ಫೋಟೋಗ್ರಾಫ್​​+ಜ್ಯೋತಿಷಿ+ಶಿಕ್ಷಣ ತಜ್ಞೆ= ಕುಸುಮ್​​ ಭಂಡಾರಿ

ಟೀಮ್​​ ವೈ.ಎಸ್​​.

ಫೋಟೋಗ್ರಾಫ್​​+ಜ್ಯೋತಿಷಿ+ಶಿಕ್ಷಣ ತಜ್ಞೆ= ಕುಸುಮ್​​ ಭಂಡಾರಿ

Tuesday October 06, 2015,

3 min Read

ಹೆಸರು ಕುಸುಮ್​ ಭಂಡಾರಿ. ಆದ್ರೆ ಈಕೆ ಸಾಮಾನ್ಯ ಮಹಿಳೆಯಲ್ಲ. ಕುಸುಮ್​​ ಗೆ ಏನು ಗೊತ್ತಿದೆ ಅನ್ನೋದನ್ನ ಲೆಕ್ಕ ಹಾಕೋದು ಕೊಂಚ ಕಷ್ಟ ಆಗಬಹುದು. ಆದ್ರೆ ಏನು ಗೊತ್ತಿಲ್ಲ ಅನ್ನೋದನ್ನ ಸುಲಭವಾಗಿ ಹೇಳಬಲ್ಲಷ್ಟು ದೊಡ್ಡ ಪ್ರತಿಭೆ. ಕುಸುಮ್​ ಭಂಡಾರಿ ಒಬ್ಬ ಶಿಕ್ಷಣ ತಜ್ಞೆ, ಫೋಟೋಗ್ರಾಫರ್, ಕಲೆಯ ಆರಾಧಕಿ, ಜ್ಯೋತಿಷಿ. ಪಶ್ಚಿಮ ಬಂಗಾಳದಲ್ಲಿ ಪೂರ್ವಪ್ರಾಥಮಿಕ ಅಥವಾ ಶಿಶುವಿಹಾರಗಳಲ್ಲಿ ಶಿಕ್ಷಣದ ಪ್ರವರ್ತಕಿಯಾದ ಕುಸುಮ್​​ ಭಂಡಾರಿಯದ್ದು ಬಹುಮುಖ ಪ್ರತಿಭೆ ಅನ್ನೋದರಲ್ಲಿ ಡೌಟೇ ಇಲ್ಲ. ಮಾಂಟೆಸ್ಸರಿ ಬಾಲನಿಲಯದ ಹಿಂದಿನ ಶಕ್ತಿಯೇ ಕುಸುಮ್​​ ಭಂಡಾರಿ.

image


ರೂಪುಗೊಂಡ ರೀತಿ

ಪದವಿ ಮುಗಿದ ಬಳಿಕ ಒಂದು ಪ್ಲೇ ಸ್ಕೂಲ್ ಸೇರಿದ ಕುಸುಮ್​​ ಮಾಂಟೆಸ್ಸರಿ ಅಥವಾ ಪೂರ್ವ ಪ್ರಾಥಮಿಕ ಶಿಕ್ಷಣದ ಕುರಿತು ತರಬೇತಿ ಪಡೆದರು. ಅದು ಭಾರತದಲ್ಲಿ ಮೇಡಂ ಮಾಂಟೆಸ್ಸರಿ ಸಂಘಟನೆ ಆರಂಭವಾಗಿದ್ದ ಕಾಲ. ಅಸೋಸಿಯೇಷನ್ ಮಾಂಟೆಸ್ಸರಿ ಇಂಟರ್ ನ್ಯಾಷನಲ್( ಎಎಂಐ) ಕೋಲ್ಕತ್ತಾಕ್ಕೆ ಭೇಟಿ ನೀಡಿತ್ತು. ಈ ವೇಳೆ ಅವರು ಪ್ರಸ್ತಾಪಿಸಿದ್ದ ಒಂದು ಕೋರ್ಸ್ ಅನ್ನು ಅಭ್ಯಾಸ ಮಾಡಲು ಕುಸುಮ್​ ಆಸಕ್ತಿ ವಹಿಸಿದರು. ಕುಸುಮ್​​, ಮರಿಯಾ ಮಾಂಟೆಸ್ಸರಿಯ ಪ್ರತಿನಿಧಿಯಾಗಿದ್ದ ಜೋಸ್ಟನ್ ಅವರ ಬಳಿ ತರಬೇತಿ ಪಡೆದರು. ಇದೇ ವೇಳೆಯಲ್ಲಿ ಅವರಿಗೆ ಅವರ ಭಾವೀ ಅತ್ತೆಯ ಹಾಗೂ ಬಾಲ ನಿಲಯದ ಸಂಸ್ಥಾಪಕಿಯ ಪರಿಚಯವಾಯಿತು. ತರಬೇತಿ ಮುಗಿದ ಬಳಿಕ ಅಂದರೆ 1976ರಲ್ಲಿ ವಿವಾಹವಾದ ಕುಸುಮ್​​ ಭಂಡಾರಿ ಬಾಲನಿಲಯದ ಜವಾಬ್ದಾರಿ ತೆಗೆದುಕೊಂಡರು.

