ಪೂರ್ಣಕಾಲಿಕ ಬ್ಲಾಗರ್ ಆಗಲು ಅಗತ್ಯವಿರುವ 5 ಅಂಶಗಳು

ಟೀಮ್​ ವೈ.ಎಸ್​​.

ಪೂರ್ಣಕಾಲಿಕ ಬ್ಲಾಗರ್ ಆಗಲು ಅಗತ್ಯವಿರುವ 5 ಅಂಶಗಳು

Friday October 30, 2015,

6 min Read

ನೀವೊಬ್ಬ ಉದ್ಯಮಿಯಾಗಬಯಸಿದ್ದರೆ, ಅದಕ್ಕೆ ಅಗತ್ಯವಿರುವ ಸಂಪನ್ಮೂಲಗಳ ಕೊರತೆ ನಿಮಗಿದ್ದರೆ ನೀವು ಬ್ಲಾಗ್‌ಗಳ ಮೂಲಕ ಮೊದಲು ಸಕ್ರಿಯರಾಗಬೇಕು. ಬರೆಯೋದಕ್ಕೆ ಮಾತ್ರ ಬ್ಲಾಗಿಂಗ್ ಮಾಡುವುದಲ್ಲ, ಬ್ಲಾಗಿಂಗ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಮಾರಾಟದ ಬಗೆಗಿನ ವಿಚಾರವನ್ನು ಆಳವಾಗಿ ಅರಿಯಲು ಸಾಧ್ಯವಿದೆ.

ಬ್ಲಾಗಿಂಗ್ ಮೂಲಕ ನೀವು ವಿಷಯಾಧಾರಿತ ಮಾರುಕಟ್ಟೆ ಕಲೆಯನ್ನು ಅಭ್ಯಸಿಸಲು ಸಾಧ್ಯ. ಕೆಲವೊಂದು ಸಂಸ್ಥೆಗಳು ವಿಷಯಾಧಾರಿತ ಮಾರುಕಟ್ಟೆಗಳ ಮೂಲಕವೇ ಯಶಸ್ವಿಯಾಗಿವೆ. ಇದೇ ವೇಳೆ ನಿಮ್ಮ ವಿಷಯಾಧಾರಿತ ಮಾರುಕಟ್ಟೆ ಕೌಶಲ್ಯಗಳ ಮೂಲಕ ಉದ್ಯಮದಲ್ಲಿ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವುದು ಸಾಧ್ಯ. ಬ್ಲಾಗಿಂಗ್‌ ಅನ್ನೇ ಪೂರ್ಣಕಾಲಿಕ ವೃತ್ತಿಯಾಗಿಸಿಕೊಂಡವರೂ ಇದ್ದಾರೆ.

image


ಬ್ಲಾಗಿಂಗ್ ಆರಂಭಿಸಲು ಇರುವ ಮಾರ್ಗಗಳನ್ನು ನೋಡೋಣ

1.ಪ್ರೇರಣೆ ಪಡೆಯಿರಿ, ಸ್ವಲ್ಪ ಧೈರ್ಯವಹಿಸಿ

ಹೊಸ ವಿಚಾರಗಳನ್ನು ಎಲ್ಲರೂ ಏಕೆ ಮಾಡಲು ಸಾಧ್ಯವಿಲ್ಲ? ಏಕೆಂದರೆ ಅವರು ತಮ್ಮ ಪ್ರೇರಣೆ ಮತ್ತು ಸ್ಪೂರ್ತಿಯನ್ನು ಕಳೆದುಕೊಂಡಿರುತ್ತಾರೆ. ನೀವು ನಿಮ್ಮ ಆರಾಮದಾಯಕ ವಲಯದಿಂದ ಹೊರಬಂದು ಹೊಸ ವಿಷಯಗಳನ್ನು ಪ್ರಯತ್ನಿಸುತ್ತಲೇ ಇರಬೇಕು. ಬ್ಲಾಗಿಂಗ್ ಮಾಡುವ ಮೂಲಕ ನೀವು ಕಳೆದುಕೊಳ್ಳುವುದೇನೂ ಇರುವುದಿಲ್ಲ. ಹೀಗಾಗಿ ಇದರಲ್ಲಿ ಯಾವುದೇ ರೀತಿಯ ತೊಂದರೆಗಳೂ ಇರುವುದಿಲ್ಲ. ಒಮ್ಮೆ ಬ್ಲಾಗಿಂಗ್ ನಲ್ಲಿ ಸಕ್ರಿಯರಾದ ಮೇಲೆ ನೀವು ಅದರಲ್ಲೇ ನಿಮ್ಮ ಭವಿಷ್ಯ ಕಂಡುಕೊಳ್ಳಬೇಕೇ?, ಬೇಡವೇ? ಎಂಬುದನ್ನು ನಿರ್ಧರಿಸಿ. ನಿಮ್ಮ ಉದ್ಯೋಗದೊಂದಿಗೆ ನೀವು ಬ್ಲಾಗಿಂಗ್‌ ಅನ್ನು ಅರೆಕಾಲಿಕ ಬ್ಲಾಗರ್ ಆಗಿಯೂ ಮಾಡಬಹುದು.

