ಹೊಸ ಟ್ರೆಂಡ್, ಹೊಸ ಸ್ಟೈಲ್ ಬಗ್ಗೆ ಅಂಗೈಯಲ್ಲೇ ಮಾಹಿತಿ...`ಸ್ನಾಪ್‍ಡೀಲ್' ಉಡುಪು ವ್ಯಾಪಾರಿಗಳಿಗೆ ಬಂಪರ್

ಟೀಮ್​​ ವೈ.ಎಸ್​​.ಕನ್ನಡ

ಹೊಸ ಟ್ರೆಂಡ್, ಹೊಸ ಸ್ಟೈಲ್ ಬಗ್ಗೆ ಅಂಗೈಯಲ್ಲೇ ಮಾಹಿತಿ...`ಸ್ನಾಪ್‍ಡೀಲ್' ಉಡುಪು ವ್ಯಾಪಾರಿಗಳಿಗೆ ಬಂಪರ್

Wednesday November 25, 2015,

2 min Read

ಇ-ಕಾಮರ್ಸ್‍ನ ದಿಗ್ಗಜ ಎನಿಸಿಕೊಂಡಿರುವ ಗುರ್‍ಗಾಂವ್ ಮೂಲದ ಸ್ನಾಪ್‍ಡೀಲ್ ಸಂಸ್ಥೆ, ಸ್ನಾಪ್‍ಟ್ರೆಂಡ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಮಾರಾಟಗಾರರಿಗೆ ಫ್ಯಾಷನ್ ಟ್ರೆಂಡ್ ಬಗ್ಗೆ ಮುಂದಾಲೋಚನೆಯನ್ನು ಒದಗಿಸುವ ಸೇವೆಯೇ ಸ್ನಾಪ್‍ಟ್ರೆಂಡ್. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉತ್ಪಾದಕರಿಗೆ ಇದು ಅನುಕೂಲ ಮಾಡಿಕೊಟ್ಟಿದೆ. ಗ್ರಾಹಕರನ್ನು ಸೆಳೆಯಬಲ್ಲಂತಹ ಅಥವಾ, ಮಾರುಕಟ್ಟೆಯಲ್ಲಿ ಬಿಕರಿಯಾಗುವಂತಹ ಉಡುಪುಗಳನ್ನು ಮಾತ್ರ ತಯಾರಿಸಲು ಬೇಕಾದ, ಫ್ಯಾಷನ್ ಲೋಕದ ಗುಪ್ತ ವಿವರಗಳನ್ನು ಇದು ಒದಗಿಸುತ್ತದೆ. ಸ್ನಾಪ್‍ಡೀಲ್‍ನ ವ್ಯಾಪಾರಿ ಪಾಲುದಾರರ ಪಾಲಿಗೆ ಸ್ನಾಪ್‍ಟ್ರೆಂಡ್ ಸೇವೆ, ಫ್ಯಾಷನ್‍ನ ಸಲಹಾ ಪುಸ್ತಕವಿದ್ದಂತೆ. ಉತ್ಪನ್ನಗಳ ವಿನ್ಯಾಸವನ್ನು ಅಭಿವೃದ್ಧಿಪಡಿಸಲು ಕೂಡ ನೆರವಾಗುತ್ತದೆ. ಇ-ಕಾಮರ್ಸ್ ಕಂಪನಿಗಳ ಪೈಕಿ ಮೊಟ್ಟ ಮೊದಲ ಬಾರಿಗೆ ಇಂತಹ ವಿಶಿಷ್ಟ ಸೇವೆಯನ್ನು ಜಾರಿಗೆ ತಂದ ಮೊದಲ ಸಂಸ್ಥೆ ಅಂದ್ರೆ ಸ್ನಾಪ್‍ಡೀಲ್. ಈ ಸೇವೆ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಉಡುಪು ಎರಡನ್ನೂ ಒಳಗೊಂಡಿರುವುದು ವಿಶೇಷ. 2015ರ ಹಬ್ಬಗಳ ರುತುವಿನಲ್ಲಿ ಫ್ಯಾಷನ್ ಪ್ರವೃತ್ತಿ ಮತ್ತು ವಿನ್ಯಾಸಗಳ ಸಂಗ್ರಹವನ್ನು ನೀಡಿದ ಮೊದಲ ಸೇವೆ ಅಂದ್ರೆ ಸ್ನಾಪ್‍ಟ್ರೆಂಡ್.