ಕೋಲ್ಕತ್ತಾದಲ್ಲಿ ಮಾಂಟೆಸ್ಸರಿ ಚಳುವಳಿ ಆರಂಭವಾಗಿದ್ದಾಗ, ಆವರಣದಲ್ಲಿದ್ದ ಕೆಲವು ಮನೆಗಳಲ್ಲಿ ಬಾಲನಿಲಯದ ಕಾರ್ಯಚಟುವಟಿಕೆಗಳು ಆರಂಭವಾದವು. ಮ್ಯಾಡಂ ಮಾಂಟೆಸ್ಸರಿಯವರ ಪುತ್ರ ಮಾರಿಯೋ ಮಾಂಟೆಸ್ಸರಿಯವರು ಈ ಸ್ಥಳಕ್ಕೆ 70ರ ದಶಕದಲ್ಲಿ ಭೇಟಿ ನೀಡಿದ್ದರು.

image


ಬಾಲ ನಿಲಯದ ಇನ್‌ಚಾರ್ಜ್ ಆದ ಬಳಿಕ ಬೋಧನಾಕ್ರಮ, ಕಲಿಕೆ ಹಾಗೂ ಮಕ್ಕಳ ಮನಸ್ಥಿತಿಯ ಬಗ್ಗೆ ಸಾಕಷ್ಟು ಅಭ್ಯಾಸ ಮಾಡಿದೆ. ಈ ಅನುಭವ ಮಕ್ಕಳೊಂದಿಗೆ ವ್ಯವಹರಿಸಲು ಬಹಳಷ್ಟು ಸಹಾಯ ಮಾಡಿತು ಎನ್ನುತ್ತಾರೆ ಕುಸುಮ್ ಭಂಡಾರಿ.

ಕಾರ್ಯಕ್ಷೇತ್ರ

ಇಂದು ಕುಸುಮ್​ ಭಂಡಾರಿ ಪ್ರಖ್ಯಾತ ಶಿಕ್ಷಣ ತಜ್ಞೆ. ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ವರ್ಗದ ಜನರಿಗೂ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುವಂತೆ ತಮ್ಮ ಜೀವನವನ್ನು ರೂಪಿಸಿಕೊಂಡಿರುವ ಕುಸುಮ್​​ ಭಂಡಾರಿ ಇದಕ್ಕಾಗಿ ಬದುಕನ್ನೇ ಧಾರೆಯೆರೆದಿದ್ದಾರೆ. 4 ದಶಕಗಳ ತಮ್ಮ ವೃತ್ತಿಬದುಕಿನಲ್ಲಿ ಸೃಜನಾತ್ಮಕ ಶಿಕ್ಷಣ ಶಾಸ್ತ್ರಜ್ಞೆಯಾಗಿ ರೂಪುಗೊಂಡಿರುವ ಕುಸುಮ್​​ ಭಂಡಾರಿಯವರು ಶೈಕ್ಷಣಿಕ ನಿರ್ವಾಹಕ ಉದ್ಯಮಿಯೂ ಆಗಿದ್ದಾರೆ. ಶಿಕ್ಷಣದ ದೃಷ್ಟಿಕೋನ ಮತ್ತು ಶಿಕ್ಷಣದ ಕುರಿತಾಗಿ ಲೋಕೋಪಕಾರಿ ನಿಲುವು ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಗಳ ಪ್ರವರ್ತಕಿಯಾಗಿರುವ ಅವರು ಪೂರ್ವ ಪ್ರಾಥಮಿಕ ಮಟ್ಟದಲ್ಲೇ ಕಂಪ್ಯೂಟರ್ ಶಿಕ್ಷಣವನ್ನು ಪರಿಚಯಿಸಿದ್ದಾರೆ.