ಯಶಸ್ವಿ ಬ್ಲಾಗರ್ ಮತ್ತು ಪಯೋನೀರ್ ನ ಬ್ರಾಂಡ್ ಅಂಬಾಸಡರ್ ಆಗಿರುವ ಜಿತೇಂದ್ರ ವಾಸ್ವಾನಿ ಬ್ಲಾಗಿಂಗ್ ಮಾಡಲು ಧೈರ್ಯವಹಿಸಿದರು.

ತಮ್ಮ ಬ್ಲಾಗಿಂಗ್ ಮೂಲಕವೇ ಜೀವನಶೈಲಿಯನ್ನು ರೂಪಿಸಿಕೊಂಡಿರುವ ಅನೇಕ ಟಾಪ್ ಮಾರ್ಕೆಟರ್ಸ್‌ ಅನ್ನು ನೋಡಿ ಸ್ಪೂರ್ತಿ ಪಡೆದಿದ್ದಾರೆ ಜಿತೇಂದ್ರ ವಾಸ್ವಾನಿ. ಉದ್ಯಮದಲ್ಲಿ ಅವರ ಸೋಲು ಗೆಲುವಿನ ಕಥೆಗಳನ್ನು ಓದುತ್ತಿದ್ದರು ಜಿತೇಂದ್ರ. ಬೆಳಿಗ್ಗೆ 9 ರಿಂದ 5 ಗಂಟೆಯವರೆಗೆ ಕೆಲಸ ಮಾಡುವ ಉದ್ಯೋಗಗಳು ನನಗೆ ಇಷ್ಟವಿರಲಿಲ್ಲ. ಅಂತಹ ಕೆಲಸಗಳಲ್ಲಿ ಯಾವುದೇ ರೀತಿಯ ಕ್ರಿಯಾಶೀಲತೆ ಇರುವುದಿಲ್ಲ. ನಾನು ನನ್ನದೇ ಆದ ಹಣದ ಸ್ವಾತಂತ್ರ್ಯ, ಕೇವಲ 500 ಯುಎಸ್ ಡಾಲರ್ ಸಂಪಾದಿಸಬಲ್ಲ ಕೆಲಸಗಳು ನನ್ನ ಜೀವನಶೈಲಿಗೆ ಒಗ್ಗುತ್ತಿರಲಿಲ್ಲ. ಹೀಗಾಗಿ ನಾನು ಬ್ಲಾಗಿಂಗ್ ಆರಂಭಿಸಿದೆ ಎಂದಿದ್ದಾರೆ ಜಿತೇಂದ್ರ ವಾಸ್ವಾನಿ.

ಕಿಡ್ಸ್ ಸ್ಟಾಪ್ ಪ್ರೆಸ್ ಎಂಬ ಉದ್ಯಮದ ಸಂಸ್ಥಾಪಕಿ ಮಾನ್ಸಿ ಝವೇರಿಯವರೂ ಸಹ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮೊದಲ ಮಗಳು ಜನಿಸಿದ ನಂತರವೂ ಎರಡೂವರೆ ವರ್ಷಗಳ ಕಾಲ ನಾನು ಪೂರ್ಣಕಾಲಿಕ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನನ್ನ ಜೀವನದ ಬಹಳಷ್ಟು ಸಮಯವನ್ನು ಕಂಪ್ಯೂಟರ್ ಮುಂದೆ ಕಳೆಯುತ್ತಿದೆ. ಅಂತರ್ಜಾಲದ ಮೂಲಕ ತಾಯಿಯಾಗಿ ನನ್ನ ಅನುಭವವನ್ನು ಹಂಚಿಕೊಳ್ಳಬಯಸಿದಾಗ ನನ್ನ ಸಹೋದ್ಯೋಗಿ ತಾಯಂದಿರು ತಮ್ಮ ಮಕ್ಕಳೊಂದಿಗೆ ತಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು, ಮಕ್ಕಳ ಮನಸ್ಥಿತಿ ಸುಧಾರಿಸುವ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ತಾಯಿ ಮಕ್ಕಳ ಸಂಬಂಧಗಳಲ್ಲಿ ನಡೆಯುವ ಘರ್ಷಣೆಗಳು, ತಾಕಲಾಟಗಳು, ನೋವು ನಲಿವುಗಳು ಸದಾ ರಹಸ್ಯವಾಗಿಯೇ ಉಳಿದುಬಿಡುತ್ತವೆ ಎಂದರು. ಆದರೆ ನಾನು ಆಯ್ದುಕೊಂಡ ವಿಚಾರದ ಬಗ್ಗೆ ನನಗೆ ಖಾತ್ರಿಯಿತ್ತು. ಹೀಗಾಗಿ ಬ್ಲಾಗ್‌ನಲ್ಲಿ ಬರೆಯುವುದನ್ನೂ ಒಂದೇ ಒಂದು ದಿನಕ್ಕೂ ನಿಲ್ಲಿಸಲಿಲ್ಲ. ಇದನ್ನು ಮಾಡಲೆಂದೇ ಕಾರ್ಪೋರೇಟ್ ವಲಯದ ಕೆಲಸವನ್ನು ಬಿಟ್ಟುಬಿಟ್ಟೆ. ಪೋಷಕರಿಗಾಗಿ ಏನನ್ನಾದರೂ ಮಾಡಬೇಕೆಂಬುದು, ಅದೂ ಆನ್‌ಲೈನ್ ಮೂಲಕವೇ ಮಾಡಬೇಕೆಂಬುದು ನನಗೆ ಚೆನ್ನಾಗಿ ಅರಿವಿತ್ತು ಎಂದಿದ್ದಾರೆ ಮಾನ್ಸಿ ಝವೇರಿ.

