಂಡದ ದೃಷ್ಟಿಯಿಂದ ಇದು ಸಹಜ,ಸ್ವಾಭಾವಿಕ ಮತ್ತು ಆಗಲೇಬೇಕಾದ ಕೆಲಸವಾಗಿರುತ್ತದೆ.

ಆದರೆ ಸುತ್ತಲಿನವರಿಗೆ ಇದೊಂದು ಸಂಘರ್ಷದಂತೆ ತೋರುತ್ತಿರುತ್ತದೆ. ಏಕೆಂದರೆ ಒಮ್ಮೆ ಒಂದು ಸಂಸ್ಥೆಯನ್ನು ತುಂಡುಗಳಾಗಿ ಹಂಚಿಕೊಂಡರೆ ಮತ್ತೆಂದೂ ಆ ತುಂಡುಗಳು ಸೇರುವುದು ಸಾಧ್ಯವಿಲ್ಲ, ಮೊದಲಿನ ಸ್ಥಿತಿಗೆ ಹಿಂತಿರುಗುವುದು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ.

ಪ್ರತಿ ಸ್ವಾಧೀನ ಪ್ರಕ್ರಿಯೆಯೂ ಇಂಥದ್ದೊಂದು ಪರಿಸ್ಥಿತಿಯನ್ನು ಎದುರಿಸುತ್ತದೆ, ಎದುರಿಸಲೇಬೇಕಾಗಿರುತ್ತದೆ. ಕೆಲವೊಂದು ಅಪರೂಪದ ಪ್ರಸಂಗಗಳಲ್ಲಿ ಸ್ವಾಧೀನ ಪಡಿಸಿಕೊಂಡ ಸಂಸ್ಥೆ, ಸ್ವಾಧೀನಕ್ಕೊಳಪಟ್ಟ ಸಂಸ್ಥೆಯ ಉತ್ಪನ್ನ, ಸಂಸ್ಥೆ, ಅದರ ಸಂಸ್ಕೃತಿಗಳು ಹಾಗೆಯೇ ಮುಂದುವರೆದುಕೊಂಡು ಹೋಗುವ ಅವಕಾಶ ನೀಡಿದರೂ ಸ್ವಾಧೀನಕ್ಕೊಳಪಟ್ಟ ಸಂಸ್ಥೆಯವರಿಗೆ ತಾವು ಯಾರದೋ ಹಿಡಿತದಲ್ಲಿರುವಂತೆಯೂ, ತಮ್ಮ ಸಂಸ್ಥೆ ತಮ್ಮಿಂದ ದೂರವಾಗುತ್ತಿರುವಂತೆಯೂ ಭಾಸವಾಗುತ್ತದೆ.

image


ನೀವು ತೆಗೆದುಕೊಳ್ಳುವ ಒಂದು ಕಠಿಣ ನಿರ್ಧಾರ ಎಂದೆಂದಿಗೂ ಒಂದು ಬದಲಾವಣೆಯನ್ನು ತಂದುಬಿಡುತ್ತದೆ. ನಂತರ ಏನೇನಾಗಬೇಕೋ ಅದೆಲ್ಲವನ್ನೂ ಮಾಡಲೇಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಬೇಕಾಗುತ್ತದೆ. ಆಗಬೇಕಾದದ್ದನ್ನು ಕಾಳಜಿಯಿಂದ, ಪ್ರೌಢತೆಯಿಂದ, ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭಾವನೆಯಿಂದ ಮಾಡಬೇಕಾದ್ದಷ್ಟೇ ನಮ್ಮ ಕೆಲಸವಾಗಿರುತ್ತವೆ. ನಿಮಗೆ ಹೆಮ್ಮೆ ಆಗಬಹುದು(ನಾವೇನೋ ಅತ್ಯುತ್ತಮವಾದುದನ್ನು ಸಾಧಿಸಿದ್ದೇವೆ ಮತ್ತು ಅದಕ್ಕೆ ಬೆಲೆತೆರುತ್ತಿದ್ದೇವೆ ಎಂದು ಅನ್ನಿಸಬಹುದು) ಆದರೆ ನಿಮ್ಮ ಆತ್ಮ ಜಾಗೃತಗೊಳ್ಳಬಹುದು(ಇದರಲ್ಲಿ ವಿಶೇಷವಾದುದೇನೂ ಇಲ್ಲ ಅನ್ನಿಸಬಹುದು), ಸಂಘರ್ಷಕ್ಕೊಳಗಾಗಬಹುದು(ಇದೇ ನನ್ನ ಗುರಿಯಾಗಿತ್ತೇ ಅನ್ನಿಸಬಹುದು), ಆದರೆ ಭರವಸೆಯೂ ದೊರಕಬಹುದು(ಇದು ನನಗೆ ಹಾಗೂ ನನ್ನ ತಂಡಕ್ಕೆ ದೊರಕಿದ ಅತ್ಯುತ್ತಮ ಅವಕಾಶ ಅನ್ನಿಸಬಹುದು) ಹೀಗೆ ಅನೇಕ ಗೊಂದಲಪೂರಿತವಾದಂತಹ ಅಭಿಪ್ರಾಯಗಳು ಮೂಡಿ ಮರೆಯಾಗುತ್ತಿರುತ್ತವೆ. ಆದರೆ ಅಂತಿಮವಾಗಿ ಯಾವುದೇ ಸರಿಯಾದ ನಿರ್ಧಾರಕ್ಕೆ ಬರದೆ ಚಡಪಡಿಕೆ ಉಂಟಾಗುತ್ತದೆ. ಮಾಡಿದ್ದು ಸರಿಯೋ, ತಪ್ಪೋ ಎಂಬ ಗೊಂದಲ ಉಳಿದುಬಿಡುತ್ತದೆ.

ಹೀಗೆ ಸ್ವಾಧೀನ ಪ್ರಕ್ರಿಯೆಯಲ್ಲಿ ಸ್ವಾಧೀನಕ್ಕೊಳಪಡುವ ಸಂಸ್ಥೆಯ ಮುಖ್ಯಸ್ಥರು ಸಾಕಷ್ಟು ಭಾವನಾತ್ಮಕ ಯುದ್ಧವನ್ನೇ ಎದುರಿಸಬೇಕಾಗಿರುತ್ತದೆ. ಹೊಸ ನಿರೀಕ್ಷೆಗಳು, ಭಾವನೆಗಳ ಸಮ್ಮಿಶ್ರಣದೊಂದಿಗೆ ಸ್ವಾಧೀನ ಪ್ರಕ್ರಿಯೆಗೆ ಸಿದ್ಧರಾಗಬೇಕಿರುತ್ತದೆ.

ಲೇಖಕರು: ಜೇಮ್ಸ್​​ ಕಮಿಂಗ್ಸ್​​

ಅನುವಾದಕರು: ವಿಶ್ವಾಸ್​​​