ಮಾಂಟೆಸ್ಸರಿ ಹೌಸ್ ನಡೆಸುವುದರ ಹೊರತಾಗಿ ಕುಸುಮ್​ ಒಬ್ಬ ಶಿಕ್ಷಣ ಸಂಶೋಧಕಿ. ಬಾಲ್ಯದಲ್ಲೇ ಶಿಕ್ಷಣದ ಮಹತ್ವ, ಪೂರ್ವಪ್ರಾಥಮಿಕ ಶಿಕ್ಷಣದಲ್ಲಿ ಮಾಂಟೆಸ್ಸರಿಗಳ ಪಾತ್ರ ಇಂತಹ ಹಲವು ವಿಚಾರಗಳ ಕುರಿತು ಕುಸುಮ್​​ ಸಂಶೋಧನೆ ನಡೆಸಿದ್ದಾರೆ. ಮಾನವನ ಸರ್ವತೋಮುಖ ಅಭಿವೃದ್ಧಿ ಎಂಬ ಸೂತ್ರದೊಂದಿಗೆ ಕುಸುಮ್​ ಕಾರ್ಯನಿರ್ವಹಿಸುತ್ತಿದ್ದಾರೆ. 20 ವರ್ಷಗಳ ಹಿಂದೆಯೇ ಕುಸುಮ್​ ಭಂಡಾರಿ ಯುನೆಸ್ಕೋ ಕ್ಲಬ್ ಆಫ್ ವೆಸ್ಟರ್ನ್​ ಇಂಡಿಯಾವನ್ನು ಸ್ಥಾಪಿಸಿದ್ದಾರೆ.

ಫೋಟೋಗ್ರಫಿಯತ್ತ ಕುಸುಮಾ ಒಲವು

ಕುಸುಮ್​​ ಭಂಡಾರಿಯವರ ಆಸಕ್ತಿಯ ಕ್ಷೇತ್ರಗಳು ಹಲವು. ಪೂರ್ವ ಪ್ರಾಥಮಿಕ ಶಿಕ್ಷಣ ಅವರ ಮೊದಲ ಆಸಕ್ತಿ. ಸಂಬಂಧಿಕರು, ಸ್ನೇಹಿತರೊಂದಿಗೆ ಫೋಟೋಗ್ರಫಿಗಾಗಿ ತೆರಳುವುದೂ ಸಹ ಅವರಿಗಿಷ್ಟ. ಕೋಲ್ಕತ್ತಾದಲ್ಲಿ ನ್ಯಾಷನಲ್ ಕಾಂಗ್ರೆಸ್ ಸೆಶನ್ ನಡೆದಾಗ ಅಲ್ಲಿಗೆ ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಆಗಮಿಸಿದ್ದರು. ಆಗ ಕೆಲ ಸ್ಥಳೀಯ ಕಾಂಗ್ರೆಸ್ ನಾಯಕರ ನೆರವಿನಿಂದ ಸೆಶನ್ ನಡೆಯುತ್ತಿದ್ದ ನೇತಾಜಿ ಇಂದೋರ್ ಸ್ಟೇಡಿಯಂಗೆ ಪ್ರವೇಶ ಗಿಟ್ಟಿಸಿದರು. ಈ ವೇಳೆ ಇಂದಿರಾರ ಒಂದಷ್ಟು ಚಿತ್ರಗಳು ಹಾಗೂ ಸೆಶನ್‌ನ ಛಾಯಾಚಿತ್ರಗಳನ್ನು ತೆಗೆದರು. ಕುಸುಮ್​​ರ ಛಾಯಾಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾದಾಗ ಫೋಟೋಗ್ರಫಿಯನ್ನು ಗಂಭೀರವಾಗಿ ತೆಗೆದುಕೊಂಡರು. ಇವರ ಈ ಚಿತ್ರಗಳನ್ನು ಇಲ್ಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳು ಸತತ ಮೂರು ವಾರಗಳ ಕಾಲ ಪ್ರಕಟಿಸಿದ್ದವು. ಅಂದ ಹಾಗೆ ಕುಸುಮ್​​ ಪೋಟೋಗ್ರಫಿಗೆ ಸಂಬಂಧಿಸಿದಂತೆ ಹಾರ್ವರ್ಡ್ ವಿವಿಯಲ್ಲಿ ಕೋರ್ಸ ಸಹ ಮುಗಿಸಿದ್ದಾರೆ.