2.ನಿಮ್ಮ ನೆಲೆಯನ್ನು ಖಚಿತಪಡಿಸಿಕೊಳ್ಳಿ

ಒಂದು ವಿಚಾರದ ಬಗ್ಗೆ ಒಬ್ಬರೇ ಸಂಪೂರ್ಣವಾಗಿ ತಿಳಿದುಕೊಂಡಿರುವುದು. ತಿಳಿದದ್ದನ್ನೆಲ್ಲಾ ಬರೆಯುವುದು ಸಾಧ್ಯವಿಲ್ಲ. ಜನ ಈಗಾಗಲೇ ಇರುವ ಬ್ಲಾಗ್‌ಗಳು, ಪುಸ್ತಕಗಳನ್ನು ಓದುತ್ತಾರೆಯೇ ವಿನಃ ನಿಮ್ಮ ಬ್ಲಾಗ್ ಅನ್ನು ಯಾರೂ ಗಮನಿಸುವುದಿಲ್ಲ ಎಂದೂ ಸಹ ನೀವಂದುಕೊಳ್ಳಬಹುದು. ನಿಮ್ಮ ಬ್ಲಾಗ್‌ನಲ್ಲಿರುವ ವಿಚಾರಗಳು ಅವರ ಸಮಸ್ಯೆಗಳನ್ನು ಬರೆಹರಿಸುವುದಾದರೆ ಜನ ಖಂಡಿತ ನಿಮ್ಮ ಬ್ಲಾಗ್‌ ಅನ್ನು ಓದಿಯೇ ಓದುತ್ತಾರೆ. ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟುಬಿಡಿ.

ತುಂಬಾ ಮುಖ್ಯವಾದ ವಿಚಾರ ಏನೆಂದರೆ ನೀವು ನಿಮ್ಮ ವಿಚಾರಗಳ ಬಗ್ಗೆ ನಿಖರ ದೃಷ್ಟಿಕೋನ ಹೊಂದಿರಬೇಕು. ಆ ವಿಚಾರ ನಿಮಗೆ ಅನುಕೂಲಕರವಾಗಿರಬೇಕು. ನೀವು ಆ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಆ ವಿಚಾರದ ಕುರಿತು ಇನ್ನಷ್ಟು ಹೆಚ್ಚಿನದನ್ನು ಕಲಿತುಕೊಳ್ಳಲು ಉತ್ಸುಕರಾಗಿರಬೇಕು. ಅದು ಅಡುಗೆ, ಮಕ್ಕಳನ್ನು ಪೋಷಿಸುವುದು, ಗಾಸಿಪ್‌ಗಳು, ಜೋಕ್‌ಗಳು, ವಿಮರ್ಶೆಗಳು, ಫ್ಯಾಶನ್, ಮಾರುಕಟ್ಟೆ, ಆರ್ಥಿಕತೆ, ಪ್ರವಾಸ, ಪ್ರಯಾಣ, ಉತ್ಪನ್ನಗಳ ಅಭಿವೃದ್ಧಿ, ಸಾಫ್ಟ್‌ ವೇರ್ ಭಾಷೆ ಅಥವಾ ಯಾವುದೇ ವಿಚಾರ ಆಗಿರಬಹುದು. ಆ ಬಗ್ಗೆ ನಿಮಗೆ ನಿಖರ ಮಾಹಿತಿ ಇರಬೇಕು.