image


ಸ್ನಾಪ್‍ಟ್ರೆಂಡ್ ಮೂಲಕ ವಿನೂತನ ಧಿರಿಸುಗಳು ಮತ್ತು ಅಲಂಕಾರಿಕ ಸಾಧನಗಳನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಮೌಲ್ಯಯುತವಾದ ಗ್ರಾಹಕರ ಒಳನೋಟಗಳನ್ನು ಕೂಡ ವ್ಯಾಪಾರಿಗಳು ಅರ್ಥಮಾಡಿಕೊಂಡಿದ್ದಾರೆ. ಇದು ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸಿದೆ ಅಂತಾ ಸ್ನಾಪ್‍ಡೀಲ್‍ನ ಹಿರಿಯ ಉಪಾಧ್ಯಕ್ಷ ವಿಶಾಲ್ ಛಡ್ಡಾ ಸಂತಸ ಹಂಚಿಕೊಂಡಿದ್ದಾರೆ. ಫ್ಯಾಷನ್ ಲೋಕದ ಇತ್ತೀಚೆಗಿನ ಒಳನೋಟಗಳು ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯ ಮರ್ಮವನ್ನು ಅರಿಯಲು ಮಾರಾಟಗಾರರಿಗೆ ಸಿಕ್ಕ ಅತ್ಯುತ್ತಮ ಅವಕಾಶ ಇದು. ಸ್ನಾಪ್‍ಡೀಲ್ ಮತ್ತು ಫ್ಲಿಪ್‍ಕಾರ್ಟ್, ವ್ಯಾಪಾರಿಗಳಿಗೆ ವಿವಿಧ ಬಗೆಯ ಮೌಲ್ಯಾಧಾರಿತ ಮತ್ತು ಮಾರ್ಕೆಟಿಂಗ್ ಸೇವೆಯನ್ನು ಮಾರಾಟ ಮಾಡಲು ಮುಂದಾಗಿವೆ. ವ್ಯಾಪಾರಿಗಳ ಅನುಕೂಲಕ್ಕಾಗಿ ಕಳೆದ ವರ್ಷ ಆಗಸ್ಟ್‍ನಲ್ಲಿ ಬಂಡವಾಳದ ನೆರವು ನೀಡುವ ಯೋಜನೆಯನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಸಾಫ್ಟ್ ಬ್ಯಾಂಕ್ ನಿಧಿಯಿಂದ ಸ್ನಾಪ್‍ಡೀಲ್ ಹಾಗೂ ಫ್ಲಿಪ್‍ಕಾರ್ಟ್‍ನ 150ಕ್ಕೂ ಹೆಚ್ಚು ವ್ಯಾಪಾರಿಗಳು 50 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಿವೆ.

ಸ್ನಾಪ್‍ಟ್ರೆಂಡ್ ವೇದಿಕೆ ಅತ್ಯಮೂಲ್ಯ ಸಲಹೆಗಳನ್ನು ನೀಡುತ್ತಿದೆ. ಸ್ಪೂರ್ತಿಯಾಗಬಲ್ಲಂತಹ ಟ್ರೆಂಡ್, ಪ್ರಮುಖ ಬಟ್ಟೆಗಳು, ಬಣ್ಣಗಳ ಬಗ್ಗೆ ನಿರ್ದೇಶನ ಹಾಗೂ ಒರಿಜಿನಲ್ ಪ್ರಿಂಟ್‍ಗಳ ಬಗ್ಗೆ ಮಾಹಿತಿ ನೀಡುತ್ತದೆ. ಸ್ನಾಪ್‍ಡೀಲ್‍ನ ಟ್ರೆಂಡ್ ವಿಮರ್ಷಕರ ತಂಡ, ಫ್ಯಾಷನ್ ಡಿಸೈನರ್‍ಗಳು, ಜವಳಿ ವಿನ್ಯಾಸಗಾರರು, ಫ್ಯಾಷನ್ ತಜ್ಞರು ಸೂಕ್ತ ಸಂಶೋಧನೆ ನಡೆಸಿ ಪ್ರತಿಯೊಂದು ರುತುವಿಗೂ ಹೊಂದಾಣಿಕೆಯಾಗಬಲ್ಲ, ವಿವರವಾದ ವಿನ್ಯಾಸ ನಾವೀನ್ಯತೆಯುಳ್ಳ ಧಿರಿಸುಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸುತ್ತಾರೆ. ಮುಂಬರುವ ರುತುಗಳಿಗೆ ಹೊಂದಾಣಿಕೆಯಾಗುವಂತಹ ಹೊಸ ಫ್ಯಾಷನ್ ಟ್ರೆಂಡ್‍ಗಳನ್ನು ಕೂಡ ಸ್ನಾಪ್‍ಟ್ರೆಂಡ್ ಮುನ್ಸೂಚನೆ ಸೇವೆಯಲ್ಲಿ ತಿಳಿಸಲಾಗುತ್ತದೆ. ಶರತ್ಕಾಲ/ಚಳಿಗಾಲ, ಮಳೆಗಾಲ/ ಬೇಸಿಗೆ ಕಾಲ ಹೀಗೆ ವಿವಿಧ ರುತುಗಳಿಗೆ ಬೇಕಾದ ಬಟ್ಟೆಗಳನ್ನು ಉತ್ಪಾದಿಸಲು ಸ್ನಾಪ್‍ಟ್ರೆಂಡ್ ನೆರವಾಗುತ್ತದೆ.