image


1985ರಲ್ಲಿ ಅಲಹಾಬಾದ್‌ನ ಪ್ರಯಾಗ್‌ನಲ್ಲಿ ನಡೆದ ಕುಂಭಮೇಳಕ್ಕೆ ಫೋಟೋಗ್ರಫಿಗಾಗಿ ಹೋದ ಕುಸುಮ್​ ಭಂಡಾರಿ ಅಲ್ಲಿಂದ ವಾಪಸಾದ ಬಳಿಕ ಪದಾತಿಕ್ ಹಾಲ್‌ನಲ್ಲಿ ತಮ್ಮ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದರು. ಈ ಪ್ರದರ್ಶನವನ್ನು ಪ್ರಖ್ಯಾತ ಚಿತ್ರ ನಿರ್ಮಾಪಕಿ ಮೃಣಾಲ್ ಸೇನ್ ಉದ್ಘಾಟಿಸಿದ್ದರು. ಇದಾದ ನಂತರ ಮೆನ್ ವಿತ್ ಬಿಯರ್ಡ್ಸ್ ಸರಣಿಯಲ್ಲಿ ಪ್ರಧಾನಿ ಚಂದ್ರಶೇಖರ್, ಶ್ಯಾಮ್ ಬೆನಗಲ್, ವಿಜಯ್ ತೆಂಡೂಲ್ಕರ್, ಅಲಿಕ್ವೀ ಪದಾಂಸೀ ಸೇರಿದಂತೆ ಹಲವು ಗಣ್ಯರ ಛಾಯಾಚಿತ್ರಗಳನ್ನು ತೆಗೆದು ಪ್ರದರ್ಶಿಸಿದರು.

ಆಸಕ್ತಿಯ ಹಲವು ಕ್ಷೇತ್ರಗಳು

ಇದಲ್ಲದೇ ಕುಸುಮ್​ ಭಂಡಾರಿಗೆ ಜ್ಯೋತಿಷ್ಯ ಕ್ಷೇತ್ರದ ಪ್ರವೇಶವೂ ಇದೆ. ಭಾನುವಾರದ ಪೇಪರ್‌ಗಳಲ್ಲಿ, ಟೆಲಿಗ್ರಾಫ್‌ನ ಗ್ರಾಫಿಟಿ (Graphiti)ಗೆ ಕುಸುಮ್​​ ಭಂಡಾರಿ ಜ್ಯೋತಿಷ್ಯದ ಕುರಿತು ಅಂಕಣಗಳನ್ನೂ ಸಹ ಬರೆಯುತ್ತಿದ್ದರು. ಕುಸುಮ್​ ಭಂಡಾರಿ ಆಧುನಿಕ ಮತ್ತು ವೈಜ್ಞಾನಿಕ ಮಾದರಿಯ ಜ್ಯೋತಿಷ್ಯ ಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ . ಮೊದಲು ಕುತೂಹಲಕ್ಕೆ ಜ್ಯೋತಿಷ್ಯದ ವಿದ್ಯಾರ್ಥಿಯಾದ ಕುಸುಮ್​ ವಿಷಯದ ಗಂಭೀರತೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಆಸ್ಟ್ರೋ ಮೆಡಿಕೋ ಸೈನ್ಸ್ ವಿಚಾರದಲ್ಲಿ ಕೌನ್ಸಿಲ್ ಆಫ್ ಆಲ್ಟರ್ನೇಟಿವ್ ಸಿಸ್ಟಮ್ ಆಫ್ ಮೆಡಿಸಿನ್ ಸಂಸ್ಥೆಯಿಂದ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನೂ ಪಡೆದಿದ್ದಾರೆ.

ಜಪಾನಿ ಲೇಖಕ ಹಾರುಕಿ ಮುರಾಕಮಿಯವರ ಅಭಿಮಾನಿಯಾಗಿರುವ ಕುಸುಮ್​, ಅವರ ಎಲ್ಲಾ ಕಾದಂಬರಿಗಳನ್ನು ಬಹಳಷ್ಟು ಬಾರಿ ಓದಿ ಮುಗಿಸಿದ್ದಾರೆ. ಇದಲ್ಲದೇ ಕುಸುಮ್​​ ಆಸಕ್ತಿಯ ಇನ್ನೊಂದು ಕ್ಷೇತ್ರವೆಂದರೆ ಬಂಗಾಳಿ ಕಲೆ. ಇದರೊಂದಿಗೆ ಕುಸುಮ್​ ಪ್ರಕೃತಿಪ್ರೇಮಿಯೂ ಹೌದು. ಹೀಗೆ ಆಡು ಮುಟ್ಟದ ಸೊಪ್ಪಿಲ್ಲ, ಕುಸುಮ್​​ ಭಂಡಾರಿಗೆ ಗೊತ್ತಿಲ್ಲದ ಕಲೆ ಇಲ್ಲ ಅನ್ನೋ ಮಾತು ಎಲ್ಲೆಡೆ ಓಡಾಡುತ್ತಿದೆ.