ವಿಸ್ತಾರವಾದ ವಿಚಾರವನ್ನು ಒಮ್ಮೆಲೇ ಆರಿಸಿಕೊಳ್ಳುವುದು ಸರಿಯಲ್ಲ. ನಿಮ್ಮ ಬ್ಲಾಗ್ ಮೂಲಕ ನಿಮ್ಮ ಗ್ರಾಹಕರು ಯಾರು ಮತ್ತು ಯಾವ ಸಮಸ್ಯೆ ಬಗ್ಗೆ ನೀವು ವಿವರಿಸಲು ಇಚ್ಛಿಸುತ್ತೀರಿ ಎಂಬುದನ್ನು ನೀವು ಅರಿತಿರಬೇಕು. ನೀವು ಮಕ್ಕಳ ಪೋಷಣೆಯ ವಿಚಾರವಾಗಿ ಬರೆಯುವುದಾದರೆ, ನಿಮ್ಮ ಟಾರ್ಗೆಟ್ ಮಾರ್ಕೆಟ್‌ ಅನ್ನು ನೀವು ಕೆಳಗಿಳಿಸಿಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಮಾರುಕಟ್ಟೆಯನ್ನು ಶಿಶುಗಳು, ಪುಟ್ಟ ಅಥವಾ ಹದಿಹರೆಯದ ಮಕ್ಕಳ ತಾಯಂದಿರಿಗಾಗಿ ಮೀಸಲಿಡಬೇಕಾಗುತ್ತದೆ. ಟಾರ್ಗೆಟ್ ಮಾರುಕಟ್ಟೆಯನ್ನೂ ಕೆಳಗಿಳಿಸಿದಷ್ಟೂ ಓದುಗರು ಹೆಚ್ಚು ಹೆಚ್ಚು ನಿಮ್ಮೊಂದಿಗೆ ಸಂಪರ್ಕ ಪಡೆಯುತ್ತಾರೆ.

ತಮ್ಮ ಬ್ಲಾಗ್‌ ಅನ್ನು ಆರಂಭಿಸಿದುದರ ಬಗ್ಗೆ ಮಾನ್ಸಿ ವಿವರಿಸುತ್ತಾರೆ. ಮಕ್ಕಳ ಪೋಷಣೆ ಬಗ್ಗೆ ಬರೆಯುವುದರ ಮೂಲಕ ನೆಲೆಯನ್ನು ಕಂಡುಕೊಂಡೆ. ಏಕೆಂದರೆ ಭಾರತೀಯಱರೂ ಇಂತಹ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಹೀಗಾಗಿ ಇದೇ ವಿಚಾರವನ್ನು ಆಯ್ದುಕೊಂಡೆ ಎನ್ನುತ್ತಾರೆ ಮಾನ್ಸಿ.

ಪ್ರತಿಸಲ ಬರೆಯುವಾಗಲೂ ಅದನ್ನು ಪ್ರಾಮಾಣಿಕವಾಗಿ ಬರೆಯುತ್ತಿದ್ದೆ. ಅದರ ಬಗ್ಗೆ ಸಂಪೂರ್ಣವಾಗಿ ಸಂಶೋಧಿಸುತ್ತಿದ್ದೆ ಮತ್ತು ನನ್ನ ಓದುಗರಿಗೆ ಅಗತ್ಯವಿರುವ ಮಾಹಿತಿಗಳನ್ನು ಒದಗಿಸುವ ಮೂಲಕ ಅವರ ಸಮಯಕ್ಕೆ ನ್ಯಾಯ ನೀಡುತ್ತಿದ್ದೆ. ನನ್ನ ಸಮಯಕ್ಕೆ ನಾನೆಷ್ಟು ಬೆಲೆ ನೀಡುತ್ತೇನೋ ಅಷ್ಟೇ ಬೆಲೆಯನ್ನು ಓದುಗರ ಸಮಯಕ್ಕೂ ನೀಡುತ್ತಿದ್ದೆ. ಒಂದು ವಿಚಾರ ಅವರ 120 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ. ಓದುಗರ 120 ಸೆಕೆಂಡ್‌ಗಳನ್ನು ಆ ವಿಚಾರ ವ್ಯರ್ಥವಾಗಿಸುತ್ತಿದೆ ಎಂದು ನನಗನ್ನಿಸಿದರೆ ನಾನು ಅದನ್ನು ಬರೆಯುವುದೇ ಇಲ್ಲ. ನೀವು ನಿತ್ಯವೂ ಬರೆಯುತ್ತಿದ್ದರೆ ಅಲ್ಲಿ ತೋರಿಕೆಗೆ ಅವಕಾಶವೇ ಇರುವುದಿಲ್ಲ. ನಿಮ್ಮನ್ನು ಬೇರೆಯವರಿಗಿಂತ ಹೆಚ್ಚು ನಿಮ್ಮ ಓದುಗರೇ ಅರ್ಥಮಾಡಿಕೊಂಡಿರುತ್ತಾರೆ. ಹೀಗಾಗಿ ಕಿಡ್ಸ್‌ ಸ್ಟಾಪ್ ಪ್ರೆಸ್ ನನ್ನ ಐಡೆಂಟಿಟಿ ಆಯಿತು. ಜನರು ನನ್ನನ್ನು ಪಾರ್ಕ್‌ಗಳಲ್ಲಿ, ಸಮುದ್ರ ತೀರಗಳಲ್ಲಿ, ಉದ್ಯಾನವನಗಳಲ್ಲಿ, ಶಾಲೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ನಿತ್ಯವೂ ನೋಡುತ್ತಿರುತ್ತಾರೆ. ಹೀಗಾಗಿ ತೋರಿಕೆ ಎಂಬುದು ನಿಜಕ್ಕೂ ಅಸಾಧ್ಯ. ನೀವು ಓದುಗರಿಗೆ ಮೋಸ ಮಾಡುವುದೂ ಸಹ ಸಾಧ್ಯವಿಲ್ಲ. ಅವರಂತೆಯೇ ಇನ್ನೊಬ್ಬ ತಾಯಿಯನ್ನು ಅವರು ನನ್ನಲ್ಲಿ ಕಾಣುತ್ತಾರೆ.