ವಿದ್ಯುತ್ ಉಪಕರಣಗಳು ಹಾಗೂ ಮೊಬೈಲ್‍ಗಳನ್ನು ಬಿಟ್ರೆ ಇ-ಕಾಮರ್ಸ್‍ನಲ್ಲಿ ಅತಿ ಹೆಚ್ಚು ವಹಿವಾಟು ನಡೆಯೋದು ಬಟ್ಟೆಗಳ ವಿಭಾಗದಲ್ಲಿ ಮಾತ್ರ. ಸ್ನಾಪ್‍ಟ್ರೆಂಡ್‍ನಂತಹ ಮುನ್ಸೂಚನೆ ಸೇವೆಯಂತೂ ವ್ಯಾಪಾರಿಗಳು ಹಾಗೂ ಸ್ನಾಪ್‍ಡೀಲ್‍ಗೆ ಹೊಸ ಅರ್ಥವನ್ನೇ ಕಲ್ಪಿಸಿದೆ. ಸರಿಯಾದ ಯೋಜನೆ ಹಾಗೂ ಮುನ್ಸೂಚನೆಯಿಲ್ಲದೇ, ಬಹುತೇಕ ಎಲ್ಲ ವ್ಯಾಪಾರಿಗಳು ಅಸ್ತಿತ್ವದಲ್ಲೇ ಇಲ್ಲದ ಟ್ರೆಂಡ್‍ಗೆ ತಕ್ಕಂತಹ ಉಡುಪುಗಳನ್ನು ತಯಾರಿಸಿ ಕೈಸುಟ್ಟುಕೊಳ್ತಾರೆ. ಆದ್ರೆ ಸ್ನಾಪ್‍ಟ್ರೆಂಡ್ ಸೇವೆಯಿಂದಾಗಿ ಅಂತಹ ವ್ಯಾಪಾರಿಗಳಿಗೆ ಬೇಡಿಕೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಮುಂಬರುವ ಫ್ಯಾಬ್ರಿಕ್, ಸ್ಟೈಲ್ ಮತ್ತು ಪ್ರಕಾರಗಳ ಬಗ್ಗೆ ಒಂದು ಐಡಿಯಾ ಬರುತ್ತೆ.

ಗ್ರಾಹಕರನ್ನು ಹೊರತುಪಡಿಸಿದ್ರೆ ಇ-ಕಾಮರ್ಸ್ ಕಂಪನಿಗಳು ಹೆಚ್ಚಿನ ಗಮನಹರಿಸಿರುವುದು ತಮ್ಮ ವ್ಯಾಪಾರಿಗಳ ಮೇಲೆ. ಅದನ್ನು ಬಿಟ್ಟರೆ ಹಣ ಗಳಿಕೆ ಬಗ್ಗೆ ಮಾತ್ರ ಅವರು ಚಿತ್ತ ಹರಿಸ್ತಾರೆ. ಫ್ಲಿಪ್‍ಕಾರ್ಟ್ ಅಂತೂ ತನ್ನ ಜಾಹೀರಾತು ವಿಭಾಗವನ್ನು ಇನ್ನಷ್ಟು ಬಲಪಡಿಸುತ್ತಿದೆ. ಹೆಚ್ಚು ಲಾಭ ತರಬಲ್ಲ, ಶುಲ್ಕ ಆಧಾರಿತ ವ್ಯಾಪಾರದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಈ ವರ್ಷ ಸಪ್ಟೆಂಬರ್‍ನಲ್ಲಿ ಸ್ನಾಪ್‍ಡೀಲ್, ಎಸ್‍ಡಿ ಅಡ್ವೈಸರ್ ಪ್ರೋಗ್ರಾಮ್ ಅನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಈ ವೇದಿಕೆ ಮೂಲಕ ಉದ್ಯಮ ನಿರ್ವಹಣೆ ಬಗ್ಗೆ ಸ್ನಾಪ್‍ಡೀಲ್‍ನ 2 ಲಕ್ಷ ವ್ಯಾಪಾರಿಗಳಿಗೆ ನೆರವಾಗಲು ವೈಯಕ್ತಿಕ ಸಲಹೆಗಾರರನ್ನು ಒದಗಿಸಲಾಗಿದೆ. ಸ್ನಾಪ್‍ಡೀಲ್‍ನ ಮುನ್ಸೂಚನೆ ಸೇವೆ ಸಧ್ಯ ಉಡುಪುಗಳ ವಿಭಾಗಕ್ಕೆ ಮಾತ್ರ ಮೀಸಲಾಗಿದೆ. ಶೀಘ್ರದಲ್ಲೇ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ವ್ಯಾಪಾರಿಗಳಿಗೂ ಈ ಸೇವೆಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಕೇವಲ ಸ್ನಾಪ್‍ಡೀಲ್ ಮಾತ್ರವಲ್ಲ, ಸದ್ಯದಲ್ಲೇ ಉಳಿದ ಇ-ಕಾಮರ್ಸ್ ಕಂಪನಿಗಳು ಕೂಡ ಇಂತಹ ಸೇವೆಯನ್ನು ಆರಂಭಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಲೇಖಕರು: ಜೈ ವರ್ಧನ್​​

ಅನುವಾದಕರು: ಭಾರತಿ ಭಟ್​​