ಮೆಕ್ ಡೊನಾಲ್ಡ್ಸ್​​, ಕೆಎಫ್​ಸಿಗೂ ಭಯ ಹುಟ್ಟಿಸಿದೆ 'ಪತಂಜಲಿ'..!  

ಟೀಮ್ ವೈ.ಎಸ್.ಕನ್ನಡ 

1

ಯೋಗ ಗುರು ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಪ್ರೈವೇಟ್ ಲಿಮಿಟೆಡ್ ಕಂಪನಿ ಈಗ ಆಹಾರ ಉದ್ಯಮಕ್ಕೂ ಎಂಟ್ರಿ ಕೊಡ್ತಾ ಇದೆ. ಬಹುನಿರೀಕ್ಷಿತ ದೇಸಿ ಜೀನ್ಸ್ ನಂತರ ಇದು ಪತಂಜಲಿಯ ಅತ್ಯಂತ ಮಹತ್ವದ ನಿರ್ಧಾರ. ಪತಂಜಲಿಯ ನೈಸರ್ಗಿಕ ಕಾಸ್ಮೆಟಿಕ್ ಉತ್ಪನ್ನಗಳು, ಪರ್ಸನಲ್ ಕೇರ್ ಪ್ರೊಡಕ್ಟ್ ಗಳು ಈಗಾಗ್ಲೇ ಬಗಳ ಜನಪ್ರಿಯವಾಗಿವೆ.

ಈಗ ಆಹಾರ ಉದ್ಯಮಕ್ಕೂ ಪತಂಜಲಿ ಕಾಲಿಡುತ್ತಿದ್ದು, ಮೆಕ್ ಡೊನಾಲ್ಡ್ಸ್, ಕೆಎಫ್ ಸಿ ಮತ್ತು ಸಬ್ ವೇಯಂತಹ ರೆಸ್ಟೋರೆಂಟ್ ಗಳಿಗೆ ಭಾರೀ ಪೈಪೋಟಿ ಎದುರಾಗಲಿದೆ.ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಾಬಾ ರಾಮದೇವ್, ಪತಂಜಲಿಯ ಹೊಸ ಸಾಹಸದ ಬಗ್ಗೆ ವಿವರಣೆ ನೀಡಿದ್ದಾರೆ. ಆಯುರ್ವೇದ ನಮ್ಮ ನಂಬಿಕೆಯ ಮೇಲೆ ನಿಂತಿದೆ. ಆರೋಗ್ಯ ಮತ್ತು ಕ್ಷೇಮ ಎರಡೂ ಮಾನಸಿಕ ಸ್ಥಿತಿಯ ಸಮತೋಲನವನ್ನು ಆಧರಿಸಿವೆ. ಗಿಡಮೂಲಿಕೆಗಳ ಬಳಕೆ ಮತ್ತು ಸ್ಪೆಷಲ್ ಡಯಟ್ ಇದಕ್ಕೆ ಬೇಕೇಬೇಕು. ಪತಂಜಲಿ ಬಹುರಾಷ್ಟ್ರೀಯ ಕಂಪನಿಗಳ ನಡುವನ್ನೇ ಮುರಿದಿದೆ. ವಿದೇಶಿ ಕಂಪನಿಗಳ ಹಿಡಿತದಿಂದ ಭಾರತ ಮುಕ್ತವಾಗಬೇಕೆಂಬುದೇ ನನ್ನ ಬಯಕೆ ಅಂತಾ ಹೇಳಿದ್ದಾರೆ.

ಉತ್ತರಾಖಂಡ್ ಮೂಲದ ಪತಂಜಲಿ ಸಂಸ್ಥೆ 2016-17ರಲ್ಲಿ ದಾಖಲೆಯ 10,500 ಕೋಟಿ ರೂಪಾಯಿ ವಹಿವಾಟು ನಡೆಸಿದೆ. 300 ಬಿಲಿಯನ್ ಮೌಲ್ಯದ ಉತ್ಪನ್ನಗಳನ್ನು ತಯಾರಿಸಬಲ್ಲ ಸಾಮರ್ಥ್ಯ ಕಂಪನಿಗಿದೆ. ಇನ್ನೊಂದು ವರ್ಷದಲ್ಲಿ ಇದನ್ನು ದುಪ್ಪಟ್ಟು ಮಾಡುವ ಯೋಜನೆ ಹಾಕಿಕೊಂಡಿದೆ. ಬಾಬಾ ರಾಮದೇವ್ ಮತ್ತವರ ಅಭಿಮಾನಿ ಬಳಗವೇ ಈ ಮಟ್ಟದ ಯಶಸ್ಸಿಗೆ ಕಾರಣ.

ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿನ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೊಯ್ಡಾ ಮತ್ತು ಉತ್ತರಪ್ರದೇಶದಲ್ಲಿ 1,600 ಕೋಟಿ ವೆಚ್ಚದ ಹರ್ಬಲ್ ಫುಡ್ ಪಾರ್ಕ್ ನಿರ್ಮಾಣ ಮಾಡುವುದಾಗಿ 2016ರ ಸಪ್ಟೆಂಬರ್ ನಲ್ಲೇ ಪತಂಜಲಿ ಘೋಷಣೆ ಮಾಡಿತ್ತು.

ಡೊಮಿನೋಸ್ ನಂತಹ ಹಲವು ಕಂಪನಿಗಳು ಯಶಸ್ಸಿಗಾಗಿ ಕಸರತ್ತು ಮಾಡುತ್ತಿವೆ. ಹಾಗಾಗಿ ಪತಂಜಲಿ ದೇಸೀ ಮಟ್ಟದಲ್ಲಿ ಆರಂಭದಿಂದ್ಲೇ ಸಂಚಲನ ಸೃಷ್ಟಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದ್ರೆ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಕ್ಷೇತ್ರದಲ್ಲಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ, ಯಾಕಂದ್ರೆ ಅಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಬೇಕಾಗುತ್ತದೆ ಅಂತಾ ಮುಂಬೈ ಮೂಲದ ಉದ್ಯಮ ಸಲಹೆಗಾರರಾದ ಸಂತೋಷ್ ಕಾನೇಕರ್ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯಕರ ಆಹಾರ ಸೇವನೆ ಬಗ್ಗೆ ಪತಂಜಲಿ ಯಾವ ರೀತಿ ಜನರಿಗೆ ಮಾರ್ಗದರ್ಶನ ನೀಡಿದೆ ಅನ್ನೋ ಬಗ್ಗೆ ಕೂಡ ಯೋಗಗುರು ಬಾಬಾ ರಾಮದೇವ್ ಮಾತನಾಡಿದ್ದಾರೆ. ಸದ್ಯ 500ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಪತಂಜಲಿ, ತನಗೆ ಸಿಕ್ಕಿರುವ ಯಶಸ್ಸನ್ನು ಹಾಗೇ ಉಳಿಸಿಕೊಂಡು ಹೋಗುವ ಪ್ರಯತ್ನದಲ್ಲಿದೆ. ಸದ್ಯದಲ್ಲೇ ವಸ್ತ್ರ ಉದ್ಯಮಕ್ಕೂ ಪತಂಜಲಿ ಪ್ರವೇಶಿಸಲಿದೆ. ಹುತಾತ್ಮ ಯೋಧರ ಮಕ್ಕಳಿಗಾಗಿ ಶಾಲೆ ತೆರೆಯಲು ಯೋಜನೆ ಹಾಕಿಕೊಂಡಿದೆ.

2016ರಲ್ಲಿ ಪತಂಜಲಿ ಸಂಸ್ಥೆ 2500 ಕೋಟಿ ರೂಪಾಯಿ ಲಾಭ ಗಳಿಸಿದೆ. ದೇಶದ ಐದು ಎಫ್ ಎಂ ಜಿ ಸಿ ಕಂಪನಿಗಳಲ್ಲಿ ಇದು ಕೂಡ ಒಂದು. ಎ ಫಂಡಿಂಗ್ ನಲ್ಲಿ ಈಗಾಗ್ಲೇ 1 ಮಿಲಿಯನ್ ಡಾಲರ್ ಅನ್ನು ಪತಂಜಲಿ ಗಿಟ್ಟಿಸಿಕೊಂಡಿದೆ. ಪತಂಜಲಿ ಕಂಪನಿಯ ಸಿಇಓ ಆಚಾರ್ಯ ಬಾಲಕೃಷ್ಣ ಸದ್ಯ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು. ಹುರುನ್ ಇಂಡಿಯಾ ರಿಚ್ ಲಿಸ್ಟ್ – 2016ರ ಪ್ರಕಾರ ಅವರ ಒಟ್ಟು ಆಸ್ತಿಯ ಮೌಲ್ಯ 25,600 ಕೋಟಿ ರೂಪಾಯಿ ಎನ್ನಲಾಗ್ತಿದೆ. 

ಇದನ್ನೂ ಓದಿ...

'ಗೂಗ್ಲಿ' ಸೂರ್ತಿಯಿಂದ 11 ಚಿನ್ನದ ಪದಕ ಗೆದ್ದ ಯುವಕ  

ವೈಜ್ಞಾನಿಕ ಸಂಶೋಧನೆಗೆ ಆಸ್ತಿ ದಾನ ಮಾಡಿದ IAS ಅಧಿಕಾರಿ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರ್ವರಿ