ಅಪ್ನಾ ಪ್ಲಾನ್ ಸಂಸ್ಥೆಯ ಸಂಸ್ಥಾಪಕ ಅಮಿತ್ ಕುಮಾರ್, ತಾವು ಆರ್ಥಿಕ ಉತ್ಪನ್ನಗಳ ಕುರಿತು ಅಭ್ಯಸಿಸಲು ಆರಂಭಿಸಿದಾಗ ಬ್ಲಾಗ್ ಒಂದನ್ನು ಆರಂಭಿಸಿದರು.

ನಾನು ನನ್ನ ಮೊದಲ ಉದ್ಯೋಗಕ್ಕೆ ಸೇರಿದಾಗ ಹೂಡಿಕೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಅನೇಕ ಸಲಹೆಗಾರರು ಹಲವು ಸಲಹೆಗಳನ್ನು ನೀಡುತ್ತಿದ್ದರು. ಆರ್ಥಿಕ ಉತ್ಪನ್ನಗಳ ಕುರಿತು ಅಂತರ್ಜಾಲದಲ್ಲಿ ವಿಶ್ಲೇಷಾಣಾತ್ಮಕ ಬರಹಗಳನ್ನು ಓದಲು ಆರಂಭಿಸಿದೆ. ನನ್ನ ಸ್ನೇಹಿತರೊಂದಿಗೆ ಚರ್ಚಿಸಿದ ಬಳಿಕ ಐಐಎಂ, ಐಐಟಿಯಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದ ಬಳಿಕವೂ ವೈಯಕ್ತಿಕ ಆರ್ಥಿಕತೆ ಬಗ್ಗೆ ಜನರಲ್ಲಿ ತೀರಾ ಕಡಿಮೆ ಜಾಗೃತಿ ಇರುವುದು ತಿಳಿದುಬಂತು. ಇದು ನನಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿತು. ಹೀಗಾಗಿ, ನನ್ನದೇ ಹೂಡಿಕೆಯ ಕುರಿತು ಅನೇಕ ವಿಶ್ಲೇಷಣಾತ್ಮಕ ಬರಹಳಗನ್ನು ಬ್ಲಾಗ್‌ನಲ್ಲಿ ಪೋಸ್ಟ್ ಮಾಡಲು ಆರಂಭಿಸಿದೆ. ಕೆಲವೇ ವಾರಗಳಲ್ಲಿ ಅನೇಕ ಪ್ರಶ್ನೆಗಳು ಕಾಡಲು ಆರಂಭಿಸಿದವು. ಈ ಕುರಿತು ಹೆಚ್ಚು ತನಿಖೆ ಮಾಡಲು ಮತ್ತು ಹೆಚ್ಚು ಹೆಚ್ಚು ಬರೆಯಲು ಪ್ರೇರೇಪಣೆ ದೊರೆತಂತಾಯಿತು.

3. ನಿಮ್ಮ ಎಂವಿಪಿ(ಮಿನಿಮಮ್ ವಯಬಲ್ ಪ್ರಾಡಕ್ಟ್- ಉತ್ಪನ್ನದ ಕನಿಷ್ಠ ಸಾಮರ್ಥ್ಯ)ಯನ್ನು ಪರೀಕ್ಷಿಸಿ

ನಿಮ್ಮ ಬ್ಲಾಗ್‌ ಆರಂಭಿಸಲು ಯೋಜನೆ ಮತ್ತು ಪ್ರೇರಣೆ ದೊರೆತಿದ್ದರೆ ನೀವು ನಿಮ್ಮ ಉತ್ಪನ್ನದ ಕನಿಷ್ಠ ಸಾಮರ್ಥ್ಯವನ್ನು ಪರೀಕ್ಷಿಸಬೇಕು. ನಿಮ್ಮ ಬ್ಲಾಗ್‌ಗೆ ಅಗತ್ಯವಿರುವ ಹೆಸರನ್ನು ನೀವು ಖರೀದಿಸಿ ಮತ್ತು ವರ್ಡ್ ಪ್ರೆಸ್ ಅನ್ನು ಇನ್ ಸ್ಟಾಲ್ ಮಾಡಿಕೊಂಡು ಬರೆಯಲು ಆರಂಭಿಸಿ. ಪ್ಲಗಿನ್ಸ್ ಮತ್ತು ಥೀಮ್ ಸೆಟ್ಟಿಂಗ್‌ಗಳ ಬಗ್ಗೆ ಕಲಿಯಲು ಕೆಲವು ದಿನಗಳು ಬೇಕಾಗಬಹುದು.

ಮೊದಲ ಲೇಖನವನ್ನು ಬರೆದು ಮುಗಿಸಿದ ಬಳಿಕ ಪಬ್ಲಿಶ್ ಬಟನ್ ಅನ್ನು ಒತ್ತಿ. ನೀವೇನು ಕಳೆದುಕೊಳ್ಳುತ್ತೀರಿ? ಏನೂ ಇಲ್ಲ.

ಉಚಿತ ಬರವಣಿಗೆಯ ವೇದಿಕೆಗಳ ಮೂಲಕ ನಿಮ್ಮ ಬ್ಲಾಗ್‌ ಅನ್ನು ಪರೀಕ್ಷಿಸುತ್ತಿರುವುದು ನಿಮಗೆ ಇನ್ನೊಂದು ಉಪಯೋಗ.

1.ಟೆಕ್ನಿಕಲ್ ಸೆಟ್‌ ಅಪ್‌ಗಳ ಬಗ್ಗೆ ನೀವೇನೂ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

2.ನಿಮಗೆ ಉಚಿತವಾಗಿ ಬ್ಲಾಗ್ ಥೀಮ್ ಮತ್ತು ಬ್ಲಾಗ್ ಹೋಸ್ಟಿಂಗ್ ಮಾಡುವ ಅವಕಾಶ ದೊರೆಯುತ್ತದೆ.

3.ನಿಮ್ಮ ಬ್ಲಾಗ್‌ನ ಮೂಲಕ ನಿಮ್ಮದೇ ಆದ ವೀಕ್ಷಕ ವರ್ಗ ದೊರಕುತ್ತದೆ. ಈ ವೇದಿಕೆಗಳು ನಿಮ್ಮ ಲೇಖನವನ್ನು ಟ್ಯಾಗ್‌ಗಳು ಮತ್ತು ಲೇಖನದ ಜನಪ್ರಿಯತೆಯನ್ನು ಗಮನಿಸಿ ಪ್ರಚಾರ ಮಾಡುತ್ತವೆ. ನೀವೆಷ್ಟು ಜನಪ್ರಿಯರಾಗುತ್ತೀರೋ ಅಷ್ಟೇ ಪ್ರಚಾರ ನಿಮಗೆ ದೊರಕುತ್ತದೆ.

4. ಈ ವೇದಿಕೆಗಳ ಮೂಲಕ ನೀವು, ನಿಮ್ಮ ಲೇಖನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ನಿಮ್ಮನ್ನು ಇನ್ನಷ್ಟು ಜನಪ್ರಿಯರನ್ನಾಗಿಸುವಂತಹ ವ್ಯಕ್ತಿಗಳ ಸಂಪರ್ಕಕ್ಕೆ ಬರಬಹುದು.

5.ನಿಮ್ಮ ಲೇಖನಗಳ ಆಧಾರದ ಮೇಲೆ ನಿಮಗೆ ಅನೇಕ ವಿಶ್ಲೇಷಣೆಗಳೂ ಸಹ ದೊರೆಯುತ್ತವೆ.

ಇದರಲ್ಲಿ ಕೆಲ ಹಿನ್ನಡೆಗಳೂ ಸಹ ಇವೆ. ನಿಮ್ಮ ಬ್ಲಾಗ್‌ಗೆ ಇಟ್ಟ ಹೆಸರು ನಿಮ್ಮ ಒಡೆತನಕ್ಕೆ ಸೇರುವುದಿಲ್ಲ. ಇದಕ್ಕೆ ಗ್ರಾಹಕೀಕರಣದ ಮಿತಿ ಇರುತ್ತದೆ. ಹಣ ಸಂಪಾದಿಸಲು ಬ್ಲಾಗ್‌ಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ.

ಆದರೆ ಇವ್ಯಾವುದೂ ಮೊದಲ ಲೇಖನ ಪ್ರಕಟಿಸಲು ಅಡೆತಡೆಗಳಾಗಿರುವುದಿಲ್ಲ. ಉಚಿತ ಬ್ಲಾಗ್ ಆರಂಭಿಸುವುದರಿಂದಾಗುವ ಉಪಯೋಗಕ್ಕೆ ಹೋಲಿಸಿದರೆ ಈ ಹಿನ್ನಡೆಗಳು ಅಷ್ಟೇನೂ ಪ್ರಾಮುಖ್ಯತೆ ಪಡೆಯುವುದಿಲ್ಲ. ಒಮ್ಮೆ ಆತ್ಮವಿಶ್ವಾಸ ಪಡೆದುಕೊಳ್ಳುವುದಷ್ಟೇ ಮುಖ್ಯ.

4. ಮಾರ್ಕೆಟಿಂಗ್‌ನ ಮೂಲ ಪಾಠಗಳನ್ನು ಕಲಿತುಕೊಳ್ಳಿ

ಬಹುಶಃ ನೀವು ಬ್ಲಾಗ್ ನಿಂದ ನಿಮ್ಮ ಉದ್ಯಮದತ್ತ ಗಮನಹರಿಸಲು ನಿರ್ಧರಿಸಿರಬಹುದು. ಆದರೆ ಉದ್ಯಮವನ್ನು ಸಲೀಸಾಗಿ ನಡೆಸಲು ನಿಮಗೆ ಕಷ್ಟವಾಗಬಹುದು. ಇಲ್ಲಿಯೇ ಅನೇಕ ಬ್ಲಾಗರ್‌ಗಳು ವಿಫಲರಾಗುವುದು. ಅವರು ಚಾತುರ್ಯಪೂರ್ಣವಾದ ಲೇಖನಗಳನ್ನು ಬರೆಯಬಹುದು ಆದರೆ ಬ್ಲಾಗ್ ಮೂಲಕ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸುಲು ಕಷ್ಟಪಡುತ್ತಿರುತ್ತಾರೆ.

ಯಶಸ್ವಿ ಬ್ಲಾಗರ್ ಆಗಬೇಕಾದರೆ ನೀವು ಮಾರ್ಕೆಟಿಂಗ್‌ನ ಮೂಲ ತತ್ವಗಳನ್ನು ಅಭ್ಯಸಿಸಲೇಬೇಕು. ಬ್ಲಾಗ್ ಅನ್ನು ಮುಂದುವರೆಸಲು ಅಗತ್ಯವಿರುವ ಮಾಹಿತಿಗಳನ್ನು ನೀಡುವ, ಮಾರ್ಕೆಟಿಂಗ್ ವಿಚಾರಗಳ ಬಗ್ಗೆ ತಿಳಿಸಿಕೊಡುವ ಅನೇಕ ಬ್ಲಾಗ್‌ಗಳಿವೆ.

5. ಹಣ ಮಾಡುವುದು ಹೇಗೆ ಎಂಬುದನ್ನು ಕಂಡುಹಿಡಿಯಿರಿ

ಬ್ಲಾಗ್‌ಗಳ ಮೂಲಕ ಹಣ ಮಾಡುವುದು ಹೇಗೆ ಎಂಬುದು ಸಾಮಾನ್ಯವಾಗಿ ಎಲ್ಲಾ ಜನರ ಸಮಸ್ಯೆ. ತಮ್ಮ ಬ್ಲಾಗ್‌ಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದರ ಮೂಲಕವೇ?, ಹಣ ಖರ್ಚಾಗುವುದಕ್ಕಿಂತ ಹೆಚ್ಚು ಹಣ ಮಾಡುವುದಕ್ಕೆ ಎಷ್ಟು ವ್ಯಾಪಾರ ಇರಬೇಕು?, ಬ್ಲಾಗ್ ಮೂಲಕ ಹಣ ಮಾಡಲು ಯಾವುದಾದರೂ ಬೇರೆ ದಾರಿಗಳಿವೆಯೇ? ಎಂಬೆಲ್ಲಾ ಪ್ರಶ್ನೆಗಳು ಜನರನ್ನು ಕಾಡುತ್ತವೆ.

ಆರಂಭದಲ್ಲಿ ನಿಷ್ಠಾವಂತ ವೀಕ್ಷಕರನ್ನು ಹೊಂದುವತ್ತ ಹೆಚ್ಚಿನ ಗಮನಹರಿಸಬೇಕು. ಒಮ್ಮೆ ನೀವು ವೀಕ್ಷಕರ ಸಂಖ್ಯೆಯನ್ನು ತಿಂಗಳಿಗೆ 1 ಲಕ್ಷದಷ್ಟು ಹೆಚ್ಚಿಸಿಕೊಂಡರೆ ನಂತರ ನಿಮಗೆ ಹಣಗಳಿಕೆಯ ಅನೇಕ ದಾರಿಗಳು ಗೋಚರಿಸುತ್ತವೆ.

ನಿಮ್ಮ ಬ್ಲಾಗ್ ಓದುಗರ ಅಗತ್ಯಗಳೇನು ಎಂದು ತಿಳಿದುಕೊಂಡ ಬಳಿಕ ನಿಮ್ಮದೇ ಆದ ಹಣಗಳಿಕೆಯ ತಂತ್ರ ನಿಮಗೆ ದೊರಕುತ್ತದೆ. ಜಾಹೀರಾತುಗಳನ್ನು ಪ್ರದರ್ಶಿಸುವ ಬದಲು ಸಂಯೋಜಿತ ಮಾರುಕಟ್ಟೆಯ ಮೂಲಕ ನೀವು ಹಣಗಳಿಸಬಹುದು. ನಿಮ್ಮ ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರುವ ಮೂಲಕವೂ ಸಂಪಾದಿಸಬಹುದು.

ನಿಮ್ಮ ಪೋಷಕರ/ಮಡದಿಯ/ಸ್ನೇಹಿತೆಯ ಮನವೊಲಿಸಿ

ಇದು ನೀವು ಬ್ಲಾಗಿಂಗ್‌ನಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಅಗತ್ಯವಾದ ಅಂಶ. ಯಾವುದೇ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕಾದರೆ ನಿಮ್ಮ ಮನೆಯವರ, ಆಪ್ತರ ಬೆಂಬಲ ಇರಲೇಬೇಕು. ಬ್ಲಾಗ್‌ ಮೂಲಕ ಗಳಿಸಿದ ಆದಾಯದ ಬಗ್ಗೆ ಅದು ತಿಂಗಳಿಗೆ 5000 ರೂಪಾಯಿಯೇ ಆಗಿದ್ದರೂ ಗಳಿಸಿದ ವಿಚಾರ ಅವರಿಗೆ ತಿಳಿಸಿದರೆ ಅವರ ಮನವೊಲಿಸುವುದು ಬಹಳ ಸುಲಭವಾಗುತ್ತದೆ. ಆಗ ನೀವು ಬ್ಲಾಗ್‌ನಲ್ಲೇ ಸಂಪೂರ್ಣವಾಗಿ ತೊಡಗಿಕೊಂಡರೆ, ಈಗ 5000 ಇರುವ ಆದಾಯ ಮುಂದೆ ಪ್ರತೀ ತಿಂಗಳು 500000ದವರೆಗೂ ಬ್ಲಾಗ್ ಮೂಲಕ ಸಂಪಾದಿಸಬಹುದು ಎಂಬುದನ್ನು ಅವರಿಗೆ ಅರ್ಥವಾಗುವಂತೆ ತಿಳಿಸಬಹುದಾಗಿರುತ್ತದೆ.

ಓವರ್ ಟು ಯು

ಒಂದೇ ದಿನದಲ್ಲಿ ರೋಮ್ ಸಾಮ್ರಾಜ್ಯ ಕಟ್ಟಲ್ಪಡಲಿಲ್ಲ. ನಿಮ್ಮ ಯೋಜನೆಗಳು ಸರಿಯಾಗಿ ಕಾರ್ಯಗತಗೊಳ್ಳಲು ನಿಮ್ಮ ಪ್ರಯತ್ನವನ್ನು ಹಾಕುವುದೂ ಅಗತ್ಯ. ಪೂರ್ಣಕಾಲಿಕ ಅವಕಾಶವಾಗಿ ಬ್ಲಾಗಿಂಗ್ ಬೆಳೆಯುತ್ತಿದೆ. ಈಗಿರುವ ಸಂಬಳಕ್ಕಿಂತಲೂ ಬ್ಲಾಗಿಂಗ್ ಮೂಲಕ ಹೆಚ್ಚಿನ ಸಂಪಾದನೆ ಮಾಡುವ ಅವಕಾಶವೂ ಇದೆ.